ಕರುಣೆಯ ಕಥೆಗಳು ಎಲ್ಲರನ್ನೂ ಕಾಯಲಿ...
ಬಹುಶಃ ಈ ವಿಚಾರವನ್ನು ಹಲವರು ನಿಮಗೂ ಹೇಳಿರಬಹುದು. ಏನೆಂದರೆ -ವಿದೇಶಿಯರಿಗೆ, ಭಾರತೀಯರ ಬಗ್ಗೆ ಅಂಥಾ ಗೌರವ ಭಾವನೆಯಿಲ್ಲ. ಇವತ್ತಿನ ಸಂದರ್ಭದಲ್ಲಿ, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಭಾರತೀಯರು ಮೇಲುಗೈ ಸಾಧಿಸಿರುವ ಕಾರಣದಿಂದ ವಿದೇಶಗಳಲ್ಲಿ ನೌಕರಿಗಳು ಸಿಗುತ್ತಿವೆಯಷ್ಟೆ. ಆದರೆ, ನೀವು ಎಲ್ಲ ರೀತಿಯಲ್ಲೂ ನಮಗೆ ಸರಿಸಮಾನರು ಎಂದು ಹೇಳುವಂಥ ಮನಸ್ಸು ವಿದೇಶಿಯರಿಗೆ ಇನ್ನೂ ಬಂದಿಲ್ಲ. ಈ ಕಾರಣದಿಂದಲೇ ವಿದೇಶಗಳಲ್ಲಿ ಸಣ್ಣದೊಂದು ಎಡವಟ್ಟು ಮಾಡಿಕೊಂಡರೂ -'ಡರ್ಟಿ ಇಂಡಿಯನ್ಸ್' ಎಂಬ ಮೂದಲಿಕೆಗೆ ಗುರಿಯಾಗಬೇಕಾಗುತ್ತದೆ. ಇಂಥಾ ಕಟುವಾಸ್ತವದ ಮಧ್ಯೆಯೂ ಆಗಿಂದಾಗ್ಗೆ ಕರುಣೆಯ ಕೈಗಳು ಕಾಣಿಸುವುದುಂಟು. ಪರಿಚಯವೇ ಇಲ್ಲದಿದ್ದರೂ, ಸಂಕಟದ ಸಂದರ್ಭದಲ್ಲಿ ಯಾವುದೋ ಒಂದು ಸಹಾಯ ಹಸ್ತ ನಮ್ಮ ನೆರವಿಗೆ ಧಾವಿಸುವುದುಂಟು. ಈ ಮಾತಿಗೆ ಉದಾಹರಣೆಯಾಗಿ, ತಿಂಗಳ ಹಿಂದೆ ಭಾರತಕ್ಕೆ ಬಂದ ಗೆಳೆಯನೊಬ್ಬ ಹೇಳಿದ ಪ್ರಸಂಗವನ್ನು ದಾಖಲಿಸುತ್ತೇನೆ, ಕೇಳುವಂಥವರಾಗಿ.
ಈ ಗೆಳೆಯ ಅಮೆರಿಕದಲ್ಲಿ ನೌಕರಿಗಿದ್ದ. ಹೀಗಿರುವಾಗ, ಬೆಂಗಳೂರಿನಲ್ಲಿ ಒಂದು ಕೌಟುಂಬಿಕ ಕಾರ್ಯಕ್ರಮ. ಗೆಳೆಯನ ಅದೃಷ್ಟ: ಅವನಿಗೆ ಒಂದು ವಾರ ರಜೆ ಸಿಕ್ಕಿತು. ಬಂದು ಹೋಗಲು ತಲಾ ಎರಡು ದಿನ ಅಂದರೆ, ಒಟ್ಟು ನಾಲ್ಕು ದಿನದ ವಿಮಾನ ಪ್ರಯಾಣ. ಮನೇಲಿ ಬಂಧುಗಳೊಂದಿಗೆ 3 ದಿನ ಕಳೆಯುವುದೆಂದು ಅವನು ಶೆಡ್ಯೂಲ್ ಮಾಡಿಕೊಂಡಿದ್ದ. ಈ ಹುಡುಗ, ತಾನು ವಾಸವಿದ್ದ ಅಮೆರಿಕದ ಮುಖ್ಯ ಪಟ್ಟಣದಿಂದ ಮತ್ತೊಂದು ನಗರಕ್ಕೆ ರೈಲಿನಲ್ಲಿ ಬಂದು, ಅಲ್ಲಿಂದ ಭಾರತದ ವಿಮಾನ ಹತ್ತಬೇಕಿತ್ತು. ಈತ ಗಡಿಬಿಡಿಯಲ್ಲಿ ಕೆಲಸ ಮುಗಿಸಿಕೊಂಡು ಅವಸರದಲ್ಲಿ ರೈಲು ಹತ್ತಿ ಒಂದೆಡೆ ಕೂತ. ಅವನದು ಶುದ್ಧ ಭಾರತೀಯ ಮನಸ್ಸು! ರೈಲಿನಲ್ಲಿ ಕುಳಿತ ಕೆಲವೇ ನಿಮಿಷದಲ್ಲಿ ನಿದ್ರೆ ಹತ್ತಿತು. ಹೀಗೇ ಹತ್ತಿಪ್ಪತ್ತು ನಿಮಿಷ ಕಳೆದಾಗ ಟಿಕೆಟ್ ಚೆಕ್ಕಿಂಗ್‌ಗೆ ಬಂದ ಯುವತಿ, ಈತನ ಟಿಕೆಟ್ ಪರೀಕ್ಷಿಸಿ ಹೇಳಿದಳಂತೆ: 'ಸರ್, ನೀವು ಟಿಕೆಟ್ ತಗೊಂಡಿದ್ದೀರಲ್ಲ, ಆ ಸ್ಟೇಷನ್‌ನಲ್ಲಿ ಈ ರೈಲು ನಿಲ್ಲುವುದಿಲ್ಲ, ಈ ರೈಲು ನಿಂತ ಜಾಗದಿಂದ ಮತ್ತೊಂದು ರೈಲು ಹಿಡಿದು ಎರಡು ಗಂಟೆ ಹಿಂದಕ್ಕೆ ಪ್ರಯಾಣಿಸಿದರೆ, ಆಗ ನೀವು ತಲುಪಬೇಕಾದ ನಿಲ್ದಾಣ ಸಿಗುತ್ತದೆ, ನೀವು ಹತ್ತಬೇಕಿದ್ದ ರೈಲು ಇದಲ್ಲ...'
ಆ ಯುವತಿಯ ಮಾತು ಕೇಳಿ ಈ ಇಂಜಿನಿಯರ್ ಹುಡುಗನ ಎದೆ ಧಸಕ್ ಎಂದಿದೆ. ಕಾರಣ, ಅವಳು ಹೇಳಿದಂತೆಯೇ ಕೇಳಿದರೆ, ಭಾರತಕ್ಕೆ ಹೋಗಬೇಕಾದ ವಿಮಾನ ತಪ್ಪಿ ಹೋಗುವುದು ಖಂಡಿತವಿತ್ತು. ಆಗ ಈ ಹುಡುಗ, ತನ್ನ ಕುಟುಂಬ, ಅಲ್ಲಿ ನಡೆಯಲಿರುವ ಕಾರ್ಯಕ್ರಮ, ಅಲ್ಲಿ ತಾನು ಇರಬೇಕಾದ ಅನಿವಾರ್ಯತೆ, ತಾನು ಹೋಗದೇ ಇದ್ದರೆ ಬಂಧುಗಳಿಗೆ ಆಗಬಹುದಾದ ನಿರಾಸೆಯನ್ನೆಲ್ಲ ಆಕೆಗೆ ವಿವರಿಸಿ- ಹೇಗಾದ್ರೂ ಸಹಾಯ ಮಾಡಿ ಪ್ಲೀಸ್, ಅಂದನಂತೆ!
ಅದು ನಾನ್‌ಸ್ಟಾಪ್ ರೈಲು. ಚಾಲಕ ಎಂಜಿನ್‌ನಲ್ಲಿದ್ದ. ವಿಷಯ ಹೀಗಿರುವಾಗ, ಟಿಕೆಟ್ ಚೆಕಿಂಗ್‌ಗೆ ಬಂದ ಯುವತಿ ಹೇಗೆ ಸಹಾಯ ಮಾಡಲು ಸಾಧ್ಯ? ಇಂಥ ಸಂದರ್ಭದಲ್ಲಿ ಆಕೆ 'ನೋ. ಐ ಯಾಮ್ ಹೆಲ್ಪ್‌ಲೆಸ್' ಅನ್ನಲಿಲ್ಲ. ರೈಲು ಹತ್ತುವಾಗ ನಿನ್ಗೆ ಕಣ್ಣು ಕಾಣಿಸಲಿಲ್ವಾ ಇಂಡಿಯನ್ ಎಂದು ರೇಗಲಿಲ್ಲ. ಬದಲಿಗೆ, ಎಂಜಿನ್‌ನಲ್ಲಿದ್ದ ಡ್ರೈವರ್‌ನೊಂದಿಗೆ ಮಾತಾಡಿದಳು. ಒಬ್ಬ ಪ್ರಯಾಣಿಕರು ತುಂಬ ಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಅವರಿಗೆ ಹೆಲ್ಪ್ ಮಾಡೋಣ. ಆ ಕಾರಣಕ್ಕೆ ಇವತ್ತು ಮಾತ್ರ ರೂಲ್ಸ್‌ನ ಬ್ರೇಕ್ ಮಾಡೋಣ. ಪ್ಲೀಸ್ ಸಹಕರಿಸಿ ಎಂದಳಂತೆ. ಆ ಯುವತಿಯ ಪರಿಪರಿಯ ಬೇಡಿಕೆಗೆ ಕಡೆಗೂ ಒಪ್ಪಿದ ಡ್ರೈವರ್, ಬೆಂಗಳೂರಿನ ಈ ಹುಡುಗ ಇಳಿಯಬೇಕಾದ ರೈಲು ನಿಲ್ದಾಣ ಬಂದ ತಕ್ಷಣ ರೈಲಿನ ವೇಗವನ್ನು ವಿಪರೀತ ತಗ್ಗಿಸಿ, ಒಂದು ನಿಮಿಷ ಪೂರ್ತಿ ಆಮೆ ವೇಗದಲ್ಲಿ ಚಲಿಸುವುದಾಗಿಯೂ, ಆ ಸಂದರ್ಭದಲ್ಲಿ ತುರ್ತು ನಿರ್ಗಮನದ ಬಾಗಿಲಿಂದ ಹುಷಾರಾಗಿ ಜಂಪ್ ಮಾಡುವಂತೆಯೂ ತಿಳಿಸಿದರಂತೆ. ಅಂತೆಯೇ, ಆ ನಿಲ್ದಾಣ ಬಂದಾಗ, ರೈಲಿಗೆ ಆಮೆ ವೇಗ ಬಂತು. ತುರ್ತು ನಿರ್ಗಮನದ ಬಾಗಿಲು ದಿಢೀರನೆ ತೆರೆದುಕೊಂಡಿತು. ಈ ಭಾರತೀಯ ಹುಡುಗನನ್ನು, ವಿದೇಶದ ಆ ಟಿಕೆಟ್ ಚೆಕಿಂಗ್ ಹುದ್ದೆಯ ಹುಡುಗಿ, ತುಂಬ ಕಾಳಜಿಯಿಂದ ಇಳಿಸಿ, ಬೇಗ ವಿಮಾನ ನಿಲ್ದಾಣ ತಲುಪಿಕೊಳ್ಳಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ. ಲವ್ ಟು ಆಲ್ ಯುವರ್ ಫ್ಯಾಮಿಲಿ ಮೆಂಬರ್ಸ್. ಸೀ ಯೂ ಎಗೈನ್, ಬೈ...' ಎಂದು ಹೇಳಿ, ಆನಂತರವೇ ರೈಲಿನ ವೇಗ ಹೆಚ್ಚಿಸುವಂತೆ ಡ್ರೈವರ್‌ಗೆ ಸೂಚನೆ ನೀಡಿದಳಂತೆ.
ಇದಿಷ್ಟೂ ವಿವರಣೆ ಹೇಳಿದ ಗೆಳೆಯ ನಂತರ ಹೇಳಿದ್ದು: 'ಅಮೆರಿಕದಂಥ ದೇಶಗಳಲ್ಲಿ ಕಾನೂನು ಪಾಲಿಸದಿದ್ದರೆ ಕೆಲಸ ಕಳೆದುಕೊಳ್ಳುವ ಅಪಾಯ ಖಂಡಿತ ಇದೆ. ಅದು ಗೊತ್ತಿದ್ದರೂ, ಮಾನವೀಯ ಕಳಕಳಿಯ ಒಂದೇ ಕಾರಣದಿಂದ ಆಕೆ ಅಪರಿಚಿತನ ಸಹಾಯಕ್ಕೆ ಧಾವಿಸಿದಳಲ್ಲ; ಕರುಳು ಮಾತಾಡಿತು ಎಂಬಂಥ ಸಾಲು ಹೇಳಬೇಕಾದದ್ದು ಇಂಥ ಸಂದರ್ಭದಲ್ಲೇ ಅಲ್ವಾ?'
ಅಂತಃಕರಣವನ್ನು ಕಲಕುವಂಥ ಮತ್ತೊಂದು ಘಟನೆಯ ವಿವರ ಕೇಳಿ; ಇದು ಕೊಲ್ಕತ್ತಾದಲ್ಲಿ ನಡೆದದ್ದು. ಆ ಮಹಾನಗರದಲ್ಲಿ ಒಬ್ಬಳು ವಿಧವೆ. ಎರಡನೆ ಮದುವೆಯಾಗಲು ಆಕೆಗೆ ಮನಸ್ಸು ಬರಲಿಲ್ಲ. ಒಂಟಿಯಾಗಿಯೇ ಉಳಿದಳು. ಹೊಟ್ಟೆಪಾಡಿಗೆ ಒಂದು ಪೆಟ್ಟಿಗೆ ಅಂಗಡಿ ತೆರೆದಳು. ಹೀಗಿರುವಾಗಲೇ, ಅದೊಂದು ರಾತ್ರಿ ಈಕೆ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೊರಟರೆ, ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಒಂದು ಮಗು ಕಾಣಿಸಿತು. ಆಕೆಗೆ ಮನಸ್ಸು ತಡೆದಿಲ್ಲ. ಆ ಮಗುವನ್ನು ಎತ್ತಿಕೊಂಡು ಹೋಗಿ ಸಾಕಿದ್ದಾಳೆ. ಆನಂತರದ ದಿನಗಳಲ್ಲಿ ಒಂದೊಂದೇ ಅನಾಥ ಮಕ್ಕಳು ಆಕೆಯ ಮಡಿಲು ಸೇರಿಕೊಂಡಿವೆ. ಹೀಗೇ ಇಪ್ಪತ್ತು ವರ್ಷ ಕಳೆದಿದೆ. ಆಕೆ ಮುದುಕಿಯಾಗಿದ್ದಾಳೆ. ದೇಹ ಬಾಗಿದೆ. ದೃಷ್ಟಿ ಮಂದವಾಗಿದೆ. ಇದೆಲ್ಲಾ ಅರಿವಿಗೆ ಬಂದಾಗ ಆಕೆ, ಇನ್ನು ಮುಂದೆ ನನ್ನಿಂದ ತಿರುಗಾಡಲಿಕ್ಕೂ ಕಷ್ಟವಾಗುತ್ತದೆ. ಮಕ್ಕಳನ್ನು ಸಾಕುವ ಉಸಾಬರಿ ಬೇಡ ಅಂದುಕೊಂಡಳಂತೆ. ಇಂಥ ನಿರ್ಧಾರಕ್ಕೆ ಬಂದ ಎರಡೇ ದಿನದ ನಂತರ, ಆಕೆಗೆ ಕಣ್ಣಿಗೆ ಕಸದ ತೊಟ್ಟಿಯಲ್ಲಿದ್ದ ಮತ್ತೊಂದು ಹಸುಗೂಸು ಕಾಣಿಸಿದೆ. ಈ ಮುದುಕಿ, ತಕ್ಷಣವೇ ತನ್ನ ಶಪಥ ಮರೆತು ಆ ಮಗುವನ್ನು ಎತ್ತಿಕೊಂಡು ಮನೆಗೆ ಹೋದಳಂತೆ. ಅಲ್ಲಿ, ಅದುವರೆಗೂ ಅವಳ ಕೈ ತುತ್ತು ತಿಂದು ಬೆಳೆದಿದ್ದರಲ್ಲ; ಆ ಮಕ್ಕಳೆಲ್ಲಾ ಈಕೆಯ ಕೈ ಹಿಡಿದುಕೊಂಡು, ನಮ್ಮ ಪಾಲಿಗೆ ನೀನೇ ದೇವರು ಅಮ್ಮಾ. ನೀನಿನ್ನು ಕಷ್ಟಪಡಬಾರದು. ನಿನ್ನ ಕೆಲಸವನ್ನು ನಾವೆಲ್ಲಾ ಮುಂದುವರಿಸಿಕೊಂಡು ಹೋಗ್ತೇವೆ ಎನ್ನುತ್ತಾ ಆನಂದಭಾಷ್ಪ ಸುರಿಸುತ್ತಾ ನಿಂತು ಬಿಟ್ಟರಂತೆ...
ಇಂಥ ಕರುಣೆಯ ಕಥೆಗಳು ಎಲ್ಲರನ್ನೂ ಕಾಯಲಿ, ಎಲ್ಲವನ್ನೂ ಕಾಡಲಿ...
-ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

