ಸರ್ಕಾರೇತರ ಸಂಸ್ಥೆ, ದೇಶದ ಆರ್ಥಿಕತೆಗೆ ಆಪತ್ತೇ?
ಸರ್ಕಾರೇತರ ಸಂಸ್ಥೆಗಳು ಪ್ರಶ್ನೆಯಲ್ಲಿವೆ. ಜಾಗತಿಕವಾಗಿ ಪರಿಸರದ ವಿಷಯದಲ್ಲಿ ಕೆಲಸ..
ಸರ್ಕಾರೇತರ ಸಂಸ್ಥೆಗಳು ಪ್ರಶ್ನೆಯಲ್ಲಿವೆ. ಜಾಗತಿಕವಾಗಿ ಪರಿಸರದ ವಿಷಯದಲ್ಲಿ ಕೆಲಸ ಮಾಡುತ್ತಿರುವ 'ಗ್ರೀನ್‌ಪೀಸ್' ಸೇರಿದಂತೆ ಹಲವು ಸರ್ಕಾರೇತರ ಸಂಸ್ಥೆಗಳು ತಮ್ಮ ವಿದೇಶಿ ಹಣಕಾಸು ಜಾಲದ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿ ಪರಿಗಣಿಸಿವೆ ಅಂತ ದೇಶದ ಇಂಟೆಲಿಜೆನ್ಸ್ ಬ್ಯೂರೊ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಅದರ ಕೆಲ ಅಂಶಗಳು ಮಾಧ್ಯಮಕ್ಕೆ ಸೋರಿಕೆಯಾಗಿವೆ. ಇದು ಸ್ವಯಂಸೇವಾ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆಗಳ ಪಾರದರ್ಶಕತೆಯನ್ನು ಚರ್ಚೆಯ ವಿಷಯವನ್ನಾಗಿಸಿದೆ. ಪ್ರಮುಖವಾಗಿ ಹೆಸರು ಕೇಳಿಬರುತ್ತಿರುವ ಗ್ರೀನ್‌ಪೀಸ್, ಹೀಗೊಂದು ವರದಿ ಚರ್ಚೆಗೆ ಬರುತ್ತಿದ್ದಂತೆ ತನ್ನ ಹಣ ಸಂಗ್ರಹವೆಲ್ಲ ಭಾರತದಲ್ಲೇ ಆಗಿರುವುದಾಗಿ ಹಾಗೂ ತಾವು ಉತ್ತಮ ಉದ್ದೇಶಕ್ಕಾಗಿ ಮಾತ್ರವೇ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.
ಎನ್‌ಜಿಒಗಳ ಕಾರ್ಯವೈಖರಿ ಪ್ರಶ್ನೆಯಾಗುತ್ತಿರುವ ಸಂದರ್ಭದಲ್ಲಿ ಆ ಸಂಬಂಧ ಕೆಲವು ಅಂಶಗಳನ್ನಷ್ಟೇ ಗಮನಿಸೋಣ.
ಅಣುಶಕ್ತಿ ಸ್ಥಾವರ ನಿರ್ಮಾಣದಿಂದ ಹಿಡಿದು ಕಲ್ಲಿದ್ದಲು ಬಳಕೆವರೆಗೆ ಹತ್ತೆಂಟು ವಿಷಯಗಳಲ್ಲಿ ಭಾರತದಲ್ಲಿ ಪ್ರತಿಭಟನೆ- ವಿರೋಧಗಳನ್ನು ಹಮ್ಮಿಕೊಂಡಿರುವ ಸಂಸ್ಥೆ ಗ್ರೀನ್‌ಪೀಸ್. ಐಬಿ (ಇಂಟೆಲಿಜೆನ್ಸ್ ಬ್ಯೂರೋ)ಯ ಜಂಟಿ ನಿರ್ದೇಶಕ ಎಸ್. ಎ. ರಿಜ್ವಿ ಸಹಿ ಹೊಂದಿರುವ ವರದಿ ಆರೋಪಿಸುವುದೇನೆಂದರೆ- ಭಾರತದ ಸ್ಥಳೀಯ ಹೋರಾಟದ ಗುಂಪುಗಳೊಂದಿಗೂ ತನ್ನ ಜಾಲವನ್ನು ಬೆಸೆದುಕೊಂಡಿರುವ ಗ್ರೀನ್‌ಪೀಸ್ ಕಲ್ಲಿದ್ದಲು ಗಣಿಗಾರಿಕೆ- ಅಣುಶಕ್ತಿ ಘಟಕಗಳನ್ನು ಒಟ್ಟೊಟ್ಟಿಗೆ ವಿರೋಧಿಸುವ ಮೂಲಕ ಭಾರತದ ಇಂಧನ ಭದ್ರತೆಗೆ ಆತಂಕವನ್ನು ಒಡ್ಡಿದೆ. ಇದೀಗ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ 'ಇ-ವೇಸ್ಟ್' ಹೆಚ್ಚಾಗುತ್ತಿರುವ ಬಗ್ಗೆ ತನ್ನ ಹೋರಾಟವನ್ನು ಕೇಂದ್ರೀಕರಿಸುತ್ತಿರುವ ಗ್ರೀನ್‌ಪೀಸ್, ಈ ವಿಷಯದಲ್ಲಿ ಬೆಂಗಳೂರಿನ ದೇಶಿ ಐಟಿ ಕಂಪನಿಗಳ ವಿರುದ್ಧ ಮಾತ್ರ ದೊಡ್ಡ ಧ್ವನಿ ಎತ್ತುತ್ತಿದೆ. ಇದು ಯಾರಿಗೆ ಲಾಭ ಮಾಡಿಕೊಡುವ ಸಂಚು?
ಭಾರತವು ಕೇವಲ ನವೀಕೃತ ಇಂಧನ ಮೂಲಗಳನ್ನು ಬಳಸಬೇಕು ಎಂಬುದು ಜಾಗತಿಕ ಮಟ್ಟದಲ್ಲಿ ರೂಪುಗೊಳ್ಳುತ್ತಿರುವ ಒತ್ತಡ. ಕಲ್ಲಿದ್ದಿಲಿನಂಥ ಸಾಂಪ್ರದಾಯಿಕ ಇಂಧನಗಳು ಪರಿಸರಕ್ಕೆ ಎಷ್ಟು ಹಾನಿ ಮಾಡುತ್ತವೆ ಗೊತ್ತಾ ಅಂತ ಈ ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ವಾದವನ್ನು ಗಟ್ಟಿಗೊಳಿಸುತ್ತವೆ. ಕೇವಲ ಪರಿಸರ ಮಾಲಿನ್ಯದ ಚೌಕಟ್ಟಿನಲ್ಲಿ ನೋಡಿದರೆ ಅಹುದಹುದು ಎನ್ನಿಸುವಂಥ ಈ ವಾದವನ್ನು ನಮ್ಮದೇ ನೆಲದ ಪರಿಸರ ಕಾರ್ಯಕರ್ತರಾದ ಸುನಿತಾ ನಾರಾಯಣನ್ ಅಂಥವರು ಒಪ್ಪುವುದಿಲ್ಲ. ಏಕೆಂದರೆ ಭಾರತ ಕಲ್ಲಿದ್ದಲು ಸಂಪನ್ನ ದೇಶ. ನಾವು ಈ ವಿಭಾಗದಲ್ಲಿ ಮಾಲಿನ್ಯ ನಿಯಂತ್ರಣ ಹಾಗೂ ನಿಧಾನಕ್ಕೆ ನವೀಕೃತ ಇಂಧನ ಬಳಕೆ ಕಡೆ ತಿರುಗುವ ನಡೆಗಳನ್ನು ಅನುಸರಿಸಬೇಕಿರುವುದು ಒಪ್ಪತಕ್ಕ ಮಾತೇ ಆದರೂ ಅದು ವಿದೇಶಿ ನಿರ್ದೇಶನದಲ್ಲಿ ನಡೆಯಬೇಕಿಲ್ಲ. ಏಕೆಂದರೆ ಅವರು ಹೀಗೆಲ್ಲ ಒತ್ತಡ ಹೇರುವುದು ಅಸಾಂಪ್ರದಾಯಿಕ ಇಂಧನ ಬಳಕೆಗೆ ಎಲ್ಲರನ್ನೂ ನುಗ್ಗಿಸಿ ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಮಾರುವ ಸನ್ನಾಹದಿಂದಲೇ ಹೊರತು ಪರಿಸರ ಕಾಳಜಿಯಿಂದಲ್ಲ ಎಂಬ ವಾದವಿದೆ.
ಇದೇ ಜಾಡಿನಲ್ಲಿ ಐಬಿ ವರದಿಯೂ ಎಚ್ಚರಿಕೆ ನೀಡುತ್ತಿದೆ. ಗ್ರೀನ್‌ಪೀಸ್ ಅನ್ನು ಮುನ್ನಡೆಸುತ್ತಿರುವವರು ಆಗಾಗ ಭಾರತಕ್ಕೆ ಭೇಟಿ ನೀಡುವ, ಆ ಸಂಸ್ಥೆಗೆ ಸಹಕಾರ ನೀಡುತ್ತಿರುವ ವಿದೇಶಿ ಕಾರ್ಯಕರ್ತರು. ಇದು 2010ರ ಫಾರಿನ್ ಕಾಂಟ್ರಿಬ್ಯೂಷನ್ (ರೆಗ್ಯುಲೇಷನ್) ಆ್ಯಕ್ಟ್‌ನ (ಎಫ್‌ಸಿಆರ್‌ಎ) ಉಲ್ಲಂಘನೆ. ಇವರೆಲ್ಲರ ದೇಣಿಗೆಯನ್ನೇ ಉಪಯೋಗಿಸಿಕೊಂಡು ತಮ್ಮ ವಾದವನ್ನು ಪುರಸ್ಕರಿಸುವ ಕೆಲ ಅಧ್ಯಯನ ವರದಿಗಳ ಬರವಣಿಗೆಗೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಹಾಗೂ ದೆಹಲಿ ಐಐಟಿಗೆ ಸಹಾಯಧನ ನೀಡಲಾಗಿದೆ. ಅಲ್ಲದೇ ಎಫ್‌ಸಿಆರ್‌ಎ ಕಾಯ್ದೆ ಪ್ರಕಾರ ರಾಜಕೀಯ ಚಟುವಟಿಕೆಗಳಿಗೆ ವಿದೇಶಿ ಹಣ ಒದಗಿಸುವಂತಿಲ್ಲ. ಪಂಕಜ್ ಸಿಂಗ್ ಗ್ರೀನ್‌ಪೀಸ್‌ನ ಮಾಜಿ ಸಂದರ್ಶಕ ಸಲಹೆಗಾರ ಕಳೆದ ಲೋಕಸಭೆ ಚುನಾವಣೆಯಲ್ಲಿ ಆಮ್‌ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಮಧ್ಯಪ್ರದೇಶದ ಸಿಧಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗ್ರೀನ್‌ಪೀಸ್ ಯಾವ ಮಾಹನ್ ಕಲ್ಲಿದ್ದಲು ಗಣಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದೆಯೋ ಅದು ಇದೇ ಕ್ಷೇತ್ರದಲ್ಲಿದೆ. ಸಾರ್ವಜನಿಕ ಹಾಗೂ ಖಾಸಗಿ ಗಣಿಗಾರಿಕೆಗಳ ವಿರುದ್ಧ ಮಾಹನ್ ಸಂಘರ್ಷ ಸಮಿತಿ ಸ್ಥಾಪಿಸಿಕೊಂಡು ಹೋರಾಟ ನಿರತವಾಗಿರುವ ಸಿಂಗ್‌ಗೆ ಗ್ರೀನ್‌ಪೀಸ್ ಹಲವು ಬಾರಿ ಹಣಕಾಸು ಸಹಾಯ ಒದಗಿಸಿತ್ತು ಅನ್ನುತ್ತೆ ಐಬಿ ವರದಿ. ಹಂಗೇನೂ ಇಲ್ಲ ಅಂತ ಪಂಕಜ್ ಸಿಂಗ್ ಅಲ್ಲಗೆಳೆಯುತ್ತಾರಾದರೂ ಈ ಬಗ್ಗೆ ಉನ್ನತ ತನಿಖೆ ಆಗಬೇಕಲ್ಲವೇ?
ಭಾರತದ ಮೂರು ಲಕ್ಷ ಬೆಂಬಲಿಗರಿಂದ 20 ಕೋಟಿ ರುಪಾಯಿಗಳಷ್ಟು ಹಣ ಸಂಗ್ರಹಿಸಿದ್ದೇವೆ ಎಂದು ಪ್ರತಿಕ್ರಿಯಿಸಿರುವ ಗ್ರೀನ್‌ಪೀಸ್, ಭಾರತದ ಯಾವ ಕಾನೂನುಗಳನ್ನೂ ತಾನೂ ಮುರಿದಿಲ್ಲ ಎಂದಿದೆ. ಐಬಿ ವರದಿಯಲ್ಲಿ ಪ್ರಸ್ತಾಪಗೊಂಡಿರುವುದು ಗ್ರೀನ್‌ಪೀಸ್ ಮಾತ್ರವಲ್ಲ. ಅಭಿವೃದ್ಧಿ ಯೋಜನೆಗಳನ್ನೆಲ್ಲ ವ್ಯಾಪಕವಾಗಿ ವಿರೋಧಿಸಿಕೊಂಡಿರುವ ಎನ್‌ಜಿಒಗಳ ನಡೆಯಿಂದಾಗಿ ಪ್ರತಿವರ್ಷ ಭಾರತದ ಜಿಡಿಪಿ ಪ್ರಗತಿಯಲ್ಲಿ ಶೇ. 2-3ರಷ್ಟು ನಕಾರಾತ್ಮಕ ಬೆಳವಣಿಗೆ ಆಗುತ್ತಿದೆ ಎಂದಿದೆ ಐಬಿ. ಇದನ್ನು ಹೊಸ ಸರ್ಕಾರದ ಉತ್ಸಾಹ ಎಂಬರ್ಥದಲ್ಲಿಯೂ ವ್ಯಾಖ್ಯಾನಿಸಬೇಕಿಲ್ಲ. ಏಕೆಂದರೆ ಮನಮೋಹನ ಸಿಂಗ್ ಅವರೂ ಪ್ರಧಾನಿಯಾಗಿದ್ದಾಗ, 'ವಿದೇಶಿ ಮೂಲದ ಸರ್ಕಾರೇತರ ಸಂಸ್ಥೆಗಳಿಂದಲೇ ನಮ್ಮ ದೇಶದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಿನ್ನಡೆ ಆಗುತ್ತಿದೆ' ಎಂದಿದ್ದರು. ಕೂಡಂಕುಲಂ ಅಣುವಿದ್ಯುತ್ ಸ್ಥಾವರದ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ 2012ರಲ್ಲೇ ಭಾರತ ಸರ್ಕಾರವು ವಿದೇಶದಿಂದ ಹಣ ಪಡೆಯುವ 24 ಎನ್‌ಜಿಒಗಳನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ನಿರ್ಧರಿಸಲಾಗಿತ್ತು. ಜತೆಯಲ್ಲೇ ಇನ್ನೂ ಹತ್ತು ಎನ್‌ಜಿಒಗಳ ಹಣಕಾಸು ಪೂರೈಕೆಗಳ ಬಗ್ಗೆ ವಿವರ ಕಲೆ ಹಾಕುವಂತೆ ಸ್ಥಳೀಯ ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿತ್ತು. 2013ರಲ್ಲಿ ದೆಹಲಿ ಹೈಕೋರ್ಟ್ ಹೀಗೆ ಹೇಳಿತ್ತು- 'ಶೇ. 99 ಎನ್‌ಜಿಒಗಳು ಹಣ ಮಾಡುವ ಗುಂಪುಗಳಾಗಿವೆ. ಹೀಗಾಗಿ ಸರ್ಕಾರವು ಎನ್‌ಜಿಒಗಳ ಪರವಾನಗಿ ಪ್ರಕ್ರಿಯೆಯನ್ನು ಬಿಗಿಗೊಳಿಸಬೇಕಾದ ಅವಶ್ಯವಿದೆ.'
ದೇಶದಲ್ಲಿ ಎನ್‌ಜಿಒಗಳ ಒಟ್ಟಾರೆ ಚಿತ್ರಣ ಆಸಕ್ತಿಕರವಾಗಿದೆ. 2008ರಲ್ಲಿ ನಡೆಸಿದ ಅಧ್ಯಯನ ವರದಿ ಪ್ರಕಾರ ದೇಶದಲ್ಲಿ 30 ಲಕ್ಷಕ್ಕೂ ಮೀರಿ ಸರ್ಕಾರೇತರ ಸಂಸ್ಥೆಗಳಿವೆ. ಪ್ರತಿ 400 ಮಂದಿಗೆ ಒಂದು ಎನ್‌ಜಿಒ ಎಂಬ ಸರಾಸರಿ ಲೆಕ್ಕ ಸಿಗುತ್ತದೆ. ಈ ಪ್ರಮಾಣದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳೇ ದೇಶದಲ್ಲಿಲ್ಲ.
2008-09ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ದೇಶದ 23, 172 ಎನ್‌ಜಿಒಗಳು ಒಟ್ಟಾಗಿ ಪಡೆದಿರುವ ವಿದೇಶಿ ಹಣದ ಮೊತ್ತ 10,997. 35 ಕೋಟಿ ರುಪಾಯಿಗಳು. 2010-11ರ ಸಾಲಿನಲ್ಲಿ 22, 735 ಎನ್‌ಜಿಒಗಳಿಗೆ ಸಂದಾಯವಾದ ವಿದೇಶಿ ಹಣದ ಮೊತ್ತ 10,334. 12 ಕೋಟಿ ರುಪಾಯಿಗಳು.
ಭಾರತದ ಮಟ್ಟಿಗೆ ಎನ್‌ಜಿಒಗಳ ಕಾರ್ಯವೈಖರಿ ಹೇಗಿದೆ ಎಂದರೆ, ಇವು ಇಲ್ಲಿನ ಚಿಕ್ಕಪುಟ್ಟ ಎನ್‌ಜಿಒಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡು ತಾವು ಹಿನ್ನೆಲೆಯಲ್ಲೇ ನಿಂತು ಜನಾಂದೋಲನವನ್ನು ರೂಪಿಸುತ್ತವೆ. ಮುಖ್ಯವಾಗಿ ಭಾರತದ ಎಡಪಂಥೀಯ ಚಿಂತಕರನ್ನು ಇವರು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ, ಐಬಿ ವರದಿಯೇ ಹೇಳುವಂತೆ ಸ್ವಾಮಿ ಅಗ್ನಿವೇಶ್ 2012ರ ಸೆಪ್ಟೆಂಬರ್‌ನಲ್ಲಿ ಜಿನಿವಾದ ಸ್ವಿಡ್ಜರ್‌ಲೆಂಡ್‌ನಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿದ್ದರು. ಕೈಗಾರಿಕೆಯ ತೀವ್ರತನ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಅವರು ಮಾತನಾಡಿದ್ದರು. 'ಕಾರ್ಡಿಡ್' ಎಂಬ ನೆದರ್‌ಲ್ಯಾಂಡ್ ಸರ್ಕಾರದ ಹಣಸಹಾಯವಿರುವ ಎನ್‌ಜಿಒ ಇವರ ಪ್ರವಾಸವನ್ನು ಪ್ರಾಯೋಜಿಸಿತ್ತು. ಅರುಣಾಚಲ ಪ್ರದೇಶದ ಆಣೆಕಟ್ಟು ಯೋಜನೆ, ಮೇಘಾಲಯದ ಗಣಿ ಯೋಜನೆಗಳನ್ನು ವಿರೋಧಿಸುವ ಅಭಿಯಾನಕ್ಕೆ ಇದೇ ಎನ್‌ಜಿಒದ ಬೆಂಬಲವಿದೆ. ಇದೇ ಕಾರ್ಡಿಡ್ ನಿಧಾನವಾಗಿ ಜಮ್ಮು-ಕಾಶ್ಮೀರದ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಮಾತನಾಡುತ್ತಿದೆ! ಎಲ್ಲೋ ಕುಳಿತವರು ದೇಶವೊಂದರ ವಿದ್ಯಮಾನದ ಬಗ್ಗೆ ವಿಪರೀತ ಆಸಕ್ತಿ ವಹಿಸುತ್ತಿದ್ದಾರೆ ಎಂದರೆ ಅವರ ವ್ಯೂಹಗಳೇನು ಅಂತ ಚಿಂತೆಯಾಗದೇ ಇದ್ದೀತೇ? ಅದನ್ನು ಕೇವಲ ಜನ ಕಾಳಜಿ ಅಂದುಬಿಡೋಣವೇ?
ಕೂಡಂಕುಲಮ್‌ನ ಅಣು ವಿದ್ಯುತ್ ಸ್ಥಾವರ ವಿರೋಧಿ ಅಭಿಯಾನಕ್ಕೆ ಒಹಿಯೋ ಸ್ಟೇಟ್ ಯುನಿವರ್ಸಿಟಿ ಹಣ ಒದಗಿಸಿದೆ. ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಎಸ್‌ಪಿ ಉದಯಕುಮಾರ್ ಅವರಿಗೆ ಜರ್ಮನಿ ಲಿಂಕ್‌ಗಳಿವೆ ಎಂದು ವರದಿ ಪ್ರತಿಪಾದಿಸಿದೆ. ಐಬಿ ವರದಿಯನ್ನು ಪರಿಗಣಿಸುವುದಾದರೆ ಡಚ್ ಮೂಲದ ಎನ್‌ಜಿಒಗಳು ಈಶಾನ್ಯ ಭಾರತದಲ್ಲಿ ಅಲ್ಲಿನ ಸ್ಥಳೀಯ ಎನ್‌ಜಿಒಗಳನ್ನು ಆಕರ್ಷಿಸುತ್ತಿವೆ. ವೇದಾಂತದಂತಹ ಯೋಜನೆಗಳಿಗೆ ಪ್ರತಿಭಟನೆ ಅಡ್ಡಿಯಾಗುವುದಕ್ಕೆ ಪರಿಸರದ ಕಾರಣಗಳು ಇದ್ದಿರಬಹುದಾದರೂ ಪ್ರತಿಸ್ಪರ್ಧಿ ಉದ್ದಿಮೆಗಳ ಪೈಪೋಟಿ ರಾಜಕೀಯವೂ ಕೆಲಸ ಮಾಡುತ್ತದೆ ಅಂತ ಕೆಲವು ಉದ್ಯಮಿಗಳು ಆರೋಪಿಸುತ್ತಾರೆ.
ಎಲ್ಲ ಸರ್ಕಾರೇತರ ಸಂಸ್ಥೆಗಳನ್ನೂ ಅನುಮಾನದಿಂದ ನೋಡಬೇಕು ಎಂದಲ್ಲ. ಅಲ್ಲಿ ಕಾಳಜಿ ಇದ್ದ ಮನಸ್ಸುಗಳೂ ಇದ್ದಿರಬಹುದು. ಆದರೆ ಅವನ್ನು ಇನ್ಯಾವುದೋ ಶಕ್ತಿಗಳು ತಮ್ಮ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಿರಬಹುದು. ಹೀಗಾಗಿ ಪ್ರತಿಭಟನಾ ನಿರತರನ್ನೆಲ್ಲ ವಿದೇಶಿ ಏಜೆಂಟ್ ಎನ್ನುವುದು ಸಮಂಜಸವಲ್ಲವಾದರೂ ನಮ್ಮ ಸ್ಥಳೀಯ ವಿಷಯಗಳನ್ನು ಅಲ್ಲೆಲ್ಲೋ ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಕುಳಿತವರು ನಿರ್ದೇಶಿಸುವುದನ್ನು ಒಪ್ಪಲು ಸಾಧ್ಯವೇ? ಸರ್ಕಾರ ತನ್ನ ಯೋಜನೆಗಳನ್ನೆಲ್ಲ ಮುಗಿಸುವುದಕ್ಕೆ ಈ ಸಂಸ್ಥೆಗಳನ್ನು ಹೀಗೆಲ್ಲ ಚಿತ್ರಿಸುತ್ತಿದೆ ಅಂತ ವಾದ ಹೆಣೆಯುವುದು ಸುಲಭ. ಆದರೆ ಯಾವುದೋ ದೇಶದ ಸರ್ಕಾರೇತರ ಸಂಸ್ಥೆಗಿಂತ ನಮ್ಮ ಸರ್ಕಾರವನ್ನೇ ಹೆಚ್ಚು ನಂಬುವುದರಲ್ಲಿ ನಮಗೆ ಶ್ರೇಯಸ್ಸಿದೆ ಅನಿಸದೇ?
-ಚೈತನ್ಯ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

