ತೊಟ್ಟು ನೀರಿಗೂ ಟಿಎಮ್ಸಿ ಕಣ್ಣೀರು ಸುರಿಸಬೇಕಾದೀತು!
ಕಾವೇರಿ ವಿಚಾರದಲ್ಲಿ ಮತ್ತೆ ರಾಜಕೀಯ ಶುರುವಾಗಿದೆ. ಗ್ರಾಮೀಣ ಪ್ರದೇಶ...

ಕಾವೇರಿ ವಿಚಾರದಲ್ಲಿ ಮತ್ತೆ ರಾಜಕೀಯ ಶುರುವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಒಂದು ಗಾದೆ ಮಾತಿದೆ. 'ಯಾವ ರಾಜ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ' ಅಂತ. ಈ ಮಾತು ಕರ್ನಾಟಕದ ಪಾಲಿಗೆ ಕಾವೇರಿ ವಿಷಯದಲ್ಲಿ ಅಕ್ಷರಶಃ ಸತ್ಯ. ಕೇಂದ್ರದಲ್ಲಿ ಯಾವುದೇ ಸರಕಾರ ಬರಲಿ, ಯಾರೇ ಪ್ರಧಾನಿ ಆಗಲಿ, ಕರ್ನಾಟಕ ಮಾತ್ರ ಕಾವೇರಿಗಾಗಿ ಕಣ್ಣೀರು ಸುರಿಸುವುದು ನಿಲ್ಲುವುದಿಲ್ಲ. ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ವಿ.ಪಿ. ಸಿಂಗ್, ಮನಮೋಹನ್ ಸಿಂಗ್ ಅವರಿಂದ ಹಿಡಿದು ಬಹುತೇಕ ಎಲ್ಲ ಪ್ರಧಾನಿಗಳು ಕಾವೇರಿಯಲ್ಲಿ ಬರೀ ರಾಜಕೀಯ ಅರಸಿದರೇ ಹೊರತು, ಯಾರೊಬ್ಬರೂ ಅದನ್ನೊಂದು ಸಮಸ್ಯೆಯನ್ನಾಗಿಯೇ ನೋಡಲಿಲ್ಲ. ಹೀಗಾಗಿ ಕರ್ನಾಟಕದ ಜನ ಕಣ್ಣೀರು ಸುರಿಸುವುದು ನಿಲ್ಲಲಿಲ್ಲ, ನಿಂತಿಲ್ಲ ಹಾಗೂ ನಿಲ್ಲುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಹೀಗಾಗಿ ಕಾವೇರಿ ಕೊಳ್ಳದಲ್ಲಿ ಅಂತರ್ಜಲ ಬತ್ತುತ್ತಿರುವಂತೆ ಆ ಭಾಗದ ಜನರ ಕಣ್ಣೀರು ಬತ್ತುತ್ತಿದೆ.
ನಿಜ ಹೇಳಬೇಕೆಂದರೆ ಕಾವೇರಿ ಸಮಸ್ಯೆಯನ್ನು ಯಾರೊಬ್ಬರೂ ಸಮಸ್ಯೆಯನ್ನಾಗಿಯೇ ನೋಡಲಿಲ್ಲ. ಈಗಲೂ ನೋಡುತ್ತಿಲ್ಲ. ಕೇಂದ್ರದಲ್ಲಾಯಿತು, ಕರ್ನಾಟಕ ಮತ್ತು ತಮಿಳುನಾಡಿನಲ್ಲಾಯಿತು. ಇಲ್ಲಿ ಅಧಿಕಾರ ನಡೆಸಿದವರೆಲ್ಲ ಕಾವೇರಿಯನ್ನು 'ರಾಜಕೀಯ ಕಣ್ಣು'ಗಳಿಂದಲೇ ನೋಡಿದರು. 'ಯಾರಿಗೆ ಏನು ಅನ್ಯಾಯ ಆದರೆ ತಮಗೇನು? ರಾಜಕೀಯ ಬೇಳೆ ಬೇಯಿಸಿಕೊಂಡರೆ ಆಯಿತು' ಎಂಬ ಮನೋಭಾವನೆ ಅವರದು. ಈ ರಾಜಕೀಯ ನಾಯಕರ ಕುತ್ಸಿತ ಬುದ್ಧಿ ಅರಿಯದ ಜನ ಅವರ ಬಣ್ಣ ಬಣ್ಣದ ಮಾತುಗಳನ್ನು ನಂಬಿದರು. ಜನ ಕೂಡ ಇದನ್ನು ಸಮಸ್ಯೆಯಾಗಿ ನೋಡದೇ ಭಾವನಾತ್ಮಕವಾಗಿ ತೆಗೆದುಕೊಂಡರು. ರಾಜಕಾರಣಿಗಳು ಜನರ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡರು. ಹೀಗಾಗಿ ಕಾವೇರಿ ಸಮಸ್ಯೆ ಶಾಶ್ವತವಾಗಿದೆ. ಕಾವೇರಿಯನ್ನು ಕಳೆದುಕೊಳ್ಳುವ ಸ್ಥಾನದಲ್ಲಿರುವ ಕರ್ನಾಟಕದ ಜನ ಮೈಮನಗಳ ಬಾಯಾರಿಕೆಯಿಂದ ಬಸವಳಿದಿದ್ದಾರೆ.
ತೀರಾ ಹಿಂದಿನದು ಬೇಡ. ಈಗಿನದ್ದನ್ನು ನೋಡೋಣ. ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ನೂತನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕಾವೇರಿ ನ್ಯಾಯಾಧೀಕರಣ ಐತೀರ್ಪಿನ ಪ್ರಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ಅಂತಾರಾಜ್ಯ ನದಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ಬೇಡಿಕೆಗಳ ಪಟ್ಟಿಯನ್ನೇ ಸಲ್ಲಿಸಿದ್ದಾರೆ. ಇದಾದ ನಂತರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಪ್ರಕ್ರಿಯೆ ಆರಂಭಕ್ಕೆ ಪ್ರಧಾನಿ ಸಚಿವಾಲಯದಿಂದ ಸೂಚನೆ ಹೋಗಿದೆ ಎಂಬ ಮಾಹಿತಿ ಸೋರಿಕೆಯಿಂದ ವಿವಾದ ಮತ್ತೆ ಭುಗಿಲೆದ್ದಿದೆ. ಕರ್ನಾಟಕದಿಂದ ಕೇಂದ್ರ ಸಂಪುಟ ಪ್ರತಿನಿಧಿಸುತ್ತಿರುವ ಸಚಿವರಾದ ಸದಾನಂದಗೌಡ ಹಾಗೂ ಅನಂತಕುಮಾರ್, 'ಇದೊಂದು ಕೇವಲ ವದಂತಿ' ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಸ್ಪಷ್ಟನೆ ನೀಡುವುದರ ಜತೆ ಜತೆಗೆ ಪ್ರಧಾನಿಯವರನ್ನು ಭೇಟಿ ಮಾಡಿ ಮಂಡಳಿ ರಚನೆ ಪ್ರಕ್ರಿಯೆಗೆ ಕೇಂದ್ರ ಸರಕಾರ ಕೈ ಹಾಕಿಲ್ಲ ಎಂದ ಮೇಲೆ ಪ್ರಧಾನಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಅಗತ್ಯವಾದರೂ ಏನಿದೆ? ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಸಂಪುಟ ಟಿಪ್ಪಣಿ ಈಗಾಗಲೇ ಸಿದ್ಧವಾಗಿರುವ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇದ್ದು, ಈ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಲು ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. ವಿಷಯ ಏನೇ ಇರಲಿ, ಒಂದು ಮಾತಂತೂ ಸತ್ಯ. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಧಗಧಗ ಉರಿಯುವ ಜ್ವಾಲೆ ಇಲ್ಲದಿದ್ದರೂ ಬೂದಿ ಮುಚ್ಚಿದ ಕೆಂಡವಾದರೂ ಇರಲೇಬೇಕು. ಹೀಗಾಗಿಯೇ ಹೊಗೆ ಕಂಡಿದೆ. ಕರ್ನಾಟಕ ಭಾಗದ ಕಾವೇರಿ ಕೊಳ್ಳದ ಜನ ಕೆರಳಿ ಕೆಂಡವಾಗಿದ್ದಾರೆ. ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದ ಹೊಸತರಲ್ಲೇ ಇಂಥದ್ದೊಂದು ಅನಪೇಕ್ಷಿತ ಬೆಳವಣಿಗೆಯಿಂದ ಕರ್ನಾಟಕ ಜನರ ಭಾವನೆಗಳ ಮೇಲೆ ಬೀರಬಹುದಾದ ಪ್ರತೀಕೂಲ ಪರಿಣಾಮವನ್ನು ಮನಗಂಡು ಕೇಂದ್ರ ಸಚಿವರಿಬ್ಬರು ತಿಪ್ಪೆ ಸಾರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂದರೆ ಅನಾಹುತ ನಿಯಂತ್ರಣ ಪ್ರಕ್ರಿಯೆಗೆ ಮುಂದಾಗಿದ್ದಾರೆ.
ಹೌದು, ಯಾರು ಏನೇ ಹೇಳಿದರೂ, ಯಾವುದೇ ತತ್ವ ನೀತಿ ಬೋಧಿಸಿದರೂ ರಾಜಕೀಯದ ಮೂಲಗುಣ ಬದಲಾಗುವುದಿಲ್ಲ. ಅನುಕೂಲಸಿಂಧು ವಾತಾವರಣ ಸೃಷ್ಟಿ ರಾಜಕೀಯದ ಮೊದಲ ಪಾಠ. ತದನಂತರ ವಾತಾವರಣವನ್ನೇ ಅಳಿಸಿಹಾಕಿ ಅಲ್ಲಿ ಅನುಕೂಲಸಿಂಧು ರಾಜಕಾರಣ ಮೈದಳೆಯುತ್ತದೆ. ತನ್ನ ಅನುಕೂಲಕ್ಕೆ ತಕ್ಕಂತೆ ರಾಜಕೀಯ ಮಾಡಿಕೊಂಡು ಹೋಗುತ್ತಿರುತ್ತದೆ. ಈ ಅನುಕೂಲಸಿಂಧು ರಾಜಕಾರಣಕ್ಕೆ ನೆಹರೂ ಆಗಲಿ, ನರಸಿಂಹರಾವ್ ಆಗಲಿ, ನರೇಂದ್ರ ಮೋದಿ ಅವರೇ ಆಗಲಿ ಯಾರೂ ಹೊರತಲ್ಲ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದು ದಿಟ. ಆದರೆ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಅಗತ್ಯ ಸಂಖ್ಯಾಬಲ ಇಲ್ಲ. ರಾಜ್ಯಸಭೆಯ ಒಟ್ಟು ಸಂಖ್ಯಾಬಲ 243. ಈ ಪೈಕಿ ಹತ್ತು ಸ್ಥಾನಗಳು ಖಾಲಿ ಇವೆ. ಯಾವುದೇ ವಿಧೇಯಕ ಅನುಮೋದನೆ ಪಡೆಯಲು ಈಗಿರುವ ಸದಸ್ಯಬಲದ ಪೈಕಿ 117 ಸದಸ್ಯರ ಬೆಂಬಲ ಬೇಕೇ ಬೇಕು. ಎನ್ಡಿಎಗೆ ಈಗಿರುವ ಸ್ಥಾನಬಲ ಕೇವಲ 64. ಎಐಎಡಿಎಂಕೆಯ 10 ಸದಸ್ಯರು ಅಲ್ಲಿದ್ದಾರೆ. ಲೋಕಸಭೆಯಲ್ಲಿ ಪಾಸಾದ ವಿಧೇಯಕಗಳು ರಾಜ್ಯಸಭೆಯಲ್ಲಿ ಧರಣಿ ಕೂರದಿರಲು ಮೋದಿ ಅವರು ಅಗತ್ಯ ಸಂಖ್ಯಾಬಲ ಕ್ರೋಢೀಕರಿಸಲೇಬೇಕು. ಹೀಗಾಗಿ ಅವರು ಜಯಲಲಿತಾ, ಬಿಜು ಜನತಾದಳ ಮತ್ತಿತರ ಪ್ರಾದೇಶಿಕ ಪಕ್ಷಗಳ ಸಖ್ಯ ಬೆಳೆಸಲೇಬೇಕು. ಅದಕ್ಕೆ ಪ್ರತಿಯಾಗಿ ಏನಾದರೂ ರಾಜಕೀಯ ಅನುಕೂಲ ಮಾಡಿಕೊಡಲೇಬೇಕು. ಕಾವೇರಿ ನಿರ್ವಹಣಾ ಮಂಡಳಿ ರಚನೆ ಈ ಲಾಭದ ಪಟ್ಟಿಯಲ್ಲಿದ್ದರೆ ಅದು ಕರ್ನಾಟಕದ ಹಣೆಬರಹ ಅಷ್ಟೇ.
ಇಲ್ಲಿ ಇನ್ನೊಂದು ವಿಷಯ. ಈಗಿನ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನಾದಿನ, ಅಂದರೆ ಮೇ 15 ರಂದು ಎಐಎಡಿಎಂಕೆ ಮುಖಂಡ ಹಾಗೂ ಮಾಜಿ ಸಂಸದ ಕೆ. ಮಲೈಸ್ವಾಮಿ ಹೇಳಿಕೆ ನೀಡಿದ್ದರು. ತಮ್ಮ ಪಕ್ಷದ ನಾಯಕಿ ಜಯಲಲಿತಾ ಹಾಗೂ ನರೇಂದ್ರ ಮೋದಿ ಅವರದು ಹಳೆಯ ಸ್ನೇಹ. ಹೀಗಾಗಿ ಮೋದಿ ನೇತೃತ್ವದ ಸರಕಾರಕ್ಕೆ ತಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ಭವಿಷ್ಯ ನುಡಿದಿದ್ದರು. ಮರುದಿನವೇ ಮಲೈ ಸ್ವಾಮಿ ಅವರನ್ನು ಜಯಲಲಿತಾ ಪಕ್ಷದಿಂದ ಉಚ್ಚಾಟನೆ ಮಾಡಿದರು. ಪಾಪ ಮಲೈಸ್ವಾಮಿ ಅವರದೇನೂ ತಪ್ಪಿರಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕಾರ ಮಾಡಿದ ಸಮಾರಂಭಕ್ಕೆ ಜಯಲಲಿತಾ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ 'ರಾಜಕೀಯ ಸ್ನೇಹ'ವನ್ನು ಮಲೈಸ್ವಾಮಿ ಕಂಡಿದ್ದರು. ಈಗ ಜಯಲಲಿತಾ ಅವರು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಪ್ರಕಾರ ಕರ್ನಾಟಕವು ತಮಿಳುನಾಡಿಗೆ ವಾರ್ಷಿಕ 192 ಟಿಎಮ್ಸಿ ನೀರು ಬಿಡಬೇಕು. ಕೇರಳ 30 ಟಿಎಮ್ಸಿ ಹಾಗೂ ಪುದುಚೆರಿ 7 ಟಿಎಮ್ಸಿ ಕಾವೇರಿ ನೀರು ಬಳಕೆಗೆ ಅರ್ಹವಾಗಿವೆ. ಬೆಂಗಳೂರಿನ ಮೂರನೇ ಎರಡರಷ್ಟು ಭಾಗ ಕಾವೇರಿ ಕೊಳ್ಳದ ವ್ಯಾಪ್ತಿಗೆ ಬರದಿರುವುದರಿಂದ ಕುಡಿಯುವ ಉದ್ದೇಶಕ್ಕೆ ಬೇಕಾದ 30 ಟಿಎಮ್ಸಿ ನೀರಿಗೆ ಅಂತರ್ಜಲ ಸೇರಿದಂತೆ, ಅನ್ಯ ಮೂಲಗಳ ಮೊರೆ ಹೋಗಬೇಕಂತೆ. ಆದರೆ ತಮಿಳುನಾಡಿಗೆ ನೀರು ಪ್ರಮಾಣ ನಿಶ್ಚಯ ಮಾಡುವಾಗ ಅದರ 18 ಟಿಎಮ್ಸಿ ಅಂತರ್ಜಲವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕಾವೇರಿ ಕೊಳ್ಳದ ಪಾಲುದಾರ ರಾಜ್ಯಗಳಾದ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೆರಿ, ನ್ಯಾಯಾಧಿಕರಣದ ಐತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಅವಿನ್ನೂ ಬಾಕಿ ಉಳಿದಿವೆ.
ಮೊದಲನೆಯದಾಗಿ ಕರ್ನಾಟಕ ತಮಿಳುನಾಡಿಗೆ ಬಿಡಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ನೀರು ಸಮುದ್ರ ಸೇರುತ್ತಿದೆ. ಅಂದರೆ ತಮಿಳುನಾಡು ಕಾವೇರಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಅಧಿಕೃತ ಅಂಕಿ ಅಂಶಗಳ ಪ್ರಕಾರ 1992ರಿಂದ 98ರವರೆಗೆ ಪ್ರತಿವರ್ಷ ಕ್ರಮವಾಗಿ 340 ಟಿಎಮ್ಸಿ, 358, 234, 393, 195, 248 ಹಾಗೂ 278 ಟಿಎಮ್ಸಿ ನೀರು ತಮಿಳುನಾಡು ಬಳಕೆ ಮಾಡದೆ ಸಮುದ್ರ ಸೇರಿದೆ. ಒಂದು ಕಡೆ ಕಾವೇರಿ ನೀರಿಗೆ ಬೊಬ್ಬೆ ಹೊಡೆಯುವ, ಕರ್ನಾಟಕದ ನೀರಿನ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ತಮಿಳುನಾಡು, ಇನ್ನೊಂದೆಡೆ ತನ್ನ ಪಾಲಿಗೆ ಬಂದ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ರಾಜಕೀಯ ಕಾರಣಗಳಿಗಾಗಿ ಕಾವೇರಿ ವಿಷಯ ಬಳಕೆ ಮಾಡಿಕೊಳ್ಳುತ್ತಿದೆ! ನಾವಿಲ್ಲಿ ಪ್ರತಿವರ್ಷ ಕುಡಿಯುವ ನೀರಿಗೆ ಪರದಾಡುತ್ತಿರುವಾಗ, ತಮಿಳುನಾಡು ಅದರಲ್ಲಿ ರಾಜಕೀಯ ಮಾಡುತ್ತಿದೆ.
ಬೆಂಗಳೂರಿಗೆ ಪ್ರತಿವರ್ಷ ಕುಡಿಯುವ ಉದ್ದೇಶಕ್ಕೆ 30 ಟಿಎಮ್ಸಿ ನೀರು ಬೇಕು. ಇದನ್ನು ಪಾಲಾರ್ ನದಿಯ ಕೊಳ್ಳದಿಂದ, ಅಂದರೆ ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಅರ್ಕಾವತಿ, ವೃಷಭಾವತಿ ನದಿಗಳ ಮೂಲ ಅಂತರ್ಜಲದಿಂದ ಪಡೆಯಬೇಕು. ಒಂದ ಕಾಲದಲ್ಲಿ ನಂದಿ ಬೆಟ್ಟ ಹಾಗೂ ಸುತ್ತಮುತ್ತ ಹುಟ್ಟಿ ಹರಿಯುತ್ತಿದ್ದ ಈ ನದಿಗಳು ಮಳೆಯನ್ನು ಆಧರಿಸಿದ್ದವು. ಈಗ ಈ ಎಲ್ಲಾ ನದಿಗಳು ಬತ್ತಿಹೋಗಿವೆ. ಮಳೆಗಾಲದಲ್ಲೂ ಹರಿಯುತ್ತಿಲ್ಲ. ಬದಲಿಗೆ ಅಲ್ಲೆಲ್ಲ ಚರಂಡಿ ನೀರು ಹರಿಯುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರು ಹಾಗೂ ಸುತ್ತಮುತ್ತ ಅಂತರ್ಜಲ ಎಂಬುದು ಇಲ್ಲವೇ ಇಲ್ಲ. 1200 ಅಡಿ ಆಳಕ್ಕಿಳಿದರೂ ತೊಟ್ಟು ನೀರು ಸಿಗುತ್ತಿಲ್ಲ. ಹೀಗಿರುವಾಗ ಅದ್ಯಾವ ಅಂತರ್ಜಲದಿಂದ ಕುಡಿಯುವ ನೀರು ಬಸಿಯಬೇಕು? ಇನ್ನೊಂದು ಮುಖ್ಯ ವಿಷಯ- ತನಗೆ ಹಂಚಿಕೆಯಾಗಿರುವ 30 ಟಿಎಮ್ಸಿ ಬಳಸಿಕೊಳ್ಳಲು ಕೇರಳದಲ್ಲಿ ಯಾವುದೇ ಸೌಕರ್ಯಗಳಿಲ್ಲ. ಅಂದರೆ ಆಣೆಕಟ್ಟೆ, ಕೆರೆಕಟ್ಟೆಗಳ ಆಶ್ರಯವಿಲ್ಲ. ಮೊದಲು ಈ ನೀರನ್ನು ಕರ್ನಾಟಕವೇ ಬಳಸಿಕೊಳ್ಳುತ್ತಿತ್ತು. ಈಗ ಈ ನೀರಿನ ಬಳಕೆಯ ಹಕ್ಕನ್ನು ತಮಿಳುನಾಡಿಗೆ ನೀಡಲಾಗಿದೆ. ಕೇರಳ ಈ ನೀರು ಬಳಕೆಗೆ ಸೌಕರ್ಯ ಮಾಡಿಕೊಳ್ಳುವವರೆಗೆ ತಮಿಳುನಾಡೇ ಅದಕೆ ವಾರಸುದಾರ. ಇದು ಕರ್ನಾಟಕಕ್ಕೆ ಬಿದ್ದ ದೊಡ್ಡ ಹೊಡೆತ.
ಒಂದು ಕಡೆ ಬೆಂಗಳೂರಿಗೆ ಕಾವೇರಿಯಿಂದ ಕುಡಿಯುವ ನೀರು ಪಡೆವ ಅವಕಾಶವಿಲ್ಲ. ಇನ್ನೊಂದೆಡೆ ಕೇರಳ ಪಾಲಿನ ನೀರಿನ ಮೇಲಿನ ಕರ್ನಾಟಕದ ಸ್ವಾಮ್ಯವನ್ನು ಕಸಿದು ತಮಿಳುನಾಡಿಗೆ ನೀಡಲಾಗಿದೆ. ಮತ್ತೊಂದೆಡೆ ತಮಿಳುನಾಡಿನ 'ಅಂತರ್ಜಲ' ತೀರ್ಪಿನ ವ್ಯಾಪ್ತಿಗೆ ಬಂದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕಕ್ಕೆ ಸಿಗಬೇಕಾದ ಹೆಚ್ಚಿನ ಪ್ರಮಾಣದ ನೀರು ಸಮುದ್ರ ಸೇರುತ್ತಿದೆ. ಇದೆಲ್ಲಾ ಅನ್ಯಾಯಗಳೂ ಕರ್ನಾಟಕಕ್ಕೇ! ಆದರೆ ರಾಜಕೀಯ ಕಾರಣಗಳುಳ್ಳ ಕಣ್ಣಿಗೆ ಈ ಅನ್ಯಾಯಗಳು ಕಾಣಿಸುತ್ತಿಲ್ಲ.
ಈಗ ನ್ಯಾಯಾಧೀಕರಣದ ತೀರ್ಪಿನ ಅಂಶಗಳ ಮೇಲುಸ್ತುವಾರಿಗೆ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ಎಲ್ಲಾ ರಾಜ್ಯಗಳು ಮೇಲ್ಮನವಿ ಸಲ್ಲಿಸಿವೆ, ಅದು ಇತ್ಯಾರ್ಥವಾಗುವವರೆಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡದಿದ್ದರೆ ಯಾವ ಸಾಮ್ರಾಜ್ಯವೂ ಮುಳುಗುವುದಿಲ್ಲ. ಒಂದೊಮ್ಮೆ ಸುಪ್ರಿಂ ಕೋರ್ಟ್ ಮುಂದಿರುವ ಅರ್ಜಿಗಳ ವಿಲೇವಾರಿ ಆಗುವ ಮೊದಲೇ ಮಂಡಳಿ ರಚನೆ ಮಾಡಿದರೆ
ಕರ್ನಾಟಕದ ಕಾವೇರಿ ಕೊಳ್ಳದ ಎಲ್ಲಾ ಆಣೆಕಟ್ಟೆಗಳು, ಕೆರೆಕಟ್ಟೆಗಳು ಆ ಮಂಡಳಿಯ ವ್ಯಾಪ್ತಿಗೆ ಹೋಗುತ್ತವೆ. ಇದರ ಮೇಲಿನ ತನ್ನ ಹಕ್ಕನ್ನು ಕರ್ನಾಟಕ ಕಳೆದುಕೊಳ್ಳುತ್ತದೆ. ಪ್ರತಿ ತೊಟ್ಟು ನೀರಿಗೂ ಟಿಎಮ್ಸಿಗಟ್ಟಲೇ ಕಣ್ಣೀರು ಸುರಿಸಬೇಕಾಗುತ್ತದೆ!
ಲಗೋರಿ: ಅನ್ಯಾಯವನ್ನು ಸಹಿಸಿಕೊಳ್ಳುವವನೇ ಹೆಚ್ಚು ಅನ್ಯಾಯಕ್ಕೊಳಗಾಗುತ್ತಾನೆ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


