ನಿಲ್ಲದ ಅತ್ಯಾಚಾರದ ನಾನಾ ಮುಖಗಳ ಸುತ್ತಮುತ್ತ
ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲೇ ಸಿದ್ದರಾಮಯ್ಯ...
ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲೇ ಸಿದ್ದರಾಮಯ್ಯ ಅವರು ಸದನದ ಹೊರಗಡೆ, ಮಂಗಳವಾರ ಕೆಲವು ಪತ್ರಕರ್ತರಿಗೆ ಸಿಕ್ಕಿದಾಗ, ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಒಂದು ಅತ್ಯಾಚಾರದ ಪ್ರಕರಣದ ಪ್ರಸ್ತಾಪ ಸಹಜವಾಗಿಯೇ ತಾನೇ ತಾನಾಗಿ ಉದ್ಭವವಾಗಿತ್ತು. ಬೆಂಗಳೂರಿನಲ್ಲೂ ಇನ್ನೊಂದು ಪ್ರಕರಣ ವರದಿಯಾಗಿತ್ತು. ಇದು ಸಿದ್ದರಾಮಯ್ಯ ಅವರನ್ನು ರೇಗಿಸಿ, ಕುಪಿತರನ್ನಾಗಿ ಮಾಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಸದನದ ಒಳಗಡೆ ಅತ್ಯಾಚಾರದ ಪ್ರಸ್ತಾಪ. ಹೊರಗೂ ಅದೇ ಎನ್ನುವ ಸ್ಥಿತಿ. ಆಗ ಅವರು ಪತ್ರಕರ್ತರಿಗೆ ಹೇಳಿದ್ದು: ನಿಮಗೇನು ಅತ್ಯಾಚಾರದ ವಿಚಾರ ಬಿಟ್ಟು ಬೇರೆ ಸುದ್ದಿಯೇ ಇಲ್ಲವೇ?
ನಿಜಕ್ಕೂ ಅದೊಂದು ಮಾರ್ಮಿಕ ಪ್ರಶ್ನೆ. ಕಳೆದ ಹಲವಾರು ದಿನಗಳಿಂದಲೂ ಅತ್ಯಾಚಾರದ ಪ್ರಕರಣಗಳನ್ನು ಕುರಿತ ಪ್ರಸ್ತಾಪ ವಿಧಾನಮಂಡಲದ ಉಭಯ ಸದನಗಳ ಗಂಭೀರ ವಿಷಯಗಳನ್ನು ನುಂಗಿ ಹಾಕಿದೆ.
ಈಗಾಗಲೇ ಹಲವಾರು ಬಾರಿ, ಅನೇಕ ವಲಯಗಳಲ್ಲಿ ಘೋರವಾದ, ಕರುಳು ಕಿತ್ತು ಬರುವಂತೆ ಆಗುವ ಅತ್ಯಾಚಾರಗಳ ಪ್ರಕರಣಗಳ ಪ್ರಸ್ತಾಪವೇ ನಗರದ, ರಾಜ್ಯದ, ದೇಶದ ದೊಡ್ಡ ಸುದ್ದಿ ಎನ್ನುವ ವಾತಾವರಣ ಮೂಡಿದೆ.
ಬೆಂಗಳೂರಿನ ಶಾಲೆಯೊಂದರಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರದ ಪ್ರಕರಣದ ವಿಚಾರ ದೂರದ ಒಡಿಶಾದ ವಿಧಾನಸಭೆಯಲ್ಲೂ ಪ್ರಸ್ತಾಪವಾಗುತ್ತಿದೆ. ಕಾರಿನಲ್ಲೇ ಎತ್ತಿಹಾಕಿಕೊಂಡು ಅತ್ಯಾಚಾರ ನಡೆಸುವುದು ಸಮಾಜದ ಕೆಲವು ಸ್ವೇಚ್ಛಾಚಾರಿ, ದುಷ್ಟ ಶಕ್ತಿಗಳ ಪಾಲಿಗೆ ಒಂದು ಸಾಹಸದಂತೆಯೇ ಆಗಿದೆ.
ಹೌದು. ಇಂತಹ ಪ್ರಕರಣಗಳು ಖಂಡನೀಯ. ಅದನ್ನು ಎಷ್ಟು ಬಾರಿ, ಯಾವ ಯಾವ ರೀತಿಯಲ್ಲಿ ಖಂಡಿಸಿದರೂ ಸಾಲದು. ಆದರೆ ಕೇವಲ ಖಂಡನೆಯಿಂದ ಆಗುವ ಪರಿಣಾಮವಾದರೂ ಏನು? ಇದುವರೆಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ, ಅಲ್ಲಿನ ಮೊಗಸಾಲೆಗಳಲ್ಲಿ ಹಾದಿ-ಬೀದಿಗಳಲ್ಲಿ, ಮಂತ್ರಿ ಮಾನ್ಯರಿಂದ ಹಿಡಿದು ಕಟ್ಟಕಡೆಯ ಮನುಷ್ಯನ ಪ್ರತಿನಿಧಿಯವರೆಗೂ, ಎಲ್ಲ ವರ್ಗಗಳ ಜನರಿಂದ ಹೊರಬಿದ್ದಿರುವ ಖಂಡನೆಯ ಮಾತುಗಳಿಗೆ, ಭೌತಿಕವಾಗಿ ಶಕ್ತಿ ಇದ್ದಿದ್ರೆ ಈ ವೇಳೆಗೆ ಅತ್ಯಾಚಾರಿಗಳಲ್ಲಿ ಬಹುಮಂದಿಯ ಕೈಕಾಲು ಮುರಿದು ಹೋಗಬೇಕಾಗಿತ್ತು.
ಹಾಗೇನೂ ಆಗಿಲ್ಲ. ತಮ್ಮ ಬೀದಿಯಲ್ಲಿ ತಮ್ಮ ಪಾಡಿಗೆ ತಾವು ಎನ್ನುವಂತೆ ಓಡಾಡುವ ಮಹಿಳೆಯರನ್ನು ಕೆಟ್ಟ ಭಾಷೆಯಲ್ಲಿ ಚುಡಾಯಿಸುವುದರಿಂದ ಹಿಡಿದು ಸಮಯ ಸಿಕ್ಕಾಗ ಕೈ ಮಾಡುವ ಪ್ರವೃತ್ತಿಯ ವ್ಯಕ್ತಿಗಳ ಕಾರ್ಯಾಚರಣೆ ನಿಂತಿಲ್ಲ.
ಇದನ್ನೆಲ್ಲ ತಡೆಗಟ್ಟುವುದು ಹೇಗೆ?
ಆ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಪಂಚಾಯಿತಿ ಮಟ್ಟದಿಂದ ಹಿಡಿದು ಪಾರ್ಲಿಮೆಂಟಿನವರೆಗೂ ಅತ್ಯುನ್ನತ ಮಟ್ಟದ, ತಜ್ಞರು, ಆಡಳಿತಗಾರರ ಸಮ್ಮೇಳನಗಳು, ಅಧ್ಯಯನ ಶೀಲ ಕಾರ್ಯಾಗಾರಗಳು ನಡೆದಿವೆ. ಉತ್ತರ ಸಿಕ್ಕಿಲ್ಲ.
ಖುಜು ಜೀವನದ ಅಗತ್ಯದ ಪ್ರಚಾರದಿಂದ ಹಿಡಿದು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವುದರವರೆಗೂ ಭಾಷಣಗಳಾಗಿವೆ, ಲೇಖನಗಳು ಪ್ರಕಟವಾಗಿವೆ. ವಾಸ್ತವದಲ್ಲಿ ಸಂಭಾವಿತರಿಗೆ ಅದರ ಅವಶ್ಯಕತೆಯಿಲ್ಲ. ಗೂಂಡಾಗಳು ಆ ಭಾಷಣಗಳಿಗೆ ಬೆಲೆ ಕೊಡುವುದಿಲ್ಲ.
ಗೂಂಡಾ ಕಾಯಿದೆ ಬಳಕೆ: ಈ ಪರಿಸ್ಥಿತಿಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವುದು ಹೇಗೆ? ಸದ್ಯಕ್ಕೆ ನಮ್ಮ ಆಡಳಿತಗಾರರಲ್ಲಿ ಇರುವುದು ಒಂದೇ ಮಾರ್ಗ: ಸಾಮಾನ್ಯವಾದ ಕಾಯಿದೆ ಪಾಲನೆ, ಶಾಂತಿ-ಸುವ್ಯವಸ್ಥೆಯ ಪಾಲನೆಯ ಸಾಧನಗಳನ್ನು (ಪೊಲೀಸ್ ಪಡೆ ಬಹುಮುಖ್ಯ) ಬಲಪಡಿಸುವುದು. ಅತ್ಯಾಚಾರಿಗಳಿಗೆ, ಸಿಕ್ಕಿಬಿದ್ದರೆ ಕಠಿಣ ಶಿಕ್ಷೆ ಖಂಡಿತ ಎನ್ನುವ ವಾತಾವರಣವನ್ನು ನಿರ್ಮಿಸುವುದು.
ಅದನ್ನು ಮುಖ್ಯಮಂತ್ರಿಯ ಮಾತಿನಲ್ಲೇ ಹೇಳಬೇಕಾದರೆ ಭಯೋತ್ಪಾದಕರ ಎದೆಯಲ್ಲಿ ನಡುಕ ಹುಟ್ಟುವಂತಹ ಕ್ರಮ ಅಗತ್ಯ. ಆ ಉದ್ದೇಶದಿಂದಲೇ ಅತ್ಯಾಚಾರದ ಪ್ರಕರಣಗಳನ್ನು ಅತಿ ಕಠಿಣವಾದ, ಸಹಜ ನ್ಯಾಯ ವಿತರಣೆಯ ನಿಯಮಕ್ಕೆ ಹೊರತಾಗಿರುವ ಗೂಂಡಾ ಕಾಯಿದೆಯ ವ್ಯಾಪ್ತಿಯಲ್ಲಿ ಸೇರಿಸುವ ಪ್ರಯತ್ನ ನಡೆದಿರುವುದು. ಈಗ ಬೆಂಗಳೂರಿನ ಒಂದು ಪ್ರಕರಣದಲ್ಲಿ ಅಂತಹ ಪ್ರಕರಣ ನಡೆದಿದೆಯಂತೆ. ಅದಕ್ಕೆ ಸಂವಿಧಾನದ ಮೂಲಭೂತ ಹಕ್ಕು-ಸ್ವಾತಂತ್ರ್ಯ ಕಲ್ಪನೆಯ ಹಿನ್ನೆಲೆಯಲ್ಲಿ ನ್ಯಾಯಾಂಗದ ಪ್ರತಿಕ್ರಿಯೆ ಯಾವ ರೀತಿ ಇದ್ದೀತು? ಹೇಳುವುದು ಕಷ್ಟ.
ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಜಾರಿಗೊಳಿಸಲಾದ ಗೂಂಡಾ ಕಾಯಿದೆ ಸುಮಾರು ಮೂರು ದಶಕಗಳಿಂದಲೂ ಜಾರಿಯಲ್ಲಿದ್ದರೂ ಅದರಿಂದ ಕಾಯಿದೆ ಪಾಲನೆಯ ವ್ಯವಸ್ಥೆ ಸುಧಾರಿಸಿಲ್ಲ. ಅದೆಷ್ಟು ಮಂದಿ ಗೂಂಡಾ ಕಾಯಿದೆಯ ಅಡಿಯಲ್ಲಿ ಜೈಲಿಗೆ ಹೋಗಿದ್ದಾರೋ ಗೊತ್ತಿಲ್ಲ. ವಿಚಾರಣೆ - ಇಲ್ಲದೆ ಬಂಧನದಲ್ಲಿ ಅನೇಕರು ಇರಬಹುದು. ಆ ವಿಚಾರ ಬೇರೆ.
ಬೆಂಗಳೂರನ್ನು ಅತ್ಯಾಚಾರದ ರಾಜಧಾನಿ ಎನ್ನುವ ಶೀರ್ಷಿಕೆಯ ಬಳಕೆ ಈಗ ಸರ್ವೇ ಸಾಮಾನ್ಯವಾಗಿದೆ. ವಿಧಾನಮಂಡಲದ "ಚರ್ಚೆಯ" ಕಾಲದಲ್ಲಿ ಪ್ರತಿಪಕ್ಷಗಳು ಕಾಂಗ್ರೆಸ್ ಹಾಗೂ ಸರ್ಕಾರವನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಜಾರ್ಜ್ ಅವರ ಮೇಲೆ ಎರಗಿದ್ದೂ ನಿಜ. ಭಾರತೀಯ ಜನತಾ ಪಾರ್ಟಿಯ ನಾಯಕರು ಕಟುವಾದ ರೀತಿಯ ಭಾಷಣಗಳನ್ನೇ ಮಾಡಿದ್ದಾರೆ. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಅತ್ಯಾಚಾರ ಪ್ರಕರಣಗಳನ್ನೇ ಪರಿಗಣಿಸುವುದಾದರೆ, ಗುಜರಾತ್ ಕರ್ನಾಟಕವನ್ನು ಮೀರಿಸಿದೆ ಎನ್ನುವ ಅರ್ಥಬರುವ ಮಾತಾಡಿದ್ದೇ, ಈ ವಿಚಾರದ ಚರ್ಚೆಯಲ್ಲಿ ಪಕ್ಷ ರಾಜಕೀಯದ ಪ್ರವೇಶಕ್ಕೆ ನೆಪವಾಯಿತು.
ಪ್ರತಿಷ್ಠಿತ ಶಾಲೆಯ ಪಾಡು: ಇಡೀ ಸದನದ, ರಾಜ್ಯದ ಹಾಗೂ ದೇಶದ ಗಮನ ಸೆಳೆದ ಘಟನೆ ಅತಿ ಪ್ರತಿಷ್ಠಿತ ಶಾಲೆ ಎಂದೇ ಭಾವಿಸಲಾಗಿದ್ದ ವಿಬ್‌ಗ್ಯೋರ್ ಶಾಲೆಯಲ್ಲಿನ ಆರು ವರ್ಷದ ಎಳೆಯ ಮಗುವಿನ ಮೇಲೆ, ಸಿಬ್ಬಂದಿಯ ಒಬ್ಬ ವ್ಯಕ್ತಿ ನಡೆಸಿದರೆನ್ನಲಾದ ಅತ್ಯಾಚಾರದ ಪ್ರಕರಣ. ಆ ಶಾಲೆ ಈ ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸಿತ್ತು ಎನ್ನುವ ಆರೋಪವೂ ಇದೆ. ವಿಧಾನ ಮಂಡಲದಲ್ಲಿನ "ಚರ್ಚೆಯಲ್ಲಿ" ಅದಕ್ಕೂ ದೊಡ್ಡ ಪಾತ್ರವಿತ್ತು. ಆ ಸಮಯದಲ್ಲಿ ಕುಮಾರಸ್ವಾಮಿ ಅವರು ಆಡಿದ ಮಾತುಗಳಲ್ಲಿ ಅವರಲ್ಲಿ ಬದಲಾಗುತ್ತಿರುವ ರಾಜಕೀಯ ನಿಲವನ್ನು ಅನೇಕರು ಗುರ್ತಿಸಿದ್ದಾರೆ. ಆ ಶಾಲೆಯ ವಿಚಾರದಲ್ಲೂ ಅವರು ಕಠಿಣವಾದ ಮಾತನ್ನು ಆಡಲಿಲ್ಲ.
ಬಿಜೆಪಿ ಆಂದೋಲನ: ಆದರೆ ಆ ಶಾಲೆಯ ಘಟನೆಯ ಅನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಎತ್ತಂಗಡಿಯಾಗಿ (ಹೌದು ಅದಕ್ಕೆ ಬೇರೆ ಪದವಿಲ್ಲ) ಕೆಲವರಿಗೆ ಪುರಸ್ಕಾರ ಸಿಕ್ಕಿರುವುದು ಗಮನಾರ್ಹ. ನಗರದ ಪೊಲೀಸ್ ಕಮಿಷನರ್ ಆಗಿದ್ದ ರಾಘವೇಂದ್ರ ಔರಾದಕರ್, ಎಡಿಜಿಪಿಯಾಗಿದ್ದ ಡಾ॥ ರವೀಂದ್ರನಾಥ ಅವರ ನಡುವೆ ನಡೆದ ಚಕಮಕಿಗೆ ಬಲಿಯಾಗಿ, ಕಮಿಷನರ್ ಸ್ಥಾನದಿಂದ ನಿರ್ಗಮಿಸಿದ್ದಾರೆ. ಇದು ಸ್ಪಷ್ಟವಾಗಿ ತಲೆದಂಡದ ಪ್ರಕರಣವೇ.
ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರ ವಿರುದ್ಧ, ಕಾಯಿದೆ ಪಾಲನೆಯ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಒತ್ತಡ ತರಲು ಬಿಜೆಪಿ ರಾಜ್ಯದ ಎಲ್ಲ ಕಡೆ ಆಂದೋಲನವನ್ನೇ ಹಮ್ಮಿಕೊಂಡಿದೆ. ಆ ಆಂದೋಲನವನ್ನು ಸರ್ಕಾರ ಪೊಲೀಸ್ ಶಕ್ತಿಯ ಮೂಲಕ ಎದುರಿಸಲು ತಯಾರಿ ನಡೆಸಿದೆ.
ಈಗ ಕಾಂಗ್ರೆಸ್ ಅತ್ಯಾಚಾರದ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಖಂಡಿಸುವ ಸ್ಥಿತಿಯಲ್ಲಂತೂ ಖಂಡಿತವಾಗಿಯೂ ಇಲ್ಲ. ಸಾಲದ್ದಕ್ಕೆ ಸದ್ಯಕ್ಕೆ ಆ ಪಕ್ಷದ ಪ್ರಮುಖರ ಗಮನವೆಲ್ಲ ಮಂತ್ರಿಮಂಡಲದ ವಿಸ್ತರಣೆ, ರಾಜಕೀಯ ಅಧಿಕಾರ ಹಂಚಿಕೆ, ಕಾರ್ಯಕರ್ತರಿಗೆ ಮರ್ಯಾದೆ ಕೊಡುವ ವಿಚಾರಗಳಿಗೇ ಸೀಮಿತವಾಗಿರುವಂತಿದೆ. ವಿಧಾನಮಂಡಲದ ಅಧಿವೇಶನ ಮುಗಿದ ಅನಂತರ ಕಾಂಗ್ರೆಸ್ಸಿನ ಆಂತರಿಕ ರಾಜಕೀಯದಲ್ಲಿ ಕೆಲವು ಬೆಳವಣಿಗೆಗಳನ್ನು ನಿರೀಕ್ಷಿಸಬಹುದು. ಈಗ ಪಕ್ಷದ ಲೋಕಸಭೆಯಲ್ಲಿನ ನಾಯಕ ಖರ್ಗೆ ಅವರ ಮೂಲಕ ಸೋನಿಯಾ ಗಾಂಧಿ ರಾಹುಲ ಗಾಂಧಿ ಅವರಿಗೆ ರಾಜ್ಯದಲ್ಲಿನ ರಾಜಕೀಯ ಆಗು-ಹೋಗುಗಳ ವಿಚಾರದಲ್ಲಿ ವಿಶ್ವಸಾರ್ಹವಾದ, ಪ್ರಾಮಾಣಿಕ ವರದಿಗಳು ಲಭ್ಯವಾಗಿವೆ.
ರಾಜಕೀಯದಲ್ಲಿ ದೊಡ್ಡ ರೀತಿಯ ಹೊಸ ತಿರುವುಗಳನ್ನು ಕಾಂಗ್ರೆಸ್ - ಬಿಜೆಪಿಯಲ್ಲಿ ನಿರೀಕ್ಷಿಸುವಂತಿಲ್ಲ. ಆದರೆ ಜಾತ್ಯತೀತ ಜನತಾದಳದಲ್ಲಿ ಒಂದಲ್ಲ ಒಂದು ರೀತಿಯ ಕಂಪನ ಕಂಡುಬರುತ್ತಿದೆ.
ಸ್ಥೂಲವಾಗಿ ಹೇಳುವುದಾದರೆ, ಜೆಡಿಎಸ್‌ನ ಅಧಿನಾಯಕ ಮಾಜಿ ಪ್ರಧಾನಿ ದೇವೇಗೌಡರಿಗೆ, ರಾಜ್ಯದ ಹಿತರಕ್ಷಣೆಯ ದೃಷ್ಟಿಯಿಂದ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವ, ಬಿಜೆಪಿಯತ್ತ ವಾಲುವುದು ಒಳ್ಳೆಯದು ಎನಿಸಿರುವಂತಿದೆ. ಲೋಕಸಭೆಯಲ್ಲಿ ಅವರ ಎರಡು ಭಾಷಣಗಳೂ ಈ ಅನಿಸಿಕೆಯನ್ನು ಸಮರ್ಥಿಸುವಂತಿವೆ.
ಕರ್ನಾಟಕದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿರುವ ಕುಮಾರಸ್ವಾಮಿ ಅವರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾಂಗ್ರೆಸ್ಸಿನತ್ತ ಗಮನ ಹರಿಸಿರುವಂತಿದೆ. ಈ ಕುರಿತ ವರದಿಗಳನ್ನೇನೂ ಅವರು ನಿರಾಕರಿಸಿಲ್ಲ. "ಪತ್ರಿಕೆಗಳಲ್ಲಿ ಬಂದಿದೆ" ಎನ್ನುವುದಷ್ಟೇ ಅವರ ಪ್ರತಿಕ್ರಿಯೆ. ಇದೇನಿದು ದೇವೇಗೌಡರು, ಕುಮಾರಸ್ವಾಮಿ ಬೇರೆ ಬೇರೆ ದಾರಿಗಳನ್ನು ಹುಡುಕಬಹುದಾ ಎನ್ನುವ ಉದ್ಗಾರಕ್ಕೆ ಸದ್ಯಕ್ಕಂತೂ ಆಸ್ಪದವಿಲ್ಲ. ಗೌಡರ ಕುಟುಂಬದಲ್ಲಿ ಅಂತಹ ಬೆಳವಣಿಗೆಯನ್ನು ನಿರೀಕ್ಷಿಸುವುದು ಕಷ್ಟ.
ವಿಧಾನಮಂಡಲದ ಅಧಿವೇಶನ ಮುಗಿದ ಕೂಡಲೇ ರಾಜ್ಯದ ರಾಜಕೀಯದ ಗಮನವೆಲ್ಲ, ಶಿಕಾರಿಪುರ, ಬಳ್ಳಾರಿ, ಚಿಕ್ಕೋಡಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗಳತ್ತ ಕೇಂದ್ರೀಕೃತವಾಗುವುದು ಸಹಜ. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿಗೆ ಹಿಂತಿರುಗಿರುವ ಶ್ರೀರಾಮುಲು ಅವರಿಗೆ ಶಿಕಾರಿಪುರ - ಬಳ್ಳಾರಿಯ ಚುನಾವಣೆ ಒಂದು ಪರೀಕ್ಷೆ. ಇಬ್ಬರು ನಾಯಕರೂ ಅವರವರ ಕ್ಷೇತ್ರಗಳಲ್ಲಿ ಪ್ರಬಲರೇ. ಸಮಸ್ಯೆ ಇರುವುದು ಕಾಂಗ್ರೆಸ್ಸಿಗೇ.
ಕಿಡಿಗೇಡಿತನ: ವಿಧಾನಮಂಡಲದ ಅಧಿವೇಶನದ ಕಾಲದಲ್ಲಿ, ಸದಸ್ಯರಿಗೆಲ್ಲ ಮಂತ್ರಿಗಳ ಪರವಾಗಿ ಭರ್ಜರಿ ಭೋಜನದ ವ್ಯವಸ್ಥೆ ಮಾಡುವ ಪದ್ಧತಿ ಜಾರಿಗೆ ಬಂದಿದೆ. ಅಲ್ಲಿ ಕೇವಲ ಶಾಸಕರಷ್ಟೇ ಇರುವುದಿಲ್ಲ. ಮಂತ್ರಿ ಮಾನ್ಯರ ಅಧಿಕೃತ - ಖಾಸಗಿ ಸಿಬ್ಬಂದಿ, ಶಾಸಕರ ಸಂಗಾತಿಗಳು, ವಿಧಾನಮಂಡಲದ ನೌಕರ ಸಿಬ್ಬಂದಿ, ವೀಕ್ಷಕ, ವರದಿಗಾರ ಪತ್ರಕರ್ತ ಸಮುದಾಯದವರೂ ಇರ್ತಾರೆ. ಇದನ್ನು ಶ್ರೀಮಂತರ ಅನ್ನಭಾಗ್ಯ ಎನ್ನಬಹುದೇ?
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

