ಅಂಕಣಗಳು

ಸೋನಿಯಾ ಸೆರಗು ಸೊಂಟಕ್ಕೆ ಗಂಟು: ಒಂದು ರೂಪಕ

ಸಾಮಾನ್ಯವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಹಿರಂಗವಾಗಿ ಕಾಣಿಸಿಕೊಳ್ಳುವುದು ಸೀರೆಯನ್ನು ಧರಿಸಿಕೊಂಡೇ.

Published On :

ಸಾಮಾನ್ಯವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಹಿರಂಗವಾಗಿ ಕಾಣಿಸಿಕೊಳ್ಳುವುದು ಸೀರೆಯನ್ನು ಧರಿಸಿಕೊಂಡೇ. ಅವರ ಪೋಷಾಕಿನಲ್ಲಿ ಅಂತಹ ವಿಶೇಷವೇನೂ ಇಲ್ಲ. ಅದೇ ರೀತಿ, ಅವರು ಸಾಮಾನ್ಯವಾಗಿ ಹೊರಗಡೆ ಒಬ್ಬರೇ ಕಾಣಿಸಿಕೊಳ್ಳುವುದಿಲ್ಲ. ಅವರು ಹೋದ ಕಡೆಯಲ್ಲೆಲ್ಲಾ ಅಂಗರಕ್ಷಕರ ಜತೆಯಲ್ಲೇ ಯಾರಾದರೂ ಆತ್ಮೀಯರು ಇದ್ದೇ ಇರುತ್ತಾರೆ.
 ಅವರ ಸಾರ್ವಜನಿಕ ಹೋರಾಟಗಳ ಇನ್ನೊಂದು ಮುಖ ಎಂದರೆ, ಅವರು ಏಕಾಂಗಿಯಾಗಿ ಎಂದೂ ವಾದ-ವಿವಾದಕ್ಕೆ ಇಳಿಯದೇ ಇರುವುದು. ಅವರ ಜತೆಯಲ್ಲಿ ಆತ್ಮೀಯರೋ, ಪಕ್ಷದವರೋ ಯಾರಾದರೂ ಇದ್ದೇ ಇರುತ್ತಾರೆ. ಅವರ ಪರವಾಗಿ, ಪಕ್ಷದ ಪರವಾಗಿ ಎದುರಾಳಿಗಳ ಟೀಕೆಗಳಿಗೆ ಉತ್ತರ ಕೊಡಲು ಕಾಂಗ್ರೆಸ್ಸಿನಲ್ಲಿ ಪ್ರತಿಭಾವಂತ ವಕೀಲರ ದೊಡ್ಡ ತಂಡವೇ ಇದೆ.
 ಆದರೆ, ಈಗ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಅನಂತರ ಅವರ ಪರಿಸ್ಥಿತಿ ಸ್ವಲ್ಪ ಬದಲಾದಂತೆ ಕಂಡುಬಂದಿದೆ. ಅವರೂ ಬದಲಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ, ಕೋಪ ಬಂದಾಗ, ಎಲ್ಲ ಭಾರತೀಯ ಮಹಿಳೆಯರೂ (ಸೀರೆ ಉಟ್ಟಿದ್ದರೆ) ಮಾಡುವಂತೆ, ಏಕಾಂಗಿಯಾಗಿ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ, ಹೋರಾಟಕ್ಕೆ ಸಜ್ಜು ಎನ್ನುವ ನೋಟೀಸು ನೀಡಿದ್ದಾರೆ.
 ಸೋನಿಯಾ ಗಾಂಧಿ ಅವರನ್ನು ಕಾಡುತ್ತಿರುವುದು ರಾಜಕೀಯವಾಗಿ ಪಕ್ಷಕ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷದ ಸ್ಥಾನ-ಮಾನ ವಿಚಾರ ಹಾಗೂ ಅವರದ್ದೇ ಸ್ವಂತ ವಿಚಾರವಾದ ನ್ಯಾಷನಲ್ ಹೆರಾಲ್ಡ್ ಆಸ್ತಿಯ ಸಂಬಂಧದ ವಿವಾದ. ಈ ಎರಡು ವಿಚಾರಗಳಲ್ಲೂ ವಾಸ್ತವದಲ್ಲಿ ಸೋನಿಯಾ ಏಕಾಂಗಿಯಾಗಬೇಕಾಗಿಲ್ಲ. ಅವರ ಜತೆ, ನಿಲ್ಲುವ ಜನರಿಗೇನೂ ಬಡತನವಿಲ್ಲ.
 ಲೋಕಸಭೆಯಲ್ಲಿ ಪ್ರತಿಪಕ್ಷದ ಅಧಿಕೃತ ಮನ್ನಣೆ ಪಡೆಯಲು ಸದಸ್ಯರ ಸಭೆಯಲ್ಲಿ ಶೇಕಡಾ ಹತ್ತರಷ್ಟಾದರೂ ಒಂದು ಪಕ್ಷಕ್ಕೆ ಇರಬೇಕು. ಅತಿ ದೊಡ್ಡ ವಿರೋಧ ಪಕ್ಷ ಎನ್ನುವ ಪದದ ಬಳಕೆ ಜಾರಿಗೆ ಬಂದಿದ್ದು ಒಂದಕ್ಕಿಂತ ಹೆಚ್ಚು ಪಕ್ಷಗಳಿಗೆ ಶೇಕಡಾ 10 ಕ್ಕಿಂತ ಹೆಚ್ಚು ಸದಸ್ಯರಿರಬೇಕು ಎನ್ನುವ ಅಂಶ ಎದ್ದು ಕಂಡಾಗ. ಆಗ ಅಂತಹ ಪಕ್ಷಗಳಲ್ಲಿ ಅತಿ ದೊಡ್ಡ ಪಕ್ಷವನ್ನೇ ಆರಿಸಬೇಕು. ಆ ಪರಿಸ್ಥಿತಿ ಲೋಕಸಭೆಯಲ್ಲಿ ಇಲ್ಲ. ಲೋಕಸಭೆಯ ಮೊದಲ ಸ್ಪೀಕರ್ ಮಾವಲಂಕರ್ ಅವರ ವ್ಯಾಖ್ಯಾನವನ್ನು ಈಗ ಬದಲಾಯಿಸಬೇಕೆಂದು ಕಾಂಗ್ರೆಸ್ ಒತ್ತಾಯ. ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಅವರ ಪಕ್ಷಕ್ಕೆ ಬೆಂಬಲ ನೀಡುವ ಇತರರ ಸಲಹೆಗಳನ್ನು ಪಡೆದಿದ್ದಾರೆ.
 ಈ ಪ್ರಶ್ನೆಯನ್ನು ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ, ವೈಯಕ್ತಿಕ ಪ್ರತಿಷ್ಠೆಯನ್ನಾಗಿ ಪರಿವರ್ತಿಸಿಕೊಂಡು, ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಭೇಟಿಯಾಗಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನೂ ಭೇಟಿಯಾಗಿದ್ದಾರೆ. ಅಗತ್ಯ ಕಂಡು ಬಂದರೆ ನ್ಯಾಯಾಲಯಕ್ಕೂ ವಿವಾದವನ್ನು ಕೊಂಡೊಯ್ಯುವ ಮಾತನ್ನು ಅವರ ಪರವಾಗಿ ಇತರರು ಆಡಿದ್ದಾರೆ. ಕಾಂಗ್ರೆಸ್ಸಿಗೆ ಪ್ರತಿಪಕ್ಷದ ಸ್ಥಾನವನ್ನು ಲೋಕಸಭೆಯಲ್ಲಿ ನೀಡದೇ ಇರುವುದು, ಸೋನಿಯಾ ಗಾಂಧಿ ಅವರ ದೃಷ್ಟಿಯಲ್ಲಿ ರಾಜಕೀಯ ದ್ವೇಷ ಸಾಧನೆ. ಕಾಂಗ್ರೆಸ್ ರಾಜ್ಯಗಳಲ್ಲಿ ಈ ಕೆಲಸವನ್ನು ಹಿಂದೆ ಮಾಡಿ ತೋರಿಸಿದೆ. ಕರ್ನಾಟಕದಲ್ಲಿ ವಿಧಾನ ಪರಿಷತ್ತಿನ ಉದಾಹರಣೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಿಂದೆಯೂ ಪ್ರತಿಪಕ್ಷದ ಸ್ಥಾನವನ್ನು ತಾತ್ಕಾಲಿಕವಾಗಿ ಕಳೆದುಕೊಂಡಿತ್ತು.
ದೇವರಾಜ ಅರಸು ಕಾಲದಲ್ಲಿ ಕಾಂಗ್ರೆಸ್ ಹೋಳಾದಾಗ, ಗುಂಡೂರಾಯರು, ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ ಕಾಂಗ್ರೆಸ್ ಸದಸ್ಯರ ಸಂಖ್ಯೆ ಇಪ್ಪತ್ತಕ್ಕಿಂತ ಕಡಿಮೆಯಾದಾಗ, ಅವರು ಆ ಸ್ಥಾನವನ್ನು ಕಳೆದುಕೊಂಡಿದ್ದಷ್ಟೇ ಅಲ್ಲ, ಅವರು ಬಳಸುತ್ತಿದ್ದ ಕಾರನ್ನು ಹಿಂದಕ್ಕೆ ಕಳಿಸಿದರು. ಮುಂದೆ ಗುಂಡೂರಾಯರೇ ಮುಖ್ಯಮಂತ್ರಿಯಾಗಿದ್ದು ಬೇರೆ ಮಾತು. ಲೋಕಸಭೆಯಲ್ಲಿ ಈಗ ಬಿಜೆಪಿಯ ಜತೆ ಇಲ್ಲದ ಪಕ್ಷಗಳ ಕೂಟ ರಚನೆಯಾದರೆ (ತೃಣಮೂಲ ಕಾಂಗ್ರೆಸ್, ಅಣ್ಣಾ ಡಿಎಂಕೆ, ಬಿಜು ಜನತಾ ದಳ) ಅದು ಕಾಂಗ್ರೆಸ್ ಕೂಟಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಬಹುದು. ಕೂಟಗಳಿಗೆ ಮಾನ್ಯತೆ ಕೊಡುವ ವಿಚಾರ ಸದ್ಯಕ್ಕೆ ಪರಿಶೀಲನೆಯಲ್ಲಿ ಇದ್ದಂತಿಲ್ಲ.
ನ್ಯಾಷನಲ್ ಹೆರಾಲ್ಡ್ ಟ್ರಸ್ಟ್: ಸೋನಿಯಾ ಗಾಂಧಿ ವಿರುದ್ಧ ವೈಯಕ್ತಿಕವಾಗಿ ನಿಂತಿರುವ ಇನ್ನೊಂದು ಭಾವನಾತ್ಮಕ ಪ್ರಶ್ನೆ ಎಂದರೆ, ಜವಹರಲಾಲ ನೆಹರೂ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸ್ಥಾಪಿಸಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಸಂಸ್ಥೆಯ ಮಾಲಿಕತ್ವದ ನ್ಯಾಷನಲ್ ಹೆರಾಲ್ಡ್, ಕೋಮೀ ಆಜಾದ್ ಪತ್ರಿಕೆಗಳಿಗೆ ಸಂಬಂಧಿಸಿದ್ದು. ಆ ಸಂಸ್ಥೆಯ ಹೆಸರಿನಲ್ಲಿ ಈಗಲೂ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಆದರೆ ಪತ್ರಿಕೆಗಳು ಪ್ರಕಟವಾಗುತ್ತಿಲ್ಲ. ಆ ಸಂಸ್ಥೆಯ ಪುನರುಜ್ಜೀವನಕ್ಕೆ ಸೋನಿಯಾ ಗಾಂಧಿ- ರಾಹುಲ ಗಾಂಧಿ ಅವರ ಮಿತ್ರವೃಂದ ಸಿದ್ಧವಾಗಿ, ಅಸೋಸಿಯೇಟೆಡ್ ಜರ್ನಲ್ಸ್‌ನ ಷೇರುಗಳನ್ನು ಕೊಂಡು ಸಂಸ್ಥೆಯ ಮೇಲೆ ನಿಯಂತ್ರಣ ಸ್ಥಾಪಿಸಲು ನಿರ್ಧರಿಸಿದ್ದಾರೆ. ಅದಕ್ಕೆ ಬೇಕಾದ ಹಣದಲ್ಲಿ ಸುಮಾರು 90 ಲಕ್ಷ ರುಪಾಯಿಗಳನ್ನು ಕಾಂಗ್ರೆಸ್ ಸಂಸ್ಥೆ ಬಡ್ಡಿ ರಹಿತ ಸಾಲದ ರೂಪದಲ್ಲಿ ಸೋನಿಯಾ ಗಾಂಧಿ, ರಾಹುಲ ಗಾಂಧಿ ಅವರ ಬಳಗಕ್ಕೆ ನೀಡಿತ್ತು. ಇದು ಸರಿಯಲ್ಲ. ಇದರಲ್ಲಿ ಆಸ್ತಿ ಕಬಳಿಕೆಯ ಹುನ್ನಾರವಿದೆ ಎನ್ನುವ ಕೂಗು ದೇಶದ ಅನೇಕ ಕಡೆಗಳಲ್ಲಿ ಎದ್ದಿತ್ತು. ಈಗ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಅವರು ಆದಾಯ ಇಲಾಖೆಗೆ, ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದಾರೆ.
ಆ ದೂರಿನ ವಿಚಾರಣೆಯ ಸಂಬಂಧದಲ್ಲಿ ನ್ಯಾಯಾಲಯ ಸಮನ್ಸ್ ಕಳಿಸಿದೆ. ಆದಾಯ ತೆರಿಗೆ ಇಲಾಖೆ, ಕಾಂಗ್ರೆಸ್ಸಿಗೆ ನೋಟೀಸ್ ಕಳಿಸಿದೆ. ರಾಜಕೀಯ ಪಕ್ಷಗಳು ಸಾಲ ಕೊಡುವ ಲೇವಾದೇವಿ ವ್ಯವಹಾರ ನಡೆದಿರಬಹುದೇ ಎನ್ನುವುದೇ ನೋಟೀಸಿನ ಸಾರಾಂಶ. ಇದನ್ನು ಸೋನಿಯಾ ಗಾಂಧಿ ಅವರು ತಮ್ಮ ವಿರುದ್ಧದ, ಕಾಂಗ್ರೆಸ್ ವಿರುದ್ಧದ, ಸೇಡಿನ ಕ್ರಮ ಎಂದು ಪರಿಗಣಿಸಿ ಅಬ್ಬರಿಸಿದರೆ ಯಾರು ಕೇಳಬೇಕು. ಇಂತಹ ಅನೇಕ ಪ್ರಕರಣಗಳನ್ನು ಭವಿಷ್ಯದಲ್ಲಿ ಸೋನಿಯಾ ಗಾಂಧಿ ಎದುರಿಸಬೇಕಾದೀತು. ಜವರಹಲಾಲ್ ನೆಹರೂ ಅವರ ವಿಲ್‌ನಲ್ಲಿ (ಅದು ಹಿಂದೆ ಪ್ರಕಟವಾಗಿತ್ತು) ಒಂದು ಬುಕ್ ಟ್ರಸ್ಟ್‌ನ ಪ್ರಸ್ತಾಪವಿದೆ. ಬ್ಯಾಂಕ್‌ನಲ್ಲಿರುವ ಹಣದ ಪ್ರಸ್ತಾಪವಿದೆ. ಅದಕ್ಕೆಲ್ಲ ಇಂದಿರಾಗಾಂಧಿ ಅವರೇ ಹಕ್ಕುದಾರರು. ಆದರೆ ಆಗ ಅಸೋಸಿಯೇಟೆಡ್ ಜರ್ನಲ್ಸ್‌ನ ಷೇರುಗಳ ಕುರಿತು ನೆಹರೂ ವಿಲ್‌ನಲ್ಲಿ ಪ್ರಸ್ತಾಪವಾಗಿದ್ದು ಈಗ ನೆನಪಾಗುತ್ತಿಲ್ಲ.
1980 ರ ದಶಕದಲ್ಲಿ ನ್ಯಾಷನಲ್ ಹೆರಾಲ್ಡ್‌ನ ಪುನರುಜ್ಜೀವನದ ಪ್ರಯತ್ನ ನಡೆದಿತ್ತು. ಯಶ್‌ಪಾಲ್ ಕಪೂರ್ ಅದರ ಪುರೋಹಿತರಾಗಿದ್ದರು. ಅದು ಯಶಸ್ವಿಯಾಗಲಿಲ್ಲ. ಇದ್ದಕ್ಕಿದ್ದಂತೆ, ಸೋನಿಯಾ ಗಾಂಧಿಗೆ ನ್ಯಾಷನಲ್ ಹೆರಾಲ್ಡ್ ಯಾಕೆ ನೆನಪಾಯಿತೋ ಗೊತ್ತಿಲ್ಲ. ಈಗ ಸೋನಿಯಾ ಗಾಂಧಿ ಹೋರಾಟಕ್ಕಂತೂ ಸಿದ್ಧವಾಗಿದ್ದಾರೆ. ಅವರ ಜತೆ ಯಾರ್ಯಾರಿರ್ತಾರೋ ಗೊತ್ತಿಲ್ಲ.
ಜೆಡಿಎಸ್ ಅವಾಂತರ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋತ ಅನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಹಾಸನದಿಂದ ಚುನಾವಣೆಯಲ್ಲಿ ಗೆದ್ದಿರುವ ದೇವೇಗೌಡರು ಹೆಚ್ಚು ಮಾತಾಡಿಲ್ಲ. ಅವರಿಗೆ ಈಗ ದೆಹಲಿಯ ವ್ಯವಹಾರಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಕ್ರಿಯ ಆಸಕ್ತಿ ಇಲ್ಲ. ಅಲ್ಲಿನ ರಾಜಕಾರಣದಲ್ಲಿ ಅವರು ಮಾಡುವುದೇನೂ ಇಲ್ಲ. ಆದರೆ ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದಕ್ಕೆ ಅವರು ಬದ್ಧರಾಗಿದ್ದಾರೆ. ಅದಕ್ಕಾಗಿ ತಮ್ಮ ಶ್ರಮ, ಸಾಮರ್ಥ್ಯ, ಸಮಯವನ್ನು ಮೀಸಲಾಗಿಡಲೂ ಸಿದ್ಧರಾಗಿದ್ದಾರೆ. ಅದು ತಕ್ಷಣಕ್ಕೆ ಆಗುವ ಕೆಲಸವಲ್ಲ. ಇಲ್ಲಿ ಪ್ರತಿನಿತ್ಯದ ರಾಜಕೀಯದಲ್ಲಿ ತೊಳಲಾಡಬೇಕಾದ ನಾಯಕರು ಮೌನವಾಗಿರುವುದು ಹೇಗೆ? ಅದರಲ್ಲೂ ರಾಜಕೀಯದಲ್ಲಿ ಜನರ ಕಣ್ಣಿಗೆ ಆಗಾಗ ಬೀಳದೇ ಹೋದರೆ ಜನ ಅಂತಹವರನ್ನು ಮರೆತೇ ಬಿಡುತ್ತಾರೆ. ಅದರ ಅರಿವಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮದೇ ಆದ ರೀತಿಯಲ್ಲಿ ಪಕ್ಷವನ್ನು ಜನರ ಮುಂದಿಡಲು ಶ್ರಮಿಸುತ್ತಿರುವಂತಿದೆ.
ಕೋಟ್ಯಧಿಪತಿಗೇ ಮಣೆ: ರಾಜ್ಯಸಭೆ ಚುನಾವಣೆ, ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಒಳ್ಳೆಯ ಅವಕಾಶ ಸಿಕ್ಕಿತ್ತು. ಕಾಂಗ್ರೆಸ್ಸಿನ ಸದಸ್ಯರಾಗಿದ್ದ ಒಬ್ಬ ಕೋಟ್ಯಧಿಪತಿಗೆ ಜೆಡಿಎಸ್ ಟಿಕೆಟ್ ಕೊಟ್ಟು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಗೆಲ್ಲಿಸಿದರು. ಇನ್ನೊಬ್ಬ ಕೋಟ್ಯಧಿಪತಿಗೆ ನೇರವಾಗಿ ಜೆಡಿಎಸ್ ಹೆಸರಿನಲ್ಲಿ ವಿಧಾನ ಪರಿಷತ್ ಸ್ಥಾನ ಸಿಗುವಂತೆ ಮಾಡಿದರು. ಇದಕ್ಕೆಲ್ಲ ಗೌಡರ ಅನುಮತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಸಂದರ್ಭದಲ್ಲೇ ಕುಮಾರಸ್ವಾಮಿ ಪಕ್ಷದ ಶಾಸಕರು ಓಟು ಕೊಡಲು ಕಾಸು ಕೇಳ್ತಾರೆ ಎಂದಿದ್ದು. (ಅದರ ಸಿಡಿಗಳಿವೆ. ವಿಧಾನಸಭೆಯ ವೇದಿಕೆಗೂ ಆ ಸಿಡಿ ಏರಿತ್ತು) ಅದರಲ್ಲಿ ಒಂದು ಕೋಟಿ ಕೇಳಿದ ಪ್ರಸ್ತಾಪವಿದೆಯಂತೆ.
ಈ ವಿಚಾರದಲ್ಲಿ ಕುಮಾರ ಸ್ವಾಮಿ ಅವರು ನಿಜ ಹೇಳಿದ್ದಾರಂತೆ. ಅದಕ್ಕಾಗಿ ಅವರು ಹುತಾತ್ಮರಾಗಲೂ ಸಿದ್ಧರಾಗಿದ್ದಾರಂತೆ. ವಿಧಾನ ಮಂಡಲದಲ್ಲಿ ಇತಂಹ ವಿಷಯ ಚರ್ಚೆಯಾಗಿದ್ದೇ ಒಂದು ವಿಪರ್ಯಾಸ. ಸರ್ಕಾರ ಸದಸ್ಯರೆಲ್ಲರಿಗೂ ಎಲ್ಲ ವಿಚಾರಗಳ ಅಂತರಂಗ-ಬಹಿರಂಗ ವರ್ತಮಾನ ಗೊತ್ತಿದ್ದರೂ ಆ ವಿಷಯದಲ್ಲಿ 'ಚರ್ಚೆ' ಎಂದರೇನರ್ಥ? ಕುಮಾರಸ್ವಾಮಿ ಹುತಾತ್ಮರಾಗುವುದಿಲ್ಲ. ಅದರಲ್ಲಿ ಅನುಮಾನ ಬೇಡ. ಜೆಡಿಎಸ್‌ಗೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಬಹುಮತ ನಷ್ಟವಾಗಿರುವುದು ಒಂದು ರೀತಿಯಲ್ಲಿ ಅವರಿಗೆ ಧಂರೋಟ್ ಸಿಕ್ಕಿದಂತೆ ಸಿಕ್ಕಿತು. ಸಭಾಪತಿ ಶಂಕರ ಮೂರ್ತಿ ಅವರನ್ನು ಇಳಿಸುವ ಅವಕಾಶ ಇತ್ತು. (ಕಾಂಗ್ರೆಸ್ ಸಂಬಂಧ ಬೆಳೆಸಿದ್ದರೆ). ಆದರೆ ಜೆಡಿಎಸ್ ನಾಯಕರು ಸಂಬಂಧ ಕುದುರಿಸಿದ್ದು ಬಿಜೆಪಿ ಜತೆ. ಆ ಒಪ್ಪಂದದಂತೆ ವಿಧಾನ ಪರಿಷತ್ತಿನ ಸಭಾಪತಿಯಾಗಿ ಶಂಕರಮೂರ್ತಿ ಮುಂದುವರಿಯುತ್ತಾರೆ. ಜೆಡಿಎಸ್‌ನ ಉಪಾಧ್ಯಕ್ಷ ವಿಮಲಾ ಗೌಡ ಅವರು ಪದಚ್ಯುತರಾಗಿ ಅವರ ಪಕ್ಷದವರೇ ಆದ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುತ್ತಾರೆ. ಬಹಿರಂಗವಾಗಿ, ವಿಮಲಾ ಗೌಡ, ಇದು ಒಬ್ಬ ಒಕ್ಕಲಿಗ ಮಹಿಳೆಗೆ ಆದ ಅನ್ಯಾಯ ಎನ್ನುತ್ತಾರೆ. ಪಕ್ಷ ಅವರಿಗಾದರೂ ಹುತಾತ್ಮರ ಪಟ್ಟ ಕಟ್ಟಬಾರದೇ?
ಕಿಡಿಗೇಡಿತನ: ಬಡತನದ ವಿವರಣೆ ಕುರಿತು ಈಗ ರಂಗರಾಜನ್ ಸಮಿತಿ ಇನ್ನೊಂದು ವ್ಯಾಖ್ಯಾನವನ್ನು ನೀಡಿದೆ. ಈ ವ್ಯಾಖ್ಯಾನ ಸಾಕು. ಬಡವರು, ಬಡವರಾಗಿಯೇ ಉಳಿದಿರುವುದಕ್ಕೆ ಕಾರಣವೇನು? ಅದೇ ಗೊತ್ತಿಲ್ಲ.

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.