ಅಂಕಣಗಳು

ರಾಹುಲ್ ಗಾಂಧಿ ಅವರೇ, ಸತ್ಯದ ನೆತ್ತಿ ಮೇಲೆ ಹೊಡೆದಂತೆ ಹಸಿಹಸಿ ಸುಳ್ಳು ಹೇಳಲು ನಿಮಗೆ ಮನಸ್ಸಾದರೂ ಹೇಗೆ ಬಂತು?

ಈ ವಿಷಯ ಮರೆತು ಹೋಗಿರಲಿಲ್ಲ. ಅದು ಮೂವತ್ತು ವರ್ಷಗಳ ಹಿಂದಿನ ಘಟನೆ...

ರಾಹುಲ್ ಗಾಂಧಿ ಅವರೇ, ಸತ್ಯದ ನೆತ್ತಿ ಮೇಲೆ ಹೊಡೆದಂತೆ ಹಸಿಹಸಿ ಸುಳ್ಳು ಹೇಳಲು ನಿಮಗೆ ಮನಸ್ಸಾದರೂ ಹೇಗೆ ಬಂತು?
Published On :

ಈ ವಿಷಯ ಮರೆತು ಹೋಗಿರಲಿಲ್ಲ. ಅದು ಮೂವತ್ತು ವರ್ಷಗಳ ಹಿಂದಿನ ಘಟನೆಯಾಗಿದ್ದಿರಬಹುದು. ಆದರೆ ಮೊನ್ನೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು 'ಟೈಮ್ಸ್‌ನೌ' ಟಿವಿ ಚಾನೆಲ್ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ನೀಡಿದ ತಮ್ಮ ಜೀವನದ ಪ್ರಪ್ರಥಮ ಸಂದರ್ಶನದಲ್ಲಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸುವಾಗ ಈ ವಿಷಯವನ್ನು ಪ್ರಸ್ತಾಪಿಸಿದ್ದರಿಂದ ಇದನ್ನು ಇಲ್ಲಿ ಚರ್ಚಿಸಬೇಕಿದೆ. ಅಷ್ಟಕ್ಕೂ ಈ ವಿಷಯವೇನೆಂದರೆ, 1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾಯಿತಲ್ಲ, ಆನಂತರ ಸಂಭವಿಸಿದ ಸಿಖ್ ನರಮೇಧ. ಈ ವಿಷಯವನ್ನು ಚರ್ಚಿಸುವುದಕ್ಕಿಂತ ಮೊದಲು ಅರ್ನಾಬ್ ಗೋಸ್ವಾಮಿ ಕೇಳಿದ ಪ್ರಶ್ನೆ ಹಾಗೂ ರಾಹುಲ್‌ಗಾಂಧಿ ನೀಡಿದ ಉತ್ತರಗಳನ್ನು ಮೆಲುಕು ಹಾಕೋಣ.
ಅರ್ನಾಬ್: 1984ರ ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ಸಿಗರು ಭಾಗಿಯಾಗಿದ್ದರು ಎಂಬುದನ್ನು ಒಪ್ಪುತ್ತೀರಾ? ಗುಜರಾತ್ ನರಮೇಧಕ್ಕೆ ಮೋದಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುವ ನೀವು, ಸಿಖ್ ಹತ್ಯಾಕಾಂಡಕ್ಕೆ ಕ್ಷಮೆಯಾಚಿಸುತ್ತೀರಾ?
ರಾಹುಲ್: 1977ರಲ್ಲಿ ನನ್ನ ಅಜ್ಜಿ ಇಂದಿರಾಗಾಂಧಿ ಚುನಾವಣೆಯಲ್ಲಿ ಸೋತು ಹೋದರು. ಆಗ ಅವರ ಜತೆಯಲ್ಲಿ ಬೆಂಬಲಕ್ಕೆ ನಿಂತವರು ಸಿಖ್ಖರು. ಎಲ್ಲರೂ ನನ್ನ ಅಜ್ಜಿಯನ್ನು ತೊರೆದರು. ಆದರೆ ಜತೆಯಲ್ಲಿ ನಿಂತವರು ಮಾತ್ರ ಸಿಖ್ಖರು. ನನ್ನ ದೃಷ್ಟಿಯಲ್ಲಿ, ಈ ದೇಶದಲ್ಲಿ ಪ್ರಾಯಶಃ ಕಷ್ಟಪಟ್ಟು ದುಡಿಯುವ ಜನರೆಂದರೆ ಸಿಖ್ಖರು. ನನಗೆ ಅವರ ಬಗ್ಗೆ ಅಭಿಮಾನವಿದೆ. ಈಗಿನ ನಮ್ಮ ಪ್ರಧಾನಿ ಇದ್ದಾರಲ್ಲ, ಅವರು ಸಿಖ್. ನಮ್ಮ ಪ್ರತಿಪಕ್ಷದವರು ಹೊಂದಿರುವುದಕ್ಕಿಂತ ಭಿನ್ನ ದೃಷ್ಟಿಕೋನವನ್ನು ನಾನು ಹೊಂದಿದ್ದೇನೆ. ನನ್ನ ಅಜ್ಜಿಯನ್ನು ಸಾಯಿಸಿದ್ದು ಕೇವಲ ಇಬ್ಬರು ವ್ಯಕ್ತಿಗಳು. ನಿರ್ಭೀಡೆಯಿಂದ ಹೇಳುವುದಾದರೆ, ಆಗಿದ್ದ ಕೋಪ ಈಗ ನನ್ನಲ್ಲಿ ಇಲ್ಲ. ಇಬ್ಬರು ಮಾಡಿದ ಕೃತ್ಯವನ್ನು ಇಡೀ ಸಮುದಾಯದ ಮೇಲೆ ಹೊರಿಸುವುದು ಸರಿಯಲ್ಲ. ಆ ಕೆಲಸವನ್ನು ನಾನು ಮಾಡಲಾರೆ. ಅದು ನಿಜಕ್ಕೂ ಅಪರಾಧ. ದೆಹಲಿಯಲ್ಲಿ ಸಿಖ್ ಹತ್ಯಾಕಾಂಡ ನಡೆಯಿತೇ? ಹೌದು. ಅವರು ಸಂಪೂರ್ಣ ದೋಷಿಗಳಾ? ಹೌದು.
ಅರ್ನಾಬ್: ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ಸಿಗರು ಪಾಲ್ಗೊಂಡಿದ್ದರಾ?
ರಾಹುಲ್: ಬಹುಶಃ ಕೆಲವು ಕಾಂಗ್ರೆಸ್ಸಿಗರು ಪಾಲ್ಗೊಂಡಿದ್ದಿರಬಹುದು.
ಅರ್ನಾಬ್: ಸಿಖ್ಖರಿಗೆ ನ್ಯಾಯ ದೊರಕಿದೆಯಾ?
ರಾಹುಲ್: ನಮ್ಮಲ್ಲಿ ನ್ಯಾಯ ಪ್ರಕ್ರಿಯೆ ಇದೆ. ಆ ಮೂಲಕವೇ ಅವರು ನ್ಯಾಯ ಯಾಚಿಸಿದ್ದಾರೆ... ಕೆಲವು ಕಾಂಗ್ರೆಸ್ಸಿಗರಿಗೆ ಇದರಿಂದ ಶಿಕ್ಷೆಯೂ ಆಗಿದೆ.
ಅರ್ನಾಬ್: ಹಾಗಿದ್ದರೆ ನೀವ್ಯಾಕೆ ಕ್ಷಮೆ ಯಾಚಿಸಬಾರದು? ನೀವು ಹೇಳುವ ಕಾಂಗ್ರೆಸ್ಸಿಗರು ಇನ್ನೂ ಕೋರ್ಟ್‌ನಲ್ಲಿ ಹೋರಾಡುತ್ತಿದ್ದಾರೆ. 2009ರಲ್ಲಿ ಜಗದೀಶ ಟೈಟ್ಲರ್‌ಗೆ ನಿಮ್ಮ ಪಕ್ಷ ಟಿಕೆಟ್ ನೀಡಲು ನಿರ್ಧರಿಸಿತ್ತು. ಆದರೆ ಮಾಧ್ಯಮ ವರದಿಗಳಿಂದಾಗಿ ಟಿಕೆಟ್ ಕೈ ತಪ್ಪಿತು. ನೀವು ಹೇಳುವಂತೆ ಕೆಲವು ಕಾಂಗ್ರೆಸ್ಸಿಗರು ಸಿಖ್ ಹತ್ಯಾಕಾಂಡದಲ್ಲಿ ಪಾಲ್ಗೊಂಡಿದ್ದಾರೆ ಎಂದಾದರೆ ಕ್ಷಮೆಯಾಚಿಸಬಹುದಲ್ಲ?
ರಾಹುಲ್: 1984ರಲ್ಲಿ ಜನ ಸತ್ತರು ಹಾಗೂ ಅಮಾಯಕ ಜನರು ಸಾಯುವುದಿದೆಯಲ್ಲ ಅದು ನಿಜಕ್ಕೂ ಭಯಂಕರವಾದುದು. ಅಂಥ ಘಟನೆ ಮರುಕಳಿಸಬಾರದು. ಗುಜರಾತ್ ಹಾಗೂ ಸಿಖ್ ನರಮೇಧಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಗುಜರಾತ್ ನರಮೇಧದಲ್ಲಿ ಅಲ್ಲಿನ ಮೋದಿ ಸರ್ಕಾರವೇ ಪಾಲ್ಗೊಂಡಿತ್ತು.
ಅರ್ನಾಬ್: ಎಲ್ಲ ಕೋರ್ಟುಗಳೂ ಮೋದಿಯವರಿಗೆ ಕ್ಲೀನ್‌ಚಿಟ್ ನೀಡಿವೆಯಲ್ಲ?
ರಾಹುಲ್: ಸಿಖ್ ಹಾಗೂ ಗುಜರಾತ್ ನರಮೇಧಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಸಿಖ್‌ರ ನರಮೇಧವನ್ನು ತಡೆಯಲು ಸರ್ಕಾರ ಪ್ರಯತ್ನಿಸಿತ್ತು. ನನಗೆ ನೆನಪಿದೆ, ನಾನು ಬಾಲಕನಾಗಿದ್ದೆ. ನನಗೆ ನೆನಪಿದೆ, ಸಿಖ್ ನರಮೇಧ ತಡೆಯುವ ಎಲ್ಲ ಪ್ರಯತ್ನವನ್ನೂ ಸರ್ಕಾರ ಮಾಡಿತು. ಗುಜರಾತಿನಲ್ಲಿ ಇದಕ್ಕೆ ವಿರುದ್ಧವಾದುದು ನಡೆಯಿತು. ಗುಜರಾತಿನಲ್ಲಿ ಅಲ್ಲಿನ ಸರ್ಕಾರ ಗಲಭೆಗೆ ಕುಮ್ಮಕ್ಕು ನೀಡಿತು. ಹೀಗಾಗಿ ಆ ಎರಡು ಗಲಭೆಗಳಿಗೆ ಭಾರೀ ವ್ಯತ್ಯಾಸವಿದೆ. ಅಮಾಯಕ ಜನರನ್ನು ದಿಲ್ಲಿಯಲ್ಲಿ ಹತ್ಯೆ ಮಾಡಲಾಯಿತೆಂಬುದು ಶುದ್ಧ ಸುಳ್ಳು... ಗುಜರಾತಿನಲ್ಲಿ ಅಮಾಯಕ ಜನರನ್ನು ಸಾಯಿಸಲಾಯಿತು... ಜನರೇ ಇದನ್ನು ಕಣ್ಣಾರೆ ನೋಡಿದ್ದಾರೆ. ನಾನು ನೋಡಿಲ್ಲ. ನಿಮ್ಮ ವರದಿಗಾರರು ನೋಡಿದ್ದಾರೆ. ಅವರೇ ನನಗೆ ಹೇಳಿದರು.
ಅರ್ನಾಬ್: ನೀವು ಏನು ಹೇಳುತ್ತಿದ್ದೀರಾ? ನಿಮ್ಮ ಮಾತನ್ನು ವಿವರಿಸಬಲ್ಲಿರಾ?
ರಾಹುಲ್: 1984ರ ಸಿಖ್ ನರಮೇಧಕ್ಕೂ, 2002ರ ಗುಜರಾತ್ ಹತ್ಯಾಕಾಂಡಕ್ಕೂ ವ್ಯತ್ಯಾಸವಿದೆ. 1984ರಲ್ಲಿ ಸಿಖ್ ನರಮೇಧ ನಿಲ್ಲಿಸಲು ಸರ್ಕಾರ ಪ್ರಯತ್ನಿಸಿತು. ಆದರೆ ಗುಜರಾತ್ ಸರ್ಕಾರ ಗಲಭೆ ಮುಂದುವರಿಯಲು ಅವಕಾಶ ನೀಡಿತು.
ಅರ್ನಾಬ್: 84ರ ಸಿಖ್ ನರಮೇಧಕ್ಕೆ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಭಾವಿಸಿದ್ದೀರಾ? ನಿಮ್ಮ ಪ್ರಧಾನಿ ಕ್ಷಮೆಯಾಚಿಸಿದ್ದಾರೆ.
ರಾಹುಲ್: ಮೊಟ್ಟ ಮೊದಲಿಗೆ ಹೇಳುವುದಾದರೆ, ನಾನು ಸಿಖ್ ಗಲಭೆಯಲ್ಲಿ ಭಾಗವಹಿಸಿರಲಿಲ್ಲ. ನಾನು ಅದರಲ್ಲಿ ಪಾಲ್ಗೊಂಡಿರಲಿಲ್ಲ... ನನ್ನ ದೃಷ್ಟಿಯಲ್ಲಿ ಆ ಗಲಭೆ...ಎಲ್ಲ ಗಲಭೆಗಳೂ ಭಯಂಕರವೇ. ಆಗ ನಾನು ಕಾಂಗ್ರೆಸ್ಸಿನಲ್ಲಿ ಸಕ್ರಿಯನಾಗಿರಲಿಲ್ಲ.
ಹಾಂ...ಕೇಳಿದಿರಲ್ಲಾ...!?
1984ರ ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಇದು ರಾಹುಲ್‌ಗಾಂಧಿ ಸಂದರ್ಶನದಲ್ಲಿ ಹೇಳಿದ್ದು.
----
31 ಅಕ್ಟೋಬರ್, 1984.
ತಮ್ಮ ಇಬ್ಬರು ಅಂಗರಕ್ಷಕರ ಗುಂಡಿಗೆ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾಗಿದ್ದರು. ಈ ದೇಶ ಕಂಡು ಕೇಳರಿಯದ ದುರ್ಘಟನೆ ಅಂದು ನಡೆದು ಹೋಯಿತು.
ಆದರೆ ಅದೇ ದಿನ ಮಧ್ಯರಾತ್ರಿ ಇಂದಿರಾ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲೇಬೇಕೆಂದು ಇಂದಿರಾ ಬಂಟ ಕಾಂಗ್ರೆಸ್ ನಾಯಕರಾದ ಎಚ್.ಕೆ.ಎಲ್. ಭಗತ್, ಜಗದೀಶ ಟೈಟ್ಲರ್, ಸಜ್ಜನಕುಮಾರ್, ಧರಂದಾಸ್ ಶಾಸ್ತ್ರಿ ಸಿಖ್ಖರ ಮಾರಣ ಹೋಮಕ್ಕೆ ಸ್ಕೆಚ್ ಹಾಕಿದರು. ಮರುದಿನ ಅಂದರೆ ನವೆಂಬರ್ ಒಂದರಂದು ಈ ದೇಶದ ರಾಜಧಾನಿ ಕ್ರೂರಾತಿಕ್ರೂರ, ಬರ್ಬರ, ಪೈಶಾಚಿಕ ನರಮೇಧಕ್ಕೆ ಮೂಕಸಾಕ್ಷಿಯಾಗಬಹುದು ಎಂದು ಯಾರೂ ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ.
ಬೆಳಕು ಹರಿಯುತ್ತಿದ್ದಂತೆ ದಿಲ್ಲಿಯಲ್ಲಿ ಕುದಿ ಜ್ವಾಲಾಮುಖಿ ಸಿಡಿಯಲು ಸಿದ್ಧವಾಗಿತ್ತು. 'ಇಂದಿರಾ ಹತ್ಯೆಗೆ ಸಿಖ್ಖರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರಂತೆ, ಸಿಖ್ಖರ ಮನೆಯಲ್ಲಿ ಹಬ್ಬದ ವಾತಾವರಣವಂತೆ, ವಿಜಯೋತ್ಸಾಹಕ್ಕೆ ಸಿಖ್ಖರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ, ದಿಲ್ಲಿ ಹಾಗೂ ಪಂಜಾಬಿನ ಗುರುದ್ವಾರಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆಯಂತೆ...' ಎಂಬ ಗಾಳಿ ಸುದ್ದಿ ದಿಲ್ಲಿಯ ಗಲ್ಲಿಗಲ್ಲಿಗಳಲ್ಲಿ ಹರಡಲಾರಂಭಿಸಿತು. ಕ್ಷಣಾರ್ಧದಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಆವರಿಸಿತು. 'ಖೂನ್ ಕಾ ಬದಲಾ ಖೂನ್‌' (ರಕ್ತಕ್ಕೆ ರಕ್ತದಿಂದಲೇ ಉತ್ತರ) ನೀಡಬೇಕೆಂದು ಕಾಂಗ್ರೆಸ್ಸಿಗರು ಮಧ್ಯರಾತ್ರಿಯ ಸಿದ್ಧತೆಯಿಂದ ತಯಾರಾಗಿ ನಿಂತಿದ್ದರು. ಕೈಯಲ್ಲಿ ಕಬ್ಬಿಣದ ಸಲಾಕೆ, ಲಾಠಿ, ಸೈಕಲ್ ಚೈನು, ಮಚ್ಚು, ಲಾಂಗು, ಪೆಟ್ರೋಲ್ ಬಾಂಬು, ಕೆರೋಸಿನ್ ಕ್ಯಾನುಗಳನ್ನು ಹಿಡಿದು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಗೂಂಡಾಗಳು ಸಿಖ್ಖರೇ ಹೆಚ್ಚಾಗಿರುವ ವಠಾರ, ಬಡಾವಣೆಗಳ ಮೇಲೆ ಏಕಾಏಕಿ ದಾಳಿ ಮಾಡಿದರು. ಸಿಖ್ಖರು ಹೆಚ್ಚಾಗಿರುವ ದಿಲ್ಲಿಯ ತ್ರಿಲೋಕಪುರಿಯ ಕನಿಷ್ಠ ನೂರು ಮನೆಗಳ ಮೇಲೆ ದಾಳಿ ಮಾಡಿದ ಕಾಂಗ್ರೆಸ್ ಗೂಂಡಾಗಳು ಹೆಂಗಸರು, ಮಕ್ಕಳನ್ನು ಹೊರಗೆಳೆದು ಅವರನ್ನು ಅಮಾನುಷವಾಗಿ ಸಾಯಿಸಿದರು. ಮನೆಗಳಿಗೆ ಪೆಟ್ರೋಲ್ ಬಾಂಬ್ ಎಸೆದು ಸುಟ್ಟು ಹಾಕಿದರು. ಮಕ್ಕಳ ಮೈ ಮೇಲೆ ಕೆರೋಸಿನ್ ಸುರುವಿ ಬೆಂಕಿ ಹಚ್ಚಿದರು.
 ಕೆಲವೇ ನಿಮಿಷಗಳಲ್ಲಿ ಈ ದಂಗೆ ಜಹಾಂಗೀರಪುರಿ, ಸುಲ್ತಾನಪುರಿ, ಕಲ್ಯಾಣಪುರಿ, ಇಂದ್ರಪುರಿ, ತುಘಲಕಾಬಾದ್ ಮತ್ತಿತರ ಪ್ರದೇಶಗಳಿಗೂ ಹಬ್ಬಿತು. ಎಚ್.ಕೆ.ಎಲ್. ಭಗತ್ ಪ್ರತಿನಿಧಿಸುವ ಪೂರ್ವದಿಲ್ಲಿ ಲೋಕಸಭಾ ಕ್ಷೇತ್ರದ ಪ್ರದೇಶಗಳಲ್ಲಿ ಅತಿಹೆಚ್ಚು ಸಿಖ್ಖರನ್ನು ಕೊಲ್ಲಲಾಯಿತು. ಈ ಪ್ರದೇಶದಲ್ಲೊಂದು ಕನಿಷ್ಠ 1500 ಸಿಖ್ಖರು ಸತ್ತರು.
ಕಾಂಗ್ರೆಸ್ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ಧರಂದಾಸ ಶಾಸ್ತ್ರಿ ಪೊಲೀಸ್ ಜೀಪಿನಲ್ಲಿ ಕುಳಿತು ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರಿಗೆ ಮೈಕ್ ಮೂಲಕ ದಾಳಿಗೆ ಮಾರ್ಗದರ್ಶನ, ಸೂಚನೆ ನೀಡುತ್ತಿದ್ದ. ಈ ಶಾಸ್ತ್ರಿ ಮೈಕ್‌ನಲ್ಲಿ 'ಸಿಖ್ಖರನ್ನು ಕಂಡಲ್ಲಿ ಬಡಿದು ಸಾಯಿಸಿ. ಮನೆ ಹೊಕ್ಕು ಧ್ವಂಸ ಮಾಡಿ. ಅವರ ಕುಲವನ್ನೇ ಸರ್ವನಾಶ ಮಾಡಿ. ನಿಮ್ಮನ್ನು ಯಾರೂ ಮುಟ್ಟದಂತೆ ನಾನು ನೋಡಿಕೊಳ್ಳುತ್ತೇನೆ. ಜೀವಸಹಿತ ಯಾರಿಗೂ ಬಚಾವ್ ಆಗಲು ಬಿಡಬೇಡಿ' ಎಂದು ಅಬ್ಬರಿಸುತ್ತಿದ್ದ. ಭಗತ್ ಕೂಡ 'ಒಬ್ಬನೇ ಒಬ್ಬ ಸಿಖ್ ಪಾರಾಗದಂತೆ ನೋಡಿಕೊಳ್ಳಿ. ಪೊಲೀಸರು ನಿಮ್ಮನ್ನು ಹಿಡಿಯುವುದಿಲ್ಲ. ನಿಮ್ಮ ರಕ್ಷಣೆಗೆ ನಾನಿದ್ದೇನೆ. ಕೈಗೆ ಸಿಕ್ಕದ್ದನ್ನೆಲ್ಲ ಲೂಟಿ ಮಾಡಿ. ನೀವು ಮಾಡುವ ಪ್ರತಿ ಕೊಲೆಗೂ ಬಹುಮಾನ ಕೊಡುತ್ತೇನೆ' ಎಂದು ವೀರಾವೇಶದಿಂದ ಕಿರುಚುತ್ತಿದ್ದ. (ಈ ಸಂಗತಿಯನ್ನು ಪ್ರತ್ಯಕ್ಷದರ್ಶಿ ಸುರಜಿತ್ ಕೌರ್ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಯೋಗದ ಮುಂದೆ ಹೇಳಿದ್ದಾಳೆ).
ಮಿಶ್ರಾ ಆಯೋಗದ ಮುಂದೆ ಆಕೆ ಹೇಳಿದ ಒಂದು ಪ್ರಸಂಗ-'ನನ್ನ ಕಣ್ಣ ಮುಂದೆಯೇ ಕುಟುಂಬದ ನಾಲ್ವರು ಗಂಡಸರು ಹಾಗೂ ಐದು ಮಕ್ಕಳನ್ನು ಬರ್ಬರವಾಗಿ ಸಾಯಿಸಿದರು. ಮೂವರು ಹೆಂಗಸರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರನ್ನು ಸಲಾಕೆಗಳಿಂದ ಬಡಿದು ಕೊಂದರು. ನಾನು ಉಸಿರು ಬಿಗಿ ಹಿಡಿದು ಅಡಗಿ ಕುಳಿತಿದ್ದೆ. ಬಂದವರು ಕೆಲಸ ಮುಗಿಸಿದ್ದೇವೆಂಬ ಕ್ರೂರ ಆವೇಶದಲ್ಲಿ ಮರಳುತ್ತಿದ್ದಾಗ ನಮ್ಮ ಹಿರಿಯ ಅಜ್ಜ 'ಮಾಮಾಜಿ' ನಡುರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ. ಆತ ಇನ್ನೂ ಉಸಿರಾಡುತ್ತಿದ್ದ. ಆತ ಸತ್ತಿರಬಹುದೆಂದು ಭಾವಿಸಿ ಗುಂಪು ಅಲ್ಲಿಂದ ತೆರಳಿತ್ತು. ಕೆಲವು ಮಹಿಳೆಯರು ಆತನನ್ನು ಎತ್ತಿಕೊಂಡು ಮನೆಗೆ ಕರೆತಂದರು. ಆ ಗುಂಪು ವಾಪಸ್ ಬಂತು. ಅಷ್ಟು ಗಾಯಗೊಂಡಿದ್ದರೂ ಮಾಮಾಜಿ ಎದ್ದು ನಿಂತು 'ಮನೆಯೊಳಗೆ ಕಾಲಿಟ್ಟರೆ ಹುಷಾರ್, ನನ್ನ ಹೊಟ್ಟೆಯಲ್ಲಿ ಜೀವ ಇರೋ ತನಕ ಈ ಮಹಿಳೆಯರನ್ನು ಮುಟ್ಟಲು ಬಿಡೋಲ್ಲ' ಎಂದು ಗರ್ಜಿಸಿದರು. ಆತನನ್ನು ಸುತ್ತುವರಿದ ಪುಂಡರು ಸಿಕ್ಕಾಪಟ್ಟೆ ಥಳಿಸಿದರು. ಯಾವನೋ ಒಬ್ಬ ಕೂಗುತ್ತಾ ಬಂದು ಮಾಮಾಜಿ ತಲೆಗೆ ಲಾಠಿಯಿಂದ ಹೊಡೆದ. ಅವರು ಅಲ್ಲಿಯೇ ಸತ್ತರು.'
ಜಗದೀಶ ಟೈಟ್ಲರ್ ಗುರುದ್ವಾರಗಳ ಮೇಲೆ ಕಣ್ಣಿಟ್ಟಿದ್ದ. ಪುಲ್ಬಾಂಗಶ್ ಪ್ರದೇಶದಲ್ಲಿರುವ ಗುರುದ್ವಾರದೊಳಗೆ ದಾಳಿಯಿಟ್ಟ ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಸಿಕ್ಕಿದ್ದಲ್ಲೆವನ್ನೂ ಬಿಸಾಡಿ ಧ್ವಂಸ ಮಾಡಿದರು. ಇಬ್ಬರು ಸಿಖ್ಖರನ್ನು ಸಜೀವವಾಗಿ ಗುರುದ್ವಾರದೊಳಗೇ ಸುಟ್ಟರು. ಈ ಘಟನೆ ಟೈಟ್ಲರ್ ಮುಂದೆಯೇ ನಡೆದು ಹೋಯಿತು. ಟೈಟ್ಲರ್ ತನ್ನ ಲಫಂಗ ಚೇಲಾಗಳಿಗೆ 'ಗುರುದ್ವಾರದೊಳಗೆ ಸಿಖ್ಖರು ಅಡಗಿ ಕುಳಿತಿರುವ ಸಾಧ್ಯತೆಯಿದೆ. ಅವರನ್ನು ಹೊರಬರಲು ಬಿಡಬೇಡಿ. ಅಲ್ಲಿಯೇ ಸಾಯಿಸಿ' ಎಂದು ಆದೇಶ ಕೊಡುತ್ತಿದ್ದ. ಸಿಖ್ಖರು ಪ್ರಾಣ ಉಳಿಸಿಕೊಳ್ಳಲು ಪಟಕಾ ಬಿಸಾಕಿ, ಗಡ್ಡ ಬೋಳಿಸಿಕೊಂಡು ತಲೆಮರೆಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಅಂಥವರನ್ನೆಲ್ಲ ಬೆನ್ನಟ್ಟಿ ಬಡಿಯುವಂತೆ ಟೈಟ್ಲರ್ ಸೂಚಿಸುತ್ತಿದ್ದ. ತಮ್ಮ ನೆಚ್ಚಿನ ನಾಯಕಿಯ ಹತ್ಯೆಗೆ ಮುಯ್ಯಿ ತೀರಿಸಿಕೊಂಡು, ತಾವೇ ಹೆಚ್ಚು ಸಿಖ್ಖರನ್ನು ಕೊಂದವರೆಂದು ಫೋಸು ಕೊಟ್ಟು ಹುತಾತ್ಮ ನಾಯಕಿಯ ಪರಮಭಕ್ತರಂತೆ ಬೀಗುತ್ತಾ, ಹೊಸ ನಾಯಕನ (ರಾಜೀವ್ ಗಾಂಧಿ) ಕೃಪಾಕಟಾಕ್ಷಕ್ಕೆ ಒಳಗಾಗುವ ಹೊಂಚು ಹವಣಿಕೆ ಹೆಣೆಯುವುದರಲ್ಲಿ ಕಾಂಗ್ರೆಸ್ ನೇತಾರರು ತಲ್ಲೀನರಾಗಿದ್ದರು.
ನಾನಾವತಿ ಆಯೋಗದ ಎದುರು ಸಲ್ಲಿಸಲಾದ ಅಫಿಡವಿಟ್ ಹಾಗೂ ಹೇಳಿಕೆಗಳನ್ನು ಓದಿದರೆ ಭಯಾನಕ ಸತ್ಯದರ್ಶನವಾಗುತ್ತದೆ. ಅಕ್ಟೋಬರ್ 31ರ ರಾತ್ರಿ (ಇಂದಿರಾ ಹತ್ಯೆಯ ದಿನ) ಕಾಂಗ್ರೆಸ್ ಶಾಸಕ ರಾಮ್‌ಪಾಲ್ ಸರೋಜ್ ಮನೆಯಲ್ಲಿ ಪಕ್ಷದ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಇದೇ ಹತ್ಯಾಕಾಂಡದ ರೂಪುರೇಷೆಗಳಿಗೆ ಸ್ಕೆಚ್ ಹಾಕಲಾಯಿತು. ಇಡೀ ಸಿಖ್ ಸಮುದಾಯಕ್ಕೆ ತಕ್ಕ ಪಾಠ ಕಲಿಸುವಂತೆ ಸ್ಪಷ್ಟ ಸೂಚನೆ, ನಿರ್ದೇಶನ ನೀಡುವ ನಿರ್ಧಾರಕ್ಕೆ ಬರಲಾಯಿತು. ಹತ್ಯೆಗೆ ಬೇಕಾದ ಸಾಮಾನು ಸರಂಜಾಮು, ಅಸ್ತ್ರ, ಹತ್ಯಾರಗಳನ್ನು ತಕ್ಷಣ ಸಂಗ್ರಹಿಸುವಂತೆ ಸೂಚಿಸಲಾಯಿತು. ಸಿಖ್ಖರನ್ನು ಹಾಗೂ ಅವರ ಮನೆಗಳನ್ನು ಸುಟ್ಟು ಹಾಕಬೇಕೆಂದು ನಿರ್ಧರಿಸಲಾಯಿತು. ದಿಲ್ಲಿಯ 281 ಪೆಟ್ರೋಲ್ ಬಂಕ್‌ಗಳಿಂದ ರಾತ್ರೋರಾತ್ರಿ ಜಬರ್‌ದಸ್ತಿನಿಂದ ಪೆಟ್ರೋಲನ್ನು ಸಂಗ್ರಹಿಸಲಾಯಿತು. ಶೀಘ್ರ ಹೊತ್ತಿ ಉರಿಯುವ ಬಿಳಿಪುಡಿ ಮೂಟೆಗಳನ್ನು ರಾಸಾಯನಿಕ ಕಾರ್ಖಾನೆಗಳಿಂದ ಸಂಗ್ರಹಿಸಿ ಇಡೀ ದಿಲ್ಲಿಯಲ್ಲಿ ಹಂಚಲು ತೀರ್ಮಾನಿಸಲಾಯಿತು. ಕೆರೋಸಿನ್ ಪೂರೈಸುವಂತೆ ಎಲ್ಲ ಡಿಪೋಗಳಿಗೆ ಸೂಚನೆ ಹೋಯಿತು. ಮತದಾರರ ಪಟ್ಟಿಯ ನೆರವಿನಿಂದ ಸಿಖ್ಖರ ಮನೆಗಳನ್ನು ಗುರುತಿಸಲಾಯಿತು. ಸುಮ್ಮನಿರಿ ಅಥವಾ ಗಲಭೆಕೋರರಿಗೆ ನೆರವಾಗಿ ಎಂಬ ಮೌಖಿಕ ಆದೇಶ ಪೊಲೀಸರಿಗೆ ಹೋಯಿತು. ಹರಿಯಾಣದ ಜನರನ್ನು ದಿಲ್ಲಿಗೆ ಕರೆ ತರಲು ರೈಲೊಂದನ್ನು ಆಯೋಜಿಸಲಾಗಿತ್ತು. ಅದೇ ರೀತಿ ದಿಲ್ಲಿ ಸಾರಿಗೆ ನಿಗಮ (ಡಿಟಿಸಿ) ಬಸ್ಸುಗಳಲ್ಲಿ ಹರಿಯಾಣದಿಂದ ಕ್ರಿಮಿನಲ್‌ಗಳನ್ನು ಕರೆತರಲು ನಿರ್ಧರಿಸಲಾಯಿತು. ದಿಲ್ಲಿಯ ಎಂಬತ್ತಕ್ಕೂ ಹೆಚ್ಚು ಕೊಳಗೇರಿ ನಿವಾಸಿಗಳು ಹಾಗೂ ಅಕ್ರಮ ಕಾಲೋನಿಗಳ ನಿವಾಸಿಗಳನ್ನು ಈ ಗುಂಪಿನ ಜತೆ ಸೇರಿಕೊಳ್ಳುವಂತೆ ಸೂಚಿಸಲಾಯಿತು. ಎಲ್ಲರನ್ನೂ ಒಟ್ಟುಗೂಡಿಸಿದ ನಂತರ ಆಯಾ ಗುಂಪುಗಳಿಗೆ ಸಿಖ್ಖರನ್ನು ಕೊಚ್ಚಿ ಹಾಕುವಂತೆ ಪ್ರಚೋದನಕಾರಿ ಭಾಷಣಗಳಿಂದ ಕಾಂಗ್ರೆಸ್ ನಾಯಕರು ಹುಮ್ಮಸ್ಸು ತುಂಬಿದರು. ಏಕಾಏಕಿ ಗಲಭೆಯುಂಟಾಗಲು ಗಾಳಿಸುದ್ದಿ, ವದಂತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಯಿತು. ಪೊಲೀಸರು, ಆಡಳಿತಶಾಹಿ ಹಾಗೂ ಸರ್ಕಾರ ತಮ್ಮದೇ ಆಗಿರುವುದರಿಂದ ನಿಮಗೇನೂ ಆಗದು ಎಂದು ಧೈರ್ಯ ತುಂಬಲಾಯಿತು. ಯಾವುದೇ ಸ್ಥಳದಲ್ಲಿ ಇಬ್ಬರು ಸಿಖ್ಖರು ಸ್ವಯಂ ರಕ್ಷಣೆ ಅಥವಾ ಗುರುದ್ವಾರದ ರಕ್ಷಣೆಗೆ ಒಂದಾಗಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಗಲಭೆಕೋರರಿಗೆ ನೆರವಾಗಲು ತಕ್ಷಣ ಪೊಲೀಸರನ್ನು ಅಲ್ಲಿಗೆ ಕಳಿಸಲಾಗುತ್ತಿತ್ತು. ಪೊಲೀಸ್ ನೆರವು ಅಪೇಕ್ಷಿಸಿ ಠಾಣೆಗೆ ಬಂದವರಿಗೆ ಲಾಠಿ ರುಚಿ ತೋರಿಸುವಂತೆ ಪೊಲೀಸರಿಗೆ ತಿಳಿಸಲಾಗಿತ್ತು. ಸ್ವರಕ್ಷಣೆಗಾಗಿ ಶಸ್ತ್ರಾಸ್ತ್ರ ತೆಗೆದ ಸಿಖ್ಖರನ್ನು ಬಂಧಿಸಲಾಯಿತು. ಕೊಲೆ ಆರೋಪ ಹೊರಿಸಲಾಯಿತು. ಪೊಲೀಸರ ಈ ಬಗೆಯ ವರ್ತನೆಯನ್ನು 'ಶೌರ್ಯ' ಎಂದು ಬಣ್ಣಿಸಿ, ರಾಷ್ಟ್ರಪತಿಗಳಿಂದ ಶೌರ್ಯ ಪದಕ ಕೊಡಿಸಲಾಯಿತು. ಮಹಾರಾಣಿಬಾಗ್ ಪ್ರದೇಶದಲ್ಲಿ ಪೊಲೀಸರೇ ಸಿಖ್ಖರ ಮೇಲೆ ಗುಂಡು ಹಾರಿಸಿದರು. ಸಾಮ್ರಾಟ್ ಎನ್‌ಕ್ಲೇವ್‌ನಲ್ಲಿ ಪೊಲೀಸರು ಸಿಖ್ಖರ ಮೇಲೆ ರೈಫಲ್‌ನಿಂದ ಐವತ್ತೆರಡು ಸುತ್ತು, ರಿವಾಲ್ವರ್‌ನಿಂದ ಒಂಬತ್ತು ಸುತ್ತು ಗುಂಡು ಹಾರಿಸಿದರು. ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಸಮ್ಮುಖದಲ್ಲಿಯೇ ಸ್ಟೇಷನ್ ಹೌಸ್ ಆಫೀಸರ್ ತನ್ನ ರಿವಾಲ್ವರ್‌ನಿಂದ ಮೂವರು ಸಿಖ್ಖರನ್ನು ಗುಂಡು ಹಾರಿಸಿ ಸಾಯಿಸಿದ. ತಮ್ಮ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಮನೆಯಲ್ಲಿದ್ದವರನ್ನೆಲ್ಲ ಸಾಯಿಸಲು ಗಲಭೆಕೋರರು ಮುಂದಾದಾಗ ಸೇನೆಯಲ್ಲಿದ್ದ ಕ್ಯಾಪ್ಟನ್ ಮನಮೋಹನಸಿಂಗ್ ತಲ್ವಾರ್ ತಮ್ಮ ರಿವಾಲ್ವರ್‌ನಿಂದ ಐವರನ್ನು ಸಾಯಿಸಿದರು.
ಪೊಲೀಸರು ಕ್ಯಾಪ್ಟನ್ ತಲ್ವಾರ್ ವಿರುದ್ಧ ಕೊಲೆ ಕೇಸು ದಾಖಲಿಸಿದರು. ಕ್ಯಾಪ್ಟನ್ ತಲ್ವಾರ್‌ನನ್ನು ಬಂಧಿಸಿದ್ದಕ್ಕಾಗಿ ಡಿಸಿಪಿ ಅಮೋದ್‌ಕಾಂತ್‌ಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಯಿತು! ನವೆಂಬರ್ ಒಂದರಂದು ಒಂದೇ ದಿನ ತ್ರಿಲೋಕಪುರಿಯಲ್ಲಿ ಸುಮಾರು ಐನೂರು ಸಿಖ್ಖರನ್ನು ಕೊಂದು ಹಾಕಿದರೂ ಒಬ್ಬನೇ ಒಬ್ಬ ಗಲಭೆಕೋರನ್ನು ಪೊಲೀಸರು ಬಂಧಿಸಲಿಲ್ಲ! ಈ ನರಮೇಧದಲ್ಲಿ 145 ಪೊಲೀಸ್ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದರು. ಒಬ್ಬನಿಗೆ ಪಿಂಚಣಿ ಕಟ್ ಆಗಿದ್ದು ಬಿಟ್ಟರೆ ಅವರ ಕೂದಲು ಸಹ ಕೊಂಕಲಿಲ್ಲ.
----
ನಾನಾವತಿ ಆಯೋಗದ ಕಡತ ಹೇಳುವ ಕತೆಗಳನ್ನು ಕೇಳಬೇಕು.
ಇಂದಿರಾ ಪಾರ್ಥಿವ ಶರೀರವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿಡಲಾಗಿತ್ತು. ಶ್ರದ್ಧಾಂಜಲಿ ಸಲ್ಲಿಸಲು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅಲ್ಲಿಗೆ ತೆರಳಿದಾಗ ಅವರ ವಾಹನದ ಮೇಲೆ ಕಲ್ಲೆಸಲಾಯಿತು. ದೇಶದ ರಾಷ್ಟ್ರಪತಿ ಅಂದು ಬಚಾವ್ ಆಗಿ ಬಂದಿದ್ದೇ ಪವಾಡ!
ಪಂಜಾಬ್ ಹಾಗೂ ಸಿಂಧ್ ಬ್ಯಾಂಕಿನ ಅಧ್ಯಕ್ಷ ಎನ್.ಎಸ್. ಬಸಂತ್ ಅವರ ಅಳಿಯ ಕರ್ತಾರ್‌ಸಿಂಗ್ ವಿರ್ದಿಯನ್ನು ಸಜೀವ ಸುಟ್ಟು ಹಾಕಲಾಗಿತ್ತು. ಬಸಂತ್ ತಮ್ಮ ಪ್ರಭಾವ ಹಾಗೂ ಸ್ನೇಹ ಬಳಸಿ ರಾಷ್ಟ್ರಪತಿಯವರನ್ನು ಸಂಪರ್ಕಿಸಿದರು. ಅಂತ್ಯಕ್ರಿಯೆಗೆ ನೆರವಾಗುವಂತೆ ಅಂಗಲಾಚಿದರು. ದಿಲ್ಲಿಯಲ್ಲಿ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿತ್ತೆಂದರೆ, ವಿರ್ದಿ ಹೆಣಕ್ಕೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸಲು ರಾಷ್ಟ್ರಪತಿಯವರಿಗೂ ಸಾಧ್ಯವಾಗಲಿಲ್ಲ. ಅಂದು ಜೈಲ್‌ಸಿಂಗ್ ಗೃಹಸಚಿವರನ್ನು ಸಂಪರ್ಕಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. 'ನಾನು ಈ ದೇಶದ ರಾಷ್ಟ್ರಪತೀನಾ? ನನ್ನ ನಿಯಂತ್ರಣದಲ್ಲಿ ಏನಾದರೂ ಇವೆಯಾ?' ಎಂದು ಜೈಲ್‌ಸಿಂಗ್ ತಮ್ಮ ಸಹೋದ್ಯೋಗಿಗಳ ಮುಂದೆ ಅಸಹಾಯಕತೆ ತೋಡಿಕೊಳ್ಳುತ್ತಿದ್ದರಂತೆ. ರಾಷ್ಟ್ರಪತಿ ಭವನದ ಹೊರಕ್ಕೆ ಬರಲು ಜೈಲ್‌ಸಿಂಗ್ ಭಯಪಟ್ಟಿದ್ದರಂತೆ.
'ಸಿಖ್ ಹತ್ಯಾಕಾಂಡವನ್ನು ನಿಲ್ಲಿಸಲು ಕ್ರಮಕೈಗೊಳ್ಳಿ' ಎಂದು ಪ್ರಮುಖ ಸಿಖ್ ಮುಖಂಡರು ಜೈಲ್‌ಸಿಂಗ್‌ರನ್ನು ಭೇಟಿ ಮಾಡಿ ಮನವಿ ಮಾಡಿದರೆ, ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ತಮಗೆ ಯಾವುದೇ ಅಧಿಕಾರ ಇಲ್ಲವೆಂದು ಹೇಳಿದರು. (ಈ ಸಂಗತಿಯನ್ನು ಖ್ಯಾತ ಪತ್ರಕರ್ತ ಪತ್ವಂತ್‌ಸಿಂಗ್ ನಾನಾವತಿ ಆಯೋಗದ ಎದುರು ಹೇಳಿದ್ದಾರೆ.) 'ಅಮಾಯಕ ಸಿಖ್ಖರನ್ನು ಕಂಡ ಕಂಡೆಲ್ಲ ಸಾಯಿಸುತ್ತಿದ್ದಾರೆ. ಈ ರಕ್ತಪಾತ ತಡೆಗಟ್ಟಿ' ಎಂದಾಗ ಜೈಲ್‌ಸಿಂಗ್ ಸುಮ್ಮನೆ ಕುಳಿತು ಮೇಲಕ್ಕೆ ನೋಡುತ್ತಿದ್ದರಂತೆ. 'ಯಾವಾಗ ಸೇನೆಯನ್ನು ಕರೆಯಿಸುತ್ತೀರಿ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರೊಲ್ಲ' ಎಂದು ರಾಷ್ಟ್ರಪತಿಗೆ ಬಾಂಗ್ಲಾ ಯುದ್ಧದ ಹೀರೋ ಲೆಫ್ಟಿನೆಂಟ್ ಜನರಲ್ ಜಗಜಿತ್‌ಸಿಂಗ್ ಅರೋರ ಒತ್ತಾಯಿಸಿದರೆ, 'ಗೃಹ ಸಚಿವ ಪಿ.ವಿ. ನರಸಿಂಹರಾವ್ ಅವರೊಂದಿಗೆ ನಾನು ಸಂಪರ್ಕದಲ್ಲಿ ಇಲ್ಲ' ಎಂದರಂತೆ. 'ನಾನು ಅಸಹಾಯಕ. ನನ್ನಿಂದ ಏನನ್ನೂ ನಿರೀಕ್ಷಿಸಬೇಡಿ. ಒಬ್ಬ ಸಿಖ್ಖನಾಗಿ ಹತ್ಯಾಕಾಂಡ ನೋಡಿಯೂ ಏನೂ ಮಾಡದ ಸ್ಥಿತಿಯಲ್ಲಿದ್ದೇನೆ' ಎಂದು ಕೈ ಚೆಲ್ಲಿದರಂತೆ.  ಗೃಹ ಸಚಿವ ನರಸಿಂಹರಾಯರನ್ನು, ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಭೇಟಿ ಮಾಡಿ 'ಸೇನೆಯನ್ನು ಕರೆಯಿಸಿ. ನರಮೇಧವನ್ನು ತಡೆಗಟ್ಟಿ' ಎಂದು ಆಗ್ರಹಿಸಿದರೆ, 'ಆಯ್ತು ನೋಡ್ತೇನೆ' ಎಂದು ಹೇಳಿ ಕೋಣೆ ಸೇರಿಕೊಂಡು ಚಿಲಕ ಹಾಕಿಕೊಂಡರಂತೆ.
ದಿಲ್ಲಿಯಲ್ಲಿ ಸೇನೆ ಉಪಸ್ಥಿತಿ ಇತ್ತಾದರೂ ಅದನ್ನು ಬಳಸಲಿಲ್ಲ. ಅಲ್ಲದೇ ಅಕ್ಟೋಬರ್ 31ರ ರಾತ್ರಿ ಐದು ಸಾವಿರ ಸೈನಿಕರನ್ನು ಮೀರತ್‌ನಿಂದ ದಿಲ್ಲಿಗೆ ಕರೆಯಿಸಿಕೊಂಡರೂ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಿಲ್ಲ. ಈ ಸಂಗತಿಯನ್ನು ಅಂದಿನ ಸೇನಾ ಮುಖ್ಯಸ್ಥ ಎ.ಎಸ್. ವೈದ್ಯ, ರಂಗನಾಥ ಮಿಶ್ರಾ ಆಯೋಗದ ಎದುರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. 'ಸೇನೆಯನ್ನು ನಿಯೋಜಿಸಿದ್ದರೆ ಕನಿಷ್ಠ ಪರಿಸ್ಥಿತಿ ನಿಯಂತ್ರಿಸಬಹುದು ಎಂದು ನಾವು ರಾಷ್ಟ್ರಪತಿಗೆ ಮನವರಿಕೆ ಮಾಡಿಕೊಟ್ಟಿದ್ದೆವು' ಎಂದು ಜೈಲ್‌ಸಿಂಗ್ ಆಪ್ತ ಕಾರ್ಯದರ್ಶಿ ತರಲೋಚನಸಿಂಗ್ ಹಾಗೂ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಪಿ. ಜಿ. ಗವಾಯ್ ಹೇಳಿದ್ದರು. ಆದರೆ ಸೇನೆ ಕಳುಹಿಸಕೂಡದೆಂದು ರಾಷ್ಟ್ರಪತಿಯವರ, ಗೃಹ ಸಚಿವರ ಕೈಯನ್ನು ಕಟ್ಟಿ ಹಾಕಿದವರು ಯಾರು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಇಂದಿರಾ ಹತ್ಯೆ ನಡೆದು ಮೂರು ದಿನಗಳ ಬಳಿಕ ಸೇನೆಯನ್ನು ನಿಯೋಜಿಸಿದಾಗಲೇ ಪರಿಸ್ಥಿತಿ ಹತೋಟಿಗೆ ಬಂದಿದ್ದು. ನವೆಂಬರ್ ಒಂದರ ದಿನವೇ ಕರೆಯಿಸಿದ್ದರೆ ಎರಡು ಸಾವಿರ ಅಮಾಯಕ ಸಿಖ್ಖರು ಬದುಕುಳಿಯುತ್ತಿದ್ದರು. ಅವರನ್ನು ಸಾಯಿಸುವುದೇ ಉದ್ದೇಶವಾಗಿರುವಾಗ ಸೇನೆಯನ್ನು ಕರೆಯಿಸುವುದುಂಟಾ?
ಕಾಂಗ್ರೆಸ್ ನಾಯಕರೆಲ್ಲ ಮುಂದಿನ ಪ್ರಧಾನಿಯ ಪೀಠಾರೋಹಣ, ತಮಗೆ ಸಿಗಬಹುದಾದ ಮಂತ್ರಿ ಪದವಿ, ಖಾತೆ, ಆಯಕಟ್ಟಿನ ಜಾಗದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಸಿಖ್ ನರಮೇಧದ ಬಗ್ಗೆ ಅವರಲ್ಲಿ ವಿಷಾದವಿದ್ದಂತಿರಲಿಲ್ಲ. ದೇಶ ರಕ್ಷಣೆಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವ, ಅಪ್ಪಟ ದೇಶಾಭಿಮಾನಿಗಳಾದ ಸಿಖ್ಖರು ತಮ್ಮದಲ್ಲದ ತಪ್ಪಿಗೆ, ಯಾರದೋ ಹುಸಿ ಕೋಪಕ್ಕೆ, ಇನ್ಯಾರನ್ನೋ ಮೆಚ್ಚಿಸುವ ಹಗಲುವೇಷದ ರಾಜಕಾರಣಕ್ಕೆ ಬೀದಿ ಹೆಣವಾಗಿ ಬಿದ್ದಿದ್ದರು. ನಿರುಪದ್ರವಿಗಳು, ಅಮಾಯಕರು, ದೇಶಭಕ್ತರು ಎಂದೇ ಹೆಸರಾದ ಒಂದು ಸಮುದಾಯ ಅವಮಾನ, ಅನುಮಾನಗಳ ದಳ್ಳುರಿಗೆ ಸಿಲುಕಿ ತತ್ತರಿಸಿ ಹೋಯಿತು. ಇಂದಿರಾನಿಷ್ಠೆ ಮೆರೆಯುವುದಕ್ಕಾಗಿ ಸಿಖ್ಖರನ್ನು ನಡೆಸಿಕೊಂಡ ರೀತಿಯಿದೆಯಲ್ಲ, ಅದು ಮಾನವಂತ ಸಮಾಜ ತಲೆತಗ್ಗಿಸುವಂಥದ್ದು.
ಈ ಘಟನೆಯಿಂದ ದೇಶಕ್ಕೆ ದೇಶವೇ ತಲ್ಲಣಿಸಿದರೆ ಪ್ರಧಾನಿಯಾಗುವ ಧಾವಂತದಲ್ಲಿದ್ದ ರಾಜೀವಗಾಂಧಿ ಹನಿ ಕಂಬನಿಯನ್ನು ಮಿಡಿಯಲಿಲ್ಲ. ತಾಯಿಯ ನಿಧನದ ಶೋಕದಲ್ಲಿದ್ದಿರಬಹುದು ಎಂದು ಭಾವಿಸೋಣ ಅಂದ್ರೆ, ಪ್ರಧಾನಿಯಾಗಿ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಜೀವಗಾಂಧಿ ಹೇಳಿದ್ದೇನು ಗೊತ್ತಾ?'When a mighty tree falls, it is only natural that the earth around it does shake a little (ದೊಡ್ಡಮರ ಧರೆಗುರುಳಿದಾಗ ಅದರ ಸುತ್ತಲಿನ ಭೂಮಿ ತುಸು ಕಂಪಿಸುವುದು ಸಹಜ) ಎಂದು ಬಿಟ್ಟರು. ಹಾಗೆ ಹೇಳುವ ಮೂಲಕ ಸಿಖ್ ನರಮೇಧವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಅಷ್ಟೇ ಅಲ್ಲ, ಸಿಖ್ ಹತ್ಯಾಕಾಂಡದಲ್ಲಿ 2733 ಮಂದಿ ಸತ್ತಿಲ್ಲ. ಸತ್ತವರು ಕೇವಲ 450 ಮಂದಿ ಎಂದರು. ಅದೇನು ಅಂಥ ಹೇಳಿಕೊಳ್ಳುವ ಮಹಾದುರ್ಘಟನೆ ಅಲ್ಲ ಬಿಡಿ ಎಂಬುದು ಅವರ ಮಾತಿನ ಇಂಗಿತವಾಗಿತ್ತು.
ಇಷ್ಟೇ ಆಗಿದಿದ್ದರೆ ಪರವಾಗಿರಲಿಲ್ಲ. ಸಿಖ್ ಹತ್ಯಾಕಾಂಡದಲ್ಲಿ ಪ್ರಮುಖ ರೂವಾರಿಗಳಂತೆ ಕೆಲಸ ಮಾಡಿದವರನ್ನೆಲ್ಲ ರಾಜೀವ್‌ಗಾಂಧಿ ಒಂದಿಲ್ಲೊಂದು ರೀತಿಯಲ್ಲಿ ಪುರಸ್ಕರಿಸಿದ್ದರು. ಸಾಮಾನ್ಯ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ಧರಂದಾಸ ಶಾಸ್ತ್ರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಸಂಸದರನ್ನಾಗಿ ಮಾಡಿದರು. ಎಚ್.ಕೆ. ಎಲ್. ಭಗತ್ ಹಾಗೂ ಜಗದೀಶ ಟೈಟ್ಲರ್‌ಗೆ ಮಂತ್ರಿಮಂಡಲದಲ್ಲಿ ಸಚಿವರನ್ನಾಗಿ ಸೇರಿಸಿಕೊಂಡರು. ಸಜ್ಜನಕುಮಾರ ಸಂಸದನಾದ. ಕಂಬಿ ಎಣಿಸಬೇಕಾದವರೆಲ್ಲ ಅಧಿಕಾರದ ಪ್ರಭಾವಲಯದಲ್ಲಿ ವಿರಾಜಮಾನರಾದರು. ತ್ರಿಲೋಕ್‌ಪುರಿಯಲ್ಲಿ ಸುಮಾರು ಐನೂರು ಸಿಖ್ಖರ ಕಗ್ಗೊಲೆಗೆ ಕಾರಣನಾಗಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸೂರ್‌ವೀರ್ ಸಿಂಗ್ ತ್ಯಾಗಿ ಅಡಿಷನಲ್ ಪೊಲೀಸ್ ಕಮೀಷನರ್ ಆಗಿ ಭಡ್ತಿ ಪಡೆದ. ಗಲಭೆಯಲ್ಲಿ ಸಕ್ರಿಯನಾಗಿದ್ದ ತ್ಯಾಗಿಯ ಮೇಲಿದ್ದ ಡಿಎಸ್‌ಪಿ ದೇವಾದಾಸ್‌ಗೆ ಸ್ಪೆಷಲ್ ಕಮೀಷನರ್ ಎಂದು ಭಡ್ತಿ ನೀಡಲಾಯಿತು. ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೂ ಮೋಸ ಮಾಡಲಿಲ್ಲ. ಎಲ್ಲರಿಗೂ ಅವರವರ 'ಅನುಪಮ ಸೇವೆ'ಯನ್ನು ಪರಿಗಣಿಸಿ 'ಬಹುಮಾನ' ನೀಡಿ ನಿಯತ್ತು ಮೆರೆಯಿತು.
----
ಆನಂತರ ಶುರುವಾಯಿತು Cover up,  ಕಣ್ಣೊರೆಸುವ, ಪ್ರಕರಣಗಳನ್ನು ಮುಚ್ಚಿ ಹಾಕುವ, ತಪ್ಪಿತಸ್ಥರನ್ನು ಬಚಾವ್ ಮಾಡುವ ಕಾರ್ಯಾಚರಣೆ. ರಾಜೀವ್‌ಗಾಂಧಿ ಸರ್ಕಾರ ಸಿಖ್ಖರ ನರಮೇಧ ವಿಚಾರಣೆಗೆ ನ್ಯಾಯಮೂರ್ತಿ ರಂಗನಾಥ ಮಿಶ್ರಾ ನೇತೃತ್ವದಲ್ಲಿ ಆಯೋಗ ರಚಿಸಿತು. ಈ ಆಯೋಗ ವಿಚಾರಣೆ ನಡೆಸಿ ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನೆಲ್ಲ ದಾಖಲಿಸಿಕೊಂಡಿತು. ಮುಂದೆ ಕೆಲವೇ ದಿನಗಳಲ್ಲಿ ಈ ಸಾಕ್ಷ್ಯಗಳು, ಮಹತ್ವದ ದಾಖಲೆಗಳೆಲ್ಲ ಕಾಂಗ್ರೆಸ್ ಮುಖಂಡ ಹಾಗೂ ನರಮೇಧದ ರೂವಾರಿ ಸಜ್ಜನಕುಮಾರ್ ಮನೆಯಲ್ಲಿ ಸಿಕ್ಕವು! ಪತ್ರಕರ್ತರನ್ನು ಹಾಗೂ ಸಾರ್ವಜನಿಕರನ್ನು ಹೊರಗಿಟ್ಟು ಈ ಆಯೋಗ ಕಲಾಪ ನಡೆಸಿತು. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಮಿಶ್ರಾ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದರೆ ಅದು ಕಳ್ಳೆಕಾಯಿ ಕಟ್ಟಲು ಯೋಗ್ಯ ಎಂದು ಮನವರಿಕೆಯಾಯಿತು. ಮೂರು ದಿನಗಳಲ್ಲಿ ಎರಡೂ ಮುಕ್ಕಾಲು ಸಾವಿರ ಮಂದಿ ಬರ್ಭರವಾಗಿ ಕಗ್ಗೊಲೆಯಾದರೆ ಒಬ್ಬೇ ಒಬ್ಬನನ್ನು ತಪ್ಪಿತಸ್ಥ ಎಂದು ಹೆಡೆಮುರಿ ಕಟ್ಟಿ ತಂದು ನಿಲ್ಲಿಸಲು ಆಯೋಗಕ್ಕೆ ಸಾಧ್ಯವಾಗಲಿಲ್ಲ! ಕೆಲ ವರ್ಷಗಳ ಬಳಿಕ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯರಾದರು!
ನರಮೇಧ ಸಂದರ್ಭದಲ್ಲಿ ದಿಲ್ಲಿ ಪೊಲೀಸರ ಸಾಕ್ಷ್ಯ, ಕರ್ತವ್ಯಲೋಪದ ಬಗ್ಗೆ ತನಿಖೆ ನಡೆಸಲು ದಿಲ್ಲಿಯ ಹೆಚ್ಚುವರಿ ಪೊಲೀಸ್ ಕಮೀಷನರ್ ವೇದಮಾರ್ವ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಇವರು ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದರು. ವಾಸನೆ ಹಿಡಿದ ಕೇಂದ್ರ ಗೃಹ ಸಚಿವರು ಅರ್ಧಕ್ಕೆ ಆ ಆಯೋಗವನ್ನು ಬರ್ಖಾಸ್ತುಗೊಳಿಸಿದರು. ಇವರು ಸಂಗ್ರಹಿಸಿದ ಮಾಹಿತಿ, ದಾಖಲೆ, ಸಾಕ್ಷ್ಯ, ಕಾಗದ ಪತ್ರಗಳನ್ನು ಮುಂದೆ ರಚಿಸಲಾದ ಆಯೋಗಕ್ಕೆ ಹಸ್ತಾಂತರಿಸಲೇ ಇಲ್ಲ. ಮಾರ್ವ ಆಯೋಗ ಸಂಗ್ರಹಿಸಿದ ಸಾಕ್ಷ್ಯಗಳನ್ನೆಲ್ಲ ನಾಶಪಡಿಸಲಾಯಿತು. ಇದಾದ ಬಳಿಕ ಜೈನ್-ಬ್ಯಾನರ್ಜಿ ಆಯೋಗ ರಚಿಸಲಾಯಿತು. ಅದರ ವರದಿಯೂ ಕಳ್ಳೇಕಾಯಿ ಕಟ್ಟುವುದಕ್ಕೆ ಹೇಳಿ ಮಾಡಿಸಿದಂತಿತ್ತು. ಮುಂದೆ ಕಪೂರ್-ಮಿತ್ತಲ್ ನೇತೃತ್ವದ ಆಯೋಗ ಬಂತು. ಅದು ಕಡಿದು ಕಟ್ಟೇ ಹಾಕಿದ್ದು ಅಷ್ಟೇ. ಎಷ್ಟು ಮಂದಿ ಸತ್ತಿದ್ದಾರೆಂಬುದನ್ನು ನಿರ್ಧರಿಸಲು ಅಹುಜಾ ಸಮಿತಿಯನ್ನು ರಚಿಸಲಾಯಿತು. ಆನಂತರ ಪೊಟ್ಟಿ  ರೋಷಾ ಸಮಿತಿ ಬಂತು. ಆ ಸಮಿತಿಗೆ ಆರು ತಿಂಗಳು ತುಂಬುತ್ತಿದ್ದಂತೆ ಜೈನ್-ಅಗರವಾಲ ಆಯೋಗ ಅಸ್ತಿತ್ವಕ್ಕೆ ಬಂತು. ಇದು ಮೂರು ವರ್ಷ ಕೆಲಸ ಮಾಡಿ ವರದಿ ನೀಡಿತು. ಅದರಿಂದ ಏನೂ ಆಗಲಿಲ್ಲ. ಎಷ್ಟು ಮಂದಿ ಸತ್ತಿದ್ದಾರೆಂಬುದನ್ನು ನಿರ್ಧರಿಸಲು ಅಹುಜಾ ಸಮಿತಿ ನೇಮಕವಾಯಿತು. ದಿಲ್ಲಿಯಲ್ಲಿ 2733 ಮಂದಿ ಸಿಖ್ಖರನ್ನು ಸಾಯಿಸಲಾಗಿದೆ ಎಂದು ಈ ಸಮಿತಿ ಹೇಳಿತು. ಸತ್ತವರು ಬರೀ 450 ಮಂದಿ ಎಂದು ಹೇಳುತ್ತಿದ್ದ ಕಾಂಗ್ರೆಸ್ ಕ್ಷಮೆಯಾಚಿಸಲಿಲ್ಲ. ಆನಂತರ ಧಿಲ್ಲಾನ್ ಸಮಿತಿ, ನರೂಲಾ ಸಮಿತಿ ಹಾಗೂ ನಾನಾವತಿ ಆಯೋಗಗಳು ರಚಿತವಾದವು. ಸಿಖ್ ನರಮೇಧ ತನಿಖೆಗೆ ಇಲ್ಲಿಯವರೆಗೆ ದಾಖಲೆ ಸಂಖ್ಯೆಯಲ್ಲಿ ಅಂದರೆ ಒಟ್ಟು ಹತ್ತು ಆಯೋಗ/ಸಮಿತಿಗಳು ರಚಿತವಾದರೂ ಪರಿಣಾಮ ಮಾತ್ರ ಶೂನ್ಯ! ಇದನ್ನು Mother of All Cover up ಎಂದು ಕರೆಯಬಹುದು. ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಇಡೀ ತನಿಖೆಯ ದಿಕ್ಕು ತಪ್ಪಿಸಲು ಶತಪ್ರಯತ್ನ ಮಾಡಿದರು. ಕೋರ್ಟ್‌ಗೆ ಆರೋಪಿಗಳ ಪಟ್ಟಿಯನ್ನು ಸಲ್ಲಿಸಲು ಅವರು ಸಿಬಿಐಗೆ ಅವಕಾಶ ಕೊಡಲೇ ಇಲ್ಲ. ಹದಿನಾಲ್ಕು ವರ್ಷಗಳ ನಂತರ ಪ್ರಾಥಮಿಕ ಮಾಹಿತಿ ವರದಿ (FIR) ಸಲ್ಲಿಸಲಾಯಿತು. 'ಸಿಖ್‌ರನ್ನು ಕಂಡಲ್ಲಿ ಸಾಯಿಸಿ' ಎಂದು ಗರ್ಜಿಸಿದ್ದ ಸಜ್ಜನಕುಮಾರ್ ನಿರ್ದೋಷಿಯೆಂದು ಕೋರ್ಟ್ 2012ರಲ್ಲಿ ತೀರ್ಪು ನೀಡಿತು.
ಲೂಧಿಯಾನದ ಸುರೀಂದರ್ ಸಿಂಗ್ ಎಂಬಾತ ನಾನಾವತಿ ಆಯೋಗದ ಮುಂದೆ ಸಜ್ಜನಕುಮಾರನನ್ನು ಗಲಭೆ ನಡೆಯುವಾಗ ಖುದ್ದು ಕಂಡಿದ್ದೇನೆ' ಎಂದು ಸಾಕ್ಷ್ಯ ಹೇಳಿದ. ಈ ರೀತಿ ಹದಿನೆಂಟು ಮಂದಿ ಸಾಕ್ಷ್ಯ ಹೇಳಿದರು. ಆದರೆ ಅವನ ಒಂದು ರೋಮ ಕೀಳಲು ಆಗಲಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಗದೀಶ ಟೈಟ್ಲರ್ ಹಾಗೂ ಸಜ್ಜನಕುಮಾರ್‌ಗೆ ಟಿಕೆಟ್ ನೀಡಲು ಮುಂದಾಗಿತ್ತು. ಆಗ ಸಿಬಿಐ ಕೂಡ ಟೈಟ್ಲರ್‌ಗೆ ಕ್ಲೀನ್ ಚಿಟ್ ಕೊಟ್ಟಿತ್ತು.
ಸಿಖ್ ಹತ್ಯಾಕಾಂಡ ನಡೆದು ಮೂವತ್ತು ವರ್ಷಗಳಾದವು. ನರಮೇಧದ ರೂವಾರಿಗಳೆಲ್ಲ ಆರಾಮವಾಗಿದ್ದಾರೆ. ಕೆಲಸಕ್ಕೆ ಬಾರದ 30 ಮಂದಿಗೆ ಶಿಕ್ಷೆಯಾಗಿದೆ. ಪ್ರತಿ ವರ್ಷ ಅಕ್ಟೋಬರ್ 31 ಬಂದರೆ ಕಾಂಗ್ರೆಸ್ಸಿಗರು ಇಂದಿರಾ ಹೆಸರಿನಲ್ಲಿ ಶೋಕಗರೆಯುತ್ತಾರೆ. ಸಿಖ್‌ರ ಸಾವಿಗೆ ಹನಿ ಕಣ್ಣೀರು ಚೆಲ್ಲುವುದಿಲ್ಲ. ಯಾರೂ ಅವರನ್ನು ನೆನಪು ಮಾಡುವುದಿಲ್ಲ.
----
ಈಗ ಹೇಳಿ ರಾಹುಲ್ ಗಾಂಧಿಯವರೇ,
 ನೀವು ಅರ್ನಾಬ್ ಗೋಸ್ವಾಮಿ ಸಂದರ್ಶನದಲ್ಲಿ ಹೇಳಿದ್ದು ಹಸಿ ಹಸಿ ಸುಳ್ಳಲ್ಲವಾ? ಗುಜರಾತ್ ನರಮೇಧಕ್ಕೂ, ಸಿಖ್ ಹತ್ಯಾಕಾಂಡಕ್ಕೂ ವ್ಯತ್ಯಾಸವಿದೆ. ಯಾಕೆಂದರೆ ಸಿಖ್ ಹತ್ಯಾಕಾಂಡ ತಡೆಯಲು ಕಾಂಗ್ರೆಸ್ ಸರ್ಕಾರ ಎಲ್ಲ ಕ್ರಮಕೈಗೊಂಡಿತು ಎಂದು ಸತ್ಯದ ನೆತ್ತಿ ಮೇಲೆ ಹೊಡೆದಂತೆ ಹೇಳಿದಿರಲ್ಲ. ನಿಮಗೆ ಮನಸ್ಸಾದರೂ ಹೇಗೆ ಬಂತು? ಯಾವ ಮುಖ ಇಟ್ಟುಕೊಂಡು ಆ ಹಸಿ ಸುಳ್ಳು ಹೇಳಿದಿರಿ? ಸಿಖ್‌ರಿಗೆ ನ್ಯಾಯ ಸಿಕ್ಕಿದೆಯಾ ಅಂತ ಕೇಳಿದರೆ ಕೆಲವು ಕಾಂಗ್ರೆಸ್ಸಿಗರಿಗೂ ಶಿಕ್ಷೆಯಾಗಿದೆ ಅಂತೀರಲ್ಲ, ಹೇಳಿ ಯಾವ ಕಾಂಗ್ರೆಸ್ಸಿಗರಿಗೆ ಶಿಕ್ಷೆಯಾಗಿದೆ? ಕೆಲವು ಕಾಂಗ್ರೆಸ್ಸಿಗರು ಹತ್ಯಾಕಾಂಡದಲ್ಲಿ ಪಾಲ್ಗೊಂಡಿರಬಹುದು ಎಂದಾಗ ಅವರ್ಯಾರು ಎಂದು ಪದೇ ಪದೆ ಸಂದರ್ಶಕರು ಕೇಳಿದರೂ ನೀವು ಹಾರಿಕೆ ಉತ್ತರ ಕೊಟ್ಟು ಹೆಸರು ಹೇಳದೇ ತಪ್ಪಿಸಿಕೊಂಡಿದ್ದೇಕೆ? ಸಿಖ್ ಹತ್ಯಾಕಾಂಡಕ್ಕೆ ಕ್ಷಮೆಯಾಚಿಸುತ್ತೀರಾ ಎಂದು ಕೇಳಿದ್ದಕ್ಕೆ ನಾನು ಗಲಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಪಲಾಯನ ಮಾಡುತ್ತೀರಲ್ಲ, ನಿಮ್ಮಲ್ಲಿ ಪಶ್ಚಾತ್ತಾಪ, ಕನಿಕರವೇ ಇಲ್ಲವಾ? ಜಗತ್ತಿನ ಮುಂದೆ ಎಲ್ಲ ವಿವರಗಳಿದ್ದರೂ, ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಪಾತ್ರವಿರಲಿಲ್ಲ ಅಂತೀರಲ್ಲ ಯಾರಿಗೆ ಮಂಕುಬೂದಿ ಎರಚುತ್ತಿದ್ದೀರಿ?
ಶೇಮ್!


- ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.