ಅಂಕಣಗಳು

ಸಂಕ್ರಾಂತಿಯ ನೆಪದಲ್ಲಿ ಮತ್ತೆ ಚಿಗುರಿತು ಸ್ನೇಹ

ಹಾಸ್ಟೆಲ್‌ಗಳಲ್ಲಿ/ಪಿ.ಜಿ.ಗಳಲ್ಲಿ ವಾಸಿಸುವ ಹುಡುಗಿಯರು, ರಜಾ ದಿನಗಳಲ್ಲಿ ಏನು ಮಾಡ್ತಾರೆ? ಹೇಗೆ ಟೈಂ ಪಾಸ್ ಮಾಡ್ತಾರೆ? ಇಂಥ ಕೆಟ್ಟ ...

Published On :

ಹಾಸ್ಟೆಲ್‌ಗಳಲ್ಲಿ/ಪಿ.ಜಿ.ಗಳಲ್ಲಿ ವಾಸಿಸುವ ಹುಡುಗಿಯರು, ರಜಾ ದಿನಗಳಲ್ಲಿ ಏನು ಮಾಡ್ತಾರೆ? ಹೇಗೆ ಟೈಂ ಪಾಸ್ ಮಾಡ್ತಾರೆ? ಇಂಥ ಕೆಟ್ಟ ಕುತೂಹಲದ ಪ್ರಶ್ನೆಗಳು ಹಲವರನ್ನು ಆಗಿಂದ್ದಾಗ್ಗೆ ಕಾಡುತ್ತಲೇ ಇರುತ್ತವೆ. ಅವಕ್ಕೆ ಹೀಗೆ ಉತ್ತರಿಸಬಹುದೇನೋ: ಪಿ.ಜಿ. ಅಥವಾ ಹಾಸ್ಟೆಲ್‌ಗಳು ಊರಿಗೆ ಹತ್ತಿರ ಇದ್ದರೆ ಹಾಗೂ ರಜೆಯ ಅವಧಿ ಹೆಚ್ಚಾಗಿದ್ದರೆ, ಅಂಥ ಸಂದರ್ಭದಲ್ಲಿ ಹೆಚ್ಚಿನವರು ಊರಿನ ಬಸ್ ಹತ್ತಿ ಬಿಡುತ್ತಾರೆ. ರಜೆಯ ಅವಧಿ ಕಡಿಮೆ ಇದ್ದರೆ, ಫ್ರೆಂಡ್ಸ್ ಜೊತೆ ಸಿನಿಮಾ ನೋಡಿ, ಆನಂತರ ಯಾವುದಾದರೂ ಹೋಟೆಲಿನಲ್ಲಿ ಊಟ ಮುಗಿಸಿ ಕತ್ತಲಾಗುವ ಮೊದಲೇ, ರೂಂ ಸೇರಿಕೊಳ್ಳುತ್ತಾರೆ. ಬಾಯ್‌ಫ್ರೆಂಡ್‌ಗಳನ್ನು ಹೊಂದಿರುವ ಹುಡುಗಿಯರು ಪಿಕ್‌ನಿಕ್, ಸಿನಿಮಾ, ಹೋಟೆಲ್, ಪಾರ್ಕ್ ಎಂದೆಲ್ಲಾ ರೌಂಡ್ ಹೋಗುವುದುಂಟು. ಹೀಗೆ ರೌಂಡ್ ಹೋದವರು, ಎಷ್ಟೋ ಬಾರಿ ಹುಡುಗರೊಂದಿಗೆ ಜಗಳ ಮಾಡಿಕೊಂಡು ವಾಪಸ್ ಬರುವುದುಂಟು.
ಈ ಬಾರಿ ಸಂಕ್ರಾಂತಿಗೆ ಊರಿಗೆ ಹೋಗಲೇಬೇಕು ಎಂದುಕೊಂಡಿದ್ದೆ. ಆದರೆ ಸಂಕ್ರಾಂತಿಯ ಹಿಂದಿನ ದಿನ ಆಫೀಸಿಗೆ ರಜೆ ಕೊಡದಿದ್ದರಿಂದ, ಒಂದೇ ದಿನದಲ್ಲಿ ಊರಿಗೆ ಹೋಗಿ ವಾಪಸ್ ಬರುವ ರಗಳೆಯೇ ಬೇಡವೆಂದು ಸುಮ್ಮನಾದೆ. ಅವತ್ತು ಒಬ್ಬಳೇ ಕೂತು, ಹಾಸ್ಟೆಲ್ ಲೈಫ್‌ನ ಬಗ್ಗೆ ಯೋಚಿಸುತ್ತಿದ್ದಾಗ ತಕ್ಷಣವೇ ನೆನಪಾದವಳು ಚಿತ್ರಾ. ಆಕೆ ನನ್ನದೇ ಊರಿನವಳು. ಪಕ್ಕದ ಬೀದಿಯಲ್ಲಿದ್ದವಳು. ದೂರದ ಸಂಬಂಧಿ ಕೂಡ. ನನಗಿಂತ ಎಂಟು ತಿಂಗಳು ದೊಡ್ಡವಳು. ನಾವಿಬ್ಬರೂ ಒಂದೇ ಶಾಲೆಯಲ್ಲಿ ಓದಿದವರು. ಎಸ್ಸೆಸ್ಸೆಲ್ಸಿ ಮುಗೀತಿದ್ದಂತೆಯೇ-ಮನೇಲಿ ಉಳಿಸಿಕೊಂಡ್ರೆ ಅತಿಯಾದ ಮುದ್ದಿನಿಂದ ಮಕ್ಕಳು ಹಾಳಾಗ್ತಾರೆ' ಎಂದು ಅಪ್ಪ ಹಾಸ್ಟೆಲ್‌ಗೆ ಸೇರಿಸಿದರು. ವಿಷಯ ಗೊತ್ತಾದ ತಕ್ಷಣ ಚಿತ್ರಾಳ ಮನೆಯವರೂ ಹಾಗೇ ಮಾಡಿದರು. ಪರಿಣಾಮ, ಅವಳು ಕಾಲೇಜಿನಲ್ಲಿಯೂ ಜೊತೆಯಾದಳು.
ಕಾಲೇಜಿನಲ್ಲಿ ಒಂದೇ ಡೆಸ್ಕ್‌ನಲ್ಲಿ, ಹಾಸ್ಟೆಲ್‌ನಲ್ಲಿ ಒಂದೇ ರೂಮಿನಲ್ಲಿ ಇದ್ದವರು ನಾವು. ನನ್ನನ್ನು ಬಿಟ್ಟು ಅವಳಾಗಲಿ, ಅವಳನ್ನು ಬಿಟ್ಟು ನಾನಾಗಲಿ ಇರುತ್ತಿರಲಿಲ್ಲ. ಒಟ್ಟಿಗೇ ಊಟ, ತಿಂಡಿಗೆ ಹೋಗುತ್ತಿದ್ದೆವು. ಒಂದು ವೇಳೆ ನಾನೇನಾದರೂ ತಡವಾಗಿ ಮಲಗ್ತೇನೆ ಅಂದರೆ, ಅವಳೂ ಎಚ್ಚರವಾಗಿ ಕೂತಿರುತ್ತಿದ್ದಳು. ಇದನ್ನು ಕಂಡವರೆಲ್ಲ, ನಿಮ್ಮದು ಒಂದೇ ಜೀವ, ಎರಡು ದೇಹ ಅನ್ನುತ್ತಿದ್ದರು. ಇವಳಿಗೆ ಕುತ್ತಿಗೆ ಹಿಸುಕಿದ್ರೆ ಅವಳ ಜೀವಾನೂ ಹೋಗಿ ಬಿಡುತ್ತೆ ಎಂದೂ ತಮಾಷೆ ಮಾಡುತ್ತಿದ್ದರು. ಚಿತ್ರಾಳ ಪೊಸೆಸಿವ್‌ನೆಸ್ ಹೇಗಿತ್ತು ಅಂದರೆ, ಸಂಕ್ರಾಂತಿಯಂದೇ ಇದ್ದ ಅವಳ ಹುಟ್ಟುಹಬ್ಬಕ್ಕೆ ನಾನೇ ಮೊದಲು ವಿಷ್ ಮಾಡಬೇಕಿತ್ತು. ಬೇರೆ ಯಾರಾದರೂ ನನಗಿಂತ ಮೊದಲೇ ವಿಷ್ ಮಾಡಲು ಹೋದರೆ, ತಕ್ಷಣವೇ ಕಿವಿ ಮುಚ್ಚಿಕೊಂಡು ಬೇರೆ ಕಡೆಗೆ ಓಡುತ್ತಿದ್ದಳು.
ಈ ನಡುವೆ ಎರಡು ವರ್ಷಗಳು ಕಳೆದವು. ಇಬ್ಬರೂ ಡಿಗ್ರಿಗೆ ಬಂದೆವು. ಆಗಲೇ ನಮ್ಮ ಮಧ್ಯೆ ಕಾಣಿಸಿಕೊಂಡವನು ಪ್ರಶಾಂತ್. ಆತ ಚಿತ್ರಾಳ ಸೋದರ ಸಂಬಂಧಿ. ನಾವು ಓದುತ್ತಿದ್ದ ಕಾಲೇಜಿನಲ್ಲಿಯೇ ಡಿಗ್ರಿ ಕಡೆಯ ವರ್ಷದಲ್ಲಿದ್ದ. ಮುಂದಿನ ಕೆಲವೇ ದಿನಗಳಲ್ಲಿ ಪ್ರಶಾಂತ, ಚಿತ್ರಾಳನ್ನು ಪ್ರೀತಿಸುತ್ತಿದ್ದಾನೆ ಎಂಬ ಸುದ್ದಿ ಬಂತು. ಹಾಗಂತ ಚಿತ್ರಾ ಕೂಡ ಒಪ್ಪಿಕೊಂಡಳು. ಮುಂದೆ ರಜೆ ಬಂದರೆ ಸಾಕು; ಅವನ ಬೈಕ್ ಹತ್ತಿ ಹೋಗಿ ಬಿಡುತ್ತಿದ್ದಳು. ನಂತರದ ಎರಡು ದಿನ ಪ್ರಶಾಂತನದ್ದೇ ಗುಣಗಾನ. ಅವನು ಹಾಗಂದ, ಹೀಗಂದ. ಏನೋ ತರಲೆ ಮಾಡಿದ. ಮತ್ತೇನೋ ಗಿಫ್ಟ್ ಕೊಟ್ಟ... ಇಂಥದೇ ಮಾತು. ಪ್ರೀತಿ ಬಲಿಯತೊಡಗಿದ ಮೇಲೆ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಊಟ -ತಿಂಡಿ ಪ್ರಶಾಂತನ ಜೊತೆಯಲ್ಲಿ ಅಂದಳು ಚಿತ್ರಾ. ನಂತರದ ದಿನಗಳಲ್ಲಿ ಆಕೆ ತಂತಾನೇ ಬದಲಾದಳು. ಮಾತು ಕಡಿಮೆ ಮಾಡಿದಳು. ಯಾವಾಗಲೂ ಫೋನ್‌ನಲ್ಲಿ ಬ್ಯುಸಿ ಆಗಿರುತ್ತಿದ್ದಳು. ನಾನಾಗಿಯೇ ಮಾತಾಡಿಸಿದರೆ ಆಮೇಲೆ ಸಿಕ್ತೇನೆ ಅನ್ನುತ್ತಿದ್ದಳು. ಇಲ್ಲವಾದರೆ ವಿನಾಕಾರಣ ರೇಗುತ್ತಿದ್ದಳು. ಆ ಕ್ಷಣಕ್ಕೆ, ಛೆ. ನಾನು ಒಂಟಿಯಾದೆ ಅನ್ನಿಸಿತು. ಆದರೆ ಚಿತ್ರಾಳ ವರ್ತನೆ ತಪ್ಪು ಎನ್ನಲು ಮನಸ್ಸು ಬರಲಿಲ್ಲ. ಈ ಮಧ್ಯೆ ಅವಳ ಬರ್ತ್‌ಡೇ ಬಂತು. ಅವಳಿಗೆ ಸರ್‌ಪ್ರೈಜ್ ಕೊಡೋಣ ಎಂದು ಕೇಕ್ ತಂದಿಟ್ಟು ಕಾದರೆ, ಆಕೆ ಪ್ರಶಾಂತನ ಜೊತೆ ಯಾವುದೋ ಹೋಟೆಲಿನಲ್ಲಿ ಬರ್ತ್‌ಡೇ ಆಚರಿಸಿಕೊಂಡ ಸುದ್ದಿ ಬಂತು.
ಈ ಸಂದರ್ಭದಲ್ಲಿಯೇ ಹೊಸದಾಗಿ ಹಾಸ್ಟೆಲ್‌ಗೆ ಸೇರಿದವಳು ರೇವತಿ. ಈಕೆ ಬಹಳ ಬೇಗನೆ ನನ್ನ ಮನಸ್ಸು ಗೆದ್ದಳು. ಚಿತ್ರಾಳ ಮೇಲೆ ಅಸಮಾಧಾನವಿತ್ತಲ್ಲ: ಅದೇ ಕಾರಣದಿಂದ ನಾನೂ ರೇವತಿಯನ್ನು ವಿಪರೀತ ಹಚ್ಚಿಕೊಂಡೆ. ಆನಂತರ ಎಷ್ಟೋ ಸಂದರ್ಭಗಳಲ್ಲಿ ಚಿತ್ರಾ ನನಗೆ ನೆನಪಾಗಲೇ ಇಲ್ಲ. ನನ್ನಲ್ಲಿ ಆದ ಬದಲಾವಣೆ ತುಂಬ ಬೇಗನೆ ಅವಳಿಗೂ ಗೊತ್ತಾಯಿತು. ಆಕೆಯೂ ಚೆನ್ನಾಗಿ ಓದುತ್ತಿದ್ದವಳೇ. ಇರಲಿ, ಹೊಸಾ ಫ್ರೆಂಡ್ ಸಿಕ್ಕಿದ್ಲು ಅಂತ ಹೀಗೆಲ್ಲ ಮೆರೀತಾ ಇದ್ದಾಳೆ. ಅವಳಿಗಿಂತ ಜಾಸ್ತಿ ಮಾರ್ಕ್ಸ್ ತಗೊಂಡು ಬುದ್ಧಿ ಕಲಿಸ್ತೀನಿ ಎಂದು ಹಾಸ್ಟೆಲ್‌ನಲ್ಲಿ ಹಲವರೊಂದಿಗೆ ಹೇಳಿಕೊಂಡಳು. ಅವತ್ತು ನಮ್ಮಿಬ್ಬರ ಹುಚ್ಚು ಆವೇಶ ಎಂಥದ್ದಿತ್ತು ಅಂದರೆ, ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಇಬ್ಬರೂ ಒಂದು ರೌಂಡ್ ಜಗಳವನ್ನೂ ಮಾಡಿಬಿಟ್ಟೆವು. ಅದುವರೆಗೂ ನಮ್ಮ ಮಧುರ ಸ್ನೇಹವನ್ನಷ್ಟೇ ಕಂಡಿದ್ದ ಹುಡುಗಿಯರು, ಈ ಹೊಸ ಅವತಾರದಲ್ಲಿ ನಮ್ಮನ್ನು ಕಂಡು ಕಂಗಾಲಾಗಿದ್ದರು. ಈ ಸಂದರ್ಭದಲ್ಲಿ 'ರಾಜಿ' ಮಾಡಿಸಲು ರೇವತಿಯೇ ಮುಂದಾಗಿದ್ದಳು. ಆದರೆ ನಾವಿಬ್ಬರೂ ನನ್ನದೇ ಸರಿ ಎಂದು ಹಠ ಹಿಡಿದು ದೂರವೇ ಉಳಿದೆವು.
ಉಹುಂ, ಆನಂತರದಲ್ಲಿ ನನ್ನೊಂದಿಗೆ ಚಿತ್ರಾ ಮಾತಾಡಲೇ ಇಲ್ಲ. ಕಡೆಯ ವರ್ಷ ಅವಳೇ ಹೆಚ್ಚು ಮಾರ್ಕ್ಸ್ ತೆಗೆದಳು. ಆಗಲೂ ಮಾತಾಡಲಿಲ್ಲ. ಆನಂತರ ಅವಳ ಬದುಕಿಂದ ಪ್ರಶಾಂತ ಎದ್ದು ಹೋಗಿ ಬಿಟ್ಟ. ಈ ಹುಡುಗಿ ಸಂಕಟದಿಂದ ಮಂಗಳೂರು ಸೇರಿ ಉದ್ಯೋಗಕ್ಕೆ ಸೇರಿಕೊಂಡಳು. ಆನಂತರದಲ್ಲಿ ಅವಳೊಂದಿಗೆ ಮಾತಾಡಬೇಕು ಎಂಬ ಹಂಬಲದಿಂದಲೇ ಊರಿಗೆ ಹೋಗುತ್ತಿದ್ದೆ. ಆದರೆ ಆಕೆ ಸಿಗುತ್ತಲೇ ಇರಲಿಲ್ಲ.
ಮೊನ್ನೆ, ಸಂಕ್ರಾಂತಿಯ ರಜೆಯಲ್ಲಿ ಸುಮ್ಮನೇ ಕೂತವಳಿಗೆ ಚಿತ್ರಾಳ ನೆನಪು ಬಿಟ್ಟೂ ಬಿಡದೆ ಕಾಡತೊಡಗಿತು. ಹಳೆಯ ಘಟನೆಗಳು ಅತ್ಲಾಗಿರಲಿ. ಈಗ ನಾನೇ ಮೊದಲು ಮಾತಾಡಿಸಿದರೆ ಅವಮಾನವಂತೂ ಆಗುವುದಿಲ್ಲ ಎಂದುಕೊಂಡು ಮೆನಿ ಮೆನಿ ಹ್ಯಾಪಿ ರಿಟನ್ಸ್ ಆಫ್ ದಿ ಡೇ,  ಹ್ಯಾಪಿ ಬರ್ತ್‌ಡೇ ಎಂದು ಮೆಸೇಜ್ ಕಳಿಸಿದೆ. ಎರಡೇ ನಿಮಿಷಕ್ಕೆ ಆ ಕಡೆಯಿಂದ ಫೋನ್ ಬಂತು. ಮುಂದಿನ ನಲವತ್ತೆಂಟು ನಿಮಿಷ ಚಿತ್ರಾ ಮಾತಾಡಿದಳು. ನಕ್ಕಳು, ಅತ್ತಳು. ಸಾರಿ ಅಂದಳು. ಥ್ಯಾಂಕ್ಸ್ ಹೇಳಿದಳು. ಮಾತು ಮುಗಿಸುವ ಮುನ್ನ -ಲವ್ ಯೂ ಅಂದವಳೇ 'ಪ್ಚ್‌' ಎಂದು ಫೋನ್‌ನಲ್ಲೇ ಒಂದು ಪಪ್ಪಿ ಕೊಟ್ಟಳು!
   ಸಂಕ್ರಾಂತಿಯ ನೆಪದಲ್ಲಿ ಹಳೆಯ ಗೆಳೆತನ ಮತ್ತೆ ಚಿಗುರೊಡೆಯಿತು...

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.