ಅಂಕಣಗಳು

ದೆಹಲಿ ಸಂಘರ್ಷ: ಗೆದ್ದವರು ಯಾರು, ಸೋತವರು ಯಾರು?

ಕಳೆದ ಕೆಲವು ದಿನಗಳಿಂದಲೂ ದೆಹಲಿಯಲ್ಲಿನ ರಾಜಕೀಯ ಚಟುವಟಿಕೆಗಳೇ, ಇಡೀ ದೇಶ...

Published On :

ಕಳೆದ ಕೆಲವು ದಿನಗಳಿಂದಲೂ ದೆಹಲಿಯಲ್ಲಿನ ರಾಜಕೀಯ ಚಟುವಟಿಕೆಗಳೇ, ಇಡೀ ದೇಶದ ಗಮನವನ್ನು ಸೆಳೆದಿದ್ದರಿಂದ ಇತರ ಭಾಗಗಳಲ್ಲಿ ನಡೆದ ಚಟುವಟಿಕೆ ನಗಣ್ಯ ಎನ್ನುವಂತಾಗಿದ್ದು ತೀರ ಸಹಜ. ಆದರೂ, ರಾಜಕೀಯ ನಿಂತ ನೀರಲ್ಲ. ನಿರಂತರವಾಗಿ ಚಲಿಸುವ ವಾಹಿನಿ ಅದು. ಕೇಜ್ರಿವಾಲ ಮತ್ತು ಅವರ ಸಂಗಾತಿಗಳು ಉದ್ದೇಶ ಪೂರ್ವಕವಾಗಿ ದೆಹಲಿಯಲ್ಲಿ ರಂಪ ರಾದ್ಧಾಂತದ ಪರಿಸ್ಥಿತಿಯನ್ನು ನಿರ್ಮಿಸಲಿಲ್ಲ. ಆ ಪರಿಸ್ಥಿತಿ ತಾನಾಗಿ ಉದ್ಭವವಾಗಲೂ ಇಲ್ಲ. ಆಪ್‌ನ ಮಂತ್ರಿಗಳ ವರ್ತನೆ, ಅನಿವಾರ್ಯವಾಗಿ ಪಕ್ಷವನ್ನು ಕೇಂದ್ರ ಸರ್ಕಾರದ ಜತೆ ಸಂಘರ್ಷಕ್ಕೆ ದೂಡಿತ್ತು. ಸಂಘರ್ಷ ಆರಂಭವಾದ ಅನಂತರ ಅದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಿ, ಉದ್ದೇಶಿಸಿದ್ದ ಗುರಿಯನ್ನು ಮುಟ್ಟಿಸುವಷ್ಟು ರಾಜಕೀಯ ಜಾಣ್ಮೆ, ಚಿಂತನ ಶಕ್ತಿ ನಾಯಕರಲ್ಲಿ ಇರಲಿಲ್ಲ. ದೆಹಲಿ ರಾಜ್ಯ ಸರ್ಕಾರದ ಆಳುವ ಪಕ್ಷದ ಒಬ್ಬ ನಾಯಕ (ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ರಾಹುಲ ವಿರುದ್ಧ ಸ್ಪರ್ಧಿಸುತ್ತಾರಂತೆ) ಕೇರಳದ ಮಹಿಳೆಯರನ್ನು, ಪ್ರಧಾನವಾಗಿ ನರ್ಸ್‌ಗಳನ್ನು ಕೀಳು ಭಾಷೆಯಲ್ಲಿ ಚಿತ್ರಿಸಿ, ಅವಹೇಳನಕ್ಕೆ ಗುರಿಯಾಗಿದ್ದರು.
ಇನ್ನೊಬ್ಬ ನಾಯಕ, ಕಾಯಿದೆ ಮಂತ್ರಿ ಸೋಮನಾಥ ಭಾರ್ತಿ, ಅಧಿಕಾರದ ಅಮಲಿನಲ್ಲಿ ಮಧ್ಯರಾತ್ರಿಯ ವೇಳೆಯಲ್ಲಿ ಯಾವುದೋ ಒಂದು ಮನೆಯಲ್ಲಿ ಉಗಾಂಡದ ಕುಟುಂಬವೊಂದು ವೇಶ್ಯಾವೃತ್ತಿ ನಡೆಸುತ್ತಿದೆ ಎಂದು ದೂರಿ, ಪೊಲೀಸರು ಆ ಮನೆಯ ಮೇಲೆ ದಾಳಿ ನಡೆಸಬೇಕೆಂದು ಹಟ ಹಿಡಿದರು. ಅನುಭವದ ಕೊರತೆ, ಇರುವವರ ಕೈಯಲ್ಲಿ ದೆಹಲಿಯ ಆಡಳಿತ ಸಿಕ್ಕಿಬಿದ್ದಿರುವುದು ಇದರಿಂದ ಸ್ಪಷ್ಟವಾಗಿ ಗೋಚರವಾಗಿದೆ. ಈ ಎರಡೂ ಪ್ರಕರಣಗಳನ್ನು ಮುಖ್ಯಮಂತ್ರಿ ಕೇಜ್ರಿವಾಲ ಅವರು ಸ್ವಲ್ಪ ಸಂಯಮದಿಂದ ಇದ್ದರೆ ಸುಲಭವಾಗಿ ನಿಭಾಯಿಸಬಹುದಾಗಿತ್ತು. ಆದರೆ ಅವರೂ ಆಯ ತಪ್ಪಿದ್ದಾರೆ. ದೆಹಲಿಯ ಪೊಲೀಸ್ ವ್ಯವಸ್ಥೆ ರಾಜ್ಯ ಸರ್ಕಾರದ ಉಸ್ತುವಾರಿಗೆ ಒಳಪಡಬೇಕೋ, ಕೇಂದ್ರದ ವಶದಲ್ಲೇ ಇರಬೇಕೋ ಎನ್ನುವ ಸಂಕೀರ್ಣ ಹಾಗೂ ಜಟಿಲ ಸಮಸ್ಯೆಯ ಜತೆ, ಸಣ್ಣ, ಚಿಲ್ಲರೆ ಪ್ರಕರಣಗಳನ್ನು ಜೋಡಿಸಿ, ಕೇಂದ್ರಕ್ಕೆ ಬುದ್ಧಿ ಕಲಿಸಲು ಮುಖ್ಯಮಂತ್ರಿಯ ನೇತೃತ್ವದಲ್ಲೇ ಕೇಂದ್ರ ಸರ್ಕಾರದ ಕಾರ್ಯಾಲಯಗಳಿರುವ ರೈಸೀನಾ ಹಿಲ್ಸ್ ಪ್ರದೇಶದ ಮುತ್ತಿಗೆ, ಧರಣಿಯನ್ನು ಅವರು ರೂಪಿಸಿಕೊಂಡರು. ಇದು ಸ್ಪಷ್ಟವಾಗಿ ಇಲ್ಲದ ಕ್ಯಾತೆ ತೆಗೆದು ಜಗಳವಾಡುವ ಚಟ. ಕೇಜ್ರಿವಾಲ ಅವರಿಗೆ ಸಧ್ಯಕ್ಕೆ ಬೇಕಾಗಿದ್ದೂ ಪ್ರಚಾರ.
ಮುಖ್ಯಮಂತ್ರಿಯೇ ಬೀದಿಯಲ್ಲಿ ಕೂತು ಧರಣಿ, ಸತ್ಯಾಗ್ರಹ ಮಾಡಿದ್ದು ದೇಶದಲ್ಲೇ ಇದೇ ಮೊದಲ ಬಾರಿ ಏನೂ ಅಲ್ಲ. ಪಶ್ಚಿಮ ಬಂಗಾಳದಲ್ಲಿ ಹಿರಿಯ ಗಾಂಧಿವಾದಿ, ಬಂಗ್ಲಾ ಕಾಂಗ್ರೆಸ್ ಸಂಸ್ಥಾಪಕ, ಸಂಯುಕ್ತ ರಂಗದ ಸರ್ಕಾರದ ಮುಖ್ಯಮಂತ್ರಿ ಅಜಯ ಕುಮಾರ ಮುಖರ್ಜಿ 1967 ರಲ್ಲೇ ಅದನ್ನು ಗಾಂಧಿ ಮಾರ್ಗದಲ್ಲಿ ಮಾಡಿ ತೋರಿಸಿದ್ದರು. ಇಡೀ ದೇಶದ ಗೌರವ ಗಳಿಸಿದ್ದರು. ಆದರೆ ಕೇಜ್ರಿವಾಲ ಅವರ ವರ್ತನೆ ಮಾನಸಿಕವಾಗಿ ವಿಧ್ವಂಸಕಾರಿ ಪ್ರವೃತ್ತಿಯ ರೂಪದಲ್ಲಿತ್ತು. ನಕ್ಸಲೀಯರ ಮನೋಧರ್ಮದ ಪ್ರದರ್ಶನವಿತ್ತು. ಪೊಲೀಸ್ ಅಧಿಕಾರಿಗಳನ್ನು ನಿಂತಕಾಲಮೇಲೇ ಸಸ್ಪೆಂಡ್ ಮಾಡಬೇಕು ಎಂದರು. ಜನರನ್ನು ಸೇರಿಸುವ ಪ್ರಯತ್ನವೂ ನಡೆಯಿತು. ಉಳಿದಿದ್ದು ಪೊಲೀಸ್ ಮತ್ತು ಪ್ರದರ್ಶನಕಾರರ ನಡುವಣ ಜಗಳ. ಕೇಜ್ರಿವಾಲರ ನಿಲವನ್ನು ದೇಶದ ಯಾವ ಪ್ರಜ್ಞಾವಂತ ಜನ ಸಮುದಾಯವೂ ಬೆಂಬಲಿಸಲಿಲ್ಲ. ಕೆಲವರು ಗಟ್ಟಿಯಾಗಿಯೇ ಮಾತಾಡಿದರು. ಇನ್ನು ಕೆಲವರು ತಮ್ಮಲ್ಲೇ ಗೊಣಗಾಡಿಕೊಂಡರು. ಕೇಜ್ರಿವಾಲ ಗಣರಾಜ್ಯೋತ್ಸವದ ಉತ್ಸವವನ್ನೇ ತಡೆಯುವ ಮಾತಾಡಿದಾಗ, ಕೇಂದ್ರ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿದೆ ಎನಿಸಿರಬೇಕು. ಕೇಂದ್ರದ ಶಕ್ತಿಯನ್ನು ಎದುರಿಸುವ ಉದ್ದೇಶವಿರಲಿಲ್ಲ. ಕೊನೆಗೆ ಆಪ್‌ಗೆ ಮುಖ ಉಳಿಸಿಕೊಳ್ಳುವ ಅವಕಾಶವನ್ನು ನೀಡಿದ್ದು ದೆಹಲಿಯ ಲೆಫ್ಟಿನೆಂಟ್ ಗವರ್ನರ್. ಅವರ ಸೂತ್ರ; ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ರಜಾದ ಮೇಲೆ ಹೋಗುವಂತೆ ಮಾಡುವುದು. ಅದನ್ನು ಕೇಜ್ರಿವಾಲ ಒಪ್ಪಿದರು. ಜನ ಚದುರುವಾಗ ನೂಕು ನುಗ್ಗಲಿನಲ್ಲಿ ಪೊಲೀಸರು ಜನರನ್ನು ಬಡಿದು ತಮ್ಮ ಚಟ ತೀರಿಸಿಕೊಂಡರು. ಇಲ್ಲಿ ಗೆದ್ದವರು ಯಾರು ?
ಕಾಂಗ್ರೆಸ್ - ಬಿಜೆಪಿ ಮೇಳಗಳು: ದೆಹಲಿಯಲ್ಲಿ ನಡೆದ ಎಐಸಿಸಿ ಅಧಿವೇಶನ ಹಾಗೂ ಬಿಜೆಪಿಯ ರಾಷ್ಟ್ರೀಯ ಮಂಡಳಿಯ ಸಭೆಗಳಲ್ಲಿ ಕೇಳಿ ಬಂದ "ಬೆಂಕಿಯನ್ನು ನುಂಗಿ ಕಪ್ಪು ಹೊಗೆಯನ್ನು ಉಗುಳುವಂತಹ" ಭಾಷಣಗಳಲ್ಲಿ ಸ್ಪಷ್ಟವಾದ ವಿಚಾರ ; ಹೇಗಾದರೂ ಮಾಡಿ, ಏನಾದರೂ ಮಾಡಿ, ಅಧಿಕಾರದ ಸೂತ್ರಗಳನ್ನು ಹಿಡಿಯುವ ಉಭಯ ಪಕ್ಷಗಳ ಸಂಕಲ್ಪ ವಿಕಾರ ಸ್ವರೂಪವನ್ನು ತಳೆದರೂ ತಳೆಯಬಹುದು ಎನ್ನುವುದು. ಕಾಂಗ್ರೆಸ್ ಪಾಳೆಯದಲ್ಲಿ ಮೊದಲ ಬಾರಿಗೆ ಮೈಚಳಿ ಬಿಟ್ಟು, ಉದ್ರೇಕ - ಉದ್ವೇಗದ ಜತೆಯಲ್ಲೇ ಗಂಭೀರ ಚಿಂತನೆ ಆಧರಿತ ವಿಚಾರಗಳನ್ನು ಪ್ರತಿಪಾದಿಸಿದ ರಾಹುಲ ಗಾಂಧಿ ಯಾರ ನೆರವೂ ಇಲ್ಲದೇ ನಾಯಕರು ಕೂಡುವ ಕುರ್ಚಿಯಲ್ಲಿ ಕೂತರು. ಬಿಜೆಪಿ ಪಾಳಯದಲ್ಲಿ, ಪಕ್ಷದ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಪ್ರಚಂಡ - ಪ್ರಖರ ವಾಗ್ಮತೆಯಲ್ಲಿ ವಿಪರೀತವಾದ ವ್ಯಂಗ್ಯವನ್ನು ಬೆರೆಸಿದರು. ಇವರಿಬ್ಬರ ಭಾಷಣಗಳಲ್ಲಿ ಯಾವುದಾದರೊಂದನ್ನು ಆರಿಸಿಕೊಳ್ಳುವ ಆಯ್ಕೆ ಜನರಿಗೆ ಇರಲಿಲ್ಲ. ಎರಡೂ ಭಾಷಣಗಳಲ್ಲಿ ಇದ್ದಿದ್ದು ಹಳೆಯ, ಸವಕಲು ರಾಜಾ ತಲೆಯ ನಾಣ್ಯಗಳ ಕಾಲದ ಚರ್ವಿತ ಚರ್ವಣ (ಅಥವಾ ತೌಡು ಕುಟ್ಟುವ) ಮಾತುಗಳೇ.
ಈ ಭಾಷಣಗಳಲ್ಲಿ ಪ್ರಸ್ತಾಪವಾಗದೇ ಇರುವ ವಿಚಾರ ಎಂದರೆ, ದೇಶದ ಸುಮಾರು ಮೂರನೆಯ ಒಂದು ಭಾಗದಷ್ಟು ಜನ ಕಾಂಗ್ರೆಸ್ ಬಿಜೆಪಿಗಳ ಪ್ರಭಾವಲಯದ ಹೊರಗೇ ಇರುವ ಶಕ್ತಿಗಳ ಜತೆ ಇದ್ದಾರೆ ಎನ್ನುವುದು.  ಆ ವರ್ಗಗಳಿಗೆ ಆಮಿಷವನ್ನು ಒಡ್ಡಲು ಬಿಜೆಪಿ-ಕಾಂಗ್ರೆಸ್‌ಗಳಲ್ಲಿ ಏನೂ ಇಲ್ಲದೇ ಇರುವುದು. ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ನಾಯಕರಲ್ಲಿ ಹೊಸ ಚಿಂತನೆ ಕಂಡು ಬರುತ್ತಿಲ್ಲ. ಅವರ ಮಾತು ಹೊಸದಾಗಿ ಕಾಣಬಹುದು.  ಆದರೆ ಸ್ವಭಾವ ಬದಲಾದಂತಿಲ್ಲ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ಆಂಧ್ರಪ್ರದೇಶಗಳಂತಹ ರಾಜ್ಯಗಳಲ್ಲಿ ಯಾವುದೇ ಸಿದ್ಧಾಂತ-ತತ್ವಗಳನ್ನೂ ಪ್ರತಿಪಾದಿಸದ ಏಕವ್ಯಕ್ತಿ ನಾಯಕತ್ವದ ಪಕ್ಷಗಳನ್ನು ನಿಭಾಯಿಸುವುದಾದರೂ ಹೇಗೆ ಎನ್ನುವುದೇ ಕಾಂಗ್ರೆಸ್-ಬಿಜೆಪಿಗಳ ಚಿಂತೆ-ಚಿಂತನೆಗೆ ಕಾರಣವಾಗಬೇಕಿತ್ತು. ಆದರೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್, ಬಿಜೆಪಿ ಸಮಾವೇಶದಲ್ಲಿ ಅದು ಕಂಡು ಬರಲಿಲ್ಲ. ಬಿಜೆಪಿ ಕೂಟದಲ್ಲಿ ಹಿಂದುತ್ವದ  ಪ್ರಸ್ತಾಪ ಆಗಿದ್ದು, ಕಡಿಮೆ. ಕಾಂಗ್ರೆಸ್‌ನಲ್ಲಿ ಸಮಾಜವಾದದ ಪ್ರಸ್ತಾಪವೇ ಇರಲಿಲ್ಲ.
ಕರ್ನಾಟಕದ ಕತೆ: ಕರ್ನಾಟಕದಲ್ಲಿ ಜೆಡಿಎಸ್ ರಾಷ್ಟ್ರೀಯ ಅಗ್ರೇಸರ, ಮಾಜಿ ಪ್ರಧಾನಿ ದೇವೇಗೌಡರು ಎಲ್ಲರಿಗಿಂತ ಮೊದಲು ರಂಗಪ್ರವೇಶ ಮಾಡಿದ್ದಾರೆ. ದೇವೇಗೌಡರು, ಮತ್ತೊಮ್ಮೆ ತಮ್ಮ ಕನಸಿನ ಮೂರನೆಯ ರಂಗದ ಮಾತನ್ನು ಆಡಲು ಆರಂಭಿಸಿದ್ದಾರೆ. ಮೂರನೆಯ ರಂಗದಲ್ಲಿ ಸೇರಬಹುದಾದ ಮೂರು ಪಕ್ಷಗಳಲ್ಲಿ ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೂವರು ನಾಯಕರು ಇದ್ದಾರೆ. ಅದು ವಾಸ್ತವ. ರಾಜ್ಯದಲ್ಲಿ ಜಾತ್ಯತೀತ ಜನತಾದಳ ಹಿನ್ನಡೆಯನ್ನೂ ಅನುಭವಿಸಿದೆ. ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಕಲ್ಲು ಕಟ್ಟಡವನ್ನು ಪಕ್ಷ ವರ್ಷದ ಕೊನೆಯ ವೇಳೆಗೆ ತೆರವು ಮಾಡಿ ಕಾಂಗ್ರೆಸ್ಸಿಗೆ ಒಪ್ಪಿಸಬೇಕೆಂದು ಸುಪ್ರೀಮ್ ಕೋರ್ಟ್ ಆದೇಶ ನೀಡಿದೆ. ವಿಧಾನಸಭೆಯಲ್ಲಿ ಪ್ರಧಾನ ಪ್ರತಿಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಅದೇನೂ ಜೆಡಿಎಸ್ ಹೊಸದಲ್ಲ. ಆ ಸ್ಥಾನದಿಂದ ಮೇಲೆದ್ದು ಬರಲು ದಶಕಗಳ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗುತ್ತಿಲ್ಲ. ಭಾರತೀಯ ಜನತಾಪಾರ್ಟಿಯಲ್ಲಿ ಚುನಾವಣೆ ಸಮಯದಲ್ಲಿ ಕಂಡು ಬರಬೇಕಾದ ಹಿಂದೆ ಕಂಡು ಬರುತ್ತಿದ್ದ ಉತ್ಸಾಹ ಈಗ ಕಂಡು ಬರುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ಜನತಾಪಕ್ಷವನ್ನು ವಿಸರ್ಜಿಸಿ, ಬಿಜೆಪಿಗೆ ಹಿಂತಿರುಗಿದರೂ, ಅವರನ್ನು ಆದ್ದೂರಿಯಿಂದ ಬರಮಾಡಿಕೊಳ್ಳುವ ಬೃಹತ್ ಸಮಾರಂಭಗಳ ಏರ್ಪಾಟು ಇನ್ನೂ ಆಗಿಲ್ಲ. ಯಡಿಯೂರಪ್ಪ ಅವರ ಬಿಜೆಪಿ ಮರುಪ್ರವೇಶದ ಸಮಾರಂಭದಲ್ಲಿ (ಅದು ನಡೆದಿದ್ದು ಬಿಜೆಪಿ ಕಾರ್ಯಾಲಯದಲ್ಲಿ ದೆಹಲಿಯಿಂದ ಯಾರೂ ಬಂದಿರಲಿಲ್ಲ) ಹೇಳಿಕೊಳ್ಳುವಂತಹ ಉಕ್ಕಿ ಹರಿಯುವ ಉತ್ಸಾಹ ಇರಲಿಲ್ಲ. ಅಲ್ಲಿ ಕೇಳಿ ಬಂದ ಭಾಷಣಗಳಲ್ಲೂ ಅಷ್ಟೇ.
ಯಡಿಯೂರಪ್ಪ ಪುನರಾಗಮನದಿಂದ ಬಿಜೆಪಿಯಲ್ಲಿ ಉಡುಗಿ ಹೋಗಿದ್ದ ಚೈತನ್ಯ ಪಕ್ಷಕ್ಕೆ ಮತ್ತೆ ಬಂದಿದ್ದರೆ, ಅದರ ಲಕ್ಷಣ ಕಾರ್ಯಕರ್ತರಲ್ಲಿನ ಅಂತರಂಗದ ಮಾತುಕತೆಯಲ್ಲಿ ಪ್ರತಿಬಿಂಬಿತವಾಗುತ್ತಿಲ್ಲ. ಅದಕ್ಕೆಲ್ಲ ಇನ್ನೂ ಸಮಯಬೇಕು. ಲೋಕಸಭೆ ಚುನಾವಣೆಯ ಸಿದ್ಧತೆ ಹಾಗೂ ಜನಸಂಪರ್ಕದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ ಎನ್ನುವ ಸಮೀಕ್ಷೆಗಳ ಫಲಿತಾಂಶ ಆಧರಿತ ವರದಿಗಳೇನೋ ಪ್ರಕಟವಾಗಿದೆ. ಆದರೆ ಅದು ಕಾಂಗ್ರೆಸ್ ಕಾರ್ಯಾಲಯದಲ್ಲೇ ಕಂಡು ಬರುತ್ತಿಲ್ಲ. ಮಧ್ಯಮ ಹಂತದ ಕಾಂಗ್ರೆಸ್ ನಾಯಕರಲ್ಲಿ ಬಹುಮಂದಿ, ಚುನಾವಣೆಯಲ್ಲಿನ ಬೆಳವಣಿಗೆಗಳಿಗೂ ತಮಗೂ ಯಾವ ಸಂಬಂಧವೂ ಇಲ್ಲವೇನೋ ಎನ್ನುವ ರೀತಿಯಲ್ಲೇ ವರ್ತಿಸುತ್ತಿದ್ದಾರೆ.  ವಿಧಾನಮಂಡಲದ ಅಧಿವೇಶನದಲ್ಲಿ ಬೆಂಕಿ-ಬೆಳಕಿನ ದರ್ಶನವಾಗುತ್ತೇನೋ ನೋಡಬೇಕಷ್ಟೇ.
ಕಿಡಿಗೇಡಿತನ: ಸಂಸತ್ತು ಹಾಗೂ ವಿಧಾನ ಮಂಡಲಗಳಲ್ಲಿ ಮಹಿಳೆಯರಿಗೆ ಮೀಸಲು ಸ್ಥಾನಗಳ ವಿಧೇಯಕವನ್ನು 1994-95ರಲ್ಲಿ ತಾವೇ ಮಂಡಿಸಿದ್ದಾಗಿ (ಆಗ ಅವರು ಪ್ರಧಾನಿ) ಗೌಡರು ಹೇಳುತ್ತಿದ್ದಾರೆ. ಅದು ನಿಜ. ಆದರೆ ಅದಾದ ಅನಂತರ ಆ ವಿಧೇಯಕದ ವಿಚಾರದಲ್ಲಿ ಅವರು ಕೈಗೊಂಡ ಕ್ರಮವೇನು?

- ಸತ್ಯ

anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.