ಅಂಕಣಗಳು

ಸಾವಿನ ಮನೆ ರಾಜಕೀಯಕ್ಕೆ 'ಬಂಡೆ' ಕೂಡ ಕರಗಬೇಕು!

ಗುಲ್ಬರ್ಗ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಹಾಗೂ ರೌಡಿ ನಿಗ್ರಹ ದಳದ ಸಬ್ ...

ಸಾವಿನ ಮನೆ ರಾಜಕೀಯಕ್ಕೆ 'ಬಂಡೆ' ಕೂಡ ಕರಗಬೇಕು!
Published On :

ಗುಲ್ಬರ್ಗ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಹಾಗೂ ರೌಡಿ ನಿಗ್ರಹ ದಳದ ಸಬ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರ ಸಾವು ಮತ್ತೊಮ್ಮೆ ಅವಕಾಶವಾದಿ ರಾಜಕಾರಣದ ಹೀನ ವ್ಯವಸ್ಥೆಗೆ ಕೈಗನ್ನಡಿ ಹಿಡಿದಿದೆ.
ಒಂದೆಡೆ ಕೋಮುವಾದದ ವೈಭವೀಕರಣ ಎಸ್‌ಐ ಬಂಡೆ ಅವರನ್ನು ಸಾವಿನ ಮನೆಗೆ ತಳ್ಳಿದ್ದರೆ, ಇನ್ನೊಂದೆಡೆ ಕೊಳಕು ಮನಸ್ಸಿನ ರಾಜಕಾರಣಿಗಳು ಈ ಸಾವಿನ ಮನೆಯನ್ನೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಾತ್ರೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಒಬ್ಬರ ಸಾವಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಹಪಹಪಿಸುತ್ತಿದ್ದಾರೆ.
ಹೌದು ಬಂಡೆ ಅವರ ಸಾವು, ಕೋಮುವಾದ ಈ ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೆರೆದಿಟ್ಟಿದೆ. ಈ ಕೋಮುವಾದದ ಕಾರಣಕ್ಕಾಗಿಯೇ ಪೊಲೀಸ್ ಹಾಗೂ ಅಪರಾಧ ಜಗತ್ತಿನ ನಡುವೆ ಹೇಗೆ ಅಪವಿತ್ರ ಮೈತ್ರಿ ಕೂಡ ಏರ್ಪಡಬಲ್ಲದು ಎಂಬುದನ್ನು ಅನಾವರಣಗೊಳಿಸಿದೆ.  ಅಲ್ಲದೇ ಮತಬ್ಯಾಂಕ್ ಕಾಪಿಟ್ಟುಕೊಳ್ಳಲು ರಾಜಕೀಯ ಅಪರಾಧೀಕರಣ ಹೇಗೆ ಸೃಷ್ಟಿಯಾಗುತ್ತದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದೆ. ಪೊಲೀಸ್, ರಾಜಕಾರಣಿಗಳು ಹಾಗೂ ಅಪರಾಧ ಜಗತ್ತಿನವರು ಕೈ ಮಿಲಾಯಿಸಿದರೆ ಎಂತಹ ಅನಾಹುತಗಳು ಸಂಭವಿಸಬಲ್ಲವು ಎಂಬುದನ್ನೂ ನಿರೂಪಿಸಿದೆ.
ಹದಿನೈದು ವರ್ಷಗಳ ಹಿಂದೆ ಮುಂಬೈ ಪೊಲೀಸರಿಂದ ಗಡಿಪಾರಾಗಿ ಗುಲ್ಬರ್ಗದ ರೋಜಾ ಬಡಾವಣೆಗೆ ಬಂದು ಬೀಡುಬಿಟ್ಟಿದ್ದ ಸುಪಾರಿ ಹಂತಕ ಮುನ್ನಾ ದರ್ಬಾದಾರ್ ಗುಂಡಿಗೆ ಎಸ್‌ಐ ಬಂಡೆ ಬಲಿಯಾಗಿದ್ದಾರೆ. ಈ ಸಂದರ್ಭದ ಎನ್‌ಕೌಂಟರ್‌ನಲ್ಲಿ ಮುನ್ನಾ ಕೂಡ ಹತ್ಯೆಯಾಗಿದ್ದಾನೆ ಎಂಬುದು ಬೇರೆ ವಿಚಾರ. ಆದರೆ ಈ ಎನ್‌ಕೌಂಟರ್ ಸಂದರ್ಭದಲ್ಲಿ ಈಶಾನ್ಯ ವಲಯದ ಐಜಿಪಿ ವಜೀರ್ ಅಹಮದ್ ಕೋಮುಪ್ರೇಮವನ್ನು ಮೆರೆಯದಿದ್ದರೆ ಬಂಡೆ ಬದುಕುಳಿಯುತ್ತಿದ್ದರೇನೋ? ಆದರೆ ಪಾತಕಿ ಮುನ್ನಾ ತಮ್ಮದೇ ಕೋಮಿನವನೆಂಬ ಏಕೈಕ ಕಾರಣಕ್ಕೆ ಆತನನ್ನು ಜೀವಂತ ಸೆರೆ ಹಿಡಿಯಲು ಕೊಟ್ಟ ಆದೇಶ ಬಂಡೆ ಅವರನ್ನು ಬಲಿ ತೆಗೆದುಕೊಂಡಿದೆ. ಈ ಕಾರಣಕ್ಕಾಗಿಯೇ ವಜೀರ್ ಈಗ ವಿಚಾರಣೆ ಎದುರಿಸಬೇಕಾಗಿ ಬಂದಿದೆ.
ಈ ಪೊಲೀಸ್, ರಾಜಕೀಯ ಹಾಗೂ ಅಪರಾಧ ಜಗತ್ತಿನ ನಂಟು ಸಮಾಜದ ಸ್ವಾಸ್ಥ್ಯವನ್ನು ಹೇಗೆ ಕದಡಿಸಬಲ್ಲದು ಎಂಬುದಕ್ಕೆ ಬಂಡೆ ಸಾವು ತಾಜಾ ನಿದರ್ಶನ. ಈ ಸಾವಿನ ಸುತ್ತ ನಡೆದಿರುವ ಬೆಳವಣಿಗೆಗಳನ್ನು ಕೂಲಂಕಷವಾಗಿ ನೋಡೋಣ.
ಬಾಂಬೆಯಿಂದ ಬಂದ ರೌಡಿ ಮುನ್ನಾ ಗುಲ್ಬರ್ಗದ ಮುಸ್ಲಿಂ ಜನದಟ್ಟಣೆಯ ರೋಜಾ ಬಡಾವಣೆಯಲ್ಲಿ ನೆಲೆ ಕಂಡುಕೊಂಡಿದ್ದ. ಆದರೆ ಇಲ್ಲಿಗೆ ಬಂದ ನಂತರವೂ ಪಾತಕ ಕೆಲಸಗಳನ್ನು ಬಿಟ್ಟಿರಲಿಲ್ಲ. ರಾಯಚೂರು ಹಾಗೂ ಗುಲ್ಬರ್ಗದಲ್ಲಿ ಆರು ಕೊಲೆ ಪ್ರಕರಣಗಳು ಈತನ ಮೇಲಿದ್ದವು. ಗುಲ್ಬರ್ಗ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯ ಪ್ರಬಲವಾದರೂ ಗುಲ್ಬರ್ಗ ಉತ್ತರದಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚು. ಖಮರುಲ್ ಇಸ್ಲಾಂ ಸ್ಥ್ಥಳೀಯ ಶಾಸಕರು ಹಾಗೂ ಮಂತ್ರಿಯೂ ಹೌದು. ಜಿಲ್ಲಾ ಉಸ್ತುವಾರಿ ಸಚಿವರೂ ಅವರೇ. ವಜೀರ್ ಅಹಮದ್ ಎರಡು ವರ್ಷಗಳ ಹಿಂದೆ ಇಲ್ಲಿಗೆ ಐಜಿಪಿಯಾಗಿ ಬಂದಿದ್ದರು. ಕೋಮುವಾದಿ ಎಂದೇ ಹೆಸರಾಗಿರುವ ವಜೀರ್ ಅವರು ಖಮರುಲ್ ಇಸ್ಲಾಂ ಹಾಗೂ ಮಾಜಿ ಸಂಸದ ಇಕ್ಬಾಲ್ ಅಹಮದ್ ಸರಡಗಿ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಗುಲ್ಬರ್ಗದಲ್ಲಿ ರಾಜಕಾರಣ ಪ್ರೇರಿತ ರಿಯಲ್ ಎಸ್ಟೇಟ್ ವ್ಯವಹಾರದ ಜತೆ ರೌಡಿ ಮುನ್ನಾ ಸಂಪರ್ಕ ಸಾಧಿಸಿದ್ದ. ಬೇರೆ ಬೇರೆ ರಾಜಕಾರಣಿಗಳು ಮುನ್ನಾನನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳುತ್ತಿದ್ದರು. ಆತನಿಗೆ ರಾಜಕಾರಣಿಗಳ ಜತೆ ಬಾಂಧವ್ಯ ಇದ್ದ ಕಾರಣಕ್ಕೆ ಆತನ ಮೇಲಿನ ನಾಲ್ಕು ಕೊಲೆ ಪ್ರಕರಣಗಳು 'ಸಾಕ್ಷ್ಯಾಧಾರದ' ಕೊರತೆ ಹಿನ್ನೆಲೆಯಲ್ಲಿ ವಜಾ ಆಗಿವೆ. ಇಂಥ ಸಂದರ್ಭದಲ್ಲೇ ಎಸ್‌ಐ ಮಲ್ಲಿಕಾರ್ಜುನ ಬಂಡೆ ಐದು ತಿಂಗಳ ಹಿಂದಷ್ಟೇ ಸ್ಟೇಷನ್ ಬಜಾರ್ ಠಾಣೆಗೆ ವರ್ಗವಾಗಿ ಬಂದಿದ್ದರು. ಇವರು ಲಿಂಗಾಯತ ಸಮುದಾಯಕ್ಕೆ ಸೇರಿದವರು.
ಗುಲ್ಬರ್ಗ ಸಿಟಿಯಲ್ಲಿ ಎಂಟು ಪೊಲೀಸ್ ಠಾಣೆಗಳಿವೆ. ಈ ಪೈಕಿ ನಾಲ್ಕರಲ್ಲಿ ಪರಿಶಿಷ್ಟ ಹಾಗೂ ಮೂರರಲ್ಲಿ ಮುಸ್ಲಿಂ ಸಮುದಾಯದ ಅಧಿಕಾರಿಗಳು, ಸಿಬ್ಬಂದಿಯದೇ ಪಾರುಪತ್ಯ. ಕೋಮು ಹಾಗೂ ಜಾತಿ ವ್ಯಾಮೋಹದ ಕಾರಣಕ್ಕೆ ಸ್ಥಳೀಯ ರಾಜಕಾರಣಿಗಳು ತಮಗೆ ಬೇಕಾದವರನ್ನು ಇಲ್ಲಿಗೆ ವರ್ಗಾವಣೆ ಮಾಡಿಸಿ, ಇರಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲೆಲ್ಲ ಕೋಮು ಹಾಗೂ ಜಾತಿ ಆಧಾರಿತ ನೆಟ್‌ವರ್ಕ್ ಕೆಲಸ ಮಾಡುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆಯೇ ಸರಿ.
ಈ ಐಜಿಪಿ ವಜೀರ್ ಅಹಮದ್ ಎಷ್ಟರ ಮಟ್ಟಿಗೆ ಕೋಮುವಾದಿ ಎಂಬುದಕ್ಕೆ ಇಲ್ಲಿ ಮತ್ತೊಂದು ನಿದರ್ಶನವಿದೆ. ಸಾಮಾನ್ಯವಾಗಿ ರೌಡಿಗಳನ್ನು ರೌಡಿ ಪಟ್ಟಿಯಿಂದ ಕೈ ಬಿಡುವುದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್‌ಪಿ) ಅವರ ಕರ್ತವ್ಯ ವ್ಯಾಪ್ತಿಗೆ ಬರುತ್ತದೆ. ಅದೊಮ್ಮೆ ಗುಲ್ಬರ್ಗ ಎಸ್ಪಿ ಊರಿಗೆ ತೆರಳಿದ್ದ ಸಂದರ್ಭ ಸಾಧಿಸಿ ವಜೀರ್ ಅಹಮದ್ ಅವರು ಒಂದೇ ಠಾಣೆ ವ್ಯಾಪ್ತಿಯ 11 ಮಂದಿ ರೌಡಿಗಳನ್ನು ರೌಡಿಪಟ್ಟಿಯಿಂದ ತೆಗೆಸಿ ಹಾಕಿ ಆದೇಶ ಹೊರಡಿಸಿದ್ದಾರೆ. ಹೀಗೆ ರೌಡಿಪಟ್ಟಿಯಿಂದ ಬಿಡುಗಡೆ ಆದವರೆಲ್ಲರೂ ವಜೀರ್ ಅಹಮದ್ ಅವರ ಸಮುದಾಯಕ್ಕೆ ಸೇರಿದವರು ಎಂಬುದು ಕಾಕತಾಳೀಯ ಅಲ್ಲ.
ಅವ ರಾಜಕಾರಣಿ ಆಗಿರಲಿ, ಅಧಿಕಾರಿ ಆಗಿರಲಿ ಅಥವಾ ಯಾವುದೇ ವ್ಯಕ್ತಿ ಆಗಿರಲಿ ಜಾತಿ ಹಾಗೂ ಕೋಮು ಪ್ರೇಮವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕೇ ಹೊರತು ಹೀಗೆ ಸರಕಾರಿ ಸೇವೆಯಲ್ಲಿ, ಕರ್ತವ್ಯಪಾಲನೆಯಲ್ಲಿ ಮೆರೆಯುವುದೇ...? ಇದು ಕರ್ತವ್ಯ ಲೋಪ ಆಗುವುದಿಲ್ಲವೇ...? ತನ್ನ ವೈಯಕ್ತಿಕ ರಾಗ-ದ್ವೇಷಗಳನ್ನು ಸರಕಾರಿ ಸೇವೆಯ ಮೂಲಕ ದುರ್ಬಳಕೆ ಮಾಡಿಕೊಂಡರೆ ಈ ಸಮಾಜದ ಗತಿ ಏನಾಗಬೇಡ? ಪಾತಕಿ ಮುನ್ನಾ ಕೈಯಲ್ಲಿ ಪಿಸ್ತೂಲು ಇರುವುದು ಗೊತ್ತಿದ್ದು, ಆತನೊಬ್ಬ ಹಂತಕ ಎಂಬುದು ತಿಳಿದಿದ್ದೂ ಆತನನ್ನು ಜೀವಂತ ಸೆರೆ ಹಿಡಿಯಿರಿ ಎಂದು ಕಾರ್ಯಾಚರಣೆ ನಿರತ ಪೊಲೀಸರಿಗೆ ವಜೀರ್ ಅಹಮದ್ ಆದೇಶ ಕೊಟ್ಟದ್ದು ಎಷ್ಟರ ಮಟ್ಟಿಗೆ ಸರಿ? ಸೂಕ್ಷ್ಮ ಸಂದರ್ಭದಲ್ಲಿ ಅವರು ಅವಿವೇಕದ ಆದೇಶ ಕೊಟ್ಟಿದ್ದರಿಂದಲೇ ಬಂಡೆ ಪ್ರಾಣ ಕಳೆದುಕೊಳ್ಳಬೇಕಾಗಿ ಬಂತು. ಒಂದು ಅಮಾಯಕ ಜೀವ ಕೋಮು ಪ್ರೇಮಕ್ಕೆ ಬಲಿಯಾಗಿದೆ.
ಇನ್ನು ಬಂಡೆ ತಲೆಗೆ ಗುಂಡು ಬಿದ್ದು ಅವರು ಸಾವನ್ನಪ್ಪುವ ನಡುವಿನ ಒಂದು ವಾರದ ಅವಧಿಯಲ್ಲಿ ನಡೆದ ಬೆಳವಣಿಗೆಗಳು ಹಾಗೂ ರಾಜಕಾರಣಿಗಳು ಈ ಪ್ರಕರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಯತ್ನಿಸಿದ್ದನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಗುಂಡು ಬಿದ್ದ ರಭಸಕ್ಕೆ ಬಂಡೆ ಅವರ ಮಿದುಳು ಪಲ್ಲಟವಾಗಿದ್ದರಿಂದ ಬದುಕುವ ಯಾವುದೇ ಲಕ್ಷಣಗಳಿರಲಿಲ್ಲ. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರ ಪ್ರಕಾರ ಅದಾಗಲೇ ಬಂಡೆ ಮಿದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು, ಕೃತಕ ವ್ಯವಸ್ಥೆಯಿಂದ ಉಸಿರಾಡುತ್ತಿದ್ದರು ಅಷ್ಟೇ. ಲಂಡನ್, ಅಮೆರಿಕ ಎಲ್ಲಿಗೆ ಕರೆದೊಯ್ದರೂ ಬದುಕುತ್ತಿರಲಿಲ್ಲ. ಆದರೂ ಈ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್, ಪ್ರತಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಡೆದುಕೊಂಡ ರೀತಿ ಆಕ್ಷೇಪಾರ್ಹ. ಎಲ್ಲರೂ ಕೂಡ ಮುಂದಿನ ಲೋಕಸಭೆ ಹಾಗೂ ಈಶಾನ್ಯ ಶಿಕ್ಷಕ ಮತ ಕ್ಷೇತ್ರದ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡೇ ಬಂಡೆ ಸಾವಲ್ಲಿ ರಾಜಕೀಯ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಬೆಳಗಾವಿಯ ಸುವರ್ಣ ಸೌಧದ ಮುಂದೆ ರೈತ ವಿಠ್ಠಲ್ ಭೀಮಪ್ಪ ಅರಭಾವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾಗಲೂ ಈ ರಾಜಕಾರಣಿಗಳು ರೇಜಿಗೆ ಹುಟ್ಟಿಸುವಂತೆ ಆತನ ಸಾವಿನಲ್ಲೂ ರಾಜಕೀಯ ಮಾಡಿದ್ದರು. ಈಗಲೂ ಅಷ್ಟೆ, ಇವರ್ಯಾರಿಗೂ ಬಂಡೆ ಅವರ ಸಾವಿನ ಬಗ್ಗೆಯಾಗಲಿ ಅವರ ಕುಟುಂಬದ ಸದಸ್ಯರಿಗೆ ಆಗಿರುವ ನಷ್ಟದ ಬಗ್ಗೆಯಾಗಲಿ ಕಿಂಚಿತ್ತು ನೋವಿಲ್ಲ. ಬದಲಿಗೆ ಸಾವನ್ನು ಮುಂದಿಟ್ಟುಕೊಂಡು ಹೇಗೆ ಮತಗಳನ್ನು ಲಪಟಾಯಿಸಬಹುದು ಎಂದು ಹೊಂಚು ಹಾಕುತ್ತಿದ್ದಾರೆ. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ.
ವಾಸ್ತವವಾಗಿ ಗುಲ್ಬರ್ಗದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಅಸ್ತಿತ್ವ ಕಂಡುಕೊಂಡಿದ್ದರೂ ಕಾಂಗ್ರೆಸ್‌ದೇ ಪ್ರಾಬಲ್ಯ. ರಾಜಕೀಯ ಕಾರಣಕ್ಕಾಗಿಯೇ ಕಾಂಗ್ರೆಸ್ ಮೌನಕ್ಕೆ ಶರಣಾಗಿದ್ದರೆ ಬಿಜೆಪಿ ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದೆ. ಮಾಜಿ ಮಂತ್ರಿ ರೇವೂನಾಯಕ ಬೆಳಮಗಿ ಸಂಸತ್ ಚುನಾವಣೆ ಮೇಲೂ, ಶಶಿಲ್ ನಮೋಶಿ ಈಶಾನ್ಯ ಶಿಕ್ಷಕ ಮತಕ್ಷೇತ್ರದ ಚುನಾವಣೆ ಮೇಲೆ ಕಣ್ಣಿಟ್ಟು ಈ ಪ್ರಕರಣವನ್ನು ಎಳೆದಾಡುತ್ತಿದ್ದಾರೆ. ಬಿಜೆಪಿಯ ಹೋರಾಟ ಮತ್ತು ಹಾರಾಟದ ಹಿಂದೆ ಮತ ರಾಜಕೀಯ ಕೇಂದ್ರೀಕೃತವಾಗಿದೆ. ಕಾಂಗ್ರೆಸ್ ನಾಯಕರಂತೂ ಉಸಿರೆತ್ತಿದ್ದರೆ ಎಲ್ಲಿ ಅಲ್ಪಸಂಖ್ಯಾತರ ಮತಗಳು ಕೈ ತಪ್ಪಿ ಹೋಗುತ್ತವೋ ಎಂದು ತುಟಿಗೆ ಹೊಲಿಗೆ ಹಾಕಿಕೊಂಡಿದ್ದಾರೆ. ಅದು ಮಾಜಿ ಸಿಎಂ ಧರ್ಮಸಿಂಗ್ ಇರಬಹುದು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿರಬಹುದು. ಸಚಿವ ಖಮರುಲ್ ಇಸ್ಲಾಂ ಇರಬಹುದು. ಬಂಡೆ ಆಸ್ಪತ್ರೆಯಲ್ಲಿದ್ದಾಗ ಖರ್ಗೆ ಅವರು ಗುಲ್ಬರ್ಗಕ್ಕೆ ಎರಡು ಬಾರಿ ಬಂದು ಹೋದರು. ಒಂದೇ ಒಂದು ಮಾತಾಡಲಿಲ್ಲ. ಕಾಂಗ್ರೆಸ್‌ನ ಉಳಿದ ನಾಯಕರೂ ಸೊಲ್ಲೆತ್ತಲಿಲ್ಲ. ಬೇರೆಯವರು ಮಾತಾಡದಿದ್ದಾಗ ತಾವೇಕೆ ಮಾತಾಡಿ ತಮ್ಮ ಸಮುದಾಯದವರನ್ನ ಎದುರು ಹಾಕಿಕೊಳ್ಳಬೇಕು ಎಂದು ಖಮರುಲ್ ಇಸ್ಲಾಂ ಕೂಡ ಕಮಕ್-ಕಿಮಕ್ ಎನ್ನಲಿಲ್ಲ. ಜೆಡಿಎಸ್ ನಾಯಕರು ಮಾತಾಡಿದರೂ ಬಿಜೆಪಿಯಷ್ಟು ಭರಾಟೆ ಇರಲಿಲ್ಲ. ಮೌನದಲ್ಲೂ ರಾಜಕೀಯ. ಸಚಿವ ಡಾ॥ ಶರಣ ಪ್ರಕಾಶ ಪಾಟೀಲ, ಶಾಸಕರಾದ ಪ್ರಿಯಾಂಕ ಖರ್ಗೆ, ಅಜೇಯ್‌ಸಿಂಗ್, ಡಾ॥ ಉಮೇಶ್ ಜಾದವ್, ಮಾಲೀಕಯ್ಯ ಗುತ್ತೇದಾರ್ ಎಲ್ಲರೂ ಮೌನದ ಮೊರೆ ಹೋದರು. ಬಂಡೆ ಪರ ಮಾತಾಡಿದರೆ ಮುಸ್ಲಿಂ ಮತದಾರರು ಕೋಪ ಮಾಡಿಕೊಳ್ಳಬಹುದು ಎಂದು. ಒಂದೆಡೆ ಮೌನದಲ್ಲೂ ರಾಜಕೀಯ ಇನ್ನೊಂದೆಡೆ ಮಾತಿನಲ್ಲೂ ರಾಜಕೀಯ.
ಇಲ್ಲಿ ಇನ್ನೂ ಒಂದು ವಿಚಾರವಿದೆ. ಎನ್‌ಕೌಂಟರ್ ಸಂದರ್ಭ ಬಂಡೆ ಅವರು ಗಾಯಗೊಂಡದ್ದು ಜನವರಿ 8 ರಂದು. ನಂತರ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಜನವರಿ 14 ರಂದೇ ಅವರು ಸಾವನ್ನಪ್ಪಿದ್ದರೂ ಈದ್‌ಮಿಲಾದ್ ಹಬ್ಬದ ಸಂದರ್ಭದಲ್ಲಿ ಇದನ್ನು ಪ್ರಕಟಿಸಿದರೆ ಗಲಭೆಗೆ ಆಸ್ಪದ ಆಗಬಹುದು ಎನ್ನುವ ಕಾರಣಕ್ಕೆ ಸಾವಿನ ಘೋಷಣೆಯನ್ನು ಮುಂದಕ್ಕೆ ಹಾಕಲಾಗಿದೆ. ಹಬ್ಬ ಮುಗಿದ ನಂತರ ಮಧ್ಯರಾತ್ರಿ ವೇಳೆಗೆ ಸಾವನ್ನು ಪ್ರಕಟಿಸಲಾಯಿತು. ಉದ್ದೇಶವೇನೋ ಒಳ್ಳೆಯದೇ. ಆದರೆ ಒಂದು ಸಾವು ವ್ಯವಸ್ಥೆಯನ್ನು ಅಣಕ ಮಾಡುವಷ್ಟರ ಮಟ್ಟಿಗೆ ಹೇಗೆ ಬಳಕೆ ಆಗಬಲ್ಲದು ಎಂಬುದನ್ನೂ ಇದು ತೋರಿಸುತ್ತದೆ. ಮನುಷ್ಯ ಮನಸ್ಸು ಮಾಡಿದರೆ ಹೀಗೂ ಸಾವನ್ನು ಮುಂದಕ್ಕೆ ಹಾಕಬಹುದು.
ಬಂಡೆ ಅವರಿಗೆ ಆಗಿದ್ದ ಗಾಯಗಳ ಸ್ವರೂಪವನ್ನು ನೋಡಿದಾಗ ಯಾರು ಏನು ಮಾಡಿದ್ದರೂ ಅವರನ್ನು ಉಳಿಸಿಕೊಳ್ಳಲು ಆಗುತ್ತಿರಲಿಲ್ಲ ಎಂಬುದು ನಿಜ. ಇದರಲ್ಲಿ ಸರ್ಕಾರ ಸರಿಯಾಗಿ, ಸರಿಯಾದ ಕಾಲಕ್ಕೆ ಚಿಕಿತ್ಸೆ ಕೊಡಿಸಲಿಲ್ಲ ಎಂಬ ಆಪಾದನೆ ನಿಜಕ್ಕೂ ಬೋಗಸ್, ಆದರೆ ಬಂಡೆ ಅವರು ಬಲಿಯಾಗಿದ್ದು ಮಾತ್ರ ಇದೇ ಸರ್ಕಾರದ ದೋಷಯುಕ್ತ ವ್ಯವಸ್ಥೆಗೆ. ಸರ್ಕಾರದ ಪ್ರತಿನಿಧಿಯಾಗಿದ್ದ ಐಜಿಪಿ ವಜೀರ್ ಅಹಮದ್ ಅವರಂಥವರ ಮೂರ್ಖ ಆದೇಶಕ್ಕೆ. ವ್ಯವಸ್ಥೆ ಹಾಗೂ ಆದೇಶವನ್ನು ಯಾವಾಗ ಬೇಕಾದರೂ ಸರಿಪಡಿಸಿಕೊಳ್ಳಬಹುದು. ಆದರೆ ಬಂಡೆ ಅವರ ಅಮೂಲ್ಯ ಜೀವನವನ್ನು ವಾಪಸ್ಸು ತರಲು ಸಾಧ್ಯವಿಲ್ಲ. 60 ಲಕ್ಷ ಅಲ್ಲ 60 ಕೋಟಿ ರುಪಾಯಿ ಪರಿಹಾರ ಕೊಟ್ಟರೂ ಸಹ...!
ಲಗೋರಿ: ಸಾವು ಎಲ್ಲರ ಮನೆ ಕದ ತಟ್ಟುತ್ತದೆ ಎನ್ನುವುದನ್ನು ರಾಜಕಾರಣಿಗಳು ಮರೆಯಬಾರದು.



- ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.