'ಟ್ಯಾಂಗೋ' ಶಾಸಕರೇ, ಇದ್ಯಾವ ಸೀಮೆ ಅಧ್ಯಯನ ಪ್ರವಾಸ?!
ಬರಗಾಲ ಬಂದಿದೆ ಅಂತ ಜನ ಊಟ ಮಾಡೋದು ಬಿಟ್ಟಿದ್ದಾರಾ?...

ಬರಗಾಲ ಬಂದಿದೆ ಅಂತ ಜನ ಊಟ ಮಾಡೋದು ಬಿಟ್ಟಿದ್ದಾರಾ? ನಿದ್ದೆ ಮಾಡೋದು ಬಿಟ್ಟಿದ್ದಾರಾ? ಮದುವೆ ಮಾಡೋದು ಬಿಟ್ಟಿದ್ದಾರಾ? ಮನೆ ಕಟ್ಟೋದು ಬಿಟ್ಟಿದ್ದಾರಾ? ರೋಡಿಗೆ ಟಾರು ಹಾಕೋದು ಬಿಟ್ಟಿದ್ದಾರಾ? ಇಲ್ವಲ್ಲಾ...? ಹಾಗಿದ್ರೆ ನಾವ್ಯಾಕ್ರೀ ಫಾರಿನ್ ಟೂರ್ ಮಾಡ್ಬಾರ್ದು...?
ಈ ಸೊಕ್ಕಿನ ಮಾತನ್ನ ಯಾರೋ ಖಾಸಗಿ ವ್ಯಕ್ತಿ ಹೇಳಿದ್ರೆ ಪರ್ವಾಗಿರಲಿಲ್ಲ. ಅವರ ದುಡ್ಡು, ಅವರ ಟೂರು. ಫಾರಿನ್‌ಗಾದ್ರೂ ಹೋಗ್ಲಿ, ಬಾಹ್ಯಾಕಾಶಕ್ಕಾದ್ರೂ ಹಾರಿ ಬರಲಿ ಅಂಥ ಸುಮ್ಮನಾಗಬಹುದಿತ್ತು. ಆದರೆ ಇದನ್ನು ಹೇಳಿದವರು ಒಬ್ಬ ಜನಪ್ರತಿನಿಧಿ. ಜನರ ಸೇವೆಗೆ ತಮ್ಮ ಜೀವನ ಮುಡಿಪು ಅಂಥ ಶಪಥ ಮಾಡಿ ಚುನಾವಣೆಯಲ್ಲಿ ಆರಿಸಿ ಬಂದು, ಇದೀಗ ಜನರ ದುಡ್ಡಲ್ಲೇ ವಿದೇಶ ಪ್ರವಾಸ ಮಾಡಿಕೊಂಡು ಬಂದ ಹಿರಿಯ ಕಾಂಗ್ರೆಸ್ಸಿಗ, ಶಾಸಕ ಬಿ.ಆರ್. ಯಾವಗಲ್. ಅಲ್ಪಸಂಖ್ಯಾತ ಮತ್ತು ಹಿಂದುಳಿದವರ ಕಲ್ಯಾಣ ಸಮಿತಿ ಅಧ್ಯಕ್ಷರೂ ಆಗಿರುವ ಯಾವಗಲ್ ಜತೆ ಹನ್ನೆರಡು ಮಂದಿ ಎಂಎಲ್‌ಎ, ಎಂಎಲ್‌ಸಿಗಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಬಂದಿದ್ದಾರೆ. ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಅಧ್ಯಯನದ ನೆಪದಲ್ಲಿ ಫಾರಿನ್ ಟೂರ್ ಮುಗಿಸಿ ಬಂದ ಶಾಸಕರ ತಂಡದ ನಾಯಕರೂ ಆದ ಯಾವಗಲ್ ಆಗಿರುವ ಪ್ರಮಾದವನ್ನು ಸಮರ್ಥಿಸಿಕೊಳ್ಳುತ್ತಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯವೇ ತಲೆ ತಗ್ಗಿಸಿ ನಿಂತಂತಾಗಿತ್ತು.
ಹೌದು, ಯಾವಗಲ್ ಹೇಳಿರುವಂತೆ ಜನ ಯಾವುದನ್ನೂ ಬಿಟ್ಟಿಲ್ಲ. ಆದರೆ ಮನೆ, ಮದುವೆ, ರಸ್ತೆ, ಕುಡಿವ ನೀರು - ಇವೆಲ್ಲವೂ ಅವರ ದೈನಂದಿನ ಆದ್ಯತೆ. ಮೂಲಸೌಕರ್ಯ ಪಡೆಯುವುದು ಮೂಲಭೂತ ಹಕ್ಕೂ ಹೌದು. ಜನ ಏನು ಯಾವಗಲ್ ಅಥವಾ ಅವರ ಜತೆ ಹೋಗಿದ್ದ ಶಾಸಕರ ದುಡ್ಡಲ್ಲಿ ಊಟ ಮಾಡುತ್ತಾ ಇಲ್ಲ. ಮದುವೆಗೆ ಇವರ ದುಡ್ಡು ನೆಚ್ಚಿಕೊಂಡಿಲ್ಲ. ಮನೆ ಕಟ್ಟಲು ಇವರ ಬಳಿ ಕೈಚಾಚಿಲ್ಲ. ಅವರವರ ದುಡ್ಡಲ್ಲಿ ಅವರವರ ಶಕ್ತಿ-ಯೋಗ್ಯತೆಗೆ ಅನುಗುಣವಾಗಿ ತಮ್ಮ ಸೌಕರ್ಯಗಳನ್ನು ತಾವು ಮಾಡಿಕೊಳ್ಳುತ್ತಿದ್ದಾರೆ. ಆದರೆ ಯಾವಗಲ್ ನೇತೃತ್ವದ ಶಾಸಕರ ತಂಡ ವಿದೇಶ ಪ್ರವಾಸ ಮಾಡಿಕೊಂಡು ಬಂದದ್ದು ಮಾತ್ರ ಇದೇ ಜನಸಾಮಾನ್ಯರ ದುಡ್ಡಲ್ಲಿ. ಹೀಗಾಗಿ ಜನರಿಗೆ ಇವರನ್ನು ಕೊರಳ ಪಟ್ಟಿ ಹಿಡಿದು ಕೇಳುವ ಹಕ್ಕಿದೆ. ಪ್ರಶ್ನೆ ಮಾಡುವ ಅಧಿಕಾರವಿದೆ. ಶಾಸಕರು ತಮ್ಮ ದುಡ್ಡಲ್ಲಿ ಯಾತ್ರೆಯನ್ನೋ, ಜಾತ್ರೆಯನ್ನೋ ಮಾಡಿಕೊಂಡು ಬಂದಿದ್ದರೆ ಯಾರೂ ಕೇಳುತ್ತಿರಲಿಲ್ಲ. ಆದರೆ ಅಧ್ಯಯನ ಪ್ರವಾಸದ ನೆಪದಲ್ಲಿ ಮೋಜು-ಮಸ್ತಿ ಮಾಡಿಕೊಂಡು ಬಂದು, ನೀವ್ಯಾರ್ರೀ ಕೇಳೋಕ್ಕೆ ಅಂದರೆ ಇವರ ಆಹಂಕಾರ, ಹಮ್ಮು-ಬಿಮ್ಮು ಎಷ್ಟಿರಬೇಡ?
ಹೋಗಲಿ, ಇವರು ಮಾಡಿಕೊಂಡು ಬಂದ ಅಧ್ಯಯನ ಎಂಥಾದ್ದಪ್ಪಾ..? ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಇವರು ಅರಸಿದ ಪರಿ ಹೇಗೆ ಎಂಬುದನ್ನು ಒಮ್ಮೆ ಪರಾಂಬರಿಸಿ ನೋಡಬೇಕು. ಪ್ರವಾಸ ಕಾರ್ಯಕ್ರಮ ಪಟ್ಟಿಯಲ್ಲಿ ಮಿರಿಮಿರಿ ಮಿಂಚುತ್ತಿದ್ದ 'ಟ್ಯಾಂಗೋ ಡ್ಯಾನ್ಸ್' ಶಾಸಕರ ಅಧ್ಯಯನ ಅದ್ಯಾವ ಶೈಲಿಯಲ್ಲಿ ನಡೆದಿದೆ ಎಂಬುದಕ್ಕೆ ಸಿಂಪಲ್ ನಿದರ್ಶನ. ಟ್ಯಾಂಗೋ ಡ್ಯಾನ್ಸ್ ಎಂಬುದು ಆಫ್ರಿಕಾದ ಬುಡಕಟ್ಟು ಜನಾಂಗವೊಂದರ ನೃತ್ಯ. ಪ್ರವಾಸೋದ್ಯಮ ಸಂಸ್ಥೆಗಳು ತಮ್ಮ ಮಾರುಕಟ್ಟೆ ವಿಸ್ತಾರಕ್ಕಾಗಿ ಈ ನೃತ್ಯವನ್ನು ತಾವು ಆಯೋಜಿಸುವ ವಿದೇಶ ಪ್ರವಾಸಗಳಿಗೂ ಸೇರಿಸಿಬಿಟ್ಟಿವೆ. ಬುಡಕಟ್ಟು ಯುವತಿಯರು ನರ್ತನ ಮಾಡುತ್ತಾ, ಮಾಡುತ್ತಾ ನಗ್ನರಾಗಿ ಬಿಡುತ್ತಾರೆ. ಇದು ಟ್ಯಾಂಗೋ ಡ್ಯಾನ್ಸ್ ನ 'ಮುಖ್ಯಾಂಶ'. ನಮ್ಮ ಶಾಸಕರು ಮಜವಾಗಿ ಈ ಡ್ಯಾನ್ಸ್ ನೋಡಿಕೊಂಡು ಬಂದಿದ್ದಾರೆ. ಹೇಗಿದೆ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಕೈಗೊಂಡ ಅಧ್ಯಯನ ಪ್ರವಾಸದ ಗಮ್ಮತ್ತು? ಇಂಥ ಟ್ಯಾಂಗೋ ಡ್ಯಾನ್ಸ್ ನೋಡುವುದರಿಂದ ಶೋಷಿತರ ಅಭಿವೃದ್ಧಿ, ರಾಜ್ಯದ ಪ್ರಗತಿ ಆಗುತ್ತದೆಯೇ? ತಾವು ಜನಪ್ರತಿನಿಧಿ ಎಂಬುದನ್ನು ಮರೆತು ಬರ್ಮುಡಾ ಚಡ್ಡಿ, ಟೀಶರ್ಟ್ ಹಾಕ್ಕೊಂಡು ಸ್ಟೈಲಾಗಿ ವಿದೇಶದಿಂದ ಬಂದಿಳಿದ ಎಪ್ಪತ್ತರ ಹರೆಯದ ಯಾವಗಲ್ ಅವರೇ ಹೇಳಬೇಕು.
ಹಾಗೆಂದು ಶಾಸಕರು ವಿದೇಶ ಪ್ರವಾಸ ಮಾಡಲೇಬಾರದು ಎಂದೇನೂ ಅಲ್ಲ. ವಾಸ್ತವವಾಗಿ ಶಾಸಕರಿಗೆ ಸಂಬಳ, ಸಾರಿಗೆ, ನಾನಾ ಭತ್ಯೆಗಳು ಸೇರಿದಂತೆ ಹಲವು ಸವಲತ್ತುಗಳು ಇವೆ. ವಿದೇಶ ಪ್ರವಾಸವನ್ನೂ ಈ ಸವಲತ್ತುಗಳ ಅಡಿ ಸೇರಿಸಿಬಿಟ್ಟರೆ ಆಯಿತು. ಆದರೆ ಅಧ್ಯಯನದ ನೆಪದಲ್ಲಿ, ಕಲಿಕೆ ಸೋಗಿನಲ್ಲಿ ವಿದೇಶಗಳಿಗೆ ಭೇಟಿ ಕೊಡುವುದು ಬೇಡ. ಮೋಜು ಮಾಡುವುದು ಬೇಡ. ಮೋಜು-ಮಸ್ತಿಗಾಗಿಯೇ ಹೋಗಿ ಬರಲಿ. ಜನರಿಗೂ ಒಂದು ಕಲ್ಪನೆ ಇರುತ್ತದೆ. ಇವರು ಯಾಕಾಗಿ ಹೋಗಿದ್ದಾರೆ ಎಂದು. ಅಷ್ಟರ ಮಟ್ಟಿಗೆ ಸತ್ಯವಾಗಿರಲಿ. ಅದು ಬಿಟ್ಟು ಅಧ್ಯಯನ ಅಂತ ಕಾರಣ ಹೇಳುವುದು ಏಕೆ? ನಿಜ ಹೇಳಬೇಕೆಂದರೆ ಈ ರೀತಿ ಕಲಿಕೆ ಪ್ರವಾಸ ಕೈಗೊಂಡು ಬಂದ ಕೆಲ ಶಾಸಕರು ಅಕ್ಷರದ್ವೇಷಿಗಳು. ಇಂಥವರು ಅದೆಂಥ ಅಧ್ಯಯನ ಮಾಡಲು ಸಾಧ್ಯ? ಅದೆಂಥ ವರದಿ ಕೊಡಲು ಸಾಧ್ಯ? ಆ ಆಕ್ಷರದೇವಿ ಶಾರದೆಯೇ ಹೇಳಬೇಕು.
ಆ ವಿಷಯ ಪಕ್ಕಕ್ಕಿರಲಿ. ಈ ಶಾಸಕರ ವಿದೇಶ ಪ್ರವಾಸ ಪ್ರತೀತಿ ಆರಂಭವಾದದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಳ್ವಿಕೆ ಅವಧಿಯಲ್ಲಿ. ಕೃಷಿ, ತೋಟಗಾರಿಕೆ, ನೀರಾವರಿ, ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ, ಹೈನೋದ್ಯಮ, ಗ್ರಾಮೀಣ ಉದ್ಯಮಗಳ ಅಧ್ಯಯನ ಹಾಗೂ ಅನುಷ್ಠಾನ ಇದರ ಉದ್ದೇಶ. ಆಗ ಶಾಸಕರು ಐದು ವರ್ಷಗಳ ಅವಧಿಯಲ್ಲಿ ಎರಡು ಬಾರಿ ದೇಶದ ನಾನಾ ರಾಜ್ಯಗಳು ಹಾಗೂ ಒಮ್ಮೆ ವಿದೇಶ ಪ್ರವಾಸ ಎಂದು ನಿಗದಿ ಮಾಡಲಾಯಿತು. ಆದರೆ ಕೃಷ್ಣ ಅವರ ಅವಧಿಯಲ್ಲಿ ಸತತ ಬರಗಾಲ ಕಾಡಿತು. ಆಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜನಾರ್ದನ ಪೂಜಾರಿ ಅವರು ಸಿಎಂಗೆ ಪತ್ರ ಬರೆದು ಶಾಸಕರ ಪ್ರವಾಸಕ್ಕೆ ಕಡಿವಾಣ ಹಾಕಿದರು. ಅದಾದ ನಂತರ ಧರ್ಮಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ ಅವಧಿಯಲ್ಲಿ ಮುಂದುವರಿಯಿತು. ಬಿಜೆಪಿ ಸರಕಾರ ಇದ್ದಾಗ ಪ್ರವಾಸ ಸ್ವರೂಪವೇ ಬದಲಾಯಿತು. ಎರಡು ದೇಶಿಯ ಪ್ರವಾಸದ ಬದಲಿಗೆ ಒಂದು ಹಾಗೂ ಒಂದರ ಬದಲು ಎರಡು ವಿದೇಶಿ ಪ್ರವಾಸಗಳನ್ನು ನಿಗದಿ ಮಾಡಲಾಯಿತು. ಕಳೆದ ವರ್ಷ ಕೂಡ ಇದೇ ರೀತಿ ಶಾಸಕರ ಪ್ರವಾಸಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಏಕೆ ಈ ವಿರೋಧ? ಅಲ್ಲೊಂದು ಇಲ್ಲೊಂದು ಅಪವಾದ ಬಿಟ್ಟರೆ ಅಧ್ಯಯನ ಪ್ರವಾಸದ ಮೂಲ ಉದ್ದೇಶವೇ ಈಡೇರಿಲ್ಲ. ಮಾಜಿ ಮಂತ್ರಿ ದಿವಂಗತ ಸಿ. ಬೈರೈಗೌಡರು ಇಸ್ರೇಲ್ ಹನಿ ನೀರಾವರಿ ತಂತ್ರಜ್ಞಾನವನ್ನು ಕೋಲಾರಕ್ಕೆ ತಂದಿದ್ದು ಇದಕ್ಕೆ ಅಪವಾದಗಳಲ್ಲಿ ಒಂದು. ಶಾಸಕರು ನಾನಾ ದೇಶಗಳಿಗೆ ಹೋಗುತ್ತಾರೆ. ಅವರು ವಿದೇಶ ನೋಡಿದ್ದಷ್ಟೇ ಅಧ್ಯಯನವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅಧ್ಯಯನ ವರದಿಯನ್ನೇ ಕೊಟ್ಟಿಲ್ಲ. ಕೊಟ್ಟಿದ್ದರೂ ಅನುಷ್ಠಾನಕ್ಕೆ ಬಂದದ್ದು, ಅಭಿವೃದ್ಧಿ ಕೆಲಸಗಳು ಆಗಿದ್ದು ಅಷ್ಟರಲ್ಲೇ ಇದೆ. ಏಕೆಂದರೆ ಈ ವರದಿಗಳಲ್ಲಿ ಇರುವುದು ಆ ದೇಶದ ರಸ್ತೆಗಳು ನುಣುಪಾಗಿವೆ, ಆಗಲವಾಗಿವೆ, ಗುಂಡಿಗಳು ಇಲ್ಲ. ಈ ದೇಶದ ಕಟ್ಟಡಗಳು ಸುಂದರವಾಗಿವೆ, ಎತ್ತರವಾಗಿವೆ. ಆ ದೇಶದ ರೈಲುಗಳು ವೇಗವಾಗಿ ಚಲಿಸುತ್ತವೆ. ಲಿಫ್ಟ್‌ಗಳು ಬೇಗ ಮೇಲಕ್ಕೆ ಹೋಗುತ್ತವೆ - ಇಂಥದ್ದೇ ವರದಿಗಳು. ಯಾವುದೇ ಒಂದು ಯೋಜನೆಯ ಸ್ವರೂಪ, ಬಳಸಿದ ತಂತ್ರಜ್ಞಾನ, ಬೇಕಿರುವ ಮಾನವ ಶಕ್ತಿ, ಸಮಯ, ಸಾಧಕ-ಬಾಧಕ, ಲಾಭ-ನಷ್ಟ, ಪ್ರಸ್ತುತತೆ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ, ಉಪಯುಕ್ತ ವರದಿ ಸಲ್ಲಿಸಿದ, ಆ ವರದಿ ಆಧರಿಸಿ ಯೋಜನೆ ಅನುಷ್ಠಾನಕ್ಕೆ ತಂದ ನಿದರ್ಶನಗಳು ಇದ್ದಂತಿಲ್ಲ. ಹಾಗಿದ್ದರೆ ಈ ಪ್ರವಾಸದ ಸಾರ್ಥಕ್ಯ ಏನು ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ.
ಈ ಹಿಂದೆ ಒಬ್ಬ ಶಾಸಕರ ವಿದೇಶ ಪ್ರವಾಸ ವೆಚ್ಚ ಆರು ಲಕ್ಷ ರುಪಾಯಿ ಇದ್ದದ್ದು ಈಗ ಒಂಬತ್ತು ಲಕ್ಷ ರುಪಾಯಿಗೆ ಏರಿಕೆ ಆಗಿದೆ. ಪ್ರತಿ ತಂಡದ ಜತೆ ಇಬ್ಬರು ಅಧಿಕಾರಿಗಳು ಬೇರೆ. ಎಲ್ಲಕ್ಕಿಂತ ಮಿಗಿಲಾಗಿ ಟ್ರಾವೆಲ್ ಏಜೆನ್ಸಿ ಜತೆ ಈ ರೀತಿಯ ವಿದೇಶ ಪ್ರವಾಸ ವ್ಯವಸ್ಥೆ ಮಾಡುವುದು ಅಧಿಕಾರಿಗಳಿಗೆ ಲಾಬಿ ಆಗಿ ಪರಿಣಮಿಸಿದೆ. ವಿಧಾನಸಭೆಯ 225 ಹಾಗೂ ವಿಧಾನ ಪರಿಷತ್‌ನ 75 ಮಂದಿ ಸದಸ್ಯರು ಒಂದು ಅಧಿಕಾರದ ಅವಧಿಯಲ್ಲಿ ಎರಡು ಬಾರಿ ವಿದೇಶ ಪ್ರವಾಸ ಕೈಗೊಂಡರೂ ಒಟ್ಟು ವೆಚ್ಚ 54 ಕೋಟಿ ರುಪಾಯಿ ಆಗುತ್ತದೆ. ಇದರಲ್ಲಿ ಅಧಿಕಾರಿಗಳ ಲೆಕ್ಕ ಸೇರಿಲ್ಲ. ಅದೇ ಕಾಲಕ್ಕೆ ವಿಧಾನ ಮಂಡಲದ ಎಲ್ಲ ಸದಸ್ಯರೂ ಪ್ರವಾಸ ಹೋಗುತ್ತಾರೆ ಎಂದೂ ಇಲ್ಲ. ಮೊದಲಿಂದಲೂ ವಿದೇಶ ಪ್ರವಾಸ ವಿರೋಧಿಸಿಕೊಂಡೇ ಬಂದಿರುವ ಎಂ.ಸಿ. ನಾಣಯ್ಯ ಅಂಥವರೂ ಇದ್ದಾರೆ. ಆದರೆ ಹೋಗುವವರ ಸಂಖ್ಯೆಯೇ ಹೆಚ್ಚು. 54 ಕೋಟಿ ರುಪಾಯಿ ಸಾರ್ವಜನಿಕರ ಹಣ ಉದ್ದೇಶ ಸಾಧನೆಯಿಲ್ಲದೆ ಈ ರೀತಿ ಪೋಲಾಗುವುದು ಸರಿಯೇ? ಇದೇ ಹಣವನ್ನು ಯಾವುದಾದರೂ ಯೋಜನೆಗೆ ಬಳಸಬಹುದಲ್ಲವೇ?
ಶಾಸಕರ ವಿದೇಶ ಪ್ರವಾಸ ಅವರವರ ವಿವೇಚನೆಗೆ ಬಿಟ್ಟದ್ದು. ಆದರೂ ಅತಿವೃಷ್ಟಿ, ಅನಾವೃಷ್ಟಿಯಂಥ ವೈಪರಿತ್ಯ ಸಂದರ್ಭಗಳಲ್ಲಿ ವಿದೇಶ ಪ್ರವಾಸ ಬೇಡ ಎಂದು ಹೇಳುವ ವಿವೇಕಾಧಿಕಾರ ವಿಧಾನ ಮಂಡಲದ ಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿ ಹಾಗೂ ಆಯಾ ಪಕ್ಷದ ಅಧ್ಯಕ್ಷರುಗಳಿಗೆ ಇದೆ. ಈಗ ರಾಜ್ಯದ ಅರ್ಧ ಭಾಗ ಬರಪೀಡಿತವಾಗಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಅವರನ್ನು ಬಿಟ್ಟರೆ ಉಳಿದವರ್ಯಾರೂ ವಿದೇಶ ಪ್ರವಾಸದ ವಿರುದ್ಧ ಮಾತಾಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮದವರು ಪದೇ ಪದೇ ಪ್ರಶ್ನೆ ಕೇಳಿದರೂ ಮೌನವೇ ಉತ್ತರವಾಗಿತ್ತು. ಅಂದರೆ ಪರೋಕ್ಷವಾಗಿ ಶಾಸಕರ ವಿದೇಶ ಪ್ರವಾಸಕ್ಕೆ ಬೆಂಬಲ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಬಿಜೆಪಿಯ ಪ್ರಹ್ಲಾದ್ ಜೋಷಿ ಅವರ ನಡೆ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಇನ್ನು ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಬರ ಸಂದರ್ಭದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವುದು, ಬಿಡುವುದು ಶಾಸಕರ ವೈಯಕ್ತಿಕ ವಿಚಾರ. ಆದರೆ ಶಾಸಕರು ವರದಿ ಕೊಡಲೇಬೇಕು. ವರದಿ ಕೊಡದಿದ್ದರೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ ಹಿಂದೆ ಸಲ್ಲಿಕೆಯಾದ ವರದಿಗಳು ಎಂಥವು ಹಾಗೂ ಆ ವರದಿಗಳ ಹಣೆಬರಹ ಏನಾಗಿದೆ ಎಂಬುದು ಕಣ್ಣ ಮುಂದೆಯೇ ಇದೆ.
ಎಲ್ಲಕ್ಕಿಂತ ಬಹಳ ಮುಖ್ಯವಾದ ಅಂಶ ಎಂದರೇ ವಿದೇಶ ಪ್ರವಾಸ ಹೋಗಿ ಬಂದ ಶಾಸಕರು ತೆಗೆದಿರುವ ಹೊಸ ಕ್ಯಾತೆ. 14, 18 ದಿನಗಳ ಅಲ್ಪಕಾಲದ ವಿದೇಶ ಪ್ರವಾಸದಿಂದ ಏನು ತಾನೇ ಅಧ್ಯಯನ ಮಾಡಲು ಸಾಧ್ಯ? ಎಂಥ ವರದಿ ಕೊಡಲು ಸಾಧ್ಯ? ಪ್ರಗತಿ ಹೇಗೆ ಸಾಧ್ಯ ಎಂದು ಕೇಳುತ್ತಿದ್ದಾರೆ. ಅಂದರೆ ಅಲ್ಲಿಗೆ ಅಧ್ಯಯನ ಪ್ರವಾಸದ ಮೂಲ ಅಶಯವೇ ಬಿದ್ದು ಹೋದಂತಾಯಿತಲ್ಲ. ಯಾವುದೇ ಪ್ರಯೋಜನ ಇಲ್ಲದ ಮೇಲೆ ಯಾವ ಪುರುಷಾರ್ಥಕ್ಕೆ ಇಂಥ ವಿದೇಶ ಪ್ರವಾಸಗಳು? ಬರೀ ಶಾಸಕರ ಮೋಜು ಮಸ್ತಿಗೆ ಕೋಟ್ಯಂತರ ರುಪಾಯಿ ಸಾರ್ವಜನಕರ ಹಣ ಸುರಿಯಬೇಕೇ?
ಸಿದ್ದರಾಮಯ್ಯನವರು ಆರ್ಥಿಕ ಮಿತವ್ಯಯದ ಬಗ್ಗೆ ಮಾತಾಡುತ್ತಾರೆ. ನಾಗರಿಕ ಸವಲತ್ತುಗಳನ್ನು ಕಟ್ ಮಾಡುವುದರಿಂದ ಆರ್ಥಿಕ ಮಿತವ್ಯಯ ಸಾಧಿಸುವುದು ಸಲ್ಲ. ಅದರ ಬದಲಿಗೆ ಮಂತ್ರಿಗಳು, ಶಾಸಕರು, ಅಧಿಕಾರಿಗಳ ಅನಪೇಕ್ಷಿತ ಸೌಲಭ್ಯಗಳ ಮೇಲೆ ನಿಯಂತ್ರಣ ಹೇರುವುದರ ಮೂಲಕವೂ ಅದನ್ನು ಸಾಧಿಸಬಹುದು. ಇದರಿಂದ ಮಿತವ್ಯಯ ಸಾಧಿಸುವವರಿಗೂ, ಆ ಮಿತವ್ಯಯಕ್ಕೆ ಸಾಧನ ಆಗುವವರಿಗೂ, ಎಲ್ಲಕ್ಕಿಂತ ಮಿಗಿಲಾಗಿ ಸಾರ್ವಜನಿಕರ ಹಣ ಮತ್ತು ಅಭಿಪ್ರಾಯಕ್ಕೂ ಒಂದು ಬೆಲೆ ಮತ್ತು ಗೌರವ.
ಲಗೋರಿ: ನಡೆಯುವವನು ಎಡವುವುದು ಸಹಜ. ಆದರೆ ಎಡವಲೆಂದೇ ನಡೆಯಬಾರದು.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


