ಅಂಕಣಗಳು

ಸೋತು ಸುಣ್ಣವಾದ ಮನಸ್ಸು ಹೇಗೆ ಯೋಚಿಸಬೇಕು?

ಘಟನಾ ಸ್ಥಳದಲ್ಲಿ ನಿಂತು ವರದಿ ಮಾಡುವ ಟಿವಿ ರಿಪೋರ್ಟರ್‌ನ ಮಾತುಗಳನ್ನು...

ಸೋತು ಸುಣ್ಣವಾದ ಮನಸ್ಸು ಹೇಗೆ ಯೋಚಿಸಬೇಕು?
Published On :

ಘಟನಾ ಸ್ಥಳದಲ್ಲಿ ನಿಂತು ವರದಿ ಮಾಡುವ ಟಿವಿ ರಿಪೋರ್ಟರ್‌ನ ಮಾತುಗಳನ್ನು ಕೇಳಿಸಿಕೊಂಡಾಗ ಅತಿಶಯೋಕ್ತಿ ಅಂದ್ರೆ ಏನು ಎಂಬುದನ್ನು 'ಲೈವ್‌' ಆಗಿ ಅನುಭವಿಸಬಹುದು. ಬೆಂಕಿ ದುರಂತ ಸಂಭವಿಸಿದ ಜಾಗದ ಪಕ್ಕದಲ್ಲಿ ನಿಂತು ವರದಿ ಮಾಡುವ ರಿಪೋರ್ಟರ್‌ನ ಮಾತುಗಳಲ್ಲಿ ತನಗೇ ಬೆಂಕಿ ತಗುಲಿದೆಯೇನೋ ಎಂಬ ಧಾವಂತವಿರುತ್ತದೆ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ ಅವರ ಸಂದರ್ಶನ ಓದುತ್ತಿದ್ದೆ. ಅವರಿಗೆ ಮೂರೇ ಮೂರು ಪ್ರಶ್ನೆಗಳನ್ನು ಕೇಳಲಾಗಿತ್ತು. ನಿಮ್ಮ ಜೀವನದ ಅತ್ಯಂತ ಕಷ್ಟದಾಯಕವಾದ ಕ್ಷಣಗಳು ಯಾವುವು? ಅದನ್ನು ನೀವು ಹೇಗೆ ನಿಭಾಯಿಸಿದಿರಿ? ಹಾಗೂ ಆ ಘಟನೆಯಿಂದ ನೀವು ಕಲಿತ ಪಾಠವೇನು? ಈ ಮೂರು ಪ್ರಶ್ನೆಗಳಿಗೆ ವಿಶ್ವನಾಥನ್ ಆನಂದ ಹೇಗೆ ಉತ್ತರಿಸಬಹುದು ಎಂಬ ಕುತೂಹಲವಿತ್ತು.
ಮೊದಲನೆಯ ಪ್ರಶ್ನೆಗೆ ಅವರು ಹೇಳಿದ್ದು: 'ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಂಭತ್ತನೇ ಗೇಮ್‌ನಲ್ಲಿ ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ನಾನು ಸೋಲುವುದು ಖಚಿತವಾಗಿತ್ತು. ಇಷ್ಟು ದಿನಗಳವರೆಗೆ ನಾನು ಧರಿಸಿದ್ದ ವಿಶ್ವ ಚಾಂಪಿಯನ್ ಪಟ್ಟ ನನ್ನ ಕೈ ತಪ್ಪಿ ಹೋಗುತ್ತಿದೆಯೆಂಬುದು ನನಗೆ ಮನವರಿಕೆಯಾಯಿತು. ಆ ಚಾಂಪಿಯನ್ ಪಟ್ಟಕ್ಕೆ ಇಂದೇ ಕೊನೆಯ ದಿನ ಎಂಬುದು ಸಹ ಖಾತ್ರಿಯಾಯಿತು.'  
ಎರಡನೆಯ ಪ್ರಶ್ನೆಗೆ ಅವರು ಹೇಳಿದ್ದು: 'ನಾನು ಒಂದು ರೋಚಕ ಪಂದ್ಯವಾಡಿದೆ ಎಂಬ ಬಗ್ಗೆ ನನಗೆ ಅತೀವ ಹೆಮ್ಮೆ, ಅಭಿಮಾನವಿದೆ. ನಾನು ಈ ಪಂದ್ಯದಲ್ಲಿ ಸೋತಿರಬಹುದು, ಪರವಾಗಿಲ್ಲ, ಆದರೆ ನನ್ನ ಸ್ಟೈಲಿನಲ್ಲಿ, ಎಂದಿನ ಸಹಜ ರೀತಿಯಲ್ಲಿ ಆಡಿದೆ ಎಂಬ ಬಗ್ಗೆ ಸಮಾಧಾನವಿದೆ.'
ಮೂರನೆಯ ಪ್ರಶ್ನೆಗೆ ಅವರು ಹೇಳಿದ್ದು: 'ಜೀವನದಲ್ಲಿ ಸವಾಲುಗಳು ಎದುರಾದಾಗ ಅದನ್ನು ಸಹಜವಾಗಿ ಸ್ವೀಕರಿಸುತ್ತಾ ಮಜಾ ಅನುಭವಿಸಬೇಕು ಎಂಬುದನ್ನು ಇದರಿಂದ ಕಲಿತೆ. ಚೆಸ್ ಆಟದಲ್ಲಿ ನೀವು ಒಂದು ತಪ್ಪನ್ನು ಮಾಡುತ್ತೀರಿ. ಆನಂತರ ಮತ್ತೊಂದನ್ನು ಮಾಡುತ್ತೀರಿ. ಮೊದಲ ತಪ್ಪನ್ನು ಸರಿಪಡಿಸಲು ಹೋಗಿ ಇನ್ನೊಂದು ತಪ್ಪೆಸಗುತ್ತೀರಿ. ಕೊನೆಗೆ ಆತ್ಮಹತ್ಯೆಯೊಂದೇ ದಾರಿ ಎಂಬ ನಿರ್ಧಾರಕ್ಕೆ ಬರುತ್ತೀರಿ. ಆದರೆ ನಾನು ಆ ದಿನ ಒಂದು ನಿರ್ಧಾರಕ್ಕೆ ಬಂದೆ. ನಾನು ಒಂದು ವೇಳೆ ಸೋತರೂ, ಜನ ನನ್ನನ್ನು ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದವ ಎಂಬುದನ್ನು ನೆನಪಿಟ್ಟುಕೊಳ್ಳುತ್ತಾರೆ. ಇಂಥ ಸಾಧನೆ ಮಾಡಿದವರು ಕೆಲವೇ ಕೆಲವು ಮಂದಿ. ಹೀಗಾಗಿ ಈ ಸೋಲನ್ನು ಬಹಳ ಗಂಭೀರವಾಗಿ ಪರಿಗಣಿಸಬಾರದು, ಆದರೆ ಅದರಿಂದ ಪಾಠ ಕಲಿಯಬೇಕೆಂದು ನಿರ್ಧರಿಸಿದೆ. Sometimes life is a bitch. But you have to put a Ctrl X and start again. ಎಂಥ ಸರಿಯಾದ, ಪ್ರಬುದ್ಧ ಯೋಚನೆ, ನಿರ್ಧಾರ! ಇದನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬಹುದು.
ಅತಿಶಯೋಕ್ತಿ ಎಂಬ ಸುಂದರ ಕಲ್ಪನೆ
ಯುವತಿಯೊಬ್ಬಳು ತೀರಾ ತೆಳ್ಳಗೆ, ಸಪೂರ ಇದ್ದಾಳೆ ಅಂದ್ರೆ ಅವಳನ್ನು ಅತಿಶಯೋಕ್ತಿಯಿಂದ ಹೇಗೆ ಬಣ್ಣಿಸುತ್ತೀರಿ?
ಅವಳು ಕಿರುಬೆರಳಿನಷ್ಟು ಸಪೂರ ಇದ್ದಾಳೆ, ಕಾಷ್ಠದಷ್ಟು ತೆಳ್ಳಗಿದ್ದಾಳೆ, ಕಡ್ಡಿಯಷ್ಟು ವೀಕ್ ಇದ್ದಾಳೆ, ಉಫ್ ಎಂದು ಊದಿದರೆ ಹಾರಿ ಹೋಗುವಷ್ಟು ಸಪೂರ ಇದ್ದಾಳೆ, ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಕಾಣುತ್ತಾಳೆ...ಹೀಗೆ ನಾನಾ ರೀತಿಯಲ್ಲಿ ಬಣ್ಣಿಸಬಹುದು. ಕವಿಯೊಬ್ಬ ಹೀಗೆ ಬಣ್ಣಿಸಿದ್ದಾನೆ-'ಆ ಯುವತಿ ಅದೆಷ್ಟು ಸಪೂರ ಇದ್ದಾಳೆ ಅಂದ್ರೆ ಒಂದು ತೆಳ್ಳಗಿನ ಸರಳ ರೇಖೆ ಎಳೆದರೆ ಆಕೆ ಅದರ ಹಿಂದೆ ಅಡಗಿಕೊಳ್ಳಬಹುದು.' ಇದು ಅತಿಶಯೋಕ್ತಿಯಾದರೂ ಉತ್ತಮ ಕಲ್ಪನೆ.
ಕೆಲವರಿಗೆ ಒಂದು ಘಟನೆಯನ್ನು ಯಥಾವತ್ತಾಗಿ ಬಣ್ಣಿಸಲು ಬರುವುದಿಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳಲು ಬರುವುದಿಲ್ಲ. ಕಾಲು, ಬಾಲ ಸೇರಿಸಿಯೇ ಹೇಳಬೇಕು. ಮನೆಯಲ್ಲಿ ಕರೆಂಟು ಹೋಯಿತೆನ್ನಿ. ಅದೇ ಹೊತ್ತಿಗೆ ಫೋನ್ ಬಂದರೆ ಅವರು 'ಕರೆಂಟು ಹೋಗಿದೆ' ಎಂದು ಹೇಳುವುದಿಲ್ಲ. 'ಶುರುವಾಯಿತು, ಬೆಂಗಳೂರಿನಲ್ಲಿ ಕರೆಂಟ್ ಇಲ್ಲ. ಇಡೀ ನಗರವೇ ಕಗ್ಗತ್ತಲು. ಈಗಲೇ ಹೀಗಾದರೆ ಇನ್ನು ಬೇಸಿಗೆಯಲ್ಲಿ ಏನು ಕತೆ?' ಎಂದು ದೊಡ್ಡ ಕತೆ ಹೆಣೆದಿರುತ್ತಾರೆ. ಇಂಥವರನ್ನು ನೋಡಿಯೇ ಇವರಿಗೆ 'ಇಲಿ ಹೋದರೆ ಹುಲಿ ಹೋಯಿತು ಎಂದು ಹೇಳುವವರು' ಎಂದು ಕರೆಯುವುದು.
ಘಟನಾ ಸ್ಥಳದಲ್ಲಿ ನಿಂತು ವರದಿ ಮಾಡುವ ಟಿವಿ ರಿಪೋರ್ಟರ್‌ನ ಮಾತುಗಳನ್ನು ಕೇಳಿಸಿಕೊಂಡಾಗ ಅತಿಶಯೋಕ್ತಿ ಅಂದ್ರೆ ಏನು ಎಂಬುದನ್ನು 'ಲೈವ್‌' ಆಗಿ ಅನುಭವಿಸಬಹುದು. ಬೆಂಕಿ ದುರಂತ ಸಂಭವಿಸಿದ ಜಾಗದ ಪಕ್ಕದಲ್ಲಿ ನಿಂತು ವರದಿ ಮಾಡುವ ರಿಪೋರ್ಟರ್‌ನ ಮಾತುಗಳಲ್ಲಿ ತನಗೇ ಬೆಂಕಿ ತಗುಲಿದೆಯೇನೋ ಎಂಬ ಧಾವಂತವಿರುತ್ತದೆ. ಆತ ನೋಡುತ್ತಿರುವುದೆಲ್ಲವನ್ನೂ ಟಿವಿಯಲ್ಲಿ ವೀಕ್ಷಕರೂ ನೋಡುತ್ತಿದ್ದಾರೆಂಬ ಪರಿವೆಯೂ ಇಲ್ಲದವನಂತೆ ಆತ ಪೋಣಿಸುತ್ತಾ ಹೋಗುತ್ತಾನೆ. ಈ ವರದಿಗಾರನೇಕೆ ಚೇಳು ಕಡಿದವನಂತೆ ವರ್ತಿಸುತ್ತಾನೆ ಎಂಬುದು ವೀಕ್ಷಕರಿಗೆ ಗೊತ್ತಾದರೂ, ಪೋಣಿಸುವಿಕೆ ಮುಂದುವರಿದಿರುತ್ತದೆ.
ಇತ್ತೀಚೆಗೆ ಹತ್ತಾರು ಸ್ನೇಹಿತರು ಸೇರಿದಾಗ, ಅಪಾರ್ಟ್‌ಮೆಂಟ್ ಜೀವನದ ಬಗ್ಗೆ ಚರ್ಚೆ ಸಾಗಿತ್ತು. ಮುಂಬೈ ನಗರದಲ್ಲಿರುವಂತೆ ಆರುನೂರು, ಏಳುನೂರು ಚದರ ಅಡಿ ಬೆಂಕಿ ಪೊಟ್ಟಣದಂಥ ಪುಟ್ಟ ಪುಟ್ಟ ಅಪಾರ್ಟ್‌ಮೆಂಟ್‌ಗಳು ಬೆಂಗಳೂರಿನಲ್ಲಿ ತಲೆಯೆತ್ತುತ್ತಿವೆ ಎಂದು ಒಬ್ಬ ಹೇಳಿದಾಗ, 'ಹೌದೌದು. ನಾಯಿಗೆ ಬಾಲ ಅಲ್ಲಾಡಿಸಲು ಆಗದಷ್ಟು ಚಿಕ್ಕ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುತ್ತಿದ್ದಾರೆ. ಗಾಳಿ-ಬೆಳಕಿಗೂ ಆಸ್ಪದವಿರುವುದಿಲ್ಲ' ಎಂದ ಮತ್ತೊಬ್ಬ. ಇದಕ್ಕೆ ಪ್ರತಿಕ್ರಿಯೆಯೇನೋ ಎಂಬಂತೆ ಇನ್ನೊಬ್ಬರು ಹೇಳಿದ್ದು ಶುದ್ಧ ಅತಿಶಯೋಕ್ತಿಯಾದರೂ ಅದೊಂದು ಸುಂದರ ಕಲ್ಪನೆ. ಅವರು ಹೇಳಿದರು-'ಕೆಲವು ಅಪಾರ್ಟ್‌ಮೆಂಟುಗಳು ಅವೆಷ್ಟು ಚಿಕ್ಕದಾಗಿವೆಯೆಂದರೆ, ಬಾಗಿಲಿಗೆ ಕೀಯನ್ನು ತುರುಕಿದರೆ ಗಾಳಿ-ಬೆಳಕು ಕಟ್ ಆಫ್ ಆಗಬಹುದೇನೋ ಎಂದೆನಿಸುತ್ತದೆ.'
ಬೇಕಾಗುವ ಬೇಡದ ವಸ್ತುಗಳು
ಕೆಲವರ ಮನೆಯಲ್ಲಿ ಬೇಡದ ವಸ್ತುಗಳೇ ತುಂಬಿರುತ್ತವೆ. ಅವು ಬೇಡವಾದವು ಎಂಬುದು ಗೊತ್ತಿರುತ್ತದೆ. ಯಾವತ್ತಾದರೂ ಬೇಕಾಗಬಹುದು ಎಂಬ ಕಾರಣಕ್ಕೆ ಬಿಸಾಡದೇ, ಮನೆಯಲ್ಲಿ ಇಟ್ಟಿರುತ್ತಾರೆ. ಸಾಹಿತಿಗಳ ಮನೆಯಲ್ಲಿ ಪುಸ್ತಕ, ಪತ್ರಕರ್ತರ ಮನೆಯಲ್ಲಿ ಪತ್ರಿಕೆಗಳು ಇದೇ ಕಾರಣಕ್ಕೆ ಧೂಳು ತಿನ್ನುತ್ತಾ ಬಿದ್ದಿರುತ್ತವೆ. ಸಾಹಿತಿ, ಪತ್ರಕರ್ತರ ಹೆಂಡತಿಯರು ಇವನ್ನೆಲ್ಲ ರದ್ದಿಗೆ ಕಳಿಸಲು ಅಣಿಯಾದರೆ, ಮನೆ ಒಂದು ಪುಟ್ಟ ಕದನಕ್ಕೆ ಸಾಕ್ಷಿಯಾದೀತು. 'ಈ ಪುಸ್ತಕ ಓದಿದ್ದೀರಿ ಅಂದ್ರೆ ಮತ್ತ್ಯಾಕೆ ಇಟ್ಟುಕೊಳ್ಳುತ್ತೀರಿ?' ಎಂದು ಹೆಂಡತಿ ಕೇಳಿದರೆ, 'ನಿನಗೆ ಗೊತ್ತಿಲ್ಲ. ಆ ಪುಸ್ತಕ ಬೇಕಾಗುತ್ತದೆ. ದಯವಿಟ್ಟು ತೂಕಕ್ಕೆ ಹಾಕಬೇಡ' ಎಂದು ಗಂಡ ಅಂಗಲಾಚುತ್ತಾನೆ. ಹಳೇ ಪತ್ರಿಕೆಗಳಿಗಾಗಿ ಪತ್ರಕರ್ತನ ಮನೆಯಲ್ಲೂ ಇದೇ ಸಂಭಾಷಣೆ ಆಗಾಗ ಕೇಳಿಬರುತ್ತದೆ. ಕಳೆದ ವರ್ಷ ಹೊಸ ವರ್ಷದ ಸಂಚಿಕೆಯನ್ನು ರೂಪಿಸಿದಾಗ, ಈ ಸಂಗತಿಯನ್ನು ಗಮನಿಸಿ, ಸಂಗ್ರಹ ಯೋಗ್ಯ ಸಂಚಿಕೆ ಎಂದು ಕರೆಯುವ ಬದಲು, 'ರದ್ದಿ ಅಂಗಡಿಗೆ ಕಳಿಸುವಾಗ ಬೇಕು ಎಂದು ಎತ್ತಿಟ್ಟುಕೊಳ್ಳುವ ಸಂಚಿಕೆ' ಎಂದು ಕರೆದಿದ್ದೆವು.
ಇಲ್ಲಿ ಒಂದು ಪ್ರಸಂಗ ನೆನಪಾಗುತ್ತಿದೆ.
ಇಬ್ಬರು ಸ್ನೇಹಿತರು ಭೇಟಿಯಾದಾಗ ಅವರ ಸಂಭಾಷಣೆ
ಒಬ್ಬ- ನೀನು ಹೊಸ ಮನೆಗೆ ಹೋದೆಯಾ?
ಮತ್ತೊಬ್ಬ- ಇಲ್ಲ.
ಒಬ್ಬ -ಯಾಕೆ ಹೋಗಿಲ್ಲ? ಪತ್ರಿಕೆಯಲ್ಲಿ ಜಾಹೀರಾತು ಕೊಡಬೇಕಿತ್ತು. ಹಳೆ ಮನೆ ಮಾರಾಟವಾಗುತ್ತಿತ್ತು. ಹಾಗೇಕೆ ಮಾಡಲಿಲ್ಲ?
ಮತ್ತೊಬ್ಬ- ಜಾಹೀರಾತನ್ನು ಕೊಟ್ಟೆ. ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತನ್ನು ಓದಿದ ಬಳಿಕ ನಾನು ನೋಡುತ್ತಿದ್ದ ಮನೆ ಇದೇ ಅಲ್ಲವಾ ಎಂದೆನಿಸಿತು. ಹೀಗಾಗಿ ಹಳೆ ಮನೆಯಲ್ಲಿಯೇ ಉಳಿದುಬಿಟ್ಟೆ.
ಬಾಬುರಾವ್ ಪಟೇಲ್ ಉತ್ತರಗಳು
'ಫಿಲ್ಮ್ ಇಂಡಿಯಾ' ಹಾಗೂ 'ಮದರ್ ಇಂಡಿಯಾ' ಪತ್ರಿಕೆಗಳ ಸಂಪಾದಕರಾಗಿದ್ದ ದಿವಂಗತ ಬಾಬುರಾವ್ ಪಟೇಲ್ ಕುರಿತ ನನ್ನ ಪುಸ್ತಕ ಸಿದ್ಧಗೊಂಡಿದೆ. ಬಾಬುರಾವ್ ಅತ್ಯಂತ ಧೀಮಂತ ಪತ್ರಕರ್ತರಾಗಿದ್ದರು. ಅನಿಸಿದ್ದನ್ನು ನಿರ್ಭೀತಿಯಿಂದ ಹೇಳುತ್ತಿದ್ದರು. ಓದುಗರ ಪ್ರಶ್ನೆಗಳಿಗೆ ಅವರು ನೀಡುತ್ತಿದ್ದ ಉತ್ತರಗಳಂತೂ ಗುಂಡು ಹೊಡೆದಂತಿರುತ್ತಿದ್ದವು. ಅವರ ಉತ್ತರಕ್ಕಾಗಿಯೇ ಓದುಗರು ತಿಂಗಳುಗಟ್ಟಲೆ ಕಾದಿರುತ್ತಿದ್ದರು. ಕೆಲವು ಪ್ರಶ್ನೋತ್ತರಗಳ ಸ್ಯಾಂಪಲ್ಲುಗಳು.
*    ನೀವು ಹರಿಜನರನ್ನು ಪ್ರೀತಿಸುತ್ತೀರಾ?
ಮೊದಲು ಅವರು ಯಾರೆಂಬುದನ್ನು ತೋರಿಸಿ. ನಂತರ ತೀರ್ಮಾನಿಸುತ್ತೇನೆ.
*    ರುಸ್ಸಿ ಕಾರಂಜಿಯಾ ಬಹಳ ಧಾರ್ಮಿಕ ಮನುಷ್ಯರಂತೆ ಹೌದಾ?
ಖಂಡಿತವಾಗಿಯೂ ಧಾರ್ಮಿಕ ಮನುಷ್ಯ. ಪ್ರತಿ ರಾತ್ರಿ ಅವರ ಮನೆಗೆ ಮಲುಗಲು ಹೋಗುತ್ತಾರೆ!
*    ನಟ ದಿಲೀಪ್ ಕುಮಾರ್ ಶ್ರೀಮಂತನಾ?
ಆತನ ಅತ್ತೆ ನಸೀಮ್ ಕೇಳಬೇಕಾದ ಪ್ರಶ್ನೆಯಿದು.
*    ನೆಹರುಗೆ ಪಕ್ಷಿಗಳೆಂದರೆ ಪ್ರೀತಿಯಂತೆ ಹೌದಾ?
ಅದಕ್ಕಾಗಿಯೇ ದೇಶದೆಲ್ಲೆಡೆ ಇರುವ ಪುತ್ಥಳಿಯ ಮೇಲೆ ಪಕ್ಷಿಗಳು ಹಿಕ್ಕೆ ಹಾಕೋದು?
*    ಮುಖೇಶ್ ಸಾಯುವಾಗ ಹಣವೇ ಇರಲಿಲ್ಲವಂತೆ?
ರಾಜ್‌ಕಪೂರ್‌ನ ಎಲ್ಲ ಸ್ನೇಹಿತರ ಹಣೆ ಬರಹವೂ ಇದೇ!
*    ನಟಿ ನೂತನ್ ಇದ್ದಾಳಲ್ಲ, ಅವಳ ಕೆನ್ನೆಗೆ ಮುತ್ತುಕೊಡಬಹುದಾ?
ನಿಮ್ಮ ಊರಿನಲ್ಲಿ ಕತ್ತೆ, ನರಿ, ಎಮ್ಮೆಗಳು ಇಲ್ಲವಾ?
*    ಮಹಾತ್ಮ ಗಾಂಧಿ ರೋಮ್ಯಾಂಟಿಕ್ ಅಂತೆ, ಹೌದಾ?
ದಯವಿಟ್ಟು ರೋಮ್ಯಾಂಟಿಕ್ ಎಂಬ ಸುಂದರ ಪದದ ಅರ್ಥವನ್ನು ಹಾಳುಗೆಡವಬೇಡಿ!
*    ಜೀನತ್ ಅಮಾನ್ ಉತ್ತಮ ನಟಿಯಾ?
ಅವಳಿಗೆ ಗೊತ್ತಿಲ್ಲದೇ ನಟಿಸುವವರೆಂದರೆ ಅವಳ ಅಂಗಾಂಗಗಳು. ಇದನ್ನೇ ಉತ್ತಮ ಅಂತ ಭಾವಿಸಿದರೆ ನನ್ನ ಆಕ್ಷೇಪವೇನಿಲ್ಲ.


- ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.