ವ್ಯಕ್ತಿಗಳು ಬದಲಾದರೂ ಕಾಂಗ್ರೆಸ್ ಬದಲಾಗಿಲ್ಲ
ಹಿಂದೊಮ್ಮೆ, ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ, ಆಗಿನ ಕಾಲದಲ್ಲಿ ಕಾಂಗ್ರೆಸ್ ವರಿಷ್ಠರ ಅಧಿಕಾರವನ್ನು ಚಲಾಯಿಸುತ್ತಿದ್ದ ರಾಜೀವ ಗಾಂಧಿ ಟೆಲಿಫೋನ್ ಮೂಲಕ ಮುಖ್ಯಮಂತ್ರಿಯನ್ನು ಬದಲಾಯಿಸಿ ನೂತನ ಮುಖ್ಯಮಂತ್ರಿಯ ಆಯ್ಕೆಗೆ ಆದೇಶ ನೀಡಿದ್ದರು. ಆಗಲೇ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದು. ಅದಾದ ಅನಂತರ ಅವರೂ ಬದಲಾಗಿ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾದರು. ಆಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತು.
ಈಗಲೂ ಹೆಚ್ಚು ಕಡಿಮೆ ಕಾಂಗ್ರೆಸ್ ವರಿಷ್ಠರ ಹೆಸರಿನಲ್ಲಿ ಅಧಿಕಾರವನ್ನು ಚಲಾಯಿಸುತ್ತಿರುವ ರಾಹುಲ ಗಾಂಧಿ ಅವರ ಪರವಾಗಿ ದೆಹಲಿಯಿಂದ ಬಂದ ಟೆಲಿಫೋನ್ ಆದೇಶದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರನ್ನು ಸಚಿವರನ್ನಾಗಿ ಮಾಡಬೇಕಾದ ಪರಿಸ್ಥಿತಿ ಇದೆ. ದೆಹಲಿಯಿಂದ ವರಿಷ್ಠರ ಹೆಸರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗೆ ಆದೇಶಗಳನ್ನು ಜಾರಿ ಮಾಡುವ ಪ್ರವೃತ್ತಿ ಕಾಂಗ್ರೆಸ್ಸಿನಲ್ಲಿ ಇನ್ನೂ ಮನೆ ಮಾಡಿಕೊಂಡಿರುವುದಕ್ಕೆ ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರು ಮಂತ್ರಿಗಳಾಗಿ ನೇಮಕಗೊಂಡ ಪರಿಸ್ಥಿತಿಯೇ ಸಾಕ್ಷಿ. ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಹೊಸ ಅಧ್ಯಾಯ ಆರಂಭವಾಗುವುದರಲ್ಲಿ ಅನುಮಾನವೇ ಇಲ್ಲ.
ಕಳೆದ ವಾರದಲ್ಲೇ ದೆಹಲಿಗೆ ಹೋಗಿ, ವರಿಷ್ಠರೊಡನೆ ದೀರ್ಘವಾದ ಸಮಾಲೋಚನೆಯ ಅನಂತರ ಬೆಂಗಳೂರಿಗೆ ಹಿಂತಿರುಗಿದ ಮೇಲೂ ಸಿದ್ದರಾಮಯ್ಯ ಅವರು ಮಂತ್ರಿ ಮಂಡಲದ ಪುನಾರಚನೆ ಅಥವಾ ವಿಸ್ತರಣೆ ಸದ್ಯಕ್ಕೆ ಆಗುವುದಿಲ್ಲ ಎನ್ನುವ ಅಭಿಪ್ರಾಯವನ್ನೇ ಮತ್ತೆ ಮತ್ತೆ ಹೇಳಿದ್ದರು.
ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರು ಕೆಲವು ವಾರಗಳಿಂದಲೂ ದೆಹಲಿಯಲ್ಲೇ ಬಿಡಾರ ಹೂಡಿ, ಈಗಲೇ (ಅಂದರೆ ಲೋಕಸಭೆ ಚುನಾವಣೆಗೆ ಮುಂಚೆಯೇ) ಮಂತ್ರಿಯಾಗಿ ನೇಮಕಗೊಳ್ಳದಿದ್ದರೆ, ತಮ್ಮ ರಾಜಕೀಯ ಪ್ರತಿಷ್ಠೆಯೇ ಮುಕ್ಕಾಗುವುದೆನ್ನುವ ಪ್ರಚಾರ ಮಾಡಿಕೊಂಡು, ದೆಹಲಿಯಲ್ಲಿ ವರಿಷ್ಠರ ಮೇಲೆ ಒತ್ತಡ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿಯ ಒತ್ತಡ ತರುವುದು ಇವರಿಬ್ಬರಿಗೂ ಸಾಧ್ಯವಾದರೆ, ಬೇರೆಯವರಿಗೂ ಅದು ಸಾಧ್ಯವಾಗಬಹುದೆನ್ನುವ ಮಾತನ್ನು ರಾಜಕೀಯದಲ್ಲಿ ಸುಲಭವಾಗಿ ತಳ್ಳಿಹಾಕುವಂತಿಲ್ಲ. ಇಂತಹ ಪರಿಸ್ಥಿತಿ ಪಕ್ಷದ ಅಂತರಂಗದ ರಾಜಕೀಯದಲ್ಲಿ ಮುಖ್ಯಮಂತ್ರಿಯ ಸಂಕಲ್ಪ ಶಕ್ತಿಯನ್ನು ಕುಗ್ಗಿಸುವುದೂ ನಿಜ. ಇದುವರೆಗೂ ಪ್ರದೇಶ ಕಾಂಗ್ರೆಸ್ಸಿನಲ್ಲಿ ಶಾಸಕಾಂಗ ಪಕ್ಷದಲ್ಲಿ ಬಲವಾಗಿ ಬೇರೂರಿದ್ದ ಭಾವನೆ ಎಂದರೆ, ಸಿದ್ದರಾಮಯ್ಯ ಅವರಿಗೆ ದೆಹಲಿಯ ವರಿಷ್ಠರ ಅಖಂಡ ಬೆಂಬಲವಿರುವುದರಿಂದ ಅವರನ್ನು ಇಲ್ಲಿ ಅಲ್ಲಾಡಿಸುವುದು ಯಾರಿಗೂ ಸಾಧ್ಯವಿಲ್ಲ ಎನ್ನುವುದು.
ಆದರೆ ಈಗ ಮೊದಲ ಬಾರಿಗೆ ಅಂತಹ ನಂಬಿಕೆಯನ್ನು ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಅಲ್ಲಾಡಿಸಿದ್ದಾರೆ. ಕಾಂಗ್ರೆಸ್ಸಿನಲ್ಲಿ, ಮಂತ್ರಿಮಂಡಲದ ವಿಸ್ತರಣೆ ಬಹು ಚರ್ಚಿತ ವಿಚಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅನೇಕರು ಪಕ್ಷದಲ್ಲಿ ತಮ್ಮ ಸೇವಾ ಹಿರಿತನದ ಆಧಾರದ ಮೇಲೆ, ಅಥವಾ ಜಾತಿ - ಪ್ರದೇಶದ ಪ್ರಾತಿನಿಧ್ಯದ ಲೆಕ್ಕಾಚಾರದ ಮೇಲೆ ಮಂತ್ರಿ ಸ್ಥಾನ ತಮಗೆ ಸಿಗಲೇಬೇಕೆಂದು ಒತ್ತಾಯ ಪಡಿಸಿದ್ದು ನಿಜ. ಕೆಲವರಂತೂ ತಮಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ನಂಬಿಯೂ ಇದ್ದರು. ಅಷ್ಟೇ ಅಲ್ಲ, ಮಂತ್ರಿಮಂಡಲದ ಸಮಗ್ರ ಸ್ವರೂಪದ ಪುನಾರಚನೆಯನ್ನೂ ಕೆಲವರು ನಿರೀಕ್ಷಿಸಿದ್ದರು. ಅವರೆಲ್ಲರ ಆಸೆಗಳೂ ಭಗ್ನವಾಗುವ ರೀತಿಯಲ್ಲಿ, ಇಬ್ಬರು ಪ್ರಭಾವಿಗಳನ್ನು ಮಾತ್ರ ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕಾದ ಪರಿಸ್ಥಿತಿ, ನಿರ್ಮಾಣವಾಗಿದ್ದಾದರೂ ಹೇಗೆ?
ಒಡಕು ಧ್ವನಿ ಕೇಳಿಸಿದೆ: ಆ ಪ್ರಶ್ನೆಗೆ ಉತ್ತರಗಳನ್ನು ಹುಡುಕುತ್ತಿರುವ ಶಾಸಕರ ಸಂಖ್ಯೆ ದೊಡ್ಡದು. ಈಗಿನ ಬೆಳವಣಿಗೆಗಳಿಂದಲೇ, ಪ್ರದೇಶ ಕಾಂಗ್ರೆಸ್ಸಿನಲ್ಲಿ, ಶಾಸಕಾಂಗ ಪಕ್ಷದಲ್ಲಿ ಭಿನ್ನಮತದ ಒಡಕು ಧ್ವನಿ ಸ್ಪಷ್ಟವಾಗಿ ಕೇಳಿ ಬಂದಿದೆ.
ಉದಾಹರಣೆಗೆ, ಶಾಸಕರ ವಿದೇಶ ಯಾತ್ರೆಯ ಸಂಬಂಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಂತವಾಗಿ ಯಾವುದೇ ರೀತಿಯ ನಿಲವನ್ನು ತಾಳದೇ, ವಿಧಾನಮಂಡಲದ ಸಮಿತಿಗಳ ಕೆಲಸದಲ್ಲಿ, ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಎಲ್ಲ ಅಭಿಪ್ರಾಯಗಳನ್ನು ಸದನದ ಅಧ್ಯಕ್ಷರಿಗೆ ತಿಳಿಸುತ್ತೇವೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದು. ನಿಜ. ಮುಖ್ಯಮಂತ್ರಿಯಾಗಿ, ಸದನ ಸಮಿತಿಗಳ ಕೆಲಸದ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರೂ ಹೌದು. ಕಾಂಗ್ರೆಸ್ ಶಾಸಕರು ತಮ್ಮ ನಾಯಕರ ಮಾತನ್ನು ಪಾಲಿಸುವ ನಂಬಿಕೆಯೇ ಅವರಿಗೆ ಇಲ್ಲದೇ ಹೋದರೆ, ಅವರ ರಾಜಕೀಯ ನಾಯಕತ್ವಕ್ಕೆ ಏನು ಬೆಲೆ? ಇಷ್ಟಕ್ಕೂ ವಿದೇಶ ಪ್ರವಾಸದಲ್ಲಿ ಪಾಲುಗೊಳ್ಳುವ ವಿಚಾರ ಇದುವರೆಗೆ, ಕಾಂಗ್ರೆಸ್ಸಿನಲ್ಲಿ ಚರ್ಚೆಯೇ ಆಗಿರಲಿಲ್ಲ. ಅಂತಹ ಪ್ರವಾಸಕ್ಕೆ ಸಾರ್ವಜನಿಕ ವಲಯಗಳಲ್ಲಿ ವಿರೋಧ ಇದ್ದರೂ, ಇದುವರೆಗೆ ರಾಜಕೀಯ ಪಕ್ಷಗಳೆಲ್ಲವೂ ಈ ವಿಚಾರದಲ್ಲಿ ಸುಮ್ಮನೆ ಇದ್ದವು. ಈ ವಿಚಾರದಲ್ಲಿ ಸ್ಪಷ್ಟವಾದ ನಿಲವನ್ನು ಪ್ರಕಟಿಸದೇ ಸಿದ್ದರಾಮಯ್ಯ, ತಮ್ಮ ರಾಜಕೀಯ ನಾಯಕತ್ವದ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವಿಫಲರಾಗಿರುವುದೂ ನಿಜ.
ಮುಖ್ಯಮಂತ್ರಿಯ ವರ್ಚಸ್ಸನ್ನು ಕುಗ್ಗಿಸಿ, ಇಬ್ಬರು ಶಾಸಕರ (ಅವರು ಅವರವರ ಸಮುದಾಯದಲ್ಲಿ ಎಷ್ಟೇ ಪ್ರಭಾವಶಾಲಿಗಳಾಗಿರಲಿ) ವರ್ಚಸ್ಸನ್ನು ಹಿಗ್ಗಿಸಿದರೆ, ಅದರಿಂದ ಪಕ್ಷದ ಮೇಲಾಗುವ ಪರಿಣಾಮ ಕುರಿತು ಕಾಂಗ್ರೆಸ್ ನಾಯಕರು ವಿಚಾರ ವಿನಿಮಯ ನಡೆಸಿದಂತಿಲ್ಲ. ರಾಜಕೀಯವಾಗಿ, ಸಿದ್ದರಾಮಯ್ಯ ಅವರ ಅಧಿಕಾರವನ್ನು ನಿಯಂತ್ರಿಸುವುದೇ, ಕಾಂಗ್ರೆಸ್ ವರಿಷ್ಠರ ಉದ್ದೇಶವಾಗಿದ್ದರೆ, ಅದು ಈಡೇರುವುದೂ ಕಷ್ಟವೇ. ಸಿದ್ದರಾಮಯ್ಯ ಅವರು ಪಕ್ಷದ ಪರವಾಗಿ ಮುಖ್ಯಮಂತ್ರಿಯಾಗಿ, ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಮನಸ್ಸಿನ ಅಂತರಾಳದ ಭಾವನೆಗಳನ್ನು ಪ್ರದರ್ಶಿಸದೇ ಇರಬಹುದು. ಆದರೆ ಸಿದ್ದರಾಮಯ್ಯ ಅವರ ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತಚಿಂತಕರ ಸಮುದಾಯದಲ್ಲಿ ಕಾಂಗ್ರೆಸ್ಸಿನ ಶಿಸ್ತಿಗೆ ಒಳಪಡದೇ ಇರುವವರೂ ಬೇಕಾದಷ್ಟು ವ್ಯಕ್ತಿಗಳಿದ್ದಾರೆ.
ಸಿದ್ದರಾಮಯ್ಯ, ಪರಿಸ್ಥಿತಿಯ ಪಿತೂರಿಯಿಂದಾಗಿ ಈಗಿನ ಪರಿಸ್ಥಿತಿಯನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸಲು ಮುಂದಾದರೂ, ಅವರ ಕಾಂಗ್ರೆಸ್ಸೇತರ ಅಭಿಮಾನಿಗಳು ಸುಮ್ಮನಿರುವುದಿಲ್ಲ.
ಮಂತ್ರಿಮಂಡಲದ ಪುನಾರಚನೆ, ನಿಗಮ- ಮಂಡಳಿಗಳ ಅಧ್ಯಕ್ಷ - ನಿರ್ದೇಶಕರ ಸ್ಥಾನಗಳಿಗೆ ಸೂಕ್ತ ಅರ್ಹ ವ್ಯಕ್ತಿಗಳ ನೇಮಕದ ಸಮಗ್ರ ಸ್ವರೂಪದ ಅಧಿಕಾರದ ಹಂಚಿಕೆಯ ವಿಚಾರ ಪರಿಶೀಲನೆಯಲ್ಲಿರುವಾಗ ಇಬ್ಬರು ಶಾಸಕರ ಪ್ರತಿಷ್ಠೆಯ ರಕ್ಷಣೆಯೇ ವರಿಷ್ಠರಿಗೆ ದೊಡ್ಡದಾಯಿತೇನು?
ಕೇಜ್ರಿವಾಲರ ಮೊದಲ ಹೆಜ್ಜೆ: ಎಲ್ಲರೂ ಬೆರಗುಗೊಳ್ಳುವ ರೀತಿಯಲ್ಲಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸು ಗಳಿಸಿದ್ದರೂ, ಬಹುಮತ ಗಳಿಸಲಾಗದೇ ಹೋದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ ಅವರು ಧೈರ್ಯ ಮಾಡಿ, ಮುಖ್ಯಮಂತ್ರಿಯ ಸ್ಥಾನದಲ್ಲಿ ಕೂಡಲು ನಿರ್ಧರಿಸಿದ್ದೇ ಒಂದು ದೊಡ್ಡ ವಿಷಯ.
ಅಷ್ಟೇ ಸಾಲದೆನ್ನುವಂತೆ ಅವರು ಅಧಿಕಾರವನ್ನು ವಹಿಸಿಕೊಂಡು ಒಂದು ರಾತ್ರಿ ಕಳೆದು ಬೆಳಗಾಗುವುದರ ಒಳಗಾಗಿ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿನ ಎರಡು ಪ್ರಮುಖ ಅಂಶಗಳನ್ನು ದಿಢೀರನೆ ಜಾರಿಗೆ ತಂದಿದ್ದು ನಿಜಕ್ಕೂ ಒಂದು ಪವಾಡ ಸದೃಶವಾದ ಕೆಲಸವೇ. ಅದರಲ್ಲೂ ಜನಸಾಮಾನ್ಯ ವರ್ಗಗಳನ್ನು ತೃಪ್ತಿಪಡಿಸುವ ಉಚಿತ ನೀರು ಪೂರೈಕೆ ಹಾಗೂ ವಿದ್ಯುಚ್ಛಕ್ತಿ ದರದಲ್ಲಿ ಅರ್ಧದಷ್ಟು ಕಡಿಮೆ ಮಾಡುವ ನಿರ್ಧಾರಗಳನ್ನು ಜಾರಿಗೆ ತರುವುದೆಂದರೆ ಸಾಮಾನ್ಯವಾದ ವಿಚಾರವೇನೂ ಅಲ್ಲ. ಉಚಿತ ನೀರಿನ ಸೌಲಭ್ಯ ಕಡಿಮೆ ನೀರು ಬಳಸುವವರಿಗೆ ಮಾತ್ರ ಸೀಮಿತ. ಹೆಚ್ಚು ನೀರನ್ನು ಬಳಸುತ್ತಿರುವ ಉದ್ಯಮಗಳು ಹಾಗೂ ಶ್ರೀಮಂತರು, ನೀರಿಗೆ ಹೆಚ್ಚು ಹಣವನ್ನು ತೆರಬೇಕಾಗುತ್ತದೆ. ಈ ನಿರ್ಧಾರದ ಹಿಂದಿನ ತರ್ಕವನ್ನು ಒಪ್ಪಬಹುದಾದರೂ, ಜಲಮಂಡಳಿ, ದೆಹಲಿಯ ಕೊಂಪೆಗಳಿಗೆ ಕೊಳವೆಗಳ ಮೂಲಕ ಶುದ್ಧ ನೀರನ್ನು ಒದಗಿಸುವ ಯೋಜನೆಯಲ್ಲಿ ವಿಳಂಬವಾಗುವ ಸಂಭವವೂ ಇದೆ. ವಿಜಯದ ಹುಮ್ಮಸ್ಸಿನಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ಕುರಿತು ಸಾಕಷ್ಟು ಗಂಭೀರವಾದ ಚಿಂತನೆ ನಡೆದಂತಿಲ್ಲ.
ದೆಹಲಿಯ ಮುಖ್ಯಮಂತ್ರಿಯೂ ಸೇರಿದಂತೆ, ಎಲ್ಲ ಮಂತ್ರಿಗಳೂ ವಿಶಾಲವಾದ ಬಂಗಲೆಗಳಿಗೆ ಹೋಗದೇ ಸಾಧಾರಣವಾದ ಮನೆಗಳಲ್ಲೇ ಇರುವ ನಿರ್ಧಾರವೂ ಅಷ್ಟೇ. ಮುಖ್ಯಮಂತ್ರಿ, ಮಂತ್ರಿಗಳು ಸರಳ ಜೀವನ ನಡೆಸಬೇಕೆನ್ನುವ ಸಿದ್ಧಾಂತವನ್ನು ಒಪ್ಪ ಬಹುದಾದರೂ, ಸಾರ್ವಜನಿಕ ಸೇವಕರ ಭದ್ರತೆಯ ದೃಷ್ಟಿಯಿಂದ ಸರಳ ಜೀವನದ ಕೆಲವು ನಿಯಮಗಳನ್ನು ಬದಲಾಯಿಸಿಕೊಳ್ಳಲೇ ಬೇಕಾಗಬಹುದು. ಆದರೂ ಕೇಜ್ರಿವಾಲ ಹಾಗೂ ಅವರ ಸಂಗಾತಿಗಳ ಈಗಿನ ಮನೋಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ. ಆಮ್ ಆದ್ಮಿ ಪಕ್ಷದ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿರುತ್ತದೆ ಎನ್ನುವುದು ಮುಖ್ಯವಲ್ಲ, ಅದು ಆ ಕಾಲದಲ್ಲಿ ಯಾವ ರೀತಿಯಲ್ಲಿ ವರ್ತಿಸುತ್ತದೆ ಎನ್ನುವುದು ಮುಖ್ಯ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಅವರಿಗೆ ವಾಸ್ತವ ಸ್ಥಿತಿಯ ಅರಿವು ಇದ್ದಂತಿದೆ.
ಕಿಡಿಗೇಡಿತನ: ಕೇಂದ್ರ ವಿತ್ತಮಂತ್ರಿ ಪಿ. ಚಿದಂಬರಮ್, ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ ಚೌಹಾಣ್ ಅವರಿಬ್ಬರೂ, ಏಕಕಾಲದಲ್ಲಿ, ಆದರೆ ಪ್ರತ್ಯೇಕ ಸಂದರ್ಭಗಳಲ್ಲಿ ಈ ವರ್ಷದ ಚುನಾವಣೆಯಲ್ಲೂ ಅತಂತ್ರ ಲೋಕಸಭೆಯ ರಚನೆಯಾದರೆ, ಭವಿಷ್ಯದ ವಿಚಾರದಲ್ಲಿ ಭೀತಿಯುಂಟಾಗುತ್ತದೆ ಎಂದಿದ್ದಾರೆ. ಆಳುವ ಕೂಟದ ನಾಯಕ ಪಕ್ಷವಾದ ಕಾಂಗ್ರೆಸ್ ಮುಖಂಡರು ಆಡುವ ಮಾತೇ ಇದು? ಬಹುಮತ ಗಳಿಸುವ ವಿಶ್ವಾಸ ಆ ಪಕ್ಷಕ್ಕೆ ಇಲ್ಲವೇ?
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

