ಅಂಕಣಗಳು

ನಮ್ಮ ದೇಶದ ಮುಂದೆ ಐಸ್‌ಲ್ಯಾಂಡ್ ಬೋರೋ ಬೋರು!

'ಇಲ್ಲಿ ತನಕ ನೀವು ನಲವತ್ತೇಳು ದೇಶಗಳಿಗೆ ಹೋಗಿದ್ದೀರಿ. ನಿಮಗೆ ಬಹಳ ಇಷ್ಟವಾದ...

ನಮ್ಮ ದೇಶದ ಮುಂದೆ ಐಸ್‌ಲ್ಯಾಂಡ್ ಬೋರೋ ಬೋರು!
Published On :

'ಇಲ್ಲಿ ತನಕ ನೀವು ನಲವತ್ತೇಳು ದೇಶಗಳಿಗೆ ಹೋಗಿದ್ದೀರಿ. ನಿಮಗೆ ಬಹಳ ಇಷ್ಟವಾದ ದೇಶ ಯಾವುದು?' ಎಂದು ಸ್ನೇಹಿತರೊಬ್ಬರು ಕೇಳಿದರು. ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಪ್ರತಿಯೊಂದು ದೇಶವೂ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ತನ್ನದೇ ಆದ ಕಾರಣಗಳಿಂದ ಇಷ್ಟವಾಗುತ್ತದೆ. ಒಂದು ದೇಶವನ್ನು ಮತ್ತೊಂದರ ಜತೆಗೆ ಹೋಲಿಸುವುದು ಕಷ್ಟ ಹಾಗೂ ಹೋಲಿಸಬಾರದು. ಸೇಬುಹಣ್ಣಿನ ಜತೆ ಟೊಮೆಟೋ ಹೋಲಿಸಿದಂತಾಗುತ್ತದೆ. ಎಂಥ ದರಿದ್ರ ದೇಶ ಸಹ ಅದರ ಸಾಂಸ್ಕೃತಿಕ, ಐತಿಹಾಸಿಕ ಕಾರಣಗಳಿಂದ ಗಮನ ಸೆಳೆಯಬಹುದು. ನೀವು ಯಾವುದೇ ದೇಶಕ್ಕೆ ಹೋಗಿ ಬಂದ 20-25 ದಿನಗಳವರೆಗೆ ಆ ದೇಶದ ಇಮೇಜುಗಳು ಮನಸ್ಸಿನ ಮೇಲ್ಪದರಲ್ಲಿ ತೇಲುತ್ತಿರುತ್ತವೆ. ನಾನು ರವಾಂಡ ಎಂಬ ಒಂದು ಕಾಲದ ಶಾಪಗ್ರಸ್ತ ದೇಶಕ್ಕೆ ಹೋಗಿ ಮರಳಿ ಬಂದು ಎಂಟು ತಿಂಗಳಾಗಿರಬಹುದು. ಇಂದಿಗೂ ರವಾಂಡ ನನ್ನೊಳಗೆ ಗುನುಗುತ್ತಿದೆ.
ಹಾಗೆಂದು ರವಾಂಡಕ್ಕಿಂತ ಸುಂದರ, ಶ್ರೀಮಂತ, ಆಧುನಿಕ, ವ್ಯವಸ್ಥಿತವಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್, ಸ್ವಿಜರ್‌ಲ್ಯಾಂಡ್, ಚೀನಾ ಮುಂತಾದ ದೇಶಗಳಿಗೆ ಹೋಗಿ ಬಂದರೂ, ಅದೇಕೋ ಗೊತ್ತಿಲ್ಲ, ಅವ್ಯಾವುವೂ ರವಾಂಡದಷ್ಟು ನನ್ನನ್ನು ಬಲವಾಗಿ ಕಾಡಿಲ್ಲ. ಒಂದು ಕಾಲಕ್ಕೆ ರವಾಂಡ ಆಫ್ರಿಕಾ ಖಂಡದ ದಟ್ಟದರಿದ್ರ ದೇಶಗಳಲ್ಲೊಂದಾಗಿತ್ತು. ಬಡತನ, ಹಸಿವು, ಅನಕ್ಷರತೆ, ರೋಗ-ರುಜಿನು, ಹೊಡೆದಾಟ, ಬಡಿದಾಟಗಳಿಂದ ತತ್ತರಿಸಿದ ದೇಶವಾಗಿತ್ತು. ಈಗ ಇಪ್ಪತ್ತು ವರ್ಷಗಳ ಹಿಂದೆ ಸಂಭವಿಸಿದ ಜನಾಂಗೀಯ ಘರ್ಷಣೆ  (Gen‌o‌c‌ide)​ ​ಯಲ್ಲಿ ನೂರು ದಿನಗಳ ಅವಧಿಯಲ್ಲಿ ಹತ್ತು ಲಕ್ಷ ಜನರ ಮಾರಣಹೋಮವಾಗಿತ್ತು. ಅಂದರೆ ಒಂದು ದಿನಕ್ಕೆ ಸರಾಸರಿ ಹತ್ತು ಸಾವಿರ ಮಂದಿ ಹತ್ಯೆಯಾಗಿತ್ತು. ರವಾಂಡದ ರಾಜಧಾನಿ ಕಿಗಾಲಿಯಲ್ಲಿ ಒಂದು ಸಂದರ್ಭದಲ್ಲಿ ಬೀದಿ ಬದಿಯಲ್ಲಿ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಹೆಣಗಳು ಬಿದ್ದಿದ್ದವಂತೆ. ಅವೆಲ್ಲವನ್ನು ಕಟ್ಟಿಗೆಗಳನ್ನು ಪೇರಿಸಿದಂತೆ ರಾಶಿ ಹಾಕಿ ಸುಟ್ಟು ಹಾಗೂ ಹುಗಿದು ಅಂತ್ಯಕ್ರಿಯೆ ಮಾಡಲಾಯಿತಂತೆ. ಅಂಥ ದೇಶ ಇಂದು ನಿಧಾನವಾಗಿ ತಲೆಯೆತ್ತಿ ನಿಂತಿದೆ. ಸಿಂಗಾಪುರವಾಗುವ ಕನಸನ್ನು ಕಾಣುತ್ತಿದೆ. ರವಾಂಡದ ಭೂಮಿಯ ಮೇಲೆ ಎಲ್ಲಿಯೇ ಕಾಲಿಡಿ, ಮನುಷ್ಯ ರಕ್ತ ಕಾಲಿಗೆ ಅಂಟಿಕೊಂಡ ಅನುಭವವಾಗುತ್ತದೆ. ಮಾನವ ಇತಿಹಾಸದಲ್ಲಿ ಅಷ್ಟೊಂದು ನೆತ್ತರು ಒಂದೇ ಜಾಗದಲ್ಲಿ ಹರಿದಿರಲಿಕ್ಕಿಲ್ಲ!
ಎರಡು ದಿನಗಳು ಕಳೆದರೂ ಅಲ್ಲಿದ್ದಾಗ ನನ್ನ ಕಣ್ಣೊಳಗೆ ನಿದ್ದೆಯೇ ಇಳಿದಿರಲಿಲ್ಲ. ಇಡೀ ದೇಶಕ್ಕೆ ದೇಶವೇ ಸ್ಮಶಾನದಂತೆ, ಅಲ್ಲೆಲ್ಲ ಲಕ್ಷಾಂತರ ಭೂತ, ಪಿಶಾಚಿ, ಬೇತಾಳಗಳು ನರ್ತಿಸಿದಂತೆ ಭಾಸವಾಗುತ್ತಿತ್ತು. ಇದಕ್ಕೆ ಯಾವ ಸಿಂಡ್ರೋಮು ಅಥವಾ ಫೋಬಿಯಾ ಅಂತ ಕರೆಯುತ್ತಾರೋ ಗೊತ್ತಿಲ್ಲ, ಎರಡು ದಿನ ಸರಿಯಾಗಿ ಊಟ, ತಿಂಡಿ ಸೇರಿರಲಿಲ್ಲ. ನನ್ನ ಜತೆಗಿದ್ದ ಸ್ನೇಹಿತರೊಬ್ಬರ ಆರೋಗ್ಯ ಕೈಕೊಟ್ಟಿತಾದರೂ, ಅವರು ಮರುದಿನವೇ ಅಲ್ಲಿಂದ ಕಾಲ್ಕಿತ್ತು ಭಾರತಕ್ಕೆ ಬರಲು ರವಾಂಡದ ರಕ್ತಸಿಕ್ತ ಇತಿಹಾಸ, ನೆತ್ತರು ಕುಡಿದ ನೆಲ, ಭೀಕರ ಕತೆ, ಮೈನವಿರೇಳಿಸುವ ಜನಾಂಗೀಯ ಕಲಹ ಹಾಗೂ ಈ ಎಲ್ಲ ಅಪಸವ್ಯಗಳಿಂದ ಅವತರಿಸಿದ ಅಲ್ಲಿನ ಪರಿಸರ ಮತ್ತು ವಾತಾವರಣ ಕಾರಣವಾಗಿದ್ದಿರಬಹುದು ಎಂಬುದು ನನ್ನ ಗುಮಾನಿ. ಈ ಚರಿತ್ರೆಯನ್ನು ಓದಿದ ಯಾರಿಗೇ ಆದರೂ ಮೊದಲ ಬಾರಿಗೆ ಕಾಲಿಡುವಾಗ ಎಲ್ಲ ಚಿತ್ರಿಕೆಗಳು ಒಟ್ಟಾಗಿ ಮನಸ್ಸಿಗೆ ಡಿಕ್ಕಿ ಹೊಡೆಯುತ್ತವೆ. ಅಂಥ ದೇಶದ ಒಡಲೊಳಗೆ ಇಂದು ಅಸಂಖ್ಯ ಕನಸುಗಳು ಮೊಟ್ಟೆಯಿಟ್ಟಿವೆ.
ಬರಬರುತ್ತಾ ಕಾಲ ಎಲ್ಲವನ್ನೂ ಮರೆಯುವಂತೆ ಮಾಡುತ್ತದೆ. ರವಾಂಡ ಇಂದು ಮನಸಿನೊಳಗಿನ ಹಾಗಲಕಾಯಿಯನ್ನು ಹೊಸಕಿ ಹಾಕಿ ಸಿಹಿಗುಂಬಳಕಾಯಿ ಬಳ್ಳಿಯನ್ನು ಮೈಮೇಲೆ ಅರಳಿಸಿಕೊಂಡು ನಿಂತಿದೆ. ನೆತ್ತರು ಹರಿದ ನದಿಯಲ್ಲಿ ಪ್ರೀತಿ, ಸ್ವಚ್ಛಂದತೆ ಹರಿಯುತ್ತಿದೆ. ನೆತ್ತರು ಚಿಮ್ಮಿದ ದೇಶದಲ್ಲಿ ಕರುಣೆಯ ಕಾಮನಬಿಲ್ಲು ಮೂಡುತ್ತಿದೆ. ಅಕ್ಕಪಕ್ಕದವರನ್ನು ಪರಮವೈರಿಗಳಂತೆ ಅಟಕಾಯಿಸಿ ಬಡಿದಾಡಿಕೊಂಡು ನಿರ್ನಾಮವಾದ ಕುಟುಂಬಗಳಲ್ಲಿ ಬದುಕುಳಿದವರು ಎಲ್ಲವನ್ನೂ ಮರೆತು, ವಿಶ್ವಾಸ, ಪ್ರೀತಿಯ ಮುಂದೆ ಸೋತು ಪುನಃ ಕೊರಳ ಬಾಂಧವರಾಗಿದ್ದಾರೆ. ವಿಷಾದ ತುಂಬಿದ ಹೃದಯದಲ್ಲಿ ವಿಶ್ವಾಸವನ್ನು ಮೂಡಿಸುವ ರವಾಂಡ, ಬದುಕಿನ ಗುಣಾವಗುಣಗಳ ಸಂಕಲನದಂತೆ ತೋರುತ್ತದೆ. ಸರ್ವಸ್ವವನ್ನೂ ಕಳೆದುಕೊಂಡ ನೆಲದಲ್ಲಿಯೇ ಎಲ್ಲವನ್ನೂ ಮರಳಿ ಪಡೆಯಲು ಶ್ರಮಿಸುತ್ತಿದೆ. ಕ್ರೌರ್ಯವೆಂಬ ಅಗ್ನಿಪರ್ವತ ಕೂಡ ನೀರಿನಿಂದ ಆವೃತ್ತವಾಗುವ ಹೋಮ ಕುಂಡದಂತೆ ನಿಷ್ಕ್ರಿಯವಾಗಬಹುದು. ಅದೇ ಬೂದಿ ಮಮತೆ, ಕಕ್ಕುಲಾತಿಯ ಬೆಳೆಗೆ ಪೌಷ್ಠಿಕ ಗೊಬ್ಬರವಾಗಬಹುದೆಂಬುದನ್ನು ರವಾಂಡದ ಜನ ನಿತ್ಯವೂ ಮನಗಾಣುತ್ತಿದ್ದಾರೆ. ತಮ್ಮ ಪೂರ್ವಿಕರು ಸತ್ತ ಮಣ್ಣಿನಲ್ಲಿ ಸತ್ತ್ವ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಕ್ಷಣಕ್ಷಣವೂ ಅಲ್ಲಿ ಮಾನವ ಸಂಬಂಧ ಮಗ್ಗಲು ಬದಲಿಸುತ್ತಾ, ಗೆಲುವನ್ನು ದಾಖಲಿಸುತ್ತಲೇ ಹೋಗುತ್ತಿದೆ.
'ನಲವತ್ತೇಳು ದೇಶಗಳ ಪೈಕಿ ನಿಮಗೆ ಯಾವುದು ಇಷ್ಟ?' ಎಂದು ಕೇಳಿದ ಸ್ನೇಹಿತರಿಗೆ ಈ ಎಲ್ಲ ಸಂಗತಿಗಳನ್ನು ಹೇಳಿದೆ. ಅಮೆರಿಕವನ್ನು ಇಷ್ಟಪಡುವ ಕಾರಣಗಳ ಹುಡಿಗಳನ್ನು ರವಾಂಡದ ಮೇಲೆ ಚೆಲ್ಲಿದರೆ ಅವು ಕೆಲ ಹೊತ್ತಿನಲ್ಲಿ ಮಣ್ಣಾಗಿ ಹೋಗಬಹುದು. ಯಾವ ತಕ್ಕಡಿಯಲ್ಲಿಟ್ಟರೂ ಆ ಎರಡು ದೇಶಗಳನ್ನು ಅಳೆಯಲು, ತೂಗಲು ಸಾಧ್ಯವಿಲ್ಲ. ಹೀಗಿರುವಾಗ ಈ ಎರಡೂ ದೇಶಗಳನ್ನು ಯಾವ ಜರಡಿಯಲ್ಲಿಟ್ಟು ಸೋಸುವುದು? ಅದು ಅದೇ. ಇದು ಇದೇ. ಸಮಸ್ಯೆಯಾಗೋದು ಎಲ್ಲಿ ಅಂದ್ರೆ ಆ ಎರಡರ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ. ಇನ್ನು ಎಲ್ಲ ದೇಶಗಳು ಒಂದೇ ರೀತಿ ಕಾಣುವುದು ಪೈಲಟ್‌ಗಳಿಗೆ ಮಾತ್ರ. ಮೇಲಿಂದ ನೋಡಿದರೆ ಎಲ್ಲವೂ ಒಂದೇ. ಅದಿರಲಿ.
ನಾನು ನಿಮಗೆ ಹೇಳಬೇಕೆಂದುಕೊಂಡಿದ್ದು ಈ ವಿಷಯದ ಬಗ್ಗೆ ಅಲ್ಲ. ಕೊಂಕಣಸುತ್ತಿ ಮೈಲಾರಕ್ಕೆ ಹೋದರು ಅಂತಾರಲ್ಲ ಹಾಗಾಯಿತು.
ಮೊನ್ನೆ ಸ್ನೇಹಿತರೊಬ್ಬರನ್ನು ಭೇಟಿ ಮಾಡಲೆಂದು ವಿಂಡ್ಸರ್ ಮ್ಯಾನರ್ ಹೋಟೆಲ್‌ಗೆ ಹೋಗಿದ್ದೆ. ವಾಪಸ್ ಬರುವಾಗ ಲಿಫ್ಟ್‌ನಲ್ಲಿ ನವದಂಪತಿ (ತೇಜ್‌ಪಾಲ್ ಪ್ರಕರಣದ ನಂತರ ಲಿಫ್ಟ್‌ನಲ್ಲಿ ಹೋಗಲು ಅಥವಾ ಯಾರನ್ನಾದರೂ ಭೇಟಿ ಮಾಡಲು ಏನೋ ದುಗುಡ) ಭೇಟಿ ಮಾಡಿದೆ. ಇಬ್ಬರನ್ನು ನೋಡುತ್ತಿದ್ದಂತೆ ಮುಗುಳ್ನಕ್ಕರು. 'ಹಲೋ ಗುಡ್ ಇವನಿಂಗ್‌' ಅಂದರು. ನಾನೂ 'ಗುಡ್ ಇವನಿಂಗ್.. ನನ್ನ ಹೆಸರು ವಿಶ್ವೇಶ್ವರಭಟ್‌' ಅಂದೆ. ಅದಕ್ಕೆ ಆತ 'ನಾನು ಅರಾನ್ ಒಲಾಫುರ್‌ಸನ್ ಹಾಗೂ ಈಕೆ ನನ್ನ ಪತ್ನಿ ಲಿಲ್ಜಾ ಗುಡ್ರುನ್‌ಡಾಟಿರ್‌' ಎಂದ.
ನನ್ನಲ್ಲೊಂದು ಮಿಂಚು ಸರಿದು ಹೋದಂತಾಯಿತು. ಯಾವದೋ ನೆನಪಿನ ಸೆಳಕು ನನ್ನಲ್ಲಿ ಸಳೆದಂತಾಯಿತು. ತಕ್ಷಣ ನಾನು 'ನೀವು ಐಸ್‌ಲ್ಯಾಂಡಿನವರಾ?' ಎಂದು ಕೇಳಿದೆ. ಅವರಿಗೂ ಅತೀವ ಅಚ್ಚರಿ. ಅವರು ತೆರೆದ ಬಾಯಿಯನ್ನು ಮುಚ್ಚಿರಲಿಲ್ಲ. 'ಹೌದು, ನಾವು ಐಸ್‌ಲ್ಯಾಂಡಿನವರು. ಹನಿಮೂನಿಗೆಂದು ಶ್ರೀಲಂಕಾಕ್ಕೆ ಹೋಗಿದ್ದೆವು. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿದ್ದೇವೆ. ಅದ್ಸರಿ. ನಿಮಗೆ ನಾವು ಐಸ್‌ಲ್ಯಾಂಡಿನವರು ಅಂತ ಹೇಗೆ ಗೊತ್ತಾಯ್ತು? we a‌re ve‌ry ‌c‌u‌r‌i‌o‌us t‌o ‌kn‌ow'  ಎಂದರು. 'ನಿಮ್ಮ ಹೆಸರು ಕೇಳಿದ ತಕ್ಷಣ ನೀವು ಐಸ್‌ಲ್ಯಾಂಡಿನವರೇ ಎಂದು ಗೊತ್ತಾಯಿತು' ಎಂದೆ. ಅಷ್ಟಕ್ಕೇ ಅವರಿಗೆ ಸಮಾಧಾನವಾಗಲಿಲ್ಲ. ಆಗ ನಾನು ಹೇಳಿದೆ-'ಸುಮಾರು ಎಂಟು ವರ್ಷಗಳ ಹಿಂದೆ ನಿಮ್ಮ ದೇಶಕ್ಕೆ ಹೋಗಿದ್ದೆ. ಒಂದು ವಾರವಿದ್ದೆ. ಬಹಳ ಸುಂದರ ದೇಶ, ಒಳ್ಳೆಯ ಜನ. ನಿನ್ನೆ ಮೊನ್ನೆಯ ನೆನಪಿನಂತಿದೆ.'
ಆ ನವದಂಪತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಆ ಕ್ಷಣದಲ್ಲಿ ನಾನು ಅವರ ಹತ್ತಾರು ವರ್ಷಗಳ ಆತ್ಮೀಯ ಸ್ನೇಹಿತನೋ, ಬಂಧುವೋ, ಪರಿಚಿತನೋ ಆಗಿಬಿಟ್ಟಿದ್ದೆ. 'ಜಗತ್ತು ಎಷ್ಟು ಸಣ್ಣದು. ಈ ಊರಿನಲ್ಲಿಯೂ ನಮ್ಮ ದೇಶಕ್ಕೆ ಹೋಗಿ ಬಂದವರು ಇದ್ದಿರಬಹುದು, ಅವರನ್ನು ನಾವು (ಅಚಾನಕ್ ಆಗಿ) ಭೇಟಿ ಮಾಡಬಹುದು ಎಂದು ಅಂದುಕೊಂಡಿರಲಿಲ್ಲ. ನಿಜಕ್ಕೂ ನಮ್ಮಿಬ್ಬರಿಗೆ ಅತೀವ ಸಂತಸವಾಗುತ್ತಿದೆ' ಎಂದರು. ನನ್ನ ಭಾವನೆಯೂ ಅದೇ ಆಗಿತ್ತು. ನಮ್ಮ ಮೂವರ ಅಭಿವ್ಯಕ್ತಿ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿತ್ತು. ಸುಮಾರು ಅರ್ಧ ಗಂಟೆ ನಾವು ಹೋಟೆಲ್ ಲಾಬಿಯಲ್ಲಿ ಮಾತಾಡುತ್ತಿದ್ದೆವು. ಅರಾನ್ ಒಲಾಫುರ್‌ಸನ್ ಕೇಳಿದ- 'ನಿಮಗೆ ಸಮಯವಿದ್ದರೆ, ರಾತ್ರಿ ಊಟಕ್ಕೆ ನಮ್ಮೊಂದಿಗೆ ಇದೇ ಹೋಟೆಲಿನಲ್ಲಿ ಸೇರಬಹುದಾ?' ಅದಕ್ಕೆ ನಾನು 'ಅವಶ್ಯ ಬರುತ್ತೇನೆ, ಆದರೆ ಒಂದು ಕಂಡೀಷನ್ನು. ಅದೇನೆಂದರೆ ನೀವು ನನ್ನ ಅತಿಥಿಗಳಾಗಬೇಕು' ಎಂದೆ. ಅವರಿಬ್ಬರೂ ಒಪ್ಪಿದರು. ನಾನು ಆಫೀಸಿಗೆ ಬಂದು ನನ್ನ ಕೆಲಸಗಳನ್ನೆಲ್ಲ ಮುಗಿಸಿ ವಾಪಸ್ ಹೋಟೆಲ್‌ಗೆ ಹೋದರೆ, ಆ ದಂಪತಿ ನನಗಾಗಿ ಲಾಬಿಯಲ್ಲಿ ಕಾಯುತ್ತಿದ್ದರು. ರಾತ್ರಿ ಎಂಟೂವರೆಗೆ ಶುರುವಾದ ನಮ್ಮ ಮಾತು, ನಗು, ಹರಟೆ, ನೆನಪು, ಕತೆ, ದೇಶ ಪರ್ಯಟನೆಯ ಮೆಲುಕು, ಮಧ್ಯರಾತ್ರಿ ಮಗುಚಿದರೂ ಮುಂದುವರಿದಿತ್ತು. ವೇಟರ್ ಬಂದು 'ಟೈಮಾಯ್ತು ಕ್ಲೋಸ್ ಮಾಡುತ್ತಿದ್ದೇವೆ' ಎಂದು ಹೇಳದೇ ಇದ್ದರೆ ಇನ್ನೂ ವಿಷಯದ ಶಿಲ್ಕುಗಳಿದ್ದವು. ಮೂವರೂ ಒಲ್ಲದ ಮನಸ್ಸಿನಿಂದ ಎದ್ದೆವು.
ಹೊರಡುವಾಗ ಹೇಳಿದೆ-'ಅರಾನ್, ಅದೇನೇ ಹೇಳಿ ನಿಮ್ಮ ದೇಶ ಅಂದ್ರೆ ಬಹಳ ಬೋರಿಂಗ್.' ಅದಕ್ಕೆ ಆತ 'ನಮ್ಮ ದೇಶದ ಬಗ್ಗೆ ಇಷ್ಟೆಲ್ಲ ತಿಳಿದುಕೊಂಡಿದ್ದೀರಿ. ನಮ್ಮ ರಾಷ್ಟ್ರಾಧ್ಯಕ್ಷ ಓಲೋಫರ್ ಗ್ರಿಮ್‌ಸನ್‌ನ ರಾಜಕೀಯ, ಪ್ರಣಯ, ಗರ್ಲ್‌ಫ್ರೆಂಡ್, ಮೂರನೆಯ ಮದುವೆಯಾದ ವಿಷಯಗಳ ಬಗ್ಗೆಯೂ ತಿಳಿದುಕೊಂಡಿದ್ದೀರಿ. ಇಷ್ಟು ಮುಕ್ತಕಂಠದಿಂದ ಹೊಗಳಿದಿರಿ. ಆದರೆ ಈಗ ನಮ್ಮ ದೇಶ ಅಂದ್ರೆ ಬೋರಿಂಗ್ ಅಂತೀರಲ್ಲ. ಕಾರಣವೇನು?' ಎಂದು ಕೇಳಿದ. ಅದಕ್ಕೆ ಪತ್ನಿ ಲಿಲ್ಜಾ ಸಹ ದನಿಗೂಡಿಸಿದಳು.
'ನಿಮ್ಮದೂ ಒಂದು ದೇಶವಾ?' ಎಂದು ಕೇಳಿದೆ. ಅವರಿಬ್ಬರೂ ಮುಖಮುಖ ನೋಡಿಕೊಂಡರು. 'ನಿಮ್ಮ ದೇಶದಲ್ಲಿ ಒಂದು ಕೊಲೆ, ಅತ್ಯಾಚಾರ, ದರೋಡೆ, ವಂಚನೆ, ಹೊಡೆದಾಟ, ಬಡಿದಾಟ, ಕಳ್ಳತನ, ಭೂಕಬಳಿಕೆ, ಡಿನೋಟಿಫಿಕೇಷನ್, ಕಳ್ಳನಾಟ ಸಾಗಾಟ, ವೇಶ್ಯಾವಾಟಿಕೆ, ಮಸಾಜ್ ಪಾರ್ಲರ್, ಮಟ್ಕಾ, ಹೀಗೆ ಯಾವುದೂ ನಡೆಯೋದೆ ಇಲ್ಲ. ಕೇಳಿದರೆ ಮೂವತ್ತೆಂಟು ವರ್ಷಗಳ ಹಿಂದೆ ಒಂದು ಅತ್ಯಾಚಾರವಾಗಿತ್ತು ಅಂತೀರಾ. ಹುಟ್ಟಿದವರೆಲ್ಲ ನಿಮ್ಮ ದೇಶದಲ್ಲಿ ವಯಸ್ಸಾಗಿಯೇ ಸಾಯುತ್ತಾರೆಯೇ ಹೊರತು, ಯಾರೂ ಅಪಘಾತದಲ್ಲಿ ಸಾಯುವುದಿಲ್ಲ. ಯಾರ ಮೈ ಮೇಲೂ ಕರೆಂಟು ಕಂಬ ಬೀಳುವುದಿಲ್ಲ. ಬೋರ್‌ವೆಲ್, ಚರಂಡಿಯಲ್ಲಿ ಯಾರೂ ಬಿದ್ದು ಸಾಯುವುದಿಲ್ಲ. ಮಾಟ-ಮಂತ್ರ ಮಾಡಿ ಯಾರನ್ನೂ ಮೋಸ ಮಾಡುವುದಿಲ್ಲ. ಟಿವಿಯಲ್ಲಿ ಗಂಡ -ಹೆಂಡತಿ ಜಗಳ ತೋರಿಸುವುದಿಲ್ಲ. ಧಾರಾವಾಹಿಯಲ್ಲಿ ಅತ್ತೆ-ಸೊಸೆ ಜಗಳ ತೋರಿಸುವುದಿಲ್ಲ. ಕಾಲಕ್ಷೇಪ ಮಾಡೋಣ ಅಂದ್ರೆ ಟಿವಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮವೂ ಇರುವುದಿಲ್ಲ. 'ಹೀಗೂ ಉಂಟೇ?' ಕಾರ್ಯಕ್ರಮ, ಮಹಾಪರ್ವ, ಅಶ್ವಿನಿ ನಕ್ಷತ್ರ, ಚರಣದಾಸಿ, ಲಕ್ಷ್ಮೀ ಬಾರಮ್ಮ ಧಾರಾವಾಹಿಗಳಾಗಲಿ, ಬ್ರಹ್ಮಾಂಡ ಗುರೂಜೀಯ ಬೈಗುಳಗಳ ಪ್ರೋಗ್ರಾಂ ಆಗಲಿ ಯಾವುದೂ ಇಲ್ಲವಲ್ಲ. ಹೀಗಾದರೆ ನಿಮ್ಮ ದೇಶದಲ್ಲಿ ಸಮಯ ಕಳೆಯುವುದು ಹೇಗೆ? ಅಷ್ಟೂ ಸಾಲದೆಂಬಂತೆ ನಿಮ್ಮ ದೇಶದಲ್ಲಿ ಕತ್ತಲೆಯೇ ಆಗುವುದಿಲ್ಲ. ಇಪ್ಪತ್ತನಾಲ್ಕು ಗಂಟೆಯೂ ಹಗಲು. ನನ್ನಂಥ ಸುದ್ದಿಜೀವಿ ಅಲ್ಲಿ ದಿನದೂಡುವುದಾದರೂ ಹೇಗೆ? ಅರ್ಧ ದಿನ ಕಳೆಯುವಷ್ಟರಲ್ಲಿ ತಲೆಚಿಟ್ಟು ಹಿಡಿದು ಹೋಗುತ್ತದೆ. ನಿಮ್ಮ ದೇಶದಲ್ಲಿ 24ಳ7 ಸುದ್ದಿ ಚಾನೆಲ್‌ಗೆ ಅವಕಾಶವೇ ಇಲ್ಲ. ಪತ್ರಿಕೆ ಆರಂಭಿಸಿದರೆ ಅಪರಾಧ, ಅಪಘಾತ ಸುದ್ದಿಗೆ ಅವಕಾಶವೇ ಇರುವುದಿಲ್ಲ. ಕಾರಣ ಅಂಥ ಘಟನೆಗಳು ನಡೆಯುವುದೇ ಇಲ್ಲ. ಇಂದು ಎಲ್ಲರೂ ಸಂತಸದಿಂದ, ನೆಮ್ಮದಿಯಿಂದ, ಆರಾಮವಾಗಿ ಕಾಲ ಕಳೆದರು ಎಂದು ಬರೆದರೆ ಪತ್ರಿಕೆಯನ್ನು ಯಾರು ತಾನೆ ಖರೀದಿಸುತ್ತಾರೆ? ನಮ್ಮ ಪತ್ರಿಕೆ, ಟಿವಿ ನೋಡಿ, ಫುಲ್ ಆಫ್ ಲೈಫ್. ಕಾರಣ ಪ್ರತಿಕ್ಷಣವೂ ಒಬ್ಬರದ್ದಾದರೂ ಲೈಫ್ ಹೋಗ್ತಾನೆ ಇರುತ್ತದೆ. ನೀರಸಕ್ಷಣ ಎಂಬುದೇ ಇಲ್ಲ. ನಿಮ್ಮ ದೇಶದಲ್ಲಿ ಮನೆ ಬಿಟ್ಟು ಕೆಲಸಕ್ಕೆ ಹೋದವರು ಸರಿಯಾದ ಸಮಯಕ್ಕೆ ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ. ಜೀವನವಿಡೀ ಇದನ್ನೇ ಮಾಡುತ್ತಾರೆ. ಈ ರೀತಿ ಜೀವನ ಕಳೆಯುವುದೆಂದರೆ ಬೋರಿಂಗ್ ಅಲ್ಲವಾ?' ಎಂದೆ.
ಮೂವರೂ ಜೋರಾಗಿ ನಕ್ಕೆವು. ಆರಂಭದಲ್ಲಿ ಲಿಲ್ಜಾಗೆ ನಾನು ಏನು ಹೇಳುತ್ತಿದ್ದೇನೆ ಎಂಬುದು ಗೊತ್ತಾಗಿರಲಿಲ್ಲ. 'ನಿಜಕ್ಕೂ ಇಂಡಿಯಾ ಗ್ರೇಟ್ ಕಂಟ್ರಿ' ಎಂದಳು ನನ್ನನ್ನು ಸಮಾಧಾನಪಡಿಸಲು. 'ನಮಗೆ ಯಾವುದು ಸುದ್ದಿಯೋ, ಅದು ನಿಮಗೆ ಸುದ್ದಿಯೇ ಅಲ್ಲ. ನಮ್ಮ ಪತ್ರಿಕೆ ಅಥವಾ ಟಿವಿ ಚಾನೆಲ್‌ನ್ನು ಎರಡು ವಾರ ಸಹ ನಿಮ್ಮ ದೇಶದಲ್ಲಿ ನಡೆಸಲು ಸಾಧ್ಯವಿಲ್ಲ' ಎಂದೆ. ಅವರಿಗೆ ನನ್ನ ಮಾತಿನ ಅರ್ಥ ಸಂಪೂರ್ಣ ಆಗಲಿಲ್ಲವೇನೋ? 'ನಿಮ್ಮ ದೇಶದ ಜನಸಂಖ್ಯೆ ಮೂರು ಲಕ್ಷದ ಇಪ್ಪತ್ತೊಂದು ಸಾವಿರ. ನಮ್ಮ ಕಾರ್ಪೋರೇಷನ್‌ನ ಒಂದು ವಾರ್ಡಿನಲ್ಲಿರುವಷ್ಟು ಜನ ನಿಮ್ಮ ಇಡೀ ದೇಶದಲ್ಲಿದ್ದಾರೆ. ಇವರೆಲ್ಲ ಪತ್ರಿಕೆ ಓದಿದರೆ, ಮನೆಗೆ ಒಂದು ಪತ್ರಿಕೆಯಂತೆ ಅದರ ಸಕ್ಯುಲೇಷನ್ ಹೆಚ್ಚೆಂದರೆ 60-70 ಸಾವಿರ ಆಗಬಹುದು. ದೇಶಕ್ಕೆ ದೇಶವೇ ಟಿವಿ ಮುಂದೆ ಕುಳಿತುಕೊಂಡರೆ ಟಿಆರ್‌ಪಿ ಶಂಕರ ಟಿವಿಯನ್ನು ಮೀರಿಸಲಾಗುವುದಿಲ್ಲ. ಹೀಗಿರುವಾಗ ನಮ್ಮಂಥ ಪತ್ರಕರ್ತರಿಗೆ ನಿಮ್ಮ ದೇಶದಲ್ಲಿ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿ' ಎಂದೆ. ಮೂವರೂ ಬಾಯ್ತುಂಬ ನಕ್ಕೆವು.
'Ind‌ia ‌is a ‌g‌reat ‌c‌o‌unt‌ry' ಎಂದು ಇಬ್ಬರೂ ನಾಲ್ಕಾರು ಸಲ ಹೇಳಿದರು. 'ನನಗೆ ನಿಮ್ಮ ದೇಶದ ಬಗ್ಗೆ ಅದ್ಭುತ ಅನಿಸಿದ್ದು ಏನು ಗೊತ್ತಾ?' ಎಂದು ಕೇಳಿದೆ. ಇಬ್ಬರು ತಮ್ಮ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟರು. 'ನಿಮ್ಮ ದೇಶದಲ್ಲಿ ಎಲ್ಲರ ಆಯುಷ್ಯವೂ ಎಂಭತ್ತೈದೋ, ತೊಂಬತ್ತು ವರ್ಷದ ನಂತರವೇ ತೀರುತ್ತದೆ. ಕೆಲವರಿಗೆ ನೂರ ಇಪ್ಪತ್ತು ವರ್ಷಗಳ ನಂತರ ತೀರುತ್ತದೆ. ಹುಟ್ಟಿದವರೆಲ್ಲ 85-90  ವರ್ಷ ಬಾಳಿಯೇ ಬಾಳುತ್ತಾರೆ. ನಮ್ಮ ದೇಶದಲ್ಲಿ ಹಾಗಲ್ಲ, ಯಾವಾಗ ಬೇಕಾದರೂ ಗೊಟಕ್ ಎನ್ನಬಹುದು. ನಿಮ್ಮ ದೇಶದಲ್ಲಿ ಹತ್ತು ಮನೆಗೆ ಮೂರು ಮನೆಯಲ್ಲಾದರೂ ಶತಾಯುಷಿಗಳು ಸಿಗುತ್ತಾರೆ. ಕಾಯಿಲೆ ಬಂದು, ಅಪಘಾತದಿಂದ ಯಾರೂ  ಸಾಯುವುದಿಲ್ಲ. ನಿಮ್ಮಲ್ಲಿ ಯಮರಾಜನಿಗೂ ಕೆಲಸವಿಲ್ಲ' ಎಂದೆ.
'ನಮ್ಮ ದೇಶದಲ್ಲಿ ನಿಮಗೆ ಯಾವುದಾದರೂ ಜಾಬ್ ಆಫರ್ ಮಾಡಿದರೆ ಯಾವ ಕೆಲಸ ಬಯಸುತ್ತೀರಿ?' ಎಂದು ಕೇಳಿದಳು ಲಿಲ್ಜಾ. 'ಪೊಲೀಸ್ ಕೆಲಸ' ಎಂದೆ.
ಕಾರಣ ಅಲ್ಲಿ ಪೊಲೀಸರಿಗೆ ಕೆಲಸವೂ ಇಲ್ಲ, ಕಮಾಯಿಯೂ ಇಲ್ಲ. ಅಂದ ಹಾಗೆ ಆ ದೇಶದಲ್ಲಿ 780 ಜನ ಪೊಲೀಸರಿದ್ದಾರೆ. ಕೊಲೆ, ಸುಲಿಗೆ ನಡೆಯದ ದೇಶದಲ್ಲಿ ಪೊಲೀಸರಿಗೇನು ಕೆಲಸ? ಆತ ಕಬ್ಬಿಣದ ಅಂಗಡಿಯಲ್ಲಿ ನೊಣವಿದ್ದಂತೆ!
ಅಂದ ಹಾಗೆ ಅವರ ಹೆಸರು ಕೇಳಿ ಐಸ್‌ಲ್ಯಾಂಡಿನವರೇ ಅಂತ ಹೇಳಿದ್ದು ಹೇಗೆ ಗೊತ್ತಾ? ಅಲ್ಲಿ ಗಂಡಸರ ಹೆಸರೂ 'ಸನ್‌'ನಿಂದಲೂ, ಹೆಂಗಸರ ಹೆಸರೂ 'ಡಾಟಿರ್‌' ನಿಂದಲೂ ಕೊನೆಗೊಳ್ಳುತ್ತವೆ. ಆ ದೇಶದ ಬಗ್ಗೆ ಹೇಳುವುದು ಬಹಳಷ್ಟಿವೆ.
ಎಂಟು ವರ್ಷಗಳ ಬಳಿಕ ಐಸ್‌ಲ್ಯಾಂಡ್ ನನ್ನಲ್ಲಿ ಹಾಸಿಕೊಂಡಿತ್ತು. ಆ ದಂಪತಿ ಐಸ್‌ಲ್ಯಾಂಡಿನ ರಾಜಧಾನಿ ರಿಕ್ಯಾವಿಕ್‌ನಿಂದ ಒಂದು ವಾರದ ಬಳಿಕ ಫೋನ್ ಮಾಡಿ 'ನಮ್ಮ ದೇಶದಲ್ಲಿ ನಿನ್ನೆ ಒಬ್ಬರು ತೀರಿಹೋದರು ಗೊತ್ತಾ?' ಎಂದರು. ನಾನು 'ಹೌದಾ? ಹೇಗೆ ಸತ್ತರು?' ಎಂದು ಕೇಳಿದೆ.
ಅಪಘಾತಗಳಲ್ಲಿ ಸತ್ತಿರಬೇಕು, ಇಲ್ಲದಿದ್ರೆ ಫೋನ್ ಮಾಡಿ ತಿಳಿಸುತ್ತಿರಲಿಲ್ಲ ಎಂದು ಒಳಮನಸ್ಸು ಹೇಳುತ್ತಿತ್ತು.
'ಅವರಿಗೆ ನೂರಾ ಹದಿನೆಂಟು ವರ್ಷ ವಯಸ್ಸಾಗಿತ್ತು' ಎಂದರು.
ಮುಂದಿನ ನಾಲ್ಕು ನಿಮಿಷ ನಮ್ಮಿಬ್ಬರ ನಡುವೆ ಜೋರಾದ ನಗುವಿತ್ತು.

-ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.