ಅಂಕಣಗಳು

'ಭೇಷ್ ಕಣಯ್ಯ' ಅಂದ ಮೇಷ್ಟ್ರಿಗೊಂದು ಬೀಳ್ಕೊಡುಗೆ

ಅವರ ಪೂರ್ಣ ಹೆಸರು ಡಾ. ಎ.ಎಸ್. ಬಾಲಸುಬ್ರಹ್ಮಣ್ಯ. ಆದರೆ...

'ಭೇಷ್ ಕಣಯ್ಯ' ಅಂದ ಮೇಷ್ಟ್ರಿಗೊಂದು ಬೀಳ್ಕೊಡುಗೆ
Published On :

ಅವರ ಪೂರ್ಣ ಹೆಸರು ಡಾ. ಎ.ಎಸ್. ಬಾಲಸುಬ್ರಹ್ಮಣ್ಯ. ಆದರೆ ವಿದ್ಯಾರ್ಥಿಗಳ ಪಾಲಿಗೆ ಅವರು ಪ್ರೀತಿಯ ಬಾಲು ಸರ್. ಅಷ್ಟರ ಮಟ್ಟಿಗೆ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್. ಬಾಲಸುಬ್ಮಹ್ಮಣ್ಯ ಅವರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು.
ಕವಿವಿ ಪತ್ರಿಕೋದ್ಯಮ ವಿಭಾಗದ 2-3 ಜನ ವಿದ್ಯಾರ್ಥಿಗಳು ಒಟ್ಟಿಗೆ ಸೇರಿದರೆ, ಬಾಲು ಸರ್ ಪ್ರಸ್ತಾಪವಿಲ್ಲದೇ ಅವರ ಮಾತು ಮುಗಿಯಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ಬಾಲು ಸರ್ ವಿದ್ಯಾರ್ಥಿಗಳಲ್ಲಿ ಹಾಸುಹೊಕ್ಕು. ಅಲ್ಲಿ ಕಲಿತ ಪ್ರತಿ ವಿದ್ಯಾರ್ಥಿಯೂ ಬಾಲು ಸರ್ ಅವರ ಒಂದಾದರೂ ಡೈಲಾಗ್ ನೆನಪಿಟ್ಟುಕೊಂಡಿರುತ್ತಾನೆ.
ಅಂತಹ ಬಾಲು ಸರ್ ನಿವೃತ್ತರಾಗುತ್ತಿದ್ದಾರೆ. ಇನ್ನೂ ನಿವೃತ್ತರಾಗಿಲ್ಲವಾ ಎಂದು ಅಚ್ಚರಿಪಡುವಷ್ಟು ವರ್ಷ ಅವರು ಕೆಲಸ ಮಾಡಿದ್ದಾರೆ.
ಯಾಕೆಂದರೆ ನಾನು ಕವಿವಿ ಪತ್ರಿಕೋದ್ಯಮ ವಿಭಾಗದಲ್ಲೇ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು.    ನನಗೆ ಅವರು ಗುರುಗಳಾಗಿದ್ದರು. ಈಗ ಪತ್ರಿಕಾ ಕಚೇರಿಗಳಿಗೆ ಇಂಟರ್ನ್‌ಶಿಪ್‌ಗೆಂದು ಬರುವವರಿಗೂ ಅವರೇ ಗುರುಗಳು!
ಕವಿವಿ ಪತ್ರಿಕೋದ್ಯಮ ವಿಭಾಗ ಆರಂಭವಾಗಿದ್ದು 1983ರಲ್ಲಿ. ಅಂದಿನಿಂದ ಇಂದಿನವರೆಗೆ ಬಾಲು ಸರ್ ಅದೆಷ್ಟು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಲಿಸಿದ್ದಾರೋ ಲೆಕ್ಕವಿಲ್ಲ. ಆದರೆ ಯಾವುದೇ ಪತ್ರಿಕೆ ಅಥವಾ ಚಾನಲ್ ಕಚೇರಿಗೆ ಹೋದರೆ, ಅವರ ಒಬ್ಬ ವಿದ್ಯಾರ್ಥಿಯಾದರೂ ಖಂಡಿತ ಸಿಗುತ್ತಾನೆ. ಇಷ್ಟು ಸುದೀರ್ಘ ಸೇವೆಯಿಂದಾಗಿ ಮತ್ತು ವಿದ್ಯಾರ್ಥಿಗಳೊಂದಿಗಿನ ಒಡನಾಟದಿಂದಾಗಿ ಕವಿವಿ ಪತ್ರಿಕೋದ್ಯಮ ವಿಭಾಗ ಅಂದರೆ ಬಾಲು ಸರ್ ಎಂಬಂತಾಗಿದೆ. ಇದು ಅವರ ಸಾಧನೆಯೇ ಸರಿ.
ಎಷ್ಟೋ ಮೇಷ್ಟ್ರುಗಳು ನಿವೃತ್ತರಾಗುತ್ತಾರೆ. ಅವರಿಗೆಲ್ಲ ಹಳೆ ವಿದ್ಯಾರ್ಥಿಗಳು ಸನ್ಮಾನ, ಆತ್ಮೀಯ ಬೀಳ್ಕೊಡುಗೆ ಮಾಡುತ್ತಾರೆಯೇ? ಆದರೆ ಬಾಲು ಸರ್‌ಗೆ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಧಾರವಾಡದಲ್ಲಿಯೇ ಒಂದು ಸನ್ಮಾನ ಆಯೋಜಿಸಿದ್ದಾರೆ.
ನಮ್ಮ ಪ್ರೀತಿಯ ಬಾಲು ಸರ್ ನಿವೃತ್ತರಾಗುತ್ತಿರುವುದನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಿಲ್ಲ. ಅವರು ಇನ್ನೊಂದಷ್ಟು ವರ್ಷ ಹೊಸ ಪತ್ರಕರ್ತರನ್ನು ಸೃಷ್ಟಿಸಲಿ ಎಂದೇ ಮನಸ್ಸು ಬಯಸುತ್ತದೆ. ಆದರೆ ಎಲ್ಲರೂ ಒಂದಲ್ಲ ಒಂದು ದಿನ ನಿವೃತ್ತಿ ಆಗಲೇಬೇಕು. ಆದರೆ ಒಬ್ಬ ಮೇಷ್ಟ್ರು ನಿವೃತ್ತರಾಗುತ್ತಾರೆ ಅಂದರೆ ಎಷ್ಟು ಜನ ನೆನಪಿಸಿಕೊಳ್ಳುತ್ತಾರೆ?
ಆದರೆ ಬಾಲು ಸರ್ ನಿವೃತ್ತರಾಗುತ್ತಿದ್ದಾರೆ ಎಂಬ ಕಾರಣಕ್ಕೆ ಅವರಿಗೊಂದು ಆತ್ಮೀಯ ಸನ್ಮಾನ ಏರ್ಪಡಿಸಲಾಗಿದೆ. ಹಳೆಯ ವಿದ್ಯಾರ್ಥಿಗಳೆಲ್ಲ ಒಟ್ಟಿಗೆ ಸೇರುವುದಕ್ಕೆ, ಹಳೆಯ ನೆನಪುಗಳನ್ನು ಮೆಲುಕು ಹಾಕುವುದಕ್ಕೊಂದು ಅವಕಾಶ.
ಬಾಲು ಸರ್ ನಿವೃತ್ತರಾಗಬಹುದು. ಆದರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಾವು ಇರುವವರೆಗೆ ಅವರು ನಮ್ಮ ಜತೆಗೇ ಇರುತ್ತಾರೆ. ಒಬ್ಬ ಮೇಷ್ಟ್ರ ದೊಡ್ಡ ತಾಕತ್ತೇ ಅದು. ಒಬ್ಬ ಮೇಷ್ಟ್ರು ತನ್ನಲ್ಲಿರುವ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಅದರ ಜತೆಗೆ ಬದುಕಿನ ಒಳನೋಟಗಳನ್ನು ಕೊಡಬೇಕು. ವಿಷಯದಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕು. ವೃತ್ತಿಯ ಸಣ್ಣ ಸಣ್ಣ ಗುಟ್ಟುಗಳನ್ನು ಹೇಳಿಕೊಡಬೇಕು. ದಾರ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡಬೇಕು.
ಆ ದಾರವನ್ನು ಬಳಸಿ ಹಗ್ಗ ಹೆಣೆಯಬೇಕೋ, ಹಗ್ಗಕ್ಕಿಂತ ಗಟ್ಟಿಯಾದ ಸರಪಳಿ ಮಾಡುವುದನ್ನು ಕಲಿತುಕೊಳ್ಳಬೇಕೋ ಎಂಬುದು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. ಅವರಿಂದಲೇ ದಾರ ಮಾಡುವುದನ್ನು ಕಲಿತವರು ಹಗ್ಗ ಹೆಣೆದಿದ್ದಾರೆ. ಸರಪಳಿ ಮಾಡಿಕೊಂಡಿದ್ದಾರೆ.
ಶಿಕ್ಷಕ ಇದ್ದಲ್ಲೇ ಇದ್ದು, ನಿವೃತ್ತರಾಗಿಬಿಡುತ್ತಾರೆ. ಆದರೆ ಅವರ ಶಿಷ್ಯರು ಅವರಿಗಿಂತ ಎತ್ತರಕ್ಕೆ ಬೆಳೆಯುತ್ತಿರುತ್ತಾರೆ. ಈ ಬೆಳವಣಿಗೆ ಕಂಡು ಖುಷಿಪಡುವ ವಿಶಾಲ ಮನಸ್ಸು ಬಾಲು ಸರ್‌ಗಿತ್ತು. ನನ್ನ 'ಶಿಷ್ಯ ಕಣಯ್ಯ' ಎಂದು ಅಭಿಮಾನದಿಂದ ಹೇಳುತ್ತಿದ್ದರು. ಅವರ ಶಿಷ್ಯರು ಒಂದು ಲೇಖನ ಬರೆಯಲಿ, ಪುಟ ವಿನ್ಯಾಸ ಮಾಡಲಿ, 'ಭೇಷ್ ಕಣಯ್ಯ. ಚೆನ್ನಾಗಿ ಮಾಡಿದ್ದೀಯಾ' ಎಂದು ಹೇಳುವ ಗುಣ ಕೂಡ ಅವರಲ್ಲಿತ್ತು. ಅವರ ಶಿಷ್ಯರು ಏನೇ ಬರೆಯಲಿ ಅದನ್ನು ಪ್ರೀತಿಯಿಂದ ಓದುವ ಹವ್ಯಾಸವೂ ಅವರಿಗಿತ್ತು.
ಬಾಲು ಸರ್ ಕೇವಲ ಪಾಠ ಮಾಡುತ್ತಿರಲಿಲ್ಲ. ವಿಷಯದ ಹಸಿವು ಮೂಡಿಸುತ್ತಿದ್ದರು. ಬಹುತೇಕ ಪತ್ರಿಕೋದ್ಯಮ ಮೇಷ್ಟ್ರುಗಳು ಅಪ್‌ಡೇಟ್ ಆಗುವುದಿಲ್ಲ. ಇಂದಿಗೂ 'ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ' ಎಂದೇ ಹೇಳಿಕೊಡುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ನಾಯಿ ಮನುಷ್ಯರಿಗೆ, ಕಮಿಷನರ್‌ಗೆ ಕಚ್ಚಿದ್ದು ದೊಡ್ಡ ಸುದ್ದಿಯಾಗಿ, ಸಚಿವರು ರಾಜೀನಾಮೆ ಕೊಡುವ ಹಂತ ತಲುಪಿತ್ತು. ಆದರೆ ಅದು ಬೇರೆ ಮಾತು. ಈ ವಿಷಯದಲ್ಲಿ ಬಾಲು ಸರ್ ಡಿಫರೆಂಟ್ ಆಗಿದ್ದರು. ಅವರು ವರ್ತಮಾನ ಕಾಲಕ್ಕಿಂತ ಮುಂದೆ ಹೋಗಿ ನೋಡುತ್ತಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಾಗುವ ಬದಲಾವಣೆಗಳನ್ನು ಗ್ರಹಿಸುತ್ತಿದ್ದರು. ಪತ್ರಕರ್ತನಾಗಿ ಯೋಚನೆ ಮಾಡದಿದ್ದರೆ ಪತ್ರಿಕೋದ್ಯಮ ಪಾಠವನ್ನು ಬಾಲು ಸರ್ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ಅವರು ಅಪ್‌ಡೇಟ್ ಆಗುತ್ತಿದ್ದುದರಿಂದಲೇ ಕೇವಲ ನೋಟ್ಸ್‌ಕೊಡುವ ಮೇಷ್ಟ್ರಾಗದೇ, 'ಭಾವೀ ಪತ್ರಕರ್ತರ' ಅಚ್ಚುಮೆಚ್ಚಿನ ಮೇಷ್ಟ್ರಾದರು.
ಒಬ್ಬ ಪತ್ರಿಕೋದ್ಯಮ ಮೇಷ್ಟ್ರು ಕೇವಲ ವಿದ್ಯಾರ್ಥಿಗಳನ್ನು, ಒಬ್ಬ ಪತ್ರಕರ್ತನನ್ನು ಬೆಳೆಸುವುದಿಲ್ಲ. ಬದಲಾಗಿ ಪತ್ರಿಕೋದ್ಯಮವನ್ನು ಬೆಳೆಸುತ್ತಾನೆ. ಆ ವೃತ್ತಿಯನ್ನು ಬೆಳೆಸುವ ಮೂಲಕ ಸಮಾಜವನ್ನು ತಲುಪುತ್ತಾನೆ. ತನ್ನ ವಿದ್ಯಾರ್ಥಿಗಳನ್ನು ಉತ್ತಮ ಪತ್ರಕರ್ತರನ್ನಾಗಿ ಮಾಡುವ ಮೂಲಕ ಬಾಲು ಸರ್ ಸಮಾಜವನ್ನು ತಲುಪುವ ಕೆಲಸ ಮಾಡಿದರು. ಬಾಲು ಸರ್‌ರಿಂದ ಪತ್ರಿಕೋದ್ಯಮ ಪ್ರೇರಣೆಪಡೆದು, ಉತ್ತಮ ಪತ್ರಕರ್ತರಾದವರ ದಂಡೇ ಇಂದು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಈ ದೃಷ್ಟಿಯಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಾಲು ಸರ್ ಕೊಡುಗೆ ದೊಡ್ಡದು.
ನಾನು ಲಂಡನ್‌ನ ಥಾಮ್ಸನ್ ಪ್ರತಿಷ್ಠಾನದಲ್ಲಿ ಪತ್ರಿಕೋದ್ಯಮ ತರಬೇತಿಗೆ ಹೋಗಿದ್ದೆ. ಅಲ್ಲಿನ ನಿರ್ದೇಶಕ ವ್ಯಾಲ್ ವಿಲಿಯಮ್ಸ್ ಅವರು ಅನೇಕ ವರ್ಷ ರಾಯ್ಟರ್ಸ್ ಮತ್ತು ಲಂಡನ್ ಟೈಮ್ಸ್ ಪತ್ರಿಕೆಯಲ್ಲಿ ಕೆಲಸಮಾಡಿದವರು. ನಂತರ ಪತ್ರಿಕೋದ್ಯಮ ಶಿಕ್ಷಕರಾದರು. ಥಾಮ್ಸನ್ ಪ್ರತಿಷ್ಠಾನ ಅಂತಾರಾಷ್ಟ್ರೀಯ ತರಬೇತಿ ಸಂಸ್ಥೆ. ಜಗತ್ತಿನ ವಿವಿಧ ಭಾಗದಲ್ಲಿ 3-4 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದವರಿಗೆ ಈ ಸಂಸ್ಥೆ ತರಬೇತಿ ನೀಡುತ್ತದೆ. ಅಲ್ಲಿ ಹೋಗಿ, ವ್ಯಾಲ್ ವಿಲಿಯಮ್ಸ್ ಅವರ ಮಾತುಗಳನ್ನು ಕೇಳಿದ ಮೇಲೆ ಅಲ್ಲಿ ಬಂದ ಪತ್ರಕರ್ತರಿಗೆಲ್ಲ ನಾವು ಇಷ್ಟು ದಿನ ಕಲಿತ, ಮಾಡಿದ ಪತ್ರಿಕೋದ್ಯಮವೇ ಬೇರೆ, ಅವರು ಹೇಳುತ್ತಿರುವುದೇ ಬೇರೆ ಅನ್ನಿಸಿತ್ತು. ಅಷ್ಟು ಅದ್ಭುತವಾಗಿ ಕಲಿಸುತ್ತಿದ್ದರು.
ಕಲಿಯುವಾಗ ಬಾಲು ಸಾರ್ ಹೇಳಿದ್ದು, ಆ ಕ್ಷಣಕ್ಕೆ ಮುಖ್ಯ ಅಂತ ಅನಿಸಲಿಕ್ಕಿಲ್ಲ. ಅನಿಸಿಯೂ ಇರಲಿಲ್ಲ. ಆದರೆ ಉದ್ಯೋಗಕ್ಕೆ ಸೇರಿದ ಮೇಲೆ ಯಾವುದೋ ಸುದ್ದಿ ಬರೆಯುವಾಗ ಬಾಲು ಸರ್ ಹೇಳಿದ ಮಾತು ನೆನಪಾಗುತ್ತದೆ. ಬಾಲು ಸರ್ ಹೀಗೆ ಹೇಳಿದ್ದರು ಎಂದು ನೆನಪಿಸಿಕೊಳ್ಳುತ್ತೇವೆ. ಒಬ್ಬ ಶಿಕ್ಷಕ ತರಗತಿಯ ಒಳಗೆ ಮಾತ್ರವಲ್ಲ, ಹೊರಗೂ ನಮ್ಮ ಜೀವನವನ್ನು ವಿಸ್ತರಿಸುತ್ತಾನೆ. ಅದನ್ನು ಬಾಲು ಸರ್ ಮಾಡಿದರು.
ಬಾಲು ಸರ್ ಫೆ.28ರಂದು ನಿವೃತ್ತರಾಗುತ್ತಿದ್ದಾರೆ. ನಿವೃತ್ತರಾಗಬೇಕು ಎಂಬ ಕಾಲದ ನಿಯಮಕ್ಕೆ ಎಲ್ಲರೂ ತಲೆಬಾಗಲೇ ಬೇಕು. ಕೆಲಸಕ್ಕೆ ಸೇರಿದ ಮೇಲೆ ಒಂದಲ್ಲ ಒಂದು ದಿನ ನಿವೃತ್ತರಾಗಲೇ ಬೇಕು. ಆದರೆ ಅವರ ನಿವೃತ್ತಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಮತ್ತು ಕವಿವಿ ಪತ್ರಿಕೋದ್ಯಮ ವಿಭಾಗದ ನಡುವಿನ ಕೊಂಡಿಯೂ ಕಳಚಿಬಿಡುತ್ತಲ್ಲ ಎಂಬುದನ್ನು ನೆನಪಿಸಿಕೊಂಡಾಗ ಮನಸ್ಸು ಭಾರವಾಗುತ್ತದೆ. ನಾವು ವಿಭಾಗಕ್ಕೆ ಆಗಾಗ ಭೇಟಿ ಕೊಡದೇ ಇರಬಹುದು. ಆದರೆ ವಿಭಾಗಕ್ಕೆ ಹೋದರೆ ಬಾಲು ಸರ್ ಇದ್ದಾರೆ ಎಂಬ ನೆನಪೇ ಮನಸ್ಸಿಗೇನೋ ಸಮಾಧಾನ ನೀಡುತ್ತಿತ್ತು. ಅಲ್ಲಿ ಯಾರೋ ನಮ್ಮ ಆತ್ಮೀಯರೊಬ್ಬರಿದ್ದಾರೆ ಎಂಬ ನೆಮ್ಮದಿಯ ಭಾವ ಇರುತ್ತಿತ್ತು. ಇನ್ನು ಮುಂದೆ ಮನಸ್ಸಿಗೆ ಹಾಗನ್ನಿಸುವುದಿಲ್ಲವಲ್ಲ ಎಂಬ ಬೇಸರ.
ಬಾಲು ಸರ್ ನಿವೃತ್ತಿ ಜೀವನ ಸುಖಕರವಾಗಿರಲಿ. ಬಾಲು ಸರ್ ಇಷ್ಟು ವರ್ಷ ವಿದ್ಯಾರ್ಥಿಗಳೊಂದಿಗೆ ಕಳೆದಿದ್ದಾರೆ. ರಾಜ್ಯ, ರಾಷ್ಟ್ರದ ಪತ್ರಿಕೋದ್ಯಮದ ಒಳಹೊರಗನ್ನು ಕಂಡಿದ್ದಾರೆ. ಪತ್ರಿಕೋದ್ಯಮ ಕುರಿತಂತೆ ಕನ್ನಡದಲ್ಲಿ ಉತ್ತಮ ಪುಸ್ತಕಗಳಿಲ್ಲ ಎಂದೇ ಎಲ್ಲರೂ ಹೇಳುತ್ತಿರುತ್ತಾರೆ. ಅದು ನಿಜ ಕೂಡ ಹೌದು. ಬಾಲು ಸರ್ ಒಂದು ಒಳ್ಳೆಯ ಪುಸ್ತಕ ಬರೆದು ಈ ಕೊರತೆ ನೀಗಿಸಲಿ. ಅದು ಪತ್ರಿಕೋದ್ಯಮಕ್ಕೆ ಪಠ್ಯವಾಗಲಿ. ಭವಿಷ್ಯದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಲಿ. ಅದು ನಮ್ಮ ಬಾಲು ಸರ್ ಮುಂದಿನ ವಿದ್ಯಾರ್ಥಿಗಳಿಗೆ ಕೊಡುವ ಶಾಶ್ವತ ಕೊಡುಗೆಯೂ ಆಗಬಹುದು.


- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.