Hmmm... ಪಾಂಚ್
Hmmm... ಪಾಂಚ್
(ಒಂದು ಕಾಲದಲ್ಲಿ ಸ್ಟಾರ್ ಆಗಿ ನಂತರ ಫ್ಲಾಪ್ ಆದ ಸಿನಿಮಾ ನಟನೊಬ್ಬ ಸ್ಟಾರ್ ಪತ್ರಕರ್ತನನ್ನು ಮಾತನಾಡಿಸಿದರೆ)
- ನನ್ ಕೈನಲ್ಲಿ ಒಂದೂ ಸಿನಿಮಾ ಇಲ್ಲ, ಮಾರ್ಕೆಟ್ ಬಿದ್‌ಹೋಗಿದೆ. ನನ್ ಬಗ್ಗೆ ಏನಾದ್ರೂ ಬರೀರಿ ಸಾರ್.. ಪ್ಲೀಸ್.
ಅಯ್ಯೋ, ಅದ್ಯಾವ್ದೋ ಪೇಪರ್ ಇದ್ಯಂತಲ್ಲ ಪಾಪ...ಸಿಕ್ಕಾಪಟ್ಟೆ ಸರ್ಕ್ಯುಲೇಷನ್ ಇರೋದು. ಅದರಲ್ಲೇ ಬರೆಸ್ಕೊಳಿ.
- ನೀವು ಇಟ್ರೆ ವರ, ಕೊಟ್ರೆ ಶಾಪ ಅಂತ ಕೇಳಿದೀನಿ. ನೀವೇ ಇಷ್ಟು ಹಾರ್ಶ್ ಆಗಿ ಹೇಳಿಬಿಟ್ರೆ ಹೆಂಗೆ ಸಾರ್?
ಹಾರ್ಶ್ ಅಂದ್ರೆ ಏನ್ರೀ ಅರ್ಥ? ಬರೆಯಲ್ಲ ಅಂದ್ರೆ ನೀವೇನಾರಾ ನಂದ್ ಕಿತ್ಕೊಳ್ಳಕಾಯ್ತದಾ...
- ಹೌದು ಬಿಡಿ, ಒಂದ್ ಕಾಲದಲ್ಲಿ ದೊಡ್ ಸ್ಟಾರ್ ಆಗಿದ್ದೆ. ಆದ್ರೆ ದೇವರು ಎಲ್ಲಾ ಕಿತ್ಕೊಂಡ್‌ಬಿಟ್ಟ. ಈಗ ಯಾರು ನಂದೇನೂ ಕಿತ್ಕೊಳೊಕಾಗಲ್ಲ ಬಿಡಿ. ಆದ್ರೂ ನೋಡಿ ಸಾರ್, ಬೇಕಿದ್ರೆ ನಿಮ್ಮ ಮನೆ ಹತ್ರ ಬಂದು ಮಾತಾಡ್ತೀನಿ..
ನೋಡ್ರೀ, ಸಿನಿಮಾ ಸ್ಟಾರ್‌ಗಳನ್ನ ನಮ್ ಮನೆ ಕಾಂಪೌಂಡ್ ಒಳಗೂ ಬಿಟ್ಕೊಳಲ್ಲ ನಾನು ಗೊತ್ತಾ. ಒಂದ್ ಸಲ ಕಮಿಟ್ ಆದ್ರೆ ನನ್ ಮಾತ್ ನಾನೇ ಕೇಳಲ್ಲ.
- ಏನೇ ಆದ್ರೂ ನೀವು ತುಂಬ ಬದಲಾಗಿದ್ದೀರಿ ಬಿಡಿ...
ನೀವು ಬದಲಾಗ್‌ಲಿಲ್ವೇನ್ರೀ. ಮೊದಲು 'ಸಾರ್' ಅಂತ ಸಾಷ್ಟಾಂಗ ನಮಸ್ಕಾರ ಮಾಡ್ತಿದ್ರಿ, ಒಂದ್ ಸಿನಿಮಾ
ಗೆದ್‌ಮೇಲೆ 'ಅಣ್ಣಾ' ಅಂತ ಮೊಣಕಾಲು ಮುಟ್ಟಿ ನಮಸ್ಕಾರ ಮಾಡ್ತಿದ್ರಿ, ಇನ್ನೊಂದ್ ಸೂಪರ್ ಹಿಟ್ ಸಿಕ್‌ಮೇಲೆ 'ಏನ್ ಮಾಮಾ' ಅಂತ ಬರೀ ಕೈಯಾಡಿಸ್ತಿದ್ರಿ. ಕಾಲ್ ಮೇಲೆ ಕಾಲಾಕ್ಕೊಂಡ್ ಕಾಲು ಅಲ್ಲಾಡಿಸ್ತಿದ್ರಿ. ಇದೂ ಹಂಗೆ.
- ಸುಳ್ಳು ಸಾರ್, ಯಾರೋ ನನ್ ಬಗ್ಗೆ ನಿಮ್ಮತ್ರ ಕಡ್ಡಿ ಅಲ್ಲಾಡ್ಸಿದಾರೆ ಅಷ್ಟೆ. ಆದ್ರೆ ಒಂದ್ ಮಾತು. ಕೆಲಸ ಇಲ್ದೆ 'ಮೆಜೆಸ್ಟಿಕ್'ನಲ್ಲಿ ಓಡಾಡುವಾಗ ಪರಿಚಯ ಇದ್ದವರ ಕಾಲಿಗೆ ಬೀಳ್ತಾ ಇದ್ರಲ್ಲ, ದಯವಿಟ್ಟು ನಂಗೆ ಹೆಲ್ಪ್ ಮಾಡಿ ಅಂತ. ಆಗ ನಾನೇ ನಿಮಗೆ ಪತ್ರಕರ್ತರ ಕೆಲಸ ಕೊಡಿಸಿದ್ದೆ. ನೆನಪಿರ್‌ಬೇಕಲ್ಲ. ಆದ್ರೆ ಇವತ್ತು ನಂಗೆ ಹೆಲ್ಪ್ ಮಾಡಲ್ಲ ಅಂತೀರಲ್ಲ, ಸರೀನಾ?
ಇರ್‌ಬೋದು.. ಆದ್ರೆ ಈಗ ಕಾಲ ಬದಲಾಗಿದೆ, ಕಣ್ರೀ. ಇವತ್ತು ನಿನಗೆ ನಾನು ಬೇಕು, ಆದ್ರೆ ನಂಗೆ ನೀನು
ಬೇಕಾಗಿಲ್ಲ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಮೊದಲೆಲ್ಲ ಮಸಾಲೆ ದೋಸೆ, ಖಾಲಿ ದೋಸೆ ಪ್ಲೈನ್ ದೋಸೆ ಬಿಟ್ಟರೆ ದೋಸೆಗಳಲ್ಲಿ ಯಾವ ವೆರೈಟಿಗಳೂ ಇರಲಿಲ್ಲ. ಆದರೆ ಈಗ ನೂರಾರು ಬಗೆಯ ದೋಸೆಗಳು. ಪುಟ್‌ಪಾತ್‌ನಲ್ಲೇ 99 ವೆರೈಟಿ ದೋಸಾಸ್ ಎನ್ನುವ ಮೊಬೈಲ್ ಕ್ಯಾಂಟೀನ್‌ಗಳನ್ನು ನೀವೂ ನೋಡಿರುತ್ತೀರಿ. ದೋಸೆಗಳಲ್ಲಿ ಎಷ್ಟೊಂದು ಬಗೆಗಳಿವೆಯಲ್ಲ ಎನ್ನುವ ಆಲೋಚನೆಯಿಂದಲೇ ಬಾಯಲ್ಲಿ ನೀರೂರಿಸುವ ದೋಸೆಗಳ ವೆರೈಟಿ ಬಗ್ಗೆ ಇಲ್ಲಿ ಮಾಹಿತಿ ಇದೆ.
n bit.ly/1jnERsz n bit.ly/1gVP7rS
n bit.ly/1bwcLuZ n bit.ly/1f845WF
n bit.ly/1fpOdTT
ಹರಿ-ಕಥೆ
ಖೇಮು ಟ್ರಾವೆಲ್ ಬುಕ್ಕಿಂಗ್ ಕೆಲಸ ಮಾಡ್ತಾ ಇದ್ದ. ಒಬ್ಬ ದೊಡ್ಡ ಶ್ರೀಮಂತರ ಮಗ ಅವನ ಬಳಿ ಬಂದ. ಅವನು ಖೇಮುನ ಕಸ್ಟಮರ್ ಆಗಿರಲಿಲ್ಲ. ಪಕ್ಕದ ಬುಕ್ಕಿಂಗ್ ಶಾಪ್‌ಗೇ ಯಾವತ್ತೂ ಹೋಗ್ತಿದ್ದ ಆ ಹುಡುಗ ಆಗಾಗ ಫಾರಿನ್ ಟ್ರಿಪ್ ಬುಕ್ ಮಾಡ್ಕೊಂಡ್ ಹೋಗ್ತಾ ಇದ್ದ. ಆದರೆ ಅದ್ಯಾಕೋ ಈ ಸಲ ಖೇಮು ಅಂಗಡಿಗೆ ಬಂದ. ಬಂದವನೇ ಹೇಳಿದ 'ನಾನು ರೆಗ್ಯುಲರ್ ಆಗಿ ನಿಮ್ಮ ಪಕ್ಕದ ಟ್ರಾವೆಲ್ ಏಜೆಂಟ್ ಹತ್ರನೇ ಹೋಗ್ತಿದ್ದೆ. ಆದ್ರೆ ಯಾಕೋ ಇತ್ತೀಚೆಗೆ ಬರೀ ಎಡವಟ್ಟೇ ಆಗ್ತಿದೆ. ಹಾಗಾಗಿ ಈ ಸಲ ನನ್ನ ಫಾರಿನ್ ಟ್ರಿಪ್‌ನಲ್ಲಿ ಬದಲಾವಣೆ ಮಾಡಬೇಕು ಅಂತಿದೀನಿ. ಏನು ಮಾಡ್ಲಿ ನೀವೇ ಹೇಳಿ' ಅಂದ. ಅದಕ್ಕೆ ಖೇಮು ಸಮಸ್ಯೆ ಏನು ನಿಮ್‌ದು ಅಂತ ಕೇಳಿದ. ಅದಕ್ಕೆ ಶ್ರೀಮಂತರ ಮಗ 'ನಾನು ಆ ಪಕ್ಕದ ಏಜೆಂಟ್ ನಂಬ್ಕೊಂಡು ಒಂದ್ಸಲ ಸ್ವಿಜರ್‌ಲ್ಯಾಂಡ್ ಟ್ರಿಪ್‌ಗೆ ಹೋದೆ, ಬರುವಷ್ಟರಲ್ಲಿ ನನ್ನ ಗರ್ಲ್‌ಫ್ರೆಂಡ್ ಪ್ರೆಗ್ನೆಂಟ್ ಆಗಿದ್ಳು. ಮತ್ತೆ ನ್ಯೂಜಿಲ್ಯಾಂಡ್‌ಗೆ ಹೋದೆ. ಬರುವಷ್ಟರಲ್ಲಿ ನನ್ನ ಗರ್ಲ್‌ಫ್ರೆಂಡ್ ಪ್ರೆಗ್ನೆಂಟ್ ಆಗಿದ್ಳು. ಮತ್ತೆ ಪ್ಯಾರಿಸ್‌ಗೆ ಹೋಗಿದ್ದೆ. ಬರುವಷ್ಟರಲ್ಲಿ ಮತ್ತೆ ನನ್ನ ಗರ್ಲ್‌ಫ್ರೆಂಡ್ ಪ್ರೆಗ್ನೆಂಟ್ ಆಗಿದ್ಳು. ಏನೋ ಸರಿ ಇಲ್ಲ. ಅವನತ್ರ ಹೋದಾಗೆಲ್ಲಾ ಹಿಂಗೇ ಆಗುತ್ತೆ. ಈಗ ಏನ್ ಮಾಡೋದು ಅಂತ ಗೊತ್ತಾಗ್ತಿಲ್ಲ' ಅಂತ ತನ್ನ ಸಮಸ್ಯೆ ಹೇಳಿಕೊಂಡ. ಅದಕ್ಕೆ ಖೇಮು ಅವನಿಗೆ ಒಂದು ಪರಿಹಾರ ಕೊಟ್ಟ. ಆದರೆ ಅದನ್ನು ಕೇಳಿದ ಆ ಹುಡುಗ ಖೇಮು ಕೆನ್ನೆಗೆ ಸರಿಯಾಗಿ ಒಂದೆರಡು ಬಿಟ್ಟ, ಖೇಮು ತಲೆಸುತ್ತಿ ಬಂದು ಬೀಳುವ ಹಾಗೆ. ಈಗ ಎಲ್ಲರನ್ನೂ ಕಾಡುವ ಕಟ್ಟ ಕಡೆಯ ಪ್ರಶ್ನೆ ಅಷ್ಟಕ್ಕೂ ಖೇಮು ಕೊಟ್ಟ ಸಜೆಶನ್ನಾದ್ರೂ ಏನು?. ಖೇಮು ಏನಪ್ಪಾ ಪರಿಹಾರ ಕೊಟ್ಟ ಅಂದ್ರೆ 'ಸಾರ್, ಒಂದ್ ಕೆಲ್ಸ ಮಾಡಿ, ಈ ಸಲ ಗರ್ಲ್‌ಫ್ರೆಂಡ್‌ನ ಜೊತೇಲೇ ಕರ್‌ಕೊಂಡ್ ಹೋಗಿ'.
ಸ್ಕ್ಯಾಂಡಲ್‌ವುಡ್
ಅದು ಮುರಳಿ ಅಭಿನಯದ 'ಹರೇ ರಾಮ ಹರೇ ಕೃಷ್ಣ' ಚಿತ್ರ ಬಿಡುಗಡೆಯಾಗಿದ್ದ ದಿನ. ನರ್ತಕಿ ಚಿತ್ರಮಂದಿರದ ಮುಂದೆ ಮೊದಲ ಶೋಗೆ ಬಂದಿದ್ದವರೇ ಕಡಿಮೆ ಜನ. ನಾಯಕ ಮುರಳಿ ಚಿತ್ರಮಂದಿರದ ಒಳಗಿನಿಂದಲೇ ಇರುವ ಜನಗಳನ್ನು ನೋಡಿ ಒಂದಷ್ಟು ಸಮಾಧಾನಕರ ಸಂಖ್ಯೆಯ ಪ್ರೇಕ್ಷಕರು ಬಂದಮೇಲೆ ಮೆಲ್ಲನೆ ಹೊರಬಂದರು. ಬಂದವರು ಚಿತ್ರಮಂದಿರದ ಮೆಟ್ಟಿಲ ಮೇಲೆ ಕೈ ಕಟ್ಟಿಕೊಂಡು ಕುಳಿತರು. ಒಂದಿಬ್ಬರು ಇವರತ್ತ ತಿರುಗಿ ನೋಡಿದರು. ಮುರಳಿಗೆ ಆಗ ಮಾರ್ಕೆಟ್ ಇರಲಿಲ್ಲ ಎಂಬುದರ ಜೊತೆಗೆ ಆದಿಚುಂಚನಗಿರಿ ಚಿತ್ರಕ್ಕಾಗಿ ಮುರಳಿ ತಲೆ ಬೋಳಿಸಿಕೊಂಡಿದ್ದ ಕಾರಣವೂ ಸೇರಿ ಅವರನ್ನು ಯಾರೂ ಅಷ್ಟಾಗಿ ಗುರುತು ಹಿಡಿದು ಮಾತನಾಡಿಸಲಿಲ್ಲ. ಮುತ್ತಿಗೆ ಹಾಕುವಷ್ಟು ಜನರೂ ಅಲ್ಲಿರಲಿಲ್ಲ. ಮುರಳಿ ಸ್ವಲ್ಪ ಸಮಯದ ನಂತರ ನಿರಾಸೆಯಿಂದಲೇ ಅಲ್ಲಿಂದ ಎದ್ದು ಹೋದರು. ಅದಾದ ನಂತರ ಚಿತ್ರ ಸೋತಿತು. ಮುರಳಿಗೆ ಸರಿಯಾದ ಸಿನಿಮಾಗಳೂ ಸಿಗಲಿಲ್ಲ. ಅಂದು ಇಂದು ಎಷ್ಟೊಂದು ವ್ಯತ್ಯಾಸ. ಆದರೆ, ಮೊನ್ನೆ ಅದೇ ನರ್ತಕಿ ಚಿತ್ರಮಂದಿರದಲ್ಲಿ 'ಉಗ್ರಂ' ಬಿಡುಗಡೆ.
ಆದರೆ ಸೀನ್ ಛೇಂಜ್ ಆಗಿತ್ತು. ಮುರಳಿ ಇರಲಿ ಯಾರೊಬ್ಬರೂ ಚಿತ್ರಮಂದಿರದ ಒಳಗೆ ಹೋಗುವುದೇ ಕಷ್ಟವಾಗಿತ್ತು. ಎಲ್ಲೆಲ್ಲೂ ಜನವೋ ಜನ. ಚಿತ್ರ ಮುಗಿದ ಮೇಲಂತೂ ಮುರಳಿ ಅವರನ್ನು ಜನ ಮುತ್ತಿಕೊಂಡ ಪರಿ ನೋಡಿದಾಗ ಆಶ್ಚರ್ಯವಾಗಿದ್ದು ನಿಜ. ಕಾಲ ಒಂದೇ ಥರ ಇರಲ್ಲ ಎಂಬುದಕ್ಕೆ ಅದು ಸಾಕ್ಷಿಯಾಗಿತ್ತು. ಆದರೆ, ತಾಳ್ಮೆಯಿಲ್ಲದೆ ಎಲ್ಲರನ್ನೂ ಕೊಚ್ಚುವ ಪಾತ್ರವಿರುವ ಉಗ್ರಂ ಸಿನಿಮಾ ಮಾಡಿ ತಾಳಿದವನು ಬಾಳಿಯಾನು ಎಂಬುದನ್ನು ಮುರಳಿ ನಿರೂಪಿಸಿದ್ದಾರೆ ಎಂಬುದು ವಿಶೇಷ.
ಡಬ್ಕುಡಬಲ್ ತುದಾಂಡಲ್...
-ಒಂದು ಡೌಟು
ಡಬ್ಬಿಂಗ್ ಬಂದ್ರೆ ಹಿಂದಿ ಸಿನಿಮಾಗಳಲ್ಲಿ 'ಏ ಸಾಲಾ' ಅಂತ ಬಯ್ದಿದ್ದನ್ನು ಕನ್ನಡದಲ್ಲಿ 'ಏ ಮೈದುನ' ಅಂತ
ಟ್ರಾನ್ಸ್‌ಲೇಟ್ ಮಾಡ್ತಾರಾ?
-ಉಳಿದವರು ಕಂಡಂತೆ ಚಿತ್ರದಲ್ಲಿ ತುಳು ಭಾಷೆ ಹೆಚ್ಚಿದೆ ಎಂಬುದನ್ನು ಹೇಳುವ ರೀತಿ
'ಉಳಿದವರು ಕಂಡಂತೆ' ತುಂಬಿ 'ತುಳು'ಕಾಡುತ್ತಿದೆ.
- ಡಾಕ್ಟರ್ ಹಲ್ಲು ಕೀಳುವಾಗ ನೋವಾದ್ರೆ ರಂಗಾಯಣ ರಘು ಏನು ಹೇಳ್ತಾರೆ
ಹಲ್ಲು ಬಾ
- ಜಗ್ಗೇಶ್ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ರೆ
ಕಾಗೆ ಸುಮ್ಮನೆ
- ಇಂದೇ ನೋಡಿ ಎನ್ನುವ ಚಿತ್ರರಂಗದವರು ಕನ್ನಡ ಚಿತ್ರಕ್ಕೆ ಇಡಲಾಗದ ಶೀರ್ಷಿಕೆ
ನಾಳೆ ಬಾ
- ದರ್ಶನ್ ತಮ್ಮ ಮಾತುಗಳಲ್ಲಿ ಸುಸಂಸ್ಕೃತಿ ಹೆಚ್ಚಿಸಿಕೊಂಡು ಸಂಭಾವಿತರೆನಿಸಿಕೊಂಡರೆ
'ಸು'ದರ್ಶನ್
- ಯಾರನ್ನೋ ಮಾತನಾಡಿಸಬೇಕು ಎಂದು ಹೊರಟಾಗ ಅವರು ಸಿಕ್ಕರೂ ಮಾತನಾಡಲು ಸಾಧ್ಯವಾಗದಿದ್ದರೆ
ಕೈಯಿಗೆ ಸಿಕ್ಕರೂ 'ಬಾಯಿಗೆ' ಸಿಗಲಿಲ್ಲ.
ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

