ಈ ಪ್ರದೇಶದ ಜನ ಮುದುಕರಾಗುತ್ತಿದ್ದಾರೆ!
ನಿಜಕ್ಕೂ ರಾಜ್ಯದ ಜನತೆ ಮುಂದಿನ ಪ್ರಧಾನಿ ಯಾರಾಗಬಹುದೆಂಬ ಬಗ್ಗೆ ತಲೆ...

ನಿಜಕ್ಕೂ ರಾಜ್ಯದ ಜನತೆ ಮುಂದಿನ ಪ್ರಧಾನಿ ಯಾರಾಗಬಹುದೆಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೋದಿಯವರ ಭಾಷಣದ ಹೂರಣವನ್ನು ಕುರಿತು ಚರ್ಚಿಸುತ್ತಿಲ್ಲ. ರಾಹುಲ್ ಗಾಂಧಿಯವರ ಅಜ್ಞಾನಕ್ಕೆ ಮರುಗುತ್ತಿಲ್ಲ. ಶಿಸ್ತು, ಸೌಜನ್ಯ ಮರೆತು ಮನಬಂದಂತೆ ವರ್ತಿಸುತ್ತಿರುವ ನಮ್ಮ ಸಂಸದರು, ಜನಪ್ರತಿನಿಧಿಗಳ ಬಗ್ಗೆ ಹೇವರಿಕೆಯನ್ನು ವ್ಯಕ್ತಪಡಿಸುತ್ತಿಲ್ಲ. ತೆಲಂಗಾಣ ಪ್ರತ್ಯೇಕಗೊಂಡಿದ್ದಕ್ಕೋ, ರಾಜೀವ್ ಹಂತಕರ ಬಿಡುಗಡೆಯ ಸುದ್ದಿಗೋ ಗಮನಕೊಡುವಷ್ಟು ತಾಳ್ಮೆ ಉಳಿಸಿಕೊಂಡಿಲ್ಲ. ಏಕೆಂದರೆ ನಮ್ಮ ರಾಜ್ಯದ ಜನ, ಅದರಲ್ಲೂ ಉತ್ತರ ಕರ್ನಾಟಕ ಭಾಗದ, ಇನ್ನೂ ಹೇಳಬೇಕೆಂದರೆ ನಮ್ಮ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಜಲ ಸಂಪನ್ಮೂಲ ಸಚಿವರ ಜಿಲ್ಲೆಯಲ್ಲೇ ಬಹುತೇಕರು ಇತ್ತೀಚಿನ ದಿನಗಳಲ್ಲಿ ಮುದುಕರಾಗುತ್ತಿದ್ದಾರೆ!
ಯಾವ ಜನ್ಮದ ಪಾಪದ ಫಲವೋ, ಅಂತೂ ನಮ್ಮ ಜನ ಹೀಗೆ ಏಕಾಏಕಿ ಮುದುಕರಾಗಿಬಿಡುತ್ತಿದ್ದಾರೆ. ವಿಶೇಷವೆಂದರೆ ಹೀಗೆ ರೇಸಿಗೆ ಬಿದ್ದು ನಮ್ಮಲ್ಲಿ ಮುದುಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಯಾರೊಬ್ಬರಿಗೂ ಇದು ವಿಶೇಷ ಸುದ್ದಿ ಅಂತೆನ್ನಿಸುತ್ತಲೇ ಇಲ್ಲ. ಮಾಧ್ಯಮಗಳು ಈ ಬಗ್ಗೆ ಬರೆಯುತ್ತಲೇ ಇಲ್ಲ. ಕೊನೆಪಕ್ಷ ಅರ್ನಾಬಗೋಸ್ವಾಮಿಯಾದರೂ ಈ ಕುರಿತು ಕಿರುಚಾಡಿ ನಮ್ಮ ಜನಪ್ರತಿನಿಧಿಗಳ ನೀರಿಳಿಸುತ್ತಾರೆಂದು ನಿರೀಕ್ಷಿಸಿದರೆ ಅದೂ ಇಲ್ಲ. ಏನು ವಿಚಿತ್ರ ನೋಡಿ, ಹಾಗಿದ್ದರೆ ನಮ್ಮವರು ಮುದುಕರಾಗುತ್ತಿರುವುದು ಸುದ್ದಿಯೇ ಅಲ್ಲವೇ?
ಹೌದು, ಸರಕಾರಕ್ಕಾಗಲಿ, ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲೀ ನಮ್ಮ ಮಂದಿ ಮುದುಕರಾಗುತ್ತಿದ್ದಾರೆ ಎಂಬ ಬಗ್ಗೆ ಒಂದಿನಿತೂ ತಲೆಬಿಸಿಯಿಲ್ಲ. ದೇಶಕ್ಕೆ ದೇಶವೇ ಮುಂಬರುವ ಚುನಾವಣೆ, ಅದರ ನಂತರ ರಚನೆಯಾಗಬಹುದಾದ ಸರಕಾರ, ಆಮ್ ಆದ್ಮಿ ಪಕ್ಷದ ಭವಿಷ್ಯ, ರಾಹುಲ್‌ಗಾಂಧಿ- ಮೋದಿಯವರ ಆಯ್ಕೆಯ ಸಂಭಾವ್ಯತೆಯ ಬಗ್ಗೆ ಮಾತನಾಡುತ್ತಿದೆ. ಆದರೆ ರಾಜ್ಯದಲ್ಲಿ ಮುಂಬರುತ್ತಿರುವ ಬೇಸಿಗೆ ಮತ್ತು ಅದು ಇನ್ನಷ್ಟು ಹೆಚ್ಚಿಸಲಿರುವ ನಮ್ಮವರ ವೃದ್ಧಾಪ್ಯದ ಬಗ್ಗೆ ಯಾರೊಬ್ಬರೂ ಯೋಚಿಸುತ್ತಲೇ ಇಲ್ಲ. ನಿಜಕ್ಕೂ ಆತಂಕಕಾರಿ ಸಂಗತಿಯೇ ಇದು. ಗ್ರಾಮೀಣಾಭಿವೃದ್ಧಿ ಸಚಿವರೇ, ಕೊನೆ ಪಕ್ಷ ನೀವಾದರೂ ಈ ಬಗ್ಗೆ ಯೋಚಿಸಿ. ನಮ್ಮ ಜನ ಈಪಾಟಿ ಮುದುಕರಾಗಿಬಿಟ್ಟರೆ ಮುಂದಿನ ಚುನಾವಣೆಯಲ್ಲಿ ಮತಗಟ್ಟೆಯವರೆಗೆ ನಡೆದುಕೊಂಡು ಬರುವುದಾದರೂ ಹೇಗೆ? ಮತ ಹಾಕುವುದಾದರೂ ಹೇಗೆ? ಅಭ್ಯರ್ಥಿಗಳು ಗೆಲ್ಲುವುದಾದರೂ ಹೇಗೆ?
ಒಟ್ಟಾರೆ ಇದಕ್ಕಾಗಿ ಯಾರನ್ನು ದೂಷಿಸೋಣ? ಭೂಮಿಯನ್ನೇ? ರಾಸಾಯನಿಕಯುಕ್ತ ಕೃಷಿಯನ್ನೇ? ಅಂತರ್ಜಲವನ್ನೇ? ಫ್ಲೋರಿನ್ ಭರಿತ ಮಾರ್ಜಕಗಳನ್ನೇ? ಕೈಗಾರಿಕೆಗಳನ್ನೇ? ಮೈಲ್ಮೈ ನೀರನ್ನೂ ಬಿಡದೇ ಕೊಳಕೆಬ್ಬಿಸಿ ಕನ್ನ ಕೊರೆಯುತ್ತಿರುವ ಮನುಕುಲದ ದಾಹವನ್ನೇ? ನೀರು ನಿರ್ವಹಣೆ ಅರಿಯದ ಆಡಳಿತಗಾರರನ್ನೇ? ಇದಾವುದರ ಬಗ್ಗೆಯೂ ಅರಿವಿಲ್ಲದ ಮುಗ್ಧ ಗ್ರಾಮೀಣರನ್ನೇ? ಉತ್ತರ ಏನೇ ಇರಲಿ. ಭೂ ತಾಯಿಯಂತೂ ಮೈಯೆಲ್ಲ ವಿಷ ತುಂಬಿಕೊಂಡು ಹೆತ್ತಕರುಳ ಉರಿ ತಾಳಲಾರದೇ ತನ್ನ ಮೇಲಿನ ಜೀವರಾಶಿಯನ್ನೇ ಕೊಲ್ಲುವ ಹಂತ ತಲುಪಿದ್ದಾಳೆಂಬುದಷ್ಟೇ ಸದ್ಯದ ವಾಸ್ತವ. ಮುಂದಿನ ಒಂದಿಡೀ ತಲೆಮಾರು ವಿಷ ವಂಶಜರಾಗುವುದನ್ನು ತಡೆಯಬೇಕಿರುವುದಷ್ಟೇ ಈಗಿನ ತುರ್ತು. ಒಟ್ಟಾರೆ ಇಂಥ ಅಪಾಯದ ಮುನ್ಸೂಚನೆಯ ಫಲವಾಗಿ ನಾವು ಮುದುಕರಾಗುತ್ತಿದ್ದೇವೆ.
ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಅಥವಾ ದಿಕ್ಕು ತಪ್ಪಿಸುವ ಸಂಚನ್ನು ಮಾಡುತ್ತಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳ ಜನರನ್ನು ಅಕಾಲ ವೃದ್ಧಾಪ್ಯ ಕಾಡುತ್ತಿದೆ. ಅದರಲ್ಲೂ ಗದಗ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಧಾರವಾಡ, ಕೋಲಾರ, ತುಮಕೂರಿನ ಜಿಲ್ಲೆಗಳಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಈ ಸಮಸ್ಯೆ ತೀವ್ರಗೊಂಡಿದೆ. ಮತ್ತೊಂದು ಬೇಸಿಗೆ ಕಾಲಿಡುತ್ತಿರುವಾಗ ಇಲ್ಲಿನ ಜನರಿಗೆ ವೃದ್ಧಾಪ್ಯದ ಭಯ ಇನ್ನಿಲ್ಲದಂತೆ ಕಾಡುತ್ತಿದೆ. ಅಕಾಲ ವೃದ್ಧಾಪ್ಯ ಫ್ಲೋರೋಸಿಸ್‌ನ ಬಳುವಳಿ. ಇದ್ದಕ್ಕಿದ್ದಂತೆ ಚರ್ಮ ಸುಕ್ಕುಗಟ್ಟಿದಂತಾಗಿ ತೀವ್ರ ನಿಶ್ಶಕ್ತಿಯಿಂದ ತೊಳಲಾಡುವಂತಾಗುತ್ತದೆ. ಅಂತಿಮವಾಗಿ ಹಾಸಿಗೆ ಬಿಟ್ಟು ಏಳಲೂ ಆಗದ ಸ್ಥಿತಿಗೆ ಫ್ಲೋರೋಸಿಸ್ ತಳ್ಳಿಬಿಡುತ್ತದೆ. ಇದರಿಂದ ಬಳಲುವವರು ಸಾಮಾನ್ಯರಂತೆ ಬಾಗಿ ನೆಲಮುಟ್ಟಲಾರರು. ಕತ್ತು ಬಗ್ಗಿಸಿ ಎದೆಗೆ ಗದ್ದವನ್ನು ಮುಟ್ಟಿಸಲಾರರು. ಕಾಲುಗಳನ್ನು ಮಡಚಿ ಕುಳಿತುಕೊಳ್ಳಲಾರರು. ಒಟ್ಟಾರೆ ಇದರ ಬಾಧೆ ಒಂದೆರಡಲ್ಲ. ಜೀವಚ್ಛವಕ್ಕೆ ಸ್ಪಷ್ಟ ಉದಾಹರಣೆಯಂತೆ ಫ್ಲೋರೈಡ್ ಸಂತ್ರಸ್ತರು ಕಾಣುತ್ತಾರೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಇಂಥವರು ಬಹಳಷ್ಟು ಮಂದಿ ಕಾಣುತ್ತಿದ್ದಾರೆ.
ಮಕ್ಕಳು, ಮುದುಕರು, ಹೆಂಗಸರು, ಗಂಡಸರೆಂಬ ಯಾವುದೆ ಭೇದವಿಲ್ಲದೇ ಕಾಡುವ ಫ್ಲೋರೋಸಿಸ್‌ಗೆ ತುತ್ತಾದ ಬಳಿಕ ಯಾವುದೇ ಚಿಕಿತ್ಸೆಯಿಲ್ಲ. ಅದು ಬಾರದಂತೆ ತಡೆಯುವುದು ಉತ್ತಮ ಮಾರ್ಗ. ಹಾಗೆ ಮುಂಜಾಗ್ರತೆ ವಹಿಸಲು ನಾವು ಮೊಟ್ಟಮೊದಲು ಫ್ಲೋರೈಡ್ ಯುಕ್ತ ಅಂತರ್ಜಲ ಬಳಕೆ ಕಡಿಮೆ ಮಾಡಬೇಕು. ಆದರೆ ನಮ್ಮ ರಾಜ್ಯದ ಈ ಜಿಲ್ಲೆಗಳ ಮಂದಿಗೆ ಬೇರೆ ದಾರಿಯಿಲ್ಲ. ಏಕೆಂದರೆ ಮಳೆ ನೀರು ಹಿಡಿದಿಟ್ಟುಕೊಳ್ಳಲು ಅವರು ಕಲಿತಿಲ್ಲ. ಸರಕಾರ ಕಲಿಸುವ ಗೋಜಿಗೆ ಹೋಗುತ್ತಿಲ್ಲ.
ದೇಶದಲ್ಲಿ ಫ್ಲೋರೈಡ್‌ಯುಕ್ತ ನೀರಿನಿಂದ ಹಾನಿ ಮೊದಲ ಬಾರಿಗೆ ಬೆಳಕಿಗೆ ಬಂದದ್ದು 1927ರ ಸುಮಾರಿಗೆ. ಅಂದಿನಿಂದ ಇಲ್ಲಿಯವರೆಗೆ ದೇಶದ 18 ರಾಜ್ಯಗಳಿಗೆ ಈ ವಿಷ ಪಸರಿಸಿದೆ. ದೇಶಾದ್ಯಂತ ಸರಿಸುಮಾರು 150 ಜಿಲ್ಲೆಗಳ ಕೋಟ್ಯಂತರ ಮಂದಿ ಫ್ಲೋರೈಡ್‌ಯುಕ್ತ ನೀರು ಕುಡಿದು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕರ್ನಾಟಕದ 27 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಫ್ಲೋರೈಡ್ ಸಮಸ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ 5839 ಹಳ್ಳಿಗಳು ಈ ಸಾಲಿಗೆ ಸೇರುತ್ತವೆ.
ಅನುಮಾನವೇ ಇಲ್ಲ, ಇದು ನಮ್ಮದೇ ಪಾಪ ಕೃತ್ಯದ ಫಲ. ಒಂದೆಡೆ ದೈನಂದಿನ ಕೃಷಿಯಲ್ಲಿ ರಾಸಾಯನಿಕ, ಕ್ರಿಮಿನಾಶಕಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದೇವೆ. ಕೈಗಾರಿಕೆಗಳಲ್ಲಿ ಫ್ಲೋರಿನ್‌ಗಳನ್ನು ಬಳಸಿ ಅದರ ತ್ಯಾಜ್ಯವನ್ನು ನದಿಗೆ ಹರಿಬಿಡುತ್ತಿದ್ದೇವೆ. ಟೂಥ್‌ಪೇಸ್ಟ್, ಸೋಪಿಲ್ಲದೇ ದಿನ ಕಳೆಯುವುದಿಲ್ಲ. ಇವೆಲ್ಲವೂ ನೀರಿನಲ್ಲಿ ಕರಗಿ ಅಂತರ್ಜಲ ಭಂಡಾರ ಸೇರುತ್ತದೆ. ಜತೆಗೆ ಭೂಮಿ ಕೊರೆಕೊರೆದು 'ಸುರಕ್ಷಿತ ಮಟ್ಟ' ದಾಟಿ ನೀರೆತ್ತುತ್ತಿದ್ದೇವೆ.
ಕುಡಿಯುವ ನೀರಿಗಾಗಿ ಕೊಳವೆ ಬಾವಿ ತೋಡುವುದು ಸಾಧನೆಯೆಂದುಕೊಂಡೇ ಅದನ್ನು ಆರಂಭಿಸಿದೆವು. ತೀರಾ ಈಗಲೂ ಕೃಷಿಗಾಗಿ ಕೊಳವೆ ಬಾವಿ ತೋಡಿಸುವುದನ್ನು ಪ್ರಗತಿಯೆಂದು ಭಾವಿಸಿದ್ದೇವೆ. ಸ್ವತಃ ಸರಕಾರವೂ ಇದಕ್ಕೆ ಕುಮ್ಮಕ್ಕು ಕೊಡುತ್ತಿದೆ. ಅಂದರೆ ಜಲಮಾಲಿನ್ಯ ಸಾಮೂಹಿಕ ಅಪರಾಧ. ಇದರ ಫಲವಾಗಿ ಇಂದು ಏಡ್ಸ್‌ನಂತೆ ಫ್ಲೋರೋಸಿಸ್ ಸಹ ಜಾಗತಿಕ ಮಟ್ಟದ ಕಾಯಿಲೆಯಾಗಿದೆ. ಚೋದ್ಯವೆಂದರೆ ಇಷ್ಟಾದರೂ ಕೊಳವೆ ಬಾವಿ ಕೊರೆಯುವುದನ್ನು ನಾವು ಬಿಟ್ಟಿಲ್ಲ. ಯಕೃತ್ತು, ಲಿವರ್, ಕಿಡ್ನಿ, ಹೃದಯ, ಕೈಕಾಲು, ಹಲ್ಲು, ಕೀಲು-ಮೂಳೆ ಎಲ್ಲವೂ ಫ್ಲೋರೋಸಿಸ್‌ನಿಂದ ಪತರಗುಟ್ಟಿ ಹೋಗಿದ್ದರೂ 'ಜ್ಞಾನೋದಯ'ವಾಗಿಯೇ ಇಲ್ಲ. ಆಡಳಿತದ ಅಂತಃಪುರಕ್ಕೆ ಇನ್ನೂ ಫ್ಲೋರೋಸಿಸ್ ಪೀಡಿತರ ಗೋಳಾಟ, ನರಳಾಟ ಕೇಳಿಸಿದಂತಿಲ್ಲ. ಅಲ್ಲಲ್ಲಿ ವಿಧಾನ ಮಂಡಲಗಳು, ಒಂದೆರಡು ಬಾರಿ ಪಾರ್ಲಿಮೆಂಟಿನಲ್ಲಿ ವಿಷಯ ಪ್ರಸ್ತಾಪವಾಗಿದ್ದರೂ ಗಂಭೀರ ಚರ್ಚೆ ಆಗಿಲ್ಲ. ಸಮುದಾಯ ಆರೋಗ್ಯದ ಭಾಗವಾಗಿ ಫ್ಲೋರೋಸಿಸ್ ವಿರುದ್ಧ ಆಂದೋಲನ ಹುಟ್ಟಿಕೊಂಡಿಲ್ಲ. ಸಂಶೋಧನೆಗಳು ವಿಶ್ವವಿದ್ಯಾಲಯವನ್ನು ದಾಟಿ ಸಂತ್ರಸ್ತರ ನೆರವಿಗೆ ಬಂದಿಲ್ಲ. ತಜ್ಞರಲ್ಲಿ ಇಂದಿಗೂ ಸಮಸ್ಯೆಗೆ ಸೂಕ್ತ ಉತ್ತರವಿಲ್ಲ.
ಫ್ಲೋರೋಸಿಸ್ ವಿಶ್ವವ್ಯಾಪಿ. ನಮ್ಮ ರಾಜ್ಯದ 18 ಜಿಲ್ಲೆಗಳು ವಿಷಯುಕ್ತ ನೀರುಂಡು ರೋಗಪೀಡಿತ ಸಮಾಜವನ್ನು ಸೃಷ್ಟಿಸಿವೆ. ಕೋಲಾರ, ಚಿತ್ರದುರ್ಗ, ತುಮಕೂರು, ರಾಯಚೂರು, ಬಳ್ಳಾರಿ, ಹಾಸನ, ಗುಲ್ಬರ್ಗ, ಬೀದರ್, ಧಾರವಾಡ ಅತಿ ಹೆಚ್ಚು ಫ್ಲೋರೈಡ್ ಕಾಣಿಸಿಕೊಂಡಿರುವ ಜಿಲ್ಲೆಗಳು. ಕೋಲಾರದಲ್ಲಿ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು, ತುಮಕೂರಿನ ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ, ಧಾರವಾಡದ ಮುಂಡರಗಿ, ಹಾಸನದ ಅರಸೀಕೆರೆ ಹಾಗೂ ಗುಲ್ಬರ್ಗದ ಸೇಡಂ, ಚಿತ್ತಾಪುರ, ಯಾದಗಿರಿ, ಗುರುಮಠಕಲ್, ಕಮಲಾಪುರ, ಅಫಜಲ್ಪುರ ಹಾಗೂ ಆಳಂದ ಅತಿ ಹೆಚ್ಚು ಪೀಡಿತ ಪ್ರದೇಶ ಎನ್ನುತ್ತದೆ ಸರಕಾರಿ ಅಂಕಿ ಅಂಶ.
ಈ ಪ್ರದೇಶದ ನೀರಿನಲ್ಲಿ ಫ್ಲೋರೀನ್ ಪ್ರಮಾಣ ಅಪಾಯದ ಮಟ್ಟಕ್ಕಿಂತ ಬಹಳ ಜಾಸ್ತಿ ಇದೆ ಎಂದರೆ ತೀವ್ರತೆ ಗಮನಿಸಬಹುದು.
ಇಂದಿನ ನಗರೀಕರಣ ಹಾಗೂ ಕೈಗಾರಿಕೀಕರಣದ ಸನ್ನಿವೇಶದಲ್ಲಿ ಗಾಳಿಯ ಮೂಲಕವೂ ಫ್ಲೋರೈಡ್ ಅಂಶ ವ್ಯಾಪಿಸುತ್ತಿದೆ. ಹಲವಾರು ಕೈಗಾರಿಕೆಗಳು ಹೈಡ್ರೋಫ್ಲೋರಿಕ್ ಆಮ್ಲ ಹಾಗೂ ಲವಣಯುಕ್ತ ಫ್ಲೋರೈಡ್ ಅನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಕೈಗಾರಿಕಾ ಘಟಕಗಳಲ್ಲಿ ಫ್ಲೋರೈಡ್ ಅನ್ನು ಕಚ್ಚಾವಸ್ತುವಾಗಿಯೂ ಬಳಸಲಾಗುತ್ತದೆ. ಇಂಥ ಸಂದರ್ಭದಲ್ಲಿ ಕಾರ್ಖಾನೆ ತ್ಯಾಜ್ಯದೊಂದಿಗೆ ಅದು ನೇರವಾಗಿ ಅಂತರ್ಜಲ ಸೇರುವ ಸಾಧ್ಯತೆಗಳಿರುತ್ತವೆ. ಅಲ್ಯುಮಿನಿಯಂ, ಸ್ಟೀಲ್, ಎನಾಮೆಲ್, ಗಾಜು, ಇಟ್ಟಿಗೆ, ಪಾಸ್ಫೇಟ್‌ಯುಕ್ತ ರಾಸಾಯನಿಕ ಗೊಬ್ಬರ ತಯಾರಿಕಾ ಘಟಕಗಳಲ್ಲಿ, ಕುಂಬಾರಿಕೆಯಲ್ಲಿ, ತೈಲ ಸಂಸ್ಕರಣೆಯಲ್ಲಿ, ಪ್ಲಾಸ್ಟಿಕ್ ಕಾರ್ಖಾನೆಗಳಲ್ಲಿ, ಔಷಧೀಯ ಘಟಕಗಳು, ಟೂಥ್‌ಪೇಸ್ಟ್, ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಫ್ಲೋರೈಡ್ ಬಳಕೆಯೂ ತೀರಾ ಅತ್ಯಗತ್ಯ. ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಮುದುಕರಾಗದಂತೆ ತಡೆಯಲು ಇರುವ ಏಕೈಕ ಪರಿಹಾರ, ಚಿಕಿತ್ಸೆಯೆಂದರೆ ಮಳೆ ನೀರು ಕೊಯ್ಲು. ತಕ್ಷಣ ಸಮಸ್ಯೆ ಪೀಡಿತ ಜಿಲ್ಲೆಗಳಲ್ಲಿ ಡೀಫ್ಲೋರಿಡೇಶನ್ ಘಟಕ ಹಾಗೂ ಮಳೆ ನೀರು ಮಾಹಿತಿ ಘಟಕಗಳನ್ನು ಆರಂಭಿಸುವ ಬಗ್ಗೆ ಯೋಚಿಸಬೇಕಿದೆ.
ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಒಬ್ಬ ವ್ಯಕ್ತಿಗೆ ದಿನಕ್ಕೆ 40 ಲೀಟರ್ ನೀರು ಬೇಕು. ಕರ್ನಾಟಕ ಸರ್ಕಾರ ತನ್ನ ಜಲ ನೀತಿಯಲ್ಲಿ ಹೇಳಿಕೊಂಡಿರುವಂತೆ ರಾಜ್ಯದಲ್ಲಿ ಪ್ರತಿ ಪ್ರಜೆಗೆ ನಿತ್ಯ 55 ಲೀಟರ್ ನೀರು ಪೂರೈಸುವ ಗುರಿ ಹೊಂದಲಾಗಿದೆ. ಇಷ್ಟೂ ನೀರು ಕುಡಿಯಲು ಅಥವಾ ಅಡುಗೆಗೇ ಬಳಸಲಾಗುತ್ತದೆ ಎಂದಲ್ಲ. ಇದು ಸ್ನಾನ, ಶೌಚ, ಬಟ್ಟೆ ತೊಳೆಯುವುದು ಎಲ್ಲವೂ ಸೇರಿ ಒಬ್ಬ ವ್ಯಕ್ತಿಯ ಸರಾಸರಿ ಬಳಕೆ. ಅದರಲ್ಲಿ ಎರಡು ಲೀಟರ್ ಅಷ್ಟೇ ಕುಡಿಯಲು ಉಪಯೋಗವಾಗುತ್ತದೆ. ಐದು ಜನ ಸದಸ್ಯರ ಒಂದು ಕುಟುಂಬಕ್ಕೆ ನಿತ್ಯ ಅಡುಗೆಗೆ 10 ಲೀಟರ್ ನೀರು ಬೇಕು. ಅಂದರೆ ವಾರ್ಷಿಕವಾಗಿ ಒಂದು ಕುಟುಂಬಕ್ಕೆ ಸುಮಾರು 7,300 ಲೀಟರ್ ನೀರಿನ ಅಗತ್ಯ ಕುಡಿಯಲು ಮತ್ತು ಅಡುಗೆಗೆ ಇದೆ. ಇಷ್ಟು ಪ್ರಮಾಣದ ಫ್ಲೋರೈಡ್‌ಮುಕ್ತ ನೀರನ್ನು ಸರ್ಕಾರ ಪೂರೈಸಬೇಕು. ಸ್ವಲ್ಪ ಖರ್ಚು ಮಾಡಿ ಅಥವಾ ಸರ್ಕಾರೇತರ ಸಂಸ್ಥೆಗಳ ನೆರವು ಪಡೆದು ಫ್ಲೋರೈಡ್ ಸಮಸ್ಯೆ ಇರುವ ತಾಲೂಕುಗಳ ಹಳ್ಳಿಗಳಲ್ಲಿನ ಪ್ರತಿ ಮನೆಯಲ್ಲೂ ಮಳೆ ಕೊಯ್ಲು ನೀರು ಅಳವಡಿಸಿದರೆ ಅತ್ಯಲ್ಪ ವೆಚ್ಚದಲ್ಲಿ ಪೂರೈಸುವುದು ಕಷ್ಟವೂ ಅಲ್ಲ. ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲೇ ಬರುವ ಮುಂಡರಗಿ ತಾಲ್ಲೂಕಿನಲ್ಲಿ ಬೈಫ್ ಸಂಸ್ಥೆ ಇಂಥದ್ದೊಂದು ಪೈಲಟ್ ಯೋಜನೆ ಕೈಗೊಂಡು ಯಶಸ್ಸಿನತ್ತ ದಾಪುಗಾಲಿಡುತ್ತಿರುವ ಉದಾಹರಣೆ ಕಣ್ಣಮುಂದೇ ಇದೆ.
ಸುಮಾರು 20 ಚದರ ಮೀಟರ್ ಅಳತೆಯ ಪುಟ್ಟದೊಂದು ಆಶ್ರಯ ಮನೆಯನ್ನೇ ತೆಗೆದುಕೊಳ್ಳೋಣ. ಫ್ಲೋರೈಡ್ ಪೀಡಿತ ಜಿಲ್ಲೆಗಳ ವಾರ್ಷಿಕ ಸರಾಸರಿ ಮಳೆ ಪ್ರಮಾಣ ವರ್ಷಕ್ಕೆ 500 ಮಿಲಿಮೀಟರ್. ಅಷ್ಟು ಮಳೆಯಾದಲ್ಲಿ ಮನೆ ಛಾವಣಿಯಿಂದ ಬೀಳುವ ನೀರಿನ ಪ್ರಮಾಣ 10,000 ಲೀಟರ್. ಅದರಲ್ಲಿ ಶೇ 80ರಷ್ಟನ್ನು ಸುಲಭವಾಗಿ ಮಳೆ ಕೊಯ್ಲಿನ ಮೂಲಕ ಹಿಡಿದಿಡಬಹುದು. ಅಂದರೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಶುದ್ಧ ನೀರು ನಮಗೆ ನೈಸರ್ಗಿಕವಾಗಿ ದೊರೆಯುತ್ತದೆ ಅಂತಾಯಿತು. ಮೇಲ್ಛಾವಣಿ ಮೂಲಕ ಮಳೆ ನೀರು ಹಿಡಿದಿಡಲು ಸಾಧ್ಯವಿಲ್ಲದಿದ್ದರೆ ಪರ್ಯಾಯ ವಿಧಾನವೂ ಉಂಟು. ಅದೆಂದರೆ ಪುಟ್ಟ ಕಾಲುವೆ ಮೂಲಕ ನೀರನ್ನು ಹಿಡಿದಿಟ್ಟು, ನಂತರ ಮರಳಿನ ಫಿಲ್ಟರ್ ಮೂಲಕ ಶುದ್ಧೀಕರಿಸಿಕೊಂಡು ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು. ಯಾವ ವಿಧಾನ ಅನುಸರಿಸಿದರೂ ತಗಲುವ ಖರ್ಚು ಹೆಚ್ಚೆಂದರೆ 10 ಸಾವಿರ ರುಪಾಯಿ ಅಷ್ಟೆ. ಇಷ್ಟೆಲ್ಲಕ್ಕೂ ಬೇಕಿರುವುದು ಕೇವಲ ಒಂದು ಬಾರಿಯ ಹೂಡಿಕೆಯಷ್ಟೆ.
ಬಾಂಗ್ಲಾದೇಶ, ಕೀನ್ಯಾ, ಉಗಾಂಡಾ, ತಾಂಜೇನಿಯಾದಂಥ ಪುಟ್ಟ ಮತ್ತು ಬಡರಾಷ್ಟ್ರಗಳೇ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿರುವುದು ಮಾತ್ರವಲ್ಲ, ಆ ವಿಧಾನದಿಂದಲೇ ತಮ್ಮ ಪ್ರಜೆಗಳಿಗೆ ಆರ್ಸೆನಿಕ್‌ಮುಕ್ತ ಶುದ್ಧ ನೀರನ್ನು (ಅಲ್ಲಿ ಆರ್ಸೆನಿಕ್ ಬಾಧೆ ಹೆಚ್ಚು) ನೀಡುತ್ತಿವೆ. ಅವು ಬಿಡಿ. ನಮ್ಮ ಅಕ್ಕಪಕ್ಕದ ತಮಿಳುನಾಡು, ಮಹಾರಾಷ್ಟ್ರಗಳೂ ಈಗ ಗ್ರಾಮೀಣ ಪ್ರರದೇಶದಲ್ಲಿ ಮಳೆ ನೀರು ಕೊಯ್ಲಿನ ಬಗ್ಗೆ ಗಮನ ನೀಡುತ್ತಿವೆ. ನಾವೇಕೆ ಈ ಬಗ್ಗೆ ಗಮನಹರಿಸಬಾರದು?
ಸಚಿವರೇ, ನಮ್ಮ- ನಿಮ್ಮೂರಿನ ಮಂದಿ ಹೀಗೆ ಇದ್ದಕ್ಕಿದ್ದಂತೆ ಮುದುಕರಾಗಲು ನಾವು ಬಿಡಬೇಕೇ? ಯೋಚಿಸಿ ಪ್ಲೀಸ್.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


