ಅಂಕಣಗಳು

ರೂಪ್ಸಿಂಗ್: ಹಾಕಿ ಅಂಗಳದ ಶಾಪಗ್ರಸ್ತ ಗಂಧರ್ವ

ಎರಡು ದಶಕಕ್ಕೂ ಹೆಚ್ಚು ಕಾಲ, ಹಾಕಿ ಆಟದ ಅಂಗಳದಲ್ಲಿ ಧ್ಯಾನ್ಚಂದ್ ನೆರಳಂತೆ ಇದ್ದವರು..

ರೂಪ್ಸಿಂಗ್: ಹಾಕಿ ಅಂಗಳದ ಶಾಪಗ್ರಸ್ತ ಗಂಧರ್ವ
Published On :

ಹಾಕಿ ಅಂದಾಕ್ಷಣ, ಕ್ರೀಡಾ ಪ್ರೇಮಿಗಳಿಗೆಲ್ಲ ನೆನಪಾಗುವ ಹೆಸರು- ಹಾಕಿ ಮಾಂತ್ರಿಕ ಧ್ಯಾನ್ಚಂದ್ ಅವರದು. ಎರಡು ದಶಕಕ್ಕೂ ಹೆಚ್ಚು ಕಾಲ, ಹಾಕಿ ಆಟದ ಅಂಗಳದಲ್ಲಿ ಧ್ಯಾನ್ಚಂದ್ ನೆರಳಂತೆ ಇದ್ದವರು ರೂಪ್ಸಿಂಗ್. ಈತ, ಧ್ಯಾನ್ಚಂದ್ ಅವರ ಸ್ವಂತ ತಮ್ಮ. ಹಾಕಿಯಲ್ಲಿ, ಧ್ಯಾನ್ಚಂದ್ಗೆ ಸರಿಸಮ ಎಂಬಂತಿದ್ದ ರೂಪ್ಸಿಂಗ್, ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ, ಹಾಕಿಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಧೀರರಲ್ಲಿ ಒಬ್ಬ. ಈ ಧೀಮಂತನಿಗೆ ಪದ್ಮಶ್ರೀ ಸಿಕ್ಕಿತು. ಹಾಗಿದ್ದರೂ ಈತ ತೀವ್ರ ಬಡತನದಲ್ಲಿಯೇ ಬದುಕಿದರು. ಬಡತನದ ಕಾರಣಕ್ಕೆ ಕಾಯಿಲೆ ಬಿದ್ದರು ಮತ್ತು ಬಡತನದ ಮಧ್ಯೆಯೇ ಸತ್ತು ಹೋದರು.
ವಿಪರ್ಯಾಸವೆಂದರೆ, ಒಂದು ಕಡೆಯಲ್ಲಿ ಈ ಮಹಾನ್ ಆಟಗಾರ ಕಷ್ಟಗಳು ಹಾಗೂ ಕಾಯಿಲೆಗಳ ಕಾರಣದಿಂದ ಒದ್ದಾಡುತ್ತಿದ್ದಾಗಲೇ, ಇನ್ನೊಂದು ಕಡೆಯಲ್ಲಿ, ಈತನ ಆಟದ ಕೌಶಲ್ಯ ಕುರಿತಂತೆ ದೊಡ್ಡ ಹೋಟೆಲಿನ ಸಭಾಂಗಣದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಈತನಿಗೆ ನೆರವಾಗಬೇಕು ಎಂಬ ಸದಾಶಯದಿಂದಲೇ ಕ್ರೀಡಾಂಗಣಗಳಲ್ಲಿ ಸಹಾಯಾರ್ಥ ಪಂದ್ಯಗಳು ಜರುಗಿದವು. ಆದರೆ, ಹೀಗೆ ಸಂಗ್ರಹವಾದ ಹಣದ ಚಿಕ್ಕಾಸು ಕೂಡ ಈ ಮಹಾನ್ ಆಟಗಾರನಿಗೆ ಸಿಗಲಿಲ್ಲ. ಈ ವಿವರಗಳನ್ನೆಲ್ಲ ಗಮನಿಸಿದರೆ, ರೂಪ್ಸಿಂಗ್ ಅವರನ್ನು ಹಾಕಿ ಅಂಗಳದ ಶಾಪಗ್ರಸ್ತ ಗಂಧರ್ವ ಎಂದು ಕರೆಯುವುದೇ ಸರಿ ಅನಿಸುತ್ತದೆ. ಎರಡು ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಗೆದ್ದು ಕೊಟ್ಟ ಅಪ್ರತಿಮ ಆಟಗಾರನೊಬ್ಬನ ಬದುಕು ಸಂಕಟದ ಚಕ್ರ ಸುಳಿಗೆ ಸಿಕ್ಕಿಕೊಂಡಿದ್ದೇಕೆ ಎಂಬುದು ಈಗಲೂ ಅರ್ಥವಾಗದ ವಿಚಾರ. ಉತ್ತರವೇ ಸಿಗದ ಪ್ರಶ್ನೆ.
ರೂಪ್ಸಿಂಗ್ ಹುಟ್ಟಿದ್ದು 1908, ಸೆಪ್ಟೆಂಬರ್ 8ರಂದು. ಇವರ ತಂದೆ-ಸೋಮೇಶ್ವರದತ್ ಸಿಂಗ್. ಈತ ಸೇನೆಯಲ್ಲಿ ಸಿಪಾಯಿಯಾಗಿದ್ದವರು, ಸ್ವಾತಂತ್ರ್ಯ ಪೂರ್ವದ ಆ ದಿನಗಳಲ್ಲಿ ಬ್ರಿಟಿಷರ ಮೂಲಕ ಭಾರತಕ್ಕೆ ಬಂದ ಕ್ರೀಡೆಯೇ ಹಾಕಿ. ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಯೋಧರು ಆ ಆಟವನ್ನು ಒಪ್ಪಿಕೊಂಡರು, ಅಪ್ಪಿಕೊಂಡರು. ಹೀಗೆ, ಸಿಪಾಯಿಯಾಗಿದ್ದ ತಂದೆಯ ಮೂಲಕ ಧ್ಯಾನ್ಚಂದ್ಗೆ ಬಳುವಳಿಯಾಗಿ ಬಂದದ್ದೇ ಹಾಕಿ. ಸ್ವಾರಸ್ಯವೆಂದರೆ, ರೂಪ್ಸಿಂಗ್ ಯಾರಿಂದಲೂ ಹಾಕಿಯ ಪ್ರಾಥಮಿಕ ಪಾಠಗಳನ್ನು ಹೇಳಿಸಿಕೊಳ್ಳಲಿಲ್ಲ. ಆತ, ಮೈದಾನದ ಆಚೆಯಲ್ಲಿ ನಿಂತು, ತನ್ನಣ್ಣ ಧ್ಯಾನ್ಚಂದ್ ಆಡುವುದನ್ನು ತದೇಕಚಿತ್ತದಿಂದ ನೋಡುತ್ತ ನೋಡುತ್ತಲೇ ಆಡುವುದನ್ನು ಕಲಿತುಬಿಟ್ಟ. ಆದರೆ, ಅಣ್ಣನನ್ನು ಕಂಡರೆ ತುಂಬಾ ಹೆದರಿಕೆ ಇದ್ದುದರಿಂದ-'ನಾನೂ ಆಟ ಕಲಿತಿದ್ದೇನೆ. ನಿನ್ನೊಂದಿಗೆ ಆಡಲು ನನಗೂ ಇಷ್ಟವಿದೆ' ಎಂದು ರೂಪ್ಸಿಂಗ್ ಹೇಳಲೇ ಇಲ್ಲ. ಬದಲಿಗೆ, ತನ್ನಣ್ಣ ಇಲ್ಲದ ವೇಳೆಯಲ್ಲಿ ಬೇರೆ ಬೇರೆ ಕ್ಲಬ್ಗಳ ಪರವಾಗಿ ಆಡಿ ಮಿಂಚಿದ. ನಂತರ ಅವರಿವರ ಮೂಲಕ ರೂಪ್ಸಿಂಗ್ರ ಅಪ್ರತಿಮ ಆಟದ ಸುದ್ದಿ ಧ್ಯಾನ್ಚಂದ್ ಅವರನ್ನು ತಲುಪಿತು. ಅವರು ಇದನ್ನು ನಂಬಲಾಗದೆ ನಂಬಿ ಬೆರಗಾಗಿದ್ದಾಗಲೇ, 1932ರಲ್ಲಿ ನಡೆಯಲಿದ್ದ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತಂಡದ ಆಯ್ಕೆ ಮಾಡುವ ಉದ್ದೇಶದಿಂದ ಭೋಪಾಲ್ನಲ್ಲಿ ಒಂದು ಪಂದ್ಯ ನಡೆಸಲಾಯಿತು. ಆಗ ರೂಪ್ಸಿಂಗ್ ಒಟ್ಟು ಎಂಟು ಗೋಲು ಬಾರಿಸಿ ತಂಡಕ್ಕೆ ಆಯ್ಕೆಯಾದರು. ಈ ಆಟ ಕಂಡು ಆಯ್ಕೆ ಸಮಿತಿಯ ಸದಸ್ಯರು ಮಾತ್ರವಲ್ಲ, ಸ್ವತಃ ಧ್ಯಾನ್ಚಂದ್ ಕೂಡ ದಂಗು ಬಡಿದುಹೋದರು.
ರೂಪ್ಸಿಂಗ್, ಹೆಸರಿಗೆ ತಕ್ಕಂತೆ ರೂಪವಂತ. ಚೆಂದದ ಬಟ್ಟೆ ಧರಿಸಬೇಕು. ಸದಾ ಮುದ್ದಾಗಿ ಕಾಣಿಸುತ್ತಿರಬೇಕು ಎಂಬುದು ಆತನ ನಿಲುವಾಗಿತ್ತು. 1932ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾದಾಗ ಈತನಿಗೆ 24 ವರ್ಷದ ತುಂಬು ಹರೆಯ. ತಂಡಕ್ಕೆ ಆಯ್ಕೆಯಾಗಿದ್ದ ಉಳಿದವರೆಲ್ಲ ವಿದೇಶಕ್ಕೆ ಹಾರುವ ಸಂಭ್ರಮದಲ್ಲಿ ಮೈಮರೆತಿದ್ದಾಗಲೇ- ಉಹುಂ, ನಾನು ಬರುವುದಿಲ್ಲ ಎಂದು ಈತ ತಕರಾರು ತೆಗೆದಿದ್ದರಂತೆ. ಯಾಕೆಂದು ವಿಚಾರಿಸಿದಾಗ ಈತ ಹೇಳಿದ್ದು: 'ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರಂಭದಲ್ಲಿ ಧರಿಸಲು ಅಗತ್ಯವಿರುವ ಹೊಸ ಬಟ್ಟೆಗಳನ್ನು ಕೊಡಿಸಿಲ್ಲ. ಹೊಸಬಟ್ಟೆ ಇಲ್ಲವೆಂದರೆ ನಾನು ಒಲಿಂಪಿಕ್ಸ್ಗೆ ಹೋಗುವುದೇ ಇಲ್ಲ. ಆಗ ಧ್ಯಾನ್ಚಂದ್, ಹೊಸ ಬಟ್ಟೆತರಿಸಿ, ತಮ್ಮನೊಂದಿಗೆ ಒಲಂಪಿಕ್ಸ್ನ ಅಂಗಳಕ್ಕೆ ಹೋದರು.
1932ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಫೈನಲ್ನಲ್ಲಿ ಭಾರತಕ್ಕೆ ಎದುರಾಳಿಯಾದದ್ದು ಅಮೆರಿಕ. ಆ ಪಂದ್ಯದಲ್ಲಿ ಭಾರತ, 24-1 ಗೋಲುಗಳ ಅಂತರದಿಂದ ಅಮೆರಿಕವನ್ನು ಸೋಲಿಸಿತು. ಹಾಕಿಯ ಇತಿಹಾಸದಲ್ಲಿ ಅದೂ ಒಲಂಪಿಕ್ಸ್ನಲ್ಲಿ ತಂಡವೊಂದು 24 ಗೋಲುಗಳನ್ನು ಹೊಡೆದಿರುವುದು ಇವತ್ತಿಗೂ ದಾಖಲೆ. ಈ ಇಪ್ಪತ್ನಾಲ್ಕರಲ್ಲಿ ರೂಪ್ಸಿಂಗ್ ಒಬ್ಬರೇ 11 ಗೋಲುಗಳನ್ನು, ಧ್ಯಾನಚಂದ್ 8 ಗೋಲುಗಳನ್ನು ಹೊಡೆದಿದ್ದರು. ಆಗ, ಅಮೆರಿಕದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸಾಲುಗಳಿವು: 'ಭಾರತ ತಂಡದಲ್ಲಿ ರೂಪ್ಸಿಂಗ್ ಅವರಂಥ ಆಟಗಾರರು ಇರುವವರೆಗೆ, ಇಡೀ ತಂಡ ಎಡಗೈಯಿಂದ ಆಟವಾಡಿದರೆ ಮಾತ್ರ ಬೇರೆ ತಂಡಗಳು ಭಾರತವನ್ನು ಸೋಲಿಸಲು ಸಾಧ್ಯ...'
ನಂತರದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿತು. ಎರಡೂ ರಾಷ್ಟ್ರಗಳಲ್ಲಿ ರೂಪ್ಸಿಂಗ್ ಅವರ ಆಟ ಮನೆಮಾತಾಯಿತು. ಆಗಲೇ, ನನ್ನ ತಮ್ಮ, ನನಗಿಂತ ಅತ್ಯುತ್ತಮ ಆಟಗಾರ. ಗೋಲು ಹೊಡೆಯಲು ಯಾರಿಂದಲೂ ಸಾಧ್ಯವೇ ಇಲ್ಲ ಎಂಬಂಥ ಸಂದರ್ಭದಲ್ಲಿ ಕೂಡ ಎದುರಾಳಿಗಳ ಕಣ್ತಪ್ಪಿಸಿ ಗೋಲು ಬಾರಿಸುವ ಕಲೆ ಅವನಿಗೆ ದಕ್ಕಿಹೋಗಿದೆ ಎಂದು ಖುದ್ದು ಧ್ಯಾನಚಂದ್ ಹೇಳಿಕೆ ನೀಡಿದ್ದರು. ಈ ವಿವರವನ್ನೆಲ್ಲ ಗಮನಿಸಿದ ಗ್ವಾಲಿಯರ್ನ ಅಂದಿನ ರಾಜ ಜೀವಾಜಿರಾವ್ ಸಿಂಧಿಯಾ, ರೂಪ್ಸಿಂಗ್ ಅವರಿಗೆ ತನ್ನ ಖಾಸಗಿ ಭದ್ರತಾ ಪಡೆಯಲ್ಲಿ ನೌಕರಿ ನೀಡಿದ. ಅರಮನೆಯ ಒಂದು ಭಾಗದಲ್ಲಿ ನಿಮಗೆ ಉಳಿಯಲು ವ್ಯವಸ್ಥೆ ಮಾಡುತ್ತೇನೆ. ಸಂಸಾರದೊಂದಿಗೆ ಬಂದು ಬಿಡಿ ಎಂದು ಆಹ್ವಾನಿಸಿದ. ರೂಪ್ಸಿಂಗ್ ಹಾಗೆಯೇ ಮಾಡಿದರು.
ಆನಂತರ ನಡೆದದ್ದೇ 1936ರ ಬರ್ಲಿನ್ ಒಲಿಂಪಿಕ್ಸ್. ಈ ಟೂರ್ನಿಯ ನಂತರ ತಾವು ಹಾಕಿಯಿಂದ ನಿವೃತ್ತಿ ಪಡೆಯುವುದಾಗಿ ಧ್ಯಾನಚಂದ್ ಘೋಷಿಸಿದ್ದರು. ಚಿನ್ನದ ಪದಕ ಗೆದ್ದು ಆಟಕ್ಕೆ ಗುಡ್ಬೈ ಹೇಳಬೇಕೆಂದೇ ನನ್ನ ಹಿರಿಯಾಸೆ ಎಂದೂ ಹೇಳಿದ್ದರು. ಮತ್ತೊಂದು ಕಡೆಯಲ್ಲಿ, ತನ್ನ ದೇಶದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಜರ್ಮನ್ನರೇ ಹಾಕಿಯಲ್ಲಿ ಚಿನ್ನ ಗೆಲ್ಲಬೇಕೆಂದು ಸರ್ವಾಧಿಕಾರಿ ಹಿಟ್ಲರ್ನ ಕನಸಾಗಿತ್ತು. ಈ ಉದ್ದೇಶದಿಂದಲೇ ಆತ ತನ್ನ ತಂಡಕ್ಕೆ ಹತ್ತಾರು ಮಂದಿ ಪರಿಣಿತರಿಂದ ತರಬೇತಿ ಕೊಡಿಸಿದ್ದ. ಫೈನಲ್ನಲ್ಲಿ ಜರ್ಮನಿ ಗೆದ್ದೇ ಗೆಲ್ಲುವುದೆಂಬ ಅಹಂಭಾವದಿಂದ ಮೈದಾನಕ್ಕೆ ಬಂದ.
ಮೊದಲ 30 ನಿಮಿಷಗಳ ಆಟದಲ್ಲಿ ಎರಡೂ ಕಡೆಯ ಆಟಗಾರರು ಜಿದ್ದಾಜಿದ್ದಿಯಿಂದ ಆಡಿದರು. ಪರಿಣಾಮ, ಉಭಯ ತಂಡಗಳಿಂದ ಒಂದು ಗೋಲೂ ದಾಖಲಾಗಲಿಲ್ಲ. ಆದರೆ 32ನೇ ನಿಮಿಷದಲ್ಲಿ ಚಮತ್ಕಾರ ನಡೆದು ಹೋಯಿತು. ಜರ್ಮನ್ ಆಟಗಾರರ ಮಧ್ಯೆ ಮಿಂಚಿನಂತೆ ನುಗ್ಗಿ ಬಂದ ರೂಪ್ಸಿಂಗ್, ಎಲ್ಲರನ್ನೂ ವಂಚಿಸಿ ಮೊದಲ ಗೋಲು ಹೊಡೆದೇಬಿಟ್ಟರು. ನಂತರದ ಅರ್ಧ ಗಂಟೆಯಲ್ಲಿ ಕ್ರೀಡಾಂಗಣದಲ್ಲಿ ರೂಪ್ಸಿಂಗ್ ಮತ್ತು ಧ್ಯಾನ್ಚಂದ್ರ ದರ್ಬಾರು ನಡೆಯಿತು. ಈ ಸೋದರರು ತಲಾ ನಾಲ್ಕು ಗೋಲು ಹೊಡೆದಿದ್ದರು. ಭಾರತ 8-1 ಗೋಲುಗಳಿಂದ ಜರ್ಮನಿಯನ್ನು ಸೋಲಿಸಿತು. ಪದಕ ಸ್ವೀಕರಿಸಲು ವಿಜಯ ವೇದಿಕೆಗೆ ಬಂದ ಧ್ಯಾನ್ಚಂದ್ರ ಕೈ ಕುಲುಕಿದ ಹಿಟ್ಲರ್, -'ನೀನು ಜರ್ಮನ್ ಆಗಿದ್ದಿದ್ದರೆ, ಈ ಒಂದು ಆಟಕ್ಕಾಗಿಯೇ ನಿನ್ನನ್ನು ಮೇಜರ್ ಜನರಲ್ ಮಾಡಿಬಿಡುತ್ತಿದ್ದೆ' ಎಂದು ಉದ್ಗರಿಸಿದ್ದು ಈ ಸಂದರ್ಭದಲ್ಲಿಯೇ. ಆ ಆಟದಿಂದ ರೂಪ್ಸಿಂಗ್ ಜರ್ಮನಿಯಲ್ಲಿ ಎಷ್ಟೊಂದು ಜನಪ್ರಿಯರಾಗಿದ್ದರೆಂದರೆ, 36 ವರ್ಷಗಳ ನಂತರ, ಅಂದರೆ 1972ರಲ್ಲಿ ಮ್ಯೂನಿಚ್ನಲ್ಲಿ ಮತ್ತೆ ಒಲಂಪಿಕ್ಸ್ ಕ್ರೀಡಾಕೂಟ ನಡೆದಾಗ, ಆ ಪ್ರದೇಶದ ಮುಖ್ಯ ಬೀದಿಯೊಂದಕ್ಕೆ ರೂಪ್ಸಿಂಗ್ ರಸ್ತೆ ಎಂದು ಹೆಸರಿಟ್ಟು, ಈ ಅಪ್ರತಿಮ ಆಟಗಾರನಿಗೆ ಗೌರವ ಸಲ್ಲಿಸಲಾಯಿತು.
ತಮ್ಮ ಕಲಾತ್ಮಕ ಆಟದಿಂದಾಗಿ ರೂಪ್ಸಿಂಗ್, ತಮ್ಮ ಒಟ್ಟಾರೆ ಕ್ರೀಡಾ ಬದುಕಿನಲ್ಲಿ 27 ಚಿನ್ನದ ಪದಕ ಪಡೆದರು. ಹಲವು ಪ್ರಶಸ್ತಿಗಳನ್ನು ಗಳಿಸಿದರು ನಿಜ. ಆದರೆ ಆರ್ಥಿಕವಾಗಿ ಅವರ ಪರಿಸ್ಥಿತಿ ಏನೇನೂ ಚೆನ್ನಾಗಿರಲಿಲ್ಲ. ಅವರದು ಎಂಟು ಮಕ್ಕಳ ತುಂಬು ಕುಟುಂಬ. ಎಲ್ಲರೂ ರೂಪ್ಸಿಂಗ್ ಅವರ ದುಡಿಮೆಯನ್ನೇ ಅವಲಂಬಿಸಿದ್ದರು. ಹೀಗಿದ್ದಾಗಲೇ ವಿಧಿಯ ಅಟ್ಟಹಾಸ ಆರಂಭವಾಯಿತು. ಬಡತನ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದ ರೂಪ್ಸಿಂಗ್ಗೆ ಕ್ಷಯ ಅಮರಿಕೊಂಡಿತು. ಕ್ಷಯ ಎಂಬುದು ಅಂಟುರೋಗ ಎಂದು ಎಲ್ಲರೂ ನಂಬಿಕೊಂಡಿದ್ದ ದಿನಗಳವು. ಕಾಯಿಲೆ ಇದೆ ಎಂದು ಗೊತ್ತಾದ ತಕ್ಷಣ, ಸೇವೆಯಿಂದ ನಿವೃತ್ತಿ ಪಡೆಯಿರಿ ಎಂಬ ಸೂಚನೆ ಬಂತು. ವಾಸವಿರುವ ಮನೆಯನ್ನು ಕೂಡಲೇ ಖಾಲಿ ಮಾಡಿ ಎಂಬ ಆದೇಶ ಕೂಡ ಅರಮನೆಯ ಅಧಿಕಾರಿಗಳಿಂದ ಬಂತು.
ಪರಿಣಾಮವಾಗಿ, ರೂಪ್ಸಿಂಗ್ ಒಂದು ಪುಟ್ಟ ಬಾಡಿಗೆ ಮನೆಗೆ ಬಂದರು. ಬೇರೆಲ್ಲಾದರೂ ನೌಕರಿ ಹಿಡಿಯೋಣವೆಂದರೆ, ಒಂದು ಕಡೆ ವಯೋವುತಿ ಮೀರಿ ಹೋಗಿತ್ತು. ಮತ್ತೊಂದು ಕಡೆಯಲ್ಲಿ, ಕ್ಷಯರೋಗದ ಕಾರಣದಿಂದ ದೇಹ ಬಡವಾಗುತ್ತಾ ಸಾಗಿತ್ತು. ಮಕ್ಕಳು ಚಿಕ್ಕವರಿದ್ದ ಕಾರಣ, ಇಡೀ ಕುಟುಂಬ ಕಷ್ಟಗಳ ಚಕ್ರ ಸುಳಿಗೆ ಸಿಕ್ಕಿ ಬಿತ್ತು. (ಈ ಹೊತ್ತಿನಲ್ಲಿ ಧ್ಯಾನ್ಚಂದ್ ಕೂಡ ಕಷ್ಟದ ಮಧ್ಯೆಯೇ ಬದುಕುತ್ತಿದ್ದರು. ಹಾಗಾಗಿ, ಸಂಕಟದ ಸಂದರ್ಭದಲ್ಲಿ ತಮ್ಮನ ನೆರವಿಗೆ ಧಾವಿಸಲು ಅವರಿಗೂ ಸಾಧ್ಯವಾಗಲಿಲ್ಲ.) ಬದುಕು ನಡೆಸುವುದೇ ಕಷ್ಟ ಅನ್ನಿಸಿದಾಗ ರೂಪ್ಸಿಂಗ್, ತಮಗೆ ಬಹುಮಾನವಾಗಿ ಬಂದಿದ್ದ ಚಿನ್ನದ ಪದಕಗಳನ್ನು ಮಾರಿದರು. ಇದೆಲ್ಲಾ 1950ರ ದಶಕದ ಮಾತು. ಆ ದಿನಗಳಲ್ಲಿ ಚಿನ್ನಕ್ಕೆ ಭಾರಿ ಅನ್ನುವಂಥಾ ಬೆಲೆಯೂ ಇರಲಿಲ್ಲ. ಪರಿಣಾಮ, ಕೆಲವೇ ತಿಂಗಳುಗಳಲ್ಲಿ ರೂಪ್ಸಿಂಗ್ ಬರಿಗೈ ದಾಸರಾದರು. ಆಗಲೇ ದಡಬಡಿಸಿ ಬಂದ ಮನೆಯ ಮಾಲೀಕ, ತಿಂಗಳ ಬಾಡಿಗೆ ನೀಡಿಲ್ಲ ಎಂದು ಜಗಳ ತೆಗೆದ. ಅಷ್ಟೇ ಅಲ್ಲ, ಮನೆಯ ಸಾಮಾನುಗಳನ್ನೆಲ್ಲ ತೆಗೆದು ಬೀದಿಗೆ ಎಸೆದುಬಿಟ್ಟ. ಏನು ಮಾಡಬೇಕೆಂದೇ ತೋಚದ ರೂಪ್ಸಿಂಗ್, ಅದೆಷ್ಟೋ ಹೊತ್ತು ಬೀದಿಯಲ್ಲಿ ನಿರ್ಗತಿಕರಂತೆ ನಿಂತಿದ್ದರು. ಇವರ ಕಥೆ ಕೇಳಿದವರು ತ್ಚು ತ್ಚು ತ್ಚು ಎಂದರೇ ವಿನಃ ನೆರವಿಗೆ ಬರಲಿಲ್ಲ. ಕಡೆಗೆ ಗ್ವಾಲಿಯರ್ ನಗರದ ಹೊರಭಾಗದಲ್ಲಿದ್ದ ಷೆಡ್ನಂಥ ಮನೆಯೊಂದನ್ನು ರೂಪ್ಸಿಂಗ್ ಬಾಡಿಗೆಗೆ ಹಿಡಿದರು.
ಹೀಗಿದ್ದಾಗಲೇ ಅವತ್ತಿನ ಮಧ್ಯಪ್ರದೇಶ ಸರ್ಕಾರಕ್ಕೆ ದಿಢೀರ್ ಜ್ಞಾನೋದಯವಾಯಿತು! ರೂಪ್ಸಿಂಗ್ ಅವರಿಗೆ ಮಾಸಿಕ 100 ರೂಪಾಯಿಗಳ ನಿವೃತ್ತಿ ವೇತನ ಘೋಷಿಸಲಾಯಿತು. ಅವರ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಲು, ಶಾಲೆ-ಕಾಲೇಜುಗಳಲ್ಲಿ ಬಳಸುವ ಹಾಕಿ ಸ್ಟಿಕ್ಗಳ ಮೇಲೆ 'ರೂಪ್ಸಿಂಗ್' ಎಂದು ಬರೆಸಲಾಯಿತು. ವಿಪರ್ಯಾಸವೆಂದರೆ, ಒಂದು ಕಡೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಸ್ಟಿಕ್ನೊಂದಿಗೆ ಆಟವಾಡುತ್ತಾ ನಾನೂ ರೂಪ್ಸಿಂಗ್ ಥರಾ ಆಗ್ತೇನೆ ಎಂದು ಬೀಗುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಕುಟುಂಬವನ್ನು ಸಾಕಲಾಗದ ಅಸಹಾಯಕತೆಯಿಂದ ರೂಪ್ಸಿಂಗ್ ಮಾನಸಿಕವಾಗಿ ಕುಸಿದು ಹೋಗಿದ್ದರು. ಈ ಸಂದರ್ಭದಲ್ಲಿಯೇ ಮಧುಮೇಹವೂ ಸೇರಿದಂತೆ ಮತ್ತೆರಡು ಕಾಯಿಲೆಗಳು ಅವರಿಗೆ ಗಂಟು ಬಿದ್ದವು.
ಇದೆಲ್ಲದರಿಂದ ಜರ್ಜರಿತರಾದ ರೂಪ್ಸಿಂಗ್, -'ಓಹ್, ನನ್ನ ಕಥೆ ಮುಗೀತು ಎಂದುಕೊಂಡಾಗಲೇ ಅವರ ನೆರವಿಗೆ ಬಂದಾತ ಹಿಂದಿ ಚಿತ್ರ ನಟ ಪೃಥ್ವೀರಾಜ್ ಕಪೂರ್. ಈತ ಒಂದು ನಾಟಕ ಪ್ರದರ್ಶಿಸಿದರು. ಅದರಿಂದ ಸಂಗ್ರಹವಾದ ಅಷ್ಟೂ ಹಣವನ್ನು ರೂಪ್ಸಿಂಗ್ಗೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿ ಎಂದು ಸಲಹೆ ಮಾಡಿದರು. ಈ ವಿಷಯ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದಂತೆಯೇ ಹಲವರು ಎದ್ದು ನಿಂತರು. ರೂಪ್ಸಿಂಗ್ ಸಹಾಯಾರ್ಥ, ಹಾಕಿ ಪಂದ್ಯ ಏರ್ಪಡಿಸಲು ಮುಂದಾದರು. ಕೆಲವೇ ದಿನಗಳಲ್ಲಿ ಹಾಲೆಂಡ್ ತಂಡದ ವಿರುದ್ಧ ಆಡುವುದೆಂಬ ನಿರ್ಧಾರವೂ ಹೊರಬಿತ್ತು. ರೂಪ್ಸಿಂಗ್ ಅವರಂಥ ಮಹಾನ್ ಆಟಗಾರನ ಸಹಾಯಾರ್ಥ ಪಂದ್ಯ ಆಡಲು ಹಾಲೆಂಡ್ನ ಆಟಗಾರರು ಉತ್ಸಾಹದಿಂದಲೇ ಬಂದರು. ವಿಪರ್ಯಾಸ ನೋಡಿ: ಹಾಕಿ ಪಂದ್ಯ ಆಯೋಜಿಸಿದ್ದ ಸಂಘಟಕರು, ರೂಪ್ಸಿಂಗ್ ಅವರಿಗೆ ಆಹ್ವಾನವನ್ನೇ ಕಳಿಸಿರಲಿಲ್ಲ. ಹಾಗಿದ್ದರೂ ರೂಪ್ಸಿಂಗ್ ಕ್ರೀಡಾಂಗಣಕ್ಕೆ ಬಂದರು. ಅವರ ಬಳಿ ಪಾಸ್ ಆಗಲಿ, ಟಿಕೆಟ್ ಆಗಲಿ ಇಲ್ಲವೆಂಬ ಕಾರಣದಿಂದ ಗೇಟ್ಕೀಪರ್ ಅವರನ್ನು ಒಳಗೆ ಬಿಡಲಿಲ್ಲ. ಕಡೆಗೆ, ಬೇರೆ ದಾರಿ ಕಾಣದೆ ರೂಪ್ಸಿಂಗ್ ತಮ್ಮ ಪರಿಚಯ ಹೇಳಿಕೊಂಡರು.
ತನ್ನೆದುರು ನಿಂತಿರುವವರೇ ರೂಪ್ಸಿಂಗ್ ಎಂದು ತಿಳಿದಾಗ ಗೇಟ್ಕೀಪರ್ ಗಾಬರಿಯಾದ. ಎರಡು ನಿಮಿಷ ಇಲ್ಲೇ ನಿಂತಿರಿ ಸಾರ್. ಸಂಘಟಕರನ್ನು ಕರೆತರುತ್ತೇನೆ ಎಂದು ಓಡಿಹೋದ. ಆದರೆ, ಸಂಘಟಕರು ಬೇರೇನೂ ಬ್ಯುಸಿಯಲ್ಲಿದ್ದರು. (ಪಂದ್ಯ ಮುಗಿದ ಮೇಲೆ ಒಂದಷ್ಟು ಹಣ ಕೊಟ್ರೆ ಮುಗೀತು ಎಂಬುದು ಅವರ ಲೆಕ್ಕಾಚಾರ!) ತುಂಬ ಉಡಾಫೆಯಿಂದ-ಮ್ಯಾಚ್ ಮುಗಿದ ಮೇಲೆ ಸಿಕ್ತಾರೆ ಅಂತ ಹೇಳಯ್ಯ ಈ ಮುದುಕನಿಗೆ ಎಂದರು. ಗೇಟ್ಕೀಪರ್, ಹಾಗೆಯೇ ವರದಿ ಒಪ್ಪಿಸಿದ. ಪಾಪ, ರೂಪ್ಸಿಂಗ್ ಬಾಡಿದ ಮನಸ್ಸಿನೊಂದಿಗೆ ಮನೆಗೆ ಹಿಂದಿರುಗಿದರು.
ಪಂದ್ಯ ಮುಗಿಯುತ್ತಿದ್ದಂತೆಯೇ, ತಮ್ಮ ಆರಾಧ್ಯ ದೈವ ರೂಪ್ಸಿಂಗ್ ಅವರನ್ನು ಭೇಟಿ ಮಾಡಿಸಲೇಬೇಕೆಂದು ಹಾಲೆಂಡ್ ಆಟಗಾರರು ಪಟ್ಟು ಹಿಡಿದರು. ಸಂಘಟಕರು ಆಗ ಅನಿವಾರ್ಯವಾಗಿ ರೂಪ್ಸಿಂಗ್ ಅವರ ಮನೆಗೆ ಹೋಗಲೇಬೇಕಾಯಿತು. ಒಂದು ಕಾಲದಲ್ಲಿ, ಹೊಸ ಬಟ್ಟೆಗಳನ್ನು ಕೊಡಿಸದಿದ್ದರೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದ ರೂಪ್ಸಿಂಗ್, ನಾಲ್ಕು ದಶಕಗಳ ನಂತರ ಬದಲಾದ ಪರಿಸ್ಥಿತಿಯಿಂದಾಗಿ, ಮುರುಕು ಮನೆಯೊಳಗೆ ಅಬ್ಬೇಪಾರಿಯಂತೆ ಕುಳಿತಿದ್ದರು. ಮಹಾನ್ ಆಟಗಾರನೊಬ್ಬನಿಗೆ ಇಂಥ ದುಃಸ್ಥಿತಿ ಒದಗಿ ಬಂದಾಗಲೂ ಗಮನಿಸದೇ ಕುಳಿತ ಆಡಳಿತ ಹಾಗೂ ಅಧಿಕಾರಿಗಳ ವರ್ತನೆಯನ್ನು ಹಾಲೆಂಡ್ ಆಟಗಾರರು ಮುಲಾಜಿಲ್ಲದೇ ಖಂಡಿಸಿದರು. ಇದೆಲ್ಲವೂ ಪತ್ರಿಕೆಗಳಲ್ಲಿ ವರದಿಯಾಯಿತು.
ಹಾಲೆಂಡ್ ಆಟಗಾರರು ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರೆಂಬ ಸುದ್ದಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರ ಕಿವಿಗೆ ಬಿತ್ತು. ರೂಪ್ಸಿಂಗ್ಗೆ ತಕ್ಷಣವೇ ನೆರವಾಗಬೇಕು ಎಂದವರು ಆದೇಶ ಹೊರಡಿಸಿದರು. ಈ ಸಂಬಂಧವಾಗಿ ಮೀಟಿಂಗ್ಗಳಾದವು. ಫೈಲುಗಳು ಹಲವು ಕಚೇರಿಗಳನ್ನು ದಾಟಿ, ಸರ್ಕಾರ ಅವರ ನೆರವಿಗೆ ಬರುವ ಮೊದಲೇ, ದಟ್ಟ ದಾರಿದ್ರ್ಯದ ಸ್ಥಿತಿಯಲ್ಲಿಯೇ 1977ರ ಸೆಪ್ಟೆಂಬರ್ 16ರಂದು ರೂಪ್ಸಿಂಗ್ ತೀರಿಕೊಂಡರು.
ತಮಾಷೆ ಕೇಳಿ: ರೂಪ್ಸಿಂಗ್ ಅವರ ನಿಧನದ ನಂತರ, ಹಲವು ಕಡೆಗಳಲ್ಲಿ ಶೋಕ ಸಭೆಗಳಾದವು. ಗ್ವಾಲಿಯರ್ನಲ್ಲಿರುವ ಕ್ರೀಡಾಂಗಣಕ್ಕೆ ಅವರ ಹೆಸರು ಇಡಲಾಯಿತು. ಒಂದು ಬೀದಿಗೆ 'ರೂಪ್ಸಿಂಗ್ ರಸ್ತೆ' ಎಂದು ನಾಮಕರಣ ಮಾಡಲಾಯಿತು. ಆದರೆ, ಅದೇ ಬೀದಿಯ ಕೊನೆಯಲ್ಲಿದ್ದ ಬಾಡಿಗೆ ಮನೆಯಲ್ಲಿ ರೂಪ್ಸಿಂಗ್ ಅವರ ಕುಟುಂಬ ವಾಸವಿದ್ದುದನ್ನು ಯಾರೂ ಗಮನಿಸಲಿಲ್ಲ. ರಾಜಕಾರಣಿಗಳ ವಿಷಯವನ್ನು ಪಕ್ಕಕ್ಕಿಡಿ: ಹಾಕಿ ಎಂದಾಕ್ಷಣ ಧ್ಯಾನಚಂದ್ ಎಂದಷ್ಟೇ ಉಲಿಯುವ ಕ್ರೀಡಾಪಂಡಿತರು ಕೂಡ ರೂಪ್ಸಿಂಗ್ರ 'ಮಹಿಮೆ' ಸಾರುವ ವಿಷಯದಲ್ಲಿ ದಯಾಳುಗಳಾಗಲಿಲ್ಲ.
ಒಂದಲ್ಲ, ಎರಡು ಒಲಿಂಪಿಕ್ಸ್ ಪಂದ್ಯಗಳಲ್ಲಿ ಚಿನ್ನ ಗೆದ್ದು ಕೊಟ್ಟ ಅಪ್ರತಿಮ ಆಟಗಾರನನ್ನು ನಮ್ಮ ದೇಶ ನಡೆಸಿಕೊಂಡ ರೀತಿ ಇದು. ಮೊನ್ನೆ ನಡೆದ ಐಪಿಎಲ್ ಹರಾಜಿನಲ್ಲಿ ಒಮ್ಮೆ ಕೂಡ ರಾಷ್ಟ್ರೀಯ ಪಂದ್ಯ ಆಡದವರೂ ಕೋಟಿ ರು.ಗಳ ಸಂಭಾವನೆ ಪಡೆದರು ಎಂಬ ಸುದ್ದಿ ಓದಿದಾಗ, ಹಾಕಿಯ ಅಂಗಳದ ಶಾಪಗ್ರಸ್ತ ಗಂಧರ್ವನ ನೆನಪಾಗಿ ಬಿಟ್ಟಿತು...

-ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.