ಅಹಿಂದ ಪರ ಬದ್ಧತೆಯಲ್ಲಿ ಮೆರೆದಿದೆ ಸಿದ್ದರಾಮಯ್ಯ ದಿಟ್ಟತನ
ನಂಬದವರ ಬೆನ್ನು ಬೀಳುವುದರ ಬದಲು ನಂಬಿದವರ ತಲೆ ಕಾಯುವುದೇ ಲೇಸು..

ರಾಜಕೀಯದಲ್ಲಿ ತತ್ವ-ಸಿದ್ಧಾಂತಗಳು ನಿಲ್ಲದ ಕಾಲ ಇದು. ಅವಕಾಶವಾದ, ಅಧಿಕಾರ ರಾಜಕಾರಣದಲ್ಲಿ ಇವು ಬಲುಬೇಗ ಮರೆಯಾಗಿಬಿಡುತ್ತವೆ. ಅಧಿಕಾರಕ್ಕೆ ಮೊದಲು ಒಂದು ರೀತಿಯಾದರೆ, ಅಧಿಕಾರ ಸಿಕ್ಕನಂತರ ಮತ್ತೊಂದು ಸ್ವರೂಪ. ಅಧಿಕಾರ ಉಳಿಸಿಕೊಳ್ಳಲು, ಸರ್ವರಿಗೂ ಸಲ್ಲಲು, ಟೀಕೆ-ಟಿಪ್ಪಣಿಗಳಿಂದ ಬಚಾವಾಗಲು ನಂಬಿಕೆ, ನಿಲುವುಗಳ ಜತೆ ರಾಜಿ ಮಾಡಿಕೊಂಡು ಬಿಡುತ್ತಾರೆ.
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೊಂದು ಅಪವಾದ. ಅವರು ಮಂಡಿಸಿರುವ ಬಜೆಟ್ ನೋಡಿದರೆ ತಮ್ಮ ನಂಬಿಕೆ ವಿಚಾರದಲ್ಲಿ ಅವರೆಷ್ಟು ಗಟ್ಟಿ ಎಂಬುದು ಗೋಚರಿಸುತ್ತದೆ. ಜತೆಗೆ ತಾವು ನಂಬಿರುವ ತತ್ವ, ಸಿದ್ಧಾಂತ, ನಿಲುವುಗಳ ಬದ್ಧತೆಯಲ್ಲಿ ಅವರ ದಿಟ್ಟತನ ಮತ್ತೊಮ್ಮೆ ಸಾಬೀತಾಗಿದೆ.
ಹೌದು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಮೊದಲು ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ದಲಿತರ (ಅಹಿಂದ) ನಾಯಕ ಎಂದೇ ಗುರುತಿಸಿಕೊಂಡವರು. ಅದಕ್ಕಾಗಿಯೇ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಆ ಸ್ಥಾನ ತಂದುಕೊಟ್ಟ ಜಾತ್ಯತೀತ ಜನತಾದಳ ತೊರೆದು ಕಾಂಗ್ರೆಸ್ ಸೇರಿದವರು. ಆರೇಳು ವರ್ಷ ಸೈಕಲ್ ತುಳಿದ ನಂತರ ಮುಖ್ಯಮಂತ್ರಿಯಾದವರು. ಅವರು ಮುಖ್ಯಮಂತ್ರಿ ಆಗುವ ಮೊದಲೂ ಕಾಂಗ್ರೆಸ್‌ನಲ್ಲಿ 'ಅಹಿಂದ' ಪರ ನಿಲುವು ಬದಲಿಸಲಿಲ್ಲ. ಮುಖ್ಯಮಂತ್ರಿಯಾದ ನಂತರ ಮಂಡಿಸಿದ ಮೊದಲ ಬಜೆಟ್‌ನಲ್ಲೂ ಅದನ್ನು ಬಿಟ್ಟುಕೊಡಲಿಲ್ಲ. ಅಹಿಂದ ಬಜೆಟ್ ಎಂದೇ ಬಣ್ಣಿಸಲ್ಪಟ್ಟರೂ, ಎಷ್ಟೆಲ್ಲ ಟೀಕೆ-ಟಿಪ್ಪಣಿಗಳು ಕೇಳಿ ಬಂದರೂ ಅವರು ಧೃತಿಗೆಟ್ಟಿಲ್ಲ, ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ ಎಂಬುದು ಈಗಷ್ಟೇ ಮಂಡಿಸಿರುವ ಬಜೆಟ್‌ನಿಂದಲೂ ರುಜುವಾತಾಗಿದೆ.
ಸಿದ್ದರಾಮ್ಯನವರ ನಿಲುವು ಸುಸ್ಪಷ್ಟವಾಗಿದೆ. ಅಹಿಂದ ನಾಯಕನಾಗಿಯೇ ಬಂದಿದ್ದೇನೆ. ಅಧಿಕಾರದಲ್ಲಿ ಇರುವಷ್ಟು ಕಾಲ ಅವರ ಕಲ್ಯಾಣಕ್ಕಾಗಿಯೇ ದುಡಿಯುತ್ತೇನೆ. ಯಾವುದೇ ಕಾರಣಕ್ಕೂ ಅಹಿಂದ ನಾಯಕನೆಂಬ ಬ್ರಾಂಡ್‌ನಿಂದ ಹೊರಬರುವುದಿಲ್ಲ. ಅದೂ ಬೇಕಾಗಿಯೂ ಇಲ್ಲ. ಅಧಿಕಾರ ಇರಲಿ, ಬಿಡಲಿ ತಮ್ಮ ಬದ್ಧತೆ ಜತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಈ ಬಜೆಟ್ ಮೂಲಕ ಅವರು ಸಾರಿದ್ದಾರೆ.
ಕೂಗಳತೆ ದೂರದಲ್ಲಿ ಲೋಕಸಭೆ ಚುನಾವಣೆ ಇಟ್ಟುಕೊಂಡು ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಮೇಲ್ನೋಟಕ್ಕೆ ಸರ್ವರನ್ನೂ ತಣಿಸುವ ಜನಪ್ರಿಯ ಬಜೆಟ್‌ನಂತೆ ಗೋಚರಿಸುತ್ತದೆ. ಆದರೆ ಆಳಕ್ಕೆ ಇಳಿದು ನೋಡಿದಾಗ ಅಹಿಂದ ಮೇಲಿನ ಪ್ರೀತಿ, ಮಮಕಾರ ಎದ್ದು ಕಾಣುತ್ತದೆ. ಹಿಂದೆ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಆಶ್ರಯ ಮನೆಗಳ ಹಂಚಿಕೆ ತಾರತಮ್ಯದ ಬಗ್ಗೆ ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಬಿಸಿ, ಬಿಸಿ ಚರ್ಚೆ ನಡೆದಿತ್ತು. ಒಂದು ಕ್ಷೇತ್ರದಲ್ಲಿ ಹೆಚ್ಚು, ಮತ್ತೊಂದು ಕ್ಷೇತ್ರದಲ್ಲಿ ಕಡಿಮೆ ಮನೆ ಹಂಚಿಕೆ ಮಾಡಲಾಗಿದೆ ಎಂಬುದು ಚರ್ಚೆಯ ವಸ್ತು. ಆದಕ್ಕೆ ಕೊನೆಯಲ್ಲಿ ಪಟೇಲರು ಕೊಟ್ಟಿದ್ದು ಮೂರು ನಿಮಿಷಗಳ ಉತ್ತರ ಮಾತ್ರ. ಮದುವೆ ಮನೆಯಲ್ಲಿ ಊಟಕ್ಕೆ ಕೂತವರ ಎಲೆಗಳಿಗೆ ತುಪ್ಪ ಬಡಿಸುವಾಗ ಒಬ್ಬರಿಗೆ ರವಷ್ಟು ಹೆಚ್ಚು, ಮತ್ತೊಬ್ಬರಿಗೆ ಕಡಿಮೆ ಬೀಳುತ್ತದೆ. ಅದೇ ರೀತಿ ಮನೆಗಳನ್ನು ಹಂಚುವಾಗ. ಆದರೆ ಮನೆ ಸಿಕ್ಕದ್ದು ಮಾತ್ರ ಬಡವರಿಗೆ ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳುವ ಮೂಲಕ ಸದನದ ಬಾಯಿ ಮುಚ್ಚಿಸಿದ್ದರು. ಆದರೆ ಈಗ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಮುಖ ನೋಡಿಯೇ, ಉದ್ದೇಶಪೂರ್ವಕವಾಗಿಯೇ ಅಹಿಂದ ಸಮುದಾಯಕ್ಕೆ ಹೆಚ್ಚೇ ತುಪ್ಪ ಬಡಿಸಿದ್ದಾರೆ. ಆದರೆ ಯಾರೂ ಮಾತನಾಡುವಂತಿಲ್ಲ. ಏಕೆಂದರೆ ಲೋಕಸಭೆ ಚುನಾವಣೆ ಮನೆ ಹೊಸ್ತಿಲಿಗೇ ಬಂದು ನಿಂತಿದೆ. ಹೀಗಾಗಿ ಪ್ರತಿಪಕ್ಷದವರಿಗೂ ಇದು ಬಿಸಿತುಪ್ಪ. ಆಡುವಂತಿಲ್ಲ, ಸುಮ್ಮನೆ ಇರುವಂತಿಲ್ಲ. ಆಡಿದ ಮಾತು, ಮಾತಿಗಷ್ಟೇ ಎಂಬಂತಾಗಿದೆ. ಅಷ್ಟರಮಟ್ಟಿಗೆ ಅವರನ್ನೆಲ್ಲ ಕಟ್ಟಿಹಾಕಿರುವ ಸಿದ್ದರಾಮಯ್ಯನವರ ಪಟ್ಟಿನಲ್ಲಿ ಮತ್ತದೇ ಅಹಿಂದ ಮತಗಳ ಕ್ರೋಢೀಕರಣ ಜಾಣ್ಮೆ ಅಡಗಿದೆ.
ಸಿದ್ದರಾಮಯ್ಯನವರಿಗೆ ಒಂದಂತೂ ಸ್ಪಷ್ಟವಾಗಿದೆ. ತಮ್ಮ ಹಣೆಗೆ ತಾವೇ ಹಚ್ಚಿಕೊಂಡಿರುವ ಲೇಬಲ್‌ನಿಂದ ಬಹುಸಂಖ್ಯಾತ ಸಮುದಾಯದ ಮತಗಳು ಕಾಂಗ್ರೆಸ್‌ಗೆ ದುಬಾರಿ ಎಂಬುದು ಮನದಟ್ಟಾಗಿದೆ. ಸಂಪುಟ ರಚನೆ, ವಿಸ್ತರಣೆ, ಬಜೆಟ್ ಹಂಚಿಕೆಯಲ್ಲಿ ಅಹಿಂದ ಸಮುದಾಯಕ್ಕೆ ಅವರು ಕೊಟ್ಟ ಅದ್ಯತೆ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಸೇರಿದಂತೆ ಬಹುಸಂಖ್ಯಾತರು ಕಾಂಗ್ರೆಸ್‌ನಿಂದ ದೂರ ಸರಿದಿದ್ದಾರೆ ಎಂಬುದು ಅವರಿಗೆ ಗೊತ್ತಾಗಿದೆ. ಬಹುಸಂಖ್ಯಾತರಲ್ಲಿ ಹೆಚ್ಚಿನವರು ಬಡತನ ರೇಖೆಗಿಂತ ಮೇಲೆ ಇರುವ (ಎಪಿಎಲ್) ಪಡಿತರ ಚೀಟಿದಾರರಾದರೂ ಶ್ರೀಮಂತರೇನೂ ಅಲ್ಲ. ಒಂದು ರೀತಿ ಮಧ್ಯಂತರದಲ್ಲಿ ಇರುವವರು. ಅಹಿಂದ ಪರ ನಿಲುವಿನ ಸಿದ್ದರಾಮಯ್ಯನವರು ಕ್ರಮೇಣ ಬಡತನ ರೇಖೆಗಿಂತ ಮೇಲಿರುವ ಪಡಿತರ ಚೀಟಿದಾರರ ಸವಲತ್ತುಗಳನ್ನು ಒಂದೊಂದಾಗಿ ಕತ್ತರಿಸುತ್ತಾ ಬಂದರು. ಎಪಿಎಲ್‌ದಾರರಿಗೆ ಮೊದಲು ಯೂನಿಟ್ ಆಧಾರದ ಮೇಲೆ ಅಕ್ಕಿ, ಸೀಮೆಎಣ್ಣೆ ಸಿಗುತ್ತಿತ್ತು. ಆದರೆ ಈ ಯೂನಿಟ್ ವ್ಯವಸ್ಥೆಯನ್ನು ರದ್ದು ಮಾಡಿದ್ದರಿಂದ ಅವರಿಗೆ ಅಕ್ಕಿ, ಸೀಮೆಎಣ್ಣೆ ವಿತರಣೆ ಮೊಟಕಾದವು. ಅವರ ಕಾರ್ಡ್‌ಗಳು ಕೇವಲ ಗುರುತಿನ ಚೀಟಿಗಷ್ಟೇ ಸೀಮಿತ ಎಂಬಂತಾಯಿತು. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿದಾರರ ಅನ್ನಭಾಗ್ಯ ಯೋಜನೆ ಸಂಪನ್ಮೂಲ ಕ್ರೋಢೀಕರಣ ಭಾಗವಾಗಿ ಇದನ್ನು ಮಾಡಲಾಯಿತು. ಇದರಿಂದ ಎಪಿಎಲ್‌ದಾರರಿಗೆ ಈ ಸರಕಾರ ತಮ್ಮನ್ನು ಕಡೆಗಣಿಸುತ್ತಿದೆ ಎಂಬ ಭಾವನೆ ಮೊಳೆಯಿತು. ಕಾಲ ಕ್ರಮೇಣ ಅದು ಬಲವಾಯಿತು. ಜತೆಗೆ ಟೀಕೆಗಳು ಬೆನ್ನತ್ತಿ ಬಂದವು.
ಸಿದ್ದರಾಮಯ್ಯನವರಿಗೆ ಒಂದು ಹಂತದಲ್ಲಿ ಈ ಸರಕಾರ ಅಹಿಂದ ಪರ ಎನ್ನುವುದಕ್ಕಿಂತ ಬಹುಸಂಖ್ಯಾತರ ವಿರೋಧಿ ಎಂಬ ಭಾವನೆಯನ್ನು ತೊಳೆದುಕೊಳ್ಳಬೇಕು, ಅದಕ್ಕಾಗಿ ಈ ಬಜೆಟ್ ಸಂದರ್ಭ ಬಳಸಿಕೊಳ್ಳಬೇಕು ಎಂಬ ಭಾವನೆ ಮೂಡಿದ್ದು ಸುಳ್ಳಲ್ಲ. ಆದರೆ ಲೋಕಸಭೆ ಚುನಾವಣೆಗೆ ಕೇವಲ ಎರಡು ತಿಂಗಳಷ್ಟೇ ಬಾಕಿ ಇರುವಾಗ ಈ ಪ್ರಯೋಗ ನಿರೀಕ್ಷಿತ ಫಲ ನೀಡದು, ಬಹುಸಂಖ್ಯಾತರಿಗೆ ಏನೇ ಸವಲತ್ತು ಕೊಟ್ಟರೂ ಚುನಾವಣೆ ಹೊತ್ತಿಗೆ ಅದು ಅವರ ಕೈಗೆ ನಿಲುಕುವುದಿಲ್ಲ. ತಕ್ಷಣಕ್ಕೆ ಅವರಿಗೆ ಅದರ ಲಾಭವೂ ಆಗುವುದಿಲ್ಲ. ಇದರಿಂದ ಯಡವಟ್ಟೇ ಜಾಸ್ತಿ ಎಂದು ಅವರಿಗೆ ಅನ್ನಿಸಿರಲೂ ಸಾಕು. ಈ ಅಲ್ಪ ಅವಧಿಯಲ್ಲಿ ಬಹುಸಂಖ್ಯಾತರ ಮನವೊಲಿಸಲು ಆಗದಿರುವಾಗ ಸುಖಾಸುಮ್ಮನೆ ಅಹಿಂದ ಪರ ಗಟ್ಟಿಯಾಗಿರುವ ಭಾವನೆಯನ್ನು ಸಡಿಲಿಸಿಕೊಳ್ಳುವುದು ಏಕೆಂಬ ಚಿಂತನೆ ಅವರನ್ನು ಕಾಡಿರಲೂಬೇಕು. ಹೀಗಾಗಿ ಎರಡನೇ ಬಜೆಟ್‌ನಲ್ಲೂ ಅಹಿಂದ ಪರ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಬಹುಸಂಖ್ಯಾತರ ಓಲೈಕೆ ಪ್ರಯತ್ನವನ್ನು ಕೈಬಿಟ್ಟಿದ್ದಾರೆ.
ಒಂದೇ ಒಂದು ಸಮಾಧಾನದ ಸಂಗತಿ ಎಂದರೆ ಬಜೆಟ್‌ನಲ್ಲಿ ತೆರಿಗೆ ಹೊರೆ ಹೇರದಿರುವುದು. ಇದು ಸಹಜವಾಗಿಯೇ ಬಿಪಿಎಲ್‌ದಾರರ ಜತೆಗೆ ಎಪಿಎಲ್‌ದಾರರಿಗೂ ಖುಷಿ ತಂದಿದೆ. ಆದರೆ ಸವಲತ್ತು ವಿಚಾರ ಬಂದಾಗ ಎರಡೂ ವರ್ಗಗಳಿಗೂ ಇದೇ ಭಾವನೆ ಇದೆ ಎಂದು ಹೇಳುವಂತಿಲ್ಲ. ಅವರು ಕೊಟ್ಟಿರುವ ಸವಲತ್ತುಗಳನ್ನು ಒಂದೊಂದಾಗಿ ಲೆಕ್ಕ ಹಾಕಿದರೆ ಅದರ ಹಿಂದೆ ಅಹಿಂದ ಮತಗಳ ಕ್ರೋಢೀಕರಣ ಉದ್ದೇಶ ಢಾಳಾಗಿ ವಿಜೃಂಭಿಸಿದೆ. ನಂಬದವರ ಬೆನ್ನು ಬೀಳುವುದರ ಬದಲು ನಂಬಿದವರ ತಲೆ ಕಾಯುವುದೇ ಲೇಸು ಎಂಬಂತೆ. ಇದು ಒಂದು ರೀತಿ ಜಾಣತನವೇ ಸರಿ.
ಸಿದ್ದರಾಮಯ್ಯ 'ಅಹಿಂದ' ಕಲ್ಯಾಣ ಕಾರ್ಯಕ್ರಮಗಳನ್ನು ಒಂದೊಂದಾಗಿ ನೋಡೋಣ. ಮೊದಲಿಗೆ ಸಮಾಜ ಕಲ್ಯಾಣ ಇಲಾಖೆ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರಿಗೆ ಈ ಸಾಲಿನ ಬಜೆಟ್‌ನಲ್ಲಿ 4231 ಕೋಟಿ ರುಪಾಯಿ ಮಂಜೂರು ಮಾಡಲಾಗಿದೆ. ಇದಕ್ಕಾಗಿ 22 ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟ ಹೆಣ್ಣು ಮಕ್ಕಳನ್ನು ಅಂತರ್ಜಾತಿ ವಿವಾಹ ಆದವರಿಗೆ ನೀಡುವ ಪ್ರೋತ್ಸಾಹ ಧನ ಮೊತ್ತ 50 ಸಾವಿರ ರುಪಾಯಿಯಿಂದ 1 ಲಕ್ಷ ರುಪಾಯಿಗೆ ಹೆಚ್ಚಿಸಿರುವುದರ ಹಿಂದೆ ಜಾತಿ ಪದ್ಧತಿ ನಿರ್ಮೂಲನೆಯ ಕಳಕಳಿಯೂ ಇದೆ. ಪರಿಶಿಷ್ಟ ಜಾತಿ/ಪಂಗಡ ಅಭಿವೃದ್ಧಿ ನಿಗಮದ ಅಡಿಯಲ್ಲಿ ನೀಡುವ ಸಾಲಕ್ಕೆ ಸಹಾಯಧನ ಮಿತಿಯನ್ನು ಒಂದು ಲಕ್ಷ ರುಪಾಯಿಂದ ಎರಡು ಲಕ್ಷ ರುಪಾಯಿಗೆ ವಿಸ್ತರಣೆ, ಭೂ ರಹಿತ ಪರಿಶಿಷ್ಟ ಕೃಷಿ-ಕಾರ್ಮಿಕರಿಗೆ ಭೂಒಡೆತನ ಯೋಜನೆಯಡಿ ಜಮೀನು ಖರೀದಿಸಲು ನೀಡುತ್ತಿದ್ದ ನೆರವನ್ನು ಏಳೂವರೆ ಲಕ್ಷ ರುಪಾಯಿಂದ 10 ಲಕ್ಷ ರುಪಾಯಿಗೆ ಏರಿಸಿರುವುದರ ಹಿಂದೆ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಇದೆ. ಈ ರೀತಿ ಹತ್ತು ಹಲವು ಯೋಜನೆಗಳ ಫಲ ಉಣ್ಣುವ ಪರಿಶಿಷ್ಟರು ತಮ್ಮ ಕೈ ಬಿಡುವುದಿಲ್ಲ ಎಂಬ ಲೆಕ್ಕಾಚಾರ ಸಿದ್ದರಾಮಯ್ಯನವರದು.
ಅದೇ ರೀತಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 23 ವಿಧದಲ್ಲಿ 1445 ಕೋಟಿ ರುಪಾಯಿಗಳನ್ನು ಸಿದ್ದರಾಮಯ್ಯ ಒದಗಿಸಿದ್ದಾರೆ. ಸಹಕಾರ ಸಂಸ್ಥೆಗಳ ನೇಮಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸಲು ಅನುವಾಗುವಂತೆ ಸಹಕಾರಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದ್ದಾರೆ. ಇದರಿಂದ ದೀರ್ಘಾವಧಿಯಲ್ಲಿ ಹಿಂದುಳಿದ ವರ್ಗದವರಿಗೆ ಬಹಳ ಅನುಕೂಲ ಆಗಲಿದೆ. ಹಿಂದೆ ದೇವೇಗೌಡರು ತಮ್ಮ ಸಮುದಾಯಕ್ಕೆ ಉನ್ನತ ಮಟ್ಟದ ನೇಮಕದಲ್ಲಿ ಆದ್ಯತೆ ನೀಡಲು ಇಂತಹುದೇ ಕ್ರಮ ಕೈಗೊಂಡಿದ್ದರು. ಈಗ ಸಿದ್ದರಾಮಯ್ಯ ಅದೇ ಮಾರ್ಗದಲ್ಲಿ ಹೊರಟಿದ್ದಾರೆ. ಅಲ್ಲದೇ ರಾಜ್ಯ ಸರಕಾರದ ಸಾಲ ಮನ್ನಾ ನೀತಿಗೆ ಅನುಗುಣವಾಗಿ ಹಿಂದುಳಿದ ವರ್ಗಗಳ ನೆರವಿಗೆ ಅವರು ಧಾವಿಸಿದ್ದಾರೆ. ರಾಷ್ಟ್ರೀಯ ನಿಗಮಗಳಲ್ಲಿ ಪಡೆದ ಸಾಲದ ಕಂತುಗಳನ್ನು ಸರಕಾರವೇ ಮರುಪಾವತಿ ಮಾಡಲು ನಿರ್ಧರಿಸಿದೆ. ಇದರಿಂದ ಹಿಂದುಳಿದ ವರ್ಗಗಳಿಗೆ ಸಾವಿರಾರು ಕೋಟಿ ರುಪಾಯಿ ನೆರವು ಸಿಗಲಿದೆ.
ಈ ಬಜೆಟ್‌ನ ಮತ್ತೊಂದು ವಿಶೇಷವೇನೆಂದರೆ ಹಿಂದುಳಿದ ವರ್ಗಗಳಲ್ಲಿಯೂ ಸಾಮಾಜಿಕ ನ್ಯಾಯ ಕಾಯ್ದುಕೊಳ್ಳಲು ಹೊರಟಿರುವುದು. ಈ ಹಿಂದೆ ಒಂದು ದೂರು ಇತ್ತು. ಹಿಂದುಳಿದ ವರ್ಗಗಳಿಗೆ ಮೀಸಲಾದ ಬಹುತೇಕ ಸವಲತ್ತುಗಳು ಕುರುಬ ಸಮುದಾಯದ ಪಾಲಾಗುತ್ತಿದೆ. ಹಿಂದುಳಿದ ವರ್ಗ ಎಂದರೆ ಕುರುಬರು ಮಾತ್ರ ಎನ್ನುವಂತಾಗಿದೆ ಎಂದು ಇತರ ಹಿಂದುಳಿದ ವರ್ಗಗಳ ಸಮುದಾಯಗಳು ಅಸಮಾಧಾನಗೊಂಡಿದ್ದವು. ಈ ಸೂಕ್ಷ್ಮತೆಯನ್ನು ಮನಗಂಡ ಸಿದ್ದರಾಮಯ್ಯನವರು ಡೋಬಿ, ಸವಿತಾ ಸಮಾಜ, ತಿಗಳರು ಸೇರಿದಂತೆ ಅನೇಕ ಸಮುದಾಯಗಳಿಗೆ ವೃತ್ತಿಕೌಶಲ್ಯ ಉನ್ನತೀಕರಣಕ್ಕೆ ಶೇ. 2 ರ ಬಡ್ಡಿ ದರದಲ್ಲಿ 2 ಲಕ್ಷ ರುಪಾಯಿ ವಾರ್ಷಿಕ ಸಾಲ ಕೊಡಲು ನಿರ್ಧರಿಸಿದ್ದಾರೆ. ಇದರ ಹಿಂದೆ ಹಿಂದುಳಿದ ವರ್ಗಗಳ ಮತಗಳು ಆಚೀಚೆ ಕದಲದಂತೆ ನೋಡಿಕೊಳ್ಳುವ 'ರಾಜಕೀಯ ಕೌಶಲ್ಯ'ವಿದೆ.
ಇನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ 800 ಕೋಟಿ ರುಪಾಯಿ ಹಾಗೂ ಕ್ರೈಸ್ತರ ಕಲ್ಯಾಣಕ್ಕೆ ಪ್ರತ್ಯೇಕವಾಗಿ 125 ಕೋಟಿ ರುಪಾಯಿಗಳನ್ನು ಎತ್ತಿಡಲಾಗಿದೆ. ಹಿಂದೆ ಮಠ-ಮಾನ್ಯಗಳಿಗೆ ಅನುದಾನ ಕೊಟ್ಟಾಗ ಪ್ರಬಲವಾಗಿ ವಿರೋಧಿಸಿದ್ದ ಸಿದ್ದರಾಮಯ್ಯನವರು ಈಗ ಚರ್ಚ್‌ಗಳ ಜೀರ್ಣೋದ್ಧಾರಕ್ಕೆ ನೆರವು ನೀಡುವ ಕೃಪೆ ತೋರಿದ್ದಾರೆ. ಇಲ್ಲಿಯೂ ಅಹಿಂದ ಪರ ಬದ್ಧತೆ ಜತೆಜತೆಗೆ ವೋಟ್ ಬ್ಯಾಂಕ್ ರಾಜಕೀಯ ಕೂಡ ಮೆರೆದಿದೆ.
ಹಾಗೆಂದು ಸಿದ್ದರಾಮಯ್ಯನವರು ಬರೀ ಅಹಿಂದ ಕಡೆ ಕಣ್ಣು ಬಿಟ್ಟಿದ್ದಾರೆ ಎಂದು ಅರ್ಥವಲ್ಲ. ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ 500 ಕೋಟಿ ರುಪಾಯಿ ನಿಗದಿ ಮಾಡಲಾಗಿದೆ. ಅವರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು ಎರಡು ಲಕ್ಷ ರುಪಾಯಿಂದ ಮೂರು ಲಕ್ಷ ರುಪಾಯಿಗೆ ಏರಿಸಲಾಗಿದೆ. ಇದರ ಜತೆಗೆ ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ವಿಕಲಚೇತನರಿಗೆ ನಾನಾ ನೆರವು ನೀಡಲಾಗಿದೆ. ಇದೆಲ್ಲದರ ನಡುವೆ ಬಜೆಟ್‌ನಲ್ಲಿ ಸಿದ್ದರಾಮಯ್ಯನವರ ಗುರಿ ಯಾವುದು ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರ ಗುರಿ ಕೂಡ ಕಾಂಗ್ರೆಸ್ ಮತಬ್ಯಾಂಕ್ ಆಗಿದೆ ಎಂಬುದು ಕಾಕತಾಳೀಯವೇನೂ ಅಲ್ಲ. ರಾಜಕಾರಣಿಗಳು ಮತ್ತು ರಾಜಕಾರಣಿಗಳ ನಡುವೆ ನೀತಿ - ನಿಯತ್ತು ಇಲ್ಲದಿರುವುದು. ಆದರೆ ತಮಗೆ ಸಹಾಯ ಮಾಡಿದವರಿಗೆ ಪ್ರತಿ ಸಹಾಯ ಮಾಡುವುದು ರಾಜಕಾರಣಿಗಳು ಮತ್ತು ಮತದಾರರ ನಡುವಣ ಸಾಮಾನ್ಯ ಸಾಮಾಜಿಕ ನಿಯಮ. ಇದನ್ನು ಸಿದ್ದರಾಮಯ್ಯ ಅವರಂತೂ ನಂಬಿದ್ದಾರೆ. ಅದರ ನೆಲೆಯಲ್ಲೇ 'ಅಹಿಂದ' ರಾಜಕೀಯ ತಂತ್ರಗಾರಿಕೆ ಪ್ರಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ನಂಬಿರುವ 'ದೇವರು' ಯಾವ ವರ ನೀಡುತ್ತಾನೆ ಎಂಬುದನ್ನು ನೋಡಲು ಮುಂದಿನ ಲೋಕಸಭೆ ಚುನಾವಣೆವರೆಗೂ ಕಾಯಬೇಕು.
ಲಗೋರಿ: ಹಗ್ಗದ ಮೇಲೆ ನಡೆಯುವವನು ಒಂದು ಕಡೆ ವಾಲದೆ ಸಮತೋಲನ ಕಾಯ್ದುಕೊಳ್ಳಬೇಕು.
-ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


