ಅಂಕಣಗಳು

ಹಣದ ಪ್ರಭಾವ, ಭ್ರಷ್ಟಾಚಾರ, ಗುಂಪುಗಾರಿಕೆಗಳಿಂದ ಬಿಜೆಪಿ ಹೊರಬರದಿದ್ದಲ್ಲಿ ಮೋದಿ ಅಲೆಯೂ ನಮ್ಮನ್ನು ಮೇಲೆತ್ತಲಾರದು

Published On :

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲುತ್ತದೆ ಎಂಬುದು ಬಹುತೇಕ ಖಚಿತಗೊಂಡಿದೆ. ಆದರೆ ಆ ಹುರುಪು ಬಿಜೆಪಿಯಲ್ಲಿ ಕಾಣುತ್ತಿಲ್ಲ. ಬದಲಾಗಿ ಆಂತರಿಕ ಭಿನ್ನಮತ, ಗುಂಪುಗಾರಿಕೆ ಜಗಳಗಳಿಂದ ರಾಜ್ಯ ಬಿಜೆಪಿ, ಅಭ್ಯರ್ಥಿಗಳ ಆಯ್ಕೆಯನ್ನೇ ಮಾಡಲಾಗದೇ ಹೆಣಗಾಡುತ್ತಿದೆ. ಹಲವು ಸಮಸ್ಯೆಗಳಿವೆಯಾದರೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರೇ ಈ ವಿವಾದದ ಕೇಂದ್ರಬಿಂದುವಾಗಿರುವಂತೆ ಭಾಸವಾಗುತ್ತಿದೆ. ಆದ್ದರಿಂದ ಈ ಬಾರಿಯ ಬುಲೆಟ್ ಸಂದರ್ಶನಕ್ಕೆ ಅವರನ್ನೇ ಗುರಿಯಾಗಿಸಲಾಗಿದೆ.

-ಪಕ್ಷದ ಟಿಕೆಟ್ ಗೊಂದಲಕ್ಕೆ ಕಾರಣವೇನು?
ನಾನು ಅಥವಾ ನನ್ನ ತಂಡದ ಹಿಡಿತದಲ್ಲಿ ಸಂಘಟನೆ ಅಥವಾ ಪಕ್ಷ ಇರಬೇಕು ಎಂಬ ಮನಸ್ಥಿತಿ ಕೆಲವು ನಾಯಕರಲ್ಲಿ (ಹೆಸರು ಹೇಳುವುದಿಲ್ಲ) ಇರುವವರೆಗೆ ಈ ಗೊಂದಲಗಳು ಇರುತ್ತವೆ.

-ಅಂದರೆ ಪಕ್ಷದಲ್ಲಿ ಈಗಲೂ ಅಶ್ತಿಸ್ತು ಇದೆ?
ಖಂಡಿತ ಇದೆ. ಇಲ್ಲ ಎಂದರೆ ಅದು ಕೇವಲ ಢೋಂಗಿ ಹೇಳಿಕೆಯಾಗುತ್ತದೆ. ಹಾಗೆ ಹೇಳಿದಾಕ್ಷಣ ಇರುವ ಅಶಿಸ್ತು ಜನರಿಗೆ ಕಾಣುವುದಿಲ್ಲ ಎಂದು ಭಾವಿಸುವುದು ಕೂಡ ತಪ್ಪು.

-ಸರ್ಕಾರ ಇದ್ದಾಗ ನಡೆದ ಘಟನೆಗಳಿಂದ ಚುನಾವಣೆಯಲ್ಲಿ ಜನರಿಂದ ತಿರಸ್ಕೃತಗೊಂಡರೂ ತಪ್ಪು ತಿದ್ದಿಕೊಳ್ಳುವ ಮನಸ್ಸು ಪಕ್ಷಕ್ಕಿಲ್ಲವೇ?
ಪಕ್ಷಕ್ಕೆ, ಕಾರ್ಯಕರ್ತರಿಗೆ ಆ ಮನಸ್ಸಿದೆ. ಆದರೆ ಎಲ್ಲ ನಾಯಕರಿಗೂ ಅದು ಅರ್ಥವಾಗಬೇಕಲ್ಲ? ಪಕ್ಷದೊಳಗಾದ ಆಂತರಿಕ ವಿಭಜನೆಯಿಂದಾಗಿ ಮತ್ತು ಉತ್ತಮ ಆಡಳಿತ ನೀಡದ ಹಿನ್ನೆಲೆಯಲ್ಲಿ ಜನ ನಮಗೆ ಚುನಾವಣೆ ಫಲಿತಾಂಶದ ಮೂಲಕ ಸರಿಯಾದ ದಾರಿಯಲ್ಲಿ ಹೋಗುವಂತೆ ಸೂಚಿಸಿದ್ದರು. ಅಧಿಕಾರಕ್ಕಾಗಿ ಸಿದ್ಧಾಂತ, ನಿಷ್ಠೆಗಳನ್ನು ಗಾಳಿಗೆ ತೂರಿದರೆ ನಿಮಗೆ ನಮ್ಮ ಬೆಂಬಲವಿಲ್ಲ ಎಂದು ಜನ ಸ್ಪಷ್ಟವಾಗಿ ಹೇಳಿದರು. ಅದರ ಪರಿಣಾಮವಾಗಿ ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಒಂದಾಗಿ ಹೋಗುವ ಪ್ರಯತ್ನ ನಡೆಯಿತು. ಅದರ ಪರಿಣಾಮವಾಗಿಯೇ ಪಕ್ಷಬಿಟ್ಟು ಹೋದವರು ಮರಳಿದರು.

-ಅಷ್ಟಾದ ಮೇಲೂ ಒಗ್ಗಟ್ಟು ಕಾಣದಿರಲು ಸಮಸ್ಯೆ ಏನು?
ಅಧಿಕಾರದಲ್ಲಿದ್ದಾಗ ಅಂಟಿಕೊಂಡಿದ್ದ ವಿದ್ಯಮಾನಗಳು, ಹಣದ ಪ್ರಭಾವ, ಭ್ರಷ್ಟಾಚಾರ, ಸ್ವಾರ್ಥ, ಗುಂಪುಗಾರಿಕೆ ಇದರಿಂದ ನಾವು ಹೊರಬಂದಿಲ್ಲ. ಇದರಿಂದಾಗಿಯೇ ಪಕ್ಷದಲ್ಲಿ ಇನ್ನೂ ಗೊಂದಲಗಳು ಉಳಿದುಕೊಂಡಿವೆ.

-ಇದರಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಮತ್ತೆ ಏಟು ಬೀಳದೇ?
ಮೋದಿ ಅಲೆಯ ಜತೆಗೆ ಪಕ್ಷದ ಸಂಘಟನೆಯ ಶಕ್ತಿ ಬಳಸಿಕೊಂಡು ಬಿಜೆಪಿ ಗೆಲುವು ಸಾಧಿಸಬಹುದು. ಆದರೆ ಗೊಂದಲದ ವಾತಾವರಣ ನಿವಾರಣೆಯಾಗದಿದ್ದಲ್ಲಿ ಸ್ವಲ್ಪ ತೊಂದರೆಯಾಗಬಹುದು ಎಂಬ ಆತಂಕ ನನ್ನನ್ನು ಕಾಡುತ್ತಿದೆ. ನಮ್ಮ ನಮ್ಮ ಸ್ವಾರ್ಥದಿಂದ ದೊಡ್ಡ ಲಕ್ಷ್ಯಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕ ನನ್ನನ್ನು ಕಾಡುತ್ತಿದೆ.

-ಸದಾನಂದಗೌಡರು ಗೊಂದಲದ ಕೇಂದ್ರಬಿಂದುವಾ?
ಖಂಡಿತಾ ಇಲ್ಲ. ಆ ರೀತಿ ಬಿಂಬಿಸಲಾಗುತ್ತಿದೆ. ಪಕ್ಷದೊಳಗೆ ಅತ್ಯಂತ ಹೆಚ್ಚು ನೋವು ನುಂಗಿಕೊಂಡಿರುವ ವ್ಯಕ್ತಿ ಎಂದರೆ ನಾನು ಎಂಬುದನ್ನು ಎಲ್ಲಿ ಬೇಕಾದರೂ ನಿಂತು ಹೇಳಬಲ್ಲೆ. ರಾಜ್ಯಾಧ್ಯಕ್ಷನಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ ನಡೆದ ಪಕ್ಷದ ಆಂತರಿಕ ವಿದ್ಯಮಾನಗಳಿಂದ ಸಾಕಷ್ಟು ನೋವುಂಡಿದ್ದರೂ ಅದನ್ನು ನಾನು ಎಲ್ಲೂ ವ್ಯಕ್ತಪಡಿಸಿಲ್ಲ.

-ನಿಮಗೆ ಬೆಂಗಳೂರು ಉತ್ತರದಿಂದ ಟಿಕೆಟ್ ತಪ್ಪಿಸಲು ಬಯಸುವವರು ಮಾಡುತ್ತಿರುವಂತೆ ಟಿಕೆಟ್‌ಗಾಗಿ ನೀವೂ ಗುಂಪುಗಾರಿಕೆ ಮಾಡುತ್ತಿದ್ದೀರಾ?
ಖಂಡಿತ ಇಲ್ಲ. ಬೆಂಗಳೂರು ಉತ್ತರದಿಂದ ಚಂದ್ರೇಗೌಡರು ನಿಲ್ಲದಿದ್ದರೆ, ಅಶೋಕ್ ಅವರು ಸ್ವತಃ ಅಭ್ಯರ್ಥಿಯಾಗದಿದ್ದರೆ ನನಗೆ ಕೊಡಿ ಎಂದು ಕೇಳಿದ್ದೇನೆ. ಆದರೆ ನನಗೇ ಕೊಡಿ ಎಂದು ಯಾವತ್ತೂ ಹೇಳಿಲ್ಲ. ಜನಪ್ರತಿನಿಧಿಯಾಗಿರುವುದರ ಜತೆಗೆ ಪಕ್ಷದ ಕೆಲಸ ಮಾಡಲು ಬೆಂಗಳೂರು ಕ್ಷೇತ್ರವಾದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಬೆಂಗಳೂರು ಇರಲಿ ಅಂತ ಬಯಸುತ್ತಿದ್ದೇನೇ ಹೊರತು ಬೇರೆ ಕಾರಣಗಳೇನಿಲ್ಲ. ನಾನು ಪಕ್ಷದಲ್ಲಿ ಯಾವತ್ತೂ ಗುಂಪುಗಾರಿಕೆ ಮಾಡಿದವನಲ್ಲ. ಹಾಗೆ ಗುಂಪುಕಟ್ಟುವುದಿದ್ದರೆ ಮುಖ್ಯಮಂತ್ರಿಯಾಗಿದ್ದಾಗ ಕಟ್ಟಬಹುದಿತ್ತು. ಆದರೆ ನಾನು ಪಕ್ಷಕ್ಕೆ ನಮ್ಮ ನಿಯತ್ತು ಇರಬೇಕೆ ಹೊರತು ವ್ಯಕ್ತಿಗಲ್ಲ ಎಂದು ನಂಬಿದವನು. ಪಕ್ಷಕ್ಕೆ ಜೈ ಅಂದರೆ ಸದಾನಂದ ಗೌಡರಿಗೆ ಜೈ ಎಂದಂತೆ ಎಂದು ಭಾವಿಸಿದವನು.

-ಹಾಗಾದರೆ ಗುಂಪುಗಾರಿಕೆ ಮಾಡದಿರುವುದೇ ನಿಮಗೆ ಮುಳುವಾಗುತ್ತಿದೆಯೇ?
ನಾನು ಯಾವುದೇ ಗುಂಪಿಗೆ ಸೇರಿಲ್ಲ. ಸಂಪನ್ಮೂಲ ಸಂಪಾದಿಸಿಲ್ಲ ಎಂಬುದೇ ಕಾರಣ ಎಂದು ನನಗೂ ಅನ್ನಿಸುತ್ತಿದೆ. ಬಹುಮಟ್ಟಿಗೆ ಇದೇ ಕಾರಣವೂ ಹೌದು.

-ಅಂದರೆ ನೀವು ಉಳಿಯಬೇಕಾದರೆ ಬಿಜೆಪಿಯಲ್ಲಿ ಗುಂಪುಗಾರಿಕೆ ಮಾಡುವುದು ಅನಿವಾರ್ಯವೇ?
ಸಾಮಾನ್ಯ ಜನ ನನ್ನನ್ನು ಗುರುತಿಸುತ್ತಾರೆ. ಕಾರ್ಯಕರ್ತರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ. ಇದೇ ಕಾರಣಕ್ಕೆ ರಾಜ್ಯದ 5 ಕ್ಷೇತ್ರಗಳಲ್ಲಿ ಅಭ್ಯರ್ಥಿಯಾಗಿ ನನ್ನ ಹೆಸರು ಕೇಳಿಬರುತ್ತಿದೆ. ಕುಗ್ರಾಮದಿಂದ, ಬಡ ಕುಟುಂಬದಿಂದ ಬಂದ ವ್ಯಕ್ತಿಗೆ ಜನ ತೋರಿಸಿರುವ ಮತ್ತು ತೋರಿಸುತ್ತಿರುವ ಪ್ರೀತಿಯೇ ನನ್ನ ಆಸ್ತಿ. ಗುಂಪುಗಾರಿಕೆ ಮಾಡಬೇಕಾದ ಅನಿವಾರ್ಯ ನನಗೆ ಬಂದಿಲ್ಲ. ಬಂದರೂ ಮಾಡುವುದಿಲ್ಲ.

-ಸದಾನಂದ ಗೌಡರು ಬೆಂಗಳೂರಿಗೆ 'ಹೊರಗಿನವರು' ಎಂಬ ಮಾತುಗಳು ಬರಲು ಕಾರಣವೇನು?
ಆ ಮಾತುಗಳು ನನಗೆ ಅತ್ಯಂತ ನೋವನ್ನುಂಟು ಮಾಡಿವೆ. ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆ. 11 ತಿಂಗಳ 6 ದಿನ ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ನಾನು ರಾಜ್ಯಾಧ್ಯಕ್ಷನಾಗಿರುವಾಗಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಎಂಬ ಹೆಮ್ಮೆ ಇದೆ. ಆ ಅವಧಿಯಲ್ಲಿ ಮೂಡಿದ ಇದಕ್ಕಿಂತ ದೊಡ್ಡ ಭಿನ್ನಾಭಿಪ್ರಾಯ. ಗುಂಪುಗಾರಿಕೆಗಳನ್ನು ಪರಿಹರಿಸಿದ್ದೇನೆ. ಹೀಗಿರುವಾಗ ರಾಜ್ಯದ ಯಾವುದೇ ಕ್ಷೇತ್ರಕ್ಕೆ ನಾನು 'ಹೊರಗಿನವ'ನಾಗಲು ಹೇಗೆ ಸಾಧ್ಯ?

-ಇದಕ್ಕಿಂತ ದೊಡ್ಡ ಗೊಂದಲಗಳನ್ನು ಬಗೆಹರಿಸಿದವರಿಗೆ ಇಂದು ಏಕೆ ಸಾಧ್ಯವಾಗುತ್ತಿಲ್ಲ?
ಅಂದು ನಾನು ಸಂಘರ್ಷದ ಬದಲು ವಿಶ್ವಾಸದ ಹಾದಿ ಹಿಡಿದಿದ್ದೆ. ಆದರೆ ಇಂದು ಕೆಲವರು ಸಂಘರ್ಷಗಳೇ ತೀರ್ಮಾನ ತೆಗೆದುಕೊಳ್ಳಲು ಕಾರಣವಾಗುತ್ತವೆ ಎಂದು ನಂಬಿದ್ದಾರೆ. ಇದರಿಂದಾಗಿ ಗೊಂದಲಗಳು ಬಗೆಹರಿಯುತ್ತಿಲ್ಲ. ನಾನು ಇನ್ನೊಬ್ಬರ ಕಾಲೆಳೆದರೆ ಅದರಿಂದ ಪಕ್ಷದ ಶಕ್ತಿ ಕುಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

-ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ದೊರೆಯಲಿದೆ ಎಂಬ ಅಂಶವೇ ಟಿಕೆಟ್ ಪೈಪೋಟಿಗೆ ಕಾರಣವೇ?
ಸ್ವಲ್ಪಮಟ್ಟಿಗೆ ಅದು ನಿಜ. ನಾವು ಹೇಗೂ ಗೆಲ್ಲುತ್ತೇವೆ, ಹೆಚ್ಚು ಸೀಟು ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಇರಬೇಕು. ಆದರೆ ನಮ್ಮಲ್ಲೀಗ ಅತಿವಿಶ್ವಾಸ ಮೂಡಿದಂತೆ ಕಾಣುತ್ತಿದೆ. ಆತ್ಮವಿಶ್ವಾಸ ಒಳ್ಳೆಯದು. ಅತಿವಿಶ್ವಾಸ ಕೆಲವೊಮ್ಮೆ ಕೈಕೊಡುತ್ತದೆ.

-ಕೇವಲ ಮೋದಿ ಅಲೆಯಲ್ಲೇ ಹೆಚ್ಚು ಸೀಟು ಗೆಲ್ಲಲು ಸಾಧ್ಯವೇ?
ರಾಷ್ಟ್ರ ಮತ್ತು ರಾಜ್ಯಾದ್ಯಂತ ಮೋದಿ ಅಲೆ ಇದೆ. ಇದರ ಜತೆಗೆ ನಮ್ಮ ಶಕ್ತಿಯನ್ನೂ ಸೇರಿಸಿದರೆ ರಾಜ್ಯದಲ್ಲಿ 20-21 ಸೀಟು ಗೆಲ್ಲುವುದುಬಿಜೆಪಿಗೆ ಕಷ್ಟವಲ್ಲ. ಆದರೆ ನಮ್ಮೆಲ್ಲ ಹುಳುಕುಗಳನ್ನು ಮೋದಿಯ ಅಲೆ ತೊಳೆದು ಸ್ವಚ್ಛಮಾಡುತ್ತದೆ ಎಂಬ ಭ್ರಮೆಯಲ್ಲಿ ಬದುಕಬಾರದು.

-ಪಕ್ಷದೊಳಗಿನ ಆಂತರಿಕ ಗೊಂದಲವೇ ಸಮೀಕ್ಷೆಗಳಲ್ಲಿ ಬಿಜೆಪಿಗೆ ರಾಜ್ಯದಲ್ಲಿ 11 ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಎಂಬ ಫಲಿತಾಂಶ ಬರಲು ಕಾರಣವೇ?
ಜನಕ್ಕೆ ಯುಪಿಎ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಬೇಸರವಿದೆ. ಮೋದಿ ಮೇಲೆ ಪ್ರೀತಿಯಿದೆ. ಆದರೆ ರಾಜ್ಯದಲ್ಲಿ ಬಿಜೆಪಿಯ ಮೇಲೆ ಸಂಪೂರ್ಣ ನಂಬಿಕೆಯೂ ಇಲ್ಲ. ನಮ್ಮ ವರ್ತನೆ ಕೂಡ ಹಾಗೇ ಇದೆ. ನಮ್ಮ ವರ್ತನೆಗಳನ್ನು ತಿದ್ದಿಕೊಳ್ಳದಿದ್ದಲ್ಲಿ, ಜನರ ವಿಶ್ವಾಸ ಗಳಿಸದಿದ್ದಲ್ಲಿ  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಬಾರದೇ ಇರಬಹುದು.

-ನಿಮಗೆ ಟಿಕೆಟ್ ತಪ್ಪಿಸುವ ಯತ್ನ ನಡೆಯುತ್ತಿರುವುದರಿಂದ ಬೇಸರಗೊಂಡು ಹೀಗೆ ಹೇಳುತ್ತಿದ್ದೀರಾ?
ಖಂಡಿತ ಇಲ್ಲ. ಎಂತಹುದೇ ಸಂದರ್ಭದಲ್ಲಿ ಬಿಜೆಪಿಗೆ ಕಿಂಚಿತ್ತು ಹಾನಿಯಾಗುವ ಕೆಲಸವನ್ನು ನಾನು ಮಾಡಲಾರೆ. ಪಕ್ಷ ನನಗೆ ಶಾಸಕ, ಸಂಸದ, ಪಕ್ಷದ ಅಧ್ಯಕ್ಷ, ರಾಷ್ಟ್ರೀಯ ಉಪಾಧ್ಯಕ್ಷ, ಕಾರ್ಯದರ್ಶಿ, ಕೊನೆಗೆ ಗೊಂದಲದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನಾಗೂ ಮಾಡಿದೆ. ಕೆಲವು ನಾಯಕರು ಪಿತೂರಿ ಮಾಡಿದರು ಎಂಬುದನ್ನು ಬಿಟ್ಟರೆ, ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಹೀಗಿರುವಾಗ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಾನಿಯಾಗುವ ಕೆಲಸ ಮಾಡಲಾರೆ.

-ಹಾಗಾದರೆ ನಿರೀಕ್ಷಿತ ಫಲಿತಾಂಶ ಬರದಿರಬಹುದು ಎಂಬ ಮಾತುಗಳೇಕೆ?
ಆಗಿರುವ ತಪ್ಪುಗಳನ್ನು ಜನರ ಮುಂದೆ ಒಪ್ಪಿಕೊಂಡು, ಮುಂದಿನ ದಿನಗಳಲ್ಲಿ ಸರಿಯಾಗಿ ನಡೆದುಕೊಳ್ಳುತ್ತೇವೆ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಬೇಕಿದೆ. ಜನರ ವಿಶ್ವಾಸವನ್ನು ಮರಳಿ ಗಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದಲ್ಲಿ ಕಳೆದುಹೋದ ಶಕ್ತಿಯನ್ನು ಮತ್ತೆ ಗಳಿಸಲು ಮೋದಿ ಅಲೆ ಮತ್ತು ಲೋಕಸಭೆ ಚುನಾವಣೆ ಉತ್ತಮ ಅವಕಾಶ. ಇಂತಹ ಅವಕಾಶ ನಮ್ಮ ಕೈತಪ್ಪಿಹೋಗಬಾರದು ಎಂಬ ಕಾಳಜಿಯಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ ಹೊರತು ಬೇಸರದಿಂದಲ್ಲ. ಪಕ್ಷದ ಹಿತಕ್ಕಾಗಿ ಹೀಗೆ ಹೇಳುತ್ತಿದ್ದೇನೆ.

-ಪಕ್ಷದ ಆಂತರಿಕ ವಿದ್ಯಮಾನಗಳಿಂದ ನೊಂದು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆಕೊಳ್ಳುತ್ತೀರಿ ಎಂಬ ಸುದ್ದಿ ಇದೆ?
ನನಗೆ ಇದು ಹೊಸದಲ್ಲ. ಸಂಘದ ಮತ್ತು ಹಿರಿಯರು ಹೇಳಿಕೊಟ್ಟ ವಿಚಾರಗಳು ನನ್ನಲ್ಲಿ ದೃಢವಾಗಿವೆ. ಅಧಿಕಾರ ಬಂದಾಗ ಆಕಾಶಕ್ಕೇರದೇ, ಅಧಿಕಾರ ಇಲ್ಲದಾಗ ಪಾತಾಳಕ್ಕಿಳಿಯದೇ ನನ್ನ ಶಕ್ತಿಯನ್ನು ಸಾರ್ವಜನಿಕ ಕೆಲಸಕ್ಕೆ ವಿನಿಯೋಗಿಸುತ್ತೇನೆ. ಆದರೆ ಒಬ್ಬ ವ್ಯಕ್ತಿಯನ್ನು ತುಳಿದು, ಬದಿಗೆ ಸರಿಸಿ ನಾನು ರಾಜಕಾರಣ ಮಾಡಲ್ಲ. ಗುಂಪುಗಾರಿಕೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಕೆಲಸ ಮಾಡುತ್ತೇನೆ.

-ವಿನಾಯಕ ಭಟ್ಟ ಮೂರೂರು, ಕನ್ನಡಪ್ರಭ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.