ದೇವರು ಬಂದ ಹಾಗೆ...
ಒಂದೊಂದು ಸಂದರ್ಭದಲ್ಲಿ ಹಾಗಾಗಿ ಬಿಡುತ್ತದೆ-ಕಷ್ಟಗಳು, ಹೇಳದೇ ಕೇಳದೇ ಬಂದುಬಿಡುತ್ತವೆ. ಆ ಸಂದರ್ಭದಲ್ಲಿ, ಕೈ ತುಂಬ ಹಣವಿರುತ್ತದೆ. ಆದರೆ ಹಣದಿಂದ ಆ ಕಷ್ಟ ಪರಿಹಾರವಾಗುವುದಿಲ್ಲ. ನೂರಾರು ಮಂದಿ ವಿಐಪಿಗಳ ಪರಿಚಯವಿರುತ್ತದೆ. ಆದರೆ ಅವರು ಯಾರೂ ಆಗ ಸಂಪರ್ಕಕ್ಕೆ ಸಿಗುವುದಿಲ್ಲ, ಅಥವಾ ಸಂಕಟದ ಸಂದರ್ಭ ಅಂದುಕೊಂಡಾಗ ವಿಐಪಿಗಳ ವಿಳಾಸವಾಗಲಿ, ಫೋನ್ ನಂಬರ್ ಆಗಲಿ ನೆನಪಿಗೇ ಬರುವುದಿಲ್ಲ. ಅಂಥ ಸಂದರ್ಭದಲ್ಲೆಲ್ಲ ಮನಸ್ಸು ಆರ್ದ್ರವಾಗಿ ಚೀರುತ್ತದೆ: ಭಗವಂತಾ, ಕರುಣೆ ತೋರು...
ಎಷ್ಟೋ ಬಾರಿ, ಹೀಗೆ ಪ್ರಾರ್ಥಿಸಿಕೊಂಡ ಕೆಲವೇ ಸಮಯದ ಬಳಿಕ, ಯಾವುದೋ ರೂಪದಲ್ಲಿ ಸಹಾಯ ಒದಗಿ ಬರುವುದುಂಟು. ಆಗೆಲ್ಲ, ದೇವರು ಕಡೆಗೂ ತನ್ನ ಲೀಲೆಯನ್ನು ತೋರಿಸಿಬಿಟ್ಟ. ನಂಬಿದ ದೇವರು ಕಡೆಗೂ ನಮ್ಮ ಕೈ ಬಿಡಲಿಲ್ಲ ಎಂದು ಜನ ಮಾತಾಡಿಕೊಳ್ಳುವುದುಂಟು. ಈ ಮಾತಿಗೆ ಸಾಕ್ಷಿಯಾಗುವಂಥ ಎರಡು ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು.
ಪ್ರಸಂಗ 1: ನಾಗರಾಜ್ ನಮ್ಮ ಕುಟುಂಬ ಸ್ನೇಹಿತರು. ಮೈಸೂರು ಬ್ಯಾಂಕಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಬ್ಯಾಂಕ್ ಅಧಿಕಾರಿ ಎಂದ ಮೇಲೆ ವಿವರಿಸಬೇಕೆ? ಸಂಬಳ-ಸವಲತ್ತುಗಳು ಜೋರಾಗಿಯೇ ಇವೆ. ಹೆಂಡತಿ, ಇಬ್ಬರು ಮಕ್ಕಳ ಪುಟ್ಟ ಕುಟುಂಬ ಅವರದು. ಓಡಾಡಲಿಕ್ಕೆ ಕಾರ್ ಇದೆ. ತಿಂಗಳಿಗೊಮ್ಮೆ ಅದನ್ನು ತಪ್ಪದೇ ಸರ್ವೀಸ್‌ಗೆ ಕಳಿಸುವುದು ನಾಗರಾಜ್‌ಗೆ ಅಭ್ಯಾಸವಾಗಿದೆ. ಎಲ್ಲಾದರೂ ಹೊರಗೆ ಹೋದಾಗ ಇದಕ್ಕಿದ್ದಂತೆಯೇ ಕಾರು ಕೆಟ್ಟು ನಿಲ್ಲದಿರಲಿ ಎಂಬ ಮುಂದಾಲೋಚನೆಯೇ ನಾಗರಾಜರ ಈ ನಿರ್ಧಾರಕ್ಕೆ ಕಾರಣವಾಗಿದೆ.
ತಿಂಗಳ ಹಿಂದೆ, ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಫೀಸ್ ಮುಗಿಸಿಕೊಂಡು ಕುಟುಂಬ ಸಮೇತ ಹಾಸನಕ್ಕೆ ಹೊರಟಿದ್ದಾರೆ ನಾಗರಾಜ್. ರಾತ್ರಿ 10 ಗಂಟೆಯ ವೇಳೆಗೆ ಹಾಸನ ತಲುಪುತ್ತೇನೆಂಬ ಅಂದಾಜು ಅವರದಿತ್ತು. ಆದರೆ, ರಾತ್ರಿ ಎಂಟು ಗಂಟೆಯ ಹೊತ್ತಿನಲ್ಲಿ, ಕಗ್ಗಾಡಿನಂಥ ಪ್ರದೇಶದಲ್ಲಿ ಕಾರು ಕೆಟ್ಟು ಹೋಗಿದೆ. ಯಾರಿಗಾದರೂ ಹೇಳೋಣವೆಂದರೆ, ಅಲ್ಲಿ ಜನ ಸಂಚಾರವೇ ಇಲ್ಲ. ಹೆಂಡತಿ ಹಾಗೂ ಇಬ್ಬರು ಮಕ್ಕಳು ಕಾರ್‌ನ ಒಳಗೆ ಇರುವುದರಿಂದ, ಅವರನ್ನು ಅಲ್ಲಿಯೇ ಬಿಟ್ಟು ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಹೋಗಲಿ, ಹೆಂಡತಿ-ಮಕ್ಕಳನ್ನು ಕೆಳಗಿಳಿಸಿ, ಈ ಕಾರನ್ನೇ ಸ್ವಲ್ಪ ದೂರ ನೂಕಿಬಿಡಿ ಎಂದು ಹೇಳಬಹುದಲ್ಲ ಅಂದುಕೊಂಡರೆ, ಆ ರಾತ್ರಿಯ ವೇಳೆ ಒಂದು ಹೆಂಗಸು ಹಾಗೂ ಎರಡು ಚಿಕ್ಕ ಮಕ್ಕಳು, ಕಾರನ್ನೂ ಎಷ್ಟು ದೂರ ತಾನೆ ತಳ್ಳಲು ಸಾಧ್ಯ?
ಇಂಥ ಸಂದರ್ಭದಲ್ಲಿ ನಾಗರಾಜನಿಗೆ ಸಹಜವಾಗಿಯೇ ಎಲ್ಲ ಗೆಳೆಯರ ನೆನಪಾಗಿದೆ. ಹತ್ತಿರದ ಪ್ರದೇಶದಲ್ಲಿರುವವರನ್ನು ಹುಡುಕಬೇಕು ಅಥವಾ ಮುಂದೇನು ಮಾಡಬೇಕೆಂದು ಸಲಹೆ ಪಡೆಯಬೇಕು ಎಂದುಕೊಂಡೇ ಆತ ಮೊಬೈಲು ಎತ್ತಿಕೊಂಡಿದ್ದಾನೆ. ಅವನ ದುರಾದೃಷ್ಟಕ್ಕೆ ಆ ಪ್ರದೇಶದಲ್ಲಿ ನೆಟ್‌ವರ್ಕ್ ಸಿಗುತ್ತಿಲ್ಲ. ಆ ದಾರಿಯಲ್ಲಿ ಬರುತ್ತಿದ್ದ ವಾಹನಗಳಿಗೆ ಕೈ ತೋರಿಸಿ ಸಹಾಯ ಕೇಳೋಣ ಎಂದುಕೊಂಡಾಗ, ಪತ್ರಿಕೆಯಲ್ಲಿ ದಿನವೂ ಬರುತ್ತಿದ್ದ ಹೆದ್ದಾರಿಯಲ್ಲಿ ದರೋಡೆ, ರೇಪ್, ಕೊಲೆ ಎಂಬಂಥ ವಿವರಗಳೇ ಕಣ್ಮುಂದೆ ಬಂದಿವೆ. ಯಾರಾದರೂ, ಡ್ರಾಪ್ ಕೊಡ್ತೇವೆ ಎಂದು ಹತ್ತಿಸಿಕೊಂಡು ನಡುದಾರಿಯಲ್ಲಿ ಇದ್ದಕ್ಕಿದ್ದಂತೆ ಹೆಂಡತಿಯ ಮೈ ಮೇಲೆ ಕೈ ಹಾಕಿಬಿಟ್ಟರೆ?
ಮಕ್ಕಳ ಕೊರಳಿಗೆ ಚಾಕು ಇಟ್ಟು ಹೆದರಿಸಿದರೆ? ಇರುವ ಹಣವನ್ನೆಲ್ಲ ಕಿತ್ತುಕೊಂಡು ಚಲಿಸುತ್ತಿರುವ ಕಾರ್‌ನಿಂದ ಆಚೆಗೆ ನೂಕಿಬಿಟ್ಟರೆ...? ಇಂಥವೇ ಮಾತುಗಳನ್ನು ನಾಗರಾಜ ಹೆಂಡತಿಯೊಂದಿಗೆ ಗಾಬರಿಯಿಂದಲೇ ಹೇಳಿಕೊಂಡಿದ್ದಾನೆ. ಆಕೆ ದಿಕ್ಕು ತೋಚದೆ ಕಂಗಾಲಾಗಿದ್ದಾಳೆ. ಮುಂದೆ ಎಂಥ ಅನಾಹುತವಾದೀತೋ ಎಂಬ ಹೆದರಿಕೆಯಿಂದಲೇ ಇಬ್ಬರೂ ಗಡಗಡನೆ ನಡುಗಿದ್ದಾರೆ. ಈ ಆತಂಕದ ಮಧ್ಯೆಯೇ -'ಭಗವಂತಾ, ಈ ಕಷ್ಟದಿಂದ ನಮ್ಮನ್ನು ಹೇಗಾದರೂ ಪಾರು ಮಾಡು' ಎಂದು ಪ್ರಾರ್ಥಿಸಿದ್ದಾರೆ. ಆಮೇಲೆ ಏನಾಗಿದೆಯೆಂದರೆ-ನೋಡುವುದಕ್ಕೆ ಒರಟರಂತೆ ಕಾಣುತ್ತಿದ್ದ ಇಬ್ಬರು ಕಾರ್‌ನಲ್ಲಿ ಬಂದರಂತೆ. ನಾಗರಾಜನ ಕಾರ್ ಮಗ್ಗುಲಲ್ಲಿಯೇ ಕಾರು ನಿಲ್ಲಿಸಿ, ಏನಾದ್ರೂ ಸಹಾಯ ಬೇಕಾ ಎಂದು ಕೇಳಿದ್ದಾರೆ. ಒರಟರಂತಿದ್ದ ಜನರನ್ನು ನೋಡಿಯೇ ಅರೆಜೀವವಾದ ನಾಗರಾಜ್ ದಂಪತಿ, ನಡುಗುತ್ತಲೇ ಎಲ್ಲ ವಿಷಯ ತಿಳಿಸಿದ್ದಾರೆ. ಆ ಜನ, ಈಗ ನಮ್ಮ ಕಾರ್ ಹತ್ಕೊಳ್ಳಿ. ಹತ್ತಿರದಲ್ಲಿರುವ ಪಟ್ಟಣದ ಲಾಡ್ಜ್‌ಗೆ ಬಿಡ್ತೇವೆ. ಬೆಳಗ್ಗೆ ಮೆಕಾನಿಕ್‌ನ ಕರ್ಕೊಂಡು ಬಂದು ಕಾರ್ ರಿಪೇರಿ ಮಾಡ್ಸಿ ಎಂದಿದ್ದಾರೆ. ದಾರಿ ಮಧ್ಯೆ ದರೋಡೆಯೋ, ಅತ್ಯಾಚಾರವೋ, ಕೊಲೆಯೋ ನಡೆಯಬಹುದು ಎಂಬ ಗಾಬರಿಯಲ್ಲೇ ನಾಗರಾಜ್ ದಂಪತಿ ಇದ್ದಾಗ, ಬಹಳ ಮುತುವರ್ಜಿಯಿಂದ ಲಾಡ್ಜ್‌ಗೆ ತಲುಪಿಸಿ, ಊಟವನ್ನೂ ತರಿಸಿಕೊಟ್ಟು, ಗುಡ್‌ನೈಟ್ ಸರ್ ಎಂದಿದ್ದಾರೆ. ಆಕಸ್ಮಿಕವಾಗಿ ಪರಿಚಯವಾಗಿ ನೆರವಾದವರಿಗೆ ಕೃತಜ್ಞತೆಯ ನೆಪದಲ್ಲಿ ಹಣ ಕೊಡಲು ಹೋದರೆ, -ಛೆ ಛೆ, ಸಹಾಯಕ್ಕೆ ಕಾಸು ತಗೋತಾರಾ ಸಾರ್? ಎಂದು ಪ್ರಶ್ನಿಸಿ, ಹಾಗೆಲ್ಲಾ ಮಾಡಿದ್ರೆ ದೇವರು ಮೆಚ್ಚಲಾರ ಎಂದು ಉತ್ತರವನ್ನೂ ಹೇಳಿ, ಭರ್ರನೆ ಹೋಗಿಬಿಟ್ಟರಂತೆ.
ಪ್ರಸಂಗ 2: ಸುನೀತಾ, ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿ. ಅವಳ ಆಫೀಸ್, 14ನೇ ಮಹಡಿಯಲ್ಲಿತ್ತು. ಅವತ್ತೊಂದು ದಿನ ಲಿಫ್ಟ್‌ಮ್ಯಾನ್‌ನ ಗೈರು ಹಾಜರಿಯಲ್ಲಿ ಸುನೀತಾ ಒಬ್ಬಳೇ ಲಿಫ್ಟ್ ಹತ್ತಿದ್ದಾಳೆ. ಮೂರನೇ ಮಹಡಿಗೆ ಬಂದ ಲಿಫ್ಟ್ ಇದ್ದಕ್ಕಿದ್ದಂತೆ ನಿಂತು ಹೋಗಿದೆ. ಕರೆಂಟ್ ಹೋಗಿರಬಹುದು, ಎರಡೇ ನಿಮಿಷದಲ್ಲಿ ಜನರೇಟರ್ ಸ್ಟಾರ್ಟ್ ಆಗಿ ಎಲ್ಲವೂ ಸರಿಯಾಗುತ್ತದೆ ಎಂದುಕೊಂಡು ಹಾಗೇ ನಿಂತಿದ್ದಾಳೆ ಸುನೀತಾ. ಆದರೆ ಹದಿನೈದು ನಿಮಿಷವಾದರೂ ಲಿಫ್ಟ್ ಕೆಳಗೆ ಆಗಲಿ ಅಥವಾ ಮೇಲಕ್ಕೂ ಹೋಗಿಲ್ಲ.
ಉಸಿರಾಡುವುದೇ ಕಷ್ಟವಾಗಿದೆ. ಆಗ ಪ್ರಾಣಭೀತಿಯಿಂದ ಕಂಗಾಲಾದ ಸುನೀತಾ, ಲಿಫ್ಟ್‌ನ ಎರಡು ಬಾಗಿಲುಗಳ ಮಧ್ಯೆ ಇದ್ದ ಸಣ್ಣ ಜಾಗದಿಂದ ಉಸಿರೆಳೆದುಕೊಂಡು, ಹೆಲ್ಪ್ ಹೆಲ್ಪ್ ಎಂದು ಚೀರಿಕೊಂಡಿದ್ದಾಳೆ. ಏನೂ ಪ್ರಯೋಜನವಾಗಿಲ್ಲ. ಕಡೆಗೆ, ಉಸಿರು ಕಟ್ಟಿದಂತಾಗಿ, ತಲೆಸುತ್ತು ಬಂದು ದೊಪ್ಪನೆ ಬಿದ್ದಿದ್ದಾಳೆ. ಅದಕ್ಕೂ ಮೊದಲು 'ದೇವರೇ ಕಾಪಾಡು...' ಎಂದು ಚೀರಿದ್ದಾಳೆ.
ಅದೇನು ಕಾಕತಾಳೀಯವೋ; ಅದುವರೆಗೂ ಲಿಫ್ಟ್ ಕಡೆ ತಿರುಗಿ ನೋಡದಿದ್ದ ಜನ, ಈಗ ದಿಢೀರನೆ ಅತ್ತ ತಿರುಗಿದ್ದಾರೆ! ಪರಿಣಾಮವಾಗಿ, ಲಿಫ್ಟ್‌ನ ಬಾಗಿಲುಗಳನ್ನು ಒಡೆದು ಸುನೀತಾಳನ್ನು ರಕ್ಷಿಸಲಾಯಿತು! 'ಬಹುಷಃ ಇಂಥ ಸಂದರ್ಭಗಳು ಎಲ್ಲರ ಬದುಕಿನಲ್ಲೂ ಆಗೊಮ್ಮೆ ಈಗೊಮ್ಮೆ ನಡೆದೇ ಇರುತ್ತವೆ. ಕೆಲವರು ಇದನ್ನು ದೇವರ ಆಟ ಅನ್ನುವುದುಂಟು. ಮತ್ತೆ ಹಲವರು, ಅಗತ್ಯ ಅನ್ನಿಸಿದಾಗೆಲ್ಲ ದೇವರು ಯಾವ್ಯಾವುದೋ ವೇಷದಲ್ಲಿ ಬಂದು ಹೋಗ್ತಾನೆ ಎಂದು ಹೇಳುವುದೂ ಉಂಟು. ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಹಾಗೆ... ದೇವರ ಲೀಲೆಯನ್ನು ತೋರಿಸಲೆಂದೇ ಇಂಥ ಸಂದರ್ಭಗಳು ಎದುರಾಗ್ತಾವಾ? ತಿಳಿದವರು ಉತ್ತರ ಹೇಳಿ...
-ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

