ವಿಶ್ವದ ಕೊನೆ ಹಾಗೂ ವಿಶ್ವ ನಾಯಕರ ನಾನಾ ನಮೂನೆ
ಒಂದು ದಿನ ದೇವರಿಗೆ ಏನನಿಸಿತೋ ಏನೋ, ಈ ಜಗತ್ತಿಗೆ ಮಂಗಳ ಹಾಡಲು ನಿರ್ಧರಿಸಿದ...

ಒಂದು ದಿನ ದೇವರಿಗೆ ಏನನಿಸಿತೋ ಏನೋ, ಈ ಜಗತ್ತಿಗೆ ಮಂಗಳ ಹಾಡಲು ನಿರ್ಧರಿಸಿದ. ಈ ವಿಶ್ವದಲ್ಲಿರುವ ಮೂವರು ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನು ಕರೆಯಲು ನಿರ್ಧರಿಸಿದ. ಆತ ಆಹ್ವಾನ ನೀಡಿದ ಆ ಪ್ರಭಾವಿ ವ್ಯಕ್ತಿಗಳೆಂದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಚೀನಾ ಅಧ್ಯಕ್ಷ ಕ್ಸಿಝೀನ್‌ಪಿಂಗ್ ಹಾಗೂ ಭಾರತದ ಪ್ರಧಾನಿ ಡಾ. ಮನಮೋಹನಸಿಂಗ್.
ಹಿರಿಯ ಪತ್ರಕರ್ತ ಮಿತ್ರರಾದ ಎಚ್.ಎನ್. ಆನಂದ ಅವರು ಹೇಳಿದ ಈ ಕಾಲ್ಪನಿಕ ಹಾಸ್ಯ ಪ್ರಸಂಗವನ್ನು ನಿಮಗೆ ಹೇಳದಿರುವುದಾದರೂ ಹೇಗೆ? ಮೋದಿ ಪ್ರಿಯರು ಇದನ್ನು ಹೇಳಿ ಹೇಳಿ ಸವೆಸುವ 'ಅಪಾಯ'ವಿದೆ. ಹಾಸ್ಯೋತ್ಸವಗಳಲ್ಲಿ ಗಂಗಾವತಿ ಝ್ಛ್ಝೀ ಖ್ಯಾತಿಯ ಪ್ರಾಣೇಶ್‌ಗೆ ಸಿಕ್ಕರೆ ಚಪ್ಪರ ಹಾರುವ ಚಪ್ಪಾಳೆ ಗ್ಯಾರಂಟಿ. ಇರಲಿ.
ಒಂದು ದಿನ ದೇವರಿಗೆ ಏನನಿಸಿತೋ ಏನೋ, ಈ ಜಗತ್ತಿಗೆ ಮಂಗಳ ಹಾಡಲು ನಿರ್ಧರಿಸಿದ. ಈ ವಿಶ್ವದಲ್ಲಿರುವ ಮೂವರು ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನು ಕರೆಯಲು ನಿರ್ಧರಿಸಿದ. ಆತ ಆಹ್ವಾನ ನೀಡಿದ ಆ ಪ್ರಭಾವಿ ವ್ಯಕ್ತಿಗಳೆಂದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಚೀನಾ ಅಧ್ಯಕ್ಷ ಕ್ಸಿಝೀನ್‌ಪಿಂಗ್ ಹಾಗೂ ಭಾರತದ ಪ್ರಧಾನಿ ಡಾ. ಮನಮೋಹನಸಿಂಗ್.
'ಈ ವಿಶ್ವದ ಕತೆ ಇಲ್ಲಿಗೆ ಮುಗಿಯಿತು. ಈ ವಿಷಯವನ್ನು ನೀವು ನಿಮ್ಮ ದೇಶದ ಜನರಿಗೆ ತಿಳಿಸಬಹುದು' ಎಂದು ಭಗವಂತ ಹೇಳಿದ.
ಒಬಾಮ ಟಿವಿ ಚಾನೆಲ್‌ಗಳ ಮೂಲಕ ದೇಶವನ್ನುದ್ದೇಶಿಸಿ ಮಾತಾಡುತ್ತಾ, 'ನನ್ನ ಪ್ರಿಯ ದೇಶವಾಸಿಗಳೇ, ನಾನು ನಿಮಗೆ ಒಂದು ಸಂತಸದ ಹಾಗೂ ಕೆಟ್ಟ ಸುದ್ದಿ ಹೇಳುತ್ತಿದ್ದೇನೆ. ಸಂತಸದ ಸುದ್ದಿ ಏನೆಂದರೆ, ನಾವು ದೇವರಿದ್ದಾನೆ ಅಂತ ಅಂದುಕೊಂಡಿದ್ದೆವಲ್ಲ ಅದು ನಿಜವಾಗಿದೆ. ನನಗೆ ದೇವರು ಸಿಕ್ಕಿದ್ದ. ಕೆಟ್ಟ ಸುದ್ದಿ ಏನೆಂದರೆ ದೇವರು ಈ ಜಗತ್ತನ್ನು ಕೊನೆಗಾಣಿಸಲಿದ್ದಾನೆ.' ಎಂದು ಪ್ರಕಟಿಸಿದರು.
ಚೀನಾದ ಕ್ಸಿಝಿನ್‌ಪಿಂಗ್ ರಾಷ್ಟ್ರವನ್ನುದ್ದೇಶಿಸಿ ಮಾತಾಡುತ್ತಾ, 'ನಾನು ನಿಮಗೆ ಎರಡು ಸುದ್ದಿ ಹೇಳಲಿದ್ದೇನೆ. ಆ ಪೈಕಿ ಒಂದು ಕೆಟ್ಟ ಸುದ್ದಿ ಹಾಗೂ ಮತ್ತೊಂದು ಅತಿ ಕೆಟ್ಟ ಸುದ್ದಿ' ಎಂದು ಒಂದು ಕ್ಷಣ ಸಾವರಿಸಿಕೊಂಡು, ಮುಂದುವರಿಯುತ್ತಾ, 'ಕೆಟ್ಟಸುದ್ದಿ ಏನೆಂದರೆ, ನಮ್ಮ ನಂಬಿಕೆಗಳೆಲ್ಲ ಬುಡಮೇಲಾಗಿವೆ. ದೇವರು ಇಲ್ಲ ಅಂತ ಭಾವಿಸಿದ್ದೇವಲ್ಲ... ಆದರೆ ದೇವರು ಇದ್ದಾನೆ ಹಾಗೂ ಅತಿ ಕೆಟ್ಟ ಸುದ್ದಿಯೇನೆಂದರೆ ದೇವರು ಈ ಜಗತ್ತಿಗೆ ಇತಿಶ್ರೀ ಹಾಡುತ್ತಿದ್ದಾನೆ' ಎಂದು ಘೋಷಿಸಿದರು.
ಡಾ. ಮನಮೋಹನಸಿಂಗ್ ಓಡೋಡಿ ಹೊರಗೆ ಬಂದು ಸೋನಿಯಾಗಾಂಧಿಗೆ ಫೋನ್ ಮಾಡಿ ಹೇಳಿದರು. 'ಮೇಡಂ, ನಿಮಗೆ ಒಳ್ಳೆಯ ಸುದ್ದಿ ಹಾಗೂ ಮತ್ತಷ್ಟು ಒಳ್ಳೆಯ ಸುದ್ದಿಯನ್ನು ಹೇಳಲೇಬೇಕಿದೆ. ಒಳ್ಳೆಯ ಸುದ್ದಿ ಏನೆಂದರೆ ಜಗತ್ತಿನ ಮೂವರು ಪ್ರಭಾವಿ ವ್ಯಕ್ತಿಗಳ ಪೈಕಿ ದೇವರು ನನ್ನನ್ನೂ ಒಬ್ಬನೆಂದು ಪರಿಗಣಿಸಿದ್ದಾನೆ ಹಾಗೂ ಮತ್ತಷ್ಟು ಒಳ್ಳೆಯ ಸುದ್ದಿ ಏನೆಂದರೆ ದೇವರು ಈ ಜಗತ್ತನ್ನು ಸದ್ಯದಲ್ಲಿಯೇ ಕೊನೆಗೊಳಿಸುವುದರಿಂದ ನರೇಂದ್ರ ಮೋದಿ ದೇಶದ ಮುಂದಿನ ಪ್ರಧಾನಿಯಾಗುತ್ತಾರೆಂದು ನಾವು ಚಿಂತಿಸಬೇಕಿಲ್ಲ'.
ಕಂಡಕ್ಟರ್ ಮೇಲೆ ಪ್ರೀತಿ
ಪ್ರತಿದಿನ ಅಜ್ಜಿಯೊಬ್ಬಳು ಕಂಡಕ್ಟರನಿಗೆ ಗೋಡಂಬಿ ಹಾಗೂ ಬದಾಮಿಯನ್ನು ತಿನ್ನಲು ಕೊಡುತ್ತಿದ್ದಳು. ಕಂಡಕ್ಟರ್‌ಗೆ ಆಶ್ಚರ್ಯ. ಆತ ಅದನ್ನು ಸ್ವೀಕರಿಸಿ ಪ್ರೀತಿಯಿಂದ ತಿನ್ನುತ್ತಿದ್ದ. ಪ್ರತಿದಿನ ಈ ಅಜ್ಜಿ ತನಗೆ ಇವನ್ನೇಕೆ ಕೊಡುತ್ತಿದ್ದಾಳೆಂಬುದು ಅವನಿಗೆ ಅರ್ಥವಾಗಲಿಲ್ಲ. ಅವಳನ್ನೇ ಕೇಳಿ ತಿಳಿದುಕೊಳ್ಳೋಣ ಎನಿಸಿತು.
ಕಂಡಕ್ಟರ್: ಅಜ್ಜಿ, ನಿಮಗೆ ಧನ್ಯವಾದಗಳು, ಪ್ರತಿ ದಿನ ನನಗೆ ಗೋಡಂಬಿ, ಬದಾಮಿ ಕೊಡ್ತೀರಲ್ಲ. ನೀವೇ ಅವುಗಳನ್ನು ತಿನ್ನಬಹುದಲ್ಲ? ನನಗ್ಯಾಕೆ ಕೊಡ್ತೀರಿ?
ಅಜ್ಜಿ: ನಾನು ತಿನ್ನೋಣ ಅಂದ್ರೆ ನನಗೆ ಅಗಿಯಲು ಹಲ್ಲುಗಳಿಲ್ಲವಲ್ಲ.
ಕಂಡಕ್ಟರ್: ಹಾಗಾದರೆ ಮತ್ಯಾಕೆ ಅವುಗಳನ್ನು ಖರೀದಿಸುತ್ತೀರಿ?
ಅಜ್ಜಿ: ನನಗೆ ಗೋಡಂಬಿ ಹಾಗೂ ಬದಾಮಿ ಮೇಲಿರುವ ಚಾಕೋಲೆಟ್‌ಗಳೆಂದರೆ ಬಹಳ ಇಷ್ಟ.
ಇದಕ್ಕೇನಂತಿರಾ?
ಇದು ವಿಚಿತ್ರ ಎಂದು ಎನಿಸಬಹುದು. ಆದರೆ ನಿಜಕ್ಕೂ ಸತ್ಯ.
-ಮದುವೆ ಮನೆ ಅಥವಾ ಮದುವೆ ಛತ್ರಕ್ಕಿಂತ ಛಜಿಜಿಜ್ಛಡ್ಝ್ಟಿಟಿಛಡಿಜ ಆದ ಕಿಸ್‌ಗಳನ್ನು ಏರ್‌ಪೋರ್ಟಿನಲ್ಲಿ ನೋಡಬಹುದು.
-ದೇವಸ್ಥಾನ, ಮಸೀದಿ, ಚರ್ಚ್‌ಗಳ ಗೋಡೆಗಳಿಗಿಂತ ಆಸ್ಪತ್ರೆಯ ಗೋಡೆಗಳೇ ಅದೃಷ್ಟಶಾಲಿಗಳು. ಯಾಕೆಂದರೆ ಆಸ್ಪತ್ರೆ ಗೋಡೆ ಪ್ರಾಮಾಣಿಕವಾದ ಪ್ರಾರ್ಥನೆಗಳನ್ನು ನೋಡಿರುತ್ತದೆ, ಕೇಳಿರುತ್ತದೆ.
-ಒಳ್ಳೆಯ ದಿನ ಅಥವಾ ಕೆಟ್ಟದಿನ ಎಂಬುದು ನಿಮ್ಮ ಯೋಚನೆಯನ್ನು ಅವಲಂಬಿಸಿದೆ. ಲೋಕಲ್ ಟ್ರೇನ್‌ನಲ್ಲಿ ಉಸಿರುಗಟ್ಟುವ ವಾತಾವರಣವಿದೆಯಲ್ಲ, ಡಿಸ್ಕೋಥೆಕ್‌ನಲ್ಲಿ ಅದೇ ವಾತಾವರಣ. ಅಲ್ಲಿ ಉಸಿರುಗಟ್ಟುವುದು, ಇಲ್ಲಿ ಪಂಚಪ್ರಾಣ!
ಪ್ರತಿ ಪತ್ನಿಯೂ ಹೀಗೆ ಭಾವಿಸಿದರೆ...
ಇದನ್ನು ಬರೆದವರು ಯಾರೋ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಹೇಳ್ತೇನೆ, ಇದನ್ನು ಒಬ್ಬ ಬಡಪಾಯಿ ಗಂಡನೇ ಬರೆದಿರಬೇಕು. ಯಾಕೆಂದರೆ ಅವನಲ್ಲದೇ ಮತ್ತ್ಯಾರು ತಾನೆ ಹೀಗೆ ಬರೆಯಬಲ್ಲರು.
-ನೀವು ನಿಮ್ಮ ಗಂಡನನ್ನು ಪ್ರೀತಿಸಬೇಕು...
ಆತ ಬಿಸಿ ಬಿಸಿ ಕಾಫಿ ಮಾಡಿಕೊಂಡು ಬಾ ಎಂದು ಹೇಳ್ತಾನಲ್ಲ, ಅಂದ್ರೆ ಅವನಿಗೆ ನಿಮ್ಮ ಸಾಮೀಪ್ಯ ಬೇಕು ಅಂತ ಅರ್ಥ. ಅವನಿಗೆ ನಿಮ್ಮ ಮಾತುಗಳನ್ನು ಕೇಳಲು ಇಷ್ಟ ಅಂತ ಅರ್ಥ. ಒಟ್ಟಾರೆ ಆತ ನಿಮ್ಮ ಒಡನಾಟ ಬಯಸಿದ್ದಾನೆ ಅಂತ ಅರ್ಥ.
-ನೀವು ನಿಮ್ಮ ಗಂಡನನ್ನು ಪ್ರೀತಿಸಬೇಕು...
ಆತ ಹಾದಿಯಲ್ಲಿ, ಬೀದಿಯಲ್ಲಿ ಹೋಗುವ, ಮದುವೆ ಮನೆ, ಏರ್‌ಪೋರ್ಟ್, ಶಾಪಿಂಗ್‌ಮಾಲ್‌ನಲ್ಲಿ ಬೇರೆ ಹೆಂಗಸರನ್ನು ನೋಡಿದ ಅಂತ ಭಾವಿಸಿ. ನಿಮ್ಮ ಗಂಡನನ್ನು ತಪ್ಪಾಗಿ ತಿಳಿಯಬೇಡಿ. ಇಷ್ಟೆಲ್ಲ ಹೆಂಗಸರಿಗಿಂತ ತನ್ನ ಹೆಂಡತಿಯೇ ವಾಸಿ, ಅವಳೇ ಹೆಚ್ಚು ಸುಂದರ, ಆಕರ್ಷಕ, ಒಳ್ಳೆಯವಳು ಎಂದು ಯೋಚಿಸುತ್ತಿರಬಹುದು.
-ನೀವು ನಿಮ್ಮ ಗಂಡನನ್ನು ಪ್ರೀತಿಸಬೇಕು...
ಒಂದು ವೇಳೆ ಆತ ನೀವು ಮಾಡಿದ ಅಡುಗೆಯನ್ನು ಟೀಕಿಸಿದ ಎಂದು ಭಾವಿಸಿ. ಆತ ನಿಮ್ಮನ್ನು ಟೀಕಿಸುತ್ತಿಲ್ಲ ಆದರೆ ತನ್ನ ಬಾಯಿರುಚಿಯನ್ನು ಸುಧಾರಿಸಿಕೊಳ್ಳುತ್ತಿದ್ದಾನೆಂದು ತಿಳಿಯಿರಿ.
-ನೀವು ನಿಮ್ಮ ಗಂಡನನ್ನು ಪ್ರೀತಿಸಬೇಕು.
ರಾತ್ರಿ ನಿಮ್ಮೊಂದಿಗೆ ಮಲಗಿದಾಗ ಆತ ಜೋರಾಗಿ ಗೊರಕೆ ಹೊಡೆದರೆ ತಪ್ಪು ಭಾವಿಸಬೇಡಿ. ಆತನ ಗೊರಕೆಗೆ ನಿದ್ದೆ ಮಾಡಲಾಗುತ್ತಿಲ್ಲ, ಡಿಸ್ಟರ್ಬ್ ಆಗುತ್ತದೆಂದು ಮೂಗು ಮುರಿಯಬೇಡಿ. ನಿಮ್ಮ ಮದುವೆಯಾದ ನಂತರ ಆತ ಹೆಚ್ಚು ನಿರಾಳನಾಗಿದ್ದಾನೆ, ರಿಲ್ಯಾಕ್ಸ್ ಆಗಿದ್ದಾನೆ. ಚೆನ್ನಾಗಿ ನಿದ್ದೆ ಮಾಡುತ್ತಾನಲ್ಲ ಎಂದು ಸಮಾಧಾನಪಟ್ಟುಕೊಳ್ಳಿ.
-ನೀವು ನಿಮ್ಮ ಗಂಡನನ್ನು ಪ್ರೀತಿಸಬೇಕು...
ನಿಮ್ಮ ಬರ್ತ್‌ಡೇ ದಿನ ಅಥವಾ ಮ್ಯಾರೇಜ್ ಎನಿವರ್ಸರಿ ದಿನ ನಿಮಗೆ ಗಿಫ್ಟ್ ಕೊಡಲು ಮರೆತು ಹೋದ ಎಂದು ಭಾವಿಸಿ ತಪ್ಪು ತಿಳಿಯಬೇಡಿ, ಆತ ನಿಮ್ಮ ಭವಿಷ್ಯದ ದಿನಗಳಿಗಾಗಿ ಹಣವನ್ನು ಕೂಡಿಡುತ್ತಿರಬಹುದು ಎಂದು ತಿಳಿಯಿರಿ.
ಪ್ರೀತಿಸುತ್ತಲೇ ಇರಿ.
ಕಾರಣ ನಿಮಗಾಗಲಿ, ಅವನಿಗಾಗಲಿ ಬೇರೆ ದಾರಿಯಿಲ್ಲ.
ಅಂಗಿಯ ಮೇಲೆ ಅಗಳು ಚೆಲ್ಲಿದಾಗ...
ಆ ಮುದುಕನಿಗೆ 80 ವರ್ಷ ದಾಟಿತ್ತು. ಮಗ, ಸೊಸೆ ಮತ್ತು 6 ವರ್ಷದ ಮೊಮ್ಮಗನೊಂದಿಗೆ ವಾಸವಾಗಿದ್ದ. ವಯೋಸಹಜ ನಿಶಕ್ತಿ ಆ ಮುದುಕನನ್ನು ಕಾಡುತ್ತಿತ್ತು. ಕೈಗಳು ನಡುಗುತ್ತಿದ್ದವು, ಕಣ್ಣು ಮಸುಕಾಗಿತ್ತು, ಮಾತು ತೊದಲುತ್ತಿತ್ತು. ಪ್ರತಿ ದಿನ ಆ ಕುಟುಂಬ ಒಟ್ಟಾಗಿಯೇ ಊಟಕ್ಕೆ ಕೂಡುತ್ತಿತ್ತು. ಆದರೆ ಮುದುಕನಿಗೆ ನಡುಗುವ ಕೈಗಳಿಂದ ಸರಿಯಾಗಿ ಊಟ ಮಾಡಲಾಗುತ್ತಿರಲಿಲ್ಲ. ಮೈಮೇಲೆ ಮತ್ತು ನೆಲದ ಮೇಲೆಲ್ಲ ಅಗಳು ಚೆಲ್ಲಿಕೊಂಡು ಬಿಡುತ್ತಿದ್ದ. ಹಾಲು ತುಳುಕಿ ಟೇಬಲ್ ಮೇಲೆ ಚೆಲ್ಲಿಹೋಗುತ್ತಿತ್ತು.
ಮಗ ಮತ್ತು ಸೊಸೆಗೆ ದಿನೇ ದಿನೆ ಕಿರಿಕಿರಿ ಹೆಚ್ಚುತ್ತಾ ಹೋಯಿತು. ಮುದುಕನ ಜೊತೆಗೆ ಊಟಕ್ಕೆ ಕೂಡಲು ಅವರಿಗೆ ಮನಸ್ಸಾಗುತ್ತಿರಲಿಲ್ಲ. "ಆತ ಸದ್ದು ಮಾಡುತ್ತಾ ತಿನ್ನುವುದು, ಮೈಮೇಲೆ ಅಗಳು ಚೆಲ್ಲಿಕೊಂಡು ಹೊಲಸು ಮಾಡಿಕೊಳ್ಳುವುದು ನನಗಂತೂ ವಾಕರಿಕೆ ತರಿಸುತ್ತಿದೆ. ಏನಾದರೂ ಮಾಡಲೇಬೇಕು" ಎಂದು ಮಗ ಒಂದು ದಿನ ತನ್ನ ಹೆಂಡತಿಯ ಮುಂದೆ ಗೊಣಗಿದ. ಇಬ್ಬರೂ ಕಲೆತು ಮನೆಯ ಮೂಲೆಯೊಂದರಲ್ಲಿ ಮುದುಕನಿಗೆ ಪ್ರತ್ಯೇಕವಾಗಿ ಚಿಕ್ಕ ಟೇಬಲ್ ಹಾಕಿದರು. ಆ ದಿನದಿಂದ ಆ ಮೂವರೂ ಒಟ್ಟಾಗಿ ಊಟಕ್ಕೆ ಕುಳಿತರೆ, ಮುದುಕ ಮಾತ್ರ ಒಬ್ಬಂಟಿಯಾಗಿ ಊಟಮಾಡುತ್ತಿದ್ದ. ಗಾಜಿನ ಪಾತ್ರೆ ಕೊಟ್ಟರೆ ಒಡೆದುಹೋಗಬಹುದು ಎಂದು, ಕಟ್ಟಿಗೆ ಪಾತ್ರೆಯಲ್ಲಿ ಆತನಿಗೆ ಅನ್ನ ಹಾಕಿಕೊಡುತ್ತಿದ್ದರು.
ಇದನ್ನೆಲ್ಲ ಆ ಮಗು ಮೌನವಾಗಿ ನೋಡುತ್ತಿತ್ತು.
ಒಂದು ದಿನ ಊಟಕ್ಕೂ ಮುನ್ನ, ತನ್ನ ಮಗು ಕಟ್ಟಿಗೆ ಹರವಿಕೊಂಡು ಏನೋ ಮಾಡುತ್ತಿರುವುದನ್ನು ತಂದೆ ಗಮನಿಸಿದ.
"ಏನು ಪುಟ್ಟ ಮಾಡ್ತಾ ಇದೀಯ?" ಮುದ್ದು ಮಾಡುತ್ತಾ ಕೇಳಿದ. ಆಗ ಆ ಮಗು ಆಟವಾಡುತ್ತಲೇ ಉತ್ತರಿಸಿತು: "ನಾನು ದೊಡ್ಡವನಾದ್ಮೇಲೆ ನಿನಗೆ ಮತ್ತು ಅಮ್ಮನಿಗೆ ಊಟಕ್ಕೆ ಹಾಕೋದಕ್ಕೆ ಕಟ್ಟಿಗೆಯ ಪಾತ್ರೆ ರೆಡಿ ಮಾಡ್ತಾ ಇದೀನಿ!"
ಆ ಮಗುವಿನ ಮಾತು ಕೇಳಿ ಗಂಡ-ಹೆಂಡತಿ ನಡುಗಿಹೋದರು. ಏನು ಮಾತನಾಡಬೇಕೋ ಅವರಿಗೆ ತಿಳಿಯಲಿಲ್ಲ. ಆದರೆ ಏನು ಮಾಡಬೇಕು ಎನ್ನುವುದು ಮಾತ್ರ ಸ್ಪಷ್ಟವಾಗಿತ್ತು. ನೇರವಾಗಿ ಆ ವೃದ್ಧನ ಬಳಿ ತೆರಳಿ ಅವರು ಆತನ ಕೈಹಿಡಿದು ಊಟದ ಮೇಜಿಗೆ ಕರೆತಂದರು.
ಊಟಕ್ಕೆ ಕುಳಿತಾಗ ಆ ಮುದುಕ ಮತ್ತೆ ಮೈಮೇಲೆ ಅಗಳು ಚೆಲ್ಲಿಕೊಂಡ, ನೀರು ಕುಡಿಯಲು ಹೋಗಿ ಗ್ಲಾಸು ಕೆಳಗೆ ಬೀಳಿಸಿದ...ಆದರೆ ಆತನ ಮಗ ಅತನಿಗೆ ಊಟ ಮಾಡಿಸಿ, ಆತನ ಅಂಗಿಯನ್ನು ಸ್ವಚ್ಛಮಾಡಿದ...
ನೀತಿ: ಮನೆಯಲ್ಲಿ ವೃದ್ಧರಿದ್ದರೆ ಅವರನ್ನು ಪ್ರೀತಿಸಿ. ನೀವೂ ಒಂದು ದಿನ ಆ ಸ್ಥಾನದಲ್ಲಿರುತ್ತೀರಿ ಎನ್ನುವುದನ್ನು ಮರೆಯದಿರಿ. ನೀವು ಬಿತ್ತಿದ್ದನ್ನೇ ಬೆಳೆಯುತ್ತೀರಿ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


