ಅಂಕಣಗಳು

ರಾಹುಲ್ ಮಾತಿಗಿಂತ ಮನಮೋಹನ ಮೌನವೇ ಲೇಸು!

ರಾಹುಲ್ ಗಾಂಧಿಯವರೇನೋ ಸಂದರ್ಶನ ಕೊಟ್ಟು ಹೊರಟುಬಿಟ್ಟರು. ಆದರೆ ಕಾಂಗ್ರೆಸ್...

Published On :

ರಾಹುಲ್ ಗಾಂಧಿಯವರೇನೋ ಸಂದರ್ಶನ ಕೊಟ್ಟು ಹೊರಟುಬಿಟ್ಟರು. ಆದರೆ ಕಾಂಗ್ರೆಸ್ ವಕ್ತಾರರ ಪಾಡು ಯಾರಿಗೂ ಬೇಡ. ಎಲ್ಲ ಟಿವಿ ಚಾನೆಲ್‌ಗಳಲ್ಲಿ ಅವರು ತಡಬಡಿಸುವುದು ರಾಷ್ಟ್ರೀಯ ತಮಾಷೆಯಾಗಿಬಿಟ್ಟಿದೆ.
ಖಾಸಗಿಯಾಗಿ ಪತ್ರಕರ್ತರ ಮುಂದೆ ತಮ್ಮ ಅಳಲನ್ನು  ತೋಡಿಕೊಳ್ಳಲಾರಂಭಿಸಿದ್ದಾರೆ.

ಒಂದು ಸಂದರ್ಶನ ಈ ಪರಿ ಚರ್ಚೆ, ವಾದ-ವಿವಾದ, ಕೋಲಾಹಲ ಸೃಷ್ಟಿಸಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ಸಂದರ್ಶನ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರಿಗೂ ಸಂದರ್ಶಿಸಿದ 'ಟೈಮ್ಸ್‌ನೌ' ಟಿವಿ ಚಾನೆಲ್‌ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೂ ಇದು ಗೊತ್ತಿದ್ದಿರಲಿಕ್ಕಿಲ್ಲ. ಗೊತ್ತಿದ್ದರೆ ರಾಹುಲ್‌ಗಾಂಧಿಯವರು ಖಂಡಿತವಾಗಿಯೂ ಈ ಉಸಾಬರಿಗೆ ಹೋಗುತ್ತಿರಲಿಲ್ಲವೇನೋ? ನಮಾಜ್ ಮಾಡಲು ಹೋಗಿ ಮಸೀದಿಯನ್ನೇ ಮೈ ಮೇಲೆ ಕೆಡವಿಕೊಂಡರು ಅಂತಾರಲ್ಲ, ರಾಹುಲ್ ಪಾಡು ಆ ರೀತಿ ಆಗಿದೆ.
1984ರಲ್ಲಿ ಇಂದಿರಾಗಾಂಧಿ ಹತ್ಯೆ ನಂತರ ಸಂಭವಿಸಿದ ಸಿಖ್ಖರ ನರಮೇಧದ ಕುರಿತು ಕೇಳಿದ ಪ್ರಶ್ನೆಗಳಿಗೆ ರಾಹುಲ್ ಸಮರ್ಪಕ ಉತ್ತರ ನೀಡಲಿಲ್ಲ. ಅದಕ್ಕಿಂತ ಹೆಚ್ಚಾಗಿ ಯಡವಟ್ಟು ಮಾಡಿಕೊಂಡರು. ಸಿಖ್ ನರಮೇಧದಲ್ಲಿ ಕೆಲವು ಕಾಂಗ್ರೆಸ್ಸಿಗರು ಪಾಲ್ಗೊಂಡಿದ್ದಿರಬಹುದು ಎಂದರು. ಅವರ ಹೆಸರನ್ನು ಹೇಳ್ತೀರಾ ಎಂದು ಕೇಳಿದಾಗ ಇನ್ನೇನೋ ಹೇಳಿದರು. ಅರ್ನಾಬ್ ಗೋಸ್ವಾಮಿ ಸಿಖ್ ನರಮೇಧದ ಬಗ್ಗೆ ಪದೇ ಪದೆ ಕೇಳಿದಾಗ, ಗುಜರಾತ್ ನರಮೇಧದ ಬಗ್ಗೆ ಪ್ರಸ್ತಾಪಿಸಿದರು. ನರೇಂದ್ರ ಮೋದಿಯವರನ್ನು ಟೀಕಿಸಿದರು. ಮೋದಿಗೆ ಎಲ್ಲ ಕೋರ್ಟುಗಳು ಕ್ಲೀನ್‌ಚಿಟ್ ನೀಡಿವೆಯಲ್ಲ ಎಂದಾಗ, 'ಗುಜರಾತ್ ಹಾಗೂ ಸಿಖ್ ನರಮೇಧಕ್ಕೆ ವ್ಯತ್ಯಾಸವಿದೆ. ಗುಜರಾತ್ ನರಮೇಧ ಮೋದಿ ಪ್ರಾಯೋಜಿತ' ಎಂದು ಬಿಟ್ಟರು. 'ಹೇಗೆ ಹೇಳ್ತೀರಾ? ನಿಮ್ಮ ವಾದವನ್ನು ವಿವರಿಸಿ' ಎಂದಾಗ ಹೇಳಿದ್ದನ್ನೇ ಮೂರು ಸಲ ಹೇಳಿದರು. ಸಮರ್ಪಕ ಉತ್ತರಕ್ಕೆ ತಡಕಾಡಿದರು.
'ನೀವೇಕೆ ಸಿಖ್ ಹತ್ಯಾಕಾಂಡಕ್ಕೆ ಪ್ರಾಯಶ್ಚಿತ್ತವಾಗಿ ಕ್ಷಮೆಯಾಚಿಸಬಾರದು?' ಎಂದು ಗೋಸ್ವಾಮಿ ಪುನಃ ಪುನಃ ಕೇಳಿದಾಗ, 'ಆ ಹತ್ಯಾಕಾಂಡದಲ್ಲಿ ನಾನು ಭಾಗವಹಿಸಿರಲಿಲ್ಲ' ಎಂದುಬಿಟ್ಟರು. ಪುಣ್ಯವಶಾತ್ ಗೋಸ್ವಾಮಿ 'ಪ್ರಧಾನಿ ಡಾ. ಮನಮೋಹನಸಿಂಗ್ ಅವರೂ ಹತ್ಯಾಕಾಂಡದಲ್ಲಿ ಭಾಗವಹಿಸಿರಲಿಲ್ಲ. ಸೋನಿಯಾಗಾಂಧಿಯವರೂ ಪಾಲ್ಗೊಂಡಿರಲಿಲ್ಲ. ಆದರೂ ಅವರು ಕ್ಷಮೆಯಾಚಿಸಿದ್ದೇಕೆ? ನೀವ್ಯಾಕೆ ಹಾಗೆ ಮಾಡುತ್ತಿಲ್ಲ?' ಎಂದು ಕೇಳಲಿಲ್ಲವೆನ್ನಿ. ಆದರೂ ರಾಹುಲ್ ಅವರು, 'ಹತ್ಯಾಕಾಂಡ ನಡೆದಾಗ ಕಾಂಗ್ರೆಸ್‌ನಲ್ಲಿ ನಾನು ಸಕ್ರಿಯನಾಗಿರಲಿಲ್ಲ' ಎನ್ನುವ ಮೂಲಕ ಕ್ಷಮೆಯಾಚಿಸಬೇಕಿಲ್ಲ ಎಂದು ಪರೋಕ್ಷವಾಗಿ ಹೇಳಿ  'ಸಣ್ಣ ಬುದ್ಧಿ' ಮೆರೆದರು. ಅವರ ಮಾತುಗಳನ್ನು ಕೇಳುತ್ತಿದ್ದವರಿಗೆ 'ಅಯ್ಯೋ ಪಾಪ' ಎಂದು ಕನಿಕರ ಮೂಡುತ್ತಿತ್ತು.
ನೇರ, ದಿಟ್ಟ, ಉಡಾಫೆಯ, ಮುಲಾಜಿಲ್ಲದ, ಧೀಡಶಾಣೆ ಪ್ರಶ್ನೆ ಕೇಳುವುದರಲ್ಲಿ ಎತ್ತಿದ ಕೈ ಅರ್ನಾಬ್ ಗೋಸ್ವಾಮಿಗೂ ತಮ್ಮ ಪ್ರಶ್ನೆಗಳಿಂದ ಇನ್ನಷ್ಟು ಚುಚ್ಚಿದರೆ 'ಬಾಲಾಪರಾಧ' ಆರೋಪಕ್ಕೆ ತುತ್ತಾಗುತ್ತೇನೆಂದು ಅನಿಸಿರಬೇಕು. ಬೇರೆ ಪ್ರಶ್ನೆಗಳಿಗೆ ಜಿಗಿದರು.
ಆದರೆ ಅವರ ಸಂದರ್ಶನ ಪ್ರಸಾರವಾದಂದಿನಿಂದ ಟಿವಿ, ಪತ್ರಿಕೆಗಳಲ್ಲಿ ರಾಹುಲ್ ಸಿಖ್ ಹತ್ಯಾಕಾಂಡದ ಬಗೆಗಿನ ಹೇಳಿಕೆ ಬಿಸಿಬಿಸಿ ಚರ್ಚೆಗೆ, ಕೋಲಾಹಲಕ್ಕೆ ಗ್ರಾಸ ಒದಗಿಸಿದೆ. ಮೂವತ್ತು ವರ್ಷಗಳ ಹಿಂದೆ ನಡೆದ, ಬಹುತೇಕ ಜನರ ನೆರವಿನಿಂದ ಮರೆಯಾದ ಒಂದು ದುರ್ಘಟನೆ ಪುನಃ ರಾಷ್ಟ್ರೀಯ ಪ್ರಮುಖ ಚರ್ಚಾಬಿಂದುವಾಗಿ ಪರಿಣಮಿಸಿದೆ. ಇದು ಮುಂಬರುವ ಲೋಕಸಭಾ ಚುನಾವಣೆಯ ಪ್ರಮುಖ ವಿಷಯಗಳಲ್ಲೊಂದಾಗುವ ಅಪಾಯವಿದೆ. ಹೋದಲ್ಲಿ ಬಂದಲ್ಲಿ ಗುಜರಾತ್ ನರಮೇಧದ ಬಗ್ಗೆ ಮೋದಿಯವರನ್ನು ಹಣಿಯುತ್ತಿದ್ದ ರಾಹುಲ್‌ಗಾಂಧಿ ಹಾಗೂ ಅವರ ಪಕ್ಷದ ನಾಯಕರಿಗೆ ಕೋಲು ಕೊಟ್ಟು ಹೊಡೆಸಿಕೊಂಡೆವಾ ಎಂದು ಅನಿಸಲಾರಂಭಿಸಿದೆ. ರಾಹುಲ್ ಗಾಂಧಿಯವರೇನೋ ಸಂದರ್ಶನ ಕೊಟ್ಟು ಹೊರಟುಬಿಟ್ಟರು. ಆದರೆ ಕಾಂಗ್ರೆಸ್ ವಕ್ತಾರರ ಪಾಡು ಯಾರಿಗೂ ಬೇಡ. ಎಲ್ಲ ಟಿವಿ ಚಾನೆಲ್‌ಗಳಲ್ಲಿ ಅವರು ತಡಬಡಿಸುವುದು ರಾಷ್ಟ್ರೀಯ ತಮಾಷೆಯಾಗಿಬಿಟ್ಟಿದೆ. ಖಾಸಗಿಯಾಗಿ ಪತ್ರಕರ್ತರ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳಲಾರಂಭಿಸಿದ್ದಾರೆ.
ರಾಹುಲ್ ಗಾಂಧಿಯವರ ಸಂದರ್ಶನದ ಬಗ್ಗೆ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಜತೆ ಮಾತಾಡುತ್ತಿದ್ದೆ. 'ನಿಮ್ಮ ನಾಯಕರ ಸಂದರ್ಶನ ಹೇಗಿತ್ತು? ನಿಮಗೆ ಏನನಿಸಿತು?' ಎಂದು ಕೇಳಿದೆ. 'ಬೆಂಗಳೂರಿನಲ್ಲಿ ಸಂಕ್ರಾಂತಿ ಮುಗಿಯುತ್ತಿದ್ದಂತೆ ನಿಧಾನವಾಗಿ ಸೆಕೆ ಶುರುವಾಗುತ್ತದೆ. ಎರಡು-ಮೂರು ದಿನಗಳ ತಾಪಮಾನ ನೋಡಿದರೆ ಹಾಗೆ ಅನಿಸುವುದಿಲ್ಲವಾ?' ಎಂದರು. ನನ್ನ ಪ್ರಶ್ನೆಯನ್ನು ಸರಿಯಾಗಿ ಗ್ರಹಿಸಿರಲಿಕ್ಕಿಲ್ಲವೆಂದು, 'ರಾಹುಲ್ ಗಾಂಧಿ ಟೈಮ್ಸ್ ನೌ ಚಾನೆಲ್‌ಗೆ ನೀಡಿದ ಸಂದರ್ಶನ ನೋಡಿದಿರಾ?' ಎಂದು ಕೇಳಿದೆ. 'ನೋಡಿದೆ...ನೋಡಿದೆ... ನಾವು ಮಹಿಳಾ ಸಬಲೀಕರಣಕ್ಕೆ, ಮಾಹಿತಿ ಹಕ್ಕು ಜಾರಿಗೆ ಬಹಳ ಆಸ್ಥೆ ವಹಿಸಿದ್ದೇವೆ' ಎಂದರು. ನನಗೆ ನಗು ತಡೆದುಕೊಳ್ಳಲಾಗಲಿಲ್ಲ. ಅವರು ತಮ್ಮ ನಾಯಕ ರಾಹುಲ್‌ಗಾಂಧಿ ಸಂದರ್ಶನದಲ್ಲಿ ಹೇಳಿದ್ದನ್ನು ವ್ಯಂಗ್ಯ ಮಾಡಿ ಅಣಕಿಸುತ್ತಿದ್ದಾರೆಂದು ತಟ್ಟನೆ ಗೊತ್ತಾಯಿತು. ನನ್ನ ನಗೆ ಕೇಳಿ ಅವರೂ ಬಿದ್ದೂ ಬಿದ್ದು ನಕ್ಕರು. ಮುಂದಿನ ಮೂರು ನಿಮಿಷ ನಮ್ಮ ನಡುವೆ ನಗುವಿನ ಹೊರತಾಗಿ ಮತ್ತೇನೂ ಇರಲಿಲ್ಲ.
ಸಂದರ್ಶನದಲ್ಲಿ ಅರ್ನಾಬ್ ಪ್ರಶ್ನೆಗೆ ರಾಹುಲ್ ಸಂಬಂಧವೇ ಇಲ್ಲದ ಉತ್ತರ ಕೊಡುತ್ತಿದ್ದರು. ಆ ಪ್ರಶ್ನೆ ಬದಲಿಸಿ, ಬೇರೆ ಪ್ರಶ್ನೆ ಕೇಳಿದರೆ, ಹಿಂದಿನ ಪ್ರಶ್ನೆಗೆ ನೀಡಿದ ಉತ್ತರವನ್ನೇ ನೀಡುತ್ತಿದ್ದರು. (ಇಲ್ಲಿ ನನಗೆ ನಾಟಕಕಾರ ಯಶವಂತ ಸರದೇಶಪಾಂಡೆ ತಮ್ಮ ರಾಶಿಚಕ್ರ ನಾಟಕದಲ್ಲಿ ಹೇಳುವ ಜೋಕು ನೆನಪಾಗುತ್ತಿದೆ. ಅದನ್ನು ಕೊನೆಯಲ್ಲಿ ಹೇಳುವೆ) ಗೋಸ್ವಾಮಿ ಪ್ರಶ್ನೆಗಳಿಗೆ ಡೆಮಾಕ್ರಸಿ, ಮಾಹಿತಿ ಹಕ್ಕು, ಮಹಿಳಾ ಸಬಲೀಕರಣ, ವ್ಯವಸ್ಥೆ ಸುಧಾರಣೆ... ಈ ನಾಲ್ಕರ ಪೈಕಿ ಯಾವುದಾದರೂ ಒಂದು ಅಥವಾ ಎಲ್ಲವುಗಳ ಪ್ರಸ್ತಾಪವಾಗುತ್ತಿತ್ತು. ರಾಹುಲ್ ತಮ್ಮ 'ಖಾಲಿ'ತನವನ್ನು ಪದೇ ಪದೆ ಬರಿದು ಮಾಡಿ ತೋರಿಸುತ್ತಿದ್ದಾರೆಂದು ಯಾರಿಗಾದರೂ ಅನಿಸುತ್ತಿತ್ತು. ಬಾಯಿಪಾಠ ಮಾಡಿ ಬಂದ ವಿದ್ಯಾರ್ಥಿ ಮುಂದೆ ಪ್ರಶ್ನೆ ಕೇಳಿದಾಗ, ಸಂಬಂಧಪಡದಿದ್ದರೂ ಬಾಯಿಪಾಠ ಮಾಡಿದ್ದೆಲ್ಲವನ್ನೂ ಒಪ್ಪಿಸುತ್ತಾರಲ್ಲ, ಆ ರೀತಿ ರಾಹುಲ್ ಮಾತಾಡುತ್ತಿದ್ದುದು ಭಲೇ ತಮಾಷೆಯಾಗಿತ್ತು.
ಇಷ್ಟೇ ಸಾಕಾಯಿತು. ಸಾಮಾಜಿಕ ತಾಣಗಳಾದ ಟ್ವಿಟರ್ ಮತ್ತು ಫೇಸ್ ಬುಕ್‌ಗಳಲ್ಲಿ ರಾಹುಲ್ ಕುರಿತು ಜೋಕುಗಳು ಹರಿದಾಡಲಾರಂಭಿಸಿದವು. ಈ ಒಂದು ಸಂದರ್ಶನ ನೋಡಿ ಬಂದ ಟ್ವೀಟ್‌ಗಳು ಮೂವತ್ತು ಲಕ್ಷ! ಇಂಪ್ರೆಶನ್‌ಗಳು 296 ದಶಲಕ್ಷ! 21ರಿಂದ 40ರ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅರ್ನಾಬ್ ಬ್ರೇಕ್ ತೆಗದುಕೊಂಡಾಗಲೆಲ್ಲ ಟ್ವೀಟ್‌ಗಳು ತಾರಕಕ್ಕೇರುತ್ತಿದ್ದರು. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಗುಜರಾತ್ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಟ್ವೀಟ್‌ಗಳು ಬಂದವು.
ಟ್ವಿಟರ್‌ನಲ್ಲಿ ರಾಹುಲ್‌ಗಾಂಧಿ  ಪಪ್ಪು ಅಂತಾನೆ ಪ್ರಸಿದ್ಧ. (ಪಪ್ಪು ಅಂದ್ರೆ ಪೆದ್ದ, ಮೊದ್ದ ಎಂದರ್ಥ). ಟ್ವಿಟರ್‌ನಲ್ಲಿ ರಾಹುಲ್ ವಿರೋಧಿಗಳು ಹಾಗೆ ಕರೆಯುವುದಕ್ಕೂ, ರಾಹುಲ್ ಶುದ್ಧ ಪೆಕರನಂತೆ ಸಂದರ್ಶನದಲ್ಲಿ ಮಾತಾಡಿದ್ದಕ್ಕೂ ಸರಿಹೋಯಿತು. ಕ್ಷಣ ಕ್ಷಣಕ್ಕೂ ಹೊಸ ಹೊಸ ಜೋಕುಗಳು, ವಕ್ರತಂಡೋಕ್ತಿಗಳು ಹುಟ್ಟಿಕೊಂಡು ಟ್ವಿಟರ್‌ನಲ್ಲಿ ಹರಿದಾಡಿ, ರೀಟ್ವೀಟ್ ಆಗಿ , ಡಬ್ಕುಡಬಲ್ ಆಗುತ್ತಿದ್ದವು. ಸಂದರ್ಶನ ಪ್ರಸಾರವಾಗುವ ಮೊದಲು ಸುಮ್ಮನೆ ತಮಾಷೆಗೆ ನಾನೊಂದು ಟ್ವೀಟ್ ಮಾಡಿದೆ-'ಇಂದು ರಾತ್ರಿ ಅರ್ನಾಬ್ ಗೋಸ್ವಾಮಿ 'ಟೈಮ್ಸ್‌ನೌ' ಚಾನೆಲ್‌ನಲ್ಲಿ ರಾಹುಲ್‌ಗಾಂಧಿಯವರನ್ನು ಸಂದರ್ಶಿಸಲಿದ್ದಾರೆ. ಇದು ಪೋಗೋ ಅಥವಾ ಕಾರ್ಟೂನ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಕಟವಾಗಿದ್ದರೆ ಚೆನ್ನಾಗಿರುತ್ತಿತ್ತು.' (ಪೋಗೋ ಹಾಗೂ ಕಾರ್ಟೂನ್ ನೆಟ್‌ವರ್ಕ್ ಚಾನೆಲ್‌ಗಳನ್ನು ನೋಡುವವರು ಹೆಚ್ಚಾಗಿ ಮಕ್ಕಳು) ಇದೊಂದೇ ಟ್ವೀಟ್‌ನ್ನು ನೂರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದರು.
ಅರ್ನಾಬ್ ಕೇಳಿದ ಪ್ರಶ್ನೆ ರಾಹುಲ್ ನೀಡಿದ ಅಸಂಬದ್ಧ ಉತ್ತರಗಳನ್ನು ಅಣಕಿಸಿ ಸಾವಿರಾರು ಜೋಕುಗಳು ಹರಿದುಬಂದವು. ಆ ಪೈಕಿ ಕೆಲವು ಕಾಲ್ಪನಿಕ ಪ್ರಶ್ನೆ, ಉತ್ತರಗಳು.
ಅರ್ನಾಬ್: ಬೇರೆ ಗ್ರಹಗಳಿಂದ ಭಾರತದ ಮೇಲೆ ದಾಳಿ ಆಗುವ ಸಾಧ್ಯತೆಯಿದೆಯಾ?
ರಾಹುಲ್: ನಿಮಗೆ ಗೊತ್ತಿರಲಿ, ನಮ್ಮ ಸರ್ಕಾರವೇ ಮಾಹಿತಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದ್ದು.
ಅರ್ನಾಬ್: ಬೆಲೆ ಏರಿಕೆ ತಡೆಗಟ್ಟಲು ಯಾವ ಕ್ರಮ ಕೈಗೊಂಡಿದ್ದೀರಿ?
ರಾಹುಲ್: ಮಹಿಳೆಯರ ಸಬಲೀಕರಣ ನನ್ನ ಪ್ರಮುಖ ಆದ್ಯತೆ.
ಅರ್ನಾಬ್: ಮೊದಲು ಬಂದಿದ್ದು ಕೋಳಿಯಾ? ಮೊಟ್ಟೆಯಾ?
ರಾಹುಲ್: ನಾವು ಮೊದಲು ಕೋಳಿ ಸಬಲೀಕರಣಗೊಳಿಸಬೇಕು ಹಾಗೂ ಮೊಟ್ಟೆಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ತರಬೇಕು.
ಒಂದಕ್ಕೊಂದು ಸಂಬಂಧವೇ ಇಲ್ಲ. ಮೆಚ್ಚಬೇಕಾದ ಅಂಶವೆಂದರೆ ರಾಹುಲ್‌ಗಾಂಧಿ ಆತ್ಮವಿಶ್ವಾಸ. ಶುದ್ಧ ಪೆಕರನಂತೆ ಮಾತಾಡುತ್ತಿದ್ದರೂ, ಆ ದನಿಯಲ್ಲಿ ಅದಮ್ಯ ಆತ್ಮವಿಶ್ವಾಸವಿತ್ತು! ತಪ್ಪನ್ನೂಸರಿಯಾಗಿ ಮಾತಾಡುತ್ತಿದ್ದರು!
ಈಗ ಯಶವಂತರ ರಾಶಿಚಕ್ರದ ನಿರೂಪಣೆಗೆ ಬರುವುದಾದರೆ: ಮೀನರಾಶಿಯವರ ವಿಶೇಷ ಗುಣವೆಂದರೆ ಅವರು ವಿಷಯವನ್ನು ಪೂರ್ತಿಯಾಗಿ ತಿಳಿದುಕೊಳ್ಳುವುದಿಲ್ಲ. ಅರ್ಧ ಮಾತ್ರ ತಿಳಿದುಕೊಂಡು ಎಲ್ಲ ತಿಳಿದಿದೆ ಎಂಬಂತೆ ವರ್ತಿಸುತ್ತಾರೆ. ಒಮ್ಮೆ ಮೀನರಾಶಿಯವನಿಗೆ ಕೆಲಸಕ್ಕಾಗಿ ಇಂಟರ್‌ವ್ಯೂಗೆ ಕರೆ ಬಂತು. ಈತನ ಗೆಳೆಯನೂ ಅದೇ ಉದ್ದೇಶಕ್ಕೆ ಜತೆಗೂಡಿದ. ಮೊದಲು ಗೆಳೆಯನ ಪಾಳಿ. ಹೀಗಾಗಿ ಈತ ಹೊರಗೇ ಕುಳಿತ. ಗೆಳೆಯನಿಗೆ ಸಂದರ್ಶಕರು ಕೇಳುತ್ತಿದ್ದ ಪ್ರಶ್ನೆಗಳು ಈತನಿಗೆ ಕೇಳುತ್ತಿರಲಿಲ್ಲ. ಆದರೆ ಗೆಳೆಯ ದೊಡ್ಡದಾಗಿ ಮಾತನಾಡುತ್ತಿದ್ದನಾದ್ದರಿಂದ ಅವನ ಉತ್ತರಗಳು ಕೇಳುತ್ತಿದ್ದವು.
ಮೊದಲ ಪ್ರಶ್ನೆ: ನಮ್ಮ ರಾಷ್ಟ್ರಪತಿಗಳು ಯಾರು?
ಗೆಳೆಯನ ಉತ್ತರ: ಪ್ರಣಬ್ ಮುಖರ್ಜಿ
ಎರಡನೇ ಪ್ರಶ್ನೆ: ನಮ್ಮ ದೇಶ ಯಾವಾಗ ಸ್ವತಂತ್ರವಾಯಿತು?
ಗೆಳೆಯನ ಉತ್ತರ: 1942ರಿಂದ ಪ್ರಯತ್ನ ತೀವ್ರವಾಗಿತ್ತು. 1947ರಲ್ಲಾಯಿತು.
ಮೂರನೇ ಪ್ರಶ್ನೆ: ಭೂಮಿ ಚಪ್ಪಟೆಯಾಗಿದೆ ಎಂಬ ವಾದವಿದೆ. ನಿಮ್ಮ ಅಭಿಪ್ರಾಯವೇನು?
ಗೆಳೆಯನ ಉತ್ತರ: ಅದನ್ನು ಕೆಲ ಸೈಂಟಿಸ್ಟ್‌ಗಳು ರಿಸರ್ಚ್ ಮಾಡುತ್ತಿದ್ದಾರೆ. ಉತ್ತರ ಖಾತ್ರಿ ಮಾಡಿಕೊಂಡು ಹೇಳಬಹುದು.
ಅವನ ಇಂಟರ್‌ವ್ಯೂ ಮುಗಿಯಿತು. ಕದ್ದು ಕೇಳಿದ ಉತ್ತರಗಳಿಂದ ಸಿದ್ಧನಾಗಿದ್ದ ಮೀನ ಒಳಹೋದ. ಅಲ್ಲಿ ಪ್ರಶ್ನೆಗಳು ಬದಲಾಗಿದ್ದವು. ಮೀನನ ಉತ್ತರಗಳು ಹೇಗಿದ್ದವು ನೋಡಿ.
ಪ್ರಶ್ನೆ: ನಿಮ್ಮ ಹೆಸರೇನು?
ಮೀನ: ಪ್ರಣಬ್ ಮುಖರ್ಜಿ
ಪ್ರಶ್ನೆ: ನಿಮ್ಮ ಜನ್ಮ ಯಾವಾಗ ಆಯಿತು?
ಮೀನ: 1942ರಿಂದ ಪ್ರಯತ್ನ ನಡೆದಿತ್ತು, 1947ರಲ್ಲಾಯಿತು.
ಸಂದರ್ಶಕ ಗಾಬರಿಯಿಂದ: ನಿಮಗೇನಾದರೂ ತಲೆ ಸರಿ ಇದೆಯೇನ್ರಿ?
ಮೀನ: ಅದನ್ನು ಕೆಲ ಸೈಂಟಿಸ್ಟ್‌ಗಳು ರಿಸರ್ಚ್ ಮಾಡುತ್ತಿದ್ದಾರೆ. ಉತ್ತರ ಖಾತ್ರಿ ಮಾಡಿಕೊಂಡು ಹೇಳಬಹುದು.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.