ಅಸ್ಮಿತೆಯ ಅಖಾಡದಲ್ಲಿ ಕನ್ನಡಿಗರೇ ಅತಂತ್ರರು!
ಅಸ್ಮಿತೆಯ ಅಖಾಡದಲ್ಲಿ ಕನ್ನಡಿಗರೇ ಅತಂತ್ರರು!
ಭಾಷೆ ಮತ್ತು ಧರ್ಮ..!
ಮನಸ್ಸು, ವ್ಯಕ್ತಿ, ಸಮುದಾಯ, ರಾಜ್ಯ, ದೇಶಗಳ ನಡುವೆ ದ್ವೇಷದ 'ದಾವಾ ನೆಲ'ವನ್ನು ಹೊತ್ತಿಸುವುದಕ್ಕೆ ಈ ಎರಡು ಸಂಗತಿಗಿಂತ ತೀಕ್ಷ ್ಣವಾದ ವಸ್ತು ಇನ್ನೊಂದಿಲ್ಲ.
ಸಮಾಜ, ದೇಶ, ರಾಜ್ಯವನ್ನು ಒಗ್ಗೂಡಿಸುವುದರಲ್ಲಿ ಈ ಎರಡು ವಿಚಾರಕ್ಕೆ ಎಷ್ಟು ಶಕ್ತಿ ಇದೆಯೋ ಅವನ್ನು ಮೀರಿಸುವ ರೀತಿಯಲ್ಲಿ ವಿಚ್ಛಿದ್ರ ಸಷ್ಟಿಸುವುದರಲ್ಲಿ ಭಾಷೆ ಮತ್ತು ಧರ್ಮದ ಅಸ್ಮಿತೆಯಲ್ಲಿ ನಡೆಯುವ ಹೋರಾಟ ಪೆಟ್ರೋಲ್ ಇಲ್ಲದೇ, ಬೆಂಕಿ ಇಲ್ಲದೇ ಧಗಧಗಿಸಿ ವ್ಯವಸ್ಥೆಯನ್ನು ಸುಟ್ಟು ಹಾಕಬಲ್ಲದು. ಇದಕ್ಕೆ ಜ್ವಲಂತ ಉದಾಹರಣೆ ಹುಡುಕಲು ವಿಶ್ವಪರ್ಯಟನೆ ನಡೆಸಬೇಕಿಲ್ಲ. ನಮ್ಮ ದೇಶದ ಇತಿಹಾಸವನ್ನು ಮೆಲುಕು ಹಾಕಿದರೂ ಸಾಕು. ಭಾಷಾ ಅಸ್ಮಿತೆಯಿಂದಲೇ ಬಾಂಗ್ಲಾ ಹುಟ್ಟಿತು. ಧರ್ಮದ ಅಸ್ಮಿತೆಯಿಂದಲೇ ದೇಶ ಇಬ್ಭಾಗವಾಗಿ ಪಾಕಿಸ್ತಾನ ಸಷ್ಟಿಯಾಯಿತು.
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದಲ್ಲಿ ರಾಜ್ಯ ಸಷ್ಟಿಯಾಗಿದ್ದೇ ಭಾಷೆ ಆಧಾರದ ಮೇಲೆ. ಭಾಷಾವಾರು ಪ್ರಾಂತ್ಯ ರಚನೆಗೆ ಪರ-ವಿರೋಧವಿದ್ದರೂ ಕೊನೆಯಲ್ಲಿ ಅದರ ಬಲದ ಮೇಲೆ ರಾಜ್ಯ ರಚನೆಯಾಗಿವೆ. ನಾವು ಭಾರತಾಂಬೆಯ ಕುಡಿಯಾಗುವುದರ ಜತೆಗೆ ಕನ್ನಡಮ್ಮನ ಕೂಸುಗಳೂ ಹೌದು. ಅದೇ ರೀತಿ ಬೇರೆ ಬೇರೆ ಭಾಷಿಕರಿಗೂ ಅವರದ್ದೇ ಆದ ಮಾತೃಭಾಷೆ ಇದೆ. ಆದರೆ ಈ ಭಾಷಾ ತಿಕ್ಕಾಟದ ಬಿಸಿಯನ್ನು ಕನ್ನಡಿಗರಾದ ನಾವು ಅನುಭವಿಸಿದಷ್ಟನ್ನು ಬೇರೆಯವರು ಕಂಡಿರಲಾರರು!
ಇದಕ್ಕೆ ಕಾರಣ ನಮ್ಮ ಭೌಗೋಳಿಕ ಸ್ಥಿತಿ. ಭಾಷಾ ಅಸ್ಮಿತೆ ಒಮ್ಮೊಮ್ಮೆ ಅತಿ ಎನಿಸುವಷ್ಟು ನಮ್ಮ ಸುತ್ತ ಇದೆ. ಅಕ್ಕಪಕ್ಕದ ಎಲ್ಲ ರಾಜ್ಯಗಳು ನಮ್ಮ ಜತೆ ನೆಲ, ಜಲ, ಭಾಷೆಯ ವಿಚಾರದಲ್ಲಿ ನಿತ್ಯ ಖಡ್ಗ ಝಳಪಿಸುತ್ತಲೇ ಇವೆ. ಇಷ್ಟು ದೀರ್ಘ ಪೀಠಿಕೆ ಹಾಕುವುದಕ್ಕೆ ಕಾರಣ ಕಳೆದ ತಿಂಗಳಿನಿಂದ ನಾವು ಅನುಭವಿಸುತ್ತಿರುವ ಭಾಷಿಕ ಜಗಳ. ಗೋವಾದಲ್ಲಿ ಕನ್ನಡಿಗರನ್ನು ಬೀದಿಗೆ ತಳ್ಳಿದ ಪ್ರಕರಣ ಮರೆಯುವುದಕ್ಕೆ ಮುನ್ನವೇ ಬೆಳಗಾವಿಯಲ್ಲಿ ಎಂಇಎಸ್ ಪ್ರೇರಿತ ಮರಾಠಿ ಗದ್ದಲ ಆರಂಭವಾಗಿದೆ. ಇವೆರಡಕ್ಕೂ ನಮ್ಮ ರಾಜ್ಯ ಸರ್ಕಾರದಿಂದ ತಕ್ಕ ಉತ್ತರ ಲಭಿಸಿದೆಯಾದರೂ ಇಷ್ಟು ವರ್ಷದ ಸಹನೆಗೆ, ನಿರ್ಲಕ್ಷ್ಯಕ್ಕೆ ಕ್ಷಮೆ ಇಲ್ಲ.
ಮರಾಠಿಗರ ಉಪದ್ಯಾಪದ ಬಗ್ಗೆ ಚರ್ಚಿಸುವುದಕ್ಕೆ ಮುನ್ನ ಗೋವಾ ಕನ್ನಡಿಗರ ಸಮಸ್ಯೆ ಬಗ್ಗೆ ಇಲ್ಲಿ ಪ್ರಸ್ತಾಪಿಸಲೇಬೇಕು. ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುವಾಗ ಗೋವಾ ಸರ್ಕಾರ ಬೈನಾ ಬೀಚ್‌ನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ ಕನ್ನಡಿಗರ ಮುಂದಲೆಗೆ ಕೈ ಇಟ್ಟು ಅವರನ್ನು ನಿರ್ವಸತಿಗರನ್ನಾಗಿ ಮಾಡಲು ಮುಂದಾಯ್ತು. ಉತ್ತರ ಕರ್ನಾಟಕ ಭಾಗದದಿಂದ ಗುಳೆ ಹೋಗಿ ಕಡಲ ತಡಿಯಲ್ಲಿ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದ ಅಮಾಯಕ ಕನ್ನಡಿಗರು ಗೋವಾ ಸರ್ಕಾರಕ್ಕೆ ಭಾರವಾದರು. ಮೊದಲಿನಿಂದಲೂ ಗೋವನ್ನರಿಗೆ ಇಲ್ಲಿ ಜೀವನ ಸಾಗಿಸುವ ಕನ್ನಡಿಗರ ಮೇಲೆ ಪೂರ್ವಾಗ್ರಹ. ಪ್ರತಿ ವರ್ಷವೂ ಕನ್ನಡಿಗರನ್ನು ಹೊರಗಟ್ಟುವ ಪ್ರಯತ್ನವನ್ನು ಅಲ್ಲಿನ ಜನ ಮತ್ತು ಸರ್ಕಾರ ಮಾಡುತ್ತಲೇ ಇದ್ದಾರೆ. ಈ ಬಾರಿಯೂ ಅದೇ ಕ್ರಮಕ್ಕೆ ಗೋವಾದ ಮನೋಹರ ಪಾರಿಕ್ಕರ್ ಸರ್ಕಾರ ಮುಂದಾಯ್ತು. ಆದರೆ, ಅದಕ್ಕೆ ಆಯ್ದುಕೊಂಡ ಸಮಯ ಎಂಥದ್ದು?
ಒಂದೆಡೆ ಭೋರ್ಗರೆಯುವ ಸಮುದ್ರ, ಇನ್ನೊಂದೆಡೆ ಧೋ ಎಂದು ಸುರಿಯುವ ಮಳೆ. ಮಾನವೀಯತೆಯನ್ನು ಮರೆತ ಗೋವಾ ಸರ್ಕಾರ, ಕನ್ನಡಿಗರ ಮನೆಗಳನ್ನು ನೆಲಸಮಗೊಳಿಸಿ ಬೀದಿಯಲ್ಲಿ ನಿಲ್ಲಿಸಿತು. ಮಾತ್ರವಲ್ಲ ಪುನರ್ವಸತಿ ಕೇಂದ್ರ ನಿರ್ಮಿಸದೆ ಸತಾಯಿಸಿತು. ಪುನರ್ವಸತಿ ಕೇಂದ್ರದಲ್ಲಿ ನಿರಾಶ್ರಿತರನ್ನು ಇರಿಸಿಕೊಳ್ಳುವುದಕ್ಕೆ ಕೇಂದ್ರದ 'ಪ್ರಕೃತಿ ವಿಕೋಪ ನಿಯಮ'ದ ಪ್ರಕಾರ 7 ದಿನ ಮಾತ್ರ ಇರಿಸಿಕೊಳ್ಳಲು ಸಾಧ್ಯ. ಬೇಕಿದ್ದರೆ ಇರಿ, ಇಲ್ಲವಾದರೆ ನಿಮ್ಮ ದಾರಿ ನಿಮಗೆ ಎಂದು ಕರ್ನಾಟಕದತ್ತ ಕೈ ತೋರಿಸಿತು. ಕ್ರೌರ್ಯಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?
ಸಂವಿಧಾನದ ಪ್ರಕಾರ ಭಾರತೀಯ ಪ್ರಜೆ ದೇಶದ ಯಾವ ಮೂಲೆಯಲ್ಲಿ ಬೇಕಾದರೂ ಬದುಕುವ ಹಕ್ಕನ್ನು ಹೊಂದಿದ್ದಾನೆ. ಆದರೆ ಭಾಷೆಯ ಆಧಾರದ ಮೇಲೆ ನಮ್ಮವರನ್ನು ಪರಕೀಯರಂತೆ ಕಂಡ ಗೋವಾ ಸರ್ಕಾರ ಅಮಾನವೀಯತೆ ಮೆರೆಯಿತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುವವರೆಗೂ ನಮ್ಮ ಸರ್ಕಾರಕ್ಕೆ ಗೋವಾದಲ್ಲಿ ನಡೆಯುತ್ತಿರುವ ಕನ್ನಡಿಗರ ಮೇಲಿನ ದೌರ್ಜನ್ಯ ಕಣ್ಣಿಗೆ ಬೀಳಲಿಲ್ಲ. ಬಿಜೆಪಿ ಮುಖಂಡರು ನೆಪಕ್ಕೆ ಮಾತ್ರ ಮಾತನಾಡಿದರು. ಅವರಿಗೆ ಗೋವಾ ಬಿಜೆಪಿ ಮುಖಂಡರು ಎಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ ಅಳುಕು. ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಗೋವಾಕ್ಕೆ ಹೋಗಿ ಬಂದರಾದರೂ ಸಮಸ್ಯೆಗೆ ಶಾಶ್ವತ ಉತ್ತರ ಇನ್ನೂ ಲಭಿಸಿಲ್ಲ. ಗೋವಾ ಕನ್ನಡಿಗರ ಕಣ್ಣೀರು ಸಮುದ್ರ ಸೇರುತ್ತಲೇ ಇದೆ!
ಇನ್ನು ಯಳ್ಳೂರು. ಮಹಾರಾಷ್ಟ್ರ ಗಡಿ ಭಾಗದ ಈ ಗ್ರಾಮ ಸಹಿತವಾಗಿ ಬೆಳಗಾವಿಯನ್ನೇ ಕಬಳಿಸುವ ಎಂಇಎಸ್ ಮತ್ತು ಶಿವಸೈನಿಕರ ಪುಂಡಾಟಿಕೆ ಇಂದು ನಿನ್ನೆಯದಲ್ಲ. ಯಳ್ಳೂರಿನಲ್ಲಿ ಕಲ್ಲು ನೆಟ್ಟು ಇದು ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ಮಹಾ ಉದ್ಧಟತನವನ್ನು ಎಂಇಎಸ್ ದಶಕಗಳಿಂದ ನಡೆಸುತ್ತಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಎಂಇಎಸ್ ಬೆಳಗಾವಿಯಲ್ಲಿ ಚುನಾವಣೆ ಎದುರಿಸುತ್ತದೆ. ಪಾಲಿಕೆಯ ಅಧಿಕಾರ ಹಿಡಿಯುತ್ತದೆ. ಮಹಾಮೇಳ ನಡೆಸುತ್ತದೆ. ಆದರೆ ಈ ಭಾಷಾ ರಾಜಕಾರಣ ಬೆಳಗಾವಿಯ ಜನಕ್ಕೆ ಬೇಕಿಲ್ಲ. ಆದರೆ ಮಹಾರಾಷ್ಟ್ರದ ರಾಜಕಾರಣಿಗಳಿಗೆ ಮತ್ತು ಎಂಇಎಸ್‌ಗೆ ಮಾತ್ರ ಅನಿವಾರ್ಯ. ಭಾಷಾ ಅಸ್ಮಿತೆಯ ಹೆಸರಿನಲ್ಲಿ ಜನರ ಭಾವನೆಯನ್ನು ಕೆರಳಿಸುತ್ತಾ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಿವೆ.
ಈ ಬಾರಿ ನಡೆದಿದ್ದೂ ಅದೇ. ಯಳ್ಳೂರಿನಲ್ಲಿ ಎಂಇಎಸ್ ಪುಂಡರು ನೆಟ್ಟ ಬೋರ್ಡ್ ತೆರವುಗೊಳಿಸುವಂತೆ ನ್ಯಾಯಾಲಯವೇ ಆದೇಶ ನೀಡಿದೆ. ಆ ಆದೇಶವನ್ನು ಪಾಲಿಸಿದ ನಮ್ಮ ರಾಜ್ಯ ಸರ್ಕಾರಕ್ಕೆ ಸಿಕ್ಕಿದ್ದು 'ಉಗ್ರ'ನ ಪಟ್ಟ. ಬೋರ್ಡ್ ತೆರವುಗೊಳಿಸಿದ್ದ ಕಾರಣಕ್ಕೆ ಬೆಳಗಾವಿಯಲ್ಲಿ ಶಾಂತಿ ಕದಡಿದ ಪುಂಡರನ್ನು ಯಾವ ರಾಜ್ಯ ಸರ್ಕಾರ ಸಹಿಸಿಕೊಳ್ಳುತ್ತದೆ ಹೇಳಿ?
ಗಡಿ ಭಾಗದ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ, ಪತ್ರಕರ್ತರನ್ನು ಒತ್ತೆಯಾಗಿಸಿಕೊಂಡ ಪುಂಡರ ಮೇಲೆ ಲಾಠಿ ಎತ್ತದೆ ಇನ್ನೇನು ಪುಷ್ಪಾರ್ಚನೆ ಮಾಡುತ್ತಾರೆಯೇ? ಆದರೆ ಈ ಘಟನೆಯೇ ಈಗ ಮಹಾರಾಷ್ಟ್ರ ರಾಜಕಾರಣಿಗಳಿಗೆ ದೊಡ್ಡ ವರವಾಗಿ ಪರಿಣಮಿಸಿದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಈಗ ಚುನಾವಣೆಯ ಕಾಲ. ಹಲವು ದಶಕಗಳಿಂದ ಮರಾಠಿ ಅಸ್ಮಿತೆ ಅಲ್ಲಿನ ರಾಜಕಾರಣಿಗಳಿಗೆ 'ಮತ ವರ'ವನ್ನು ನೀಡಿದೆ. ಶರದ್ ಪವಾರ್ ಅವರಿಂದ ಹಿಡಿದು ಪೃಥ್ವಿರಾಜ್ ಚೌಹಾಣ್‌ವರೆಗೂ 'ಭಾಷೆ ಜಗಳ' ಹಾಲು ನೀಡಿದೆ. ಈ ಬಾರಿ ಮರಾಠಿಗರ ಉಪಟಳ ಮೇರೆ ಮೀರುವುದಕ್ಕೂ ಇದೇ ಕಾರಣವಾಗಿದೆ.
ದೇಶಾದ್ಯಂತ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿರುವ ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ. ಹೀಗಾಗಿ ಅಲ್ಲಿನ ಸರ್ಕಾರ ಭಾಷೆಯ ಹೆಸರಿನಲ್ಲಿ ವಿಷ ಭಾವನೆಯನ್ನು ಬಿತ್ತುತ್ತಿದೆ. ಬೆಳಗಾವಿಯಲ್ಲಿ ಮರಾಠಿಗರನ್ನು ಹಿಂಸಿಸಲಾಗುತ್ತಿದೆ ಎಂಬ ವಿಚಾರವನ್ನು ಅಲ್ಲಿನ ಸರ್ಕಾರ ವ್ಯವಸ್ಥಿತವಾಗಿ ಜನರಿಗೆ ತಲುಪಿಸಲು ಪ್ರಯತ್ನ ನಡೆಸುತ್ತಿದೆ. ಉಗ್ರ ಹಫೀಜ್ ಸಯೀದ್‌ಗೆ ಕರ್ನಾಟಕ ಸರ್ಕಾರವನ್ನು ಹೋಲಿಸಿ ಮರಾಠಿಗರ ಭಾವನೆಯನ್ನು ಕೆರಳಿಸುತ್ತಿದ್ದಾರೆ. ಇದಕ್ಕೆ ಅಲ್ಲಿನ ಪ್ರತಿಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿಯೂ ತುಪ್ಪ ಸುರಿಯುತ್ತಿವೆ. 'ಭಾಷಾ ಮತ' ದೋಚಲು ಕೇವಲ ಕಾಂಗ್ರೆಸ್ ನಾಯಕರಿಗೆ ಮಾತ್ರ ಅವಕಾಶ ನೀಡಬಾರದೆಂಬ ಹಠಕ್ಕೆ ಬಿದ್ದಿರುವ ಶಿವಸೇನೆ-ಬಿಜೆಪಿ ಪ್ರತ್ಯೇಕವಾಗಿ ಅಖಾಡಕ್ಕೆ ಇಳಿದಿದ್ದು ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರ ಮೇಲೆ 'ಉಗ್ರ ದೃಷ್ಟಿ' ಹಾಯಿಸಲು ಮುಂದಾಗಿದ್ದಾರೆ. ಈ ವಿಚಾರವನ್ನು ಕೇಂದ್ರದವರೆಗೂ ಕೊಂಡೊಯ್ಯುವ ದುಸ್ಸಾಹಸಕ್ಕೂ ಕೈ ಹಚ್ಚಿದ್ದಾರೆ.
ಅಷ್ಟು ಮಾತ್ರವಲ್ಲ ಗಡಿ ಗ್ರಾಮದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವಂಥ ಕೀಳು ಕೆಲಸಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸರಿಯಾದ ತಪರಾಕಿ ನೀಡಿದೆಯಾದರೂ ಮಹಾರಾಷ್ಟ್ರದ ರಾಜಕಾರಣಿಗಳ ಕಿಡಿಗೇಡಿತನ ಮಾತ್ರ ನಿಂತಿಲ್ಲ. ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ. ಚುನಾವಣೆ ಮುಗಿಯುವವರೆಗೂ ಅಲ್ಲಿನ ರಾಜಕಾರಣಿಗಳಲ್ಲಿ ಭಾಷಾ ಜ್ವರ ತೀವ್ರವಾಗಿಯೇ ಇರುತ್ತದೆ ಎಂಬುವುದರಲ್ಲಿ ಅನುಮಾನವೇ ಬೇಡ.
ರಾಜ್ಯದ ಗಡಿಯಾಚೆ ಮಹಾರಾಷ್ಟ್ರ ರಾಜಕಾರಣಿಗಳು ಏನೇ ಕುಕೃತ್ಯ ನಡೆಸಲಿ, ಆದರೆ ನಮ್ಮೊಳಗಿದ್ದು ನಮ್ಮವರಾಗದ ಎಂಇಎಸ್ ಪುಂಡರಿಗೆ ಉತ್ತರ ಹೇಳುವವರಾರು? ಅವರ ಉದ್ಧಟತನಕ್ಕೆ ರಾಜ್ಯದ ಕನ್ನಡ ಪರ ಸಂಘಟನೆಗಳಿಂದ ತಕ್ಕ ಉತ್ತರ ಲಭಿಸಿದೆಯಾದರೂ ಸ್ಥಳೀಯ ರಾಜಕಾರಣಿಗಳ ಮೌನ ಅನುಮಾನಕ್ಕೆ ಕಾರಣವಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಜತೆ ಎಲ್ಲ ಪಕ್ಷಗಳು ರಹಸ್ಯ ಒಪ್ಪಂದ ಇಟ್ಟುಕೊಂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಶಾಸಕರು, ಸಂಸದರಿಗೆ ಎಂಇಎಸ್ ಸಖ್ಯ ತೊರೆಯುವುದು ಬೇಕಿಲ್ಲ. ಇದಕ್ಕಾಗಿ ಕೆಲವೊಮ್ಮೆ ನಾಡು, ನುಡಿ ಹಿತವನ್ನು ಯಾರಿಗೂ ಗೊತ್ತಾಗದ ರೀತಿ ಬಲಿ ನೀಡುತ್ತಲೇ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಬೆಳಗಾವಿ ಗಡಿ ವಿವಾದ ಇನ್ನೂ ಜೀವಂತವಾಗಿದೆ.
ಕಳೆದ 10 ವರ್ಷಗಳಲ್ಲಿ ರಾಜ್ಯ ಸರ್ಕಾರ ಬೆಳಗಾವಿ ಅಭಿವೃದ್ಧಿಗೆ ಹರಿಸಿದ ಹಣವೇನು ಕಡಿಮೆಯಲ್ಲ. ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ ಎಂಬುದನ್ನು ಪದೇ ಪದೇ ಸಾರಿದೆ. ಅಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ ವರ್ಷದಲ್ಲೊಮ್ಮೆ ವಿಧಾನ ಮಂಡಲದ ಅಧಿವೇಶನವನ್ನೂ ನಡೆಸುತ್ತಿದೆ. ಮಾತ್ರವಲ್ಲ ಅಲ್ಲಿಗೆ ವಿಭಾಗೀಯ ಇಲಾಖೆಗಳನ್ನು ಸ್ಥಳಾಂತರಿಸಲು ಚಿಂತನೆ ನಡೆಸುತ್ತಿದೆ. ಇಷ್ಟಾದರೂ ಅಲ್ಲಿ ಎಂಇಎಸ್ ಪುಂಡಾಟಿಕೆ ನಿಂತಿಲ್ಲ. ಸದ್ಯಕ್ಕೆ ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಬೆಳಗಾವಿ ಅಭಿವೃದ್ಧಿಗೆ ಸರ್ಕಾರ ಎಷ್ಟೇ ಪ್ರಯತ್ನ ನಡೆಸಿದರೂ, ಹಿಂದೆ ಈ ಭಾಷಾ ದಳ್ಳುರಿಗೆ ಹಾಕಿದ ಹವಿಸ್ಸು ಕಡಿಮೆ ಏನಲ್ಲ. ಮಹಾರಾಷ್ಟ್ರದ ಚಿತಾವಣೆಗೆ ಕಾಲ ಕಾಲಕ್ಕೆ ಉತ್ತರ ನೀಡದೇ ಮಂಡಿ ಊರಿದ್ದರ ಫಲ ಇಂದಿಗೂ ಹೆಮ್ಮರವಾಗಿದೆ.
ಇದಕ್ಕೆಲ್ಲ ಉತ್ತರ ರೂಪದಲ್ಲಿ ಸಹಿಷ್ಣುತೆ ಎಂಬ ಪದವಿದೆ. ಇದು ಕೇವಲ ಮಾತಿಗೆ ಮಾತ್ರ ಬಳಕೆಯಾಗಬಾರದು. ತನು, ಮನ, ಭಾಷೆಯಲ್ಲಿ ಇದನ್ನು ರೂಢಿಸಿಕೊಂಡರೆ ಭಾಷಾ ಜಗಳ ನಡೆಯುವುದಿಲ್ಲ. ಆದರೆ ಇದನ್ನು ಕನ್ನಡಿಗರು ಮಾತ್ರ ಮೈಗೂಡಿಸಿಕೊಳ್ಳಬೇಕೆ? ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರಲೇಬೇಕಲ್ಲವೇ? ಎಂಇಎಸ್ ಇಷ್ಟೊಂದು ಪುಂಡಾಟಿಕೆ ನಡೆಸಿದರೂ ನಮ್ಮ ಸರ್ಕಾರ ಕೈ ಕಟ್ಟಿ ಕುಳಿತರೆ ಇಂದು ಬೆಳಗಾವಿ, ನಾಳೆ ಕಾರವಾರ, ಮಗದೊಮ್ಮೆ ರಾಜಧಾನಿ ಬೆಂಗಳೂರು ಅನ್ಯರ ಸ್ವತ್ತಾಗುವ ಕಾಲ ದೂರವಿಲ್ಲ.
ಲಗೋರಿ: ತಾಳ್ಮೆ ಒಳ್ಳೆಯದೇ. ಆದರೆ, ಅದು ದೌರ್ಬಲ್ಯ ಮತ್ತು ಸೋಮಾರಿತನದ ಆವರಣದಲ್ಲಿರಬಾರದು.
-ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

