ನೂರು ಅವಮಾನ ಕಂಡಾತ ನೂರು ಕೋಟಿಗೆ ಒಡೆಯನಾದ!
ಅವನ ಹೆಸರು ಹರಿಕಿಶನ್ ಪಿಪ್ಪಲ್. ಆತ, ಚಮ್ಮಾರನ ಮಗ. ದಲಿತರ ಹುಡುಗ...

ಅವನ ಹೆಸರು ಹರಿಕಿಶನ್ ಪಿಪ್ಪಲ್. ಆತ, ಚಮ್ಮಾರನ ಮಗ. ದಲಿತರ ಹುಡುಗ. 'ದಲಿತ' ಎಂಬ ಒಂದೇ ಕಾರಣದಿಂದ, ಜನ ಅವನೊಂದಿಗೆ ಮಾತಾಡಲಿಲ್ಲ. ಸಹಪಾಠಿಗಳು ಅವನನ್ನು ಮುಟ್ಟಿಸಿಕೊಳ್ಳಲಿಲ್ಲ. ಶಾಲೆಯಲ್ಲಿ ಅವನನ್ನು ಎಲ್ಲ ಮಕ್ಕಳ ಮಧ್ಯೆ ಕೂರಿಸಲು, ಶಿಕ್ಷಕರೂ ಮುಂದಾಗಲಿಲ್ಲ. ಅವನು ಬರೆದ ಹೋಂ ವರ್ಕ್‌ಗೆ ಕರೆಕ್ಷನ್ ಹಾಕಲಿಲ್ಲ. ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೂ ಹೆಚ್ಚು ಅಂಕ ನೀಡುವ ಕೃಪೆ ತೋರಲಿಲ್ಲ. ಬದಲಿಗೆ, 35 ಮಾರ್ಕ್ಸ್ ನೀಡಿ, 'ನೀನು ಜಸ್ಟ್ ಪಾಸ್' ಎಂದು ದೂರ ನಿಂತೇ ಹೇಳುತ್ತಿದ್ದರು. ಮುಂದೆ ಈ ಹುಡುಗ ನೌಕರಿಗೆ ಸೇರಿಕೊಂಡ. ಐದಾರು ಕಂಪನಿಗಳಲ್ಲಿ ಶ್ರದ್ಧೆಯಿಂದ ದುಡಿದ. ಇಷ್ಟಾದರೂ, ಮಾಲೀಕರು ಸಂಬಳ ಕೊಡುವ ಮನಸ್ಸು ಮಾಡಲಿಲ್ಲ. ಕೇಳಿದ್ದಕ್ಕೆ - 'ದಲಿತರಿಗೆಲ್ಲ ಯಾಕಯ್ಯಾ ಸಂಬಳ? ಹಣ ಮಾಡಿ ನೀನೇನು ಅರಮನೆ ಕಟ್ಟಿಸಬೇಕಾ? ಎರಡನೇ ಮಾತಾಡದೇ ಎದ್ದು ಹೋಗು' ಎಂದು ಗದರಿಸಿದರು. ಈ ಎಲ್ಲ ಅವಮಾನಗಳನ್ನೂ ಹರಿಕಿಶನ್ ಪಿಪ್ಪಲ್ ಮೌನವಾಗಿ ಸಹಿಸಿಕೊಂಡ.
ಇದಿಷ್ಟೂ ನಡೆದದ್ದು 50 ವರ್ಷಗಳ ಹಿಂದೆ.
ಈಗ, ಕಾಲ ಬದಲಾಗಿದೆ. ಹಿಂದೊಮ್ಮೆ ನೂರಾರು ಅವಮಾನಗಳಿಗೆ ತುತ್ತಾಗಿದ್ದ ಹರಿಕಿಶನ್ ಪಿಪ್ಪಲ್, ಈಗ 100 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ನಡೆಸುವಂಥ ಶ್ರೀಮಂತನಾಗಿದ್ದಾನೆ. 1500ಕ್ಕೂ ಹೆಚ್ಚು ಮಂದಿಗೆ ನೌಕರಿ ನೀಡಿದ್ದಾನೆ. ಸುಸಜ್ಜಿತ ಆಸ್ಪತ್ರೆಯೊಂದರ ಮಾಲೀಕನಾಗಿದ್ದಾನೆ. ಈತನ ಒಡೆತನದಲ್ಲಿ ಶೂ ತಯಾರಿಕಾ ಫ್ಯಾಕ್ಟರಿಯಿದೆ. ಕಾರ್ ಡೀಲರ್‌ಶಿಪ್ ಇದೆ. ಪಬ್ಲಿಷಿಂಗ್ ಕಂಪನಿಯಿದೆ. ಒಂದೆರಡಲ್ಲ, ಆರು ಐಷಾರಾಮಿ ಕಾರುಗಳಿವೆ. ಅರಮನೆಯನ್ನು ನಾಚಿಸುವಂಥ ಬಂಗಲೆಗಳಿವೆ. ಈ ಸ್ಟೇಜ್ ತಲುಪಲು ಹರಿಕಿಷನ್ ಪಿಪ್ಪಲ್ ಸವೆಸಿದ ಹಾದಿಯಿದೆಯಲ್ಲ: ಅದು ಒಂದು ಸಿನಿಮಾ ಕಥೆಯಂತೆಯೇ ಇದೆ. ಅದನ್ನೂ ಹರಿಕಿಷನ್ ಅವರ ಮಾತುಗಳಲ್ಲಿಯೇ ಹೇಳುವುದಾದರೆ-
'ತಾಜ್‌ಮಹಲ್‌ನ ನೆಲೆವೀಡು ಎಂದು ಹೆಸರಾಗಿರುವ ಆಗ್ರಾ ನನ್ನ ಹುಟ್ಟೂರು. ನನ್ನ ತಂದೆ ಶೂ ತಯಾರಿಕೆಯಲ್ಲಿ ಪಳಗಿದ್ದರು. ಚಿಕ್ಕದೊಂದು ಪೆಟ್ಟಿಗೆ ಅಂಗಡಿಯಲ್ಲಿ ಶೂ ತಯಾರಿಸಿ, ಮಾರಾಟ ಮಾಡುತ್ತಿದ್ದರು. ಹೆತ್ತವರೊಂದಿಗೆ ನಾವು ಐವರು ಮಕ್ಕಳಿದ್ದೆವು. ತಂದೆಯ ಸಂಪಾದನೆಯಿಂದಲೇ ಸಂಸಾರ ನಡೆಯುತ್ತಿತ್ತು. ದಲಿತರು ಎಂಬ ಒಂದೇ ಕಾರಣದಿಂದ ಆ ದಿನಗಳಲ್ಲಿ ನಮ್ಮನ್ನು ಉಳಿದವರು ಮುಟ್ಟುತ್ತಿರಲಿಲ್ಲ. ಮಾತಾಡಿಸುತ್ತಿರಲಿಲ್ಲ. ಮನೆಗೆ ಸೇರಿಸುತ್ತಿರಲಿಲ್ಲ. ಈ ಸಂಬಂಧವಾಗಿ ತಕರಾರು ತೆಗೆದರೆ ಹಲ್ಲೆಯಾಗುತ್ತಿತ್ತು. ಹಾಗಾಗಿ, ತುಟಿಪಿಟಕ್ ಎನ್ನದೆ ತೆಪ್ಪಗಿದ್ದೆವು.
ಹೀಗಿರುವಾಗಲೇ, ನಮ್ಮ ತಂದೆಗೆ ಸ್ಟ್ರೋಕ್ ಆಯಿತು. ಕೈ-ಕಾಲುಗಳು ಸ್ವಾಧೀನ ಕಳೆದುಕೊಂಡವು. ಅಪ್ಪನ ದುಡಿಮೆಯನ್ನು ಮುಂದುವರಿಸಲು ನನ್ನ ಸೋದರರು ಆಸಕ್ತಿ ತೋರಲಿಲ್ಲ. ಹಾಗಾಗಿ, ನಾವು ಮನೆಯವರೆಲ್ಲ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಯಿತು. ಈ ಸಂಕಟ ಕುಟುಂಬಕ್ಕೆ ಗಂಟು ಬಿದ್ದಾಗ, ನಾನು 10ನೇ ತರಗತಿಯಲ್ಲಿದ್ದೆ. ಸ್ಕೂಲ್ ಫೀ, ಯೂನಿಫಾರಂ ಹಾಗೂ ಪುಸ್ತಕ ಖರೀದಿಗೆ ಹಣ ಬೇಕು ಅನ್ನಿಸಿದಾಗ ಆಗ್ರಾದ ಬೀದಿಗಳಲ್ಲಿ ಸೈಕಲ್ ರಿಕ್ಷಾ ತುಳಿಯಲು ನಿರ್ಧರಿಸಿದೆ. ಸ್ಕೂಲ್ ಮುಗಿಯುತ್ತಿದ್ದಂತೆಯೇ, ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸೈಕಲ್ ರಿಕ್ಷಾ ತುಳಿಯುತ್ತಿದ್ದೆ. ಈ ವೇಷದಲ್ಲಿ ನನ್ನನ್ನು ಸಹಪಾಠಿಗಳು ನೋಡಿಬಿಟ್ಟರೆ, ಅಥವಾ, ಗಿರಾಕಿಗಳಿಗೆ ನನ್ನ ಗುರುತು ಸಿಕ್ಕಿಬಿಟ್ಟರೆ, ಕೀಳು ಜಾತಿಯವನ ರಿಕ್ಷಾ ಎಂಬ ಒಂದೇ ಕಾರಣದಿಂದ ಅವರು ಗಾಡಿ ಹತ್ತದೇ ಹೋಗಿ ಬಿಡುವ ಸಂಭವವಿತ್ತು. ಹಾಗಾಗಿ, ರಿಕ್ಷಾ ತುಳಿಯುವಾಗ ಯಾರಿಗೂ ಗುರುತು ಸಿಕ್ಕದಂತೆ ಮಂಕಿ ಕ್ಯಾಂಪ್ ಥರದ ಬಟ್ಟೆಯಿಂದ ಮುಖ ಮುಚ್ಚಿಕೊಂಡಿರುತ್ತಿದ್ದೆ. ಗಿರಾಕಿಗಳಿಗೇನೋ ನನ್ನ ಗುರುತು ಸಿಗಲಿಲ್ಲ. ಆದರೆ, ಮನೆಯವರಿಗೆ ನನ್ನ ದುಡಿಮೆಯ ವಿಷಯ ಗೊತ್ತಾಯಿತು. 'ಎಲ್ಲರೂ ಕಷ್ಟದಲ್ಲಿರುವುದರಿಂದ, ಸಂಪಾದನೆಯನ್ನೆಲ್ಲ ಮನೆಗೆ ಕೊಡಬೇಕು' ಎಂದು ಎಲ್ಲ ಸದಸ್ಯರೂ ಒಟ್ಟಾಗಿ ಹೇಳಿದರು. ತಿರುಗಿ ಮಾತಾಡಲು ಮನಸ್ಸಿರಲಿಲ್ಲ. ಹಾಗಾಗಿ ಸಮ್ಮತಿ ಸೂಚಿಸಿದೆ.
ಸೈಕಲ್ ರಿಕ್ಷಾ ತುಳಿಯುವ ಕೆಲಸ ಆರಂಭಿಸಿದಾಗ ನಾನು ಹತ್ತನೇ ತರಗತಿಯ ವಿದ್ಯಾರ್ಥಿ. ಆಗ, ತುಂಬಾ ತೆಳ್ಳಗಿದ್ದೆ. ಶಾಲೆ ಮುಗಿದ ತಕ್ಷಣ, ಅವಸರದಿಂದಲೇ ರಿಕ್ಷಾ ಹತ್ತಿರುತ್ತಿದ್ದೆ. ಒಂದೊಂದು ಬಾರಿ ದಡೂತಿ ಆಸಾಮಿಗಳು ರಿಕ್ಷಾ ಹತ್ತಿ ಬಿಡುತ್ತಿದ್ದರು. ಪ್ರಯಾಣದ ದೂರ ಕೆಲವೊಮ್ಮೆ ಏಳೆಂಟು ಕಿಲೋಮೀಟರ್ ಇರುತ್ತಿತ್ತು. ಅಂಥ ಸಂದರ್ಭದಲ್ಲಿ, ದಡೂತಿ ಗ್ರಾಹಕರ ತೂಕ ಎಳೆಯಲಾಗದೆ ಉಸಿರು ಸಿಕ್ಕಿಕೊಂಡಂತೆ ಆಗುತ್ತಿತ್ತು. ಅತಿಯಾದ ಆಯಾಸದಿಂದ ಬಿಕ್ಕಳಿಕೆ ಬರುತ್ತಿತ್ತು. ನಮ್ಮ ಮನೆಯ ಪರಿಸ್ಥಿತಿ ನೆನಪಾದಾಗ ಅಳು ಬರುತ್ತಿತ್ತು. ಆದರೆ, ನಮ್ಮ ಸಂಕಟವನ್ನು ಕೇಳುವವರೇ ಇರಲಿಲ್ಲ.
ಸೆಕೆಂಡ್ ಪಿಯುಸಿ ಮುಗಿಯುತ್ತಿದ್ದಂತೆಯೇ ನನಗೆ ಮದುವೆ ನಿಶ್ಚಯವಾಯಿತು. ನಾನು ಓದಬೇಕು. ಡಿಗ್ರಿ ಪಡೆಯಬೇಕು. ಅಲ್ಲಿನತನಕ ಮದುವೆ ಬೇಡ ಎಂದು ಹಠ ಹಿಡಿದೆ. ಜಗಳವಾಡಿದೆ. ಆದರೆ, ಬಂಧುಗಳ ಹಠದ ಮುಂದೆ ನನ್ನ ಮಾತು ನಡೆಯಲಿಲ್ಲ. ನಮ್ಮ ಕುಟುಂಬಕ್ಕಿಂತ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದ್ದ ಕುಟುಂಬದ ಗೀತಾ ಎಂಬಾಕೆಯೊಂದಿಗೆ ನನ್ನ ಮದುವೆಯಾಯಿತು. ನಮ್ಮ ಮಾವನಿಗೂ ಒಂದು ಶೂ ಮಾರಾಟದ ಅಂಗಡಿಯಿತ್ತು. ಅವರೊಂದಿಗೆ ನಾನೂ ಕೆಲಸಕ್ಕೆ ಕೂತೆ. ಆದರೆ, ಕೆಲವೇ ದಿನಗಳಲ್ಲಿ ಈ ಕೆಲಸ ಬೋರ್ ಹೊಡೆಸಿತು. ತಕ್ಷಣವೇ, ಆಗ್ರಾದಲ್ಲಿದ್ದ ಜೈನ್‌ಸನ್ ಆಟೋ ಇಂಡಸ್ಟ್ರೀಸ್‌ನಲ್ಲಿ ಕಾರ್ಮಿಕನಾಗಿ ಸೇರಿಕೊಂಡೆ. ಶ್ರದ್ಧೆಯಿಂದ ದುಡಿದರೂ ತಿಂಗಳ ಕೊನೆಗೆ ಸಂಬಳ ಕೊಡಲಿಲ್ಲ. ಕೇಳಿದ್ದಕ್ಕೆ, ಜಾತಿಯ ಹೆಸರು ಹೇಳಿ ಹಂಗಿಸಿದರು. ಎರಡು-ಮೂರು ಕಡೆ ಹೀಗೇ ಆಯಿತು. ಈ ಸಂದರ್ಭದಲ್ಲಿಯೇ ಆಕಸ್ಮಿಕವಾಗಿ ಪರಿಚಯವಾದ ಬ್ಯಾಂಕ್ ಅಧಿಕಾರಿಯೊಬ್ಬರು- ಅವರಿವರ ಕೈ ಕೆಳಗೆ ಕೂಲಿ ಮಾಡುವ ಬದಲು ನೀವೇ ಏಕೆ ಉದ್ಯಮಿಯಾಗಬಾರದು?' ಎಂದರು. ಬ್ಯಾಂಕ್‌ನಿಂದ ಸಾಲ ತಗೊಂಡು ಮುಂದುವರಿಯಿರಿ ಎಂದೂ ಸಲಹೆ ಮಾಡಿದರು. ಅಷ್ಟಕ್ಕೇ ಸುಮ್ಮನಾಗದೇ ತುಂಬ ಮುತುವರ್ಜಿ ವಹಿಸಿ 15000 ರೂ.ಗಳ ಸಾಲವನ್ನೂ ಕೊಡಿಸಿದರು.
ಈ ಸುದ್ದಿ ತಿಳಿದಾಕ್ಷಣ, ನನ್ನ ಅಕ್ಕ ಮನೆಗೆ ಬಂದಳು. ತಾನು ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಬೇಕೆಂದೂ, ಅದಕ್ಕಾಗಿ 2000 ರೂ. ಸಾಲ ಬೇಕೆಂದೂ ಒತ್ತಾಯಿಸಿದಳು. 'ಬಿಜಿನೆಸ್ ಆರಂಭಿಸಲು ಪಡೆದಿರುವ ಹಣ ಇದು. ನಾನು ಯಾರಿಗೂ ಒಂದು ಪೈಸೆಯನ್ನೂ ಕೊಡಲಾರೆ' ಎಂದು ನಿಷ್ಠುರವಾಗಿ ಹೇಳಿಬಿಟ್ಟೆ. ಅಕ್ಕ, ಮುಖ ಊದಿಸಿಕೊಂಡು ಎದ್ದು ಹೋದಳು. ಎರಡು ದಿನ ಕಳೆದಿರಲಿಲ್ಲ. ಆಗಲೇ ನನ್ನ ಹಿರಿಯಣ್ಣ ಬಂದ. 'ಒಂದೇ ಬಾರಿಗೆ 15000 ರೂ. ಸಿಕ್ಕಿರುವುದರಿಂದ 'ಪಾರ್ಟಿ' ಮಾಡಬೇಕೆಂಬುದು ಬಂಧುಗಳೆಲ್ಲರ ಆಸೆಯಾಗಿದೆ. ಮಾಂಸಾಹಾರದ ಊಟ ಮತ್ತು ಡ್ರಿಂಕ್ಸ್ ಕೊಡಿಸುವಂತೆ ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಕಾಸು ಕೊಡು' ಎಂದ. ಅಕ್ಕನಿಗೆ ಹೇಳಿದ್ದ ಉತ್ತರವನ್ನೇ ಅಣ್ಣನಿಗೂ ಹೇಳಿದೆ. ಆತ, ಕೂಗಾಡಿಕೊಂಡು ಎದ್ದು ಹೋದ. ಇದನ್ನೆಲ್ಲ ಕಂಡ ನನ್ನ ಪತ್ನಿ- ಆ ಹಣದಿಂದಲೇ ತಾನೆ ಇಷ್ಟೆಲ್ಲ ರಗಳೆ? ಅದನ್ನು ಬ್ಯಾಂಕ್‌ಗೆ ಹಿಂದಿರುಗಿಸಿ ಬಿಡಿ. ಈ ತಲೆನೋವುಗಳೆಲ್ಲ ಬೇಡವೇ ಬೇಡ' ಅಂದಳು. ಹಾಗೆ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಕುಟುಂಬದವರಿಂದ, ಬಂಧುಗಳಿಂದ ದೂರವಿದ್ದು ಏನಾದರೂ ಬಿಜಿನೆಸ್ ಆರಂಭಿಸಬೇಕು ಅನ್ನಿಸಿತು. ಹೀಗೊಂದು ಯೋಚನೆ ಬಂದಾಕ್ಷಣ, ಹೆಂಡತಿಯನ್ನು ತವರಿಗೆ ಕಳಿಸಿ, ಒಂದು ಚಿಕ್ಕ ರೂಮನ್ನು ವಾಸಕ್ಕೆ ಗೊತ್ತು ಮಾಡಿಕೊಂಡೆ. ಇದಿಷ್ಟೂ ನಡೆದದ್ದು 1975ರಲ್ಲಿ.
ಮುಂದಿನ ಕೆಲವೇ ದಿನಗಳಲ್ಲಿ ಸರ್ಕಾರಿ ಒಡೆತನದ ಕಂಪನಿಯೊಂದಕ್ಕೆ 10000 ಶೂಗಳನ್ನು ಪೂರೈಸುವ ಕಾಂಟ್ರ್ಯಾಕ್ಟ್ ನನಗೆ ಸಿಕ್ಕಿತು. ಶೂ ತಯಾರಿಕೆ, ನನಗೆ ಪಿತ್ರಾರ್ಜಿತವಾಗಿ ಒಲಿದ ವಿದ್ಯೆ. ಶ್ರದ್ಧೆಯಿಂದ ಆ ಕೆಲಸ ಮಾಡಿದೆ. ಹೂಡಿದ ಬಂಡವಾಳಕ್ಕಿಂತ ಎರಡು ಪಟ್ಟು ಲಾಭ ಬಂತು. ಅದಕ್ಕಿಂತ ಹೆಚ್ಚಾಗಿ, ನಾನು ತಯಾರಿಸಿದ ಶೂಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಬ್ಯಾಂಕ್ ಸಾಲವನ್ನು ಒಂದೇ ಕಂತಿನಲ್ಲಿ ಹಿಂತಿರುಗಿಸಿದೆ. ಈ ವರ್ತನೆಯನ್ನು ಮೆಚ್ಚಿಕೊಂಡ ಬ್ಯಾಂಕ್ ಅಧಿಕಾರಿಗಳು, ನನಗೆ ಕೊಡುತ್ತಿದ್ದ ಸಾಲದ ಮಿತಿಯನ್ನು 15 ಸಾವಿರ ರೂ.ಗಳಿಂದ 3 ಲಕ್ಷಕ್ಕೆ ಹೆಚ್ಚಿಸಿದರು. ಮುಂದೆ ಹೊಸ ವಿನ್ಯಾಸದ ಶೂಗಳ ತಯಾರಿಕೆಯೊಂದಿಗೆ ಆಗ್ರಾ ಮತ್ತು ದೆಹಲಿಗಳಲ್ಲಿ ನಮ್ಮ ಉತ್ಪನ್ನಗಳಿಗೆ ದೊಡ್ಡ ಮಾರ್ಕೆಟ್ ಸಿಕ್ಕಿತು.
1990ರಲ್ಲಿ, ಅಮೆರಿಕದಲ್ಲಿ ಜನಪ್ರಿಯವಾಗಿದ್ದ Hush Puppies ಬ್ರ್ಯಾಂಡ್‌ನ ಶೂಗಳನ್ನು ಭಾರತದ ಮಾರುಕಟ್ಟೆಗೂ ಪರಿಚಯಿಸಲು ಬಾಟಾ ಕಂಪನಿ ನಿರ್ಧರಿಸಿತು. ಭಾರತದಲ್ಲಿ ಅಂಥ ಶೂಗಳನ್ನು ತಯಾರಿಸುವ ಅವಕಾಶ ನಮಗೆ ಸಿಕ್ಕಿತು. ಕೆಲಸ ಆರಂಭಿಸುವ ಮೊದಲು 'ಸ್ಪಾಟ್ ವಿಸಿಟ್' ಗೆಂದು ಬಾಟಾ ಕಂಪನಿಯ ಅಧಿಕಾರಿಗಳು ಬಂದರು. ಮೊದಲ ನೋಟಕ್ಕೆ, ನಮ್ಮ ಫ್ಯಾಕ್ಟರಿ ಹಾಗೂ ಅಲ್ಲಿದ್ದ ಉತ್ಪನ್ನಗಳು ಅವರಿಗೆ ಇಷ್ಟವಾಗಲಿಲ್ಲ. ಅದನ್ನು ನೇರವಾಗಿ ತಿಳಿಸಿ, ಅವರೆಲ್ಲಾ ತಾಜ್‌ಮಹಲ್ ವೀಕ್ಷಣೆಗೆ ಹೋಗಿಬಿಟ್ಟರು. ನಂತರದ ನಾಲ್ಕೇ ಗಂಟೆಯ ಅವಧಿಯಲ್ಲಿ, ಬಾಟಾ ಕಂಪನಿಯ ಮುಖ್ಯ ಅಧಿಕಾರಿ ಧರಿಸಿದ್ದನಲ್ಲ; ಅಂಥದೇ ಮಾದರಿಯ, ಅದಕ್ಕಿಂತ ಗಟ್ಟಿಮುಟ್ಟಾಗಿದ್ದ ಶೂಗಳೊಂದಿಗೆ ಆತನ ಎದುರು ನಿಂತಿದ್ದೆ. ನನ್ನ ಕೆಲಸದ ವೇಗ ಹಾಗೂ ಶೂನ ಗುಣಮಟ್ಟ ಆ ಅಧಿಕಾರಿಯ ಮನಸ್ಸು ಗೆದ್ದಿತು. ಪರಿಣಾಮ, ನಮ್ಮ ಕಂಪನಿಗೆ ಹೆಚ್ಚು ಲಾಭದ ಆರ್ಡರ್ ದೊರೆಯಿತು.
ಆನಂತರದಲ್ಲಿ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಶೂ ತಯಾರಿಕೆಯಿಂದ ಹಣ ಬಂದಾಗ, ಹೋಟೆಲ್ ಆರಂಭಿಸುವ ಆಸೆಯಾಯಿತು. ಆ ಕ್ಷಣಕ್ಕೆ ಹೊಳೆದದ್ದು ಅಗರ್‌ವಾಲ್ ಎಂಬ ಹೆಸರು. ನಾನು ತಡ ಮಾಡಲಿಲ್ಲ. ಅಗರ್‌ವಾಲ್ ಹೆಸರಿನ ರೆಸ್ಟೋರೆಂಟ್ ಆರಂಭಿಸಿದೆ. ಶುಚಿ-ರುಚಿಗೆ ಗಮನ ಕೊಟ್ಟೆ. ತಿಂಡಿಗಳಿಗೆ, ಉಳಿದ ಹೋಟೆಲ್‌ಗಳಿಗಿಂತ ಕಡಿಮೆ ಬೆಲೆಯಿಟ್ಟೆ. ಉದ್ಯಮಿಯಾಗಿ ಗೆಲ್ಲಬೇಕು ಎಂಬುದು ನನ್ನ ಉದ್ದೇಶವಾಗಿತ್ತೇ ಹೊರತು, ಹಣ ಸಂಪಾದನೆ ನನ್ನ ಗುರಿಯಾಗಿರಲಿಲ್ಲ. ಹೋಟೆಲ್ ವ್ಯವಹಾರದಲ್ಲೂ ಭರ್ಜರಿ ಲಾಭ ಬಂತು. ಆ ಹಣದಿಂದ ರೆಸ್ಟೋರೆಂಟ್‌ನ ಪಕ್ಕದಲ್ಲಿಯೇ ಒಂದು ಕಲ್ಯಾಣ ಮಂಟಪ ಕಟ್ಟಿಸಿದೆ. ನಂತರದ ಎರಡು ಮೂರು ವರ್ಷ ಎಲ್ಲವೂ ಚೆನ್ನಾಗಿತ್ತು. ಆನಂತರ ದಿಢೀರನೆ ಸ್ಪರ್ಧಿಗಳು ಹುಟ್ಟಿಕೊಂಡರು. ನಮ್ಮ ಕಲ್ಯಾಣಮಂಟಪದ ಅಕ್ಕಪಕ್ಕದಲ್ಲಿ ಐದು ಹೊಸ ಮದುವೆ ಹಾಲ್‌ಗಳು ಎದ್ದು ನಿಂತವು. ಅವೆಲ್ಲ ಮೇಲ್ವರ್ಗದ ಶ್ರೀಮಂತರಿಗೆ ಸೇರಿದ್ದವು. ಜಾತಿಯ ಭೂತ ಮತ್ತೆ ನನ್ನನ್ನು ಕಾಡಿತು. ದಲಿತರ ಒಡೆತನದ ಛತ್ರ ಎಂಬ ಕಾರಣದಿಂದ ಆರ್ಡರ್‌ಗಳು ಕೈ ತಪ್ಪಿದವು. ಈ ಸಂದರ್ಭದಲ್ಲಿಯೇ ಇಬ್ಬರು ವೈದ್ಯರು ಬಂದರು. ಕಲ್ಯಾಣ ಮಂಟಪವನ್ನು ಆಸ್ಪತ್ರೆಯೆಂದು ಮಾರ್ಪಡಿಸೋಣ. ಜಂಟಿ ಪಾಲುದಾರಿಕೆಯಲ್ಲಿ ಕೆಲಸ ಆರಂಭಿಸೋಣ ಎಂದರು. ಹೀಗೆ ಶುರುವಾದದ್ದೇ ಪೀಪಲ್ಸ್ ಹೆರಿಟೇಜ್ ಹಾಸ್ಪಿಟಲ್.
ಬಡತನದ ಕ್ರೂರ ಮುಖವನ್ನು ಪದೇ ಪದೆ ಕಂಡಿದ್ದವ ನಾನು. ನಮ್ಮ ಆಸ್ಪತ್ರೆಯಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕು ಎಂಬುದು ನನ್ನ ಆಸೆಯಾಗಿತ್ತು. ಆಸ್ಪತ್ರೆಗೆ ಎಲ್ಲ ಬಗೆಯ ಉಪಕರಣಗಳನ್ನು ತರಿಸಬೇಕಿತ್ತು. ಆಸ್ಪತ್ರೆಗೆ ಪ್ರಚಾರ ದೊರಕಿಸಬೇಕಿತ್ತು. ಹಿಂದೆ ಮುಂದೆ ಯೋಚಿಸದೆ ಬ್ಯಾಂಕ್‌ನಿಂದ 4 ಕೋಟಿ ರೂ.ಗಳ ಸಾಲ ಪಡೆದೆ. ಅಷ್ಟನ್ನೂ ವೈದ್ಯರ ಕೈಲಿಟ್ಟು, ಅತ್ಯುತ್ತಮ ಅನ್ನುವಂಥ ಉಪಕರಣಗಳನ್ನು ತರಿಸಿ ಎಂದು ವಿನಂತಿಸಿದೆ. ಮತ್ತೊಂದು ಕಡೆಯಲ್ಲಿ ನಾವು ತಯಾರಿಸಿದ ಶೂಗಳು ಭರ್ಜರಿಯಾಗಿ ಮಾರಾಟ ಆಗುತ್ತಿದ್ದುದರಿಂದ ಇಂಥ ರಿಸ್ಕ್‌ಗಳಿಗೆ ಮುಂದಾಗಲು ಸಾಧ್ಯವಾಗಿತ್ತು. ಈ ವೇಳೆಗೆ ನನ್ನ ಶ್ರಮ ಮತ್ತು ಅದರ ಹಿಂದಿದ್ದ ಸದಾಶಯದ ಬಗ್ಗೆ ಬಂಧುಗಳಿಗೆಲ್ಲಾ ತಿಳಿದಿತ್ತು. ಅವರೆಲ್ಲಾ ಹಳೆಯ ಸಿಟ್ಟು ಮರೆತು ಹತ್ತಿರ ಬಂದಿದ್ದರು. ಆದರೆ, ಆಸ್ಪತ್ರೆಯ ವೈದ್ಯರ ಮೇಲೆ ವಿಪರೀತ ನಂಬಿಕೆ ಇಟ್ಟಿದ್ದೇ ತಪ್ಪಾಗಿ ಹೋಯಿತು. ಅವರು ರಾಮನ ಲೆಕ್ಕ, ಕೃಷ್ಣನ ಲೆಕ್ಕ ತೋರಿಸಿದರು. ಚಿಕಿತ್ಸೆಗೆ ಅತಿ ದುಬಾರಿ ಬಿಲ್ ಮಾಡುತ್ತಿದ್ದರು. ನನಗೆ ಲೆಕ್ಕ ಒಪ್ಪಿಸುವಾಗ ಮಾತ್ರ 'ಲಾಸ್' ಎಂದೇ ತೋರಿಸುತ್ತಿದ್ದರು. ಪರಿಣಾಮವಾಗಿ, ಒಂದೇ ವರ್ಷದಲ್ಲಿ 3 ಕೋಟಿ ರುಪಾಯಿ ನಷ್ಟವಾಯಿತು. ಆಸ್ಪತ್ರೆಗೂ ಕೆಟ್ಟ ಹೆಸರು ಬಂತು. ಇಂಥದ್ದೊಂದು ಹೊಡೆತವನ್ನು ನಾನು ನಿರೀಕ್ಷಿಸಿರಲಿಲ್ಲ. ಸಾಲ ಮರುಪಾವತಿಗೆ ಹಣವಿಲ್ಲ ಅನ್ನಿಸಿದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯೂ ಬಂತು. ಆದರೆ, ಹೇಡಿಯಂತೆ ಸಾಯಲು ಮನಸ್ಸಾಗಲಿಲ್ಲ. ಆಗಿದ್ದಾಗಲಿ, ಎಲ್ಲವನ್ನೂ ಎದುರಿಸೋಣ ಎಂದು ನಿರ್ಧರಿಸಿದೆ. ಇದೆಲ್ಲಾ ನಡೆದದ್ದು 2001ರಲ್ಲಿ.
ಆನಂತರದಲ್ಲಿ ನಾನು ಮಾಡಿದ ಮೊದಲ ಕೆಲಸವೆಂದರೆ, ಆಸ್ಪತ್ರೆಯ ಆಡಳಿತ ವ್ಯವಹಾರವನ್ನು ಕೈಗೆತ್ತಿಕೊಂಡಿದ್ದು. ಆಗ, ನನ್ನೊಂದಿಗೆ ಪಾಲುದಾರಿಕೆ ಹೊಂದಿದ್ದ ವೈದ್ಯರು ತಿರುಗಿ ಬಿದ್ದರು. ದಲಿತನ ಕೈ ಕೆಳಗೆ ದುಡಿಯಲು ನಾವು ತಯಾರಿಲ್ಲ ಎಂದರು. ಅದೇ ಮಾತನ್ನು ಮತ್ತಷ್ಟು ವೈದ್ಯರಿಂದಲೂ ಹೇಳಿಸಿದರು. ಸಲ್ಲದ ಅಪಪ್ರಚಾರ ಮಾಡಿದರು. ಕಡೆಗೆ, ಅವರೆಲ್ಲರಿಗೂ ಗುಡ್‌ಬೈ ಹೇಳಿದೆ. ಹೊಸಬರ ತಂಡ ಕಟ್ಟಿಕೊಂಡು ಆಸ್ಪತ್ರೆ ನಡೆಸಲು ಮಾನಸಿಕವಾಗಿ ಸಿದ್ಧನಾದೆ. ಈ ಸಂದರ್ಭದಲ್ಲಿ ಹೊಸದೊಂದು ಬಿಕ್ಕಟ್ಟು ಎದುರಾಯಿತು. ಕೆಳವರ್ಗದಿಂದ ಬಂದ ಉದ್ಯಮಿಯೊಬ್ಬರು ಸರಿಯಾಗಿ ಸಂಬಳ ಕೊಡುತ್ತಾರೆಂದು ನಮಗೆ ನಂಬಿಕೆಯಿಲ್ಲ. ಹಾಗಾಗಿ, ತಿಂಗಳ ಸಂಬಳವನ್ನು ಮೊದಲೇ ಪಾವತಿಸಿ ಎಂದು ಹೊಸದಾಗಿ ಬಂದ ಕೆಲವರು ಪಟ್ಟು ಹಿಡಿದರು. ಅದಕ್ಕೂ ಒಪ್ಪಿಕೊಂಡೆ. ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುವುದೇ ನಮ್ಮ ಆಸ್ಪತ್ರೆಯ ಮುಖ್ಯ ಉದ್ದೇಶ ಎಂದು ವೈದ್ಯರಿಗೆ ಸ್ಪಷ್ಟವಾಗಿ ಹೇಳಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೆ. ಶೂ ಉದ್ಯಮದ ರಕ್ಷಣೆಗೆ ಮಕ್ಕಳು ನಿಂತಿದ್ದರು. ಹಾಗಾಗಿ ಸಮಸ್ಯೆಯಾಗಲಿಲ್ಲ. ನಂತರದ ಮೂರೇ ವರ್ಷಗಳಲ್ಲಿ ಆಗ್ರಾದ ಅತ್ಯುತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆ ನಮ್ಮ ಪೀಪಲ್ಸ್ ಹೆರಿಟೇಜ್ ಆಸ್ಪತ್ರೆಯ ಪಾಲಾಯಿತು. ಈ ಸಂದರ್ಭದಲ್ಲಿ ಮೇಲ್ವರ್ಗದ ಕೆಲವರು ಹಾಗೂ ಅಧಿಕಾರಿಯೊಬ್ಬರು ಮಸಲತ್ತು ಮಾಡಿ ರ್ಯಾಂಕಿಂಗ್ ಪಟ್ಟಿಯಿಂದ ನನ್ನ ಆಸ್ಪತ್ರೆಯ ಹೆಸರನ್ನೇ ಕಿತ್ತು ಹಾಕಿದರು. ಅದೊಮ್ಮೆ ಅವರನ್ನೇ ಖುದ್ದು ಭೇಟಿಯಾಗಿ- ಹೀಗೆಯೇ ಕಿರುಕುಳ ಮುಂದುವರಿಸಿದರೆ ಎಲ್ಲ ದಾಖಲೆಗಳೊಂದಿಗೆ ನ್ಯಾಯಾಲಯದ ಮೆಟ್ಟಿಲೇರ್ತೇನೆ ಎಂದು ಎಚ್ಚರಿಸಿದೆ. ಆನಂತರದಲ್ಲಿ ಅವರು ತೆಪ್ಪಗಾದರು.
ಈಗ, ನನ್ನ ಒಡೆತನದಲ್ಲಿ ಆಸ್ಪತ್ರೆಯಿದೆ. ಕಾರ್‌ಡೀಲರ್‌ಶಿಪ್ ಇದೆ. ಪಬ್ಲಿಷಿಂಗ್ ಕಂಪನಿಯಿದೆ. ಶೂ ತಯಾರಿಕಾ ಕಂಪನಿಯಿದೆ. ನಮ್ಮ ಒಡೆತನದ ಎಲ್ಲ ಕಂಪನಿಗಳ ಹೆಸರೂ -ಪೀಪಲ್ಸ್ ಹೆರಿಟೇಜ್ ಎಂದೇ ಆರಂಭವಾಗುತ್ತದೆ. ನಮ್ಮ ಕಂಪನಿಯಲ್ಲಿ ತಯಾರಾದ ಶೂಗಳಿಗೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜರ್ಮನಿ, ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ಒಳ್ಳೆಯ ಮಾರ್ಕೆಟ್ ಇದೆ. ನಮಗಿಂತ ಉತ್ತಮ ಕ್ವಾಲಿಟಿಯ ಶೂಗಳನ್ನು ತಯಾರಿಸುವವರು ಆಗ್ರಾದಲ್ಲಿ ಖಂಡಿತ ಇದ್ದಾರೆ. ಹಾಗಿದ್ದರೂ ಗ್ರಾಹಕರು ನಮ್ಮ ಕಂಪನಿಯ ಉತ್ಪನ್ನಗಳಿಗೇ ಮುಗಿಬೀಳುತ್ತಾರೆ. ಈ ವಿಷಯದಲ್ಲಿ ನಾನು ಅದೃಷ್ಟವಂತ. ಬಾಲ್ಯದಲ್ಲಿ ನೂರು ಬಗೆಯ ನೋವು ತಿಂದವ ನಾನು. ಈಗ ನೂರು ಕೋಟಿ ಒಡೆಯನಾಗಿರುವವನೂ ನಾನು. ಇಂಥದೊಂದು ಸಾಧನೆ ಮಾಡಿದ್ದರ ಕುರಿತು ಹೆಮ್ಮೆಯಿದೆ. ಹೊಸ ಹೊಸ ಉದ್ಯಮ ಆರಂಭಿಸುವ ಮೂಲಕ ಹಲವರಿಗೆ ನೌಕರಿ ನೀಡಬೇಕು ಎಂಬುದು ನನ್ನ ಹಿರಿಯಾಸೆ. ಮನೆಯಲ್ಲಿ ಎಂಥ ಬಡತನವಿದ್ದರೂ ಸರಿ, ಓದುವುದನ್ನು ನಿಲ್ಲಿಸಬೇಡಿ. ಕಲಿತ ವಿದ್ಯೆ ನಮ್ಮನ್ನು ಸದಾ ಕಾಯುತ್ತದೆ ಎಂಬುದೇ ಕಿರಿಯರಿಗೆ ನಾನು ಹೇಳಬಯಸುವ ಸಂದೇಶ...' ಎನ್ನುತ್ತಾ ತಮ್ಮ ಯಶೋಗಾಥೆಗೆ ಫುಲ್‌ಸ್ಟಾಪ್ ಹಾಕುತ್ತಾರೆ ಹರಿಕಿಶನ್.
ನನನ
ಈಗ ಹೇಳಿ: ಸಾಧನೆಗೆ ಅಸಾಧ್ಯವಾದದ್ದು ಏನಾದರೂ ಇದೆಯಾ?
- ಎ.ಆರ್. ಮಣಿಕಾಂತ್
armanikanth@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


