ದಿನ ತುಂಬಿದರೂ ಹೆರಿಗೆ ಆಗದಿದ್ದರೆ ಹೇಗೋ ಹಾಗೇ...!
ಅದೊಂದು ಬೇಸಿಗೆ ಶಿಬಿರ. ಏಳೆಂಟನೇ ತರಗತಿವರೆಗಿನ ಸಣ್ಣ ಮಕ್ಕಳು...

ಅದೊಂದು ಬೇಸಿಗೆ ಶಿಬಿರ. ಏಳೆಂಟನೇ ತರಗತಿವರೆಗಿನ ಸಣ್ಣ ಮಕ್ಕಳು ಶಿಬಿರಾರ್ಥಿಗಳು. ಮನೋವಿಕಾಸ ಶಿಬಿರದ ಗುರಿ. ಶಿಬಿರದ ಒಟ್ಟು ಮಕ್ಕಳನ್ನು ಆರು ಪ್ರತ್ಯೇಕ ತಂಡಗಳಾಗಿ ವಿಂಗಡಿಸಿ ನಾಟಕ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು. ಸ್ಥಳದಲ್ಲೇ ನಾಟಕ ರಚಿಸಿ, ಪ್ರಯೋಗಿಸಬೇಕಾದ ಸವಾಲು. ಜತೆಗೆ ಆಶುಭಾಷಣ. ಸರಿ, ಒಂದರ ನಂತರ ಮತ್ತೊಂದು ತಂಡ ನಾಟಕ, ಭಾಷಣ ಪ್ರಸ್ತುತಪಡಿಸಿದವು. ಒಂದು ತಂಡಕ್ಕಿಂತ ಮತ್ತೊಂದು ತಂಡ ಅದ್ಭುತವಾಗಿ ಕಲೆ ಪ್ರದರ್ಶಿಸಿದವು. ಚಪ್ಪಾಳೆ ಗಿಟ್ಟಿಸಿದವು.
ಸರಿ, ಎಲ್ಲ ಶಿಬಿರಗಳಲ್ಲೂ ಇದು ನಡೆಯುಂಥದ್ದೇ. ಇದರಲ್ಲೇನು ವಿಶೇಷ ಎಂದಿರಾ...? ನಿಮ್ಮ ಪ್ರಶ್ನೆ ಸರಿ. ಆದರೆ ಉತ್ತರ ಕುತೂಹಲಭರಿತ. ಶಿಬಿರದ ಆಯೋಜಕರು, ಅತಿಥಿಗಳನ್ನೂ ಒಂದು ಕ್ಷಣ ದಂಗು ಬಡಿಸಿದ ವಿಶೇಷ ಏನೆಂದರೆ ಎಲ್ಲ ಆರು ತಂಡಗಳು ನಾಟಕ ಮತ್ತು ಭಾಷಣಕ್ಕೆ ಆಯ್ದುಕೊಂಡ ವಿಷಯ ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆ! ಅದರಲ್ಲೂ ವಿಶೇಷವಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕುಟುಂಬದ ಸದಸ್ಯರೇ ಇದರ ಕೇಂದ್ರಬಿಂದು. ಕಾಂಗ್ರೆಸ್ ಪೈಕಿ ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪಡೆದ ಸ್ಥಾನವನ್ನು ಪ್ರಧಾನಿ ಮನಮೋಹನ ಸಿಂಗ್ ಗಿಟ್ಟಿಸಲಿಲ್ಲ. ಒಂದೇ ಒಂದು ತಂಡವಾದರೂ ಅಪ್ಪಿತಪ್ಪಿ ಅನ್ಯ ವಿಷಯ ಕೈಗೆತ್ತಿಕೊಂಡಿದ್ದರೆ ರಾಜಕೀಯ ಮತ್ತು ರಾಜಕೀಯ ನೇತಾರರ ಮೇಲಾಣೆ!!
ಪ್ರಸ್ತುತ ನಡೆದಿರುವ ಮತ್ತು ನಡೆಯುತ್ತಿರುವ ಲೋಕಸಭೆ ಚುನಾವಣೆ ಬರೀ ರಾಜಕಾರಣಿಗಳನ್ನಷ್ಟೇ ಅಲ್ಲ ಹಿರಿಯರಿಂದ ಹಿಡಿದು ಸಣ್ಣ ಮಕ್ಕಳವರೆಗೂ ಎಲ್ಲರ ಮನಸ್ಸನ್ನು ಹೇಗೆ ಆಳುತ್ತಿದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅದೂ ಅವರೆಲ್ಲ ಕಾಲೇಜು ವಿದ್ಯಾರ್ಥಿಗಳಾಗಿದ್ದರೆ ಪರವಾಗಿರಲಿಲ್ಲ. ಇನ್ನೂ ಪ್ರೌಢಶಾಲೆ ದಾಟಿರದದ ಮಕ್ಕಳು. ಅವರ ಅಂತರಂಗವನ್ನೂ ಈ ರಾಜಕೀಯ ಎಂಬುದು ಹೇಗೆ ಅವರಿಸಿಕೊಂಡಿದೆ ಎಂಬುದು ಗಮನ ಸೆಳೆವ ಬೆಳವಣಿಗೆ. ದೇಶ ಇದುವರೆಗೂ ಸಾಕಷ್ಟು ಚುನಾವಣೆಗಳನ್ನು ಕಂಡಿರಬಹುದು. ಆದರೆ ಈಗಿನ ಚುನಾವಣೆ ಸೃಷ್ಟಿಸಿರುನ ಮೇನಿಯಾಕ್ಕೆ ಸರಿಸಾಟಿ ಹಿಂದೆಂದೂ ಕಂಡು, ಕೇಳರಿಯದ್ದು.
ಹೌದು, ಹಿಂದೆಂದೂ ಯಾವುದೇ ಚುನಾವಣೆಯೂ ಈಗಿನಷ್ಟು ಕುತೂಹಲ, ತವಕ, ನಿರೀಕ್ಷೆಯನ್ನು ಈ ರೀತಿ ಸೆರೆ ಹಿಡಿದಿಟ್ಟುಕೊಂಡಿರಲಿಲ್ಲ. ಬಹುಶಃ ಇದಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 'ನಾಮಬಲ' ಕಾರಣ ಇರಬಹುದು. ಹಿಂದೆ ತೊಂಬತ್ತರ ದಶಕದ ಅಂತ್ಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪರ ಅಲೆ ಸೃಷ್ಟಿಯಾಗಿದ್ದುದು ದಿಟ. ಆದರೆ ಈಗಿನ ನರೇಂದ್ರ ಮೋದಿ ಹೆಸರು ಸೃಷ್ಟಿಸಿರುವ ಅಲೆಯ ಜತೆ ಅದನ್ನು ಹೋಲಿಸಲು ಸಾಧ್ಯವಿಲ್ಲ. ಆಗಿನದಕ್ಕಿಂತ ಈಗಿನ ತೀವ್ರತೆ ಹೆಚ್ಚು. ಅದಕ್ಕೆ ಸಂವಹನ ಮಾಧ್ಯಮದ ಹೊಸ ಆವಿಷ್ಕಾರಗಳು ಸೇರಿದಂತೆ ನಾನಾ ಕಾರಣಗಳು ಇರಬಹುದು. ಬಿಜೆಪಿ ಮೋದಿ ಹೆಸರಿನ ಚುಂಗು ಹಿಡಿದು ದೇಶಾದ್ಯಂತ 'ಅಶ್ವಮೇಧಯಾಗ'ದ ಕುದುರೆ ಓಡಿಸುತ್ತಿದೆ. ಮೋದಿ ಹೆಸರು ಆ ಕುದುರೆ ಜತೆಜತೆಗೆ ಓಡುತ್ತಿದೆ. ಪ್ರತಿಪಕ್ಷಗಳು ಅದರಲ್ಲೂ ವಿಶೇಷವಾಗಿ ಕೇಂದ್ರದ ಎನ್‌ಡಿಎ ಸರಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ನ ಪ್ರಚಾರ ನಾಯಕತ್ವ ವಹಿಸಿರುವ ಸೋನಿಯಾ ಗಾಂಧಿ ಕುಟುಂಬದ ಸದಸ್ಯರು ಆ ಕುದುರೆಯನ್ನು ಕಟ್ಟಿಹಾಕುವ ಭರದಲ್ಲಿ ಮೋದಿ ಹೆಸರನ್ನು ಇನ್ನೊಂದು ತೆರದಿ ಜಪಿಸುತ್ತಿದ್ದಾರೆ. ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ತರಾಟೆಯ ಕೇಂದ್ರಬಿಂದು ಸಹ ನರೇಂದ್ರಮೋದಿ ಅವರೇ ಆಗಿದ್ದಾರೆ. ಹೀಗಾಗಿ ಮೋದಿ ಹೆಸರು ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡು ರೀತಿಯಲ್ಲೂ ಚಾಲ್ತಿಯಲ್ಲಿದೆ. ಬಹುಶಃ ಮೋದಿ ಮೇನಿಯಾ ಸೃಷ್ಠಿಗೆ ಇದೇ ಪ್ರಮುಖ ಕಾರಣ. ತತ್ಪರಿಣಾಮವಾಗಿ ಸಣ್ಣ ಮಕ್ಕಳ ಬಾಯಲ್ಲೂ ಮೋದಿ ಹೆಸರು ನಲಿಯುತ್ತಿದೆ. ಅವರು ಯಾರು, ಏನು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ವಯಸ್ಸಿನ ಅಡ್ಡಿ ಇರಬಹುದು. ಆದರೆ ಬಾಯಿಪಾಠ ಮಾಡಿದಂತೆ ಹೆಸರು ಮಾತ್ರ ನಲಿಯುತ್ತಿರುವುದು ಸತ್ಯ.
ದೇಶದ ಹಲವೆಡೆ ಚುನಾವಣೆ ಮುಗಿದಿದೆ. ಕೆಲವೆಡೆ ಬಾಕಿಯಿದೆ. ಕರ್ನಾಟಕದಲ್ಲಿ ಚುನಾವಣೆ ಮುಗಿದು ಹತ್ತು ದಿನಗಳಾದರೂ ಅದರ ಗುಂಗಿನಿಂದ ಹೊರಬರಲು ರಾಜಕಾರಣಿಗಳಿಗೂ ಆಗಿಲ್ಲ, ಜನಸಾಮಾನ್ಯರಿಗೂ ಸಾಧ್ಯವಾಗುತ್ತಿಲ್ಲ. ಕಾರಣ ಫಲಿತಾಂಶಕ್ಕೆ ಮೇ 16 ರವರೆಗೆ ಕಾಯಬೇಕು. ಅಂದರೆ ಇನ್ನೂ ಇಪ್ಪತ್ತು ದಿನ. ದಿನ ತುಂಬಿದರೂ ಹೆರಿಗೆ ಆಗದವರ ಆತಂಕ, ನೋವು ಈ ಸುದೀರ್ಘಾವಧಿ ಕಾಯುವಿಕೆಯ ಹಿಂದೆ ಮಡುಗಟ್ಟಿದೆ. ಇದಕ್ಕೆ ಆಡಳಿತ, ಪ್ರತಿಪಕ್ಷ ಎಂಬ ಬೇಧವಿಲ್ಲ. ಫಲಿತಾಂಶ ಏನಾಗುವುದೋ, ಅದರ ಪರಿಣಾಮಗಳೇನೋ ಎಂಬ ಚಿಂತೆ ಮತ್ತು ಚಿಂತನೆ ಎಲ್ಲರ ಮನಸ್ಸನ್ನು ಹಿಂಡಿ ಹಿಪ್ಪೆಕಾಯಿ ಮಾಡುತ್ತಿದೆ.
ಚುನಾವಣೆಯಂತೂ ಮುಗಿದಿದೆ. ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗೋಣವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟ ಸದಸ್ಯರು ಸೇರಿದಂತೆ ರಾಜ್ಯ ಸರಕಾರದ ಪ್ರತಿನಿಧಿಗಳಿಗೆ ಚುನಾವಣೆ ಫಲಿತಾಂಶವೆಂಬ ಅಸ್ಪಷ್ಟ ಕನಸು ಆಸ್ಪದ ನೀಡುತ್ತಿಲ್ಲ. ಫಲಿತಾಂಶ ಹಣ್ಣೋ, ಕಾಯೋ ಎಂಬ ದುಗುಡ ಅವರನ್ನು ಕಾಡುತ್ತಿದೆ. ಒಳ್ಳೇಯದಾಗುತ್ತದೆ, ಕಾಂಗ್ರೆಸ್‌ಗೇ ಹೆಚ್ಚು ಸ್ಥಾನ ಬರುತ್ತದೆ ಎಂದು ಮನಸ್ಸಿಗೆ ಎಷ್ಟೇ ಸಮಾಧಾನ ಹೇಳಿಕೊಂಡರೂ, ಏನಾದರೂ ಹೆಚ್ಚು-ಕಮ್ಮಿ ಆದರೆ ಎಂಬ ಮತ್ತೊಂದು ಮಗ್ಗಲು ಅವರನ್ನು ಅಲ್ಲಾಡಿಸದೇ ಬಿಡುತ್ತಿಲ್ಲ. ಹೀಗಾಗಿ ಸರಕಾರದ ಪ್ರತಿನಿಧಿಗಳಿಗೆ ಕೆಲಸ ಕಾರ್ಯಗಳ ಬಗ್ಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ 220 ತಾಲೂಕುಗಳ ಪೈಕಿ 136 ಬರಪೀಡಿತವಾಗಿವೆ. ನದಿಗಳು ಸೊರಗಿವೆ. ಕೆರೆಕಟ್ಟೆ, ಆಣೆಕಟ್ಟೆಗಳು ಒಣಗಿವೆ. ತತ್ಪರಿಣಾಮವಾಗಿ ಹೊಲಗದ್ದೆಗಳು ಕೂಡ. ನಗರ-ಹಳ್ಳಿಗಳೆಂಬ ಬೇಧವಿಲ್ಲದೆ ಎಲ್ಲೆಡೆ ಕುಡಿಯುವ ನೀರಿನ ಬವಣೆ. ಬರೀ ನಗರ ಪ್ರದೇಶಗಳಷ್ಟೇ ಅಲ್ಲ ಎಷ್ಟೋ ಹಳ್ಳಿಗಳಿಗೂ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಬೇಡಿಕೆ ಮತ್ತು ಪೂರೈಕೆ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರಕಾರ ಹರಸಾಹಸ ಪಡುತ್ತಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗುವ ಭೀತಿ ಇದೆ. ಬರದ ಮತ್ತೊಬ್ಬ ನೆಂಟ ವಿದ್ಯುತ್ ಕೊರತೆ ಎಂಬುದು ಈಗಾಗಲೇ ಕಣ್ಣಾಮುಚ್ಚಾಲೆ ಶುರು ಮಾಡಿದೆ.
ಮೂಲಭೂತ ಸೌಕರ್ಯ ಮತ್ತು ಅಭಿವೃಧ್ಧಿ ಕೆಲಸ ಕಾರ್ಯಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಚುನಾವಣೆ ಆಯೋಗ ಚುನಾವಣೆ ಮುಗಿದಿರುವ ರಾಜ್ಯಗಳಲ್ಲಿ ನೀತಿ ಸಂಹಿತೆಯ ಕಟ್ಟುಪಾಡುಗಳನ್ನು ಸಡಿಲಿಸಿದೆ. ಆದರೆ ರಾಜಕೀಯ ಪಕ್ಷಗಳ ಮನಸಲ್ಲಿ ಮಡುಗಟ್ಟಿರುವ ಚಿಂತೆಗಳು ಫಲಿತಾಂಶ ಪ್ರಕಟ ಆಗುವವರೆಗೂ ಸಡಿಲಾಗಲು ಸಾಧ್ಯವಿಲ್ಲ. ಹೀಗಾಗಿ ಅವುಗಳ ಎದೆಬಡಿತ ನಗಾರಿಯಾಗಿದೆ. ಆಡಳಿತ ಪಕ್ಷಕ್ಕೆ ಕೆಲಸ ಮಾಡಲು ಆಗುತ್ತಿಲ್ಲ. ಪ್ರತಿಪಕ್ಷಗಳಿಗೆ ಅದನ್ನು ಪ್ರಶ್ನಿಸಲು ಆಗುತ್ತಿಲ್ಲ. ಏಕೆಂದರೆ ಎಲ್ಲರದೂ ಒಂದೇ ಸ್ಥಿತಿ. ತಮ್ಮ-ತಮ್ಮ ಪಕ್ಷಗಳಿಗೆ ಎಷ್ಟು ಸ್ಥಾನಗಳು ಬರುತ್ತವೋ, ಇದರಿಂದ ರಾಜ್ಯದಲ್ಲಿ ತಮ್ಮ ಪರಿಸ್ಥಿತಿ ಏನು? ಕೇಂದ್ರದಲ್ಲಿ ಏನಾಗಬಹುದು? ಎಂಬ ಲೆಕ್ಕಾಚಾರದಲ್ಲಿ ಅವೆಲ್ಲವೂ ಮುಳುಗಿವೆ. ಕಾಂಗ್ರೆಸ್‌ಗೆ ಎಷ್ಟು ಸ್ಥಾನ ಬಂದರೆ ಮುಖ್ಯಮಂತ್ರಿ ಸ್ಥಾನ ಸೇಫ್ ಎಂದು ಸಿದ್ದರಾಮಯ್ಯನವರು 'ಗುಣಾಕಾರ' ಮಾಡುತ್ತಿದ್ದರೆ, ಎಷ್ಟು ಸ್ಥಾನ ಬಂದರೆ ಅವರ ಜಾಗ ಪಲ್ಲಟ ಮಾಡಬಹುದು ಎಂದು ಅವರ ವಿರೋಧಿಗಳು 'ಭಾಗಾಕಾರ' ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಚಿಂತೆ ಇದಕ್ಕಿಂತ ಭಿನ್ನವಾಗೇನೂ ಇಲ್ಲದಿದ್ದರೂ ಸ್ವರೂಪ ಮಾತ್ರ ಬೇರೆ. ಕೇಂದ್ರದಲ್ಲಿ ತಮ್ಮ ಪಕ್ಷದ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಶೇಕಡಾ ನೂರರಷ್ಟು ಕಡುವಿಶ್ವಾಸದಲ್ಲಿರುವ ಬಿಜೆಪಿ ಮುಖಂಡರು, ಅದಕ್ಕೆ ರಾಜ್ಯದ ಕೊಡುಗೆ ಎಷ್ಟಿರಬಹುದು? ರಾಜ್ಯದಿಂದ ಯಾರ್ಯಾರಿಗೆ ಮಂತ್ರಿ ಪದವಿ ದೊರೆಯಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇನ್ನೂ ಜೆಡಿಎಸ್ ಮುಖಂಡರು ಏನು ಕಡಿಮೆ ಇಲ್ಲ. ಕೇಂದ್ರದಲ್ಲಿ ಎನ್‌ಡಿಎ ಸರಕಾರವೂ ಬರುವುದಿಲ್ಲ, ಯುಪಿಎ ಸರಕಾರವೂ ಇರುವುದಿಲ್ಲ. ಈ ಬಾರಿ ಸರಕಾರ ಮಾಡುವುದು ತೃತೀಯ ರಂಗವೇ. ಆ ಸರಕಾರದಲ್ಲಿ ತಮಗೇನು ಪಾಲು ಎಂಬ ಲೆಕ್ಕ ಅವರದು. ಒಟ್ಟಾರೆ ಎಲ್ಲರ ಮೈಮನಸ್ಸು, ಮಾತು-ಚಿಂತನೆ ಸರ್ವಸ್ವವನ್ನೂ ಇಪ್ಪತ್ತು ದಿನ ಬಾಕಿ ಇರುವ ಚುನಾವಣೆ ಫಲಿತಾಂಶವೇ ಬಿಗಿಯಾಗಿ ಹಿಡಿದಿಟ್ಟಿದೆ. ಹೀಗಾಗಿ ಕುಂತರೆ-ನಿಂತರೆ ಅದರದೇ ಚಿಂತೆ. ಹೀಗಾಗಿ ಅವರು ಫಲಿತಾಂಶದ ಲೆಕ್ಕಾಚಾರವನ್ನೇ ಉಂಡು, ಹಾಸಿ, ಹೊದ್ದು ಮಲಗುತ್ತಿದ್ದಾರೆ.
ಇನ್ನು ಜನರೇನೂ ಕಡಿಮೆ ಇಲ್ಲ. ವಾಯುವಿಹಾರ ತಾಣ, ಶಾಲೆ, ಕಚೇರಿ, ಹೋಟೆಲ್, ಬಸ್‌ಸ್ಟಾಂಡ್, ಚಿತ್ರಮಂದಿರ, ವೈನ್‌ಸ್ಟೋರ್, ಬಾರ್ ಅಂಡ್ ರೆಸ್ಟೊರೆಂಟ್, ಹಾದಿ-ಬೀದಿ ಎಲ್ಲೆಡೆ ಅವರದೂ ಅದೇ ಕ್ಯಾಲ್‌ಕ್ಯುಲೇಷನ್. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ, ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತದೆ, ಯಾರು ಸರಕಾರ ರಚನೆ ಮಾಡುತ್ತಾರೆ, ಯಾರ್ಯಾರು ಸೇರಿ ಸರಕಾರ ಮಾಡುತ್ತಾರೆ, ಯಾರು ಪ್ರಧಾನಿ ಆಗುತ್ತಾರೆ, ಬಿಜೆಪಿಗೆ ಎಷ್ಟು ಸ್ಥಾನ ಬರುತ್ತದೆ, ಎನ್‌ಡಿಎಗೆ ಎಷ್ಟು ಬರುತ್ತದೆ, ನರೇಂದ್ರ ಮೋದಿ ಪ್ರಧಾನಿ ಆಗುತ್ತಾರಾ, ಬಿಜೆಪಿಗೆ ಸರಕಾರ ರಚನೆ ಮಾಡುವಷ್ಟು ಸ್ಥಾನ ಬಾರದಿದ್ದರೆ ಬೆಂಬಲ ಕೊಡುವ ಪಕ್ಷಗಳು ಮೋದಿ ಪ್ರಧಾನಿ ಆಗಲು ಬಿಡುತ್ತಾರಾ, ಅಡ್ಡಗಾಲು ಹಾಕುತ್ತಾರಾ, ಹಾಗಾದರೆ ರಾಜಿ ಪ್ರಧಾನಿ ಅಭ್ಯರ್ಥಿ ಯಾರು, ಕಾಂಗ್ರೆಸ್ ಎಷ್ಟು ಸ್ಥಾನ ಗಳಿಸಿದರೆ ಸಿದ್ದರಾಮಯ್ಯ ಐದು ವರ್ಷ ಫುಲ್ ಸೇಫ್, ಒಂದೊಮ್ಮೆ ತೀರಾ ಕಡಿಮೆ ಬಂದರೆ ಅವರ ವಿರುದ್ಧ ಯಾರ್ಯಾರು ಪಿತೂರಿ ಮಾಡಬಹುದು, ಮುಖ್ಯಮಂತ್ರಿ ಸ್ಥಾನಕ್ಕೆ ಯಾರ್ಯಾರು ಪೈಪೋಟಿ ನೀಡಬಹುದು, ಆಗ ಭಿನ್ನಮತ ಮೂಡಿ ಸರಕಾರ ಏನಾಗಬಹುದು, ಅನಂತಕುಮಾರ್ ಕತೆ ಏನು, ಬಿಜೆಪಿ ಹೆಚ್ಚು ಸೀಟು ಗೆದ್ದು, ಕೇಂದ್ರದಲ್ಲಿ ಎನ್‌ಡಿಎ ಸರಕಾರ ರಚಿಸಿದರೆ ಯಾರ್ಯಾರು ಮಂತ್ರಿ ಆಗಬಹುದು, ತೃತೀಯ ರಂಗ ಬರುತ್ತದಾ, ಜೆಡಿಎಸ್‌ಗೆ ಎಷ್ಟು ಸ್ಥಾನ ಬರುತ್ತದೆ, ದೇವೇಗೌಡರು ಅಂದುಕೊಂಡಿರುವಂತೆ ಅವರು ಮತ್ತೆ ಪ್ರಧಾನಿಯಾಗುತ್ತಾರಾ, ಕುಮಾರಸ್ವಾಮಿ ಮಂತ್ರಿ ಆಗುತ್ತಾರಾ, ತೃತೀಯರಂಗ ದಬಾಕಿಕೊಳ್ಳುತ್ತದಾ - ಹೀಗೆ ನಾನಾ ಲೆಕ್ಕಾಚಾರಗಳಲ್ಲಿ ಜನ ನಿರತರಾಗಿದ್ದಾರೆ.
ಅಷ್ಟೇ ಅಲ್ಲ, ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆಪ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಬರೀ ಚುನಾವಣೆ, ಚುನಾವಣೆ ಫಲಿತಾಂಶದ್ದೇ ಚರ್ಚೆ, ವಾದ-ವಿವಾದ. ಇದೇ ಮೊದಲ ಬಾರಿಗೆ ಸಾಮಾಜಿಕ ತಾಣಗಳು ಚುನಾವಣೆ ಪ್ರಕ್ರಿಯೆಯಲ್ಲಿ ಪ್ರಭಾವಿ ಮಾಧ್ಯಮಗಳಾಗಿ ಕೆಲಸ ಮಾಡಿವೆ. ಚುನಾವಣೆ ಪ್ರಚಾರ ಭಾಷಣ, ಹೇಳಿಕೆಗಳು, ಪ್ರತಿಹೇಳಿಕೆಗಳು ಸಾಮಾಜಿಕ ತಾಣಗಳಲ್ಲಿ ಅದರಲ್ಲೂ ವಿಶೇಷವಾಗಿ ಟ್ವಿಟರ್‌ನಲ್ಲಿ ಸೃಷ್ಟಿಸಿದ ವಿವಾದ ಒಂದೆರಡಲ್ಲ. ಟಿವಿ, ಪತ್ರಿಕಾ ಸಂದರ್ಶನಗಳಿಗಿಂತಲೂ ಬಹಳ ಪ್ರಭಾವ ಮತ್ತು ವೇಗವಾಗಿ ಕೆಲಸ ಮಾಡಿವೆ. ಜನ ಹುಚ್ಚೆದ್ದವರಂತೆ ಫೇಸ್‌ಬುಕ್, ಟ್ವಟರ್ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಮುಖಂಡರು ಕೂಡ ಇವುಗಳನ್ನು ಪ್ರಚಾರ ಸಾಧನವನ್ನಾಗಿ ಬಳಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ ಕೀರ್ತಿ ಜನರಿಗೇ ಸಲ್ಲಬೇಕಾದ್ದು. ಬಹುಶಃ ಭವಿಷ್ಯದ ಚುನಾವಣೆಗಳಲ್ಲಿ ಟ್ವಟರ್, ಫೇಸ್‌ಬುಕ್ ಪ್ರಮುಖ ಅಥವಾ ಪ್ರಚಾರ ಮಾಧ್ಯಮವಾಗಿ ಪರಿವರ್ತನೆ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಒಟ್ಟಾರೆ ಈಗ ಮಳೆ ನಿಂತರೂ ಹನಿ ನಿಲ್ಲದು ಎಂಬಂತೆ ಚುನಾವಣೆ ಮುಗಿದರೂ ಅದರ ಫಲಿತಾಂಶದ ಭಜನೆ ಎಲ್ಲೆಡೆ ನಡೆಯುತ್ತಿದೆ. ಫಲಿತಾಂಶ ಬರುವವರೆಗೂ ಇದೊಂದು ಅನಿವಾರ್ಯ ಅತಿಥಿ ಎಂಬಂತೆ ಪರಿಭಾವಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜಕೀಯ ನಾಯಕರನ್ನು ನಿದ್ದೆಯಿಂದ ಎಬ್ಬಿಸಲು ಈಗ ಸಾಧ್ಯವಿಲ್ಲ. ಏಕೆಂದರೆ ಅವರು ನಿದ್ದೆ ಮಾಡುತ್ತಿಲ್ಲ. ನಿದ್ದೆ ಮಾಡುತ್ತಿರುವವರಂತೆ ಭಾಸವಾಗುತ್ತಿದ್ದಾರೆ. ನಿದ್ದೆ ಮಾಡದೇ ಫಲಿತಾಂಶದ ಕನಸಲ್ಲಿ ಮುಳುಗಿದ್ದಾರೆ. ಜನ ಕೂಡ ಅವರ ಜತೆಯಾಗಿದ್ದಾರೆ.
ಲಗೋರಿ: ಮನರಂಜನೆ- ಪ್ರಚೋದನೆ ಎಲ್ಲವನ್ನೂ ಒಟ್ಟೊಟ್ಟಿಗೆ ಉಣಿಸುವ ಶಕ್ತಿ ಇರುವುದು ಭಾರತದ ಎಲೆಕ್ಷನ್ ಥಿಯೇಟರ್‌ಗೆ ಮಾತ್ರ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


