ವಿನೋದ ಮೆಹ್ತಾ, ಬಾರು ವಿರುದ್ಧ ವಿಷಕಾರಿದ್ದೇಕೆ?
ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ...

ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಅವರು The Accidental Prime Minister: The Making and Unmaking of Manmohan singh ಎಂಬ ಪುಸ್ತಕ ಬರೆದಾಗ, ಅದು ಚುನಾವಣೆಯ ಕಾವಿನ ಉತ್ತುಂಗದಲ್ಲಿ ಬಿಡುಗಡೆಯಾದಾಗ, ಸಹಜವಾಗಿಯೇ ವಿವಾದಕ್ಕೆ ಕಾರಣವಾಯಿತು. ಆ ಕೃತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಹುತೇಕ ಮಂದಿ ಅದನ್ನು ಓದಿರಲಿಲ್ಲ ಹಾಗೂ ಓದಿರುವ ಸಾಧ್ಯತೆಯೂ ಇರಲಿಲ್ಲ. ಓದಿದ್ದರೆ ಯಾರೂ ಗಂಟಲನಾಳ ಉಬ್ಬಿಸಿಕೊಂಡು ಕಿರುಚಿಕೊಳ್ಳುತ್ತಿರಲಿಲ್ಲ. ಆ ಪುಸ್ತಕದ ಮುಖ್ಯಾಂಶಗಳನ್ನಷ್ಟೇ ತಿಳಿದುಕೊಂಡು, ಕೃತಿ ಬಿಡುಗಡೆಯಾದ ಸಾಯಂಕಾಲ ಟಿವಿ ಸಂವಾದದಲ್ಲಿ ದನಿಯೇರಿಸಿ ಮಾತಾಡಿದವರೇ ಹೆಚ್ಚು. ಚುನಾವಣೆಯ ಪ್ರಚಾರ ಬಿರುಸು ಪಡೆದುಕೊಂಡ ಸಂದರ್ಭದಲ್ಲಿ ಅದನ್ನು ಬಿಡುಗಡೆ ಮಾಡುವ ಅಗತ್ಯವೇನಿತ್ತು ಎಂದು ಕೇಳುವ ಕಾಂಗ್ರೆಸ್ಸಿಗರಿಗೆ ಈ ಕೃತಿಯೊಳಗಿನ ಸಂಗತಿಗಳು ಅಪಥ್ಯವಾಗಿರಬಹುದು. ಆದರೆ ಈ ಪುಸ್ತಕವನ್ನು ಇಡಿಯಾಗಿ ಓದಿದ ಯಾರಿಗಾದರೂ ಕಾಂಗ್ರೆಸ್ಸಿಗರಿಗೆ ಅಪಥ್ಯವಾಗಲೆಂದು ಬಾರು ಇದನ್ನು ಬರೆದಿದ್ದಾರೆಂದು ಅನಿಸುವುದಿಲ್ಲ. ಅಷ್ಟಕ್ಕೂ ಅವರು ಪ್ರಧಾನಿಯವರನ್ನು ತೇಜೋವಧೆ ಮಾಡಿದ್ದಾರೆ, ಮುಜುಗರಕ್ಕೆ ಸಿಲುಕಿಸಿದ್ದಾರೆ, ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಪ್ರಧಾನಿಯವರನ್ನು ಸರಿಯಾದ ಭೂಮಿಕೆಯಲ್ಲಿ ನಿಲ್ಲಿಸುವ, ಆ ದಿನಗಳಲ್ಲಿನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆಂದು ಹೇಳಬಹುದು.
ಈ ಕೃತಿ ಬಿಡುಗಡೆಯಾದಾಗ 'ಔಟ್‌ಲುಕ್' ವಾರಪತ್ರಿಕೆಯ ಸಂಪಾದಕೀಯ ನಿರ್ದೇಶಕ ವಿನೋದ್ ಮೆಹ್ತಾ ಯಾವ ರೀತಿ ಪ್ರತಿಕ್ರಿಯಿಸಬಹುದೆಂಬ ಕುತೂಹಲ, ಪುಸ್ತಕ ಬಿಡುಗಡೆಯಾದ ದಿನದ ರಾತ್ರಿ ಹೊತ್ತಿಗೆ ಬಹಿರಂಗವಾಗಿತ್ತು. 'ಟೈಮ್ಸ್ ನೌ' ಚಾನೆಲ್‌ನಲ್ಲಿ ಅರ್ನಾಬ್ ಗೋಸ್ವಾಮಿ 'ನ್ಯೂಸ್ ಅವರ್' ಸಂವಾದದಲ್ಲಿ ಭಾಗವಹಿಸಿದ್ದ ಮೆಹ್ತಾ, ಬಾರು ಬಗೆಗಿನ ತಮ್ಮ ಅಸಹನೆ, ನಂಜು, ಕೋಪವನ್ನು ಹೊರಹಾಕಿದ್ದರು. ಅದೇ ವಾರದ ತಮ್ಮ ಪತ್ರಿಕೆಯಲ್ಲಿ 'ಡೆಲ್ಲಿ ಡೈರಿ' ಅಂಕಣದಲ್ಲಿ ಅದಕ್ಕೆ ವ್ಯಂಗ್ಯದ ಅಕ್ಷರ ರೂಪ ಕೊಟ್ಟಿದ್ದರು. Sanjay Baru's book, or 'job application' as it is Popularly being called... ಎಂದು ಬರೆದಾಗಲೇ ಅವರ ಇಂಗಿತವನ್ನು ಅರ್ಥೈಸಿಕೊಳ್ಳಬಹುದಿತ್ತು. ಈ ಪುಸ್ತಕ ಬರೆಯುವ ಮೂಲಕ ಬಾರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆನ್ನಿಗೆ ಇರಿದಿದ್ದಾರೆಂದು ಮೆಹ್ತಾ ಹೇಳುತ್ತಾರೆ.
ಸೋನಿಯಾ ಅವರ ಮೇಲೆ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರಂತೆ. ಬಾರು ಅವರಂಥ ಕಿಡಿಗೇಡಿಯನ್ನು ಪ್ರಧಾನಿ ಕಾರ್ಯಾಲಯದಿಂದ ಓಡಿಸುವಂತೆ ಹೇಳಿದ್ದರಂತೆ. ಆದರೆ ಸೋನಿಯಾ ಅವರೇ ಬಾರು ಅವರನ್ನು ಬಚಾವ್ ಮಾಡಿದ್ದರಂತೆ. ಮೂರು ಹೆಣ್ಣು ಮಕ್ಕಳಿರುವ ಡಾ. ಮನಮೋಹನಸಿಂಗ್ ಅವರು ಬಾರು ಅವರನ್ನು ತಮ್ಮ ಮಗನೆಂದು ಭಾವಿಸಿದ್ದಾರೆಂದು ವಾದಿಸುತ್ತಾ ಅವರನ್ನು (ಬಾರು) ಸೋನಿಯಾ ಸಮರ್ಥಿಸಿಕೊಂಡಿದ್ದರಂತೆ.
ಹಾಗೆಂದು ಮೆಹ್ತಾ ಬರೆದುಕೊಂಡಿದ್ದಾರೆ.
ಬಾರು ಅವರ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಬಿಜೆಪಿ ಪರ ನಿಲುವುಗಳ ಬಗ್ಗೆ ತಮಗೆ ಗೊತ್ತಿತ್ತು ಎಂದು ಸೋನಿಯಾ ಜತೆಗಿನ ಅಪರೂಪದ ಭೇಟಿ ಸಂದರ್ಭದಲ್ಲಿ ಅವರು ಮೆಹ್ತಾಗೆ ಹೇಳಿದ್ದರಂತೆ. ಇಂಥ ಸಂಗತಿಗಳ ಬಗ್ಗೆ ಸಹ ಸೋನಿಯಾಗೆ ಮಾಹಿತಿಯಿರುವ ಕುರಿತು ಮೆಹ್ತಾಗೆ ಆಶ್ಚರ್ಯವಾಗಿತ್ತಂತೆ. ಆದರೆ ಡಾ. ಸಿಂಗ್ ಮೇಲಿನ ಗೌರವದಿಂದ ಬಾರು ವಿರುದ್ಧ ಕ್ರಮಕೈಗೊಳ್ಳಲಿಲ್ಲವಂತೆ. ಈಗ ಸೋನಿಯಾ ತಮ್ಮ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡುತ್ತಿರಬಹುದು ಎಂದು ಮೆಹ್ತಾ ಹೇಳುತ್ತಾರೆ.
ಕೊನೆಯಲ್ಲಿ ಮೆಹ್ತಾ ಹೇಳುತ್ತಾರೆ-'ದಿಲ್ಲಿಯ ಖಾನ್ ಮಾರ್ಕೆಟ್‌ನಲ್ಲಿರುವ ಪುಸ್ತಕದ ಅಂಗಡಿಗೆ ಹೋಗಿದ್ದೆ. ಅಲ್ಲಿ ಬಾರು ಅವರ ಪುಸ್ತಕವನ್ನು New Fiction' ಕೌಂಟರ್‌ನಲ್ಲಿ ಇಟ್ಟಿದ್ದರು. ಎಷ್ಟು ಸಮರ್ಪಕ, ಸೂಕ್ತ.'
ತಾವು ಕಾಂಗ್ರೆಸ್‌ನ ಬೆಂಬಲಿಗ, ಸೋನಿಯಾ ಗಾಂಧಿ ಬಾಲಬಡುಕ, ಚೇಲಾ ಎಂದು ತಮ್ಮನ್ನೇ ಕರೆದುಕೊಳ್ಳುವ, ಆ ಮೂಲಕ ಆ ಆರೋಪಗಳಿಂದ ಮುಕ್ತನಾಗಬೇಕೆಂದು ಬಯಸುವ, ಬೇರೆಯವರ ಕೈಗಳಿಂದ ಬಡಿಸಿಕೊಳ್ಳುವ ಬದಲು ತಮ್ಮ ಕೈಗಳಿಂದಲೇ ಹೊಡೆದುಕೊಂಡು ಅಷ್ಟರಮಟ್ಟಿಗೆ ಬಚಾವ್ ಆಗುವ ಮೆಹ್ತಾ ಯಾಕೆ ಹೀಗೆ ಬರೆದಿದ್ದಾರೆ?
ಅದಕ್ಕೆ ಕಾರಣವೇನು?
ಬಾರು ಪುಸ್ತಕ ಓದಿದರೆ ಗೊತ್ತಾಗುತ್ತದೆ. ಕಾಂಗ್ರೆಸ್ ಹೈಕಮಾಂಡಿನ (ಸೋನಿಯಾ) ವಿರುದ್ಧ ಒಂದು ಸಾಲು ಬರೆದರೂ ಅದನ್ನು ಎಡಿಟ್ ಮಾಡದೇ ಬಿಡುತ್ತಿರಲಿಲ್ಲ ಎಂದು ಮೆಹ್ತಾ ಬಗ್ಗೆ ಬಾರು ಬರೆದಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ಸಂಪಾದಕ ಮಹಾಶಯರು ವಿದೇಶ ಪ್ರಯಾಣದಲ್ಲಿ ಗಿಟ್ಟಿಸಿಕೊಂಡ ವಿಶೇಷ ಸವಲತ್ತುಗಳ ಬಗ್ಗೆ ಸಹ ಬಾರು ಪ್ರಸ್ತಾಪಿಸಿದ್ದಾರೆ.
ಕೆಲವರಲ್ಲಿ ಆಕ್ರೋಶ ಹುಟ್ಟಿಸಲು ಹೊಡೆಯಬೇಕಿಲ್ಲ, ಗಾಯ ಮಾಡಬೇಕಿಲ್ಲ. ಚಡ್ಡಿಯ ಲಾಡಿ ಹಿಡಿದು ಎಳೆದರೂ ಸಾಕು!
ಸಹನೆಯೋ, ಗುಲಾಮಗಿರಿಯೋ
ಸಂಜಯ ಬಾರು ಪುಸ್ತಕದಲ್ಲಿ ನೂರಾರು ಪ್ರಸಂಗಗಳು, ಒಳನೋಟಗಳಿವೆ. ಪ್ರಧಾನಿ ಕಾರ್ಯಾಲಯದ ಅನೇಕ ಸೂಕ್ಷ್ಮ ಒಳಸುಳಿಗಳನ್ನು ಅವರು ಬಿಡಿಸಿಟ್ಟಿದ್ದಾರೆ. ಈ ಸಂಗತಿಗಳೆಲ್ಲ ಪತ್ರಿಕೆಯಲ್ಲಿ ವರದಿಯಾಗುವಂಥದ್ದಲ್ಲ. ಪಾರ್ಟಿಗಳಲ್ಲಿ ಹೇಳಿ ಹಾರಿಹೋಗುವಂಥವು. ಅಂಥ ಅನೇಕ ಪ್ರಸಂಗಗಳನ್ನು ಬಾರು ದಾಖಲಿಸಿದ್ದಾರೆ.
ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾದ ಆರಂಭದಲ್ಲಿ ವಿದೇಶಾಂಗ ಸಚಿವರಾಗಿದ್ದ ನಟವರ್‌ಸಿಂಗ್ ನಡೆವಳಿಕೆ ಹೇಗಿತ್ತೆಂದರೆ ಅವರು ಡಾ. ಸಿಂಗ್ ಅವರನ್ನು 'ಮನಮೋಹನ್' ಎಂದು ಸಂಬೋಧಿಸುತ್ತಿದ್ದರಂತೆ. ರಾಜಕಾರಣದಲ್ಲಿ ತಾನು ನಿಮಗಿಂತ ಹಿರಿಯ, ಅನುಭವಿ ಎಂಬ ಸಂದೇಶವನ್ನು ತಮ್ಮ ಹಾವಭಾವ, ಮಾತಿನಲ್ಲಿ ಆಗಾಗ ರವಾನಿಸುತ್ತಿದ್ದರಂತೆ. ನಾಲ್ಕು ಜನರ ಸಮ್ಮುಖದಲ್ಲಿ ಪ್ರಧಾನಿಯವರನ್ನು 'ಹಾಯ್, ಹಲೋ ಮನಮೋಹನ್' ಎಂದು ಕರೆಯುತ್ತಿದ್ದರಂತೆ.
ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್‌ಸಿಂಗ್ ಅವರದ್ದು ಇನ್ನೊಂದು ರೀತಿಯ ವರಸೆ. ಕ್ಯಾಬಿನೆಟ್ ಮೀಟಿಂಗ್ ಅಥವಾ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪ್ರಧಾನಿ ಡಾ. ಸಿಂಗ್ ಆಗಮಿಸಿದಾಗ ಅರ್ಜುನ್‌ಸಿಂಗ್ ಎದ್ದು ನಿಂತು ಗೌರವ ಸೂಚಿಸದೇ ಕುಳಿತಲ್ಲೇ ಕುಳಿತಿರುತ್ತಿದ್ದರಂತೆ.
ಇವರಿಬ್ಬರನ್ನೂ ಕರೆಯಿಸಿದ ಸೋನಿಯಾ, ತಮ್ಮ ನಡವಳಿಕೆ ತಿದ್ದಿಕೊಳ್ಳುವಂತೆ ಸೂಚಿಸಿದರಂತೆ. ಆದರೂ ಇವರಿಬ್ಬರೂ ಒಲ್ಲದ ಮನಸ್ಸಿನಿಂದ, ಸೋನಿಯಾ ಹೇಳಿದರೆಂಬ ಕಾರಣಕ್ಕೆ ಪ್ರಧಾನಿಯವರಿಗೆ ಗೌರವ ಕೊಡಲಾರಂಭಿಸಿದರಂತೆ. ತಾನು ಹೇಳುವುದಕ್ಕಿಂತ ತನ್ನ ವರ್ತನೆಯಲ್ಲೂ ಬದಲಾವಣೆ ತರುವ ಮೂಲಕ ಪ್ರಧಾನಿಯವರ ಬಗ್ಗೆ ಉಳಿದ ಸಚಿವರ ವರ್ತನೆಯನ್ನು ಬದಲಿಸಲು ಸೋನಿಯಾ ನಿರ್ಧರಿಸಿದರಂತೆ. ಪ್ರಧಾನಿಯವರು ಭಾಗವಹಿಸುವ ಕಾರ್ಯಕ್ರಮದಲ್ಲಿ ತಾವೂ ಭಾಗವಹಿಸುವ ಸಂದರ್ಭ ಬಂದಾಗ, ಡಾ. ಸಿಂಗ್ ಆಗಮಿಸುವುದಕ್ಕಿಂತ ಐದು ನಿಮಿಷ ಮುಂಚಿತವಾಗಿ ಸೋನಿಯಾ ಬಂದು, ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ನಿರ್ಗಮಿಸಿದ ನಂತರ ತೆರಳುತ್ತಿದ್ದರಂತೆ. ತಮ್ಮ ಅನುಪಸ್ಥಿತಿಯಲ್ಲಿ ಯುಪಿಎ ಸಮನ್ವಯ ಸಭೆ ಅಥವಾ ಕಾಂಗ್ರೆಸ್ ಪಕ್ಷದ ಸಭೆಯ ಅಧ್ಯಕ್ಷತೆಯನ್ನು ವಹಿಸುವಂತೆ ಡಾ.ಸಿಂಗ್‌ಗೆ ಸೂಚಿಸುತ್ತಿದ್ದ್ದರಂತೆ.
ಡಾ. ಸಿಂಗ್ ಅವರ ದೊಡ್ಡ ಸಮಸ್ಯೆ ಹಾಗೂ ಪ್ಲಸ್ ಪಾಯಿಂಟ್ ಏನಾಗಿತ್ತೆಂದರೆ, ಮೀಡಿಯಾದಲ್ಲಿ ಎಂದೂ ತಾವು ಸೋನಿಯಾಗಿಂತ ಹೆಚ್ಚು ಜನಪ್ರಿಯರಾಗಬೇಕೆಂದು ಹವಣಿಸಲಿಲ್ಲ. ಟಿವಿ ಚಾನೆಲ್ ಅಥವಾ ಪತ್ರಿಕೆಗಳು ಸಮೀಕ್ಷೆಗಳ ಫಲಿತಾಂಶ ಪ್ರಕಟಿಸಿದಾಗ, ಸೋನಿಯಾಗಿಂತ ತಮ್ಮ ರ್ಯಾಂಕಿಂಗ್ ಅಥವಾ ಜನಪ್ರಿಯತೆ ತುಸು ಕಡಿಮೆ ಎಂದಾಗ, ನಿರಾಳರಾಗಿ 'ವೆರಿಗುಡ್' ಎಂಬ ಉದ್ಗಾರ ತೆಗೆಯುತ್ತಿದ್ದರಂತೆ. ಸೋನಿಯಾಗಿಂತ ಡಾ. ಸಿಂಗ್ ಹೆಚ್ಚು ಜನಪ್ರಿಯ ಎಂದೇನಾದರೂ ಪ್ರಕಟವಾದರೆ ಫಜೀತಿಗೊಳಗಾದವರಂತೆ ಮೂಡು ಕೆಡಿಸಿಕೊಳ್ಳುತ್ತಿದ್ದರಂತೆ. ತಾವು Low Profile ಆಗಿರುವುದರಲ್ಲಿಯೇ ವಿಚಿತ್ರ ಆನಂದ, ಸಂತೃಪ್ತಿ ಕಾಣುತ್ತಿದ್ದರಂತೆ.
ಹತ್ತು ವರ್ಷ ಈ ರೀತಿ ಕಳೆದರೆಂದರೆ ತಮಾಷೆಯಾ? ಅದೆಂಥ ಸಹನೆ (ಗುಲಾಮಗಿರಿ?) ಇರಬಹುದು?
ಕಲ್ಲು ಬಿದ್ದಾಗಲೇ ಕತ್ತೆತ್ತಿ ನೋಡುವುದು!
ನಿರ್ಮಾಣ ಹಂತದಲ್ಲಿದ್ದ ಕಟ್ಟಡ. ಅದರ 16ನೇ ಮಹಡಿಯಿಂದ ಮೇಲ್ವಿಚಾರಕನೊಬ್ಬ ಗ್ರೌಂಡ್ ಫ್ಲೋರ್‌ನಲ್ಲಿದ್ದ ಕೆಲಸಗಾರನನ್ನು ಕೂಗಿ ಕರೆದ. ಆದರೆ ವಿಪರೀತ ಗದ್ದಲವಿದ್ದ ಕಾರಣ ಕೆಲಸಗಾರನಿಗೆ ಮೇಲ್ವಿಚಾರಕನ ದನಿ ಕೇಳಿಸಲಿಲ್ಲ.
ಅವನ ಗಮನ ಸೆಳೆಯಲು ಮೇಲ್ವಿಚಾರಕ 10 ರುಪಾಯಿಯ ನೋಟೊಂದನ್ನು ಮೇಲಿನಿಂದ ಎಸೆದ.
ಕೆಳಗೆ ನಿಂತ ಆಸಾಮಿ, ಆ ನೋಟನ್ನು ಮೆಲ್ಲಗೆ ಕಿಸೆಗಿಳಿಸಿ ತನ್ನ ಕೆಲಸದಲ್ಲಿ ನಿರತನಾದ. ಆದರೆ ಮೇಲೆ ಮಾತ್ರ ನೋಡಲಿಲ್ಲ.
ಈ ಬಾರಿ ಮೇಲ್ವಿಚಾರಕ 500 ರುಪಾಯಿ ನೋಟೊಂದನ್ನು ಎಸೆದ. ಕೆಲಸಗಾರ ಖುಷಿಯಿಂದ ಅದನ್ನೂ ತೆಗೆದುಕೊಂಡು ತನ್ನ ಕೆಲಸ ಮುಂದುವರಿಸಿದ.
ಕೊನೆಗೆ ಮೇಲ್ವಿಚಾರಕ ಚಿಕ್ಕ ಕಲ್ಲನ್ನೆತ್ತಿಕೊಂಡು ಕೆಲಸಗಾರನ ಮೇಲೆ ಎಸೆದ. ಕಲ್ಲು ಬಿದ್ದ ತಕ್ಷಣವೇ ಕೆಲಸಗಾರ ಮೇಲೆ ನೋಡಿದ!
ನಮ್ಮ ಜೀವನವೂ ಈ ಕಥೆಗಿಂತ ಭಿನ್ನವಾಗಿಲ್ಲ.
ಮೇಲಿನಿಂದ ದೇವರು ನಮ್ಮ ಜೊತೆಗೆ ಮಾತನಾಡಲು ಪ್ರಯತ್ನಿಸುತ್ತಲೇ ಇರುತ್ತಾನೆ. ಆದರೆ ಅದನ್ನು ಕೇಳಿಸಿಕೊಳ್ಳದಷ್ಟು ನಾವು ನಮ್ಮ ಪ್ರಾಪಂಚಿಕ ಕೆಲಸದಲ್ಲಿ ಮುಳುಗಿಹೋಗಿರುತ್ತೇವೆ.
ನಂತರ ಆತ ಕೆಲವು ಉಡುಗೊರೆಗಳನ್ನು ಕಳುಹಿಸಿಕೊಡುತ್ತಾನೆ. ಅವೆಲ್ಲಿಂದ ಬಂದವು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೇ, ಕೊಟ್ಟವನಿಗೆ ಕೃತಜ್ಞತೆ ಸಲ್ಲಿಸದೇ, ಇದೆಲ್ಲ ನಮ್ಮ 'ಲಕ್' ಇರಬಹುದು ಎಂದುಕೊಳ್ಳುತ್ತೇವೆ. ಆದರೆ ಯಾವಾಗ ಸಮಸ್ಯೆಯೆಂಬ ಚಿಕ್ಕ ಕಲ್ಲು ಬಂದು ನೆತ್ತಿಗೆ ಬಡಿಯುತ್ತದೋ ಆಗಲೇ ನಾವು ಮೇಲೆ ನೋಡುವುದು. ಆತನೊಂದಿಗೆ ಮಾತನಾಡುವುದು!
ಎಚ್ಚರಿಕೆ!
"ಒಂದು ವೇಳೆ ನಿಮ್ಮ ಹೆಂಡತಿ ಡ್ಯುಯಲ್ ಸಿಮ್ ಇರುವ ಫೋನ್ ಬಳಸುತ್ತಾಳೆಂದರೆ. ಆಕೆಯ ಆ ಎರಡೂ ನಂಬರ್‌ಗಳನ್ನೂ 'ಹೆಂಡತಿ' ಎಂಬ ಹೆಸರಿನಲ್ಲೇ ಸೇವ್ ಮಾಡಿ. ಹೆಂಡತಿ 1 ಮತ್ತು ಹೆಂಡತಿ 2 ಎಂಬ ಹೆಸರಿನಲ್ಲಿ ಸೇವ್ ಮಾಡಿದರೆ ಗಂಭೀರವಾಗಲಿದೆ ನಿಮ್ಮ ಸ್ಥಿತಿ..."
ಇಂತಿ, ಆಸ್ಪತ್ರೆಯಲ್ಲಿರುವ ಪತಿ!
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


