ನಮ್ಮ ಪಿಎಂ, ಸಿಎಂಗೇಕೆ ಇಂಥ ಕನಸು ಬೀಳುವುದಿಲ್ಲ?
ನಮ್ಮ ಪಿಎಂ, ಸಿಎಂಗೇಕೆ ಇಂಥ ಕನಸು ಬೀಳುವುದಿಲ್ಲ?

ದುಬೈಗೆ ಹೋಗದೇ ಹತ್ತು ತಿಂಗಳುಗಳಾಗಿದ್ದವು . ಕಳೆದ ವರ್ಷದ ಜುಲೈ ಮೊದಲ ವಾರದಲ್ಲಿ ಅಲ್ಲಿದ್ದೆ. ಚುನಾವಣೆ ಮುಗಿದ ಮರುದಿನ ದುಬೈ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದೆ. ನಾನು ಏನಿಲ್ಲವೆಂದರೂ ಅಲ್ಲಿಗೆ ಕನಿಷ್ಠ ಹತ್ತು ಬಾರಿ ಹೋಗಿರಬಹುದು. ಅಲ್ಲಿನ ಕನ್ನಡಿಗರು, ಉದ್ಯಮಿಗಳಂತೆ ರಸ್ತೆ, ಬೀದಿ, ಕಟ್ಟಡ, ಪ್ರದೇಶ, ಮಾಲ್‌ಗಳು, ಹೋಟೆಲ್‌ಗಳು ಪರಿಚಿತವೇ. ಆದರೆ ಪ್ರತಿಸಲ ದುಬೈಗೆ ಹೋದಾಗಲೂ ಅಲ್ಲೊಂದು ಅಚ್ಚರಿ, ಬೆರಗು ಕಾದಿರುತ್ತದೆ. ಕೆಲವು ವರ್ಷಗಳ ಹಿಂದೆ ಹೋದಾಗ ಆ ನೆಲದಲ್ಲಿ ಏನೂ ಇರಲಿಲ್ಲ. ಎರಡುವರ್ಷ ಬಿಟ್ಟು ಹೋದಾಗ ಜಗತ್ತಿನಲ್ಲಿಯೇ ಅತಿ ಎತ್ತರದ ಬುರ್ಜ್ ಖಲೀಫಾ ಕಟ್ಟಡ ಎದ್ದು ನಿಂತಿತ್ತು. ಮನೆಯ ಅಂಗಳದಲ್ಲಿನ ಹೂದೋಟದಲ್ಲಿನ ಗಿಡಗಳು ಸಾಯಂಕಾಲ ಖಾಲಿಖಾಲಿಯಾಗಿದ್ದು, ಬೆಳಗಾಗುವ ಹೊತ್ತಿಗೆ ಹೂವುಗಳಿಂದ ನಳನಳಿಸುತ್ತವಲ್ಲ, ಆ ರೀತಿ ಅಲ್ಲಿ ಕಟ್ಟಡಗಳು, ಮುಗಿಲಿಗೆ ಮುಸುಡಿ ಮಾಡಿ ನಿಂತಿರುತ್ತವೆ.
ಅದು ಒಂದೇ ಇರಬಹುದು, ನಮ್ಮೂರ ದೊಡ್ಡಾಲದ ಮರ ಕೊಡುವ ಸಂತಸ, ಸಮಾಧಾನ, ಸಂತೃಪ್ತಿಯನ್ನು ಬುರ್ಜ್ ಖಲೀಫಾ ಕೊಡಲು ಸಾಧ್ಯವಿಲ್ಲ ಎಂಬುದೇನೋ ನಿಜ. ಆದರೆ ದೊಡ್ಡಾಲದ ಮರದಲ್ಲಿ ದುಡ್ಡು ಬೆಳೆಯುವುದಿಲ್ಲವೆಂಬುದೂ ಅಷ್ಟೇ ನಿಜ. ಹೀಗಾಗಿ ಅವರವರ ಸಂತೃಪ್ತಿಗಾಗಿ ಬುರ್ಜ್ ಖಲೀಫಾವೂ ಇದೆ, ದೊಡ್ಡಾಲದ ಮರವೂ ಇದೆ. ಪ್ರತಿಸಲ ದುಬೈಗೆ ಹೋದಾಗಲೂ ಅಲ್ಲೊಂದು ಅಚ್ಚರಿ ನೆಗೆದಿರುತ್ತಿದೆ. ಅದೇನೂ ಇಲ್ಲದಿದ್ದರೂ ಅಲ್ಲಿನ ರಸ್ತೆ, ಬೀದಿಗಳಲ್ಲಿ ಗೋಚರಿಸುವ ಸೈನಿಕ ಶಿಸ್ತು, ಸ್ವಚ್ಛತೆ ಮನಸ್ಸನ್ನು ನಾಟದೇ ಹೋಗುವುದಿಲ್ಲ. ಒಂದು ನಗರವಾಗಲಿ, ಊರಾಗಲಿ ಚಲನಶೀಲತೆಯನ್ನು ಕಾಪಾಡಿಕೊಳ್ಳುವ ಪರಿಯಿದು.
ನ್ಯೂಯಾರ್ಕಿಗೆ ಪ್ರತಿಸಲ ಹೋದಾಗಲೂ ನನಗೆ ಪರಕೀಯ ಭಾವ ಕಾಡುತ್ತದೆ. ಅಲ್ಲಿನ ಅಂಗಡಿ, ಬೋರ್ಡು, ಜನ, ಭಾಷೆ, ವಾಸನೆ, ಬೀದಿ ನಿಯಮಗಳೆಲ್ಲ ಹೊಸದಾಗಿರುವಂತೆ ಭಾಸವಾಗುತ್ತದೆ. ಕಾಲಕಾಲಕ್ಕೆ ಆ ನಗರ ಜಗತ್ತಿನ ಎಲ್ಲ 'ಒಳ್ಳೆಯ ಸಂಗತಿ'ಗಳನ್ನು ತನ್ನೊಳಗೆ ಅಳವಡಿಸಿಕೊಂಡು reinvent ಆಗುತ್ತಿರುತ್ತದೆ. ವಿಶ್ವದ ಯಾವುದೇ ಮೂಲೆಯಿಂದ ಬಂದವರಿಗೂ ಅಲ್ಲಿ ತನ್ನದೆನ್ನುವ ಒಂದಾದರೂ ಸಂಗತಿ ಕಾಣಿಸುತ್ತದೆ. ನಿಮ್ಮ ಬಾಲ್ಯದ ಸ್ನೇಹಿತ ರತ್ನಾಕರ ರ್ಯಾಟ್, ಗೋವಿಂದು ಗವ್, ಲಕ್ಷ್ಮೀನಾರಾಯಣ ಲ್ಯಾನ್ ಆಗಿ ನಿಮ್ಮ ಮುಂದೆ ಧುತ್ತೆಂದು ಕಂಗೊಳಿಸಬಹುದು. ಈ ಕಾರಣಕ್ಕಾಗಿ ನ್ಯೂಯಾರ್ಕ್‌ನ್ನು ವಿಶ್ವದ melting pot ಅಂತ ಕರೆಯುತ್ತಾರೆ. ಇಡೀ ಪ್ರಪಂಚದ ಮೇಲೆ ಕುಳಿತ ನೀರಹನಿಗಳನ್ನು ಒರೆಸಿ, ಆ ಟವಲನ್ನು ಹಿಂಡಿದರೆ ಬೀಳುವ ನೀರಿದೆಯಲ್ಲ ಅದು ನ್ಯೂಯಾರ್ಕ್!
ಈ ಮಾತಿಗೆ ನಿಲುಕುವ ಇನ್ನೊಂದು ನಗರವಿದ್ದರೆ ಅದು ದುಬೈ. ಅಲ್ಲಿ ಜಗತ್ತಿನ ಎಲ್ಲ ದೇಶಗಳ ಜನರೂ ತಮ್ಮದೊಂದು ಸಂಗತಿಯನ್ನು ಕಾಣುತ್ತಾರೆ ಅಥವಾ ತಮ್ಮ ದೇಶದಲ್ಲಿ ಕಾಣದ ಯಾವುದೋ ಒಂದು ಅಂಶ ಅಲ್ಲಿ ಕಾಣುತ್ತದೆ. ಇಷ್ಟಾಗಿಯೂ We feel at home. ಕಾರಣ ನಮ್ಮೂರಿನ ಜನರನ್ನು ಹೋಲುವವರು, ನಮ್ಮ ಭಾಷೆ ಮಾತಾಡುವವರು, ಅಲ್ಲಿ ಸಿಗುತ್ತಾರೆ. ಉಡುಪಿ, ಕಾಮತ್ ಹೋಟೆಲ್ ಶರವಣ ಭವನವನ್ನು ನೋಡಿದರೆ ನಾವು ಪರಕೀಯ ನಾಡಿನಲ್ಲಿದ್ದೇವೆಂದು ಅಂದುಕೊಳ್ಳುವುದಾದರೂ ಹೇಗೆ?
ನನಗೆ ಇವೆಲ್ಲಕ್ಕಿಂತ ಮುಖ್ಯವೆನಿಸುವುದು ದುಬೈ ನಗರ ಹೀಗಿರಬೇಕೆಂದು ಅಂದುಕೊಂಡು ಆ ಪ್ರಕಾರ ಅದನ್ನು ರೂಪಿಸಿದ ಅಲ್ಲಿನ ನಿರ್ಮಾತೃಗಳ ಚಿಂತನೆ ಹಾಗೂ ಕನಸು ಮತ್ತು ಆ ನಗರವನ್ನು ಅಷ್ಟು ಅಚ್ಚುಕಟ್ಟಾಗಿ, ಅಂದವಾಗಿ, ಗಂಜಿ ಹಾಕಿ ಇಸ್ತ್ರಿ ಹೊಡೆದ ಗರಿಗರಿ ಬಟ್ಟೆಯಂತೆ ಮಡಚಿ ಒಪ್ಪವಾಗಿ ರೂಪಿಸಿಟ್ಟ ಅಲ್ಲಿನ ಆಡಳಿತ ರೂವಾರಿಗಳ ಮನಸ್ಸು. ಇಂಥ ದೇಶವನ್ನು ಕಟ್ಟಬೇಕೆಂದು ಅಲ್ಲಿನ ಆಡಳಿತಗಾರರು ಕನಸು ಕಂಡಿದ್ದರಿಂದ, ಕಾನೂನು, ನಿಯಮ ಪಾಲನೆಯ ರೇಖೆ ಎಳೆದಿದ್ದರಿಂದ, ಸೂತ್ರ ಹೆಣೆದಿದ್ದರಿಂದ ಅದು ಹಾಗಿದೆ. ಇಲ್ಲದಿದ್ದರೆ ಆ ಮರುಭೂಮಿಯಲ್ಲಿ, ಉಸುಕಿನ ಬಯಲಿನಲ್ಲಿ, ಮರಳುಗಾಡಿನಲ್ಲಿ ದುಬೈ ಎಂಬ ಕನಸಿನ ದೇಶ ಎದ್ದು ನಿಲ್ಲಲು, ಇಡೀ ಜಗತ್ತನ್ನು ತನ್ನತ್ತ ಸೆಳೆಯಲು ಸಾಧ್ಯವಾಗುತ್ತಿತ್ತಾ?
ಚಿಂತನೆಯಿಲ್ಲದೇ ಯಾವುದೂ ಅರಳುವುದಿಲ್ಲ. ಕಳೆದ ಆರೇಳು ದಶಕಗಳಿಂದ ಈ ದೇಶವನ್ನು ಕಟ್ಟಿದ, ರೂಪಿಸಿದ ಷೇಕ್‌ಗಳ ಚಿಂತನೆ, ಆಲೋಚನೆಯೇ ಎಂಥವರಿಗಾದರೂ ಸ್ಫೂರ್ತಿಗಾಥೆ. ದುಬೈಯನ್ನು ಜಗತ್ತಿನ ಮುಂಚೂಣಿ ದೇಶವಾಗಿ ಮುನ್ನಡೆಸುತ್ತಿರುವ ಈಗಿನ ರೂಲರ್ ಷೇಕ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಬಗ್ಗೆ ಹಲವು ಸಲ ಈ ಅಂಕಣದಲ್ಲಿ ಬರೆದಿದ್ದು ನಿಮಗೆ ನೆನಪಿರಬಹುದು. ಇವರ ಯೋಚನೆ, ವ್ಯಕ್ತಿತ್ವದ ಬಗ್ಗೆ ಅವರ ತೀರಾ ಆಪ್ತರಾದವರಿಂದ, ನಿಕಟವರ್ತಿಗಳಿಂದ ತಿಳಿದ ಬಳಿಕ ಅಭಿಮಾನ ಹೆಚ್ಚಿತು. ಅಷ್ಟೇ ಅಲ್ಲ, ಅವರ ಬಗೆಗಿನ ಪುಸ್ತಕ ಹಾಗೂ ಅವರು ಬರೆದ ಪುಸ್ತಕಗಳನ್ನು ಓದಲಾರಂಭಿಸಿದೆ. ಅವುಗಳನ್ನು ಓದಿದ ಬಳಿಕ ಮರಳುಗಾಡಿನಲ್ಲಿ ಮರಳು ಮಾತ್ರ ಅಲ್ಲ, ಮರುಳು ಮಾಡುವ ದೇಶವೂ ಉದ್ಭವಿಸುವುದು ಹೇಗೆ ಸಾಧ್ಯ ಎಂದು ಅರ್ಥವಾಗಿದ್ದು.
ನಾನು ಮೊನ್ನೆ ದುಬೈಗೆ ಹೋದಾಗ ಮಕ್ತೌಮ್ ಅವರ ಆಪ್ತರಾದ, (ಅವರ ಕೋರಿಕೆ ಮೇರೆಗೆ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ) ಅವರ ಅಂತರಂಗಕ್ಕೆ ತೆರೆದುಕೊಂಡಿರುವ, ನನಗೂ ಹತ್ತಿರದ ಸ್ನೇಹಿತರಾದವರೊಟ್ಟಿಗೆ ಅರ್ಧದಿನ ಕಳೆದೆ. ಅವರು ಮಕ್ತೌಮ್ ಅವರ ಕನಸು, ಚಿಂತನೆ, ಯೋಜನೆ, ಯೋಚನೆ, ಕಲ್ಪನೆ, ಇಂಗಿತಗಳನ್ನೆಲ್ಲ ನನ್ನ ಮುಂದೆ ಬಿಡಿಸುತ್ತಾ ಹೋದರು. ನಾನು ಕಣ್ಣು, ಬಾಯಿ ತೆರೆದುಕೊಂಡು ಚಂದಮಾಮ ಕತೆಗಳನ್ನು ಕೇಳುವ ಪುಟ್ಟ ಮಗುವಿನಂತೆ ಕುಳಿತಿದ್ದೆ.
ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುವ ಸರ್ಕಾರ ಹಾಗೂ ಆಡಳಿತಶಾಹಿಯನ್ನು ಇನ್ನು ಎರಡು ವರ್ಷಗಳಲ್ಲಿ ಜಾರಿಗೊಳಿಸುವುದು ಮಕ್ತೌಮ್ ಅವರ ತಕ್ಷಣದ ಆದ್ಯತೆ ಎಂದರು ನನ್ನ ಸ್ನೇಹಿತರು. ನೀವು ಪಂಚತಾರಾ ಹೋಟೆಲಿಗೆ ಮಧ್ಯರಾತ್ರಿ ಎರಡು ಗಂಟೆಗೆ ಹೋದರೂ ನಿಮ್ಮನ್ನು ನಗುನಗುತ್ತಲೇ ಸ್ವಾಗತಿಸುತ್ತಾರೆ, ತಂಪು ಪಾನೀಯ ಕೊಡುತ್ತಾರೆ, ರೂಮಿನತನಕ ಬಿಟ್ಟು ಬರುತ್ತಾರೆ, ನಿಮಗಾಗಿ ಅಹೋರಾತ್ರಿ ಕಾಫಿ ಶಾಪ್‌ಗಳು ತೆರೆದಿರುತ್ತವೆ, ನೀವು ಕೇಳಿದ್ದೆಲ್ಲ ನಿಮ್ಮ ರೂಮಿಗೇ ಬರುತ್ತದೆ, ಹೌದು ತಾನೆ? ಇವೆಲ್ಲ ಖಾಸಗಿಯವರಿಗೆ ಸಾಧ್ಯವಾಗುವುದಾದರೆ ಸರ್ಕಾರಕ್ಕೇಕೆ ಸಾಧ್ಯವಾಗುವುದಿಲ್ಲ? ದುಬೈ ಸರ್ಕಾರವೂ ಹೀಗೇ ಇರಬೇಕು. ಸರ್ಕಾರಿ ನೌಕರರೂ ಫೈವ್‌ಸ್ಟಾರ್ ಹೋಟೆಲ್‌ನ ಸಿಬ್ಬಂದಿಯಂತೆ ಸದಾ ನಗುತ್ತಲೇ ಜನರ ಸೇವೆಗೆ ಮುಂದಾಗಬೇಕು. ಸರ್ಕಾರವೆನ್ನುವುದು ಸೇವಾ ಕ್ಷೇತ್ರವಾಗಬೇಕು, hospitalityಯೇ ಅಲ್ಲಿ ಪ್ರಧಾನವಾಗಬೇಕು. ಕೆಂಪು ಪಟ್ಟಿ ಪ್ರಜೆಗಳಿಗೆ ಹಿಂಸೆಯಾಗಬಾರದು. ಯಾರೋ, ಯಾವುದೋ ಊರಿನಿಂದ ಬರೆದ ಪತ್ರವನ್ನು ಪೋಸ್ಟ್‌ಮನ್ ನಿಮ್ಮ ಮನೆಗೇ ತಲುಪಿಸುವ ವ್ಯವಸ್ಥೆ ಶತಮಾನಗಳಿಂದ ಇರುವುದಾದರೆ, ಪ್ರಜೆಗಳೂ ಬಯಸಿದ ಸೇವೆಯನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಏನು ಕಷ್ಟ? ಸರ್ಕಾರ ಅಂದ್ರೆ ಆಳುವ ವ್ಯವಸ್ಥೆ ಎಂಬ ಕಲ್ಪನೆ ಅನೇಕರಲ್ಲಿದೆ. ಸರ್ಕಾರದ ಚುಕ್ಕಾಣಿ ಹಿಡಿದವರೂ ಈ ಮನಸ್ಥಿತಿಯಿಂದ ಬಳಲುತ್ತಾರೆ. ಅದು ಹಳೆಯ ಆಲೋಚನೆ. ಸರ್ಕಾರ ಅಂದ್ರೆ ಈಛ್ಠಜ ತೆಗೆದುಕೊಳ್ಳುವ ವ್ಯವಸ್ಥೆ ಆಗಬೇಕು. ಜನರ ಎಲ್ಲ ಸಮಸ್ಯೆಗಳಿಗೂ ಸರ್ಕಾರದ ಬಳಿ ಉತ್ತರವಿರಬೇಕು. ಉತ್ತಮ ರಸ್ತೆ, ಒಳಚರಂಡಿ, ಶೌಚಾಲಯ ಹಾಗೂ ಮೂಲಸೌಲಭ್ಯಗಳನ್ನು ಒದಗಿಸಿದರೆ ಅರ್ಧದಷ್ಟು ಸಮಸ್ಯೆಯನ್ನು ನಿವಾರಿಸಿದಂತೆ. ಅಷ್ಟೇ ಅಲ್ಲ, ಅರ್ಧ ದೇಶವನ್ನು ಕಟ್ಟಿದಂತೆ. ಉತ್ತಮ ಆರೋಗ್ಯ ವ್ಯವಸ್ಥೆ ರೂಪಿಸುವುದೆಂದರೆ, ಆಸ್ಪತ್ರೆಗಳನ್ನು ಕಟ್ಟುವುದು ಎಂದು ಅನೇಕರು ಭಾವಿಸಿದಂತಿದೆ. ರೋಗವೇ ಬಾರದ ರೀತಿಯಲ್ಲಿ ಸ್ವಚ್ಛ ವಾತಾವರಣ ನಿರ್ಮಿಸುವುದು ಎಂದೇಕೆ ಭಾವಿಸಬಾರದು? ಅಂಥ ಪರಿಸರ ನಿರ್ಮಿಸಿದರೆ ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ. ಆಗಲೇ ನಾವಿರುವ ಪ್ರದೇಶ ವಾಸಯೋಗ್ಯವಾಗುತ್ತದೆ. ಇಲ್ಲದಿದ್ದರೆ ಅದು ರೋಗಗಳ ತವರಾಗುತ್ತದೆ. ಅಂಥ ಕಡೆ ಆಸ್ಪತ್ರೆ ಕಟ್ಟುವುದೆಂದರೆ ಅದು ನಿರರ್ಥಕ ಹಾಗೂ ವಿರೋಧಾಭಾಸದ ನಡೆಯಾಗುತ್ತದೆ.
ಹಾಗೆಂದು ಮಕ್ತೌಮ್ ಚಿಂತನೆಗಳನ್ನು ನನ್ನ ಸ್ನೇಹಿತರು ಹರವಿಟ್ಟರು.
ಪ್ರತಿದಿನ ಮಕ್ತೌಮ್ ದುಬೈ ನಗರದಲ್ಲಿ ಅಲ್ಲಲ್ಲಿ ಸಂಚರಿಸುತ್ತಾರಂತೆ. ಹೋಗುವಾಗ ರಸ್ತೆ ಅಕ್ಕ-ಪಕ್ಕದಲ್ಲಿ ಸಣ್ಣ-ಪುಟ್ಟ ದೋಷಗಳನ್ನು ಕಂಡರೂ ಅಲ್ಲಿಯೇ ಟಿಪ್ಪಣಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತಾರಂತೆ. ಇಪ್ಪತ್ನಾಲ್ಕು ಗಂಟೆಯೊಳಗೇ ಅದಕ್ಕೆ ಪರಿಹಾರ ಸಿಕ್ಕಿರುತ್ತದೆ. ಮಕ್ತೌಮ್ ಕಣ್ಣಿಗೆ 'ಹುಳುಕು' ಕಾಣಬಹುದೆಂದು ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳೇ ಇಡೀ ನಗರದಲ್ಲಿ ಬೆಳಗ್ಗೆ ಬೆಳಗ್ಗೆಯೇ ಒಂದು ಚಕ್ಕರ್ ಹೊಡೆದು, ದೊರೆಯ ಕಣ್ಣಿಗೆ ನ್ಯೂನತೆಗಳು ಕಾಣಿಸದಂತೆ ಸರಿಪಡಿಸಿರುತ್ತಾರಂತೆ.
ನೀವು ದುಬೈನ ಯಾವುದೇ ಮೇಲ್ಸೇತುವೆ (flyover)ನೋಡಿ, ಅದರ ಅಡಿ ಭಾಗವನ್ನು ವಾರಕ್ಕೊಮ್ಮೆ ಒದ್ದೆ ಬಟ್ಟೆಯಲ್ಲಿ ಒರೆಸಲಾಗುತ್ತದೆ. ನಗರದ ಯಾವುದೇ ಪ್ರದೇಶದಲ್ಲಿನ ಉದ್ಯಾನ, ಹಸುರು ಹಾಸು ನೀರಿಲ್ಲದೇ ಒಣಗುವುದಿಲ್ಲ. ರಸ್ತೆ ಗುಂಡಿ ಬಿದ್ದಿರುವುದಿಲ್ಲ. ಚರಂಡಿ ನೀರು ಕಟ್ಟಿ ನಿಂತಿರುವುದಿಲ್ಲ. ರಸ್ತೆಗೆ ಹಾಕಿದ ಬಣ್ಣ ಮಸುಕಾಗಿರುವುದಿಲ್ಲ. ರಸ್ತೆಯಂಚಿನ ಕಬ್ಬಿಣದ ಬೇಲಿಗೆ ವಾಹನ ಗುದ್ದಿದರೆ ಎಂಟು ತಾಸಿನೊಳಗೆ ರಿಪೇರಿಯಾಗಿ ಮೊದಲಿನ ಸ್ಥಿತಿಗೆ ಬಂದಿರುತ್ತದೆ. ಒಂದೇ ಒಂದು ದಾರಿದೀಪ ಬೆಳಗದೇ ಕೆಟ್ಟು ನಿಂತರೆ, ತಕ್ಷಣ ಅದನ್ನು ದುರಸ್ತಿಪಡಿಸಲಾಗುತ್ತದೆ. ನಗರದ ಸೌಂದರ್ಯಕ್ಕೆ ಸ್ವಲ್ಪ ಧಕ್ಕೆಯಾಗಲಿ, ಅಲ್ಪಸ್ವಲ್ಪ ತರಚಲಿ, ಅದನ್ನು ತಾಪ್ಡ್‌ತೋಪ್ಡ್ ಸರಿಪಡಿಸಲೇಬೇಕು. ಯಾವುದೇ ಸಮಜಾಯಿಶಿಯೂ ಕೆಲಸ ಮಾಡದಿರುವುದಕ್ಕೆ ಕಾರಣ ಅಲ್ಲ. ನೌಕರಿಗೆ ಸಂಚಕಾರ ತಂದುಕೊಂಡು ಕೆಲಸ ಮಾಡದೇ ಸುಮ್ಮನಿರಬಹುದಷ್ಟೇ.
ನೀವು ಕಾರನ್ನು ಡ್ರೈವ್ ಮಾಡುವಾಗ ಒಂದು ಪಕ್ಕ ಉಜ್ಜಿ ಹೋಯಿತೋ, ತರಚಿ ಹೋಯಿತೋ ಅನ್ನಿ ಅಥವಾ ನಿಮ್ಮ ಕಾರಿಗೆ ಯಾರೋ ಹಿಂದಿನಿಂದ ಗುದ್ದಿ ಅದು ತುಸು ನಪ್ಪಿಹೋಯಿತೆನ್ನಿ. ಒಂದು ವಾರದೊಳಗೆ ಅದನ್ನು ಸರಿಪಡಿಸದಿದ್ದರೆ ನಿಮಗೊಂದು 'ಆಪ್ತಸಲಹೆ' ರೂಪದಲ್ಲಿ ಸೂಚನೆ ಬರುತ್ತದೆ- 'ನಿಮ್ಮ ನುಜ್ಜುಗುಜ್ಜಾದ ವಾಹನದಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ'. ಇಂಥ ಸಣ್ಣ ಪುಟ್ಟ ಸಂಗತಿಗಳ ಬಗ್ಗೆ ಸಹ ಷೇಕ್ ತಲೆಕೆಡಿಸಿಕೊಳ್ಳುತ್ತಾರೆ. ನಾವು ನಮ್ಮ ಮನೆ ಬಗ್ಗೆ ಎಷ್ಟು ಆಸ್ಥೆ ವಹಿಸುತ್ತೇವೋ ಅದಕ್ಕಿಂತ ಹೆಚ್ಚಿನ ಕಾಳಜಿ, ಆಸಕ್ತಿಯನ್ನು ಅವರು ದೇಶ, ರಸ್ತೆ, ಬೀದಿ, ಚರಂಡಿ, ಉದ್ಯಾನ, ಸ್ವಚ್ಛತೆ, ನೈರ್ಮಲ್ಯ, ಕರೆಂಟು, ಆಸ್ಪತ್ರೆಯ ಬಗ್ಗೆ ವಹಿಸುತ್ತಾರೆ. ದುಬೈನಲ್ಲಿ ನಿಮಗೆ ಹೆಜ್ಜೆ ಹೆಜ್ಜೆಗೆ ಪೊಲೀಸರು ಕಾಣಲಿಕ್ಕಿಲ್ಲ. ಆದರೆ ಯಾವುದೋ ಅಗೋಚರಶಕ್ತಿ, ವ್ಯಕ್ತಿ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರಬಹುದು ಎಂಬ ಭಾವನೆಯಂತೂ ಬಂದೇ ಬರುತ್ತದೆ. ಆ ಅಗೋಚರ ಶಕ್ತಿಯನ್ನು ನೀವು ಮಕ್ತೌಮ್ ಎಂದು ಕರೆಯಬಹುದಾದರೆ ಕರೆಯಬಹುದು.
ಕಳೆದ ವರ್ಷದ ನವೆಂಬರ್‌ನಿಂದ ದುಬೈನಲ್ಲಿ ಏನೋ ಒಂದು ಹೊಸ ಕಳೆ. ನಿಧಾನವಾಗಿ ಮೈ ಕೈ ಕೊಡವಿಕೊಂಡು ಎದ್ದು ನಿಂತಿದೆ. ಹೊಸ ಇತಿಹಾಸ ಬರೆಯಲು ಉತ್ಸುಕವಾಗಿದೆ.
ವಿಷಯ ಏನಂದ್ರೆ, 2020ರಲ್ಲಿ ಪ್ರತಿಷ್ಠಿತ ವಿಶ್ವ ಎಕ್ಸ್‌ಪೋ ದುಬೈನಲ್ಲಿ ನಡೆಯಲಿದೆ. ಆರು ವರ್ಷಗಳ ನಂತರ ನಡೆಯಲಿರುವ ಈ ಜಾಗತಿಕ ಘಟನೆಗೆ ಈಗಿನಿಂದಲೇ ಸಿದ್ಧತಾ ಚಟುವಟಿಕೆ ಆರಂಭವಾಗಿದೆ. ದುಬೈಯನ್ನು ಜಗತ್ತಿನ ಮುಂದೆ ಫೋಕಸ್ ಮಾಡುವುದು ಇದರ ಮುಖ್ಯ ಆಶಯ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಈ ಎಕ್ಸ್‌ಪೋ, ಜಗತ್ತನ್ನು ತನ್ನತ್ತ ಸೆಳೆಯಲು ಒಂದು ಅದ್ಭುತ ಅವಕಾಶ. ಕಳೆದ ಎಕ್ಸ್‌ಪೋ 2010ರಲ್ಲಿ ಚೀನಾದ ಶಾಂಘೈನಲ್ಲಿ ನಡೆದಿತ್ತು. ಮುಂದಿನ ವರ್ಷ ಮಿಲಾನ್ ಸರದಿ. 2015ರ ಎಕ್ಸ್‌ಪೋ ನಡೆಯುವ ಮುನ್ನವೇ ದುಬೈ ಎಕ್ಸ್‌ಪೋ ಸುದ್ದಿ ಮಾಡುತ್ತಿದೆ. ಈ ಸಲದ ಬಿಡ್ಡಿಂಗ್‌ನಲ್ಲಿ ಟರ್ಕಿ, ರಷ್ಯಾ, ಬ್ರೆಜಿಲ್ ದೇಶಗಳೂ ಭಾಗವಹಿಸಿದ್ದವು. ಆದರೆ ಅಂತಿಮವಾಗಿ 2020 ಎಕ್ಸ್‌ಪೋ ದುಬೈ ಪಾಲಾಯಿತು.
ಈ ಸುದ್ದಿ ತಿಳಿಯುತ್ತಿದ್ದಂತೆ ಬುರ್ಜ್ ಖಲೀಫಾ ಕಟ್ಟಡದಿಂದ ಪಟಾಕಿ ಸಿಡಿಸಿ ದುಬೈ ಸಂಭ್ರಮ ಆಚರಿಸಿತು. ದುಬೈ ಸರ್ಕಾರ ರಾಷ್ಟ್ರೀಯ ರಜಾ ಘೋಷಿಸಿತು. ಆ ದಿನ ದೇಶವನ್ನುದ್ದೇಶಿಸಿ ಮಾತಾಡಿದ ಮಕ್ತೌಮ್, '2020ರ ಎಕ್ಸ್‌ಪೋ ವೇಳೆಗೆ ದುಬೈಯನ್ನು ನೋಡಿದ ವಿಶ್ವದ ಜನತೆ ದಂಗು ಹೊಡೆಯಬೇಕು (Dubai would astonish the world) ಆ ರೀತಿ ನಮ್ಮ ದೇಶವನ್ನು ಕಟ್ಟೋಣ, ಆ ಪ್ರಮಾಣದಲ್ಲಿ ದುಬೈಯನ್ನು ರೂಪಿಸೋಣ. ವಿಶ್ವದಲ್ಲಿಯೇ ದುಬೈಯಂಥ ಮತ್ತೊಂದು ನಗರವಿರಬಾರದು, ಎಲ್ಲ ರೀತಿಯಲ್ಲೂ ನಂಬರ್ ಒನ್ ಎಂದು ಕರೆಯಿಸಿಕೊಳ್ಳಬೇಕು, ಆ ರೀತಿಯಲ್ಲಿ ದುಬೈಯನ್ನು ಜಗತ್ತಿನ ಮುಂದೆ ಅನಾವರಣ ಮಾಡಬೇಕು. ದುಬೈಯನ್ನು ನೋಡಿದವರೆಲ್ಲ, ಈ ದೇಶದಲ್ಲಿ ನನ್ನದೊಂದು ಬಿಜಿನೆಸ್, ಕಚೇರಿ, ಮನೆ ಇರಲೇಬೇಕು, ಯಾವುದಾದರೂ ರೀತಿಯಲ್ಲಿ ಈ ದೇಶದೊಂದಿಗೆ ಸಂಬಂಧ ಹೊಂದಿರಬೇಕೆಂಬ ಉತ್ಕಟ ಆಸೆ ಮೂಡಿಸಿಕೊಳ್ಳಬೇಕು, ಆ ಮಟ್ಟದಲ್ಲಿ ದುಬೈಯನ್ನು ಸಜ್ಜುಗೊಳಿಸಬೇಕು. ಇದು ಕೆಲವು ಜನರ ಪ್ರಯತ್ನದಿಂದ ಮಾತ್ರ ಸಾಕಾರಗೊಳ್ಳುವಂಥದ್ದಲ್ಲ. ಎಲ್ಲರ ಸಹಯೋಗ, ಪಾಲ್ಗೊಳ್ಳುವಿಕೆ ಬೇಕು, ಅಸಾಧ್ಯವಾದುದನ್ನು ಸಾಧ್ಯಮಾಡುವ ನಮ್ಮ ಹೋರಾಟಕ್ಕೆ ಮತ್ತೊಂದು ಸವಾಲಿನ ಅವಕಾಶ ಸಿಕ್ಕಿದೆ' ಎಂದು ಉತ್ಸಾಹ, ಪ್ರೇರಣೆಯ ತಿದಿಯೂದಿದರು.
ದುಬೈಯಲ್ಲಿ ಒಂದು ಸುತ್ತು ಹಾಕಿದರೆ, ಯಾರಿಗಾದರೂ ಈ ಅನುಭವವಾಗದೇ ಹೋಗದು. ಮದುವೆಗೆ ಎರಡು ತಿಂಗಳಿರುವಾಗ ಮನೆಯಲ್ಲಿ ಒಂದು ಥರದ ತಯಾರಿ ನಡೆದಿರುತ್ತದಲ್ಲ, ಅಂಥ ಚಟುವಟಿಕೆ ಅಲ್ಲಿ ನಡೆಯುತ್ತಿದೆ. ರಸ್ತೆಗಳು ಮಗ್ಗುಲು ಚಾಚುತ್ತಾ ಅಗಲವಾಗುತ್ತಿವೆ. ಹಸುರು ಹಾಸುಗಳು ವಿಸ್ತರಿಸುತ್ತಿವೆ. ಎಲ್ಲ ಬೀದಿಗಳೂ ಹೂದೋಟಗಳಿಂದ ಚೆಂದವಾಗಿವೆ. ಕಟ್ಟಡಗಳು ಗಗನದ ಕಡೆ ಮುಖ ಮಾಡಿ ನಿಲ್ಲುತ್ತಿವೆ. ವಿಚಿತ್ರ ರೀತಿಯ, ಸ್ವರೂಪದ, ವಿನ್ಯಾಸದ ಕಟ್ಟಡಗಳು ಪೈಪೋಟಿಗೆ ಬಿದ್ದಿರುವಂತೆ ಏಳುತ್ತಿವೆ. ಹೊಸ ಹೊಸ ನಗರಗಳೇ ತಲೆಯೆತ್ತುತ್ತಿವೆ. ವಿಶ್ವದಲ್ಲಿ ಅಂಥದ್ದೊಂದು ಟೌನ್‌ಶಿಪ್ ಇರಬಹುದು ಅಂಥ ಆಧುನಿಕ, ಐಷಾರಾಮಿ ಟೌನ್‌ಶಿಪ್‌ಗಳು ರೂಪುಗೊಳ್ಳುತ್ತಿವೆ. 25 ಸಾವಿರದಿಂದ 30 ಸಾವಿರ ಜನಸಂಖ್ಯೆಯಿರುವ 'ಲಿಲಿಪ್ಯಾಡ್‌ಸಿಟಿ'ಗಳು ಹುಟ್ಟುತ್ತಿವೆ. ಎಕ್ಸ್‌ಪೋಕ್ಕೆ ಬಂದವರು ದುಬೈನಲ್ಲೊಂದು ಕರುಳು ಬಳ್ಳಿಯನ್ನು ನೆಟ್ಟು ಹೋಗಬೇಕು, ಆ ರೀತಿ ಮಾಡುವುದಾದರೂ ಹೇಗೆ ಎಂಬ ಬಗ್ಗೆ ಮಕ್ತೌಮ್ ತಲೆಕೆಡಿಸಿಕೊಂಡಿದ್ದಾರೆ.
ದುಬೈ ಎಕ್ಸ್‌ಪೋ ಏನಿಲ್ಲವೆಂದರೂ 3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂಬುದು ಒಂದು ಅಂದಾಜು. ದುಬೈನ ಆರ್ಥಿಕತೆಗೆ 40 ಶತಕೋಟಿ ಡಾಲರ್‌ನಷ್ಟು ಹಣ ಹೆಚ್ಚುವರಿಯಾಗಿ ಹರಿದುಬರಲಿದೆ. ಅಲ್ಲದೇ 25 ದಶಲಕ್ಷ ಜನ ಆಗಮಿಸಲಿದ್ದಾರೆ. ಇಡೀ ವರ್ಷದ ಲೆಕ್ಕ ಹಾಕಿದರೆ 100 ದಶಲಕ್ಷ ಹೊಸ ಅತಿಥಿಗಳು ದುಬೈಗೆ ಬರಲಿದ್ದಾರೆ. ಇವರೆಲ್ಲರ ಆಗಮನಕ್ಕೆ ವಿಮಾನಗಳು ಬೇಕು. ವಿಮಾನ ನಿಲ್ದಾಣ ಇನ್ನಷ್ಟು ಹಿರಿದಾಗಬೇಕು. ರನ್‌ವೇಗಳ ಸಂಖ್ಯೆ ಹೆಚ್ಚಬೇಕು. ವಾಸ್ತವ್ಯ ಕಲ್ಪಿಸಲು ಹೋಟೆಲ್‌ಗಳ ರೂಮುಗಳ ಸಂಖ್ಯೆ ಹೆಚ್ಚಬೇಕು. ಓಡಾಡಲು ಹೆಚ್ಚಿನ ವಾಹನಗಳು ಬೇಕು. ಆ ಎಲ್ಲಾ ವಾಹನಗಳನ್ನು ನಿಭಾಯಿಸಲು ರಸ್ತೆಗಳು ಅಗಲವಾಗಬೇಕು. ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಬೇಕು, ಮೊಬೈಲು, ಇಂಟರ್‌ನೆಟ್, ವೈಫೈ ಸೌಲಭ್ಯಗಳು ಹೆಚ್ಚಬೇಕು. ಒಂದಿರುವ ದುಬೈ ಎರಡಾಗಬೇಕು, ಮೂರಾಗಬೇಕು ಹಾಗೂ ಎಕ್ಸ್‌ಪೋ ಮುಗಿದ ನಂತರವೂ ಇಡೀ ದೇಶ ಭರ್ತಿಯಾಗಿರಬೇಕು. ಜನ, ಬಂಡವಾಳವನ್ನು ಹಿಡಿದಿಟ್ಟುಕೊಳ್ಳಬೇಕು. ಮಕ್ತೌಮ್ ದಿನಕ್ಕೆ ಹದಿನೈದು ಗಂಟೆ ಈ ಯೋಚನೆಯಲ್ಲಿ ಮುಳುಗಿದ್ದಾರೆ. ಒಂದಿದ್ದ ದುಬೈಯನ್ನು ಎರಡು ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಎಕ್ಸ್‌ಪೋಗೆ ಅವರು ನೀಡಿರುವ ಘೋಷ ವಾಕ್ಯ -Connecting minds, Creating the Future. ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಹಾಗೂ ದಕ್ಷಿಣ ಏಷಿಯಾ ಪ್ರಾಂತ್ಯಗಳಲ್ಲಿ ವಿಶ್ವ ಎಕ್ಸ್‌ಪೋ ನಡೆಯುತ್ತಿರುವುದು ಇದೇ ಮೊದಲು.
ಎಕ್ಸ್‌ಪೋ ಬಿಡಿ, ಬೆಂಗಳೂರಿಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮೋದಿ ಬಂದು ಹೋದರೆ ಸುಧಾರಿಸಿಕೊಳ್ಳಲು ನಮಗೆ ಎರಡು ದಿನ ಬೇಕು. ಅದಿರಲಿ, ನಮ್ಮ ಪ್ರಧಾನಿ, ಮುಖ್ಯಮಂತ್ರಿಗಳಿಗೇಕೆ ಇಂಥ ಕನಸು ಬೀಳುವುದಿಲ್ಲ?
ಅವರೇಕೆ ಹೀಗೆ ಯೋಚಿಸುವುದಿಲ್ಲ?
???
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


