ಅಂಕಣಗಳು

ಪೊಲೀಸರು ಗುಂಡು ಹೊಡೆದ ತಪ್ಪಿಗೆ ಮೃತನ ತಪ್ಪು ಮುಚ್ಚಿಹೋಗುವುದೇ?

ಪೊಲೀಸರು ಗುಂಡು ಹೊಡೆದ ತಪ್ಪಿಗೆ ಮೃತನ ತಪ್ಪು ಮುಚ್ಚಿಹೋಗುವುದೇ?

ಪೊಲೀಸರು ಗುಂಡು ಹೊಡೆದ ತಪ್ಪಿಗೆ ಮೃತನ ತಪ್ಪು ಮುಚ್ಚಿಹೋಗುವುದೇ?
Published On :

ಹೆಸರು ಹೇಳಬಾರದು. ಯಾಕೆಂದರೆ ಹೆಸರಿನೊಂದಿಗೆ ಜಾತಿ, ಧರ್ಮದ ನಂಟಿರುತ್ತದೆ ಎಂಬುದು ಒಂದು ಸಿನಿಮಾ ಡೈಲಾಗ್. ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಶೃಂಗೇರಿಯ ತನಿಕೋಡಿನಲ್ಲಿ ಶನಿವಾರ ನಡೆದ ಘಟನೆ ಮತ್ತು ನಂತರದ ಬೆಳವಣಿಗೆಗಳಿಂದ ಸಾಬೀತಾಗಿದೆ. ಯಾಕೆಂದರೆ ಮೃತನ ಹೆಸರು ಹಾಗೂ ಅದರಿಂದ ಗೋಚರವಾಗುವ ಆತನ ಧರ್ಮದಿಂದಾಗಿ ನಾವು ಘಟನೆಯನ್ನು ಯಥಾವತ್ತಾಗಿ ನೋಡುವುದೇ ಸಾಧ್ಯವಾಗುತ್ತಿಲ್ಲ.
ಮೃತನ ಧರ್ಮದ ಆಧಾರದಲ್ಲಿ ಇಡೀ ಘಟನೆ ಹೊಸ ಬಣ್ಣ ಪಡೆದುಕೊಂಡಿದೆ. ಅದಕ್ಕೆ ಸಂಘಪರಿವಾರವನ್ನು ಎಳೆದು ತರಲಾಗಿದೆ. ಇಡೀ ಘಟನೆಗೆ ಕೋಮು ದ್ವೇಷದ ಬಣ್ಣ ನೀಡುವ ಕೆಲಸ ಚಾಲ್ತಿಯಲ್ಲಿದೆ. ಪೊಲೀಸರು ಬೇಕಂತಲೇ ಹೊಡೆದರು, ಸಂಘಪರಿವಾರದ ಕುಮ್ಮಕ್ಕು ಇದಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ. ಇನ್ನೂ ಒಂದೆರಡು ದಿನ ಹೋದರೆ ಗುಂಡು ಹೊಡೆದ ಪೊಲೀಸು ಚಿಕ್ಕವನಿದ್ದಾಗ ಆರೆಸ್ಸೆಸ್ ಶಾಖೆಗೆ ಹೋಗಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದರೂ ಅಚ್ಚರಿಯಿಲ್ಲ! ಅಲ್ಲಿ ನಿಜವಾಗಿಯೂ ನಡೆದಿದ್ದೇನು? ಗುಂಡು ಹೊಡೆಯುವಾಗ ಎಎನ್‌ಎಫ್ ಸಿಬ್ಬಂದಿಗೆ ಇವನು ಮುಸ್ಲಿಂ ಎಂಬುದು ಗೊತ್ತಿತ್ತಾ? ವಾಹನದಲ್ಲಿದ್ದದ್ದು ದನ ಎಂಬುದು ಪೊಲೀಸರ ಅರಿವಿಗಿತ್ತಾ? ಅಷ್ಟರ ಮೇಲೂ ಆತ ಗುಂಡು ಹೊಡೆದ ಪರಿಸ್ಥಿತಿ ಎಂಥದ್ದು? ಜಾಗ ಎಷ್ಟು ಸೂಕ್ಷ್ಮವಾದದ್ದು? ಪೊಲೀಸರು ಎಂತಹ ಪರಿಸ್ಥಿತಿಯಲ್ಲಿ  ಗುಂಡು ಹಾರಿಸಿದರು? ಮೃತಪಟ್ಟ ಕಬೀರ್ ಓಡಿದ್ದು ಯಾಕೆ? ಆತ ತಪ್ಪೇ ಮಾಡಿಲ್ಲ ಎಂದಾದರೆ ಪೊಲೀಸರು ನಿಲ್ಲಿಸಿದಾಗ ಓಡುವ ಅಗತ್ಯವೇನಿತ್ತು? ಇದೆಲ್ಲ ಸಂಗತಿಗಳನ್ನು ನಾವು ಪರಿಗಣಿಸಬೇಕು. ಆದರೆ ಕಬೀರ್ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವ ಎಂಬ ಏಕೈಕ ಕಾರಣಕ್ಕೆ ಈ ಪ್ರಶ್ನೆಗಳನ್ನೆಲ್ಲ ಕೇಳುವುದೇ ಅಪರಾಧ ಎಂಬಂತೆ ವರ್ತಿಸಲಾಗುತ್ತಿದೆ.
ಘಟನೆ ನಡೆದಿದ್ದು ನಕ್ಸಲ್ ದಾಳಿಗೆ ಎರಡು ಬಾರಿ ತುತ್ತಾಗಿರುವ ತನಿಕೋಡು ಠಾಣೆ ಬಳಿಯ ಪ್ರದೇಶದಲ್ಲಿ. ಈ ತನಿಖಾ ಠಾಣೆಯನ್ನು ನಕ್ಸಲೀಯರು 2005ರಲ್ಲಿ ಸಿಬ್ಬಂದಿಯನ್ನು ಓಡಿಸಿ ಸ್ಫೋಟಿಸಿದ್ದರು. ಇದಾದ ನಂತರ 2013ರ ನವೆಂಬರ್‌ನಲ್ಲಿ ಈ ತನಿಖಾ ಠಾಣೆಗೆ ದಾಳಿ ಮಾಡಿದ ನಕ್ಸಲೀಯರು, ಸಿಸಿ ಕ್ಯಾಮರಾಗಳನ್ನು ಒಡೆದುಹಾಕಿ, ತನಿಖಾ ಠಾಣೆಗೆ ಬೆಂಕಿ ಇಟ್ಟಿದ್ದರು. 2013ರ ಘಟನೆಯ ನಂತರ ಎಎನ್‌ಎಫ್ ಸಿಬ್ಬಂದಿಗೆ ಈ ಪ್ರದೇಶದಲ್ಲಿ ಗಸ್ತು ತಿರುಗುವಂತೆ ಮತ್ತು ಆಗಾಗ ರಾತ್ರಿ ಇಲ್ಲಿರುವಂತೆ ಸೂಚಿಸಲಾಗಿತ್ತು. ಅದರಂತೆ ಎಎನ್‌ಎಫ್ ಸಿಬ್ಬಂದಿ ಶುಕ್ರವಾರ ರಾತ್ರಿ ತನಿಕೋಡು ಠಾಣೆ ಬಳಿ ಇದ್ದಾಗ, ಬೆಳಗ್ಗಿನ ಜಾವ 3:30ರ ಸುಮಾರಿಗೆ ಮಹೀಂದ್ರಾ ಪಿಕ್‌ಅಪ್ ವಾಹನ ಬಂದಿದೆ. ವಾಹನಕ್ಕೆ ಸಂಪೂರ್ಣವಾಗಿ ಟರ್ಪಾಲ್ ಮುಚ್ಚಲಾಗಿತ್ತು. ಕತ್ತಲೆ ಬೇರೆ. ಒಳಗೇನಿದೆ ಕಾಣಿಸುತ್ತಿರಲಿಲ್ಲ. ಆಗ ಹಿಂಬದಿಯಿಂದ ಇಬ್ಬರು ಇಣುಕಿ ನೋಡಿದ್ದಾರೆ. ಇದರಿಂದ ಅನುಮಾನಗೊಂಡ ಎಎನ್‌ಎಫ್‌ನ ಸಿಬ್ಬಂದಿಯೊಬ್ಬರು (ಉಳಿದವರು ಮರೆಯಲ್ಲಿದ್ದರು) ವಾಹನದ ಮುಂಭಾಗದಲ್ಲಿ ಕುಳಿತಿದ್ದವರ ಬಳಿ ವಾಹನದಲ್ಲೇನಿದೆ ಎಂದು ವಿಚಾರಿಸಿದ್ದಾರೆ. ಅವರು ದನವಿದೆ ಎಂದು ಸತ್ಯವನ್ನೇ ಹೇಳಿದ್ದಾರೆ. ಅದನ್ನು ಪರೀಕ್ಷಿಸಲೆಂದು ಎಎನ್‌ಎಫ್ ಸಿಬ್ಬಂದಿ ವಾಹನದ ಹಿಂಭಾಗಕ್ಕೆ ಹೋಗುವಷ್ಟರಲ್ಲಿ ಮುಂಭಾಗದಲ್ಲಿದ್ದ ಮೂವರು ಓಡಿ ಹೋಗಿದ್ದಾರೆ. ಇದರಿಂದ ಸಿಬ್ಬಂದಿ ಕೊಂಚ ಗಲಿಬಿಲಿಗೊಂಡರು. ಅಷ್ಟರಲ್ಲಿ ವಾಹನದ ಹಿಂಭಾಗದಲ್ಲಿದ್ದ ಕಬೀರ್ ಟರ್ಪಾಲ್ ತೆಗೆದು, ಎಎನ್‌ಎಫ್ ಸಿಬ್ಬಂದಿಯನ್ನು ತಳ್ಳಿ ಓಡಿದ್ದಾನೆ.
ಇದರಿಂದ ಸಂಪೂರ್ಣ ಗೊಂದಲಕ್ಕೊಳಗಾದ, ಹಿಂಬದಿಗೆ ಇನ್ನಷ್ಟು ಜನರಿರಬೇಕು, ನಕ್ಸಲರಿರಬೇಕು ಅಂದುಕೊಂಡು ಗುಂಡು ಹಾರಿಸಿದ್ದಾರೆ. ಮೊದಲ ಗುಂಡು ಕೈಗೆ ತಗುಲಿದೆ. ಆಗಲಾದರೂ ಕಬೀರ್ ನಿಂತಿದ್ದರೆ ಜೀವ ಉಳಿಯುತ್ತಿತ್ತು. ಅದರ ನಂತರವೂ ಓಡಿದ್ದರಿಂದ ಮತ್ತೆ ಗುಂಡು ಹಾರಿಸಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಘಟನಾ ಸ್ಥಳದಲ್ಲಿ 3 ಬೇರೆ ಬೇರೆ ಸ್ಥಳಗಳಲ್ಲಿ ರಕ್ತ ಬಿದ್ದಿದೆ.
ಓಡದೇ ವಾಹನದಲ್ಲೇ ಕುಳಿತಿದ್ದ ವ್ಯಕ್ತಿ ಸುರಕ್ಷಿತವಾಗಿದ್ದಾನೆ. ಕತೆಕಟ್ಟುವ ಉದ್ದೇಶವೇ ಇದ್ದಿದ್ದರೆ ಅವನನ್ನೂ ಹೊಡೆದು ಹಾಕಿ, ಅವರ ಬಳಿ ಆಯುಧ ಇಟ್ಟು, ತಮಗೆ ಬೇಕಾದಂತೆ ಕತೆ ಕಟ್ಟುವ ಅವಕಾಶ ಇತ್ತು. ಆದರೆ ಅಂತಹ ಯಾವ ಕೆಲಸವನ್ನೂ ಪೊಲೀಸರು ಮಾಡಿಲ್ಲ. ಇದನ್ನೆಲ್ಲ ಗಮನಿಸಿದರೆ ಮಹೀಂದ್ರಾ ಪಿಕ್‌ಅಪ್ ವಾಹನದಲ್ಲಿದ್ದವರು ಓಡಿದ್ದೇ ಇಷ್ಟೆಲ್ಲ ಅನಾಹುತಗಳಿಗೆ ಕಾರಣವಾಗಿ ಗೋಚರಿಸುತ್ತಿದೆ. ಅವರು ಓಡದೇ ಹೋಗಿದ್ದರೆ ಬಹುಶಃ ಎಎನ್‌ಎಫ್ ಸಿಬ್ಬಂದಿ ದನ ಸಾಗಾಟದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಅದು ಅವರ ಕೆಲಸವೂ ಅಲ್ಲ. ವಾಹನ ತಪಾಸಣೆ ನಡೆಸಿ ಕಳುಹಿಸುತ್ತಿದ್ದರು. ಆದರೆ ವಾಹನದಲ್ಲೇನಿದೆ ಎಂಬುದು ಗೊತ್ತಿರಲಿಲ್ಲ. ಇದ್ದವರು ಯಾರು ಎಂಬುದೂ ಗೊತ್ತಿರಲಿಲ್ಲ. ಇನ್ನು ಅವರ ಜಾತಿ, ಧರ್ಮ ಗೊತ್ತಿರುವುದು ದೂರದ ಮಾತು.
ಅವರ ಬಳಿ ಆಯುಧ ಇದೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. ಅವರು ಯಾಕೆ ಓಡುತ್ತಿದ್ದಾರೆ ಎಂಬುದರ ಅರಿವಿಲ್ಲ. ಅವರು ನಕ್ಸಲರೇ ಆಗಿದ್ದರೆ ಅವರು ಪೊಲೀಸರತ್ತ ಗುಂಡು ಹಾರಿಸದೇ ಬಿಡುತ್ತಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಆತ ಯಾರು? ಗುಂಡು ಹಾರಿಸುತ್ತಾನೆಯೇ? ಎಂದು ಕಾಯುತ್ತ ಕೂರುವ ಸ್ಥಿತಿ ಇರುವುದಿಲ್ಲ. ಅಕಸ್ಮಾತ್ ಕಾದರೆ ಜೀವ ಉಳಿಯುತ್ತದೆ ಎಂಬ ಖಾತರಿಯಿಲ್ಲ. ಅಂತಹ ಸ್ಥಿತಿಯಲ್ಲಿದ್ದ ಎಎನ್‌ಎಫ್ ಸಿಬ್ಬಂದಿ ಜಾಗದಲ್ಲಿ ನಾವೇ ಇದ್ದು, ಯಾರು ಎಂದೇ ಗೊತ್ತಿಲ್ಲದ ಕೆಲವರು ಅಪರಾತ್ರಿಯಲ್ಲಿ ನಮ್ಮನ್ನು ಕಂಡು ಓಡಿದ್ದರೆ ಏನು ಮಾಡುತ್ತಿದ್ದೆವು ಎಂದು ನಮ್ಮನ್ನು ನಾವು ಒಮ್ಮೆ ಕೇಳಿಕೊಳ್ಳುವುದೊಳಿತು.
ಇದನ್ನೆಲ್ಲ ವಿಚಾರ ಮಾಡುವುದು ಬಿಟ್ಟು 'ಅಮಾಯಕನ ಸಾವು' ಎಂದು ಗದ್ದಲ ಎಬ್ಬಿಸಲಾಗುತ್ತಿದೆ. ಅವನ ಪರವಾಗಿ ನಿಂತು ಮಾತನಾಡುವವರ ದೊಡ್ಡ ದಂಡೇ ತಯಾರಾಗಿಬಿಟ್ಟಿದೆ. ಮಾಧ್ಯಮದಲ್ಲೂ ಇಂಥವರಿಗೆ ಕೊರತೆಯಿಲ್ಲ ಬಿಡಿ. ಕಬೀರ್ ಮೃತಪಟ್ಟಿರಬಹುದು. ಎಎನ್‌ಎಫ್ ಸಿಬ್ಬಂದಿ ಗಡಿಬಿಡಿಯಲ್ಲೇ ಗುಂಡು ಹಾರಿಸಿರಬಹುದು. ಆದರೆ ಈ ಕಾರಣಕ್ಕೆ ಕಬೀರ್ ಮಾಡಿದ ತಪ್ಪುಗಳನ್ನು ನಾವು ಕಡೆಗಣಿಸಬೇಕೆ? ಆ ಅಪರಾತ್ರಿಯಲ್ಲಿ ಕಬೀರ್ ದೇಶಭಕ್ತಿಯ ಕೆಲಸಕ್ಕೆ ತೆರಳಿದ್ದನೇ? ಘಟನೆಯಲ್ಲಿ ಬಳಕೆಯಾದ ಮಹೀಂದ್ರಾ ಪಿಕ್‌ಅಪ್ ವಾಹನದಲ್ಲಿ 20 ದನಗಳಿದ್ದವು. ಅವುಗಳನ್ನು ಒಂದರ ಮೇಲೆ ಒಂದರಂತೆ ತುಂಬಲಾಗಿತ್ತು. ಅವುಗಳಲ್ಲಿ 3 ದನಗಳು ಮೃತಪಟ್ಟಿದ್ದವು. ಇವುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬುದಕ್ಕೆ ಇದಕ್ಕಿಂತ ಹೆಚ್ಚು ಸಾಕ್ಷ್ಯ ಬೇಡ. ಕಾನೂನು ಪ್ರಕಾರ ಸಾಗಿಸುವುದಾದರೆ ಪಿಕ್‌ಅಪ್ ವಾಹನದಲ್ಲಿ 3-4 ದನಗಳನ್ನು ಮಾತ್ರ ಸಾಗಿಸಬೇಕು. ಆದರೆ ಇದು ಗುಂಡಿಕ್ಕಿ ಸಾಯಿಸುವಂತಹ ಅಪರಾಧ ಖಂಡಿತ ಅಲ್ಲ. ಕಬೀರ್ ಸೇರಿದಂತೆ ವಾಹನದಲ್ಲಿದ್ದವರ ಮೇಲೆ ಕಾರ್ಕಳ ಮತ್ತು ಸುರತ್ಕಲ್ ಠಾಣೆಯಲ್ಲಿ 2-3 ಪ್ರಕರಣಗಳಿವೆ. ಅದರರ್ಥ ಅವರು ಜಗತ್ತೆಲ್ಲ ಅಂದುಕೊಂಡಿರುವಂತೆ ಅಮಾಯಕರಲ್ಲ. ಈ ಹಿಂದೆ ಕೂಡ ಅವು ಅಕ್ರಮ ಗೋ ಸಾಗಾಟದಲ್ಲಿ ನಿರತರಾಗಿದ್ದರು ಮತ್ತು ಹಾಗೆ ಮಾಡುವುದು ತಪ್ಪು ಎಂಬುದು ಅವರಿಗೆ ಅರಿವಿತ್ತು. ಹಾಗಂತ ಅವರನ್ನು ಅಪರಾಧಿ ಎಂದು ಕರೆಯುತ್ತಿಲ್ಲ. ಇದೇ ಮಹೀಂದ್ರ ಪಿಕ್‌ಅಪ್ ವಾಹನವನ್ನು 3 ತಿಂಗಳ ಹಿಂದಷ್ಟೇ ಶೃಂಗೇರಿ ಪೊಲೀಸರು ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಇದರರ್ಥ ಜನರಷ್ಟೇ ಅಲ್ಲ, ವಾಹನ ಕೂಡ ನಿರಂತರವಾಗಿ ಅಕ್ರಮ ಗೋ ಸಾಗಾಟಕ್ಕೆ ಬಳಕೆಯಾಗುತ್ತಿತ್ತು.
ಇವಿಷ್ಟನ್ನೂ ಯಾವುದೇ ಜಾತಿ, ಧರ್ಮ, ಸಂಘಪರಿವಾರದ ಪೂರ್ವಾಗ್ರಹವಿಲ್ಲದೇ ನೋಡಿದರೆ ಇದೊಂದು ಆಕಸ್ಮಿಕ ಮತ್ತು ದುರದೃಷ್ಟಕರ ಘಟನೆ. ಆದರೆ ಮೃತ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಘಟನೆಯ ಮಹತ್ವವೇ ಬೇರೆಯಾಗಿದೆ.
ದುರದೃಷ್ಟವೆಂದರೆ ನಮ್ಮ ಸರ್ಕಾರ ಕೂಡ ಅಲ್ಪಸಂಖ್ಯಾತನೊಬ್ಬ ಮೃತಪಟ್ಟ ಕೂಡಲೇ ಎಷ್ಟು ಗಾಬರಿಪಡುತ್ತದೆ ಎಂದರೆ ತಕ್ಷಣ 5 ಲಕ್ಷ ಪರಿಹಾರ ಘೋಷಿಸುತ್ತದೆ. ಆದರೆ ಇದೇ ಸರ್ಕಾರಕ್ಕೆ ಗುಲ್ಬರ್ಗದಲ್ಲಿ 2005ರಲ್ಲಿ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದ ಎಎಸ್‌ಐ ಬಸವಂತಪ್ಪ ಅವರಿಗೆ ನೀಡಬೇಕಾದ 5 ಲಕ್ಷ ಪರಿಹಾರ ನೀಡಲು 9 ವರ್ಷ ಬೇಕಾಯಿತು! ಹಾಗಾದರೆ ಅಕ್ರಮವಾಗಿ ದನ ಸಾಗಿಸುವ ವ್ಯಕ್ತಿಗಿಂತ ಕರ್ತವ್ಯ ನಿರತ ಎಎಸ್‌ಐ ಕೀಳಾಗಿ ಹೋದನೇ? ಕರ್ತವ್ಯ ನಿರತನಾಗಿದ್ದಾಗ ಮೃತಪಟ್ಟ ಎಸ್‌ಐಗಿಂತ ಅಕ್ರಮ ಗೋ ಸಾಗಾಟದ ಸಂದರ್ಭದಲ್ಲಿ, ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿ, ಗೊಂದಲದ ಪರಿಸ್ಥಿತಿಯಲ್ಲಿ ಗುಂಡಿಗೆ ಸಿಕ್ಕು ಮೃತಪಟ್ಟ ವ್ಯಕ್ತಿ ನಮ್ಮ ದೇಶದಲ್ಲಿ ಹುತಾತ್ಮನಂತೆ ಬಿಂಬಿತನಾಗಬಲ್ಲ ಎಂಬುದಕ್ಕೆ ಈ ಘಟನೆಗಿಂತ ಉತ್ತಮ ಸಾಕ್ಷಿ ಸಿಗಲಿಕ್ಕಿಲ್ಲ.
ಈಗ ಇದ್ದಕ್ಕಿದ್ದಂತೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಹೊಂದಿರುವ ನಾಯಕರು ಎದ್ದು ಕುಳಿತಿದ್ದಾರೆ. ಮೃತನಿಗೆ ಕೊಟ್ಟ ಪರಿಹಾರ ಸಾಕಾಗದು ಎನ್ನುತ್ತಿದ್ದಾರೆ. ಎಂತಹ ದುರದೃಷ್ಟವೆಂದರೆ ಗುಲ್ಬರ್ಗದಲ್ಲಿ ರೌಡಿ ಮುನ್ನಾ ಎನ್‌ಕೌಂಟರ್ ಸಂದರ್ಭದಲ್ಲಿ ಗುಂಡಿಗೆ ಬಲಿಯಾದ ಮಲ್ಲಿಕಾರ್ಜುನ ಬಂಡೆ ಅವರಿಗೆ ಸರ್ಕಾರ ಮೊದಲು ಘೋಷಿಸಿದ್ದು 5 ಲಕ್ಷ ಪರಿಹಾರ. ನಂತರ ಸಾರ್ವಜನಿಕರ ಒತ್ತಡಕ್ಕೆ ಮಣಿದು ಅದನ್ನು ಹೆಚ್ಚಿಸಲಾಯಿತು. ಅದೇ ಅಕ್ರಮ ದನ ಸಾಗಾಟ ಸಂದರ್ಭದ ಗೊಂದಲದ ನಡುವೆ ಪೊಲೀಸ್ ಗುಂಡಿಗೆ ಮೃತಪಟ್ಟ ಕಬೀರ್‌ಗೆ ಸರ್ಕಾರ ಘೋಷಿಸಿದ್ದು 5 ಲಕ್ಷ. ಒಬ್ಬ ಕರ್ತವ್ಯನಿರತ ಅಧಿಕಾರಿಯ ಜೀವಕ್ಕೂ ಅಕ್ರಮ ಗೋ ಸಾಗಾಟದಲ್ಲಿ ತೊಡಗಿದ್ದಾಗ ಪೊಲೀಸರನ್ನು ಕಂಡು ಓಡಿ ಹೋದ ವ್ಯಕ್ತಿಗೂ ಒಂದೇ ಮಾನದಂಡವೇ? ಹಾಗಾದರೆ ಪೊಲೀಸರಿಗೂ ಅಕ್ರಮ ದಂದೆಯಲ್ಲಿ ತೊಡಗಿರುವವರಿಗೂ ನಮ್ಮ ಸರ್ಕಾರ ನೀಡುತ್ತಿರುವ ಸಮಾನ ಗೌರವ ಎಂದು ಇದನ್ನು ಭಾವಿಸೋಣವೇ? ಈ ಮೂಲಕ ನಮ್ಮ ದೇಶದಲ್ಲಿ ನೀವು ಪ್ರಾಮಾಣಿಕ ಅಧಿಕಾರಿಯಾಗುವುದು ಒಂದೇ, ಅಕ್ರಮ ದಂದೆಯಲ್ಲಿ ತೊಡಗುವುದು ಒಂದೇ ಎನ್ನುವ ಸಂದೇಶವನ್ನು ಸರ್ಕಾರ ನೀಡುತ್ತಿದೆಯೇ?
ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕೆಂಬ ಹವಣಿಕೆಯಲ್ಲಿರುವ ಕಾಂಗ್ರೆಸ್ ನಾಯಕರೊಬ್ಬರು, 'ಗೃಹ ಸಚಿವರಿಗೆ ಮೃತ ಕಬೀರ್ ಮನೆಗೆ ಭೇಟಿ ಕೊಟ್ಟು ಸಾಂತ್ವಾನ ಹೇಳುವಷ್ಟು ಪುರುಸೊತ್ತಿಲ್ಲವೇ' ಎಂದು ಪ್ರಶ್ನಿಸಿದ್ದಾರೆ. ಆದರೆ ಅದ್ಯಾವ ದೇಶ ಭಕ್ತಿಯ ಕಾರಣಕ್ಕಾಗಿ ಮಹಾತ್ಯಾಗ ಮಾಡಿದ್ದಾನೆಂಬ ಕಾರಣಕ್ಕೆ ಗೃಹ ಸಚಿವರು ಕಬೀರ್ ಮನೆಗೆ ಭೇಟಿ ಕೊಡಬೇಕು ಎಂಬುದನ್ನು ವಿವರಿಸಲು ಅವರು ಮರೆತಿದ್ದಾರೆ. ಓಲೈಕೆ ರಾಜಕಾರಣದ ಪರಮಾವಧಿ ಇದರಲ್ಲಿ ಕಾಣುತ್ತಿದ್ದು ಸಮಾಜಕ್ಕೆ ಮಾತ್ರ ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ಗುಲ್ಬರ್ಗದಲ್ಲಿ ನಡೆದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ್ ಬಂಡೆ ಹತ್ಯೆ ಪ್ರಕರಣ, ಕಬೀರ್‌ನ ಸಾವು ಮತ್ತು ಕೋಲಾರದ ಮುಳಬಾಗಿಲಿನಲ್ಲಿ ನಡೆದ ಇಮ್ರಾನ್‌ನ ಸಾವು ಈ ಮೂರು ಪ್ರಕರಣಗಳಲ್ಲಿ ಸರ್ಕಾರ, ಕೆಲವು ರಾಜಕೀಯ ನಾಯಕರು ನೀಡಿದ ಹೇಳಿಕೆಗಳು, ವರ್ತಿಸಿದ ರೀತಿ ಇವುಗಳನ್ನು ಗಮನಿಸಿದರೆ ಜೀವಕ್ಕೆ ಬೆಲೆ ಬರುವುದು ಆತನ ಧರ್ಮ ಮತ್ತು ಘಟನೆಯ ಆಧಾರದಲ್ಲಿ ಎಂಬುದು ಸಾಬೀತಾಗುತ್ತದೆ. ಓಲೈಕೆ ರಾಜಕಾರಣ ಎಷ್ಟು ಕೀಳು ಮಟ್ಟಕ್ಕೆ ತಲುಪಿದೆ ಎನ್ನುವುದು ಮತ್ತು ಪ್ರತಿ ಘಟನೆಯನ್ನು ಕೋಮು ದೃಷ್ಟಿಯಿಂದಲೇ ನೋಡುವಷ್ಟು ಸರ್ಕಾರ ಮತ್ತು ರಾಜಕಾರಣಿಗಳ ಮನಸ್ಸು ಕಲುಷಿತಗೊಂಡಿದೆ ಎಂಬುದು ಸ್ಪಷ್ಟ. ಇದರಿಂದಾಗಿಯೇ ನಾವು ಈ ಮೂರು ಘಟನೆಯನ್ನು ಕೇವಲ ಘಟನೆಯನ್ನಾಗಿ ನೋಡದೆ ಮೃತರ ಧರ್ಮ, ಜಾತಿ ಹಿನ್ನೆಲೆಯಲ್ಲಿ ನೋಡಿ ಪರಿಹಾರ, ತನಿಖೆ, ಬೆಂಬಲ, ವಿರೋಧವ್ಯಕ್ತಪಡಿಸುವ ಹಂತ ತಲುಪಿದ್ದೇವೆ. ಈ ಅವಸರದಲ್ಲಿ ನಾವು ದೇಶ ಪ್ರೇಮಿಗಳನ್ನು ದೇಶ ದ್ರೋಹಿಗಳೆಂದು ಮತ್ತು ಅಕ್ರಮದಲ್ಲಿ ತೊಡಗಿರುವವರನ್ನು ಹುತಾತ್ಮನೆಂದು ಬಿಂಬಿಸಲು ಹೇಸುತ್ತಿಲ್ಲ.


- ವಿನಾಯಕ ಭಟ್ಟ ಮೂರೂರು  ಕನ್ನಡಪ್ರಭ
vakradanta@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.