ಅಂಕಣಗಳು

ಚೆನ್ನೈಗೆ ಸಿಹಿ ನೀರಿನ ಚಿಲುಮೆ ಹರಿಸಿದ ನೀರಶೂರರು!

ಮಳೆ ನೀರು ಹರಿದು ಹೋಗಲು ಚರಂಡಿ ಮಾಡುವುದಕ್ಕಿಂತ ಅದೇ ನೀರು ಇಂಗುವಂತೆ..

ಚೆನ್ನೈಗೆ ಸಿಹಿ ನೀರಿನ ಚಿಲುಮೆ ಹರಿಸಿದ ನೀರಶೂರರು!
Published On :

ಕಾನೂನು ಮಾಡಿ ಮಳೆಕೊಯ್ಲು ಕಡ್ಡಾಯಗೊಳಿಸಿದರೆ ಸಾಲದು. ಅದು ಜನಾಂದೋಲನ ಆಗಬೇಕು. ಅಂಥದ್ದೊಂದು ಪ್ರಜ್ಞೆ ಜನರಲ್ಲಿಯೂ ಮೂಡಬೇಕು. ಎಲ್ಲರಿಗೂ ನೀರು ಬೇಕು, ಆದರೆ ನೀರಿಂಗಿಸುವ ಹೊಣೆ ಬೇಡ ಎಂದರೆ ಹೇಗೆ? ನೀರಿನ ಅಗತ್ಯದ ವಿಕೇಂದ್ರೀಕರಣ ಆಗಿದೆ, ಜಲಮೂಲಗಳು ಮಾತ್ರ ಕೇಂದ್ರೀಕೃತವಾಗಿರುವುದು ಸರಿಯೇ ಎನ್ನುವುದು ಈ ಇಬ್ಬರು ಜಲಯೋಧರು ಜನರ ಮುಂದಿಡುವ ಪ್ರಶ್ನೆ.

ವಾರಾಂತ್ಯ ಬಂದರೆ ಸಾಕು ಸೈಕಲ್ ಸವಾರಿ ಶುರು. ಬೆಳಗ್ಗೆ ಮನೆ ಬಿಟ್ಟರು ಎಂದರೆ ವಾಪಸ್ ಬರುವುದು ಎಷ್ಟು ಹೊತ್ತಿಗೊ. ಇಂತಿಲ್ಲಿಗೇ ಹೋಗಬೇಕು ಎನ್ನುವ ಗುರಿ ಇಲ್ಲ. ಇಂಥವರನ್ನೇ ಭೇಟಿ ಮಾಡಬೇಕು ಎನ್ನುವ ನಿರ್ಧಾರವಿಲ್ಲ. ಬೇಸಂತ್ ನಗರ, ವಾಲ್ಮೀಕಿ ನಗರಗಳಲ್ಲಿ ಸುತ್ತಾಟ. ಸೀದಾ ಹೋಗಿ ಯಾರದ್ದಾದರೂ ಮನೆ ಬಾಗಿಲು ತಟ್ಟುವುದು. ಒಳ ಕರೆದವರಿಗೆ ಒಂದಷ್ಟು ಹೊತ್ತು ಉಪನ್ಯಾಸ. ಎಷ್ಟೋ ಜನ ಮನೆಯಿಂದ ಹೊರದಬ್ಬಿದ್ದೂ ಉಂಟು. ಬಾಗಿಲನ್ನೆ ತೆರೆಯದೆ ಸಾಗಹಾಕಿದವರೂ ಇದ್ದಾರೆನ್ನಿ.
ಉಹುಂ. ಇಂಥದ್ದಕ್ಕೆಲ್ಲ ಬೇಸರಿಸಿಕೊಳ್ಳುವ ಜಾಯಮಾನವೇ ಅವರದ್ದಲ್ಲ. ಮುಂದಿನ ವಾರ ಮತ್ತೆ ಹೋಗಿ ಕದ ಬಡಿಯುವವರೇ. ಇದು ಸುಮಾರು 25 ವರ್ಷದ ಹಿಂದಿನ ಕಥೆಯಾದರೆ ಇವತ್ತಿನ ಸನ್ನಿವೇಶ ಏನು ಗೊತ್ತಾ? ಅವರು ಹೋದಲ್ಲೆಲ್ಲ ರಾಜಮರ್ಯಾದೆ. ಜನರಿಗೆ ಇವರನ್ನು ಕಂಡರೆ ಭಾರಿ ಗೌರವ.
ಆ ವ್ಯಕ್ತಿಯ ಹೆಸರು ಶೇಖರ್ ರಾಘವನ್. ಸರಳವಾಗಿ ಪರಿಚಯಿಸುವುದಿದ್ದರೆ ಅವರೊಬ್ಬ ಜಲಯೋಧ. ಅವರಂತೆಯೇ ಇನ್ನೊಬ್ಬರಿದ್ದಾರೆ. ಇಂದೂಕಾಂತ್ ರಾಗಡೆ. ಇಬ್ಬರಿಗೂ ಜನರಲ್ಲಿ ನೀರೆಚ್ಚರ ಮೂಡಿಸುವುದೇ ಬದುಕಿನ ಧ್ಯೇಯ. ಇಬ್ಬರೂ ಏಕಾಂಗಿ ಸೇನಾನಿಗಳಾಗಿ ಹೋರಾಡಿದವರು. ಅದರ ಲಾಭ ಆಗಿರುವುದು ಚೆನ್ನೈ ನಿವಾಸಿಗಳಿಗೆ. ಆ ಮಹಾನಗರಿ ಇವತ್ತು ನೀರಿನ ಬರದಿಂದ ಹೊರಬಂದಿದೆ ಅಂತಾದರೆ ಅದರಲ್ಲಿ ಇವರಿಬ್ಬರ ಪರಿಶ್ರಮ ಬಹುದೊಡ್ಡದು.
ಪಕ್ಕದಲ್ಲಿ ಬಂಗಾಳಕೊಲ್ಲಿಯನ್ನು ಇಟ್ಟುಕೊಂಡು ಚೆನ್ನೈನಲ್ಲಿ ನೀರಿಗೆಂಥ ಕೊರತೆ ಎಂದುಕೊಂಡೀರಿ. ನಮ್ಮಲ್ಲಿ ಗಾದೆಯೇ ಇಲ್ಲವೆ, 'ಸಮುದ್ರರಾಜನ ನೆಂಟಸ್ತನ, ಉಪ್ಪಿಗೆ ಬಡತನ' ಅಂತ. ಇದರ ಆಂತರ್ಯದಲ್ಲಿ ಹುದುಗಿರುವುದು ನೀರಿನ ವಿಚಾರವೇ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಎರಡೆರಡು ನದಿ ಹರಿದಿದ್ದರೂ ನದಿಕೊಳ್ಳದಲ್ಲಿಯೇ ನೀರಿಗೆ ತತ್ವಾರವಿಲ್ಲವೆ? ಚೆನ್ನೈ ಸಮುದ್ರದ ಪಕ್ಕದಲ್ಲಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಸಮೃದ್ಧ ಮಳೆ ಪ್ರದೇಶ. ಮುಂಗಾರಿನಲ್ಲಿ ನೈಋತ್ಯ ಮತ್ತು ಈಶಾನ್ಯ ಮಾರುತಗಳು ಬೀಳಿಸುವ ವರ್ಷಧಾರೆಯ ಪ್ರಮಾಣ 1200-1300 ಮಿ.ಮೀ. ಇದು ಭಾರತದ ವಾರ್ಷಿಕ ಸರಾಸರಿ ಮಳೆ ಪ್ರಮಾಣಕ್ಕಿಂತ (800 ಮಿ.ಮೀ) ಅಧಿಕ. ಆದರೆ ಮಳೆಗಾಲ ಕಳೆಯುತ್ತಿದ್ದಂತೆ ಸಮಸ್ಯೆ ಶುರು, ಪೊಂಗಲ್ ಹಬ್ಬ (ಸಂಕ್ರಾಂತಿ) ಕಳೆಯಿತೊ, ನೀರಿನ ಪರದಾಟ ಸಾಮಾನ್ಯ ಎನ್ನುವಂತಾಗಿತ್ತು. ನೀರು ನಿರ್ವಹಣೆಯಲ್ಲಿನ ಲೋಪ ಎಂಥ ಪರಿಪಾಟಲು ತಂದಿಡಬಹುದು ಎನ್ನುವುದಕ್ಕೂ, ನೀರನ್ನು ಮುತ್ತಿನಂತೆ ಜೋಪಾನ ಮಾಡಿದರೆ ಅದು ನೀಡುವ ಪ್ರತಿಫಲ ಏನು ಎನ್ನುವುದನ್ನು ಅರಿಯುವುದಕ್ಕೂ ಚೆನ್ನೈಗಿಂತ ಅತ್ಯುತ್ತಮ ಮಾದರಿ ಸಿಗದು.
'ನೀರಿನ ಬಗ್ಗೆ ಮಾತು ಶುರು ಮಾಡುತ್ತಿದ್ದಂತೆ ಜನ ಮುಖ ಸಿಂಡರಿಸುತ್ತಿದ್ದರು' ಎಂದು ನೀರೆಚ್ಚರದ ಹಾದಿಯ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ ರಾಘವನ್. ಶುರುವಿನ ದಿನಗಳಲ್ಲಿ ಪತ್ರಕರ್ತ ಮಿತ್ರನೊಬ್ಬನ ಸಹಾಯದಿಂದ ಎಷ್ಟೋ ಮನೆಗಳನ್ನು ತಲುಪುವುದು ಸಾಧ್ಯವಾಗಿದೆ ಎಂದು ನೆನಪಿಸಿಕೊಳ್ಳುತ್ತಾರೆ ಅವರು. ಒಂದಲ್ಲ ಒಂದು ದಿನ ಜನರಿಗೆ ತಾನೇನು ಹೇಳುತ್ತೇನೆ ಎನ್ನುವುದು ಅರಿವಾಗುತ್ತದೆ ಎನ್ನುವ ಅದಮ್ಯ ವಿಶ್ವಾಸ ಮನದಲ್ಲಿ. ಅದು ನಿಜವಾಗಲು ಜಾಸ್ತಿ ದಿನಗಳೇನೂ ಬೇಕಾಗಲಿಲ್ಲ. ಜನ ನಿಧಾನಕ್ಕೆ ರಾಘವನ್ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾರಂಭಿಸಿದರು. ತಮ್ಮ ಮನೆಗೆ ಕರೆದೊಯ್ದು ಮಳೆ ನೀರಿಂಗಿಸುವ ಬಗೆ ಕುರಿತು, ಬತ್ತಿ ಹೋಗಿರುವ ಬಾವಿಯ ಪುನರುಜ್ಜೀವನದ ಕುರಿತು ಸಲಹೆ ಪಡೆಯಲಾರಂಭಿಸಿದರು. ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿಕೊಂಡು 2002ರಲ್ಲಿ ಆಕಾಶಗಂಗಾ ಟ್ರಸ್ಟ್ ಮೂಲಕ ದೇಶದ ಮೊದಲ 'ಮಳೆ ಕೇಂದ್ರ' (ರೇನ್ ಸೆಂಟರ್) ಆರಂಭಿಸಿದವರು ಇದೇ ರಾಘವನ್. ಮಳೆ ಮತ್ತು ಮಳೆ ನೀರಿನ ಬಳಕೆ ಕುರಿತು ಸಮಗ್ರ ಮಾಹಿತಿ ನೀಡುವ ಪರಿಕಲ್ಪನೆ ಜೀವತಳೆದಿದ್ದೇ ಅಲ್ಲಿ. ಮಳೆಕೊಯ್ಲಿಗೆ ಎಲ್ಲ ರೀತಿಯ ಸಹಕಾರ ನೀಡುವ ಪರಿಣಿತ ಪ್ಲಂಬರ್‌ಗಳ ತಂಡವೇ ಇದೆ ಕೇಂದ್ರದಲ್ಲಿ.
ಅದು 2003. ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಮೂಲಕ ಚೆನ್ನೈನಲ್ಲಿ ಮಳೆ ಕೊಯ್ಲು ಕಡ್ಡಾಯಗೊಳಿಸಿತು. ಎಲ್ಲಾ ಕಡೆಗಳಲ್ಲಿ ಆಗುವಂತೆ (ಬೆಂಗಳೂರಿನಲ್ಲಿ ಕಾಯ್ದೆ ಬಂದು ವರ್ಷಗಳೇ ಉರುಳಿದರೂ ಜನ ನಿರುತ್ಸಾಹದಿಂದ ಇಲ್ಲವೇ, ಅದೇ ರೀತಿ) ಜನರ ಪ್ರತಿಕ್ರಿಯೆ ಅಷ್ಟರಲ್ಲಿಯೇ ಇತ್ತು. ಎಲ್ಲಾ ಮನೆಗಳು, ಕಚೇರಿಗಳು, ಸರ್ಕಾರಿ ಕಟ್ಟಡಗಳಲ್ಲಿ ಮಳೆ ಕೊಯ್ಲು ಕಡ್ಡಾಯವಾಗಿತ್ತು. 'ದಂಡಂ ದಶಗುಣಂ' ಎನ್ನುವ ಮಾತು ಆಡಳಿತದ ಕಡೆಯಿಂದ ಯಾವಾಗ ಬಂತೊ, ಎದ್ದುಬಿದ್ದು ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾದರು. ಮಳೆ ಕೊಯ್ಲು ಕಡೆಗಣಿಸಿದವರಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಮುಲಾಜಿಲ್ಲದೆ ಕಡಿತ ಮಾಡುವುದಾಗಿ ಘೋಷಣೆ ಬಿತ್ತು ನೋಡಿ. ವೈಜ್ಞಾನಿಕವಾಗಿಯೊ, ಅವೈಜ್ಞಾನಿಕವಾಗಿಯೊ ಅಂತೂ ಸರ್ಕಾರದ ಬೆದರಿಕೆ ಪರಿಣಾಮವಾಗಿ ಚೆನ್ನೈನ ಬಹುತೇಕ ಮನೆಗಳಲ್ಲಿ ನೀರಿಂಗಿಸುವ ಸಣ್ಣಪುಟ್ಟ ವ್ಯವಸ್ಥೆಗಳಾದವು. ರೇನ್ ಸೆಂಟರ್ ನಡೆಸಿದ ಸಮೀಕ್ಷೆಯಲ್ಲಿ ಬಹಳಷ್ಟು ಮಂದಿ ಅರ್ಧಂಬರ್ಧ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರು. ಆದರೂ ಪರಿಣಾಮ ಚೆನ್ನಾಗಿಯೇ ಆಗಿದೆ ಎನ್ನುವುದನ್ನು ಸಮೀಕ್ಷೆ ಕಂಡುಕೊಂಡಿತು. ಮಳೆ ನೀರನ್ನು ಇಂಗಿಸಿದ್ದರಿಂದ ಒಂದೇ ವರ್ಷದಲ್ಲಿ ಚೆನ್ನೈನ ಅಂತರ್ಜಲ ಮಟ್ಟ ಆರು ಮೀಟರ್‌ನಷ್ಟು ವೃದ್ಧಿಸಿತ್ತು!
ಚೆನ್ನೈನಲ್ಲಿ ದೇಗುಲಗಳಿಗೇನೂ ಕೊರತೆ ಇಲ್ಲ. ತಮಿಳುನಾಡು ದೇವಸ್ಥಾನಗಳ ವಿಶೇಷ ಎಂದರೆ ಕಲ್ಯಾಣಿಗಳು. ಚೆನ್ನೈನ ಬಹುಪಾಲು ಕಲ್ಯಾಣಿಗಳು ಬತ್ತಿ ಹೋಗಿದ್ದವು. ಮಕ್ಕಳ ಆಟದ ಮೈದಾನಗಳಾಗಿದ್ದವು. ಒಂದು ಟ್ಯಾಂಕರ್ ನೀರು ಹಾಕಿದರೆ ಕ್ಷಣಾರ್ಧದಲ್ಲಿ ಅಷ್ಟೂ ನೀರು ಇಂಗಿ ಹೋಗುತ್ತಿತ್ತು! ಮಳೆ ಕೊಯ್ಲಿನ ಮಾಯೆ ನೋಡಿ. ಈಗ ನೀರಿಲ್ಲದ ಕಲ್ಯಾಣಿಯೇ ಇಲ್ಲ. ಎಲ್ಲವೂ ಸರ್ವಋತು ಕಲ್ಯಾಣಿಗಳು.
ಸ್ಥಳೀಯ ಮಹಾನಗರ ಪಾಲಿಕೆ ಭಾರಿ ಮೊತ್ತದಲ್ಲಿ ನಗರದಾದ್ಯಂತ ಮಳೆ ಚರಂಡಿಗಳನ್ನು ನಿರ್ಮಿಸಲು ಮುಂದಾದಾಗ ರಾಘವನ್ ಅದರ ವಿರುದ್ಧ ಧ್ವನಿ ಎತ್ತಿದರು. 'ಮಳೆ ನೀರು ಹರಿದು ಹೋಗಲು ಚರಂಡಿ ಮಾಡುವುದಕ್ಕಿಂತ ಅದೇ ನೀರು ಭೂಮಿಯಲ್ಲಿ ಇಂಗುವಂತೆ ಇಂಗುಗುಂಡಿಗಳನ್ನು ನಿರ್ಮಿಸಿ' ಎಂದು ಬೇಡಿದರು, ಕಾಡಿದರು. ನಿರಶನ ನಡೆಸಿದರು. 'ಸಮುದ್ರ ಸೇರಿ ವ್ಯರ್ಥವಾಗುವ ನೀರೇ ನಮಗೆ ಜೀವನಾಡಿಯಾಗುತ್ತದೆ' ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಕೊನೆಗೆ ಕೋರ್ಟ್ ಕಟ್ಟೆ ಹತ್ತಿ ಪಾಲಿಕೆಯನ್ನು ಬಗ್ಗಿಸಿದರು.
ಅದೆಲ್ಲಕ್ಕಿಂತ ದೊಡ್ಡ ಯಶೋಗಾಥೆ ಎಂದರೆ ಉಪ್ಪು ನೀರನ್ನು ಸಿಹಿಯಾಗಿಸಿದ್ದು! ರಾಘವನ್‌ರ ಅಪಾರ್ಟ್‌ಮೆಂಟ್‌ಗೆ ಸಮುದ್ರ ತೀರದಿಂದ ಐನೂರೇ ಮೀಟರ್ ಅಂತರ. ಬಾವಿಯೇನೋ ಇತ್ತು. ಲವಣಯುಕ್ತ ನೀರು ಬಳಕೆಗೆ ಅಯೋಗ್ಯ. ವಸತಿ ಸಮುಚ್ಛಯದ ತಾರಸಿ ನೀರೆಲ್ಲ ಒಂದೇ ಕಡೆ ಬೀಳುವಂತೆ ಮಾಡಿ, ಆ ನೀರನ್ನು ಬಾವಿಗೆ ಬಿಟ್ಟಿದ್ದಾಯ್ತು. ಸಂಕೀರ್ಣದ ಆವಾರದಲ್ಲಿ ಅಲ್ಲಲ್ಲಿ ಮಳೆ ನೀರನ್ನು ಇಂಗಿಸುವ ವ್ಯವಸ್ಥೆಯೂ ಆಯಿತು. ಒಂದೇ ಒಂದು ವರ್ಷ ಅಷ್ಟೆ. ಬಾವಿ ನೀರು ಸಿಹಿಯಾಗಿತ್ತು! ಮತ್ತೆ ಮತ್ತೆ ಕುಡಿಯಬೇಕು ಅನ್ನಿಸುವಷ್ಟು ರುಚಿಯಾಗಿತ್ತು! 2005ರಿಂದ ಈಚೆಗೆ ಬೇಸಂತ್ ನಗರ ಮಾತ್ರವೇ ಅಲ್ಲ, ಸಮುದ್ರ ತೀರದಲ್ಲಿರುವ ಯಾವ ಬಡಾವಣೆಯಲ್ಲೂ ಉಪ್ಪು ನೀರಿನ ಉಪದ್ರವಿಲ್ಲ.
ಇಂಡಿಯಾ ವಾಟರ್ ಪೋರ್ಟಲ್ ಮೂಲಕ ಜಲಜಾಗೃತಿಯಲ್ಲಿ ತೊಡಗಿಕೊಂಡಿರುವವರು ಇಂದೂಕಾಂತ್ ರಾಗಡೆ. ಮಳೆಕೊಯ್ಲಿನ ಕುರಿತು ಯಾರಾದರೂ ಸಲಹೆ ಬಯಸಿದರೆ, ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರೆ ತಮ್ಮದೇ ಖರ್ಚಿನಲ್ಲಿ ಪತ್ರಮುಖೇನ ಉತ್ತರಿಸುತ್ತಾರೆ, 'ಅಂತರ್ಜಲ ಬ್ಯಾಂಕ್‌ನಲ್ಲಿ ಕೂಡಿಡುವ ಹಣದಂತೆ. ಬರೀ ಅದನ್ನು ಬಳಸುತ್ತಾ ಹೋದರೆ ಒಂದಲ್ಲ ಒಂದು ದಿನ ಬರಿದಾಗಿ ಹೋಗುತ್ತದೆ. ಮಳೆ ನೀರು ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಪ್ರಯತ್ನ ಮಾಡಿದರೆ ನಿಧಾನವಾಗಿಯಾದರೂ ಅದು ಭಾರಿ ಇಳುವರಿಯನ್ನೇ ನೀಡುತ್ತದೆ' ಎಂದು ಮಳೆ ಕೊಯ್ಲಿನ ಮೂಲಕ ಅಂತರ್ಜಲ ಹೆಚ್ಚಿಸುವ ಅನಿವಾರ್ಯತೆಯನ್ನು ಮುಂದಿಡುತ್ತಾರೆ ಅವರು.
ಈಗ್ಗೆ ನಾಲೈದು ವರ್ಷದ ಕೆಳಗೆ ನನಗೆ ಪರಿಚಿತರಾದವರು. ಅದೊಂದು ದಿನ ಕನ್ನಡ ನಾಡಿನ 'ಮಳೆನೀರಿನ ಮನುಷ್ಯ', ನಾನು ತುಂಬ ಗೌರವಿಸುವ ಹಿರಿಯ ಗೆಳೆಯ ಶ್ರೀಪಡ್ರೆಯವರು ನನಗೊಂದು ಹೊತ್ತಗೆಯನ್ನು ಕಳುಹಿಸಿಕೊಟ್ಟಿದ್ದರು. 'ಸೆಲ್ಫ್ ರಿಲಾಯೆನ್ಸ್ ಇನ್ ವಾಟರ್‌' (ನೀರ ಸ್ವಾವಲಂಬನೆ) ಎಂಬ ಶೀರ್ಷಿಕೆಯ ಮುದ್ದಾದ, ಅತ್ಯಂತ ಮೌಲ್ಯಯುತ ಪುಸ್ತಕ ನನ್ನ ಮೇಲೆ ಅತ್ಯಂತ ಗಾಢ ಪ್ರಭಾವ ಬೀರಿತು. 'ಒಮ್ಮೆ ಮಾತನಾಡಿ' ಎಂಬ ಸಲಹೆಯೊಂದಿಗೆ ಸಂಪರ್ಕ ಸಂಖ್ಯೆಯನ್ನೂ ನೀಡಿದರು ಪಡ್ರೆಯವರು. ರಾಗಡೆಯವರ ಮಾತಿನಲ್ಲಿ ಅವರ ಅನುಭವದ ಆರ್ದ್ರತೆ ದಟ್ಟವಾಗಿತ್ತು.
ಕಾನೂನು ಮಾಡಿ ಮಳೆಕೊಯ್ಲು ಕಡ್ಡಾಯಗೊಳಿಸಿದರೆ ಸಾಲದು. ಅದು ಜನಾಂದೋಲನ ಆಗಬೇಕು. ಅಂಥದ್ದೊಂದು ಪ್ರಜ್ಞೆ ಜನರಲ್ಲಿಯೂ ಮೂಡಬೇಕು. ಎಲ್ಲರಿಗೂ ನೀರು ಬೇಕು, ಆದರೆ ನೀರಿಂಗಿಸುವ ಹೊಣೆ ಬೇಡ ಎಂದರೆ ಹೇಗೆ? ನೀರಿನ ಅಗತ್ಯದ ವಿಕೇಂದ್ರೀಕರಣ ಆಗಿದೆ, ಜಲಮೂಲಗಳು ಮಾತ್ರ ಕೇಂದ್ರೀಕೃತವಾಗಿರುವುದು ಸರಿಯೆ ಎನ್ನುವುದು ಈ ಇಬ್ಬರು ಜಲಯೋಧರು ಜನರ ಮುಂದಿಡುವ ಪ್ರಶ್ನೆ.
25 ವರ್ಷದ ಹಿಂದೆ ಚೆನ್ನೈ ಯಾವ ರೀತಿಯಲ್ಲಿ ನೀರಿನ ಕೊರತೆ ಅನುಭವಿಸುತ್ತಿತ್ತೊ ಅದಕ್ಕಿಂತ ಭೀಕರ ಸ್ಥಿತಿ ಬೆಂಗಳೂರಿಗೆ ಬರುವ ದಿನಗಳು ದೂರದಲ್ಲೇನೂ ಇಲ್ಲ. ಅಲ್ಲಿಯೂ ಖಾಲಿ ಜಾಗಗಳೆಲ್ಲ ಮಾಯವಾಗಿ ಕಾಂಕ್ರೀಟ್ ಕಾಡುಗಳು ಎದ್ದಿದ್ದವು. ಅಪಾರ್ಟ್‌ಮೆಂಟ್‌ಗಳು ಕೆರೆಗಳನ್ನು ನುಂಗಿದ್ದವು. ಭಾರಿ ಕಟ್ಟಡಗಳನ್ನು ಎಬ್ಬಿಸುವ ಆತುರದಲ್ಲಿ ಜಲಮೂಲಗಳು ಮರೆಯಾಗಿದ್ದವು. ಸಿಲಿಕಾನ್ ಸಿಟಿಯಲ್ಲಿ ನಾವಿಂದು ಅದೇ ದಾರಿಯಲ್ಲಿ ಸಾಗುತ್ತಿದ್ದೇವೆ. ಮಿತಿಮೀರಿ ಬೆಳೆಯುತ್ತಿರುವ ನಗರಕ್ಕೆ ಕಾವೇರಿಯಾದರೂ ಎಷ್ಟಂಥ ನೀರು ಕೊಟ್ಟಾಳು? ಇತಿಹಾಸದಿಂದ ಪಾಠ ಕಲಿಯದಿದ್ದರೆ ನಮ್ಮಂಥ ಮೂರ್ಖರು ಯಾರೂ ಇಲ್ಲ.
ಮಳೆಕೊಯ್ಲು ನಗರಕ್ಕೆ ಮಾತ್ರ ಸೀಮಿತ ಎಂದೇನೂ ಭಾವಿಸಿಕೊಳ್ಳಬೇಕಿಲ್ಲ. ಹಳ್ಳಿಗಳಲ್ಲಿ ಬೇಕಾದಷ್ಟು ಅವಕಾಶ ಇದೆ. ಹೊಲದಲ್ಲಿ ಮಳೆ ನೀರು ಹಿಡಿದಿಟ್ಟುಕೊಂಡು ಬಿರುಬೇಸಿಗೆಯಲ್ಲೂ ಕೃಷಿ ನಡೆಸುವ ಅವಕಾಶಗಳು ಹೇರಳವಾಗಿವೆ. ನಮಗೆ ಅವು ಗೋಚರಿಸುತ್ತಿಲ್ಲ ಅಷ್ಟೆ. ಅದರ ತುರ್ತು ಇಲ್ಲ ಎನ್ನುವ ನಿರ್ಲಕ್ಷ್ಯ ಧೋರಣೆಯೂ ಇರಬಹುದು. ಈ ಕ್ಷಣದಿಂದಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನದ ಅನಾಹುತಕ್ಕೆ ಆಮಂತ್ರಣ ನೀಡಿದಂತಾಗುತ್ತದೆ. ಸರ್ಕಾರಗಳು ಚೆಕ್‌ಡ್ಯಾಂ ಅಥವಾ ಜಲಾಶಯಗಳ ಮೂಲಕ ಮಳೆ ನೀರು ಹಿಡಿದಿಡುವ ಪ್ರಯತ್ನ ಮಾಡಬಹುದು. ಆದರೆ ಮನೆಮನೆಗಳ ಅಂಗಳದಲ್ಲಿ ನೀರು ಇಂಗಿಸುವ ಮೂಲಕ  ಎಲ್ಲೆಡೆಯಲ್ಲಿಯೂ ಅಂತರ್ಜಲ ಹೆಚ್ಚುವಂತೆ ನೋಡಿಕೊಳ್ಳಬೇಕಾದವರು, ಮಾಡಿಕೊಳ್ಳಬೇಕಾದವರು ನಾವೇ. ಎಲ್ಲಕ್ಕಿಂತ ಹೆಚ್ಚಾಗಿ ಮಳೆನೀರು ಕಡ್ಡಾಯ ಕಾನೂನು ಜಾರಿ ಹಾಗೂ ಮಳೆ ಕೇಂದ್ರಗಳ ಆರಂಭದ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಖಂಡಿತಾ ತಮಿಳುನಾಡು ಮಾದರಿ. ಆ ಅರಿವು ನಮ್ಮಲ್ಲಿ, ನಮ್ಮನ್ನಾಳುವವರಲ್ಲಿ ಮೂಡುವುದೆಂದೊ?

-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.