ಅಂಕಣಗಳು

ಜೀವನ ಚರಿತ್ರೆ ಬರೆದರೂ ಕಷ್ಟ, ಬರೆಯದಿದ್ದರೂ ಕಷ್ಟ!

ಬಾರು ತಮ್ಮ ಅನುಭವಗಳಿಗೆ ಅಕ್ಷರ ರೂಪ ಕೊಡುತ್ತಿದ್ದಾರೆಂದು ಗೊತ್ತಾದಾಗ ಕಿವಿಗಳು..

ಜೀವನ ಚರಿತ್ರೆ ಬರೆದರೂ ಕಷ್ಟ, ಬರೆಯದಿದ್ದರೂ ಕಷ್ಟ!
Published On :

ಸಂಜಯ ಬಾರು ಪುಸ್ತಕ ಬರೆಯಲಿದ್ದಾರೆ ಎಂಬ ಸುದ್ದಿ ಸುಮಾರು ಹತ್ತು ತಿಂಗಳ ಹಿಂದೆ ಹರಿದಾಡಲಾರಂಭಿಸಿದಾಗಲೇ ವಿವಾದದ ಗೂಡಿಗೆ ಜೇನುಹುಳುಗಳು ಕಟ್ಟಲಾರಂಭಿಸಿದ್ದವು. ಸಂಜಯ ಬಾರು ಪ್ರಧಾನಿ ಡಾ. ಮನಮೋಹನಸಿಂಗ್ ಅವರಿಗೆ 2004ರಿಂದ ಐದು ವರ್ಷಗಳ ಕಾಲ ಮಾಧ್ಯಮ ಸಲಹೆಗಾರರಾಗಿದ್ದವರು. ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ಆಯಕಟ್ಟಿನ ಜಾಗದಲ್ಲಿದ್ದವರು. ಪ್ರಧಾನಿ ಡಾ. ಸಿಂಗ್ ಎರಡನೆ ಬಾರಿಗೆ ಆಯ್ಕೆಯಾದಾಗ ಹಠಾತ್ತಾಗಿ ಆ ಹುದ್ದೆಯಿಂದ ನಿರ್ಗಮಿಸಿದವರು. ಅವರ ನಿರ್ಗಮನದ ಸಮಯದಲ್ಲಿ ಅಲ್ಲಲ್ಲಿ ಗೊಣಗೊಣ ಅಂತ ಗಾಳಿ ಸುದ್ದಿ ಹರಿದಾಡಿದರೂ ಅಲ್ಲಿಗೆ ತಣ್ಣಗಾಗಿತ್ತು. ಬಾರು ಸಹ ಎಲ್ಲೂ ತಮ್ಮ ಅಸಮಾಧಾನ, ನಂಜು, ಬೇಗುದಿಯನ್ನು ಹೊರಹಾಕಲಿಲ್ಲ. ಅಧಿಕಾರದ ದಂತಗೋಪುರದಲ್ಲಿ ಇವೆಲ್ಲ ಸಾಮಾನ್ಯ ಎಂದು ಎಲ್ಲರೂ ಭಾವಿಸಿ ಸುಮ್ಮನಾದರು. ಬಾರು ನಿರ್ಗಮನವನ್ನು ಅಲ್ಲಿಗೆ ಎಲ್ಲರೂ ಮರೆತಂತಾಗಿತ್ತು.
ಆದರೆ ಅವರು ಪ್ರಧಾನಿ ಕಾರ್ಯಾಲಯದಲ್ಲಿನ ತಮ್ಮ ಅನುಭವಗಳಿಗೆ ಅಕ್ಷರ ರೂಪ ಕೊಡುತ್ತಿದ್ದಾರೆಂಬುದು ಗೊತ್ತಾದಾಗ ಕುತೂಹಲದ ಕಿವಿಗಳು ನಿಮಿರಿನಿಂತವು. ಇಡೀ ದೇಶ ಮಹಾಚುನಾವಣೆಯ ಹೆಬ್ಬಾಗಿಲಿನಲ್ಲಿ ನಿಂತಿದ್ದಾಗ ಬಾರು ಪುಸ್ತಕ ಬಿಡುಗಡೆ ಮಾಡಬಹುದೆಂದೂ, ಪ್ರಧಾನಿ ಕಾರ್ಯಾಲಯದ ಕೆಲವು ಹಸಿಹಸಿ ಸತ್ಯಗಳನ್ನು ಹಿಂಡಿ ಸಾರ್ವಜನಿಕವಾಗಿ ಅವನ್ನೆಲ್ಲ ತಂತಿ ಮೇಲೆ ಒಣಗಿ ಹಾಕಬಹುದೆಂದೂ, ಡಾ. ಸಿಂಗ್ ಅವರನ್ನು ತೀವ್ರ ಮುಜುಗರ, ಪೇಚಿಗೆ ಸಿಲುಕಿಸಬಹುದೆಂದೂ, ಆ ಮೂಲಕ ಪ್ರತಿಪಕ್ಷಗಳಿಗೆ ಕಾಂಗ್ರೆಸ್‌ನ್ನು ಹಣಿಯಲು ಅಸ್ತ್ರ ಕೊಡಬಹುದೆಂದೂ ಯಾರೂ ಅಂದುಕೊಂಡಿರಲಿಲ್ಲ. ಬಾರು ಅವರ ಕೃತಿಯಲ್ಲಿನ ಹೂರಣಕ್ಕಿಂತ ಪುಸ್ತಕವನ್ನು ಬಿಡುಗಡೆ ಮಾಡಿದ ಸಮಯ, ಸಂದರ್ಭವೇ ಕಾಂಗ್ರೆಸ್‌ಗೆ ಹೆಚ್ಚು ತಲೆನೋವಾಗಿ ಪರಿಣಮಿಸಿದೆ. ಚುನಾವಣೆ ಹೊತ್ತಿನಲ್ಲಿ ವಿರೋಧಿಗಳಿಗೆ 'ಬ್ರಹ್ಮಾಸ್ತ್ರ'ವನ್ನು ಕೊಟ್ಟ ಬಾರು ಅವರದ್ದು 'ವಿಶ್ವಾಸಘಾತಕ ನಡೆ' ಎಂದು ಕಾಂಗ್ರೆಸ್ ನಾಯಕರು ಹಾಗೂ ಡಾ. ಸಿಂಗ್ ಅವರ ಕುಟುಂಬ ಅಂದುಕೊಂಡಿದೆ. ಹಾಗೆ ನೋಡಿದರೆ, ಬಾರು ಬರೆದಿದ್ದರಲ್ಲಿ ಯಾವುದೇ ಹೊಸ ವಿಷಯಗಳಿಲ್ಲ. ಇಡೀ ದೇಶದ ಜನತೆ ಭಾವಿಸಿದ್ದಕ್ಕೆ ಅವರು ಅಧಿಕೃತ ಅಥವಾ ಪ್ರತ್ಯಕ್ಷದರ್ಶಿಯ ಮೊಹರನ್ನು ಹಾಕಿ ನಿಜ ಎಂದು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ಡಾ. ಸಿಂಗ್ ಬೆನ್ನುಮೂಳೆ ಇಲ್ಲದ ಪ್ರಧಾನಿ ಎಂಬುದಾಗಲಿ, ಪ್ರಮುಖ ಕಡತಗಳು ಪ್ರಧಾನಿಗಿಂತ ಮೊದಲೇ ಸೋನಿಯಾ ಗಾಂಧಿ ಅವರಿಗೆ ತಲುಪುತ್ತಿತ್ತು ಎಂಬುದಾಗಲಿ, ಸಂಪುಟದಲ್ಲಿನ ಸಚಿವರು ಪ್ರಧಾನಿಗಿಂತ ಮುಂಚೆ ಸೋನಿಯಾಗೆ ವಿಷಯಗಳನ್ನು ಅರುಹುತ್ತಿದ್ದರು ಎಂಬುದಾಗಲಿ ದೇಶವಾಸಿಗಳಿಗೆ ಗುಟ್ಟಾಗಿ ಉಳಿದಿರಲಿಲ್ಲ. ಬಾರು ತಮ್ಮ ಕೃತಿಯಲ್ಲಿ ಈ ಎಲ್ಲ ಸಂಗತಿಗಳನ್ನು ಸಮಯ, ಸಂದರ್ಭ, ಘಟನೆಯ ವಿವರಗಳೊಂದಿಗೆ ಹೇಳಿದ್ದಾರೆ ಅಷ್ಟೆ.
ಯಾವಾಗಲೂ ಹೀಗೆ, 'ಮಾಡಿದವರ ಪಾಪ ಹೇಳಿದವರ ಬಾಯಲ್ಲಿ' ಅಂತಾರಲ್ಲ. ಪಾಪ ಕಾರ್ಯ ಮಾಡಿದಕ್ಕಿಂತ ಅದನ್ನು ಹೇಳಿದ್ದೇ ದೊಡ್ಡ ಪಾಪ ಅಥವಾ ಅಪರಾಧ.  ಈಗ ಕಾಂಗ್ರೆಸ್ ಪಾಲಿಗೆ ಸಂಜಯ ಬಾರು ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಅವರು ಹೇಳಿದ್ದೇ ವಿಶ್ವಾಸ ದ್ರೋಹವಾಗಿ ಬಿಟ್ಟಿದೆ.
ಇವೆಲ್ಲ ಸಹಜ. ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಕೆಲಸ ಮಾಡಿದವರು, ಪ್ರಧಾನಿ ಜತೆ ಕೆಲಸ ಮಾಡಿದವರು ಪುಸ್ತಕ ಬರೆದರೆ ಅದು ವಿವಾದವಾಗದೇ, ಸುದ್ದಿಯಾಗದೇ ಹೋಗುವುದಿಲ್ಲ. ಅದರಲ್ಲೂ ತುಸು ನೋವು, ನಂಜು ಇಟ್ಟುಕೊಂಡವರು ಬರೆದರೆ ಕೇಳಬೇಕೇ? ಎಲ್ಲ ವಿಷಯಗಳನ್ನು ಹೇಳಿಯೂ ಅದು ವಿವಾದಾತೀತವಾಗಿರಬೇಕೆಂದು ಬಯಸುವುದು ತಪ್ಪು. ಅಂಥ ಕೃತಿಗಳ ಪೈಕಿ ನನಗೆ ತಟ್ಟನೆ ನೆನಪಿಗೆ ಬರುವುದು ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಅವರಿಗೆ ಕಾರ್ಯದರ್ಶಿಯಾಗಿದ್ದ ಪಿ.ಎಂ. ನಾಯರ್ ಬರೆದ The Kalam Effect: My years with the President  (ಈ ಕೃತಿಯನ್ನು ನಾನು ಕನ್ನಡಕ್ಕೆ 'ಕಲಾಮ್ ಕಮಾಲ್‌' ಎಂದು ಅನುವಾದಿಸಿದ್ದೇನೆ.) ಬಿಹಾರ ವಿಧಾನಸಭೆ ವಿಸರ್ಜನೆ ಗೊಂದಲ, ರಾಷ್ಟ್ರಪತಿ ಆಳ್ವಿಕೆ, ಅಫಜಲ್ ಗುರುಗೆ ನೇಣು... ಮುಂತಾದ ವಿವಾದಾತ್ಮಕ ವಿಷಯಗಳ ಬಗ್ಗೆ ರಾಷ್ಟ್ರಪತಿ ಭವನದಲ್ಲಿ ಆಯಾ ಕಾಲಘಟ್ಟದಲ್ಲಿ ನಡೆದಿದ್ದೇನು ಎಂಬುದನ್ನು ವಿವರಿಸಿಯೂ ವಿವಾದದ ಲೇಪ ತಟ್ಟಿಸಿಕೊಳ್ಳಲಿಲ್ಲ. ರಾಷ್ಟ್ರಪತಿ ಕಾರ್ಯಾಲಯಕ್ಕೂ, ಪ್ರಧಾನಿ ಕಾರ್ಯಾಲಯಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ ಬಿಡಿ.
ಅಮೆರಿಕದ ಅಧ್ಯಕ್ಷ, ಬ್ರಿಟನ್‌ನ ಪ್ರಧಾನಿ, ಇಂಗ್ಲೆಂಡ್‌ನ ರಾಣಿಯರ ಬಗ್ಗೆ ಪ್ರಕಟವಾದಷ್ಟು ಜೀವನಚರಿತ್ರೆ (ಬಯಾಗ್ರಫಿ)ಗಳು, ಅವು ಹುಟ್ಟುಹಾಕಿದ ವಿವಾದಗಳಿಗೆ ಸಮ. ಇಂಥವರ ಜತೆ ಕೆಲಸ ಮಾಡಿದವರು ತಮ್ಮ ಅನುಭವಗಳನ್ನು ದಾಖಲಿಸಿದರೆ ಸಾಕು, ಅದು ಯಾವುದೋ ವಿವಾದವನ್ನು ಸೃಷ್ಟಿಸುತ್ತದೆ. ಇವರಿಗೆ ಹೇಳಲು ಹಲವಾರು ವಿಷಯಗಳಿರುತ್ತವೆ. ತಾವು ಎಂಥ ಮಹತ್ವದ ಸಂಗತಿಗಳಿಗೆ ಸಾಕ್ಷಿಯಾಗಿದ್ದೆವು ಎಂಬುದನ್ನು ಹೇಳುವ ಮೂಲಕ ತಮ್ಮ ಪ್ರಾಮುಖ್ಯ, ಡೌಲನ್ನು ಹೊರಜಗತ್ತಿಗೆ ಹೇಳಿಕೊಳ್ಳಬೇಕೆಂಬ ಆಸೆಯಿರುತ್ತದೆ. ಅದರಲ್ಲೂ ಅರ್ಧಕ್ಕೇ ಆ ಜಾಗದಿಂದ ಹೊರಹಾಕಿಸಿಕೊಂಡು ಅವಮಾನಿತರಾದಾಗ ಎಲ್ಲವನ್ನೂ ಹೇಳಿಬಿಡಬೇಕೆಂಬ ಪ್ರತೀಕಾರ ಭಾವವೂ ಬುಸುಗುಡುತ್ತಿರುತ್ತದೆ. ಇವ್ಯಾವವೂ ಇಲ್ಲದೇ, ಒಳ್ಳೆಯ ಭಾವದಿಂದ ಬರೆಯಲು ಕುಳಿತಾಗ ಅದು 'ಮುಖಸ್ತುತಿ ಮಹಾತ್ಮೆ' ಯಾಗುವ ಅಪಾಯವೂ ಇದೆ. ಇನ್ನು ಏನೂ ಬರೆಯದೇ ಸುಮ್ಮನೆ ಕುಳಿತುಕೊಳ್ಳುವುದಿದೆಯಲ್ಲ, ಅದು ಸಕ್ಕರೆ ಮುಂದೆ ಕುಳಿತೂ ಸ್ವಾಟೆ ತಿರುವಿಕೊಂಡು ಹೋಗುವ ಇರುವೆಯ ಪಾಡು. ಅಧಿಕಾರ ಕೇಂದ್ರದ ಎಲ್ಲ ಸಣ್ಣತನ, ಹುಳುಕು, ಕ್ರೌರ್ಯ, ನಿರ್ದಾಕ್ಷಿಣ್ಯ, ಹಪಾಹಪಿ, ದುರಾಸೆ, ಲಂಪಟತನ, ಅಕ್ರಮ, ದ್ರೋಹ, ವಿಶ್ವಾಸಘಾತುಕತನ, ಕ್ಷುಲ್ಲಕತನ, ಅಪ್ರಾಮಾಣಿಕತೆ, ದುರಾಡಳಿತ... ಎಲ್ಲವನ್ನೂ ನೋಡುತ್ತಾ,  ಜಾಣಕುರುಡುತನ ಪ್ರದರ್ಶಿಸುತ್ತಾ, ಎಲ್ಲವನ್ನೂ ನುಂಗಿಕೊಂಡು ಏನೂ ನಡೆದೇ ಇಲ್ಲವೆಂಬಂತೆ ನಿರ್ಲಿಪ್ತವಾಗಿ, ನಿರ್ಭಾವುಕನಾಗಿ, ತನ್ನ ಕೆಲಸದಲ್ಲಿ ಮಗ್ನನಾಗುವುದಿದೆಯಲ್ಲ ಅದು ಸಾಮಾನ್ಯ ಅಲ್ಲ.
ನಾನು ಕೆಲ ದಿನಗಳ ಹಿಂದೆ ಲಂಡನ್‌ನ 'ದಿ ಟೈಮ್ಸ್‌' ಪತ್ರಿಕೆಯಲ್ಲಿ ಕ್ಯಾಥಲೀನ್ ಹಿಲ್ ಎಂಬುವಳ ಬಗ್ಗೆ ಪ್ರಕಟವಾದ ಲೇಖನವೊಂದನ್ನು ಓದುತ್ತಿದ್ದೆ. ಬ್ರಿಟನ್‌ನ ಧೀಮಂತ ಮುತ್ಸದ್ಧಿ ಹಾಗೂ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ಅವರಿಗೆ ಪರ್ಸನಲ್ ಸೆಕ್ರೆಟರಿಯಾಗಿದ್ದವಳು. ಅಷ್ಟೇ ಅಲ್ಲ, ಬ್ರಿಟನ್‌ನ ನಿರ್ಣಾಯಕ ಘಟ್ಟದಲ್ಲಿ ಪ್ರಧಾನಿಯಾಗಿದ್ದವರಿಗೆ ಸೆಕ್ರೆಟರಿಯಾಗಿದ್ದಳು. ದೇಶದ ಆರು ಮಂದಿ ಪ್ರಧಾನಿಗಳಿಗೆ ಈಕೆ ಆಪ್ತ ಕಾರ್ಯದರ್ಶಿಯಾಗಿದ್ದಳು. ಕ್ಲೆಮೆಂಟ್ ಅಟ್ಲಿ, ಸರ್ ವಿನ್‌ಸ್ಟನ್ ಚರ್ಚಿಲ್, ಸರ್ ಅಂಥೋನಿ ಈಡೆನ್, ಹೆರಾಲ್ಡ್ ಮ್ಯಾಕ್‌ಮಿಲನ್, ಅಲೆಕ್ ಡಾಗ್ಲಸ್‌ಹೋಮ್ ಹಾಗೂ ಹೆರಾಲ್ಡ್ ವಿಲ್ಸನ್‌ಗೆ ಕ್ಯಾಥರಿನ್ ಹಿಲ್ ಆಪ್ತಕಾರ್ಯದರ್ಶಿಯಾಗಿದ್ದಳು. 1945ರಿಂದ 1970ರವರೆಗೆ ಈಕೆ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ವಿವಿಧ ಹುದ್ದೆ, ಜವಾಬ್ದಾರಿಯಲ್ಲಿದ್ದಳು. ಪ್ರಧಾನಿ ಯಾರೇ ಬರಲಿ, ಹಿಲ್ ಮಾತ್ರ ಬದಲಾಗುತ್ತಿರಲಿಲ್ಲ. No one can move (the) Hill (ಗುಡ್ಡವನ್ನು ಸರಿಸಲು ಆಗದು ಹಾಗೂ ಹಿಲ್‌ಳನ್ನು ಅಲ್ಲಾಡಿಸಲಾಗದು) ಎಂಬ ಮಾತು ಜನಜನಿತವಾಗಿತ್ತು. ಹೆರಾಲ್ಡ್ ವಿಲ್ಸನ್ ಬಳಿಕ ಎಡ್ವರ್ಡ್ ಹೀಥ್ ಪ್ರಧಾನಿಯಾದರು. ಆನಂತರ ಪುನಃ ಹೆರಾಲ್ಡ್ ವಿಲ್ಸನ್ ಪ್ರಧಾನಿಯಾದರು. ಅವರು ಹಿಲ್‌ಳನ್ನು ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳಲು ಬಯಸಿದರು.
ಆದರೆ ವಯಸ್ಸಿನ ಕಾರಣ ನೀಡಿ ಅವಳು ಆ ಕೋರಿಕೆಯನ್ನು ಮನ್ನಿಸಲಿಲ್ಲ. ಅವಳು ಆರು ಪ್ರಧಾನಿಗಳ ಜತೆ ನಿಕಟವಾಗಿ ಕೆಲಸ ಮಾಡಿದರೂ, ಒಬ್ಬರ ಗುಟ್ಟನ್ನು ಮತ್ತೊಬ್ಬರಿಗೆ ಹೇಳುತ್ತಿರಲಿಲ್ಲ. ಅದೇ ಮೊದಲ ಬಾರಿಗೆ ಪ್ರಧಾನಿ ಕಾರ್ಯಾಲಯದಲ್ಲಿರುವ ಹಾಗೆ ನಡೆದುಕೊಳ್ಳುತ್ತಿದ್ದಳು. ಹಾಲಿ ಪ್ರಧಾನಿ ಮುಂದೆ ಹಿಂದಿನವರನ್ನು ಲೇವಡಿ ಮಾಡುತ್ತಿರಲಿಲ್ಲ, ಲಘುವಾಗಿ ಮಾತಾಡುತ್ತಿರಲಿಲ್ಲ. ಅವಳಲ್ಲಿ ಎಲ್ಲ ರಹಸ್ಯಗಳೂ ಭದ್ರವಾಗಿರುತ್ತಿದ್ದವು. ತಾನಾಯ್ತು, ತನ್ನ ಕೆಲಸವಾಯ್ತು. ಕೇಳಿದ್ದಕ್ಕಷ್ಟೇ ಉತ್ತರ. ತನಗೇ ಎಲ್ಲ ಗೊತ್ತು ಎಂಬ ಮುಂಗಾಲುಪುಟಿಕೆ ಸ್ವಭಾವದವಳಲ್ಲ.
ಪ್ರಧಾನಿಗೆ ಅಚ್ಚುಮೆಚ್ಚಿನವರಾಗಿ ಹೀಗಿರುವುದು ಸಣ್ಣಸಣ್ಣ ಮಾತಲ್ಲ. ಇದಕ್ಕೆ ಭಯಂಕರ ನಿಗ್ರಹಶಕ್ತಿ ಬೇಕು. ಪ್ರಧಾನಿಗೆ ತುಸು ಹತ್ತಿರವಾದರೆ ಸಾಕು ಅವರ ತಲೆಯೆಂಬುದು ಹೆಗಲ ಮೇಲೆಯೇ ಕುಳಿತುಕೊಳ್ಳುವುದಿಲ್ಲ. ಅವರು ನೆಲದ ಮೇಲೆಯೇ ಓಡಾಡುವುದಿಲ್ಲ. ಪ್ರಧಾನಿ ಮನೆಯ ಗೇಟು ಕಾಯುವವನಿಗೇ ಮಂಡೆಯೆಲ್ಲ ಮೀಸೆಯಾಗಿರುತ್ತದೆ. ಇನ್ನು ಅವರ ಅಂತರಂಗಕ್ಕೆ ಸನಿಹರಾದವರು ಹೇಗಿರಬಹುದು, ಊಹಿಸಿ. ಹಿಲ್ ಇವೆಲ್ಲವುಗಳಿಗೆ ಅಪವಾದದಂತಿದ್ದಳು. ಅವಳು ಪ್ರಧಾನಿ ಕಾರ್ಯಾಲಯದಿಂದ ನಿರ್ಗಮಿಸಿದ ನಂತರ ಅನೇಕರು ತಮ್ಮ ಅನುಭವಗಳನ್ನು ದಾಖಲಿಸುವಂತೆ ಹೇಳಿದರು. ಬ್ರಿಟನ್‌ನ ಪ್ರಮುಖ ಪ್ರಕಾಶಕರು ಆತ್ಮಕಥೆಬರೆಯುವಂತೆ ದುಂಬಾಲುಬಿದ್ದರು. ಹಿಲ್ ನಕ್ಕು ಸುಮ್ಮನಾದಳು. ಆದರೆ ಅಧಿಕಾರದ ಅಂತಃಪುರದ ಅಂತರಂಗಗಳನ್ನು ಬಾಯಿಬಿಡಲೇ ಇಲ್ಲ. ಆ ಎಲ್ಲ ಸ್ಫೋಟಕ ರಹಸ್ಯಗಳೆಲ್ಲ ಅವಳಲ್ಲಿಯೇ ಸತ್ತು ಹೋದವು. ಆಕೆ ನಿಧನಳಾದಾಗ 'ದಿ ಟೈಮ್ಸ್‌' ಪ್ರಕಟಿಸಿದ್ದ ಶೋಕಲೇಖ (obituary) ದಲ್ಲಿನ ಕೆಲ ಸಾಲುಗಳು ಹೀಗಿವೆ-'The woman who knew so much never kept a diary or tried to capitalise on her memories...She divulged only the most trivial information.' (ಅಧಿಕಾರ ಕೇಂದ್ರದ ಸುತ್ತ ನಡೆಯುತ್ತಿದ್ದ ಅವೆಷ್ಟೋ ಸಂಗತಿಗಳನ್ನೆಲ್ಲ ತಿಳಿದಿದ್ದ ಆ ಮಹಿಳೆ ವಿಷಯಗಳನ್ನು ದಾಖಲಿಸಿಕೊಳ್ಳಲು ಡೈರಿಯನ್ನೂ ಇಟ್ಟುಕೊಂಡಿರಲಿಲ್ಲ ಅಥವಾ ತನ್ನ ನೆನಪಿನಶಕ್ತಿಯನ್ನು ಬಂಡವಾಳವಾಗಿ ಮಾಡಿಕೊಳ್ಳಲೂ ಪ್ರಯತ್ನಿಸಲಿಲ್ಲ... ಆಕೆ ಅನುಪಯುಕ್ತವಾದ, ಮಹತ್ವವಲ್ಲದ ಸಂಗತಿಗಳನ್ನಷ್ಟೇ ಹೇಳುತ್ತಿದ್ದಳು.)
ಇಲ್ಲಿ ನನಗೆ ನೆನಪಾಗುವ ಮತ್ತೊಂದು ಹೆಸರೆಂದರೆ ಕನ್ನಡಿಗ ಎಚ್.ವೈ. ಶಾರದಾಪ್ರಸಾದ್! ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರಧಾನಿ ಕಾರ್ಯಾಲಯದಲ್ಲಿ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದವರು. ಇಂದಿರಾಗಾಂಧಿ, ರಾಜೀವಗಾಂಧಿ ಅವರಲ್ಲದೇ ಕೆಲಕಾಲ ಮೊರಾರ್ಜಿ ದೇಸಾಯಿ ಅವರಿಗೂ ಮಾಧ್ಯಮ ಸಲಹೆಗಾರರಾಗಿದ್ದರು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಷ್ಟೂ ಕಾಲ ಅವರ ಭಾಷಣವನ್ನು ಶಾರದಾಪ್ರಸಾದ್ ಅವರೇ ಬರೆದುಕೊಡುತ್ತಿದ್ದರು. ಅವರು ಎಲ್ಲ ಅರ್ಥಗಳಲ್ಲೂ ಶಾರದೆಯ 'ಪ್ರಸಾದ'ವೇ ಆಗಿದ್ದರು. ಅವರು ಪ್ರಧಾನಿ ಕಾರ್ಯಾಲಯದಿಂದ ನಿರ್ಗಮಿಸಿದ ಬಳಿಕ ತಮ್ಮ ಅನುಭವಗಳನ್ನು ದಾಖಲಿಸಬಹುದೆಂದು ಅನೇಕರು ಅಂದುಕೊಂಡಿದ್ದರು. ಇಂದಿರಾ ಅವರನ್ನು ಅತ್ಯಂತ ಹತ್ತಿರದಿಂದ ಕಂಡ, ತುರ್ತುಸ್ಥಿತಿ ಹೇರಿಕೆಯಂಥ ಕಠಿಣ ನಿರ್ಧಾರಗಳಿಗೆ ಸಾಕ್ಷಿಯಾದ, ಇಂದಿರಾ ಕೂಡ ಗೌರವಿಸುತ್ತಿದ್ದ ಶಾರದಾಪ್ರಸಾದ್ ತಮ್ಮ ಆತ್ಮಕಥೆ ಬರೆಯಲಿ ಎಂದು ಅನೇಕರು ಆಶಿಸಿದ್ದರು. ಬರೆಯಲು ಅವರಲ್ಲಿ ಅನೇಕ ವಿಷಯಗಳಿದ್ದವು. ಬರೆದಿದ್ದೇ ಆದರೆ ಅದೊಂದು ಮಹತ್ವದ ಗ್ರಂಥವೇ ಆಗುತ್ತಿತ್ತು.
ಆದರೆ ಶಾರದಾ ಪ್ರಸಾದ್ ಕೊನೆಗೂ ಬರೆಯಲೇ ಇಲ್ಲ.
ಅನೇಕರು ಕೇಳಿದಂತೆ, ನಾನೂ ಸಹ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ 'ನೀವ್ಯಾಕೆ ನಿಮ್ಮ ಪ್ರಧಾನಮಂತ್ರಿ ಕಾರ್ಯಾಲಯದ ಅನುಭವಗಳನ್ನು ದಾಖಲಿಸಲಿಲ್ಲ?' ಎಂದು ಕೇಳಿದ್ದೆ. ಅದಕ್ಕೆ ಅವರು ಸುದೀರ್ಘ ಉತ್ತರವನ್ನೇ ನೀಡಿದ್ದರು. 'ನಾನು  Author's Secretiveness ನಿಂದ ಬಳಲುತ್ತಿರಬಹುದು' ಎಂದು ಹೇಳಿ ನಕ್ಕಿದ್ದರು. ತಮ್ಮ ಅನುಭವಗಳನ್ನು ಬರೆಯುವಂತೆ ಕೆಲವು ಪತ್ರಿಕಾ ಸಂಪಾದಕರುಗಳು ವಿನಂತಿಸಿಕೊಂಡಾಗಲೂ ಅವರು ನಯವಾಗಿ ತಿರಸ್ಕರಿಸಿದ್ದರು. ಕೆಲ ಕಾಲ 'ಏಷಿಯನ್ ಏಜ್‌' ಪತ್ರಿಕೆಗೆ ಬರೆದ ಅಂಕಣದಲ್ಲಿ ಅಲ್ಲಲ್ಲಿ ತಮ್ಮ ಅನುಭವಗಳನ್ನು ಅವರು ಮೆಲುಕುಹಾಕಿದ್ದುಂಟು. ಆದರೆ ಇಡಿಯಾಗಿ ಎಲ್ಲೂ ಹೇಳಿಲ್ಲ. ಕೆಲವು ಘಟನೆಗಳನ್ನು ಮೆಲುಕು ಹಾಕಿದಾಗಲೂ ಅವು ವಿವಾದದ ತಂತಿ ಬೇಲಿಗೆ ಸಿಲುಕಿ ರಾದ್ಧಾಂತವಾಗುವುದರಿಂದ ಗಾವುದ ದೂರ ಉಳಿದಿದ್ದರು. ಕೊನೆಗೆ ಈ ಎಲ್ಲ ಅಂಕಣ ಬರಹಗಳನ್ನು ಸೇರಿಸಿ ಪುಸ್ತಕ ಮಾಡಿದಾಗ ಅವರು The Book I wont Be Writing and other Essays ಎಂಬ ಶೀರ್ಷಿಕೆ ಕೊಟ್ಟಿದ್ದರು. ಈ ಕೃತಿಯ ಆರಂಭದಲ್ಲಿ ತಾನೇಕೆ ತನ್ನ ಪ್ರಧಾನಿ ಕಾರ್ಯಾಲಯದ ಅನುಭವಗಳನ್ನು ದಾಖಲಿಸಲಿಲ್ಲ ಎಂಬುದನ್ನು ಬಹಳ ಸೂಕ್ಷ್ಮವಾಗಿ, ಚಾಣಾಕ್ಷವಾಗಿ ಬರೆದಿದ್ದಾರೆ. ಒಂದೆಡೆ ಅವರು ಹೀಗೆ ಬರೆಯುತ್ತಾರೆ-'ಜೀವನಕತೆ ಬರೆಯುವವರಿಗೆ ಇಂದಿರಾಗಾಂಧಿ ನಿಜಕ್ಕೂ ಅದ್ಭುತ ವ್ಯಕ್ತಿತ್ವ ಹಾಗೂ ವಿಷಯ. ಈ ಕಾರಣಕ್ಕಾಗಿಯೇ ಅನೇಕರು ಅವರ ಕುರಿತು ಬರೆದಿದ್ದಾರೆ. ಆದರೆ ನಾನು ಇಂದಿರಾ ಅವರಂಥ ಜಟಿಲ, ಸಂಕೀರ್ಣ ವ್ಯಕ್ತಿಗೆ ಸಂಪೂರ್ಣ ನ್ಯಾಯ ಒದಗಿಸಿ ಕೊಡಲಿಕ್ಕಿಲ್ಲ ಎಂದು ಮನವರಿಕೆಯಾದ್ದರಿಂದ ಅಂಥ ಸಾಹಸದಿಂದ ಹಿಂದಕ್ಕೆ ಸರಿದೆ.'
The Accidental Prime Minister: The Making and Unmaking of Manmohan Singh ಪುಸ್ತಕದಲ್ಲಿ The Book I chose to write ಎಂಬ ಆರಂಭಿಕ ಅಧ್ಯಾಯದಲ್ಲಿ ಲೇಖಕ ಸಂಜಯ ಬಾರು ಹೇಳುತ್ತಾರೆ- ಅನೇಕ ಬಾರಿ ನಾನು ಶಾರದಾಪ್ರಸಾದ್ ಅವರಿಗೆ ತಮ್ಮ ಪಿಎಂಒ ದಿನಗಳ ಅನುಭವ ಬರೆಯುವಂತೆ ಒತ್ತಾಯಿಸಿದ್ದೆ. ಆದರೆ ಪ್ರತಿಸಲವೂ ಅವರು ನಿರುತ್ತೇಜಕ ಉತ್ತರವನ್ನೇ ನೀಡುತ್ತಿದ್ದರು. ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ನಡೆಯುವುದೆಲ್ಲ ನನಗೆ ಗೊತ್ತಾಗುವುದಿಲ್ಲ. ನನಗೆ ಸತ್ಯದ ಎಲ್ಲ ಮಗ್ಗಲುಗಳು ಗೊತ್ತಿಲ್ಲ. ಅಲ್ಲದೇ ಸತ್ಯಕ್ಕೆ ಎಷ್ಟು ಮಗ್ಗಲುಗಳಿರುತ್ತವೆಂಬುದು ಸಹ ಗೊತ್ತಿಲ್ಲ.'
 ಕೊನೆಗೂ ಶಾರದಾ ಪ್ರಸಾದ್ ಆ ಪುಸ್ತಕವನ್ನು ಬರೆಯಲೇ ಇಲ್ಲ. ಆ ಮೂಲಕ ಅವರು ಇಂದಿರಾಗೆ ನಿಷ್ಠೆಯನ್ನು ಮೆರೆದರಾ? ಸತ್ಯವನ್ನು ಹೇಳುವ ಧಾರ್ಷ್ಟ್ಯ ತೋರಲಿಲ್ಲವಾ? ಜಾಣ ಕುರುಡು, ಮರೆವನ್ನು ಪ್ರದರ್ಶಿಸಿದರಾ? ವೃತ್ತಿ ಘನತೆಯನ್ನು ಎತ್ತಿ ಹಿಡಿದರಾ? ತಮ್ಮಿಂದ ಇಂದಿರಾಗೆ ನ್ಯಾಯ ಒದಗಿಸಲಿಕ್ಕೆ ಸಾಧ್ಯವಿಲ್ಲವೆಂದು ಭಾವಿಸಿದರಾ? ಉಹುಂ... ಶಾರದಾ ಪ್ರಸಾದ್ ಗುಟ್ಟು ಬಿಟ್ಟುಕೊಡಲಿಲ್ಲ. ಶಾರದಾ ಪ್ರಸಾದ್ ಬರೆಯಬೇಕಿತ್ತು ಹಾಗೂ ಬರೆಯದೇ ಒಳ್ಳೆಯದು ಮಾಡಿದರು ಎಂದು ವಾದಿಸುವವರಿಗೆ ಅವರು ಆದರ್ಶ ಹಾಗೂ ಅಪವಾದವಾಗಿ ಕಾಣುತ್ತಾರೆ.
ಕುಲ್ದೀಪ ನಯ್ಯರ್, ಬಿ.ಜಿ. ವರ್ಗೀಸ್, ಪ್ರೇಮ್‌ಶಂಕರ ಝಾ, ಎಚ್.ಕೆ. ದುವಾ, ಸುಧೀಂದ್ರ ಕುಲಕರ್ಣಿ, ಹರೀಶ ಖಾರೆ ಮುಂತಾದ ಪತ್ರಕರ್ತರು ಪ್ರಧಾನಿ ಕಾರ್ಯಾಲಯದಲ್ಲಿದ್ದರೂ ಬರೆಯುವ ಗೋಜಿಗೆ ಹೋಗಲಿಲ್ಲ. ಬರೆದರೆ ವಿವಾದ ತಪ್ಪಿದ್ದಲ್ಲ. ಅದಕ್ಕಾಗಿಯೇ ನಮ್ಮ ಮಾಜಿ ಪ್ರಧಾನಿ ದೇವೇಗೌಡರು ಆಗಾಗ 'ಎಲ್ಲವನ್ನೂ ನನ್ನ ಆತ್ಮಕಥೆಯಲ್ಲಿ ಬರೆಯುತ್ತೇನೆ' ಎಂದು ಹೇಳುತ್ತಾರೆ, ಆದರೆ ಬರೆಯುವುದಿಲ್ಲ. ಬರೆದಿದ್ದೇ ಆದರೆ...!?
ನನಗಂತೂ ಅವರು ಬರೆಯುತ್ತಿರುವ ಆತ್ಮಕಥೆ ಬಗ್ಗೆ ತೀವ್ರ ಕುತೂಹಲವಿದೆ.
 ಒಟ್ಟಾರೆ ಆತ್ಮಕಥೆಯಿರಬಹುದು, ಜೀವನ ಚರಿತ್ರೆಯಿರಬಹುದು ಬರೆದರೂ ಕಷ್ಟ, ಬರೆಯದಿದ್ದರೂ ಕಷ್ಟ.

-ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.