ಮೋದಿ ಮ್ಯಾರೇಜ್ ಸ್ಟೋರಿ v/s 'ಗಾಂಧಿ'ಗಳ ಡ್ಯಾಮೇಜ್ಡ್ ಹಿಸ್ಟರಿ
ಮೋದಿ ಮದುವೆಯೆಂಬ ಘನಗಂಭೀರ ವಿಷಯವನ್ನು ಚರ್ಚಿಸುವುದಕ್ಕೂ ಮೊದಲು ವೈಎನ್‌ಕೆಯವರ ಪದ್ಯವೊಂದನ್ನು ಒಪ್ಪಿಸಿಕೊಳ್ಳಿ.

ಮೋದಿ ಮದುವೆಯೆಂಬ ಘನಗಂಭೀರ ವಿಷಯವನ್ನು ಚರ್ಚಿಸುವುದಕ್ಕೂ ಮೊದಲು ವೈಎನ್‌ಕೆಯವರ ಪದ್ಯವೊಂದನ್ನು ಒಪ್ಪಿಸಿಕೊಳ್ಳಿ.
ಕಪಿಲ ವಸ್ತುವಿನ ರಾಜ ಶುದ್ಧೋದನ
ಅವನ ಮಗ ರಾತ್ರೋರಾತ್ರಿಯಲಿ ಎದ್‌ಹೋದನಾ
ನಿದ್ದೆ ಬರದವರಿಗೆಲ್ಲ ಇದೇ ಸರಿಯಾದ ದಾರಿ
ಹೆಂಡತಿ-ಮಕ್ಕಳ ಬಿಟ್ಟು ಅರ್ಧರಾತ್ರಿಯಲಿ ಪರಾರಿ
ಹಿಂತಿರುಗಿ ಬಂದಾಗ ಸಿದ್ಧ- ಪೂರ್ತಿ ಬದಲಾಯಿಸಿದ್ದ
ಹೆಸರು ಕೂಡ- ಸಿದ್ಧಾರ್ಥ ಆಗಿದ್ದ ಬುದ್ಧ
--
'ಅಭಿಯಾನ್' ಎಂಬುದು ಗುಜರಾತ್‌ನ ರಾಜಕೀಯ ನಿಯತಕಾಲಿಕ. ಅದರಲ್ಲಿ ಹಿರಿಯ ಪತ್ರಕರ್ತ ವಿಕ್ರಮ್ ವಕೀಲ್. ನರೇಂದ್ರ ಮೋದಿಯ ಕಟ್ಟರ್ ಟೀಕಾಕಾರರ ಸಾಲಿಗೆ ಸೇರುವವರು. 'ಮೋದಿ ಮ್ಯಾರೇಜ್ ಸ್ಟೋರಿ'ಯನ್ನು 1993ರಲ್ಲೇ ಸ್ಕೂಪ್ ಮಾಡಿದವರು ಇವರು. ಇದೀಗ ಮೊದಲ ಬಾರಿಗೆ ಚುನಾವಣೆಯ ಅಫಿಡವಿಟ್‌ನಲ್ಲಿ ನರೇಂದ್ರ ಮೋದಿ ಅವರು ತಮ್ಮ ಪತ್ನಿ ಜಶೋದಾಬೆನ್ ಹೆಸರನ್ನು ನಮೂದಿಸಿ, 'ಈ ಹಿಂದೆ ಹೇಳಿರಲಿಲ್ಲವೇಕೆ' ಎಂಬ ಪ್ರಶ್ನೆಗೆ ಗುರಿಯಾಗಿರುವುದರ ಹಿನ್ನೆಲೆಯಲ್ಲಿ ರೀಡಿಫ್ ಡಾಟ್ ಕಾಮ್‌ನ ಶೀಲಾಭಟ್, ವಿಕ್ರಮ್ ಜತೆ ಮಾತಿಗಿಳಿದಾಗ ಅವರು ವಿಶ್ಲೇಷಿಸಿದ್ದು ಹೀಗೆ. 'ಮೋದಿ ವಿವಾಹ ಎಂಬುದು ವಿಧಿಯ ಆಕಸ್ಮಿಕವಾಗಿತ್ತು. ಪಾತ್ರಗಳನ್ನೇನೂ ದೂರಲಾಗದ ಶೇಕ್ಸ್‌ಪಿಯರ್‌ನ ದುರಂತ ನಾಟಕದಂತಿದೆ ಇದು. ಸರಿ- ತಪ್ಪುಗಳನ್ನೇನೋ ತೀರ್ಮಾನಿಸಬಹುದು. ಆದರೆ ಆ ತೀರ್ಮಾನಕ್ಕೆ ನೀವು ಏನನ್ನು ಆಧಾರವಾಗಿರಿಸಿಕೊಂಡಿದ್ದೀರಾ ಎಂಬುದು ಮುಖ್ಯವಾಗುತ್ತದೆ. ಅವರ ಬದುಕಿನಲ್ಲಿ ಒತ್ತಡ ತಂದ ಬಾಹ್ಯ ಅಂಶಗಳ ಮೇಲೆ ಇವರಿಬ್ಬರಿಗೂ ಹಿಡಿತವಿರಲಿಲ್ಲ. ಮೋದಿಯವರು ಜಶೋದಾಬೆನ್ ಜತೆ ದಾಂಪತ್ಯ ಜೀವನವನ್ನು ನಡೆಸಿರಲಿಲ್ಲ ಎಂಬುದು ಗುಜರಾತ್‌ನಲ್ಲಿ ತಿಳಿದ ವಿಷಯವೇ. ಇನ್ನು, ಜಶೋದಾಬೆನ್ ಸಹ 1993ರಲ್ಲೇ 'ಅಭಿಯಾನ್'ಗೆ ನೀಡಿದ ಸಂದರ್ಶನದಲ್ಲಿ ತಾನು ಮೋದಿಯವರೊಂದಿಗೆ ಸಂಬಂಧವನ್ನು ಹೊಂದಿರಲಿಲ್ಲ ಎಂದೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಇದನ್ನಿಟ್ಟುಕೊಂಡು ಬೊಬ್ಬೆ ಹಾಕುವುದರಲ್ಲಿ ಏನರ್ಥವಿದೆ?'- ಇದು ಬೇರೆ ವಿಷಯಗಳಲ್ಲಿ ಮೋದಿಯನ್ನು ವಿರೋಧಿಸುವ ವಿಕ್ರಮ ವಕೀಲ್ ವಿವಾಹದ ವಿಷಯದಲ್ಲಿ ನೀಡುವ ಸಮರ್ಥನೆ.
--
ಮೋದಿ ತನ್ನನ್ನು ಮನೆಗೆ ಕರೆಸಿಕೊಳ್ಳಬೇಕು, ಅವರಿಂದ ಅನ್ಯಾಯವಾಗಿದೆ ಅಂತೇನೂ ಜಶೋದಾಬೆನ್ ಹೇಳಿಲ್ಲ. ತಾನು ಆ ಬಗ್ಗೆ ಯಾವುದೇ ಕಹಿ ಭಾವನೆಯನ್ನು ಹೊಂದದೇ ಮೋದಿ ಪ್ರಧಾನಿಯಾಗಲಿ ಎಂದು ಆಶಿಸುತ್ತಿರುವುದಾಗಿ ಆಕೆ ಹೇಳಿದ್ದಾರೆ. ಆದರೆ, ಟೀಕಾಕಾರರ ಪ್ರಶ್ನೆ ಅದಲ್ಲ. ಈ ಹಿಂದಿನ ವಿಧಾನಸಭೆ ಚುನಾವಣೆಗಳಲ್ಲಿ ಮೋದಿ ಏಕೆ ಜಶೋದಾಬೆನ್ ಹೆಸರು ಉಲ್ಲೇಖಿಸಲಿಲ್ಲ? ಸತ್ಯ ಹೇಳಬೇಕಿತ್ತಲ್ಲವೇ? ಅದಕ್ಕೇಕೆ ಹಿಂಜರಿದರು? ಅಂದಮೇಲೆ ಇದು ದುಶ್ಯಂತನ ಕತೆಯೇ ಆಗಿರಬೇಕು!
ಯಾರೆಷ್ಟೇ ಬಗೆದರೂ ಇಲ್ಲಿ ಶಾಕುಂತಲೆಯ ಜತೆಗಿನ ರೋಮ್ಯಾನ್ಸ್ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಟಿವಿ ವಾಹಿನಿಗಳ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪ್ರಶ್ನಿಸುತ್ತಿರುವವರು, ಕ್ಷಣ ಕಣ್ಣುಮುಚ್ಚಿ, ಐದು ದಶಕಗಳ ಹಿಂದಿನ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬವೊಂದರ ಸಾಮಾಜಿಕ ಚಿತ್ರಣಕ್ಕೆ 'ಟೈಮ್ ಟ್ರಾವೆಲ್' ಮಾಡಬೇಕಾಗುತ್ತದೆ. ಹದಿನೇಳು ವರ್ಷಗಳ ಪ್ರಾಯದವರಾಗಿದ್ದ ನರೇಂದ್ರ ಮೋದಿಗೆ ತಮ್ಮ ಮೇಲೆ ಹೇರಲಾದ ವಿವಾಹವೊಂದು ಬೇಡ ಎಂದಾದಾಗ ಹೊರನಡೆಯುವ ಸ್ವಾತಂತ್ರ್ಯ ತೆಗೆದುಕೊಂಡರು. ಇದು, ಹೇಗೂ ಮದುವೆಯಾಗಿದೆಯಲ್ಲ ಅಂತ ಸಂಸಾರವನ್ನೂ ಭೋಗಿಸಿ, ನಂತರ ಕರ್ತವ್ಯಪ್ರಜ್ಞೆ ಅವತರಿಸಿಕೊಂಡು ಹೊರನಡೆಯುವ ಮಾದರಿಗಿಂತ ಸಂಪೂರ್ಣ ಭಿನ್ನ. ಹಿರಿಯರು ಕಟ್ಟಿದ್ದು ಇರಲಿ, ತನ್ನ ಖಯಾಲಿಗೆ ಬೇಕಾದ ಅನಧಿಕೃತ ಸಂಗಾತಿಯನ್ನು ಹೊರಗೆ ನೋಡಿಕೊಂಡರಾಯಿತು ಎಂಬ ಮಾದರಿಯೂ ಇದಲ್ಲ. ವಿವಾಹ ಬೇಡ ಎಂಬ ಖಚಿತ ದಾರಿಯನ್ನು ಮೋದಿ ಆಯ್ದುಕೊಂಡಿದ್ದರು.
ಪ್ರಶ್ನೆ: ಅದೇನೂ ಇರಲಿ, ಆದರೆ ಕೊನೆಗೆ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಾಗಲಾದರೂ, ಮುಖ್ಯಮಂತ್ರಿ ಅಭ್ಯರ್ಥಿಯಾದಾಗಲಾದರೂ ನರೇಂದ್ರ ಮೋದಿ ಪತ್ನಿಯನ್ನು ಒಪ್ಪಬೇಕಿತ್ತು ಇಲ್ಲವೇ ವಿಚ್ಛೇದನ ನೀಡಿ 'ಕಾನೂನಾತ್ಮಕವಾಗಿ ಸರಿ' ಎನ್ನಿಸಿಕೊಳ್ಳಬೇಕಿತ್ತಲ್ಲವೇ? ಈ ಹಿಂದೆ ಅಫಿಡವಿಟ್‌ನಲ್ಲಿ ಪತ್ನಿ ಹೆಸರಿನ ಜಾಗವನ್ನು ಖಾಲಿ ಬಿಟ್ಟಿದ್ದೇಕೆ?
ನಿಜ. ಇಲ್ಲೊಂದು ದ್ವಂದ್ವಕ್ಕೆ ನರೇಂದ್ರ ಮೋದಿ ಎದುರಾಗಿದ್ದು ಸ್ಪಷ್ಟವಾಗಿದೆ. ಅದು ಈ ಹಿಂದೆ ಸುಪ್ರೀಂಕೋರ್ಟ್‌ನ ನಿರ್ದೇಶನ ಬರುವುದಕ್ಕೂ ಮುಂಚೆ, ಹೆಂಡತಿಯ ಹೆಸರು ಬರೆಯುವ ಜಾಗವನ್ನು ಖಾಲಿಬಿಡುವ 'ಅವಕಾಶ' ಬಳಸಿಕೊಳ್ಳುವುದಕ್ಕೆ ಅವರನ್ನು ಪ್ರೇರೇಪಿಸಿದೆ. ಆದರೆ ಈ ದ್ವಂದ್ವಕ್ಕೆ ಜಶೋದಾಬೆನ್‌ರಲ್ಲೂ ಕಾರಣವನ್ನು ಹುಡುಕಬೇಕು. ಮೋದಿಗೇನೋ ಐದು ದಶಕಗಳ ಹಿಂದೆ ಆದ ಮದುವೆ ಬೇಕಿರದ ಘಟನೆ ಹಾಗೂ ಅದಕ್ಕೆ ಮಹತ್ವವಿಲ್ಲ. ಆದರೆ ಐದು ದಶಕಗಳ ಹಿಂದಿನ ಸಾಂಪ್ರದಾಯಿಕ ಸಾಮಾಜಿಕ ಚಿಂತನೆಯ ಜೀವವಾಗಿರುವ ಸಂಪ್ರದಾಯಸ್ಥೆ ಜಶೋದಾಬೆನ್‌ಗೆ, ಕ್ರಿಯೆಯಲ್ಲಿರದ ಆ ಮದುವೆಯನ್ನು ಬರ್ಖಾಸ್ತು ಮಾಡಿಕೊಳ್ಳುವುದು ಬೇಕಿಲ್ಲ. 'ನರೇಂದ್ರ ಮೋದಿ ಜತೆ ವಾಸಿಸುವ ಬಯಕೆಯೇನೂ ತನಗಿಲ್ಲ. ಅವರ ಮಾರ್ಗವೇ ಬೇರೆ ಹಾಗೂ ಅವರು ನನ್ನನ್ನು ದೂರವಿರಿಸುವುದಕ್ಕೆ ಇರುವ ಒತ್ತಡವನ್ನೂ ಬಲ್ಲೆ.' ಎಂಬ ಜಶೋದಾಬೆನ್ ಸಂಬಂಧದ ನೆಪದಲ್ಲಿ ಹಣ- ಅಧಿಕಾರ ಸಾಮಿಪ್ಯ ಏನನ್ನೂ ಬಯಸುತ್ತಿಲ್ಲವಾದರೂ 'ಮೋದಿಯ ಹೆಂಡತಿ' ಎಂಬ ಸ್ಥಾನದಿಂದ ಕದಲುವುದು ಸಹ್ಯವಾಗದ ಮಾತು. 1993ರಲ್ಲೇ 'ಅಭಿಯಾನ್'ಗೆ ನೀಡಿದ ತನ್ನ ಮೊದಲ ಸಂದರ್ಶನದಲ್ಲೂ ಆಕೆ ತಾನು ವಿಚ್ಛೇದನಕ್ಕೆ ಮಾತ್ರ ಒಪ್ಪಿಕೊಳ್ಳಲಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜಶೋದಾಬೆನ್ ಜತೆಗಿನ ಮಾತುಕತೆ ಅನುಭವವನ್ನು ವಕೀಲ್ ಹೀಗೆ ವಿವರಿಸುತ್ತಾರೆ- 'ಮೋದಿ ಕುರಿತಾದ ಆಕೆಯ ಕಟ್ಟರ್ ಸಾಂಪ್ರದಾಯಿಕ ಶ್ರದ್ಧೆ ಅಚಲವಾಗಿದೆ. 1990ರಲ್ಲಿ ಮೋದಿಯವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂಬ ಸುದ್ದಿಯನ್ನು ರೇಡಿಯೋದಲ್ಲಿ ಕೇಳಿಸಿಕೊಳ್ಳುತ್ತಾರೆ ಜಶೋದಾಬೆನ್. ಆರು ದಿನಗಳ ಕಾಲ ಕೇವಲ ನೀರನ್ನಷ್ಟೇ ಸೇವಿಸಿ ಉಪವಾಸ ವ್ರತ ಆಚರಿಸಿ ಮೋದಿಯ ಒಳಿತಿಗೆ ಪ್ರಾರ್ಥಿಸಿಕೊಳ್ಳುತ್ತಾರೆ. ಅಹಮದಾಬಾದ್‌ನ ಮಣಿನಗರದಲ್ಲಿ ಒಮ್ಮೆ ಮೋದಿಯವರನ್ನು ಹತ್ತಿರದಿಂದ ನೋಡುವ ಸಂದರ್ಭ ಬಂದೊದಗುತ್ತದೆ. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮೋದಿಗೆ ತನ್ನನ್ನು ಕಂಡು ಮುಜುಗರವಾಗಬಾರದು ಎಂಬ ಕಾರಣಕ್ಕೆ ತಟ್ಟನೇ ದಾರಿ ಬದಲಿಸಿದರಂತೆ.'
ಇಂಥ ಕತೆಗಳೆಲ್ಲ ರಾಹುಲ್ ಗಾಂಧಿ ಜಮಾನಾಕ್ಕೆ ವಿಚಿತ್ರವಾಗಿ ಕಾಣಬಹುದು. 'ಸರಿ ಕಂಡಷ್ಟು ದಿನ ಇರೋದು. ನಂತ್ರ ಡೈವೋರ್ಸ್ ಬಿಸಾಕೋದು' ಅನ್ನುವ ಯುಗದಲ್ಲಿರುವ ನಮಗೆಲ್ಲ, ಯಾವತ್ತೋ ಆದ ಮದುವೆಯನ್ನು ದಾಂಪತ್ಯದಲ್ಲಿ ಪರಿವರ್ತಿಸಿಕೊಳ್ಳುವ ಹಟವನ್ನೂ ತೊಡದೇ, ಅದರಿಂದ ಹೊರಗೆ ಬರಲಿಕ್ಕೂ ಇಚ್ಛಿಸದೇ ಶಿಕ್ಷಕಿಯಾಗಿ ನೌಕರಿ ಮಾಡಿಕೊಂಡಿದ್ದ ಜಶೋದಾಬೆನ್ ಒಂಥರಾ ಆಡಿದಂತೆಯೂ ಕಾಣಬಹುದು! ಆದರೆ ಆ ಜೀವನ ಆಕೆಯ ಹಕ್ಕು, ಆಕೆಯ ಸಂತೃಪ್ತಿ. ತನ್ನ ಮನೆಯವರ ಪ್ರಖರ ವಿರೋಧದ ನಡುವೆಯೂ ತಾನು ಪ್ರೇಮಿಸಿದ ಫಿರೋಜ್ ಗಾಂಧಿಯನ್ನು ಮದುವೆಯಾಗಿ, ನೆಹರು ಪ್ರಧಾನಿಯಾದ ನಂತರ ಫಿರೋಜ್‌ರಿಂದ ಬೇರೆಯೇ ಇದ್ದು, ಕೊನೆಗಳಿಗೆಯಲ್ಲಿ ಫಿರೋಜ್ ಅಸ್ವಸ್ಥರಾದಾಗ ತುಂಬುಪ್ರೀತಿಯಿಂದ ಸೇವೆ ಮಾಡಿದ ಇಂದಿರಾ ಗಾಂಧಿ ಅವರನ್ನು 'ಲಿಬರಲ್' ನೆಲೆಯಲ್ಲಿ ಹಾಡಿಹೊಗಳುತ್ತೇವೆಂದರೆ, ತಾನೆಂದೂ ಜತೆಯಾಗಿ ಬಾಳ್ವೆ ನಡೆಸಿರದ ಗಂಡನ ಬಗ್ಗೆ ಸಾಂಪ್ರದಾಯಿಕ ನೆಲೆಯಲ್ಲಿ ಜಶೋದಾಬೆನ್ ಇರಿಸಿಕೊಂಡಿರುವ ಭಾವನೆಗಳನ್ನೂ ಗೌರವಿಸಬೇಕಾಗುತ್ತದೆ.
--
ಮೊದಲು ಸಾಮಾಜಿಕ ಕೈಂಕರ್ಯದಲ್ಲಿ, ನಂತರ ರಾಜಕೀಯ ನಡೆಯಲ್ಲಿ ನಿರತರಾದ ನರೇಂದ್ರ ಮೋದಿ, ಜಶೋದಾಬೆನ್ ಅಂತಲ್ಲ, ತಮ್ಮ ಕುಟುಂಬದ ಇತರ ಸದಸ್ಯರ ಜತೆಗೂ ಸಂಪರ್ಕದಲ್ಲಿರುವುದು ಅಷ್ಟಕ್ಕಷ್ಟೆ. ಮೂರು ಬಾರಿ ಮುಖ್ಯಮಂತ್ರಿಯಾದರೂ ಅವರ ಸಹೋದರರ ಪೈಕಿ ಯಾರೊಬ್ಬರೂ ಅಧಿಕಾರ ಸೌಧದ ಸನಿಹದಲ್ಲಿ ಓಡಾಡಿಕೊಂಡಿಲ್ಲ. ತಾಯಿಯೂ ಸೇರಿದಂತೆ ಯಾರ ಜೀವನ ವಿಧಾನ- ಆಸ್ತಿಮೌಲ್ಯಗಳಲ್ಲೂ ಬದಲಾವಣೆ ಆಗಿಲ್ಲ. ಜಶೋದಾಬೆನ್ ಬದುಕಲ್ಲೂ ಅಷ್ಟೆ. ಮೋದಿಯವರನ್ನು ಈ ಅಳತೆಗೋಲಲ್ಲಿ ಅಳೆದರೆ ಸಾಕು. ಒಬ್ಬ ವ್ಯಕ್ತಿ ಆತನ ಖಾಸಗಿ ಜೀವನದಲ್ಲಿ ಯಾರ ಜತೆ ಸಂಪರ್ಕದಲ್ಲಿದ್ದಾನೆ, ಯಾರ ಜತೆಗಿಲ್ಲ ಎಂಬುದಕ್ಕಿಂತ ಮುಖ್ಯವಾಗಿ ಚರ್ಚೆಯಾಗಬೇಕಿರುವ ಸಂಗತಿ ಎಂದರೆ ಇಂಥ ಸಾಮಿಪ್ಯಗಳು ವೈಯಕ್ತಿಕ ಹಿತಾಸಕ್ತಿಯ ಲಾಭ ತಂದುಕೊಟ್ಟಿವೆಯೇ ಎಂಬುದು. 'ಪತ್ನಿಯನ್ನು ಸಂಭಾಳಿಸಲಾರದವರು ದೇಶವನ್ನು ಸಂಭಾಳಿಸುತ್ತಾರೆಯೇ' ಎಂಬ ರಾಹುಲ್ ಗಾಂಧಿ ಮಾತುಗಳು ರೋಚಕವಾಗಿಯೇನೋ ತೋರಬಹುದು. ಆದರೆ ಇವತ್ತಿನ ನೇತಾರರು ತಮ್ಮ ಪತ್ನಿ, ಉಪಪತ್ನಿ, ಸಂತಾನ, ಸಂಬಂಧಿಕರನ್ನು ಅತಿಯಾಗಿ 'ಸಂಭಾಳಿಸಿ'ಕೊಂಡಿರುವುದರಿಂದಲೇ ದೇಶಕ್ಕೆ ಅಧೋಗತಿ ಬಂದಿದೆ ಎಂಬುದು ವಾಸ್ತವ. ಈ ಕುಟುಂಬ ವ್ಯಾಮೋಹಿ ಪರ್ವದ ಭಾಗವೇ ಆಗಿರುವ ರಾಹುಲ್ ಗಾಂಧಿ, ಕೆಲವರ್ಷಗಳ ಹಿಂದೆ ತನ್ನ 17 ವರ್ಷದ ದಾಂಪತ್ಯವನ್ನು ಸಂಭಾಳಿಸಿದ್ದು ಸಾಕಾಗಿ ಮುರಿದುಕೊಂಡ ಉಮರ್ ಅಬ್ದುಲ್ಲಾ ಪಕ್ಕದಲ್ಲಿ ಕುಳಿತು ಹೀಗೆಲ್ಲ ಡೈಲಾಗ್ ಹೊಡೆದಿದ್ದು ಅವರ ಯೋಗ್ಯತೆಗೆ ತಕ್ಕನಾಗಿಯೇ ಇದೆ.
ಹಾಗೆ ನೋಡಿದರೆ ತಮ್ಮ 'ಸಾಮಿಪ್ಯ-ಸಂಬಂಧ' ಹೊಂದಿದವರೆಲ್ಲ ಏಕಾಏಕಿ ಶ್ರೀಮಂತರಾಗಿದ್ದು ಹೇಗೆ ಎಂಬುದಕ್ಕೆ ನೆಹರು-ಗಾಂಧಿ ಮನೆತನ ಉತ್ತರ ಕೊಡಬೇಕಿದೆ. ಏನೂ ಆಗಿಲ್ಲದ ರಾಬರ್ಟ್ ವಾದ್ರಾ ಅದೆಷ್ಟೇ ಬೆವರಿನ ಕೋಡಿ ಹರಿಸಿದರೂ ಸಣ್ಣ ಅವಧಿಯಲ್ಲಿ ಕೋಟ್ಯಧಿಪತಿ ಉದ್ಯಮಿ ಆಗುವುದು ಸಾಧ್ಯವಿತ್ತೇ? ವಿಮಾನ ನಿಲ್ದಾಣದಲ್ಲಿ ಯಾವ ಭದ್ರತಾ ಪರಿಶೀಲನೆಗೂ ಒಳಪಡದೇ ಸೋನಿಯಾ ಅಳಿಯನೆಂಬ ಒಂದೇ ಅರ್ಹತೆಯಲ್ಲಿ ಒಣಜಂಭ ಪ್ರದರ್ಶಿಸುವುದು ಸಾಧ್ಯವಿತ್ತೇ?
ಸ್ವಾತಂತ್ರ್ಯ ಬರುತ್ತಿರುವ ನಿರ್ಣಾಯಕ ಸಂದರ್ಭದಲ್ಲಿ ಸನ್ಮಾನ್ಯ ನೆಹರು ಅವರು ಎಡ್ವಿನಾ ಮೌಂಟ್‌ಬ್ಯಾಟನ್ ಜತೆಗಿನ ಸಲ್ಲಾಪ ಕಡಿಮೆ ಮಾಡಿ, ಗಂಭೀರ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರೆ ದೇಶಕ್ಕೆ ಒಳಿತಾಗುತ್ತಿತ್ತು. ತಮ್ಮ ಹೆಂಡತಿ ಕಮಲಾ ಅಸ್ವಸ್ಥರಾಗಿದ್ದಾಗ ನೆಹರು ಬಳಿಯಲ್ಲಿರಲಿಲ್ಲ. ಆಗ ಕಮಲಾರನ್ನು ಆಸ್ಥೆಯಿಂದ ನೋಡಿಕೊಂಡಿದ್ದು ಫಿರೋಜ್. ಇದೇ ಫಿರೋಜ್ ಇಂದಿರಾ ಪ್ರಿಯದರ್ಶಿನಿಗೆ ಆಕೆಯ 16ರ ಪ್ರಾಯದಲ್ಲೇ ಪ್ರಪೋಸ್ ಮಾಡಿದಾಗ, ನೆಹರು- ಕಮಲಾ ಇಬ್ಬರಿಂದಲೂ ತೀವ್ರ ವಿರೋಧ ಎದುರಾಯಿತು. ಇಂದಿರಾ ಹಟ ಬಿಡದೇ ಕೊನೆಗೆ ಮಹಾತ್ಮ ಗಾಂಧಿ ಮಧ್ಯಸ್ತಿಕೆಯಲ್ಲಿ ವಿವಾಹವೂ ನೆರವೇರಿತು. ನಂತರ ನೆಹರು ಪ್ರಧಾನಿಯಾದಾಗ ಇಂದಿರಾ ಅವರೊಂದಿಗೆ ತೀನ್‌ಮೂರ್ತಿ ಭವನದಲ್ಲೇ ಉಳಿದರು. ಆದರೆ ಸಂಸದರೂ ಆಗಿದ್ದ ಫಿರೋಜ್‌ಗೆ ತನ್ನದೇ ಮಾರ್ಗವಿತ್ತು. ಅವರು ತಮಗಾಗಿ ಇದ್ದ ಸಂಸದರ ನಿವಾಸದಲ್ಲೇ ಉಳಿದು ಇಂದಿರಾರಿಂದ ಪ್ರತ್ಯೇಕವಾದರು. ಹಾಗಂತ ಅದೇನೂ ವಿಚ್ಛೇದನವಾಗಿರಲಿಲ್ಲ. ನೆಹರು ಸರ್ಕಾರದ ಹಗರಣಗಳನ್ನೆಲ್ಲ ಬಯಲಿಗೆಳೆಯುತ್ತ, ಮಾವನನ್ನೇ ಮುಜುಗರಕ್ಕೆ ಸಿಲುಕಿಸಿದ ಫಿರೋಜ್, ಆ ಫೈರ್‌ಬ್ರಾಂಡ್ ಇಮೇಜ್‌ಗಾಗಿ ಇತಿಹಾಸದಲ್ಲಿ ಚಿರಸ್ಥಾಯಿ.
ಆದರೆ, ಇಲ್ಲಿ ಪ್ರಧಾನಿ ನಿವಾಸದಲ್ಲಿ ಇಂದಿರಾ ಏಕಾಂಗಿ ಜೀವನ 'ರಮ್ಯ ವದಂತಿ'ಗಳಿಂದೇನೂ ಮುಕ್ತವಾಗಿರಲಿಲ್ಲ. ಆ ವದಂತಿಗಳನ್ನಿಟ್ಟುಕೊಂಡು ತೀರ್ಪು ಕೊಡಬಾರದು. ಆದರೆ ಅವರಿಗೆ ಹತ್ತಿರವಾದವರ ಸ್ಥಾನಮಾನದಲ್ಲಿ ಆದ ಬದಲಾವಣೆಯನ್ನು ಖಂಡಿತ ಗಮನಿಸಲೇಬೇಕು, ಚರ್ಚೆಯನ್ನೂ ಮಾಡಬೇಕು. ಅಂಥ ಒಬ್ಬ ಅಸಾಮಿ ಎಂದರೆ ಧೀರೇಂದ್ರ ಬ್ರಹ್ಮಚಾರಿ. ಇಂದಿರೆಯ ಅಂತಃಪುರಕ್ಕೆ ನೇರ ಪ್ರವೇಶವಿದ್ದ ಯೋಗಗುರು ಬ್ರಹ್ಮಚಾರಿ. ತಮಗೆ ಯೋಗ ಕಲಿಸುತ್ತಿದ್ದ ಬ್ರಹ್ಮಚಾರಿ ಬಗ್ಗೆ ಬಹುಕಾಲದ ಆಪ್ತೆ ಡರೋತಿ ನಾರ್ಮನ್‌ಳಿಗೆ ಪತ್ರದಲ್ಲಿ ಇಂದಿರಾ ಹೀಗೆ ಬರೆಯುತ್ತಾರೆ- 'ಯೋಗಿ ಅನುಪಮವಾದ ನೋಟ ಹೊಂದಿದ್ದಾರೆ. ಅವರ ದೃಷ್ಟಿ, ಅದರಲ್ಲೂ ಆ ಮೈಮಾಟವೇ ಎಲ್ಲರನ್ನೂ ಅವರೆಡೆಗೆ ಸೆಳೆಯುತ್ತದೆ.' ಇರಲಿ, ಇದನ್ನು ಇಂದಿರಾ ಅವರ ಮುಗ್ಧ ಹೊಗಳಿಕೆ ಎಂದೇ ಅಂದುಕೊಳ್ಳೋಣ. ಆದರೆ ಈ ಧೀರೇದ್ರ ಬ್ರಹ್ಮಚಾರಿ, ನೆಹರು ಮನೆತನದ ಸಖ್ಯಕ್ಕೆ ಬಂದಿದ್ದೇ ರಾತ್ರೋರಾತ್ರಿ ಶ್ರೀಮಂತನಾದ. ಆಗಿನ ಕಾಲಕ್ಕೇ ಖಾಸಗಿ ವಿಮಾನ, ಜಮ್ಮು ಮತ್ತಿತರ ಕಡೆಗಳಲ್ಲಿ ವಿಶಾಲ ಆಶ್ರಮ, ದೆಹಲಿಯ ಪ್ರತಿಷ್ಠಿತ ಫ್ರೆಂಡ್ಸ್ ಕಾಲೋನಿಯ ಒಂದೂವರೆ ಎಕರೆ ಫ್ಲಾಟ್‌ನಲ್ಲಿ ಸಕಲ ವೈಭೋಗದ ಜೀವನ. ತುರ್ತು ಪರಿಸ್ಥಿತಿ ನಂತರ ಜನತಾ ಸರ್ಕಾರದ ಅವಧಿಯಲ್ಲಿ ಆತನ ವಿರುದ್ಧ ತನಿಖೆ ಶುರುವಾಯಿತು. ವಿಮಾನ ಜಫ್ತು ಮಾಡಿಕೊಳ್ಳಲಾಯಿತು. ಆದರೆ ನಂತರದ ಅವಧಿಯಲ್ಲಿ ಇಂದಿರಾ ಮತ್ತೆ ಆರಿಸಿ ಬರುವುದರೊಂದಿಗೆ ಎಲ್ಲವನ್ನೂ 'ಸರಿ'ಮಾಡಲಾಯಿತು. ಅಂದಹಾಗೆ, ಜನತಾ ಸರ್ಕಾರದ ಅವಧಿಯಲ್ಲಿ ಆತನ ಕಾಶ್ಮೀರದ ಆಶ್ರಮದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಗೆ ಬಳಸುವ ವೈಬ್ರೇಟರ್ ಸಾಧನವೂ ಪತ್ತೆಯಾಗಿತ್ತು ಎಂಬುದು ವಿಶೇಷ.
--
'ನಿಟಿ ಸೆಂಟ್ರಲ್'ನಲ್ಲಿ ಖ್ಯಾತ ಪತ್ರಕರ್ತ ಮಾಧವ ನಳಪತ್ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮೋದಿ ಮದುವೆ, ಅವರ ಸಹೋದರರು, ಅವರಿರುವ ಸ್ಥಿತಿ ಎಲ್ಲವೂ ಈಗ ಸಾರ್ವಜನಿಕ ಮಾಹಿತಿಯಾಗಿ ಲಭ್ಯವಿದೆ. ಆದರೆ, ಸೋನಿಯಾ ಗಾಂಧಿಯವರ ಇಟಲಿ ಸಹೋದರಿಯರು ಯಾರ್ಯಾರು? ಉಳಿದ ಸಂಬಂಧಿಕರು ಯಾರು? ಅವರೆಲ್ಲ ಭಾರತಕ್ಕೆ ಯಾವ ಸಮಯಗಳಲ್ಲಿ ಭೇಟಿ ಇತ್ತಿದ್ದಾರೆ? ರಾಹುಲ್-ಸೋನಿಯಾ ಅವರ ವಿದೇಶ ಪ್ರವಾಸದ ನಿಖರ ವಿವರಗಳೇನು ಎಂಬ ಮಾಹಿತಿಗಳನ್ನೂ ಕಾಂಗ್ರೆಸ್ ಒದಗಿಸಲಿ ಅಂತಾರೆ ನಳಪತ್. ದೇಶಕ್ಕೆ ಈ ಮಾಹಿತಿಗಳು ತುಂಬ ಮುಖ್ಯವಾಗುತ್ತವೆ. ಏಕೆಂದರೆ ಇವರ ಪ್ರಯಾಣವೇನಿದ್ದರೂ ಚಾರ್ಟೆಡ್ ವಿಮಾನಗಳಲ್ಲಿ. ಇಲ್ಲಿಂದ ಏನು ತೆಗೆದುಕೊಂಡು ಹೋದರು, ಮತ್ತೇನು ತಂದರು ಯಾವುದೂ ತಿಳಿಯುವುದಿಲ್ಲ ಎಂಬ ನಳಪತ್ ವಾದವೂ ಸರಿ ತಾನೇ?
--
ಇಂಥ ಯಾವ ಆಯಾಮಗಳೂ ಇಲ್ಲದ ಮೋದಿ ಮದುವೆ, ದ್ವಂದ್ವಕ್ಕೆ ಬಿದ್ದ ಸಣ್ಣ ತಪ್ಪಾಗಿ ಕಾಣಬಹುದೇ ಹೊರತು, 'ಹಗರಣ'ವಾಗಿ ಅಲ್ಲ. ಇಷ್ಟಾಗಿಯೂ ಜಶೋದಾಬೆನ್ ತಲ್ಲಣ ನಮ್ಮನ್ನು ಕಾಡದಿರದು. ರಾಮನಂಥ ಮೇರುಪುರುಷ ಸೀತೆಯನ್ನು ಕಾಡಿಗಟ್ಟಿದ್ದು ಸರಿಯೇ? ಸಿದ್ಧಾರ್ಥ ಬುದ್ಧನಾದ ಸರಿ. ಆದರೆ ಅವನನ್ನು ನಂಬಿದ್ದ ಯಶೋಧರೆಯ ಕತೆ ಏನಾಯಿತು? ಇವೆಲ್ಲವೂ ಪ್ರಸ್ತುತವೆನಿಸುವ ಪ್ರಶ್ನೆಗಳೇ. ಆದರೆ ಈ ಪ್ರಶ್ನೆಗಳ ನೆರಳಲ್ಲಿ ರಾಮನದ್ದೋ, ಇನ್ಯಾರದ್ದೋ ಇಡೀ ವ್ಯಕ್ತಿತ್ವವನ್ನೇ ಹಳಿಯುವಂತಾಗಬಾರದು.
-ಚೈತನ್ಯ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


