ಅಂಕಣಗಳು

ಭಯ ಹುಟ್ಟಿಸುತ್ತಿದೆ ಭಾರತದ ಭವಿಷ್ಯ

ಭಯ ಹುಟ್ಟಿಸುತ್ತಿದೆ ಭಾರತದ ಭವಿಷ್ಯ, ಕೋಮುವಾದವೆನ್ನುವುದು ಕಳೆದ..

Published On :

ಎಲ್ಲಾ ರೀತಿಯಿಂದಲೂ ಈ ಬಾರಿಯ ಚುನಾವಣಾ ಪ್ರಚಾರಗಳು ತೀವ್ರರೂಪ ಪಡೆದಿವೆ. ಹಿಂದಿನ ಯಾವುದೇ ಚುನಾವಣಾ ಪ್ರಚಾರಗಳೂ ಇಷ್ಟೊಂದು ಕಠೋರವಾಗಿ ದ್ವೇಷಪೂರ್ಣವಾಗಿ ಇರಲಿಲ್ಲ ಎನುಢಿವುದು ನಿಜ. ಎಲ್ಲಾ ಪಕ್ಷಗಳಲ್ಲೂ ಅತಿರೇಕಗಳು ಕಾಣಿಸುತ್ತಿವೆ. ಕಾಂಗ್ರೆಸ್ ವಿರೋಧಿ ಅಲೆ ಮತ್ತು ಅದ್ಭುತ ಭಾಷಣಕಾರನಿಂದಾಗಿ ಪ್ರಭಾವಿತವಾಗಿರುವ ಬಿಜೆಪಿ ಈಗಲ್ಲದಿದ್ದರೆ ಇನ್ನೆಂದು ಎಂಬ ತುಡಿತದಲ್ಲಿದೆ. ಇನ್ನು ನೀರಸ ನಾಯಕತ್ವದಿಂದಾಗಿ ಕಾಂಗ್ರೆಸ್ ಹೆಚ್ಚು ಸದ್ದು ಮಾಡದೇ ಮೂಲೆಯಲ್ಲಿ ಸಿಲುಕುವ ಅಪಾಯ ಎದುರಿಸುತ್ತಿದೆ. ತಮ್ಮ ಸ್ಥಳೀಯ ಶಕ್ತಿಯನ್ನು ರಾಷ್ಟ್ರ ರಾಜಕಾರಣಕ್ಕೆ ಮೆಟ್ಟಿಲಾಗಿಸಿಕೊಳ್ಳಬೇಕೆಂದು ಪ್ರಾದೇಶಿಕ ಪಕ್ಷಗಳು ಏನು ಸಾಧ್ಯವೋ ಅದನ್ನು ಮಾಡುತ್ತಿವೆ. ಫಲಿತಾಂಶ ಹೊರಬಿದ್ದಾಗ, ಗೆದ್ದವರು ನಮ್ಮನ್ನು ಎತ್ತ ಕೊಂಡೊಯ್ಯಲಿದ್ದಾರೆ? ನಮ್ಮ ಭವಿಷ್ಯದ ಈ ರೀತಿ ಎಂದಿಗೂ ಅನಿಶ್ಚಿತವಾಗಿರಲಿಲ್ಲ.
ಎಲ್ಲಕ್ಕಿಂತಲೂ ಕಳವಳಕ್ಕೀಡುಮಾಡಿದ ಸಂಗತಿಗಳೆಂದರೆ ಪ್ರಚಾರದ ವೇಳೆಯಲ್ಲಿ ಕಂಡು ಬಂದ ದ್ವೇಷ ಭಾಷಣಗಳು. ಮೊದ ಮೊದಲಿಗೆ ಚುನಾವಣಾ ಜಗಳಗಳೇನಿದ್ದರೂ ಆಂಧ್ರದಲ್ಲಷ್ಟೇ(ತೆಲಂಗಾಣ ವಿಷಯದಲ್ಲಿ) ಸೀಮಿತವಾಗಿರುತ್ತದೆ ಎಂದನಿಸಿತಾದರೂ, ಕೆಲವೇ ದಿನಗಳಲ್ಲಿ ಇಡೀ ದೇಶದ ತುಂಬಾ ಕೋಮುವಾದ ತನ್ನ ತಲೆ ಎತ್ತಿ ನಿಂತಿತು. ಕೋಮುವಾದ ಹಿಂದೆ ಭಾರತದಲ್ಲಿರಲಿಲ್ಲ ಎಂದು ಹೇಳುತ್ತಾರೆ ವಿದ್ವಾಂಸರು. ಸಮುದಾಯಗಳ ಮಧ್ಯೆ, ಧರ್ಮಗಳ ಮಧ್ಯೆ ಸೌಹಾರ್ದ ಮತ್ತು ಸಹಬಾಳ್ವೆಯೆನ್ನುವುದು ಈ ನೆಲದ ಸಹಜಗುಣಕ್ಕೆ ಅನುಗುಣವಾಗಿಯೇ ಬೆಳೆದುಬಂದಿತ್ತು. ಇಂದಿಗೂ ವಾರಾಣಸಿ, ಅಜ್ಮೇರ್ ಮತ್ತು ಶಬರಿಮಲೆಗಳಂಥ ಪವಿತ್ರ ಕ್ಷೇತ್ರಗಳಲ್ಲಿ ಸಹಬಾಳ್ವೆಯನ್ನು ಕಾಣಬಹುದಾಗಿದೆ. "ಕೋಮುವಾದವೆನ್ನುವುದು ಕಳೆದ 150 ವರ್ಷಗಳಿಂದ ಅಸ್ತಿತ್ವದಲ್ಲಿರುವ ಹುಸಿ ಪ್ರಜ್ಞೆಯೇ ಆಗಿದೆ. ಏಕೆಂದರೆ ಹಿಂದು ಮತ್ತು ಮುಸಲ್ಮಾನರ ನಡುವೆ ವೈಷಮ್ಯ ಹುಟ್ಟಿಸುವಂಥ ಯಾವ ಸಂಗತಿಗಳೂ ಅದಕ್ಕಿಂತಲೂ ಹಿಂದೆ ಇರಲಿಲ್ಲ' ಎಂದು ತಮ್ಮ ಪುಸ್ತಕ ಕಮ್ಯುನಲಿಸಂ: ಏ ಪ್ರೀಮಿಯರ್ ಪುಸ್ತಕದಲ್ಲಿ ಹೇಳುತ್ತಾರೆ ಇತಿಹಾಸಕಾರ ಬಿಪಿನ್ ಚಂದ್ರ.
ಉತ್ತರಪ್ರದೇಶ ಈ ವರ್ಷ ಅತಿಕೆಟ್ಟ ಕೋಮುವಾದಕ್ಕೆ ಬಲಿಯಾಗಿ ಹೊತ್ತಿ ಉರಿಯಿತಲ್ಲ ಎನ್ನುವ ಪ್ರಶ್ನೆ ಬರಬಹುದು. ಎಂದಿನಂತೆಯೇ ಕಳೆದ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಮುಝಫರ್‌ನಗರದಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆಯೇ ಮೂಲಕಾರಣವಾಗಿತ್ತು. ರಾಜ್ಯ ಸರ್ಕಾರ ಅಲ್ಲಾದ ಗಾಯಕ್ಕೆ ಮುಲಾಮು ಹಚ್ಚುವ ಬದಲು ಗಾಯವನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ಅಮಿತ್ ಷಾರಂಥವರು, 'ಪ್ರತೀಕಾರದ ಮತದಾನ ಮಾಡಲು' ಜಾಟರಿಗೆ ಪ್ರಚೋದಿಸುತ್ತಿದ್ದಾರೆ. ಒಬ್ಬ ಹಿರಿಯ ರಾಜಕಾರಣಿಯಾದ ಅಮಿತ್ ಷಾ ಇಂಥ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾದದ್ದೂ ಆಯಿತು.
ಇದಕ್ಕೆ ಹೋಲಿಸಿದರೆ ಇನ್ನು ಹಲವೆಡೆ ಕಂಡುಬಂದ ಕಮ್ಯುನಲ್ ಕಾರ್ಡ್‌ಗಳು ನಿರುಪದ್ರವಿಯಾಗಿ ಗೋಚರಿಸಿದವು. ಸೋನಿಯಾ ಗಾಂಧಿ, ಶಾಹಿ ಇಮಾಮ್ ಬುಖಾರಿ ಅವರನ್ನು ಭೇಟಿಯಾಗಿದ್ದು, ನರೇಂದ್ರ ಮೋದಿಯ ಕಣ್ಣಿಗೆ "ತೀವ್ರ ಕೋಮುವಾದ"ವಾಗಿ ಗೋಚರಿಸಿತು. ಯಾವಾಗ ಇಮಾಮ್ ಬುಖಾರಿ, ಕಾಂಗ್ರೆಸ್‌ಗೆ ಮತ ನೀಡಿ ಎಂದು ತಮ್ಮ ಧರ್ಮದವರಿಗೆ ಕರೆಕೊಟ್ಟರೋ ಆಗ ಆ 'ತೀವ್ರತೆ' ಹೆಚ್ಚಾಯಿತು. ತಮ್ಮ ಕಡೆಯಿಂದ ನರೇಂದ್ರ ಮೋದಿಯವರು ಹಿಂದುಗಳನ್ನು ಸೆಳೆಯುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ವಾರಾಣಸಿಯ ರ್ಯಾಲಿಗಳಲ್ಲಿ ಅವರು ವೇದಿಕೆಯ ಪರದೆಯ ಮೇಲೆ ಮಂದಿರಗಳ ಮತ್ತು ದಶಾಶ್ವಮೇಧ ಘಾಟ್‌ನ ಚಿತ್ರಗಳಿದ್ದವು. ಕಾಶಿ ವಿಶ್ವನಾಥ ಮಂದಿರದ ಮೂರು ಪ್ರತಿಕೃತಿಗಳನ್ನು ನಿಲ್ಲಿಸಲಾಗಿತ್ತು. ಮೋದಿ ಮೆಟ್ಟಿಲುಗಳನ್ನು ಏರುತ್ತಿರುವಂತೆಯೇ ಶಂಖನಾದ ಮೊಳಗಿತು. "ಸೋಮನಾಥನ ನೆಲದಿಂದ, ಬಾಬಾ ವಿಶ್ವನಾಥನ ದರ್ಶನ ಪಡೆಯಲು ಬಂದಿದ್ದೇನೆ ನಾನು" ಎಂಬ ಮೊದಲೇ ಲೆಕ್ಕಹಾಕಿದ್ದ ಮಾತುಗಳನ್ನಾಡಿದರು ಮೋದಿ. ಬಾಲಿವುಡ್‌ನ ಯಾವ ಸ್ಕ್ರೀನ್‌ಪ್ಲೇ ಬರಹಗಾರನಿಗೂ ಸಹ, ಇಷ್ಟು ಚೆನ್ನಾಗಿ ಪದಗಳನ್ನು ಹೆಣೆಯಲು ಬರುವುದಿಲ್ಲವೇನೋ?
ನಂತರ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಮ ಮಂದಿರದ ವಿಚಾರ ಎತ್ತಿ ಈ ಪ್ರದರ್ಶನವನ್ನು ಕ್ಲೈಮ್ಯಾಕ್ಸ್ ಹಂತಕ್ಕೆ ಹೊತ್ತೊಯ್ಯಿತು. ರಾಮಜನ್ಮಭೂಮಿಯ ರಾಮ ಮಂದಿರದ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದುಬೆಯವರು, "ಚುನಾವಣೆಗೂ ರಾಮಮಂದಿರಕ್ಕೂ ನಂಟು ಬೆಸೆಯಬೇಡಿ" ಎಂದು ಹೇಳಿದರು. ಹನುಮಗಿರಿ ಮಂದಿರದ ಮುಖ್ಯ ಅರ್ಚಕರಾದ ಮಹಾಂತ್ ದಾಮೋದರ್ ದಾಸ್, "ರಾಜಕೀಯ ಲಾಭಕ್ಕಾಗಿ ಪಕ್ಷಗಳು, ಹೀಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು" ಎಂದು ಅಸಮಾಧಾನಪಟ್ಟರು.
19ನೇ ಶತಮಾನದ ತತ್ವಜ್ಞಾನಿ ಫ್ರೆಡ್ರಿಕ್ ನೀಶೆಯ- "ದೇವರು ಸತ್ತುಹೋಗಿದ್ದಾನೆ,  ಮುಂದೆಯೂ ಸತ್ತಿರುತ್ತಾನೆ" ಎನ್ನುವ ಮಾತು ಕೇವಲ ಯುರೋಪ್‌ನಲ್ಲಷ್ಟೇ ಸತ್ಯವಿರಬಹುದು, ನಮ್ಮಲ್ಲಿ ಅಲ್ಲ. ಆದರೆ ಯುರೋಪ್‌ನಲ್ಲಿ ಕ್ಯಾಥೋಲಿಕ್ ಚರ್ಚ್‌ಗಳ ಸರ್ವಾಧಿಕಾರಿ ರಾಜಕೀಯ ಆಡಳಿತವನ್ನು ನೋಡಿರುವ ನೀಶೆಯ ಮಾತನ್ನು ಮರೆಯುವುದು ಬೇಡ. "ಯಾರು ಸರ್ವಾಧಿಕಾರಿ ಧಾರ್ಮಿಕ ದೃಷ್ಟಿಕೋನವನ್ನು ಹೊಂದಿರುತ್ತಾರೋ ಮುಂದೆ ಅವರು ನಿರಂಕುಶ ರಾಜಕಾರಣಿಗಳಾಗುತ್ತಾರೆ" ಎನ್ನುತ್ತಾನೆ ನೀಶೆ.  
ನಮ್ಮ ಬಗ್ಗೆ ಅವನಿಗೆ ಮೊದಲೇ ಹೇಗೆ ತಿಳಿದಿತ್ತೋ?

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.