ಅಂಕಣಗಳು

ತ್ಯಾಗದ ಒಟ್ಟು ಮೊತ್ತವೇ 'ಹೆತ್ತವರು' ಎಂಬ ದೇವರು!

Published On :

ಮಲೆನಾಡು ಸೀಮೆಯ ಒಂದು ಹಳ್ಳಿ. ಅಲ್ಲೊಂದು ಪುಟ್ಟ ಕುಟುಂಬ. ಆ ಮನೆಯಲ್ಲಿ, ಎರಡು ಮುದ್ದು ಮಕ್ಕಳು: ಅಕ್ಕ-ತಮ್ಮ. ಇಬ್ಬರಿಗೂ ತಂದೆಯೊಂದಿಗೆ ತುಂಬಾ ಅಟ್ಯಾಚ್‌ಮೆಂಟು. ಅದರಲ್ಲೂ ಹೆಣ್ಣು ಮಗುವಿಗೆ, ತಂದೆಯ ವಿಷಯದಲ್ಲಿ 'ಅತೀ' ಎಂಬಂಥ ಪ್ರೊಸೆಸಿವ್‌ನೆಸ್ ಇತ್ತು. ಅವಳಿಗೆ, ದಿನಾಲೂ ಕಥೆ ಕೇಳುವ ಹುಚ್ಚು. ಕಥೆ ಹೇಳದಿದ್ದರೆ ಊಟವನ್ನೇ ಮಾಡುವುದಿಲ್ಲ ಎಂದು ಅವಳು ಹಠ ಮಾಡುತ್ತಿದ್ದುದು ಉಂಟು. ರಾತ್ರಿ ಊಟ ಮುಗಿದಾಕ್ಷಣ, ಅಪ್ಪನ ಮುಂದೆ ಕೂತು-'ಅಪ್ಪಾ, ನಾಯಿ ಕಥೆ ಹೇಳಪ್ಪಾ ಅನ್ನುತ್ತಿದ್ದಳು. ಮತ್ತೊಂದು ದಿನ ಆನೆ ಕಥೆಗೆ ಡಿಮ್ಯಾಂಡ್ ಮಾಡುತ್ತಿದ್ದಳು. ಕೆಲವೊಮ್ಮೆ ಕೋಳಿಯ ಕಥೆಗೆ ಒತ್ತಾಯಿಸುತ್ತಿದ್ದಳು. ಕಥೆಯ ನೆಪದಲ್ಲಿ ಹುಲಿ, ಸಿಂಹ, ಜಿಂಕೆ, ನರಿ, ತೋಳ, ಸೂರ್ಯ-ಚಂದ್ರರೆಲ್ಲಾ ಬಂದು ಹೋಗುತ್ತಿದ್ದರು. ಕಥೆ ಮುಗಿಯುವ ಮೊದಲೇ, ಅಪ್ಪಾ, ಒಂದು ಡೌಟೂ ಅನ್ನುತ್ತ 'ಈವರೆಗೂ ನೀನು ಹೇಳಿದೆಯಲ್ಲ; ಅದೆಲ್ಲ ರಿಯಲ್ಲೋ ಅಥವಾ ಡಬ್ಬಾ ಸ್ಟೋರಿನೋ' ಎಂದು ಪ್ರಶ್ನೆ ಕೇಳಿ ಬಿಡುತ್ತಿದ್ದಳು. ಮಗಳ ಈ ತರಲೆ ಪ್ರಶ್ನೆಗೆ ಆ ತಂದೆ ನಗುನಗುತ್ತಲೇ ಉತ್ತರಿಸುತ್ತಿದ್ದರು. 'ಇವಳದು ಅತಿಯಾಯ್ತು. ನೀವೂ ಅವಳು ಹೇಳಿದ ಹಾಗೇ ಕೇಳ್ತೀರಿ. ಸ್ವಲ್ಪ ಹೆದರಿಸಿ ಬಾಯಿ ಮುಚ್ಚಿಸಬಾರದೇ?' ಎಂದು ಮನೆಯೊಡತಿ ಆಕ್ಷೇಪಿಸಿದರೆ ಆ ತಂದೆ- ಹೋಗ್ಲಿ ಬಿಡೇ. ಮಗು ಅಲ್ವ? ಅವಳಿಗೆ ಏನು ಗೊತ್ತಾಗುತ್ತೆ? ಬುದ್ಧಿ ಬೆಳೆದಂತೆಲ್ಲಾ ಅವಳು ಜಾಣೆ ಆಗ್ತಾಳೆ ಎಂದು ಮಾತು ತೇಲಿಸುತ್ತಿದ್ದರು.
ಹೀಗಿರುವಾಗಲೇ ಆ ಚಟಪಟ ಮಾತಿನ ಹುಡುಗಿಗೆ ನಾಲ್ಕನೇ ತರಗತಿಯ ಪರೀಕ್ಷೆ ಮುಗಿದು ಬೇಸಿಗೆ ರಜೆ ಶುರುವಾಯಿತು. ಮತ್ತೊಂದು ಹಳ್ಳಿಯಲ್ಲಿದ್ದ ಸೋದರ ಮಾವನ ಊರಲ್ಲಿ ರಜೆ ಕಳೆಯಲು ಈಕೆ ಹೊರಟು ನಿಂತಳು. ಮಕ್ಕಳು ಅಂದ ಮೇಲೆ ಕೇಳಬೇಕೆ? ಆ ಊರಲ್ಲಿ ಸಿಕ್ಕಿದ್ದೆಲ್ಲವನ್ನೂ ತಿಂದು, ಆ ಪುಟ್ಟ ಹುಡುಗಿ ಆರೋಗ್ಯ ಕೆಡಿಸಿಕೊಂಡಳು. ಮಾವನ ಊರಿಂದ ಬಂದವಳಿಗೆ ಮೂರು ದಿನಕ್ಕೊಮ್ಮೆ ಹೊಟ್ಟೆ ನೋವು, ಆಗಿಂದಾಗ್ಗೆ ವಾಂತಿ-ಭೇದಿ, ನಿಶ್ಯಕ್ತಿ, ಅಜೀರ್ಣದಂತಹ ಸಮಸ್ಯೆಗಳು ಕಾಡತೊಡಗಿದವು. ಮೊದ ಮೊದಲು ಎಲ್ಲ ಮನೆಯ ಅಪ್ಪ-ಅಮ್ಮಂದಿರಂತೆ, ಈ ಹುಡುಗಿಯ ಪೋಷಕರೂ ತಮಗೆ ತಿಳಿದಿದ್ದ ಚಿಕಿತ್ಸೆ ನೀಡಿದರು. ನಂತರ, ಮೆಡಿಕಲ್ ಶಾಪ್‌ನ ಮೊರೆ ಹೋದರು. ತೊಂದರೆಗಳು ಆಗಲೂ ನಿಲ್ಲದೆ ಹೋದಾಗ ಆಸ್ಪತ್ರೆಗೆ ದೌಡಾಯಿಸಿದರು.
'ಸಾರ್, ತುಂಬ ತಡವಾಗಿ ಬಂದಿದ್ದೀರ. ನೀರು ಹಾಗೂ ಆಹಾರದಲ್ಲಿನ ವ್ಯತ್ಯಾಸದಿಂದಾಗಿ ಈ ಮಗುವಿಗೆ ಜಾಂಡೀಸ್ ಆಗಿರುವಂತಿದೆ. ತುಂಬಾ ದಿನ ನೀವು ಟ್ರೀಟ್‌ಮೆಂಟ್ ಕೊಡಿಸದೇ ಇರೋದ್ರಿಂದ ತೊಂದ್ರೆ ಹೆಚ್ಚಾಗಿದೆ. ಐದಾರು ಚೆಕಪ್ ಆಗಬೇಕು. ಮೂರು ದಿನಕ್ಕೊಮ್ಮೆ ಆಸ್ಪತ್ರೆಗೆ ಬನ್ನಿ...' ಎಂದು ವೈದ್ಯರು ಆದೇಶಿಸಿದರು. ತಂದೆಗೆ ರಜೆ ಸಿಗದ ಕಾರಣದಿಂದ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ತಾಯಿ ಹಾಗೂ ಚಿಕ್ಕಮಗನ ಮೇಲೆ ಬಿತ್ತು.
ಸಿಟಿಯಲ್ಲಿದ್ದ ಆಸ್ಪತ್ರೆಗೆ ಹೋಗಲೆಂದು ಈ ಮೂವರೂ ಬಸ್ ನಿಲ್ದಾಣಕ್ಕೆ ಬಂದರು. ಅಲ್ಲಿ, ಎರಡು ಬಸ್‌ಗೆ ಆಗುವಷ್ಟು ಜನರಿದ್ದರು. ಸಿಟಿಗೆ ಎರಡು ತಾಸಿನ ಪ್ರಯಾಣ. ಪೇಷೆಂಟ್ ಆಗಿರುವ ಮಗಳೊಂದಿಗೆ ನುಗ್ಗಿ ಸೀಟ್ ಹಿಡಿಯಲು ಸಾಧ್ಯವಿಲ್ಲ. ಎರಡು ಗಂಟೆಯ ಕಾಲ ನಿಂತುಕೊಂಡೇ ಪ್ರಯಾಣಿಸುವುದು ಹೇಗೆ ಎಂಬ ಸಂಕಟದಲ್ಲಿ ಅಮ್ಮ ಯೋಚಿಸುತ್ತಿದ್ದಾಗಲೇ ಬಸ್ ಬಂತು. ಜನ, ನಾ ಮುಂದು ತಾಮುಂದು ಎಂಬಂತೆ ನುಗ್ಗಿದರು. ಅವರ ಮಧ್ಯೆಯೇ ನುಗ್ಗಿದ ಈ ಪುಟ್ಟ ಹುಡುಗ ಒಂದು ಸೀಟ್‌ನ ಮೇಲೆ ಬೋರಲು ಮಲಗಿ ಬಿಟ್ಟ. ಜನ, ಎದ್ದು ಸೀಟ್ ಬಿಡೋ ಎಂದರೆ-'ನಮ್ಮ ಅಕ್ಕನಿಗೆ ಹುಷಾರಿಲ್ಲಾರೀ. ಆಸ್ಪತ್ರೆಗೆ ಹೋಗ್ತಾ ಇದೀವಿ. ಅವರಿಗೆ ಅಂತಾನೇ ಸೀಟ್ ಹಿಡಿದಿದ್ದೀನಿ' ಅಂದ. ಕಡೆಯವರಾಗಿ ಬಸ್ ಹತ್ತಿದ ಅಮ್ಮ ಅಕ್ಕನಿಗೆ ಸೀಟ್ ಬಿಟ್ಟು ಕೊಟ್ಟ. 'ಇನ್ಮೇಲೆ ಪ್ರತಿ ಸಲಾನೂ ಹೀಗೆ ಮಾಡೋಣ. ನಾನು ಸೀಟ್ ಹಿಡಿದಿರ್ತೀನಿ. ನೀವು ನಿಧಾನಕ್ಕೆ ಬಸ್ ಹತ್ಕೊಳ್ಳಿ' ಎಂದ. ಆ ಪುಟ್ಟ ಹುಡುಗನ ಕಾಳಜಿಯನ್ನು ಬಸ್‌ನಲ್ಲಿ ಇದ್ದವರೆಲ್ಲಾ ಮೆಚ್ಚಿಕೊಂಡರು. ತಾಯಿ-ಮಗಳು, ಏನು ಹೇಳಬೇಕೆಂದೇ ಗೊತ್ತಾಗದೇ ಕಣ್ತುಂಬಿಕೊಂಡು ಕೂತು ಬಿಟ್ಟರು.
ಐದಾರು ಚೆಕಪ್‌ಗಳ ನಂತರ, ಈ ಮಗುವಿಗೆ ಜಾಂಡೀಸ್ ಇದೆ ಎಂದು ವೈದ್ಯರು ಘೋಷಿಸಿದರು. ಅಲೋಪತಿ ವೈದ್ಯ ಪದ್ಧತಿಗೆ ಮಗು ಹೊಂದಿಕೊಳ್ಳದೇ ಹೋದಾಗ, ಹಿರಿಯರ ಸಲಹೆಯಂತೆ ನಾಟಿ ಚಿಕಿತ್ಸೆಯ ಮೊರೆ ಹೋಗಿದ್ದಾಯಿತು. ಆಗ ನಾಟಿ ವೈದ್ಯರು, ತುಂಬ ಸ್ಪಷ್ಟವಾಗಿ ಹೇಳಿದರು: 'ನೀವು ತುಂಬಾ ತಡವಾಗಿ ಚಿಕಿತ್ಸೆಗೆ ಬಂದಿರುವುದರಿಂದ ಕಾಯಿಲೆ ಜಾಸ್ತಿಯಾಗಿದೆ. ಅದನ್ನು ವಾಸಿ ಮಾಡಬೇಕು ಅನ್ನುವುದಾದರೆ ಪಥ್ಯದಲ್ಲಿ ಇರಬೇಕು. ಉಪ್ಪು, ಹುಳಿ, ಖಾರ, ಒಗ್ಗರಣೆ ಇಲ್ಲದ ಸಪ್ಪೆ ಊಟವನ್ನು ಒಂದು ವರ್ಷದವರೆಗೂ ಕೊಡಬೇಕು...'
ಮಗಳಿಗೆ ಸಪ್ಪೆ ಊಟ ಕೊಟ್ಟು, ತಾವು ಮಾತ್ರ ರುಚಿರುಚಿಯಾದ ಊಟ ಮಾಡಲು ಆ ದಂಪತಿಗೆ ಮನಸ್ಸೇ ಬರಲಿಲ್ಲ. ಮಗಳು ಸಂಪೂರ್ಣವಾಗಿ ಹುಷಾರಾಗುವವರೆಗೂ ತಾವೂ ಸಪ್ಪೆ ಊಟವನ್ನೇ ತಿನ್ನಲು ಅವರು ನಿರ್ಧರಿಸಿದರು. ಮನೆಗೆ ಬಂದ ಬಂಧುಗಳಿಗೆ ಮೊದಲೇ ವಿಷಯ ತಿಳಿಸಿ, ಅವರಿಗೂ ಸಪ್ಪೆ ಊಟವನ್ನೇ ಕೊಟ್ಟರು. ಅಷ್ಟೇ ಅಲ್ಲ, ಮಗಳನ್ನು ಬಿಟ್ಟು ಸಿಹಿ ತಿನ್ನಬೇಕಾಗುತ್ತದೆ ಎಂಬ ಕಾರಣದಿಂದ ಹಬ್ಬ ಆಚರಿಸುವುದನ್ನೂ ನಿಲ್ಲಿಸಿದರು. ದಿನವೂ ಸಪ್ಪೆ ಊಟ ತಿಂದಿದ್ದರಿಂದ ಈ ಕುಟುಂಬದ ಎಲ್ಲರ ತೂಕವೂ ಕಡಿಮೆಯಾಗಿತ್ತು.
ಹೀಗಿರಲೊಮ್ಮೆ, ಜಾಂಡೀಸ್ ಪೀಡಿತ ಮಗುವಿನ ತಂದೆ, ಯಾವುದೋ ಕೆಲಸದ ನಿಮಿತ್ತ ಅತ್ತೆಯ ಮನೆಗೆ ಹೋಗಿದ್ದಾರೆ. ಅತ್ತೆಯ ಮನೆ ಅಂದ ಮೇಲೆ ಕೇಳಬೇಕೆ? ಹಬ್ಬದ ಅಡುಗೆಯೇ ತಯಾರಾಗಿದೆ. ಎಲ್ಲರೂ ಊಟಕ್ಕೆ ಕೂತಿದ್ದಾರೆ. ಕಾಯಿ ಒಬ್ಬಟ್ಟು, ಗಸಗಸೆ ಪಾಯಸ, ಆಗಷ್ಟೇ ಕಾಯಿಸಿದ ತುಪ್ಪದ ಪರಿಮಳಕ್ಕೆ ಈ ತಂದೆಯೂ ಮರುಳಾಗಿದ್ದಾರೆ. ತುಪ್ಪದಲ್ಲಿ ಅದ್ದಿದ ಒಬ್ಬಟ್ಟಿನ ಚೂರನ್ನು ಬಾಯಿಗಿಡಬೇಕು ಅನ್ನುವಾಗಲೇ ಅವರ ಕಣ್ಮುಂದೆ ಮಗಳ ಮುಖ ತೇಲಿ ಬಂದಿದೆ. ಅಲ್ಲಿ ಆ ಮಗು ಸಪ್ಪೆ ಊಟ ತಿನ್ನುತ್ತಿರುವಾಗ ನಾನು ಹಬ್ಬದೂಟ ಮಾಡುವುದು ಸರಿಯೇ ಎಂದುಕೊಂಡವರು, ಮರುಕ್ಷಣವೇ ಕೈ ತೊಳೆದು, ಒಂದು ಲೋಟ ನೀರು ಕುಡಿದು, ಊಟ ಮಾಡಲು ಮನಸ್ಸು ಬರ್ತಿಲ್ಲ, ಸಾರಿ ಎಂದು ಎದ್ದೇ ಬಿಟ್ಟರು. ಈ ತಂದೆ-ತಾಯಿಯ ಪ್ರಾರ್ಥನೆ ದೇವರನ್ನು ತಲುಪಿತು. ಆ ಹುಡುಗಿ, ಒಂದು ವರ್ಷದ ಪಥ್ಯ ಪೂರೈಸಿದ ಬಳಿಕ ತುಂಬು ಆರೋಗ್ಯದಿಂದ ಬಾಳುತ್ತಿದ್ದಾಳೆ. ಪ್ರಣತಿ ಎಂಬ ಹೆಸರಿಟ್ಟುಕೊಂಡು ಪುಟ್ಟದೊಂದು ಅಂಕಣವನ್ನೂ ಬರೆಯುತ್ತಿದ್ದಾಳೆ!!
ಹೌದಲ್ಲವಾ? ಎಲ್ಲ ಮನೆಯ ತಾಯ್ತಂದೆಯರೂ ಮಕ್ಕಳಿಗಾಗಿ ಇಂಥ ನೂರಾರು ತ್ಯಾಗ ಮಾಡಿರುತ್ತಾರೆ. ಹೇಳಿ: ಅವರ ನಿರ್ಮಮ ಪ್ರೀತಿಗೆ ಯಾವ ಹೆಸರಿಡೋಣ?

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.