ಅಂಕಣಗಳು

ಪ್ರಜಾಪ್ರಭುತ್ವದ ಆರಾಧನೆಯಲ್ಲೇಕೆ ನಿಂದನೆಯ ಸಂತರ್ಪಣೆ?

ಈಗಿನ ಸಂದರ್ಭಕ್ಕೆ ಕ್ಲೀಷೆ ಎಂದೆನಿಸಿದರೂ ಮಾತಿಗೆ ತೂಕ ಇರಲೇಬೇಕು. ಲೋಕಸಭೆ...

ಪ್ರಜಾಪ್ರಭುತ್ವದ ಆರಾಧನೆಯಲ್ಲೇಕೆ ನಿಂದನೆಯ ಸಂತರ್ಪಣೆ?
Published On :

ಈಗಿನ ಸಂದರ್ಭಕ್ಕೆ ಕ್ಲೀಷೆ ಎಂದೆನಿಸಿದರೂ ಮಾತಿಗೆ ತೂಕ ಇರಲೇಬೇಕು. ಲೋಕಸಭೆ ಚುನಾವಣೆಯ ಬಿಸಿಯಲ್ಲಿ ಕಾಯುತ್ತಿರುವ ನಮ್ಮ ರಾಜಕಾರಣಿಗಳ ವಾಗ್ ವೈಖರಿಯನ್ನು ಕಂಡಾಗ ಮಾತಿನ ಮಹತ್ವ ಎಷ್ಟು ಎಂಬುದು ಅರ್ಥವಾಗುತ್ತಿದೆ. ಗ್ರಾಮ್ಯ ಭಾಷೆಯಲ್ಲಿ ಒಂದು ಗಾದೆ ಮಾತಿದೆ. 'ಬೆಲ್ಲವಿಲ್ಲದಿದ್ರೂ ಬೆಲ್ಲದಂಥ ಮಾತಿರಬೇಕಂತೆ'- ಅಂದರೆ ಮನೆಯಲ್ಲಿ ಬೇರೆಯವರಿಗೆ ಕೊಡುವುದಕ್ಕೆ ಏನೂ ಇರದಿದ್ದರೂ ಕೊಡುವ ಔದಾರ್ಯವನ್ನು, ಆದರವನ್ನು ಮಾತಿನಲ್ಲಿ ಪ್ರಕಟಿಸಬಹುದು. ನಮ್ಮ ರಾಜಕಾರಣಿಗಳು ಬಣ್ಣದ ಮಾತಿನಲ್ಲಿ ಮನೆಕಟ್ಟಬಲ್ಲವರಾದರೂ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಅದ್ಯಾಕೋ ರಾಂಗ್ ಆಗಿಬಿಡುತ್ತಾರೆ. ಇದ್ದಕ್ಕಿದ್ದಂತೆ ಮೈ ಮೇಲೆ ಭೂತ ಬಂದವರಂತೆ ಆಡುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬಾಯಿ ತೆರೆದರೆ ದ್ವೇಷದ ಅಗ್ನಿಪರ್ವತವೇ ಸ್ಫೋಟವಾಗುತ್ತದೆ. ತಮ್ಮ ರಾಜಕೀಯ ವೈರಿಗಳನ್ನು ಆಸ್ತಿ ಕಿತ್ತುಕೊಂಡವರ ರೀತಿ ಪರಿಭಾವಿಸುತ್ತಾರೆ. ಅಷ್ಟರಮಟ್ಟಿಗೆ ರಾಜಕಾರಣಿಗಳ ಪ್ರಜ್ಞೆ ಮತ್ತು ನಾಲಗೆಯ ಮಧ್ಯೆ ಇರುವ ಸಂಪರ್ಕ ಸೇತುವೆ ಮುರಿದುಬಿದ್ದಿರುತ್ತದೆ.
ಲೋಕಸಭಾ ಚುನಾವಣೆಯ ಹಣಾಹಣಿಗೆ ಸಿದ್ಧರಾಗಿರುವ ನಮ್ಮ ರಾಜಕಾರಣಿಗಳ ಮಾತುಗಳನ್ನು, ಟೀಕಾ ವೈಖರಿಯನ್ನು ಒಮ್ಮೆ ಗಮನಿಸಿ. ಇದೇನು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದಕ್ಕೆ ನಡೆಯುತ್ತಿರುವ ಮತಯಜ್ಞವೋ ಅಥವಾ ತಮ್ಮ ಎದುರಾಳಿಗಳ ಸರ್ವನಾಶಕ್ಕೆ ನಡೆಸುತ್ತಿರುವ ಶತ್ರು ಸಂಹಾರ ಯಾಗವೋ ಎಂಬುದೇ ಅರ್ಥವಾಗುತ್ತಿಲ್ಲ! ಅಷ್ಟರ ಮಟ್ಟಿಗೆ ಚುನಾವಣಾ ಸಭೆ, ರೋಡ್ ಶೋಗಳಲ್ಲಿ ನಡೆಯುವ ಭಾಷಣಗಳು ಹಳಿ ತಪ್ಪುತ್ತಿವೆ.
ಹಿಂದೊಂದು ಕಾಲವಿತ್ತು. ಆಗ ಚುನಾವಣೆ ಎದುರಾದಾಗ ರಾಜಕಾರಣಿಗಳ ಮಾತಿನ ಚಾಲಾಕಿತನವನ್ನು ಕೇಳುವುದಕ್ಕೆ ಜನ ಮುಗಿಬೀಳುತ್ತಿದ್ದರು. ಪ್ರಧಾನಿ ಇಂದಿರಾ ಗಾಂಧಿಯವರನ್ನು ಸಂಪೂರ್ಣ ಕ್ರಾಂತಿಯ ಹರಿಕಾರ ಜಯಪ್ರಕಾಶ್ ನಾರಾಯಣ 'ಗೂಂಗಿ ಗುಡಿಯಾ' (ನಾವು ಮೌನ ಗೌರಿ ಎಂದು ಅರ್ಥೈಸಿಕೊಳ್ಳೋಣ) ಎಂದಾಗ ಅದು ನಿಂದನೆಯ ಚೌಕಟ್ಟನ್ನು ಮೀರಿ ಇಂದಿರಾರ ಕಾರ್ಯವೈಖರಿಯನ್ನು ಮಾತ್ರ ಎತ್ತಿ ತೋರುತ್ತಿತ್ತು. ಆರ್‌ಎಸ್‌ಎಸ್ ಧುರೀಣರು ಮಾಡುವ ಚುನಾವಣಾ ಭಾಷಣಕ್ಕೆ ಕಿವಿಗೊಟ್ಟಾಗ ದೇಶ ಭಕ್ತಿಯ ಸಂಚಲನದಿಂದ ಮೈ ರೋಮಾಂಚನವಾಗುತ್ತಿತ್ತು. ಇಂಥ ಭಾಷಣಕಾರರಿಗೆ ಎಷ್ಟು ಜನ ಮತ ಹಾಕುತ್ತಿದ್ದರು ಎಂಬುದಕ್ಕಿಂತ, ಮಾತು ಕೇಳುವುದಕ್ಕೇ ಜನ ಮುಗಿ ಬೀಳುತ್ತಿದ್ದರು. ಅಂದರೆ ಚುನಾವಣಾ ಪ್ರಚಾರಗಳು ಅಂದು ಅಗ್ಗದ ಮಾತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸ್ಪರ್ಧಿ-ಪ್ರತಿಸ್ಪರ್ಧಿಯ ನಡುವಿನ ವಾದ -ಪ್ರತಿವಾದ ಭವಿಷ್ಯದ ತತ್ವಭೋಧವಾಗಿರುತ್ತಿತ್ತು!
ಆದರೆ ಇಂದೇನಾಗಿದೆ ನೋಡಿ. ವಿರೋಧಿ ಬಣದ ಕಟ್ಟಾಳುವನ್ನು 'ಸಾವಿನ ಸರದಾರ' ಎಂದು ನಿಂದಿಸುವುದರಿಂದ ಹಿಡಿದು, ನೀವು ವಿಷ  ತೆಗೆದುಕೊಳ್ಳುವುದನ್ನು ಕಾಯುತ್ತಿದ್ದೇನೆ ಎಂಬಲ್ಲಿಯವರೆಗೆ ಚುನಾವಣಾ ಭಾಷಣಗಳು ಬಂದು ನಿಂತಿವೆ. ಚುನಾವಣೆ ಪ್ರಕ್ರಿಯೆ ಎಂದರೆ ಪ್ರಜಾಪ್ರಭುತ್ವದ ಆರಾಧನೆ ಎಂಬುದು ಮರೆತು ಹೋಗಿದೆ. ಅಷ್ಟೇ ಏಕೆ ಬೇರೆಯವರ ಹುಟ್ಟಿನ ಮೂಲದ ಬಗ್ಗೆ ಪ್ರಶ್ನೆ ಎತ್ತುವಂಥ ಹಂತಕ್ಕೆ ನಮ್ಮ ಸುಸಂಸ್ಕೃತ ರಾಜಕಾರಣಿಗಳು ಬಂದು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜಕಾರಣಿಗಳ ವಾಗಾಡಂಬರ ವೈಖರಿ ವ್ಯಾಖ್ಯಾನಕ್ಕೆ ಮತ್ತು ಅದರಿಂದ ಸೃಷ್ಟಿಯಾದ ಪರಿಸ್ಥಿತಿಯನ್ನು ಹಾಸ್ಯಪರಿಧಿಯಲ್ಲಿ ವಿಶ್ಲೇಷಿಸಿದರೆ ತಪ್ಪಾಗಲಾರದೇನೋ?!
ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಎಡವಟ್ಟು ಹೇಳಿಕೆ ನೀಡಿ ಕೈ ಕೈ ಹಿಸುಕಿಕೊಳ್ಳುವ ಹಂತಕ್ಕೆ ತಲುಪಿದವರಲ್ಲಿ ಮೊದಲಿಗರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ. ಯಾರಾದರೂ ತಮ್ಮನ್ನು ಸರಳ ಸಜ್ಜನ ರಾಜಕಾರಣಿ ಎಂದು ಕರೆದರೆ ಅದನ್ನು ವಿನಮ್ರತೆ ಮತ್ತು ಹೆಮ್ಮೆಯಿಂದ ಒಪ್ಪಿಕೊಳ್ಳುವ ಪರಮೇಶ್ವರ, ಮೊನ್ನೆ ಮಾತ್ರ ಬೆಣೆ ಕಿತ್ತು ಬಾಲ ಸಿಗಿಸಿಕೊಳ್ಳುವ ಕೆಲಸ ಮಾಡಿದರು. ತಮ್ಮ ರಾಜಕೀಯ ಗುರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಜತೆ ಬೆಂಗಳೂರಿನಲ್ಲಿ ಮತಯಾಚನೆಗೆ ಗಲ್ಲಿಗಲ್ಲಿ ಸುತ್ತಿದ ಪರಮೇಶ್ವರ ಏಪ್ರಿಲ್ ತಿಂಗಳ ಮಧ್ಯಾಹ್ನದ ಬಿಸಿಲಿನ ಹೊಡೆತ ತಡೆದುಕೊಳ್ಳುವುದಕ್ಕೆ ವಿಫಲರಾದರೋ ಎಂಬಂತೆ, ಶಿವಾಜಿನಗರ ಬಳಿ ಇರುವ ಕಾಂಗ್ರೆಸ್ ಕಚೇರಿಯಲ್ಲಿ ಆವೇಶ ಭರಿತರಾಗಿ ಮಾತಿಗೆ ನಿಂತಿದ್ದರು. ವೇದಿಕೆ ಮೇಲೆ ಕೃಷ್ಣ ಸಾನಿಧ್ಯ ಬೇರೆ. ಗುರುವಿನ ವಿರೋಧಿಯ ಮೇಲೆ ಮಾತಿನ ಬ್ರಹ್ಮಾಸ್ತ್ರ ಬಿಡಲು ಮುಂದಾದ ಅವರು ಅಪರೂಪಕ್ಕೋ ಎಂಬಂತೆ ಹದ ಕಳೆದುಕೊಂಡರು.
"ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಾರದೇ ಇದ್ದರೆ ನಾನು ವಿಷ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದರು. ಅವರ ಹೇಳಿಕೆ ಇನ್ನೂ ನನ್ನ ಬಳಿ ಇದೆ. ಅವರು ಯಾವಾಗ ವಿಷ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡುವುದಕ್ಕೆ ನಾನು ಕಾಯುತ್ತಿದ್ದೇನೆ" ಎಂದು ಗುಡುಗಿದರು. ಇಷ್ಟು ಹೇಳಿದ್ದೇ ತಡ ಕಾಂಗ್ರೆಸ್ ಪಾಳಯದಿಂದ ಚಪ್ಪಾಳೆಯ ಸುರಿಮಳೆ. ಸಾಲದಕ್ಕೆ ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಿದ್ದ ಸಭೆ ಬೇರೆ. ಅವರನ್ನು ಮೆಚ್ಚಿಸಬೇಕಲ್ಲ? ಹೀಗಾಗಿ ಚಪ್ಪಾಳೆ ಮೊರೆತದಲ್ಲಿ ಮೈಮರೆತ ಅವರು, "ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳುತ್ತಾರೆ. ಆದರೆ ನೀವು ಇದನ್ನು ನಂಬಬೇಡಿ. ಪುನರ್ಜನ್ಮ ಎಂಬುದು ಇದೆಯೋ, ಇಲ್ಲವೋ ಯಾರಿಗೆ ಗೊತ್ತು? ಹೀಗಾಗಿ ಅವರು ಈ ಜನ್ಮದಲ್ಲೇ ಮತಾಂತರ ಹೊಂದಿದರೆ ಒಳಿತು" ಎಂದುಬಿಟ್ಟರು.
ಈ ರೀತಿ ಹೇಳಿಕೆ ನೀಡುವಾಗ ಪರಮೇಶ್ವರ ಅವರಿಗೆ ಮುಂದಾಗುವ ಪರಿಣಾಮದ ಅರಿವಿರಲಿಲ್ಲ. ಪರಮೇಶ್ವರ ಹೇಳಿಕೆ ವಿದ್ಯುನ್ಮಾನ ಮಾದ್ಯಮದ ಮೂಲಕ ಇಡೀ ರಾಜ್ಯವನ್ನು ಹರಡಿತ್ತು. ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಮುನಿಸಿಕೊಳ್ಳುವಂತಾಯಿತು. ಚುನಾವಣೆ ಎದುರಿಗೆ ಇರುವಾಗ ಪರಮೇಶ್ವರ್‌ಗೆ ಯಾಕೆ ಬೇಕಿತ್ತು ಈ ಉಸಾಬರಿ ಎಂದು ಪಕ್ಷದಲ್ಲಿನ ವಿರೋಧಿಗಳೇ ರಾಗ ತೆರೆದರು. ಆಗ ತಮ್ಮ ಮಾತು ತಮಗೇ ಟೋಪಿ ಹಾಕಿದೆ ಎಂಬ ಜ್ಞಾನೋದಯಕ್ಕೆ ಒಳಗಾದ ಪರಮೇಶ್ವರ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಆದರೆ ವಿಷದ ಉರಿ ಮಾತ್ರ ಇನ್ನೂ ಆರಿಲ್ಲ. ಪಾಪ.
ಏಕೆಂದರೆ ಈ ವಿಷಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಡೆಯಿಂದ ಇನ್ನೊಂದಿಷ್ಟು ಹಾಲಾಹಲದ ಕೊಡುಗೆ ನೀಡಿದ್ದರು. ಅದು ಇನ್ನೊಂದು ರೀತಿಯಲ್ಲಿ ಸೂಕ್ಷ್ಮ ವಿಚಾರವಾಗಿತ್ತು. ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ವಿಧಾನಮಂಡಲದ ಅಧಿವೇಶನ ನಡೆಸುತ್ತಿದ್ದ ಸಂದರ್ಭದಲ್ಲಿ ಕಬ್ಬಿಗೆ ಹೆಚ್ಚಿನ ಬೆಲೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವಿಠಲ ಅರಭಾವಿ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಆಗ ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾದ ಕಾಂಗ್ರೆಸ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸದನದ ಮುಂದಿಟ್ಟಿತ್ತು. ಖುದ್ದು ಸಿದ್ದರಾಮಯ್ಯನವರೇ ಸರ್ಕಾರದ ಸಮರ್ಥನೆಗೆ ನಿಂತರು. ಮಾತ್ರವಲ್ಲ, "ಹಾವೇರಿಯಲ್ಲಿ ಬೀಜ-ಗೊಬ್ಬರ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಗುಂಡಿಟ್ಟುಕೊಂದ ನಿಮಗೆ ರೈತರ ಬಗ್ಗೆ ಮಾತನಾಡುವ ನೈತಿಕ ಧೈರ್ಯವಿಲ್ಲ" ಎಂದು ಕಿಡಿಕಾರಿದ್ದರು. ಅಲ್ಲದೆ ಧಾರವಾಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ಸಂಸ್ಥೆ ರಚಿಸಿ ರೈತನ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಕೊನೆಗೆ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದರು.
ಆದರೆ ಮೊನ್ನೆ ಮಡಿಕೇರಿಯ ನಾಪೋಕ್ಲುವಿಗೆ ಚುನಾವಣಾ ಪ್ರಚಾರ ಸಭೆಗೆ ತೆರಳಿದ್ದ ಸಿದ್ದರಾಮಯ್ಯ "ಬೆಳಗಾವಿಯಲ್ಲಿ ರೈತ ವಿಠಲ ಅರಭಾವಿ ಕುಡಿದು, ವಿಷ ತೆಗೆದುಕೊಂಡು ಸತ್ತ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಬಿಜೆಪಿಯವರು ಇದನ್ನೇ ದೊಡ್ಡದಾಗಿ ಮಾಡುತ್ತಿದ್ದಾರೆ" ಎಂದು ಚಪ್ಪಾಳೆ ಗಿಟ್ಟಿಸಿದ್ದರು. ಆದರೆ ಮರುದಿನ ಇದರ ಪರಿಣಾಮವಾಗಿ ಮುಖ್ಯಮಂತ್ರಿ ವಿರುದ್ಧ ರೈತ ಸಮುದಾಯ ತಿರುಗಿ ಬಿದ್ದಿತು. ಮತ್ತೆ ಯಥಾ ಪ್ರಕಾರ ಕಾಂಗ್ರೆಸ್‌ನ ಇನ್ನೊಂದು ಗುಂಪು "ಈ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯನವರಿಗೆ ಇಂಥ ಮಾತು ಬೇಕಿತ್ತಾ? ಅಧ್ಯಕ್ಷ-ಮುಖ್ಯಮಂತ್ರಿ ನಿಜಕ್ಕೂ ಆಲೂರಿನ ಎತ್ತಿನ ಜೋಡಿ" ಎಂದು ಮೂದಲಿಸಿದರು.
ರಾಷ್ಟ್ರೀಯ ಮಟ್ಟದಲ್ಲೂ ಮಾತಿನ ಮಲ್ಲಯುದ್ಧ ಜೋರಾಗಿಯೇ ಸಾಗಿದೆ. ಉತ್ತರಪ್ರದೇಶದ ಸಹರನ್‌ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್, ನರೇಂದ್ರ ಮೋದಿ ಅವರನ್ನು 'ತುಂಡು ತುಂಡು ಮಾಡುತ್ತೇನೆ' ಎಂದು ಅಬ್ಬರಿಸಿ ಕೊನೆಗೆ ಮಾವನಮನೆಯ ಆತಿಥ್ಯವನ್ನೂ ಪಡೆದು ಬಂದಿದ್ದಾನೆ. ಆದರೆ ಈ ಘಟನೆ ಮರೆಯುವುದಕ್ಕೆ ಮುನ್ನವೇ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಯಾರನ್ನೂ ಪೀಸ್ ಪೀಸ್ ಮಾಡಲಾಗುತ್ತದೆ ಎಂಬುದನ್ನು ಕಾದುನೋಡಿ ಎಂದಿದ್ದಾರೆ! ಇತ್ತ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಷಾ ಸಿಡಿಸಿದ ವಾಗ್ಬಾಣ ಉತ್ತರಪ್ರದೇಶದಲ್ಲಿ ಜಾಟ್ ಮತ್ತು ಮುಸಲ್ಮಾನರ ನಡುವೆ ಇನ್ನೊಂದಿಷ್ಟು ಅನುಮಾನ ಮತ್ತು ದ್ವೇಷವನ್ನು ಹುಟ್ಟುಹಾಕುವುದಕ್ಕೆ ಕಾರಣವಾಗಿದೆ.
ಇನ್ನು ಮೈಸೂರಿನಲ್ಲಿ ಬಿಜೆಪಿಯ ಸ್ವಚ್ಛ ರಾಜಕಾರಣಿಗಳ ಪೈಕಿ ಒಬ್ಬರಾದ ರಾಮದಾಸ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹುಟ್ಟಿನ ಮೂಲಕ್ಕೆ ಮತ್ತೆ ಕೈ ಹಾಕಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಮತ್ತೆ ಅಲ್ಪಸಂಖ್ಯಾತ ವಿರೋಧಿ ಮಾತಿಗೆ ಶರಣಾಗಿದ್ದಾರೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ನಿಂದನೆ ಮಾಡಿದರೆ ಮತಗಿಟ್ಟಿಸಬಹುದೆಂಬುದು ಅವರ ಎಣಿಕೆ. ಈ ಹಿಂದೆ ಅದು ನಿಜವೂ ಆಗಿದೆ. ಹೀಗಾಗಿ ಅದರ ರುಚಿ ಹತ್ತಿಸಿಕೊಂಡಿರುವ ಅನಂತ್ ಕುಮಾರ್ ಹೆಗಡೆ, ಕುಮಟಾ ತಾಲೂಕಿನ ಗಂಗಾವಳಿಯಲ್ಲಿ- "ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ ಅಲ್ಪಸಂಖ್ಯಾತರು ಮಕ್ಕಳನ್ನು ಹೆರುವುದಕ್ಕೆ ಮಾತ್ರ ಪ್ರೋತ್ಸಾಹ ನೀಡಿದೆ" ಎಂದಿದ್ದಾರೆ!
ಇಂಥವೆಲ್ಲ ಚುನಾವಣೆ ಸಂದರ್ಭದಲ್ಲಿ ಕೇಳುವುದಕ್ಕೆ ಅಪ್ಯಾಯಮಾನವೆಂದೆನಿಸಬಹುದು. 'ವಾಹ್ ವಾಹ್ ನಮ್ಮ ನಾಯಕ ಭಾಷಣ ಮಾಡಿದರೆ ಬೆಂಕಿಯೇ ಹುಟ್ಟುತ್ತದೆ' ಎಂದು ಬೆಂಬಲಿಗರು ಬೆನ್ನು ಚಪ್ಪರಿಸಬಹುದು. ಆದರೆ ಈ ಆಚಾರವಿಲ್ಲದ ನಾಲಿಗೆಗಳಿಂದ ಆಗುವ ಅಚಾತುರ್ಯಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಒಂದೆಡೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ, ಶಾಸಕರ, ಸಂಸದರ ಆಸ್ತಿ ಮೌಲ್ಯ ಚುನಾವಣೆಯಿಂದ ಚುನಾವಣೆಗೆ ದ್ವಿಗುಣವಾಗುತ್ತಲೇ ಇರುತ್ತದೆ. ಆದರೆ ಅವರ ನಾಲಿಗೆಗೆ ಗುಣವಾಗದ ಖಾಯಿಲೆ ಆವರಿಸಿರುತ್ತದೆ. ಇಷ್ಟೆಲ್ಲ ಈ ಲೋಕಸಭಾ ಚುನಾವಣೆಯಲ್ಲಿ ರಾಜಕಾರಣಿಗಳ ಕತೆಯಾಯ್ತು. ತತ್ವದ ಆಧಾರದ ಮೇಲೆ ರಾಜಕೀಯ ಪಕ್ಷಗಳನ್ನು ಬೆಂಬಲಿಸಲು ಮುಂದಾಗಿರುವ ನಾಡಿನ ಬುದ್ಧಿಜೀವಿಗಳೂ "ಸುಮ್ಮನಿರ್ರಿ ಸುಮ್ಮನಿರ್ರಿ ನಾವು ಯಾರ್ಗೂ ಕಮ್ಮಿ ಇಲ್ಲ' ಎನ್ನುತ್ತಾ ಕುಣಿಯಲಾರಂಭಿಸಿದ್ದಾರೆ. ಶಬ್ದಕೋಶಗಳನ್ನು ಓದಿ ಜೀರ್ಣಿಸಿಕೊಂಡಿರುವ ಇವರ ಪದಾಸ್ತ್ರಗಳೆಲ್ಲ ಮೋದಿ ನಿಂದನೆಗೆ, ಕಾಂಗ್ರೆಸ್ ಹಳಿಯುವಿಕೆಗೆ ಬಳಕೆಯಾಗುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಪರಸ್ಪರ ಅಪ್ಪಿಕೊಂಡಿರುವ ಸಾಹಿತಿಗಳು ವಿರೋಧಿಗಳ 'ಕೊರಳ್ಗೆ ಬೆರಳ್‌' ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಯಾರ್ಯಾರ ಅಲೆಯನ್ನು ಹೊತ್ತು ತಂದಿದೆಯೋ ಗೊತ್ತಿಲ್ಲ, ಆದರೆ ದೋಷಯುಕ್ತ ಮಾತಿನ ವಿಷಗಾಳಿಯಂತೂ ಬಲವಾಗಿ ಬೀಸುತ್ತಿದೆ. ಮಾತಿನ ಮೊನೆಯಲ್ಲಿ ಮತ್ತೊಬ್ಬರನ್ನು ಕೊಲ್ಲುವ, ಚಾರಿತ್ರ್ಯ ಹರಣ ಮಾಡುವ ಪ್ರಯತ್ನ ಸಾಗುತ್ತಿದೆ. ಆದರೆ ಕಾದು ನೋಡಿ ಇದು ಚುನಾವಣೆ ಮುಗಿಯುವವರೆಗೆ ಮಾತ್ರ  ಏಕೆಂದರೆ ರಾಜಕಾರಣದಲ್ಲಿ ಯಾರೂ ಯಾರಿಗೂ ಶತ್ರುಗಳಲ್ಲ. ಆದರೆ ಇವರು, ತಾವು ಪರಮಶತ್ರುಗಳು ಎಂಬುದನ್ನು ಬಿಂಬಿಸಿಕೊಳ್ಳಲು ಮಾಡುವ ಪ್ರಯತ್ನದಲ್ಲಿ ಆಗುವ ಎಡವಟ್ಟುಗಳಿಗೆ ಎಣೆಯಿಲ್ಲ.
ಲಗೋರಿ: ನಾಲಿಗೆಗೆ ಎಲುಬಿಲ್ಲದಿರಬಹುದು, ಆದರೆ ಮನಸುಗಳನ್ನು ಒಡೆಯುವ ಶಕ್ತಿಯಂತೂ ಅದಕ್ಕಿದೆ.

-ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.