ಮನೆಗೆ ಬಂದ ಮಹಾಲಕ್ಷ್ಮಿ ಹೇಳಿದ ಕಥೆಯ ಕೇಳಿ...
ಯುಗಾದಿ, ದೀಪಾವಳಿ, ಗೌರಿ ಗಣೇಶ... ಹೀಗೆ ಯಾವುದೇ ಹಬ್ಬವಿರಲಿ, ಹಬ್ಬದ ಸಡಗರವೆಲ್ಲಾ ಮುಗಿದು, ಒಂದು ರೌಂಡ್ ವಿಶ್ರಾಂತಿ ಪಡೆದ ಬಳಿಕ, ಬಹಳಷ್ಟು ಹೆಂಗಸರ ಸವಾರಿ ನೆರೆಮನೆಗೆ ಅಥವಾ ಹತ್ತಿರದಲ್ಲಿರುವ ಪರಿಚಯದವರ ಮನೆಗಳಿಗೆ ತೆರಳುತ್ತದೆ. ಹಬ್ಬಕ್ಕೆ ತೆಗೆದುಕೊಂಡ ಹೊಸ ಬಟ್ಟೆ, ಬಳೆ ಅಥವಾ ಹಬ್ಬದ ನೆಪದಲ್ಲಿ ಉಡುಗೊರೆಯಾಗಿ ಬಂದ ಕಾಣಿಕೆಗಳನ್ನು ಎಲ್ಲರಿಗೂ ತೋರಿಸುವುದೇ ಈ ಭೇಟಿಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೆ?
ವಾರದ ಹಿಂದೆ, ಯುಗಾದಿಯ ನೆಪದಲ್ಲಿ ಊರಿಗೆ ಹೋಗಿದ್ದೆನಲ್ಲ; ಆಗ ಅಮ್ಮನೊಂದಿಗೆ ಈ ವಿಷಯವನ್ನೇ ಹೇಳಿಕೊಂಡೆ. ಸಂಜೆ ಐದು ಗಂಟೆಯಿಂದ ತರಹೇವಾರಿ ಸೀರೆಗಳ ಪ್ರದರ್ಶನ ಆಗ್ತದೇನೋ. ಆ ಪೈಕಿ ನಿಂಗೆ ಯಾವ್ಯಾವ ಸೀರೆಗಳು ಇಷ್ಟ ಆಗ್ತವೋ ಅವನ್ನೆಲ್ಲ ತೋರಿಸು. ಮುಂದಿನ ತಿಂಗಳು ಬರುವಾಗ ತಂದು ಕೊಡ್ತೇನೆ ಅಂದೆ. ನನ್ನ ಮಾತುಗಳು ಕೇಳಿಸಲೇ ಇಲ್ಲ ಎಂಬ ಭಾವದಲ್ಲಿ, ಒಂದು ಗುಟ್ಟಿನ ಸುದ್ದಿ ಎಂಬಂತೆ ಅಮ್ಮ ಹೇಳಿದಳು: 'ಮಹಾಲಕ್ಷ್ಮಿ ಬಂದಿದ್ದಾಳೆ. ಬಹಳ ಇಳಿದು ಹೋಗಿದ್ದಾಳೆ. ತುಂಬಾ ಕಷ್ಟದಲ್ಲಿ ಇದ್ದಾಳಂತೆ. ಒಮ್ಮೆ ಹೋಗಿ ಮಾತಾಡಿಸಿಕೊಂಡು ಬಾ...'
ಮಹಾಲಕ್ಷ್ಮಿ ಎರಡು ದಶಕಗಳ ಹಿಂದೆಯೇ ಬೆಂಗಳೂರು ತಲುಪಿಕೊಂಡಿದ್ದವಳು. ಒಳ್ಳೆಯ ಸಂಬಂಧ ಬಂತೆಂದು, ಎಸ್ಸೆಸ್ಸೆಲ್ಸಿ ಮುಗಿದಾಕ್ಷಣ ಅವಳಿಗೆ ಮದುವೆ ಮಾಡಲಾಗಿತ್ತು. ಆಕೆಯ ಗಂಡ ಪೊಲೀಸ್ ಹುದ್ದೆಯಲ್ಲಿದ್ದ. ಮೊದಲ ನಾಲ್ಕು ವರ್ಷ ಮಹಾಲಕ್ಷ್ಮಿಯಲ್ಲಿ ಯಾವುದೇ ಬದಲಾವಣೆಯೂ ಕಾಣಲಿಲ್ಲ. ಆದರೆ ಐದನೇ ವರ್ಷ, ಯುಗಾದಿಗೆಂದು ಮಹಾಲಕ್ಷ್ಮಿ ಊರಿಗೆ ಬಂದದ್ದು ಹೊಚ್ಚ ಹೊಸ ಕಾರಿನಲ್ಲಿ. ಆಕೆಯ ಕೊರಳ ತುಂಬ ಬಂಗಾರವಿತ್ತು. ಮಾತಿನಲ್ಲಿ ಕಂಡೂ ಕಾಣದಂಥ ದರ್ಪವಿತ್ತು. 'ಆಕೆಯ ಗಂಡನಿಗೆ ಪ್ರಮೋಷನ್ ಸಿಕ್ಕಿದೆಯಂತೆ. ತುಂಬಾ ಅದಾಯ ಇರುವ ಕಡೇಲಿ ಕೆಲಸವಂತೆ. ತಿಂಗಳಿಗೆ ಸಿಗುವ ಲಂಚ, ಸಂಬಳಕ್ಕಿಂತ ಐದು ಪಟ್ಟು ಜಾಸ್ತಿಯಂತೆ. ಆಗಲೇ ಎರಡು ಮನೆ ಕಟ್ಟಿಸಿದ್ದಾರಂತೆ. ಎರಡು ಕಡೆ ಸೈಟೂ ತಗೊಂಡಿದ್ದಾರಂತೆ...' ಎಂಬಂಥ ಮಾತುಗಳೆಲ್ಲ ಕೇಳಿ ಬಂದವು. ಮಹಾಲಕ್ಷ್ಮಿ, ಯಾವುದನ್ನೂ ನಿರಾಕರಿಸಲಿಲ್ಲ. ಬದಲಾಗಿ, ದೇವ್ರು ನಮ್ಮ ವಿಷಯದಲ್ಲಿ ಕರುಣೆ ತೋರಿಸಿದ್ದಾನಮ್ಮಾ. ಹಾಗಾಗಿ, ತಕ್ಕಮಟ್ಟಿಗೆ ಬದುಕ್ತಾ ಇದೀವಿ ಎಂದು ತೇಲಿಸಿ ಹೇಳಿದ್ದಳು.
ಆನಂತರದಲ್ಲಿ ತಿಳಿದು ಬಂದ ಸುದ್ದಿಗಳು ಭಯ ಹುಟ್ಟಿಸುವಂತಿದ್ದವು. ಮಹಾಲಕ್ಷ್ಮಿಯ ಗಂಡ ವಿಪರೀತ ಲಂಚಕೋರನೆಂದೂ, ಕಠಿಣ ಮನಸ್ಸಿನವನೆಂದೂ ತಿಳಿದು ಬಂದಿತ್ತು. ಆತನ ಬೆಂಬಲಕ್ಕೆ ಪ್ರಭಾವಿಗಳು ಇದ್ದುದರಿಂದ ಯಾರೂ ಅವನನ್ನು ಪ್ರಶ್ನಿಸುವುದಕ್ಕೆ ಆಗುತ್ತಿಲ್ಲ ಎಂಬ ವಿಷಯದ ಹಿಂದೆಯೇ, ಮಹಾಲಕ್ಷ್ಮಿ ಕೂಡ ಚೀಟಿ ನಡೆಸುವ, ಸಣ್ಣಪುಟ್ಟ ಬ್ರೋಕರ್ ಕೆಲಸ ಮಾಡುವ ಕಾಯಕದಲ್ಲಿ ತೊಡಗಿದ್ದಾಳೆಂದೂ ಸುದ್ದಿ ಬಂದಿತ್ತು. ಹಬ್ಬ, ಮದುವೆ ಅಥವಾ ಮತ್ಯಾವುದೋ ಕಾರ್ಯಕ್ರಮದ ನೆಪದಲ್ಲಿ ಊರಿಗೆ ಬಂದಾಗಲೆಲ್ಲ, ಪ್ರತಿ ಬಾರಿಯೂ ಒಂದೊಂದು ಹೊಸ ಕಾರು ತರುತ್ತಿದ್ದಳು ಮಹಾಲಕ್ಷ್ಮಿ. ಅವಳ ವೈಭವವನ್ನು ಕಂಡವರೆಲ್ಲ, ಈಕೆ ಹೆಸರಿಗೆ ತಕ್ಕಂತೆ ಮಹಾಲಕ್ಷ್ಮಿಯೇ ಸೈ ಅನ್ನುತ್ತಿದ್ದರು.
ಇಂಥ ಹಿನ್ನೆಲೆಯ ಮಹಾಲಕ್ಷ್ಮಿಗೆ ಕಷ್ಟಗಳು ಎದುರಾಗಿವೆ ಎಂದರೆ ನಂಬುವುದಾದರೂ ಹೇಗೆ? ಈ ಪ್ರಶ್ನೆಯನ್ನೇ ಅಮ್ಮನ ಮುಂದಿಟ್ಟೆ. 'ಓಹ್, ಹಾಗಾದ್ರೆ ನಿಂಗೆ ವಿಷಯ ಗೊತ್ತಿಲ್ಲ ಅನಿಸುತ್ತೆ. ಎರಡು ತಿಂಗಳ ಹಿಂದೆ ಮಹಾಲಕ್ಷ್ಮಿಯ ಮನೆಯ ಮೇಲೆ ಲೋಕಾಯುಕ್ತ ರೇಡ್ ಆಯ್ತಂತೆ. ಇದಾಗಿ ನಾಲ್ಕೇ ದಿನಕ್ಕೆ ಮಹಾಲಕ್ಷ್ಮಿಯ ಗಂಡನನ್ನು ಸಸ್ಪೆಂಡ್ ಮಾಡಿದ್ರಂತೆ. ಒಂದರ ಹಿಂದೆ ಒಂದರಂತೆ ಬಂದೊದಗಿದ ಈ ಆಘಾತದಿಂದ ಮಹಾಲಕ್ಷ್ಮಿಯ ಗಂಡ ತತ್ತರಿಸಿ ಹೋದನಂತೆ. ಅದೊಂದು ಸಂಜೆ ಬಿ.ಪಿ. ಹೆಚ್ಚಿ, ತಲೆ ತಿರುಗಿ ಬಿದ್ದು ಬಿಟ್ಟನಂತೆ. ಎರಡು ವಾರದ ನಂತರ, ಇದ್ದಕ್ಕಿದ್ದಂತೆ ನೆನಪಿನ ಶಕ್ತಿ ಕೂಡಾ ಹೋಗಿ ಬಿಡ್ತಂತೆ. ಒಂದೊಂದು ಆಸ್ಪತ್ರೆಯಲ್ಲೂ ಲಕ್ಷ ರೂಪಾಯಿಗಳ ಲೆಕ್ಕದಲ್ಲಿ ಬಿಲ್ ಮಾಡಿದ್ದರಿಂದ ಕೂಡಿಟ್ಟಿದ್ದ ಹಣವೆಲ್ಲಾ ಖಾಲಿಯಾಗಿ ಹೋಯ್ತಂತೆ... ಅಂದಳು. ಹೋಗಿ ಮಾತಾಡಿಸಿಕೊಂಡು ಬಾ ಎಂದೂ ಹೇಳಿದಳು.
ಅವತ್ತೇ ಸಂಜೆ, ದೇವಸ್ಥಾನದಲ್ಲಿ ಸಿಕ್ಕಿಬಿಟ್ಟಳು ಮಹಾಲಕ್ಷ್ಮಿ. 'ಅಕ್ಕಾ ಹೇಗಿದ್ದೀರಿ?' ಅಂದೆ. ಬಹುಶಃ ಇಂಥದೊಂದು ಗೌರವ ಸೂಚಕ ಮಾತಿಗಾಗಿಯೇ ಕಾದಿದ್ದಳೇನೋ ಎಂಬಂತೆ, ಏನೊಂದೂ ಮಾತಾಡದೆ, ಬಳಿ ಬಂದಳು. ಮೆಲ್ಲಗೆ ಒಮ್ಮೆ ಅಂಗೈ ಅದುಮಿದಳು. ಮನೆಗೆ ಹೋಗೋಣ ಬಾ. ಇಲ್ಲಿ ಏನನ್ನೂ ಹೇಳಲು ಆಗುವುದಿಲ್ಲ ಅಂದಳು. ಮನೆ ತಲುಪಿದ ನಂತರ, ಕಾಫಿಯ ಕಪ್ ತುಟಿಗಿಡುವ ಮೊದಲೇ ಕೇಳಿಬಿಟ್ಟೆ: 'ಅಕ್ಕಾ, ವಿಪರೀತ ಡಲ್ ಆಗಿದೀರ. ಒಂದು ಕಾಲಕ್ಕೆ ಇಡೀ ಊರಿನ ಹೆಂಗಸರಿಗೆಲ್ಲ ರೋಲ್ ಮಾಡೆಲ್ ಥರಾ ಇದ್ದವರು ನೀವು. ಯಾಕೆ ಹೀಗೆ ಆಗಿಬಿಟ್ರಿ ಅಕ್ಕಾ?'
ಮಹಾಲಕ್ಷ್ಮಿ ಒಮ್ಮೆ ದೀರ್ಘವಾಗಿ ನಿಟ್ಟುಸಿರು ಬಿಟ್ಟಳು. ನಂತರ ಹೇಳಿದಳು: 'ಅನ್ಯಾಯ ಮಾಡಬಾರದು. ಮೋಸ ಮಾಡಬಾರದು. ಬಡವರನ್ನು ಶೋಷಿಸಬಾರದು. ನಮ್ಮ ಎಲ್ಲ ಕೆಲಸಗಳನ್ನೂ ಮೇಲಿನವನೊಬ್ಬ ಗಮನಿಸ್ತಾ ಇರ್ತಾನೆ. ನಮ್ಮ ಪಾಪದ ಕೊಡ ತುಂಬಿ ಬಂದಾಗ ಸರಿಯಾಗಿ ಒಂದು ಏಟು ಹಾಕ್ತಾನೆ' ಎಂಬ ಮಾತನ್ನು ನಾವು ಬೇರೆಯವರಿಗೆ ಹೇಳ್ತಾ ಇರ್ತೇವೆ. ಆದರೆ, ನಮ್ಮ ಕೈಗೇ ಅಧಿಕಾರ ಬಂದಾಗ, ಎಲ್ಲವನ್ನೂ ಮರೆತುಬಿಡ್ತೇವೆ. ಅಹಂಕಾರದಿಂದ ಮೆರೀತೇವೆ. ನನ್ನ ಕಥೆಯೂ ಹಾಗೆ ಆಯ್ತು. ನನ್ನ ಗಂಡ, ಸಿಕ್ಕವರನ್ನೆಲ್ಲ ಲೂಟಿ ಮಾಡಿದ. ವಿಪರೀತ ಆಸ್ತಿ ಮಾಡಿದ. ಆದರೆ, ಯಾವುದಕ್ಕೂ ಲೆಕ್ಕ ಇರಲಿಲ್ಲ. ತಾನೇ ಪೊಲೀಸ್ ಆಗಿರುವುದರಿಂದ ಯಾರೂ ಪ್ರಶ್ನೆ ಮಾಡಲ್ಲ ಅಂದುಕೊಂಡ. ಈ ಮಧ್ಯೆ, ಚೀಟಿ ನಡೆಸುವಂಥ, ಬಡ್ಡಿಗೆ ಹಣ ಕೊಡುವಂಥ ದುರಾಸೆಗೆ ನಾನೂ ಬಿದ್ದೆ. ಎಷ್ಟೋ ಬಾರಿ ಗ್ರಾಹಕರೊಂದಿಗೆ ಕ್ರೂರವಾಗಿ ವರ್ತಿಸಿದೆ. ಆದರೆ ಒಮ್ಮೆ ಮನೆಯ ಮೇಲೆ ರೇಡ್ ಆಗಿ, ಗಂಡ ಕೋಮಾ ಸ್ಥಿತಿ ತಲುಪಿಕೊಂಡ ನಂತರ ಕೂಡಿಟ್ಟ ಹಣವೆಲ್ಲಾ ಆರೇ ತಿಂಗಳಲ್ಲಿ ಖರ್ಚಾಗಿ ಹೋಯ್ತು. ಈಗ, ನನ್ನ ಪರಿಸ್ಥಿತಿ ನೋಡಿ ಅಯ್ಯೋ ಪಾಪ ಎನ್ನುವವರು ಯಾರೂ ಇಲ್ಲ. ಹಳೆಯ ವೈಭವ, ಈಗಿನ ಸಂಕಟ ನೆನೆದು ದಿನವೂ ಕಣ್ಣೀರಿನಲ್ಲಿ ಕೈ ತೊಳೀತಾ ಇದೀನಿ...' ಅಂದವಳೇ ಕಂಬನಿ ಒರೆಸಿಕೊಂಡಳು.
ಈ ವಿವರಣೆ ಓದಿ, ಮಾಡಿದ ಕರ್ಮಕ್ಕೆ ಅನುಭವಿಸಲೇಬೇಕು ಬಿಡಿ ಅಂತೀರ ತಾನೆ? ಒಂದು ಗುಟ್ಟು: ಹುಡುಕಿದರೆ, ಪ್ರತಿ ಐದು ಊರಲ್ಲಿ ಒಬ್ಬಳು ಮಹಾಲಕ್ಷ್ಮಿ ಸಿಗುತ್ತಾಳೆ! ಆದರೆ, ಹೆಚ್ಚಿನವರು ಇಷ್ಟೊಂದು ಮುಕ್ತವಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ...
-ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

