ಕಮ್ಯುನಿಸ್ಟರು ಅದಾಗಲೇ ಸೋತುಬಿಟ್ಟಿದ್ದಾರೆ!
ಈ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎನ್ನುವುದನ್ನು ಯಾರು ಬೇಕಾದರೂ ಊಹೆ ಮಾಡಬಲ್ಲರು, ಆದರೆ ಸೋಲುವವರನ್ನು? ..
ಈ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎನ್ನುವುದನ್ನು ಯಾರು ಬೇಕಾದರೂ ಊಹೆ ಮಾಡಬಲ್ಲರು, ಆದರೆ ಸೋಲುವವರನ್ನು?
ಸೋಲುವವರು ಕಮ್ಯುನಿಸ್ಟರು! ಪಟ್ಟಭದ್ರ ಹಿತಾಸಕ್ತಿಯ ಕಾಂಗ್ರೆಸ್ ಮತ್ತು ತೀವ್ರವಾದಿ ಹಿಂದುತ್ವದ ಸಂಪ್ರದಾಯವಾದಿ ಬಿಜೆಪಿಯ ನಡುವೆ ಖಾಲಿ ಜಾಗ ಉಳಿದಿದೆ. ಆ ಜಾಗದಲ್ಲಿ ಪರ್ಯಾಯ ಶಕ್ತಿಯಾಗಿ ಕೂಡಬಲ್ಲ ಅವಕಾಶ ಎಡಪಕ್ಷಕ್ಕಿತ್ತು. ಅದರ ಅಗತ್ಯವೂ ಇತ್ತು. ಆದರೆ ದೂರದೃಷ್ಟಿಯ ಕೊರತೆ, ಸಮಯದೊಂದಿಗೆ ಬದಲಾಗದ ಅದರ ಗುಣದಿಂದಾಗಿ, ಅದು ಅವಕಾಶವಂಚಿತವಾಗಿರುವುದಂತೂ ಸತ್ಯ. ಭಾರತೀಯರು ಕಾಂಗ್ರೆಸ್‌ನಂಥ ರಕ್ಕಸನಿಂದಲೂ ಮತ್ತು ಬಿಜೆಪಿಯ ಆಳ ಸಾಗರದಿಂದಲೂ ತಪ್ಪಿಸಿಕೊಳ್ಳುವುದಕ್ಕೆ ಆಪ್‌ನಂಥ ಹುಲ್ಲುಕಡ್ಡಿಯನ್ನು ಹಿಡಿಯುತ್ತಿರುವುದಕ್ಕೆ ಕಾರಣ, ಕಮ್ಯುನಿಸ್ಟ್ ಪಕ್ಷ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿರುವುದೇ ಆಗಿದೆ.
ಹಾಗಂತ ಎಡರಂಗದ ಹಿರಿಯಣ್ಣನಾಗಿರುವ ಸಿಪಿಎಮ್ ನಿಷ್ಕ್ರಿಯವಾಗಿದೆಯೆಂದು ಹೇಳುತ್ತಿಲ್ಲ. ಆದರೆ ತೃತೀಯ ರಂಗದ ಅದರ ಮಾತು ನೆಲಕಚ್ಚಿತು. ತಮಿಳುನಾಡಿನಲ್ಲಿ ಮೈತ್ರಿಕೂಟ ರಚಿಸಬೇಕೆಂಬ ಅದರ ಪ್ರಯತ್ನ ಮಕಾಡೆ ಮಲಗಿತು. ಈಗ ಪ್ರೋಗ್ರೆಸಿವ್ ಫೋರಂ ರಚಿಸಿಕೊಂಡು ನರೇಂದ್ರ ಮೋದಿಯವರ ಗುಜರಾತಿನಲ್ಲಿ 11 ಸ್ಥಾನಗಳಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಕಮ್ಯುನಿಸ್ಟ್ ಮಂದಿ. ಅದರಲ್ಲಿ ಒಂದರಲ್ಲೂ ಅವರು ಗೆಲ್ಲಲಾರರು ಎನ್ನುವುದೇ ಸತ್ಯ. ಒಂದೊಮ್ಮೆ ತನ್ನ ಬಿಗಿ ಹಿಡಿತದಲ್ಲಿದ್ದ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲೂ ಈಗ ಎಡರಂಗದ ಆಟ ನಡೆಯುತ್ತಿಲ್ಲ. ಹಾಗಿದ್ದರೆ ಸೂರ್ಯಾಸ್ತವನ್ನು ನಾವು ನೋಡುತ್ತಿದ್ದೇವೆಯೇ?
ಕಮ್ಯುನಿಸ್ಟರ ಈ ಪರಿಸ್ಥಿತಿಗೆ ಖುದ್ದು ಅವರೇ ಕಾರಣ. ಮೊದಲನೆಯದಾಗಿ, ಅವರೆಂದಿಗೂ ಒಗ್ಗಟ್ಟಿನ ಶಕ್ತಿಯಾಗಿರಲೇ ಇಲ್ಲ. ತಮ್ಮ ನೀತಿಗಳನ್ನು ಆಗಾಗ ಬದಲಿಸುತ್ತಾ, ಜನಪ್ರಿಯವಲ್ಲದ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾ, ಕೊನೆಗೆ ತಾವು ತಾವೇ ಹೊಡೆದಾಡಿಕೊಂಡು ಸಿಪಿಎಮ್ ಮತ್ತು ಸಿಪಿಐ ಹುಟ್ಟಿಗೆ ಕಾರಣರಾದರು.
---
ಆಂಧ್ರಪ್ರದೇಶ, ಪಂಜಾಬ್, ಮಹಾರಾಷ್ಟ್ರದಲ್ಲಿ ತಾನು ಬೆಳೆಯಬಹುದು ಎನ್ನುವ ನಂಬಿಕೆ ಆ ಪಕ್ಷಕ್ಕಿದ್ದರೂ, ಅದು ಮಿಂಚಿದ್ದು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲೇ. ಪಶ್ಚಿಮ ಬಂಗಾಳದಲ್ಲಿನ ಅದರ ಯಶಸ್ಸಿಗೆ ಕಾರಣ, ಜ್ಯೋತಿ ಬಸು ಅವರ ಹಿಂದೆ ನಿಂತು ಪ್ರಮುಖ ನಿರ್ಣಯಗಳನ್ನು, ಯೋಜನೆಗಳನ್ನು ರೂಪಿಸಿದ ಕೆಲವು ನಾಯಕರು. ಕೇರಳದಲ್ಲೂ ಕೂಡ ಕಮ್ಯುನಿಸ್ಟ್ ಪಕ್ಷಕ್ಕೆ ಎ.ಕೆ. ಗೋಪಾಲನ್ ಮತ್ತು ಇ.ಎಮ್.ಎಸ್. ನಂಬೂದರಿಪಾಡ್‌ನಂಥ ನಾಯಕರಿಂದ ಲಾಭವಾಯಿತು.
ನಿಸ್ಸಂಶಯವಾಗಿಯೂ ನಾಯಕತ್ವ ಪ್ರಮುಖಪಾತ್ರ ವಹಿಸುತ್ತದೆ. ಈ ವಿಷಯದಲ್ಲೇ ಆ ಪಕ್ಷ ಹಲವಾರು ವರ್ಷಗಳಿಂದ ಹೊಡೆತ ತಿನ್ನುತ್ತಾ ಬಂದಿದೆ. ವೈದುಷ್ಯ, ದ್ವಂದ್ವಾತ್ಮಕ ವಸ್ತುವಾದ, ರಾಜಕೀಯ ಲೆಕ್ಕಾಚಾರಗಳ ಜಾಗದಲ್ಲೀಗ, ಅನ್ಯ ಪೀಡೆಗಳು ಬಂದು ಕುಳಿತಿವೆಯಷ್ಟೆ. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷದ 30 ವರ್ಷಗಳ ಆಡಳಿತದಲ್ಲಿ, ಜನರ ಎದೆಯಲ್ಲಿ ಹೆದರಿಕೆಯೂ ಮನೆ ಮಾಡಿತ್ತು ಎನ್ನುವುದು ಈಗ ಅರ್ಥವಾಗುತ್ತಿದೆ. ಮಮತಾ ಬ್ಯಾನರ್ಜಿಯವರ ನಿರಂಕುಶ ದುರಾಡಳಿತದ ನಡುವೆಯೂ ಕಮ್ಯುನಿಸ್ಟರತ್ತ ಯಾರೂ ತಿರುಗಿ ನೋಡುತ್ತಿಲ್ಲ, ಏಕೆಂದರೆ ಜನರಿಗೆ ಆ ಪಕ್ಷದ ಮೇಲಿನ ಹೆದರಿಕೆ ಇನ್ನೂ ಹೋಗುತ್ತಿಲ್ಲ.
ಹಿಂದೊಮ್ಮೆ ದೆಹಲಿಯಲ್ಲಿನ ಪಕ್ಷದ ಕೇಂದ್ರ ನಾಯಕತ್ವ, ರಾಜ್ಯ ಘಟಕಗಳನ್ನು ನಿರ್ವಹಿಸುವ ಕೆಲಸ ಮಾಡುತ್ತಿತ್ತು. ಹರ್‌ಕಿಶನ್ ಸಿಂಗ್ ಸುರಜೀತ್ ಅವರನ್ನು ಎಲ್ಲಾ ಪಕ್ಷಗಳ ನಾಯಕರೂ ಗೌರವಿಸುತ್ತಿದ್ದರು. ತಮ್ಮ ಮಾತುಗಾರಿಕೆ ಮತ್ತು ವ್ಯಕ್ತಿತ್ವದ ಮೂಲಕ ಎಲ್ಲರನ್ನೂ ಆಕರ್ಷಿಸುವ ನಾಯಕರಾಗಿದ್ದರವರು. ಆದರೆ ಇಂದಿನ ಮುಖ್ಯಸ್ಥ ಪ್ರಕಾಶ್ ಕಾರಟ್ ಅಂಥ ಗೌರವವನ್ನು ಸಂಪಾದಿಸಲು ವಿಫಲರಾಗಿದ್ದಾರೆ. ಕೇರಳ ಮತ್ತು ಬಂಗಾಳದ ಕಮ್ಯುನಿಸ್ಟ್ ನಾಯಕರು ಪ್ರಕಾಶ್ ಕಾರಟ್‌ರ ಮಾತನ್ನು ಕಿವಿಗೆ ಹಾಕಿಕೊಳ್ಳದಷ್ಟು ಬದಲಾಗಿಬಿಟ್ಟಿದ್ದಾರೆ. ಕೇರಳದಲ್ಲಿ ಕೊಲೆ ಪ್ರಕರಣವೊಂದು ನಡೆದಾಗ, ಪ್ರಕಾಶ ಕಾರಟ್ ತಮ್ಮ ನಾಯಕರನ್ನೇ ಬಹಿರಂಗವಾಗಿ ಬೆಂಬಲಿಸುವ ಮೂಲಕ ಜನತೆಗೆ ಕೆಟ್ಟ ಸಂದೇಶ ಕಳುಹಿಸಿದ್ದರು. ಯೂನಿವರ್ಸಿಟಿಗಳಿಂದ ಪದವಿ ಪಡೆದು ನೇರವಾಗಿ ರಾಜಕೀಯಕ್ಕೆ ಬಂದು ಪೆದ್ದು ಪೆದ್ದಾಗಿ ವರ್ತಿಸುವ ವ್ಯಕ್ತಿಗಳಲ್ಲಿ ಕಾರಟ್ ಕೂಡ ಒಬ್ಬರು.
ಒಂದು ವೇಳೆ ಪ್ರಕಾಶ್ ಕಾರಟ್ ಮತ್ತು ಹಿಂಸಾ ನಿರತ ಅವರ ಕಾಮ್ರೆಡ್‌ಗಳು ಇತಿಹಾಸ ಪುಟಗಳಿಂದ ಮರೆಯಾಗಿ ಹೋದರೆ ಅದರಲ್ಲಿ ಬೇರೆಯವರ ತಪ್ಪಂತೂ ಇರಲಾರದು. ಇದೇನೇ ಇದ್ದರೂ ಮೂರನೇ ಪರ್ಯಾಯವೊಂದಕ್ಕೆ ಕಾದಿರುವ ಭಾರತಕ್ಕೆ ಕಮ್ಯುನಿಸ್ಟರಂತೂ ಕಾಣಿಸುತ್ತಿಲ್ಲ ಎನ್ನುವುದಂತೂ ಸತ್ಯ.
-ಟಿಜೆ ಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

