ಆತ ಮಾದರಿ ಅಲ್ಲ, ಆದರೆ ಎಚ್ಚರಿಕೆಯೂ ಆಗಲಿಲ್ಲವಲ್ಲಾ!
ಸೆಪ್ಟೆಂಬರ್ 24,1988. ಸೋಲ್ ನಗರ ನಳನಳಿಸುತ್ತಿತ್ತು. ಒಲಿಂಪಿಕ್ ಆಟೋಟದ...

ಸೆಪ್ಟೆಂಬರ್ 24,1988. ಸೋಲ್ ನಗರ ನಳನಳಿಸುತ್ತಿತ್ತು. ಒಲಿಂಪಿಕ್ ಆಟೋಟದ ಸ್ಫೂರ್ತಿಯಲ್ಲಿ ಮಿಂದು ಮುಳುಗಿತ್ತು. ಆಟೋಟ ಅಂತಿಮ ಚರಣ ಪ್ರವೇಶಿಸಿತ್ತು. ಅನೇಕರು ಹೀರೋಗಳಾಗಿದ್ದರು. ಹಲವರು ಹೇಳ ಹೆಸರಿಲ್ಲದಂತಾಗಿದ್ದರು. ಅಂದು ಸಂಜೆ ಸೂರ್ಯ ವಿದಾಯ ಹೇಳುವ ಹೊತ್ತಿಗೆ ಮುಖ್ಯ ಕ್ರೀಡಾಂಗಣದಲ್ಲಿ ಮೈನವಿರೇಳಿಸುವ ಕಾಳಗಕ್ಕೆ ವೇದಿಕೆ ಸಿದ್ಧವಾಗಿತ್ತು. ಜಗತ್ತಿನ ಅತಿವೇಗದ ಮನುಷ್ಯ ಯಾರೆಂಬುದು ನಿರ್ಧಾರವಾಗಲಿತ್ತು. ಎಲ್ಲರ ಕಣ್ಣು, ಕ್ಯಾಮೆರಾ 100 ಮೀ. ಓಟದ ಟ್ರ್ಯಾಕ್ ಮೇಲೆ ನೆಟ್ಟಿತ್ತು. ಅಷ್ಟೇಕೆ, ಜಗತ್ತೇ ತನ್ನ ಕಾರ್ಯಚಟುವಟಿಕೆಗೆ ಅಲ್ಪವಿರಾಮ ಹಾಕಿ ಅರೆಕ್ಷಣ ಅತ್ತ ಇಣುಕಿ ನೋಡಿದಂತಿತ್ತು. ಇತ್ತೀಚಿನ ವರ್ಷಗಳಲ್ಲಿ ಬೋಲ್ಟ್ ಎಂಬ ಬಿರುಗಾಳಿ ಈ ಓಟಗಳಿಗೆ ಏಕತಾತನೆಯ ಲೇಪ ಹಚ್ಚಿದೆ. ಆದರೆ ಆಗ ಅಂತಹ ಪ್ರಭುತ್ವ ಇರಲಿಲ್ಲ. ಆ ಓಲಿಂಪಿಕ್ಸ್‌ಗೆ ಮುನ್ನ ಅಮೆರಿಕ ಮುಟ್ಟಿದ್ದನ್ನೆಲ್ಲ ಬಾಚಿಕೊಳ್ಳುವ ಉಮೇದಿನಲ್ಲಿತ್ತು. ಎಂಟು ವರ್ಷಗಳ ನಂತರ ಅಮೆರಿಕ ಮತ್ತು ರಷ್ಯ ಓಲಿಂಪಿಕ್ಸ್ ಅಂಗಳದಲ್ಲಿ ಮುಖಾಮುಖಿಯಾಗಿದ್ದವು. ಶೀತಲಸಮರ ಅಂತ್ಯಗೊಂಡಿದ್ದರೂ ರಷ್ಯವನ್ನು ಒಂದು ಕೈ ನೋಡಿಕೊಳ್ಳಬೇಕು ಎಂಬ ಮನೋಭಾವ ಅಮೆರಿಕಕ್ಕಿತ್ತು. ಅದಕ್ಕೆಂದೇ ತನ್ನ ಟ್ರ್ಯಾಕ್ ಅಥ್ಲೀಟ್‌ಗಳಿಗೆ ಇನ್ನಿಲ್ಲದ ಪ್ರೋತ್ಸಾಹ, ಉತ್ತೇಜನ ನೀಡಿತ್ತು. ಎಲ್ಲ ಸ್ಪರ್ಧೆಗಳಲ್ಲೂ ತಾನೇ ಮುಂದಾಗಬೇಕೆಂಬ ಮಹದಾಸೆ ಹೊಂದಿತ್ತು. ಅದಕ್ಕೆ ಪೂರಕವಾಗಿ ಕಾರ್ಲ್ ಲೂಯಿಸ್ ಎಂಬ ಚಿಗರೆ ಗರಿಗೆದರಿ ನಿಂತಿತ್ತು. 1984ರ ಲಾಸ್ ಏಂಜಲಿಸ್ ಓಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಲೂಯಿಸ್ ಸೋಲ್ ಯಶಸ್ಸಿನ ಮೇಲೆ ಕಣ್ಣಿಟ್ಟಿದ್ದ. ಅದರಲ್ಲೂ ಓಲಿಂಪಿಕ್ಸ್‌ಗೆ ಮುನ್ನ 1987ರಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ತವಕಿಸಿದ್ದ. ಕಣದಲ್ಲಿ ಲೂಯಿಸ್‌ಗೆ ಸಡ್ಡು ಹೊಡೆಯಲು ಮಾಜಿ ವಿಶ್ವ ಚಾಂಪಿಯನ್ ಕೆಲ್ವಿನ್ ಸ್ಮಿತ್, ಲಿನ್‌ಫೋರ್ಡ್ ಕ್ರಿಸ್ಟಿ, ಡೆನಿಸ್ ಮಿಚೆಲ್ ಮುಂತಾದ ಘಟಾನುಘಟಿಗಳೇ ಇದ್ದರು. ರೇಸ್‌ಗೆ ಕ್ಷಣಗಣನೆ ಆರಂಭವಾಗಿತ್ತು. ಅಥ್ಲೀಟ್‌ಗಳು ಟ್ರ್ಯಾಕ್ ಮೇಲೆ ಅಭ್ಯಾಸ ಮಾಡುತ್ತಿದ್ದರು. ಲೂಯಿಸ್ ಲೇನ್ ಮೂರರಲ್ಲಿದ್ದರೆ, ಕ್ರಿಸ್ಟಿ ಲೇನ್ ನಾಲ್ಕು ಮತ್ತು ಸ್ಮಿತ್ ಲೇನ್ ಐದರಲ್ಲಿದ್ದರು. ಇವರ ಪಕ್ಕದ ಲೇನ್ ಅಂದರೆ ಆರನೇ ಲೇನ್‌ನಲ್ಲಿ ಕಬ್ಬಿಣದಲ್ಲಿ ಕಡೆದ ಮೂರ್ತಿಯಂತಹ ಕಾಯದ ಕೆನಡಾದ ಅಥ್ಲೀಟ್ ಆಗಲೇ ಬುಸುಗುಡುತ್ತಾ ನಿಂತಿದ್ದ. ತನ್ನ ಚಿಮ್ಮು ಹಲಗೆಯನ್ನು ಸರಿಪಡಿಸಿಕೊಂಡು ಸುಂಟರಗಾಳಿಯಂತೆ ನೆಗೆದು ಓಡುವುದು, ನಾಲ್ಕು ಹೆಜ್ಜೆ ಹೋಗಿ ಮತ್ತೆ ಹಿಂತಿರುಗುವುದು ಮತ್ತೆ ಓಡುವುದು, ಹೀಗೆ ತನ್ನದೇ ಆದ ರೀತಿಯ ಅಭ್ಯಾಸ ನಡೆಸಿದ್ದ. ಕೊನೆಗೂ ರೇಸ್ ಆರಂಭದ ಕ್ಷಣ ಬಂತು. ನೋಡುಗರ ಮುಖದಲ್ಲಿ ಕಾತರ ಇತ್ತು. ಲೂಯಿಸ್ ಮುಖದಲ್ಲಿ ತವಕ ಇತ್ತು. ಇನ್ನುಳಿದ ಅಥ್ಲೀಟ್‌ಗಳ ಮುಖದಲ್ಲಿ ಛಲವಿತ್ತು. ಆದರೆ ಲೇನ್ ಆರರಲ್ಲಿ ಓಡುತ್ತಿದ್ದ ಅಥ್ಲೀಟ್‌ನ ಕಣ್ಣಲ್ಲಿ ಮಾತ್ರ ಧೃಡತೆ ಇತ್ತು. ಅದಮ್ಯ ಆತ್ಮವಿಶ್ವಾಸ, ಇವತ್ತು ಗೆದ್ದೇ ಗೆಲ್ಲುತ್ತೇನೆ ಎಂಬ ಉಮೇದು ಇತ್ತು.
ಮೈದಾನದಲ್ಲಿದ್ದ 70 ಸಾವಿರ ಮಂದಿಯ ಕಣ್ಣು ಈ ಕ್ರೀಡಾಳುಗಳ ಮೇಲೆ ನೆಟ್ಟಿತ್ತು. ರೆಫರಿ ರೇಸ್ ಆರಂಭ ಸೂಚಿಸುವ ಪಿಸ್ತೂಲಿನ ಟ್ರಿಗರ್ ಒತ್ತುತ್ತಿದ್ದಂತೆಯೇ ಹಸಿದ ಹೊಟ್ಟೆಗೆ ಬಲಿಪ್ರಾಣಿ ಸಿಕ್ಕಾಗ ಚಿರತೆ ನೆಗೆಯುವಂತೆ ನೆಗೆದ ಆ ಕಾಯ, ಧೃಡವಾಗಿ ಟ್ರ್ಯಾಕ್ ಮೇಲೆ ಹೆಜ್ಜೆ ಇಟ್ಟು ಬಿರುಸಾಗಿ ಓಡಲಾರಂಭಿಸಿತು. ಆತ ಧರಿಸಿದ್ದ ದಪ್ಪಎಳೆಯ ಚಿನ್ನದ ಸರ ಕೊರಳಿನ ಅತ್ತಿಂದಿತ್ತ ರಭಸವಾಗಿ ಬಡಿಯುತ್ತಿತ್ತು. ಲೂಯಿಸ್ ಹಿಂದೆ ಬಿದ್ದಿದ್ದ. 10,20,30 ಮೀಟರ್ ಕ್ರಮಿಸುವ ವೇಳೆಗೆ ಲೂಯಿಸ್‌ಗೆ ತನ್ನ ಮುಂದಿರುವ ಸವಾಲಿನ ತೀವ್ರತೆಯ ಅರಿವಾಗಿತ್ತು. 50 ಮೀಟರ್ ದಾಟುವ ವೇಳೆಗೆ ಚಿನ್ನದ ಪದಕ ತನ್ನ ಕೈ ತಪ್ಪುವ ಸ್ಪಷ್ಟ ಸೂಚನೆ ಲೂಯಿಸ್‌ಗೆ ಸಿಕ್ಕಿತ್ತು. ವೇಗ ಹೆಚ್ಚಿಸಿಕೊಳ್ಳಲು ಆತ ಎಷ್ಟೇ ಪ್ರಯತ್ನಿಸಿದರೂ ಆತನ ಮುಂದಿದ್ದ ಅಥ್ಲೀಟ್‌ನ ಮುನ್ನಡೆ ಇನ್ನೂ ಹೆಚ್ಚುತ್ತಲೇ ಸಾಗಿತು. ಸುಮಾರು ಎರಡು ಮೀಟರ್‌ನಷ್ಟು ಆತ ಮುಂದೆ ಸಾಗಿದ್ದ. ಆತ ಓಡುತ್ತಿದ್ದಾನೋ ಇಲ್ಲ ಗಾಳಿಯಲ್ಲಿ ತೇಲುತ್ತಿದ್ದಾನೋ ಎಂಬ ಭ್ರಮೆ ಎಲ್ಲರಲ್ಲೂ ಆವರಿಸಿತು. ಕಣ್ಣು ಮಿಟುಕಿಸಲೂ ಯಾರಿಗೂ ಆಸ್ಪದ ಸಿಗಲಿಲ್ಲ. ನೋಡ ನೋಡುತ್ತಿದ್ದಂತೆಯೇ ರೇಸ್ ಮುಗಿದೇ ಹೋಯಿತು. 9.79 ಸೆಕೆಂಡ್‌ಗಳಲ್ಲಿ ಗಡಿಯಾರ ನಿಂತಿತು. ಹೊಸ ವಿಶ್ವ ದಾಖಲೆ ಬರೆದಾಗಿತ್ತು. ಗುರಿ ದಾಟಿದ ನಂತರವೂ ಆತನ ಕಾಲುಗಳು ನಿಲ್ಲಲಿಲ್ಲ. ಕ್ರೀಡಾಂಗಣದ ಸುತ್ತ ಹೆಜ್ಜೆ ಹಾಕಿ, ಕೇಕೆ ಹಾಕಿ ನಗುತ್ತಿದ್ದ. ಲೂಯಿಸ್‌ಗೆ ಬಂದೆರಗಿದ ಸೋಲಿನ ಗಾಯದ ಮೇಲೆ ತುಪ್ಪ ಸವರಿದ್ದ. ಆತ ಬೇರಾರೂ ಅಲ್ಲ, ಬೆನ್ ಜಾನ್ಸನ್. ಕೇವಲ ಒಂಬತ್ತೂ ಮುಕ್ಕಾಲು ಸೆಕೆಂಡುಗಳಲ್ಲಿ ಬೆನ್ ಜಗತ್ತಿನ ಡಾರ್ಲಿಂಗ್ ಆಗಿಬಿಟ್ಟ. ಮನುಷ್ಯನ ಸಾಮರ್ಥ್ಯದ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ್ದ. ಈತನ 9.79 ಸೆಕೆಂಡ್‌ಗಳಿಗೆ ಪ್ರತಿಯಾಗಿ ಲೂಯಿಸ್ 9.92 ಸೆಕೆಂಡ್ ತೆಗೆದುಕೊಂಡಿದ್ದ. ಜಗತ್ತಿನ ಮಾಧ್ಯಮಗಳು ಇದನ್ನು ಇತಿಹಾಸ ಎಂದೂ, ಮರೆಯಲಾಗದ ಶ್ರೇಷ್ಠ ರೇಸ್ ಎಂದೂ ಬಣ್ಣಿಸಿದವು. ಅಂದು ಜಾನ್ಸನ್ ಮುಖದಲ್ಲಿ, ಮಾತಿನಲ್ಲಿ, ವರ್ತನೆಯಲ್ಲಿ ಸಾಧನೆಯ ಸಂತೃಪ್ತಿಯ ಜೊತೆಗೆ ಕೀರ್ತಿ ತರುವ ಅಹಂಕಾರವೂ ಧಾರಾಳವಾಗಿ ಮಿಳಿತವಾಗಿತ್ತು. ಇಬ್ಬರ ನಡುವೆ 1985ರಿಂದ ಆರಂಭವಾಗಿದ್ದ ವೈರತ್ವಕ್ಕೆ ಅಂದು ನಿರ್ಣಾಯಕ ಮುದ್ರೆ ಬಿದ್ದಿತ್ತು. 1987ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಲೂಯಿಸ್ ವಿರುದ್ಧ ಸಾಧಿಸಿದ್ದ ಜಯ Fluke ಅಲ್ಲ ಎಂಬುದನ್ನು ಜಾನ್ಸನ್ ನಿರೂಪಿಸಿದ್ದ. ಇನಾಮುಗಳ ಉದ್ಘೋಷ ಸಾಗಿತ್ತು. ಸೋಲ್‌ನಿಂದ ಮರಳಿದ ಮೇಲೆ ಜಾನ್ಸನ್ ಕೊರಳಿಗೆ ಕೋಟಿಗಳ ಸರ ಹಾಕಲು ಪ್ರಾಯೋಜಕರು ಕಾದಿದ್ದರು. ಓಲಿಂಪಿಕ್ಸ್‌ನಲ್ಲಿ ಇದು ಬಿಟ್ಟು ಬೇರೆ ಕ್ರೀಡೆಗಳೇ ಇಲ್ಲವೇನೋ, ಬೇರೆ ಯಾರೂ ಗೆದ್ದೇ ಇಲ್ಲವೇನೋ ಎಂಬಂತೆ ಜಾನ್ಸನ್ ಆವರಿಸಿಕೊಂಡಿದ್ದ. ಬದುಕಿನ ಸುಂದರ ಸ್ವಪ್ನಗಳಲ್ಲಿ ಜಾನ್ಸನ್ ತೇಲಾಡಲಾರಂಭಿಸಿದ.
ಆದರೆ! ಈ ಸ್ವಪ್ನಲೋಕದಿಂದ ಬಡಿದೆಬ್ಬಿಸಿ ಆತನನ್ನು ಧರೆಗುರಳಿಸಲು ಕೇವಲ 52 ಗಂಟೆ ಸಾಕಾಯಿತು. ಎರಡು ದಿನ ಕೂಡ ಆಗಿರಲಿಲ್ಲ. ಆಗಲೇ ಜಾನ್ಸನ್ ಮುಖದಲ್ಲಿ ಸಾಧನೆಯ ಸಂತೃಪ್ತಿಯ ಬದಲು ಕದ್ದು ಸಿಕ್ಕಿಬಿದ್ದ ಕಳ್ಳನ ಆತಂಕ ಇತ್ತು. ಜಯದ ಅಹಂಕಾರದ ಬದಲು ಮುಂದಾಗಬಹುದಾದ ಅಪಮಾನ, ಅವಹೇಳನಗಳನ್ನು ಹೇಗೆ ನಿಭಾಯಿಸುವುದು ಎಂಬ ಅಂಜಿಕೆ ಮನೆ ಮಾಡಿತ್ತು. ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಜಾನ್ಸನ್ ನಿಷೇಧಿತ ಮಾದಕ ದ್ರವ್ಯ ಸೇವಿಸಿದ್ದು ಪತ್ತೆಯಾಯಿತು. ಒಂದಲ್ಲ, ಎರಡು ಬಾರಿ ಪರೀಕ್ಷಿಸಿದಾಗಲೂ ಜಾನ್ಸನ್ ಮಾದಕಗಳ ಸಖ್ಯ ಬೆಳೆಸಿದ್ದು ಸಾಬೀತಾಯಿತು. ಚಿನ್ನ ಗೆದ್ದಾಗ ವಿಶ್ವ ದಾಖಲೆ ಅಥವಾ ಚಿನ್ನದ ಪದಕ ಇವೆರಡರಲ್ಲಿ ಯಾವುದು ನಿನಗೆ ಹೆಚ್ಚಿನ ತೃಪ್ತಿ ನೀಡುತ್ತದೆ ಎಂದು ಕೇಳಿದಾಗ ಆತ ಹೇಳಿದ್ದು 'ಖಂಡಿತ ಚಿನ್ನದ ಪದಕ. ಏಕೆಂದರೆ ಯಾರೂ ಅದನ್ನು ನನ್ನಿಂದ ಕಸಿದುಕೊಳ್ಳಲಾರರು' ಎಂದಿದ್ದ. ಆದರೆ ಅದೂ ಸುಳ್ಳಾಯಿತು. ಡೋಪ್ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾಗುತ್ತಲೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತಾನೇ ಜಾನ್ಸನ್ ಕೊರಳಿಗೆ ಹಾಕಿದ್ದ ಚಿನ್ನದ ಪದಕವನ್ನು ಕಿತ್ತುಕೊಂಡು ಲೂಯಿಸ್ ಕೊರಳಿಗೆ ಹಾಕಿತು. ಈತನ 9.79 ಸೆಕೆಂಡ್‌ಗಳ ವಿಶ್ವದಾಖಲೆಯನ್ನು ಅಳಿಸಿ ಹಾಕಿತು. ಏಕಾಏಕಿ ಜಾನ್ಸನ್ ಎಲ್ಲ ದುರ್ನಡತೆ, ಕೆಟ್ಟತನಗಳ ಪ್ರತೀಕವಾಗಿ ನಿಂತಿದ್ದ. ಜಗತ್ತಿನ ಡಾರ್ಲಿಂಗ್ ಆಗಿದ್ದವ ವಿಲನ್ ಆದ. ಈತನನ್ನು ಜರೆಯಲು ಮಾಧ್ಯಮಗಳು ಪೈಪೋಟಿಗೆ ಬಿದ್ದವು. ಕೆನಡಾಗೆ ವಾಪಸಾದಾಗ ಜಾನ್ಸನ್‌ಗೆ ಬದುಕೇ ಭಾರ ಎನಿಸಿತ್ತು. ಕೆನಡಾದ ಒಂದು ಪತ್ರಿಕೆಯಂತೂ 'Thanks Ben, you bastard' ಎಂದು ಉಗಿದು ಬರೆದಿತ್ತು. ಸುತ್ತಲಿನ ಸಮಾಜ ಈತನನ್ನು ಅಸ್ಪೃಶ್ಯನಂತೆ ನೋಡಲಾರಂಭಿಸಿತು. ಜಗತ್ತು ಈತನ ಬದುಕಿಗೆ ಬೆನ್ನು ತಿರುಗಿಸಿ 25 ವರ್ಷಗಳಾಗಿದೆ. ಹಾಗೆಂದು ಜಾನ್ಸನ್‌ಗೆ ಪಶ್ಚಾತ್ತಾಪ ಇಲ್ಲ. ಕಳ್ಳ ಬೆಕ್ಕಿನಂತೆ ನಾನೇನೂ ಮಾಡಿಲ್ಲ ಎಂದು ಹೇಳಿಕೊಂಡಿಲ್ಲ. ವ್ಯವಸ್ಥೆಯ ಭಾಗವಾಗಿ, ವ್ಯವಸ್ಥೆಯ ಆಕಾಂಕ್ಷೆಗಳಿಗೆ ತಕ್ಕಂತೆ ತಾನು ಮದ್ದು ಸೇವಿಸಿದ್ದನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಈತನಿಗೆ ಬೇಸರ ಇರುವುದು ಒಂದೇ ಕಾರಣಕ್ಕೆ. 'ನಾನು ತಪ್ಪು ಮಾಡಿದ್ದೇನೆ, ಎಡವಟ್ಟು ಮಾಡಿಕೊಂಡಿದ್ದೇನೆ. ಆದರೆ ಕೊಲೆ, ಸುಲಿಗೆ ಮಾಡಿಲ್ಲ. ಆದರೂ ನನ್ನ ಸಮಾಜ ನನ್ನನ್ನು ಕೊಲೆಗಾರನಿಗಿಂತ ಕೀಳಾಗಿ ಕಂಡಿದೆ, ಕಾಣುತ್ತಿದೆ. ಅದೇ ನನಗೆ ಬೇಸರ ತರುವ ವಿಚಾರ' ಎನ್ನುತ್ತಾನೆ. ಆದರೆ ಜಾನ್ಸನ್‌ಗೆ ಸಮಾಜ ಮತ್ತೊಂದು ಅವಕಾಶ ನೀಡಲಿಲ್ಲ ಎಂದೇನಲ್ಲ. ಸೋಲ್ ಓಲಿಂಪಿಕ್ಸ್ ನಂತರ ವಿಧಿಸಲಾಗಿದ್ದ ನಿಷೇಧದ ಅವಧಿ ಮುಗಿದ ಬಳಿಕ 1992ರ ಬಾರ್ಸಿಲೋನಾ ಓಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅಂತಾರಾಷ್ಟ್ರೀಯ ಓಲಿಂಪಿಕ್ಸ್ ಸಮಿತಿ ಜಾನ್ಸನ್‌ಗೆ ಮತ್ತೊಂದು ಅವಕಾಶ ಕಲ್ಪಿಸಿತು. ಆದರೆ ಡೊಂಕುಬಾಲ ನೆಟ್ಟಗಾಗದು ಎಂಬ ಮಾತಿನಂತೆ ಜಾನ್ಸನ್ ತಪ್ಪು ತಿದ್ದಿಕೊಳ್ಳಲಿಲ್ಲ. ಅಲ್ಲಿಯೂ ಮಾದಕ ದ್ರವ್ಯ ಸೇವಿಸಿ ಸಿಕ್ಕಿಬಿದ್ದ. ಆನಂತರ ಬಂದಿದ್ದೇ ಆಜೀವ ನಿಷೇಧ. ವ್ಯವಸ್ಥೆ ಬದಲಾಗಲೇ ಇಲ್ಲ.
ಸೋಲ್ ಒಲಿಂಪಿಕ್ಸ್ ನಂತರ 1989ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ Dope Testing ಕಡ್ಡಾಯಗೊಳಿಸಿದೆ. ಕ್ರೀಡೆಯನ್ನು ಮಾದಕ ಜಾಲದಿಂದ ಮುಕ್ತಗೊಳಿಸುವುದಾಗಿ ಘೋಷಿಸಿತು. ಸಹಜ ಸಾಮರ್ಥ್ಯದ ಅಥ್ಲೀಟ್‌ಗಳಿಗಷ್ಟೇ ಮಣೆ ಹಾಕುವುದಾಗಿ ಹೇಳಿತ್ತು. ಆದಾಗಿ 24 ವರ್ಷ ಕಳೆದಿದೆ. ಆದರೆ, ಪರಿಸ್ಥಿತಿ ಬದಲಾಗಿಲ್ಲ. ಏನಾದರೂ ಬದಲಾವಣೆ ಆಗಿದ್ದರೆ Dope ಎಂಬುದು ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಮೇಲಾಗಿ ಅಥ್ಲೀಟ್‌ಗಳನ್ನು ರೂಪಿಸುವ, ಅವರನ್ನು ಅಣಿಗೊಳಿಸುವ ವ್ಯವಸ್ಥೆಯ ಭಾಗವಾಗಿ ಉಳಿದುಕೊಂಡಿದೆ. ಬಹುತೇಕ ಎಲ್ಲ ಕ್ರೀಡೆಗಳಲ್ಲೂ ಇಂದು ಮಾದಕ ದ್ರವ್ಯದ ನೆರವು ಪಡೆವ ಅಥ್ಲೀಟ್‌ಗಳಿದ್ದಾರೆ. ಅವರ ಸಾಧನೆ ಮೆಚ್ಚಿ ವಾಹ್! ಎಂದು ಕುಣಿದಾಡುವ ಜನ ಮಾರನೆ ಬೆಳಗ್ಗೆ ಆತನ ಸಾಧನೆ ಮೋಸ ಮಾರ್ಗದಿಂದ ಬಂದದ್ದು ಎಂದು ತಿಳಿದ ಕೂಡಲೇ ಥೂ, ಛೀ... ಎಂದು ಉಗಿಯುವುದು ನಿಂತಿಲ್ಲ. ಜಾನ್ಸನ್ ನಿಷೇಧದ ಲಾಭ ಪಡೆದು 1988ರಲ್ಲಿ ಕಂಚಿನ ಪದಕದಿಂದ ರಜತ ಪದಕಕ್ಕೆ ಬಡ್ತಿ ಪಡೆದು 1992ರಲ್ಲಿ ಚಿನ್ನದ ಪದಕ ಗೆದ್ದ ಲಿನ್‌ಫೋರ್ಡ್ ಕ್ರಿಸ್ಟಿ ಸಹ ಮಾದಕ ವಸ್ತು ಸೇವನೆಗಳಿಂದ ಮುಕ್ತನಾಗಿರಲಿಲ್ಲ ಎಂಬುದು ಬಹಿರಂಗವಾಯಿತು. ತೀರಾ ಇತ್ತೀಚೆಗಷ್ಟೇ ವಿಶ್ವ ಸೈಕ್ಲಿಂಗ್‌ನ ಉತ್ತುಂಗದಿಂದ ಆರ್ಮ್‌ಸ್ಟ್ರಾಂಗ್ ನೆಲಕ್ಕುರುಳಿದ. ಅಷ್ಟೇಕೆ, ಕಾರ್ಲ್ ಲೂಯಿಸ್‌ಗೂ ಮಾದಕದ ಕಳಂಕ ಬಿಡಲಿಲ್ಲ. ಆದರೆ ಅದು 1989ರ ನಿಯಮಾವಳಿಗಳಿಗಿಂತ ಮೊದಲು ಸಂಭವಿಸಿದ್ದರಿಂದ ಮತ್ತು ಅಮೆರಿಕ ಒಲಿಂಪಿಕ್ಸ್ ಸಂಸ್ಥೆ ಈ ಕಟು ಸತ್ಯಕ್ಕೆ ಕುರುಡಾಗಿದ್ದರಿಂದ ಲೂಯಿಸ್ ಬಚಾವಾದ. ಲೂಯಿಸ್‌ನಂತೆಯೇ ಭಾರೀ ಜನಪ್ರಿಯತೆ ಗಳಿಸಿ ಹಲವಾರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ ಮಾರಿಯಾನ್ ಜೋನ್ಸ್ ಮಾದಕ ನಂಟಿಗಾಗಿ ಸರಳುಗಳ ಹಿಂದೆ ಹೋಗಬೇಕಾಯಿತು. ಈಗ ಏನಾದರೂ ಮಾಡಿ ಬೋಲ್ಟ್‌ನ ಅಧಿಪತ್ಯ ಮುರಿಯಬೇಕು ಎಂದು ತೊಡೆತಟ್ಟಿ ನಿಂತಿದ್ದ ಅಥ್ಲೀಟ್‌ಗಳ ದೊಡ್ಡ ಗುಂಪೇ ಮಾದಕ ಸೇವಿಸಿದ ಕಾರಣ ನಿಷೇಧಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿಯೂ ಅನೇಕ ಮಂದಿ ಅಥ್ಲೀಟ್‌ಗಳು, ವೇಟ್‌ಲಿಫ್ಟರ್, ಬಾಕ್ಸರ್‌ಗಳು ಸಿಕ್ಕಿಬಿದ್ದಿದ್ದಾರೆ, ಬೀಳುತ್ತಲೂ ಇದ್ದಾರೆ. ಇವರ್ಯಾರೂ ತಾವಾಗಿಯೇ ಮಾದಕ ನೆರವಿಗೆ ಮುಂದಾದವರಲ್ಲ. ಬದಲಿಗೆ ವ್ಯವಸ್ಥೆಯೇ ಅವರನ್ನು ಈ ಸ್ಥಿತಿಗೆ ತಳ್ಳುತ್ತದೆ. ಕೋಚ್‌ಗಳು, ಅಕಾಡೆಮಿಗಳು, ತರಬೇತುದಾರರು... ಹೀಗೆ ಅನೇಕರು ಇದರ ಭಾಗವಾಗಿದ್ದಾರೆ. ಖಂಡಿತಾ ಬೆನ್‌ಜಾನ್ಸನ್ ಯಾರಿಗೂ ಮಾದರಿ ಅಲ್ಲ. ಆತ ಎಚ್ಚರಿಕೆ. ಆದರೆ ಈ ಎಚ್ಚರಿಕೆಗೂ ಯಾರೂ ಬಗ್ಗುತ್ತಿಲ್ಲ.
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


