ಅಂಕಣಗಳು

ಒಳಗೊಳಗೆ ಗರಿ ಬಿಚ್ಚುತ್ತಿದೆ ಲೋಕ ಚುನಾವಣೆಯ ಗುರಿ

ಲೋಕಸಭೆ ಚುನಾವಣೆ ಸದ್ದಿಲ್ಲದೆ ಸಮೀಪಿಸುತ್ತಿದೆ ಇನ್ನಾರು ತಿಂಗಳೊಳಗೆ...

Published On :

ಲೋಕಸಭೆ ಚುನಾವಣೆ ಸದ್ದಿಲ್ಲದೆ ಸಮೀಪಿಸುತ್ತಿದೆ. ಇನ್ನಾರು ತಿಂಗಳೊಳಗೆ ಯಾವಾಗ ಬೇಕಾದರೂ ನಡೆಯಬಹುದು. ಕೇಂದ್ರ ಸರ್ಕಾರ ಅವಧಿ ಪೂರೈಸಿದರೆ ಆರು ತಿಂಗಳು, ಇಲ್ಲದಿದ್ದರೆ ಅದಕ್ಕೆ ಮೊದಲು.
ರಾಷ್ಟ್ರಮಟ್ಟದಲ್ಲಿ ಈಗಾಗಲೇ ವಿಭಿನ್ನ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ. ಒಂದೆಡೆ ಯುಪಿಎ ಸರ್ಕಾರದ ಆಡಳಿತ ವಿರೋಧಿ ಅಲೆ. ಇನ್ನೊಂದೆಡೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಬಿಂಬಿತ ನರೇಂದ್ರ ಮೋದಿ ಮೋಡಿಯ ಬಲೆ. ಇವೆರಡರ ಮಧ್ಯೆ ತೃತೀಯರಂಗ ಅರಸುತ್ತಿರುವ ನೆಲೆ.
ದಿಲ್ಲಿಯಲ್ಲಿ ಹೇಗೋ ಹಾಗೆ ಕರ್ನಾಟಕದ ರಾಜಕೀಯ ಬಾನಲ್ಲೂ ಹೋಳಿಯ ರಂಗು. ಆದರೆ ಬಣ್ಣಗಳ ಮಿಶ್ರಣದಿಂದ ಎಲ್ಲ ಪಕ್ಷಗಳ ನಡೆ ಮುಸುಕು, ಮುಸುಕು. ಆ ಮುಸುಕು ಸರಿಸಿ ಚಿತ್ತಾರ ಮೂಡಿಸುವ ತವಕ ಜತೆಗೂಡಿರುವುದರಿಂದ ಎಲ್ಲ ಪಕ್ಷಗಳಲ್ಲೂ ಚುನಾವಣೆಪೂರ್ವ ತಾಲೀಮು ಆರಂಭವಾಗಿದೆ. ವಿಧಾನಸಭೆ ಚುನಾವಣೆ ಜತೆಜತೆಗೆ ಯಶಸ್ಸಿನ ಬೆನ್ನೇರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶತಾಯಗತಾಯ ಅದನ್ನು ಉಳಿಸಿ, ಬೆಳೆಸುವ ಸಂಕಲ್ಪ. ಅಡೆತಡೆಯಿಲ್ಲದ ಅಧಿಕಾರ ಮುಂದುವರಿಕೆಗೆ ಅದು ಅನಿವಾರ್ಯ ಕೂಡ. ಆದರೆ 'ಸ್ವಯಂ ರಚಿತ ಪರಿಧಿ'ಯ ಕಾಪು ಕಟ್ಟಿಕೊಂಡಿರುವ ಸಿದ್ದರಾಮಯ್ಯನವರ ವೇಗಕ್ಕೆ ಕಡಿವಾಣ ಹಾಕಲು ಹೈಕಮಾಂಡ್‌ನಿಂದ ಸಮನ್ವಯ ಸಮಿತಿ ರಚನೆ. ಸರ್ಕಾರ ಮತ್ತು ಪಕ್ಷದ ನಡುವೆ ಸಂಪರ್ಕಸೇತು ಆಗಬೇಕೆಂಬ ಮೂಲ ಉದ್ದೇಶದ ಹಿಂದೆ ಲಗಾಮಿನ ಪರಿಕಲ್ಪನೆ. ಈ ವೈರುಧ್ಯಗಳ ನಡುವೆ ತಮ್ಮ-ತಮ್ಮ ಬೇಳೆ ಬೇಯಿಸಿಕೊಳ್ಳಲು ಅಧಿಕಾರ ಕಲ್ಪಿತರು ಹಾಗೂ ವಂಚಿತರು ಸಂಘರ್ಷ ನಿರತರಾಗಿರುವುದರಿಂದ ಆಡಳಿತ ಪಕ್ಷದೊಳಗೇ ಉಳಿದೆಲ್ಲ ಪಕ್ಷಗಳಿಗಿಂತ ಹೆಚ್ಚಿನ ಗುಡುಗು-ಮಿಂಚು.
ಇನ್ನೊಂದೆಡೆ ಅಧಿಕಾರ ಕಳೆದುಕೊಂಡ, ಗಳಿಸಿಕೊಳ್ಳಲಾಗದ ಪ್ರತಿಪಕ್ಷಗಳಲ್ಲೂ ಚುನಾವಣೆಯ ಚಳಕು. ನರೇಂದ್ರ ಮೋದಿ ದೆಸೆಯಿಂದ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಭಾರತದಲ್ಲಿ ಅಧಿಕಾರದ ಹೆಬ್ಬಾಗಿಲು ತೆರೆದುಕೊಟ್ಟ ಕರ್ನಾಟಕ ಈಗ ಪಕ್ಷವನ್ನು ಬಡಿದು ಮಲಗಿಸಿದೆ. ಈಗ ಮಲಗಿದ್ದಲ್ಲಿಂದೆದ್ದು ಮೋದಿ ಅಲೆಗೆ ಚಾಮರ ಬೀಸುವ ಜವಾಬ್ದಾರಿ ಕರ್ನಾಟಕ ಬಿಜೆಪಿ ಹೆಗಲಿಗೆ ಬಿದ್ದಿದೆ. ಹೀಗಾಗಿ ಹಿಂದೆ ಪಕ್ಷದಿಂದ ಸಿಡಿದು ಹೋದ ಗುಂಡುಗಳನ್ನು ಮತ್ತೆ ಆರಿಸಿ, ತಂದು ಪೋಣಿಸುವ ಕಾಯಕದಲ್ಲಿ ಅದು ನಿರತವಾಗಿದೆ. ಅಂತೆಯೇ ಪಕ್ಷದಿಂದ ಹೊರಬಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬೆಂಬಲಿಗರಿಗೂ ತವರು ಸೇರುವ ತವಕ ಅನಿವಾರ್ಯವಾಗಿದೆ. ಈ ಈಡು-ಜೋಡು ಸರಿಪಡಿಸುವ ಕೆಲಸಕ್ಕೂ ಭಿನ್ನರಾಗದ ಹಿಮ್ಮೇಳವಿದೆ.
ಅದೇ ರೀತಿ 1994 ರಲ್ಲಿ ಸ್ವಂತ ಬಲದಿಂದ ಅಧಿಕಾರ ಗಳಿಸಿದ ನಂತರ ಬರೀ ಸಮ್ಮಿಶ್ರ ಸರ್ಕಾರಗಳ ಸಂದಿಯಲ್ಲಿ ಸಮಾರಾಧನೆ ಮಾಡುತ್ತಿದ್ದ ಜಾತ್ಯತೀತ ಜನತಾ ದಳಕ್ಕೂ ಲೋಕಸಭೆ ಚುನಾವಣೆ ಅಳಿವು-ಉಳಿವಿನ ಪ್ರಶ್ನೆ ತಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ಸ್ಥಾನಕ್ಕೂ, ಮಂಡ್ಯ ಮತ್ತು ರಾಮನಗರ ಲೋಕಸಭೆ ಕ್ಷೇತ್ರಗಳ ಮರುಚುನಾವಣೆಯಲ್ಲಿ ನೇಪಥ್ಯಕ್ಕೂ ಸರಿದುಹೋದ ಜೆಡಿಎಸ್ ಇದೀಗ ಆಂತರಿಕ ಸಮಸ್ಯೆಗಳಿಗೂ ಸಿಕ್ಕಿಹಾಕಿಕೊಂಡಿದೆ. ನಾಯಕರಿಗೆ ಈಗ ಸಿಕ್ಕಾಪಟ್ಟೆ ಜವಾಬ್ದಾರಿ. ಒಂದೆಡೆ ಒಳಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕು. ಇನ್ನೊಂದೆಡೆ ಚುನಾವಣೆಯಲ್ಲಿ ಪಕ್ಷವನ್ನು ದಡ ಮುಟ್ಟಿಸಬೇಕು. ಇವೆರಡರ ಮಧ್ಯೆ ಕಂಡು-ಕಾಣದಂತೆ ಸಿದ್ದರಾಮಯ್ಯನವರ ತಂಡ ಹೆಣೆಯುತ್ತಿರುವ 'ಪಕ್ಷಭಂಜನೆ' ತಂತ್ರಗಳಿಂದ ಬಚಾವು ಮಾಡಬೇಕು. ಹೀಗಾಗಿ ನಾಯಕರು ಪ್ರತಿತಂತ್ರ 'ಶ್ರಮದಾನ'ದಲ್ಲಿ ನಿರತರಾಗಿದ್ದಾರೆ.
ಉತ್ತರದ ರಾಜ್ಯಗಳಿಗೆ ಅಥವಾ ದಕ್ಷಿಣದ ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಲೋಕಸಭಾ ಸ್ಥಾನಗಳು ಕಡಿಮೆ. ಇಲ್ಲಿರುವುದು 28 ಲೋಕಸಭಾ ಕ್ಷೇತ್ರಗಳು. ಆದಾಗಿಯೂ ತಾಂತ್ರಿಕ ದೃಷ್ಟಿಯಿಂದ ಇಲ್ಲಿ ಅಧಿಕ ಸ್ಥಾನ ಗಳಿಸುವುದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ. ಏಕೆಂದರೆ ಉಳಿದ ರಾಜ್ಯಗಳ ಹಾಗೆ ಇಲ್ಲಿ ಬಹುಪಾಲು ಸ್ಥಾನಗಳು ಪ್ರಾದೇಶಿಕ ಪಕ್ಷಗಳ ಮಧ್ಯೆ ಹಂಚಿ ಹೋಗುವುದಿಲ್ಲ. ಉಭಯ ಪಕ್ಷಗಳ ನಡುವೆ ನೇರ ಹಣಾಹಣಿ ಇರುತ್ತದೆ. ಕಳೆದ ಎರಡು ದಶಕಗಳ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಿದಾಗ ರಾಜ್ಯದ ಮತದಾರನ ನಡೆ ಬೇರೆಯಾಗಿರುವುದು ಕಂಡು ಬಂದಿದೆ. ಆತ ರಾಜ್ಯ ಹಾಗೂ ರಾಷ್ಟ್ರೀಯ ವಿದ್ಯಮಾನಗಳನ್ನು ವಿಶ್ಲೇಶಿಸುವ ಪರಿ ಭಿನ್ನ. ಬಿಜೆಪಿಯ ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್‌ಗೆ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿರುವ ಮತದಾರ ಪ್ರಭು, ಕೇಂದ್ರ ಸರ್ಕಾರದ ದುರಾಡಳಿತದ ಬಗ್ಗೆ ಬೇಸತ್ತಿದ್ದಾನೆ. ಹೀಗಾಗಿ ವಿಧಾನಸಭೆಯ ಚುನಾವಣೆಗೆ ನಡೆಸಿದ ತಂತ್ರಗಾರಿಕೆಯನ್ನೇ ಆಧರಿಸಿ ಲೋಕಸಭಾ ಹಣಾಹಣಿಗೆ ತಯಾರಾಗುವ ಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರು ಇಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯದ ಮಟ್ಟಿಗೆ ಎಲ್ಲ ರಾಜಕೀಯ ಪಕ್ಷಗಳ ಸದ್ಯದ ಗುರಿ ಕನಿಷ್ಠ 15 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು. ಆದರೆ ಇದು ನಿರೀಕ್ಷಿಸಿದಷ್ಟು ಸುಲಭವಲ್ಲ. ಮೋದಿ ಅಲೆಯಲ್ಲಿ ತೇಲುವುದಕ್ಕೆ ಸಿದ್ಧರಾಗಿರುವ ರಾಜ್ಯ ಬಿಜೆಪಿ ನಾಯಕರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿದ ಸೀಟು ಈ ಬಾರಿ ಉಳಿಯುವುದಿಲ್ಲ ಎಂಬ ಸತ್ಯ ಗೊತ್ತಿದೆ. ಕಳೆದ ಬಾರಿ ಪಕ್ಷ 19 ಸ್ಥಾನಗಳನ್ನು ಗೆಲ್ಲುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪಾತ್ರ ಹೆಚ್ಚಿತ್ತು. ಆದರೆ ಈ ಬಾರಿ ಅವರಾಗಲಿ, ಅವರ ಕಾರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವ ಪ್ರಬಲ ವೀರಶೈವ ಸಮುದಾಯವಾಗಲಿ ಪಕ್ಷದ ಜತೆಗಿಲ್ಲ. ಹೀಗಾಗಿಯೇ ಯಡಿಯೂರಪ್ಪನವರನ್ನು ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ.
ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ತಕ್ಷಣ ಈ ಪ್ರಯತ್ನ ಎಲ್ಲಿಲ್ಲದ ವೇಗ ಪಡೆದಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಪ್ರಕ್ರಿಯೆಗೆ ತಡೆ ಬಿದ್ದಿದೆ. ಇದಕ್ಕೆ ಒಂದೆಡೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅಡ್ಡಿಯಾದರೆ, ಇನ್ನೊಂದೆಡೆ ಕಾಂಗ್ರೆಸ್‌ನ ಪಂಜರದ ಗಿಣಿ ಸಿಬಿಐ ಭಯ ಕಾರಣವಾಗಿದೆ.
ಯಡಿಯೂರಪ್ಪನವರು ಪಕ್ಷಕ್ಕೆ ಬಂದರೆ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಅನಂತಕುಮಾರ್ ಅವರಿಗೆ ಸಂಪೂರ್ಣ ಮನಸ್ಸಿಲ್ಲ. ದೆಹಲಿಯಲ್ಲಿ ತಮ್ಮ ಸಂಸದ ಮಿತ್ರರ ಜತೆ ಅವರು ಈ ವಿಚಾರವನ್ನು ಅನೌಪಚಾರಿಕವಾಗಿ ಪ್ರಕಟಿಸಿದ್ದಾರೆ. ಈ ಸುದ್ದಿ ಕೆಜೆಪಿ ಪಕ್ಷದ ಬಾಗಿಲಿಗೂ ತಲುಪಿದೆ. ವಿಲೀನಕ್ಕೆ ಮುನ್ನವೇ ಕೇಳಿ ಬರುತ್ತಿರುವ ಇಂಥ ಮಾತುಗಳಿಂದ ಯಡಿಯೂರಪ್ಪ ಸಹಜವಾಗಿಯೇ ವಿಚಲಿತರಾಗಿದ್ದಾರೆ. ಹೀಗಾಗಿ ಮೋದಿ ನಾಯಕತ್ವವನ್ನು ಕೆಜೆಪಿ ಒಪ್ಪಿಕೊಳ್ಳುತ್ತದೆ. ಆದರೆ ಚುನಾವಣೆ ಸಂದರ್ಭದಲ್ಲಿ ಸೀಟು ಹೊಂದಾಣಿಕೆ ಮಾತ್ರ ಸಾಧ್ಯ ಎಂಬ ದಾಳವನ್ನು ಯಡಿಯೂರಪ್ಪನವರು ಈಗ ಪ್ರಯೋಗಿಸಿದ್ದಾರೆ. ಮಾತ್ರವಲ್ಲ ಕೆಜೆಪಿಗೆ ಗೆಲ್ಲುವ ಸಾಧ್ಯತೆ ಇರುವ 10 ಕ್ಷೇತ್ರಗಳಲ್ಲಿ ಸಂಘಟನೆಯನ್ನೂ ಆರಂಭಿಸಿದ್ದಾರೆ. ಹೀಗಾಗಿ ಬಿಜೆಪಿಗೆ ಯಡಿಯೂರಪ್ಪ ಪುನರಾಗಮನ ಪ್ರಕ್ರಿಯೆ ಮತ್ತೆ ನಿಧಾನವಾಗುತ್ತಿದೆ.
ಕೆಜೆಪಿ-ಬಿಜೆಪಿ ವಿಲೀನ ಮುಹೂರ್ತ ಮುಂದೆ ಹೋಗುತ್ತಿರುವುದರ ಹಿಂದೆ ಕಾಂಗ್ರೆಸ್ ಯೋಗದಾನವೂ ಸಾಕಷ್ಟಿದೆ. ಯಡಿಯೂರಪ್ಪ ಬಿಜೆಪಿಗೆ ವಾಪಸಾದರೆ 15ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಸಾಧಿಸುವುದು ಕಾಂಗ್ರೆಸ್‌ಗೆ ಕಷ್ಟವಾಗುತ್ತದೆ. ಇದಕ್ಕಾಗಿ ಸಿಬಿಐ ಎಂಬ ಪಂಜರದ ಪಕ್ಷಿಗೆ ಮುಕ್ತ ಹಾರಾಟ ನಡೆಸಲು ಅವಕಾಶ ನೀಡಿದೆ. ಬೇಲೆಕೇರಿ ಅದಿರು ಕಳ್ಳ ಸಾಗಣೆ ಪ್ರಕರಣ ಸಂಬಂಧ ಆರೋಪಿತ ಶಾಸಕರನ್ನು ಸರದಿಯಂತೆ ಸಿಬಿಐ ಅಧಿಕಾರಿಗಳು ಬಂಧಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಯಡಿಯೂರಪ್ಪನವರಲ್ಲೂ ಇದು ಸಣ್ಣದೊಂದು ಛಳುಕು ಹುಟ್ಟಿಸಿದೆ.
ಇನ್ನು ಕಾಂಗ್ರೆಸ್‌ಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕಸಭಾ ಚುನಾವಣೆ ನಿರ್ಣಾಯಕ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಲಿಖಿತ ಆದೇಶ ನೀಡಿದ್ದಾರೆ. ಪ್ರಧಾನಿ ರೇಸ್‌ನಲ್ಲಿರುವ ರಾಹುಲ್ ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೆಚ್ಚಿನ ಗೆಲುವು ಬಯಸುವುದು ಸಹಜ. ಆದರೆ ಆ ಆಸೆಯನ್ನು ನೆರವೇರಿಸುವ ಹೊಣೆಗಾರಿಕೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಕೈಯಲ್ಲಿರುತ್ತದೆ. ಕಳಪೆ ಪ್ರದರ್ಶನ ತೋರಿದ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣು ಬೀರುವ ಸಾಧ್ಯತೆ ಹೆಚ್ಚು.
ಹೀಗಾಗಿ ರಾಜ್ಯ ಕಾಂಗ್ರೆಸ್ ಮುಖಂಡರಿಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಲೋಕಸಭಾ ಚುನಾವಣೆ ಬಿಸಿ ಬಿದ್ದಿದೆ. ಒಂದೊಮ್ಮೆ ಕಾಂಗ್ರೆಸ್ 15ಕ್ಕಿಂತ ಕಡಿಮೆ ಸ್ಥಾನ ಗಳಿಸಿದರೆ, ಸಹಜವಾಗಿಯೇ ತಮ್ಮನ್ನು ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನಕ್ಕೆ ಮೂಲ ಕಾಂಗ್ರೆಸ್ಸಿಗರು ಯತ್ನಿಸಬಹುದು ಎಂಬ ಭೀತಿ ಅವರನ್ನು ಈಗಿನಿಂದಲೇ ಆವರಿಸುತ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯನವರು ತಮ್ಮದೇ ಆದ ತಂತ್ರಗಾರಿಕೆ ಹೆಣೆಯಲಾರಂಭಿಸಿದ್ದಾರೆ. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹೈಕಮಾಂಡ್ ಕೃಪೆಗೂ ಪಾತ್ರರಾಗಿರುವ ಅವರು, ಸಾರ್ವತ್ರಿಕ ಚುನಾವಣೆಯಲ್ಲಿ ವಿಫಲರಾಗದೇ ಇರುವುದಕ್ಕೆ ಪ್ರಯತ್ನ ಆರಂಭಿಸಿದ್ದಾರೆ.
ಈ ಪ್ರಯತ್ನಕ್ಕೆ ಪೂರಕವಾಗಿ ಮಂಡ್ಯದಲ್ಲಿ ಸೋಮವಾರ ಬೃಹತ್ ಸಮಾವೇಶವನ್ನು ಕಾಂಗ್ರೆಸ್ ಆಯೋಜಿಸಿದೆ. ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಆಗಮಿಸಲಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಲೋಕಸಭಾ ಚುನಾವಣೆಗೆ ಅಧಿಕೃತ ಸಿದ್ಧತೆಯ ಘೋಷಣೆ ಮೊಳಗಿಸುವ ಸಾಧ್ಯತೆ ಇದೆ.
ಇನ್ನು ಜೆಡಿಎಸ್ ತನ್ನದೇ ಆದ ಸಮಸ್ಯೆಯಿಂದ ಬಳಲುತ್ತಿದೆ. ಚುನಾವಣಾ ತಯಾರಿ ಜತೆಗೆ ಪಕ್ಷದಲ್ಲಿ ಹೊಂದಾಣಿಕೆ ಸಾಧಿಸುವ ದೊಡ್ಡ ಜವಾಬ್ದಾರಿ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲಿದೆ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್‌ನ್ನು ವಿಭಜಿಸುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಹಚ್ಚಿದ್ದಾರೆ ಎಂಬ ದಟ್ಟ ವದಂತಿ ಪಕ್ಷದ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಹೀಗಾಗಿ ಪಕ್ಷವನ್ನು ಉಳಿಸಿ-ಬೆಳೆಸುವ ಜವಾಬ್ದಾರಿಯನ್ನು ಪುತ್ರ ಕುಮಾರಸ್ವಾಮಿ ಅವರಿಂದ ದೇವೇಗೌಡರು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.
ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗಕ್ಕೆ ಸೇರಿದ ಎ.ಕೃಷ್ಣಪ್ಪನವರನ್ನು ನೇಮಕ ಮಾಡಿರುವ ಅವರು ಸಿದ್ದರಾಮಯ್ಯನವರ ಬುಟ್ಟಿಯಲ್ಲಿರುವ ಅಹಿಂದ ಮತಕ್ಕೆ ಕೈ ಹಾಕಿದ್ದಾರೆ. ಜತೆಗೆ ವಿಧಾನಸಭೆಯಲ್ಲಿ ಜೆಡಿಎಸ್ ಮುಖ್ಯ ಸಚೇತಕ ಸ್ಥಾನಕ್ಕೆ ತಮ್ಮ ಕುಟುಂಬ ವರ್ಗಕ್ಕೆ ಸೇರದೇ ಇರುವವರನ್ನು ನಿಯುಕ್ತಿಗೊಳಿಸಲು ಮುಂದಾಗಿದ್ದಾರೆ. ಇವೆಲ್ಲವೂ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ. ಅದರ ಜತೆಗೆ ಚುನಾವಣಾ ಗೆಲುವಿಗೂ ದೇವೇಗೌಡರು ಈಗಾಗಲೇ ತಂತ್ರ ರೂಪಿಸತೊಡಗಿದ್ದಾರೆ.
ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿ ಸೆಣೆಸುವ ಬದಲು, ಗೆಲ್ಲುವ ಸಾಧ್ಯತೆ ಇರುವ ಕಡೆಗಳಲ್ಲಿ ತನು-ಮನ-ಧನ ವಿನಿಯೋಗಕ್ಕೆ ಮುಂದಾಗಿದ್ದಾರೆ. ಗೆಲ್ಲುವ ಹಾಗೂ ಕಾಂಗ್ರೆಸ್ಸನ್ನು ಸೋಲಿಸಲು ಜೆಡಿಎಸ್‌ಗೆ ಅವಕಾಶ ಇರುವ 10 ಕ್ಷೇತ್ರಗಳನ್ನು ಅವರು ಈಗಾಗಲೇ ಗುರುತಿಸಿದ್ದಾರೆ.
ಹೀಗಾಗಿ ಲೋಕಸಭಾ ಚುನಾವಣೆಯ ಗುಂಗು ನಿಧಾನವಾಗಿ ಎಲ್ಲ ರಾಜಕೀಯ ಪಕ್ಷಗಳನ್ನು ಆವರಿಸತೊಡಗಿದೆ. ತಂತ್ರ-ಪ್ರತಿತಂತ್ರಗಳ ರಚನೆ ಗುಪ್ತವಾಗಿ ನಡೆಯುತ್ತಿದೆ. ಎಷ್ಟೇ ಪ್ರಯತ್ನ ನಡೆದರೂ ಅಂತಿಮವಾಗಿ ಮತದಾರನ ಕೃಪಾಕಟಾಕ್ಷ ಮುಖ್ಯ. ಆದ್ದರಿಂದ ಸದ್ಯಕ್ಕೆ ಎಲ್ಲ ರಾಜಕೀಯ ಪಕ್ಷಗಳ ಚಿತ್ತ ಮತ್ತೆ ಮತದಾರನತ್ತ.

ಲಗೋರಿ: ತನ್ನ ಗೆಲುವಿಗಿಂತ ಶತ್ರುವಿನ ಸೋಲಿನ ತಂತ್ರ ಹೆಣೆಯುವಲ್ಲೇ ರಾಜಕಾರಣಿಗೆ ಸುಖವಿದೆ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.