ಅಂಕಣಗಳು

ನ್ಯಾಯ ಸಿಕ್ಕಿರುವುದು ಕಾಗದದ ಮೇಲೆ ಮಾತ್ರ...

Published On :

ಗಂಡು -ಹೆಣ್ಣು ಎಲ್ಲ ರೀತಿಯಲ್ಲೂ ಸರಿ ಸಮಾನರು. ಬದುಕಿನ ಹಲವು ಸಂದರ್ಭಗಳಲ್ಲಿ ಗಂಡಸರಿಗೆ ಸಿಗುತ್ತದೆಯಲ್ಲ, ಅಷ್ಟೇ ಮರ್ಯಾದೆ ಮತ್ತು ಹಕ್ಕು ಚಲಾಯಿಸುವ ಸ್ವಾತಂತ್ರ್ಯವನ್ನು ಮಹಿಳೆಯರಿಗೂ ಕೊಡಬೇಕು ಎನ್ನುತ್ತದೆ ಕಾನೂನು. ಈ ಮಾತನ್ನು ಕೆಲವರು ಒಪ್ಪುತ್ತಾರೆ. ಕೆಲವರು ಒಪ್ಪುವುದಿಲ್ಲ. ಒಪ್ಪದೇ ಇರುವ ಜನ-'ಯಾವತ್ತಾದ್ರೂ ಇವೆಲ್ಲಾ ಒಪ್ಪುವಂಥ ಮಾತೇನ್ರೀ? ಹೆಣ್ಣು, ಗಂಡಿಗೆ ಸರಿಸಮನಾಗಿ ನಿಲ್ಲಲು ಸಾಧ್ಯವೇನ್ರಿ? ಯಾವತ್ತಿದ್ರೂ ಗಂಡು ಗಂಡೇ. ಹೆಣ್ಣು ಹೆಣ್ಣೇ. ಗಂಡು ಅಂದ್ರೆ ಬಂಗಾರ. ಹೆಣ್ಣು ಅಂದ್ರೆ ಬೆಳ್ಳಿ. ಅಂದ ಮೇಲೆ ನೀವೇ ಹೇಳಿ; ಬಂಗಾರಕ್ಕೂ, ಬೆಳ್ಳಿಗೂ ಒಂದೇ ಬೆಲೆ ಫಿಕ್ಸ್ ಮಾಡಲು ಸಾಧ್ಯವಾ ಅನ್ನುತ್ತಾರೆ. ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ವಿತಂಡವಾದಕ್ಕೆ ಮುಂದಾಗುತ್ತಾರೆ. ಅಗತ್ಯ ಬಂದರೆ, ಒಂದು ರೌಂಡ್ ಜಗಳವನ್ನೂ ಮಾಡಿಬಿಡುತ್ತಾರೆ.
ಯಾವತ್ತೂ ಗಂಡಸರೇ ಶ್ರೇಷ್ಠ ಎಂದು ವಾದಿಸುವ ಮಂದಿಗೆ ಬಾಯಿ ಕಟ್ಟುವಂಥ ಸಂದರ್ಭ ಎದುರಾಗುವುದು ಪರೀಕ್ಷಾ ಫಲಿತಾಂಶದ ಸಂದರ್ಭಗಳಲ್ಲಿ. 'ಎಂದಿನಂತೆ ವಿದ್ಯಾರ್ಥಿನಿಯರ ಮೇಲುಗೈ' ಎಂಬ ಹೆಡ್ಡಿಂಗ್ ನೋಡುವ ಮಂದಿ, ಅದರಲ್ಲಿ ವಿಶೇಷವೇನೂ ಇಲ್ಲ ಕಣ್ರೀ. ಆನ್ಸರ್‌ಶೀಟ್ ಹುಡುಗಿಯದ್ದು ಎಂದು ಗೊತ್ತಾದ ತಕ್ಷಣ ಮೇಷ್ಟ್ರುಗಳು ಧಾರಾಳವಾಗಿ ನಂಬರ್ ಕೊಟ್ಟು ಬಿಡ್ತಾರೆ. ಹಂಗಾಗಿ ಪ್ರತಿ ವರ್ಷ ಹುಡುಗಿಯರೇ ಫಸ್ಟ್ ಬರ್ತಾರೆ ಎಂಬ ಅರ್ಥವಿಲ್ಲದ ಮಾತಾಡುತ್ತಾರೆ. ತುಂಬ ಹಿಂದಿನಿಂದಲೂ ಎಸ್ಸೆಸ್ಸೆಲ್ಸಿ, ಪಿಯೂಸಿ ಹಾಗೂ ಆನಂತರದ ಎಲ್ಲ ಪರೀಕ್ಷೆಗಳಲ್ಲೂ, ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಉತ್ತರ ಪತ್ರಿಕೆಗಳಲ್ಲಿ ತಮ್ಮ ಹೆಸರು ಬರೆಯುವಂತಿಲ್ಲ ಎಂಬುದನ್ನು ಕಡ್ಡಾಯ ಮಾಡಲಾಗಿದೆ ಎಂಬುದು ಇವರಿಗೆ ಗೊತ್ತಿಲ್ಲದ ವಿಷಯವಲ್ಲ. ವ್ಯಾಲ್ಯುಯೇಷನ್‌ನ ಸಂದರ್ಭದಲ್ಲಿ ಒಂದು ದಿನಕ್ಕೆ 8ರಿಂದ 10 ಉತ್ತರ ಪತ್ರಿಕೆಗಳನ್ನು ಪರಿಶೀಲಿಸಬೇಕಿರುವ ಅಧ್ಯಾಪಕರು, ತಮ್ಮ ಕೈಯಲ್ಲಿರುವ ಉತ್ತರ ಪತ್ರಿಕೆಯನ್ನು ಕೇವಲ ಅಕ್ಷರಗಳನ್ನು ಗಮನಿಸಿಯೇ, ಇದು ಹುಡುಗನದ್ದು, ಇದು ಹುಡುಗಿಯದ್ದು ಎಂದು ಪಕ್ಷಪಾತ ಮಾಡಿ ಅಂಕಗಳನ್ನು ಕೊಡಲು ಸಾಧ್ಯವೇ ಇಲ್ಲ ಎಂಬುದು ಇವರಿಗೂ ಗೊತ್ತಿರುತ್ತದೆ. ಆದರೂ...
ಹೀಗೆ, ನಾನೇ ಸರಿ. ನಾನು ಹೇಳಿದ್ದೇ ಸರಿ ಎಂದು ವಾದಿಸುವುದರಿಂದ ಕೆಲವೊಮ್ಮೆ ಮಧುರ ಗೆಳೆತನವೊಂದು ಹಾಳಾಗಬಹುದು. ಸಂಸಾರದ ಸಾಮರಸ್ಯವೇ ಕೆಟ್ಟು ಹೋಗಬಹುದು. ಗಂಡ-ಹೆಂಡಿರ ಮಧ್ಯೆ ಅನುಮಾನದ ಅಡ್ಡಗೋಡೆಯೂ ಎದ್ದು ನಿಲ್ಲಬಹುದು. ನನ್ನ ಗೆಳತಿಯ ಬದುಕಿನಲ್ಲಿಯೇ ನಡೆದ ಅಂಥದೊಂದು ಪ್ರಸಂಗವನ್ನು ವಿವರಿಸುತ್ತೇನೆ ಕೇಳಿ.
ಆತ ಕವಿ. ಕತೆಗಾರ. ಒಂದು ಪುಟ್ಟ ನೌಕರಿಯೂ ಅವನಿಗಿತ್ತು. ಅಂಥವನನ್ನು, ನನ್ನ ಗೆಳತಿ ಮದುವೆಯಾದಳು. ಆನಂತರದಲ್ಲಿ ಅವಳು ಸಿಕ್ಕಾಗಲೆಲ್ಲ- 'ನಮ್ಮ ಯಜಮಾನರು ಹೊಸದಾಗಿ ಪದ್ಯ ಬರೀತಿದಾರೆ. ಕತೆ ಬರೀತಿದಾರೆ. ಮುಂದಿನ ತಿಂಗಳು ಕಾದಂಬರೀ ಬರೀತೀನಿ ಅಂತಿದ್ರು. ಅವರ ಕತೆಗಳಿಗೆ ಸಿನಿಮಾದಲ್ಲಿ ವಿಪರೀತ ಡಿಮ್ಯಾಂಡ್ ಇದೆ...' ಎಂದೆಲ್ಲ ಹೇಳಿ ನಮ್ಮಲ್ಲಿ ಅಸೂಯೆ ಹುಟ್ಟಿಸುತ್ತಿದ್ದಳು. ಅವಳ ಮಾತುಗಳಲ್ಲಿ ಸುಳ್ಳು-ಸತ್ಯ ಎರಡೂ ಇತ್ತು.
ಇಂಥ ಗೆಳತಿಗೆ, ಅದೊಂದು ದಿನ ಗಂಡನ ಹಳೆಯ ಡೈರಿ ಸಿಕ್ಕಿ ಬಿಟ್ಟಿದೆ. ಈಕೆ ಕುತೂಹಲದಿಂದ ಒಂದೊಂದೇ ಹಾಳೆ ತಿರುವಿ ಹಾಕಿದ್ದಾಳೆ. ಡೈರಿಯ ತುಂಬ ಹಸಿಹಸಿ ಭಾವನೆಯ ಪ್ರೇಮಪತ್ರಗಳೇ ಕಾಣಿಸಿವೆ. ಇವಳಿಗೆ ಸಣ್ಣದೊಂದು ಅನುಮಾನ. ಜೊತೆಗೆ ಕುತೂಹಲ. ರಾತ್ರಿ ಗಂಡ ಮನೆಗೆ ಬರುವುದನ್ನೇ ಕಾಯುತ್ತಿದ್ದವಳು, ಆತ ಬಂದಾಕ್ಷಣ ಅದೂ ಇದೂ ಮಾತಾಡಿ ಮೆಲ್ಲಗೆ ಡೈರಿಯ ವಿಷಯ ತೆಗೆದಿದ್ದಾಳೆ. ಅದರ ತುಂಬಾ ಲವ್ ಲೆಟರ್ಸ್ ಇದಾವಲ್ರೀ, ಮದುವೆಗೂ ಮುಂಚೆ ಯಾರನ್ನಾದ್ರೂ ಪ್ರೀತಿಸಿದ್ರಾ ಎಂದು ಪ್ರಶ್ನಿಸಿದ್ದಾಳೆ. ಅಯ್ಯೋ, ಒಬ್ಬರಲ್ಲ, ಇಬ್ಬರಲ್ಲ ಮೂರು ಹುಡುಗಿರನ್ನ ಪ್ರೀತಿಸಿದ್ದೆ ಎಂದು ಆತ ನಿಜವನ್ನೇ ಹೇಳಿದ್ದಾನೆ. ಆ ಸಂದರ್ಭದಲ್ಲಿ ಎದುರಾದ ಪಜೀತಿಗಳ ಬಗ್ಗೆಯೂ ಹೇಳಿಕೊಂಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ, ಹರೆಯ ಅಂದ ಮೇಲೆ ಎಲ್ಲರ ಬದುಕಲ್ಲೂ ಇಂಥ ಅಫೇರ್‌ಗಳು ಬಂದೇ ಬರ್ತವೆ. ಕೊನೇಲಿ ನಮ್ಮ ಹಣೇಲಿ ಬರೆದಿರೋ ಹಾಗೆ ಇನ್ಯಾರ ಜೊತೆಗೋ ಮದುವೆ ಆಗುತ್ತೆ. ಬಹುಶಃ ಇಂಥ ಅನುಭವ ನಿನಗೂ ಆಗಿರಲೇಬೇಕು ಅಲ್ವಾ ಎಂದು ಪ್ರಶ್ನಿಸಿದ್ದಾನೆ. ಗಂಡನ ಬೋಲ್ಡ್ ಮಾತುಗಳಿಂದ ಖುಷಿಯಾದ ಹುಡುಗಿ-'ಹೌದೂರೀ, ನನಗೂ ಇಬ್ಬರು ಪ್ರಪೋಸ್ ಮಾಡಿದ್ರು. ಆ ಪೈಕಿ ಒಬ್ಬ ಬರ್ತ್‌ಡೇ ದಿನವೇ ಕೆಂಪು ಕಲರ್‌ನ ಸೀರೆ ಕೊಟ್ಟು, ನನ್ನನ್ನು ಒಪ್ಪದಿದ್ರೂ ಪರವಾಗಿಲ್ಲ. ನನ್ನ ನೆನಪಿಗೆ ಈ ಸೀರೆ ಇಟ್ಕೊಳ್ಳಿ ಎಂದಿದ್ದ' ಅಂದು ಬಿಟ್ಟಿದ್ದಾಳೆ.
ಮರುದಿನದಿಂದಲೇ ಆ ಕವಿ ಮಹಾರಾಜನ ವರ್ತನೆ ಬದಲಾಗಿದೆ. ಈ ಹುಡುಗಿ ಐದು ನಿಮಿಷ ಅನ್ಯ ಮನಸ್ಕಳಾಗಿ ಕೂತರೆ ಸಾಕು; ಓಹೋ, ಗೆಳೆಯನ ನೆನಪಲ್ಲಿ ಇದ್ದೀರೋ ಎಂದು ಕೇಳಲು ಆರಂಭಿಸಿದ್ದಾನೆ. ಯಾವುದೇ ಕಾರಣಕ್ಕೂ ಕೆಂಪು ಕಲರ್‌ನ ಸೀರೆ ಉಡಬಾರದು ಎಂದು ಷರತ್ತು ವಿಧಿಸಿದ್ದಾನೆ. ಅವಳ ಮೊಬೈಲ್‌ಗೆ ಬರುವ ಪ್ರತಿಯೊಂದು ಕಾಲ್‌ನ ಕುರಿತೂ ಅನುಮಾನ ಬೆಳೆಸಿಕೊಂಡಿದ್ದಾನೆ. ಹೆಂಡತಿ, ಮನೆಯಿಂದ ಹೊರಗೆ ಹೋಗಿ ಮಾತಾಡಿದರೆ-'ಬಾಯ್ ಫ್ರೆಂಡು ಕರೆದಿದ್ನೇನೋ' ಎಂದು ಕೆಣಕಲು ಆರಂಭಿಸಿದ್ದಾನೆ. 'ಛೆ ಛೆ, ಆ ಸಂಬಂಧ ಅವತ್ತಿಗೇ ಮುಗಿದು ಹೋಯ್ತು. ಹಾಗೆಲ್ಲಾ ಅನುಮಾನಿಸಬೇಡಿ ಪ್ಲೀಸ್‌' ಎಂದು ಈಕೆ ಪ್ರಾರ್ಥಿಸಿದ್ದಾಳೆ. ಆದರೂ, ಆತ ಬದಲಾಗಿಲ್ಲ.
ಗಂಡನ ಅನುಮಾನದ ನೋಟ ಮತ್ತು ಮಾತು ದಿನೇ ದಿನೇ ಹೆಚ್ಚುತ್ತಲೇ ಹೋದಾಗ ಈ ಹುಡುಗಿ ತಡೆಯಲಾಗದೆ ಕೇಳಿದ್ದಾಳೆ:'ಅಲ್ರೀ, ಮದುವೆಗೂ ಮುಂಚೆ ನಿಮ್ಗೂ ಅಫೇರ್ ಇತ್ತು ಅಂದ್ರಿ. ಅಂಥದೇ ಅಫೇರ್ ನನಗೂ ಇತ್ತು. ಅಂದ ಮೇಲೆ ಈಗ್ಯಾಕೆ ಅಸಮಾಧಾನ?' ಈ ಮಾತು ಕೇಳಿದ ಕವಿ ಮಹಾಶಯ-ಭೂಮಿ, ಆಕಾಶ ಒಂದಾಗುವಂತೆ ಹಾರಾಡಿದ್ದಾನೆ. ಯಾವತ್ತೂ ಗಂಡ್ಸು ಗಂಡ್ಸೇ. ಹೆಂಗ್ಸು, ಹೆಂಗ್ಸೇ. ಗಂಡು ನೂರು ತಪ್ಪು ಮಾಡಿದ್ರೂ ಅದೇನೂ ಮಹಾಪರಾಧವಲ್ಲ. ಆದರೆ ಹೆಂಗಸು ಹಾಗೆಲ್ಲ ನಡ್ಕೊಂಡ್ರೆ ಸಹಿಸೋಕೆ ಸಾಧ್ಯವೇ ಇಲ್ಲ ಅಂದಿದ್ದಾನೆ. ಅಂದಿನಿಂದ ಅವರ ಮಧ್ಯೆ ಮಾತು ಮರೆತುಹೋಗಿದೆ. ಅವನ ಅನುಮಾನದ ಮುಳ್ಳು ಗೆಳತಿಯನ್ನು ಈಗಲೂ ಚುಚ್ಚುತ್ತಲೇ ಇದೆ!
ಈಗ, ಗೆಳತಿಯ ಸಂಸಾರ, ಮಕ್ಕಳ ಕಾರಣಕ್ಕಾಗಿ ಹಾಗೂ ಹೀಗೂ ಉಳಿದುಕೊಂಡಿದೆ. ಇದನ್ನೆಲ್ಲಾ ಗಮನಿಸಿದರೆ, ಹೆಂಗಸರಿಗೆ ನ್ಯಾಯ ಸಿಕ್ಕೋದು ಕೇವಲ ಕಾಗದದ ಮೇಲಷ್ಟೇ ಅನಿಸುವುದಿಲ್ಲವಾ?


- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.