ನಿರ್ಲಜ್ಜ ಗುತ್ತಿಗೆದಾರರ ಜೊತೆ ಬಿಬಿಎಂಪಿಯ ಇಂಜಿನಿಯರುಗಳ ಅನೈತಿಕ ಸಂಬಂಧ
ಐಟಿ ಸಿಟಿ ಬೆಂಗಳೂರಿನ ನಿರ್ವಾಹಕರ ಗುಣವೇ ವಿಚಿತ್ರವಾಗಿದೆ. ತೆರಿಗೆದಾರರು ರಸ್ತೆಯಲ್ಲಿನ ತಗ್ಗು ಗುಂಡಿಗಳ ಬಗ್ಗೆ ದೂರು ನೀಡಿದಾಗ, ಮಳೆಗಾಲ ಮುಗಿದ ಮೇಲೆ ರಸ್ತೆಗಳನ್ನು..
ಐಟಿ ಸಿಟಿ ಬೆಂಗಳೂರಿನ ನಿರ್ವಾಹಕರ ಗುಣವೇ ವಿಚಿತ್ರವಾಗಿದೆ. ತೆರಿಗೆದಾರರು ರಸ್ತೆಯಲ್ಲಿನ ತಗ್ಗು ಗುಂಡಿಗಳ ಬಗ್ಗೆ ದೂರು ನೀಡಿದಾಗ, ಮಳೆಗಾಲ ಮುಗಿದ ಮೇಲೆ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದು ಅವರಿಗೆ ಹೇಳಿದರು. ಅಂದರೆ ಡಿಸೆಂಬರ್ ಕೊನೆಯ ಸಮಯದಲ್ಲಿ ಎಂದಾಯಿತು. ಆದರೆ ಇತ್ತೀಚೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಬೆಂಗಳೂರಿಗೆ ಭೇಟಿ ನೀಡಿದಾಗ ಜನರಿಗೆ ಆಶ್ಚರ್ಯವೊಂದು ಕಾದಿತ್ತು. ತಟಕ್ಕನೆ ಎದ್ದು ಕುಳಿತ ಬಿಬಿಎಂಪಿ ರಸ್ತೆ ರಿಪೇರಿ ಮಾಡಿ ಮುಗಿಸಿತು (ಆದರೆ ವಿಮಾನ ನಿಲ್ದಾಣದಿಂದ ರಾಜಭವನದವರೆಗಿನ ರಸ್ತೆಯನ್ನು ಮಾತ್ರ)! ವಿವಿಐಪಿಗಳಿಗೇ ಒಂದು ನಿಯಮ ಮತ್ತು ತೆರಿಗೆದಾರರಿಗೆ ಒಂದು ನಿಯಮವೇಕೆ? ಈ ವಿಐಪಿ ಭೇಟಿ ಕೊಡುತ್ತಾರೆ ಎಂದು ತಿಳಿದ ಕೂಡಲೇ ರಾತ್ರೋರಾತ್ರಿ ರಸ್ತೆಗಳನ್ನು ಸರಿಪಡಿಸುವ ಬಿಬಿಎಂಪಿಗೆ ಉಳಿದೆಲ್ಲಾ ರಸ್ತೆಗಳನ್ನೂ ಏಕೆ ರಿಪೇರಿ ಮಾಡಲಾಗುತ್ತಿಲ್ಲ? ಬಿಬಿಎಂಪಿಯ ಯೋಜನೆಗಳಲ್ಲಿ ನಾಗರಿಕರಿಗೆ ಜಾಗವೇ ಇಲ್ಲವೇ? ಬೆಂಗಳೂರಿನ ನಿರ್ವಹಣೆಯಲ್ಲಿ ಮಾತನಾಡುವ ಹಕ್ಕು ಜನತೆಗಿಲ್ಲವೇ? ಸರಿಯಾದ ಸಂಚಾರಿ ಮಾರ್ಗಗಳನ್ನು ನಿರ್ಮಿಸುವ ಅವರ ಆಗ್ರಹಕ್ಕೆ ಏಕೆ ಬಿಬಿಎಂಪಿ ಕಿವಿಗೊಡುತ್ತಿಲ್ಲ?
ರಸ್ತೆಗಳ ರಿಪೇರಿಗಾಗಿ ನೀಡಿದ ಗಡುವುಗಳ ಸಂಖ್ಯೆಗೆ ಲೆಕ್ಕವಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಾದ್ಯಂತ ಸಂಚರಿಸಿ ಕಳಪೆ ರಸ್ತೆಗಳನ್ನು ಸರಿಪಡಿಸುವಂತೆ ಬಿಬಿಎಂಪಿಯ ಇಂಜಿನಿಯರುಗಳಿಗೆ ಗಡುವು ನೀಡಿದ್ದರು. ಆದರೆ ಅವರು ಅತ್ತ ಚೀನಾ ಮತ್ತು ಜಪಾನ್ ಪ್ರವಾಸಕ್ಕೆ ಹೋದದ್ದೇ ತಡ, ಬಿಬಿಎಂಪಿ ಗಡುವನ್ನು ಮರೆತು ಗಡದ್ದಾಗಿ ನಿದ್ದೆಹೊಡೆಯಿತು. ಇನ್ನು ಸಚಿವ ರಾಮಲಿಂಗಾ ರೆಡ್ಡಿ ಕೂಡ ಹೊಸ ಗಡುವೊಂದನ್ನು ನೀಡಿದರು. ಅದನ್ನೂ ಬಿಬಿಎಂಪಿ ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಬಿಬಿಎಂಪಿಯ ಕಮಿಷನರ್ ಏನು ಹೇಳುತ್ತಿದ್ದಾರೆಂದರೆ..."ನಮಗೆ 20 ದಿನ ಕೊಡಿ, ಎಲ್ಲಾ ಗುಂಡಿಗಳನ್ನೂ ನಾವು ಮುಚ್ಚುತ್ತೇವೆ"!
ಈಗ ಈ ಮಾತೂ ಹುಸಿಯಾಗುವುದೇ? ಇದು ಕೇವಲ ಜನತೆಯನ್ನು ಮೂರ್ಖರನ್ನಾಗಿಸುವ ಕೆಲಸವೇ? ಗುತ್ತಿಗೆದಾರರ ಲಾಬಿಗೆ ಬಿಬಿಎಂಪಿ ಕುಣಿಯುತ್ತಿದೆಯೇ? ಬಿಬಿಎಂಪಿ ಇಂಜಿನಿಯರುಗಳು ಡೆಡ್‌ಲೈನ್‌ಗಳಿಗೆ ಬೆಲೆಯೇಕೆ ನೀಡುತ್ತಿಲ್ಲ? ನಗರದ ನಿರ್ವಾಹಕರು ರಾಜ್ಯದ 50 ಪ್ರತಿಶತಕ್ಕಿಂತಲೂ ಹೆಚ್ಚು ಆದಾಯವನ್ನು ಉತ್ಪಾದಿಸುವ ಈ ಮಹಾನ್ ನಗರವನ್ನು ಕಡೆಗಣಿಸುತ್ತಿದ್ದರೂ ರಾಜ್ಯ ಸರ್ಕಾರವೇಕೆ ಕಣ್ಣು ಮುಚ್ಚಿಕೊಂಡು ಕುಳಿತಿದೆ?
ರಸ್ತೆಗಳಲ್ಲಿನ ಗುಂಡಿಗಳು ಆಗಲೇ ತಮ್ಮ ಕೆಲಸ ಶುರುಮಾಡಿವೆ. ಇತ್ತೀಚೆಗೆ ಒಬ್ಬ ಮಹಿಳೆ ಆಫೀಸಿನಿಂದ ದ್ವಿಚಕ್ರವಾಹನದಲ್ಲಿ ಹಿಂದಿರುಗುತ್ತಿದ್ದಾಗ ಕೆಳಗೆ ಬಿದ್ದು ತುಂಬಾ ಗಾಯಗೊಂಡಿದ್ದಾಳೆ. ಆಗ ಯಾವ ಬಿಬಿಎಂಪಿ ಅಧಿಕಾರಿ ಅಥವಾ ಪೊಲೀಸ್ ಅಧಿಕಾರಿಯೂ ಆಕೆಯ ಸಹಾಯಕ್ಕೆ ಬರಲಿಲ್ಲ. ಯಾರೋ ಒಬ್ಬ ಮಹಿಳೆ ಗಾಯಗೊಂಡಾಕೆಯನ್ನು ಆಟೋದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದಳು. ಆಕೆಗೆ ಬಹಳ ಗಾಯಗಳಾಗಿರುವುದರಿಂದ ಇನ್ನು 3 ತಿಂಗಳವರೆಗಾದರೂ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆಂದು ವೈದ್ಯರು ಹೇಳುತ್ತಿದ್ದಾರೆ. ಈ ಕುರಿತು ಆಕೆಯ ತಂದೆ, "ಯಾರಾದರೂ ಸಾಯುವವರೆಗೂ ಸರ್ಕಾರ ಸುಮ್ಮನೆ ಕುಳಿತುಕೊಳ್ಳಲು ನಿರ್ಧರಿಸಿದೆಯೇ? ಒಂದು ವೇಳೆ ರಸ್ತೆಗಳನ್ನು ಸರಿಪಡಿಸಿದರೂ ಅದೂ ಕೂಡ ತಾತ್ಕಾಲಿಕವಷ್ಟೆ." ಎನ್ನುತ್ತಾರೆ.
ಇಂದು ರಸ್ತೆ ರಿಪೇರಿ ಎನ್ನುವುದು ದೊಡ್ಡ ಬಿಸಿನೆಸ್ ಆಗಿ ಬದಲಾಗಿದೆ. ಭ್ರಷ್ಟ ಇಂಜಿನಿಯರುಗಳೊಂದಿಗೆ ಕೈ ಜೋಡಿಸಿರುವ ನಿರ್ಲಜ್ಜ ಗುತ್ತಿಗೆದಾರರು ಉದ್ದೇಶಪೂರ್ವಕವಾಗಿಯೇ ಕಳಪೆ ಗುಣಮಟ್ಟದ ರಸ್ತೆಗಳನ್ನು ಸಿದ್ಧಪಡಿಸುತ್ತಾರೆ. ಪದೇ ಪದೇ ರಿಪೇರಿಗಾಗಿ ಗುತ್ತಿಗೆ ಸಿಗಲಿ ಎಂಬ ದುರಾಸೆ! ವರ್ಷದಿಂದ ವರ್ಷಕ್ಕೆ ತೆರಿಗೆದಾರರ ಅಮೂಲ್ಯ ಹಣ ಪೋಲಾಗುತ್ತಲೇ ಇದೆ. ಆದರೂ ಬಿಬಿಎಂಪಿ ಹಣವಿಲ್ಲ ಎಂದು ಗೋಳಾಡುತ್ತದೆ! ಎಲ್ಲಿಯವರೆಗೂ ಗುತ್ತಿಗೆದಾರರ ಮತ್ತು ಇಂಜಿನಿಯರುಗಳ ಅನೈತಿಕ ಸಂಬಂಧ ಕೊನೆಯಾಗುವುದಿಲ್ಲವೋ ಅಲ್ಲಿಯವರೆಗೂ ನಾಗರಿಕರು ಒದ್ದಾಡುತ್ತಲೇ ಇರುತ್ತಾರೆ. ಈ ಮಾತು ಭಾರತದ ಎಲ್ಲಾ ನಗರಗಳಿಗೂ ಅನ್ವಯವಾಗುತ್ತದೆ.
ಬೆಂಗಳೂರು ಮತ್ತು ಬೆಂಗಳೂರಿಗರನ್ನು ನೋಡಿಕೊಳ್ಳುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ಸೋತಿದೆ. ನಗರದಲ್ಲಿ 198 ಕಾರ್ಪೊರೇಟರ್‌ಗಳು ಮತ್ತು 28 ಶಾಸಕರಿದ್ದರೂ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಅವರು ಮುಂದಾಗಿಲ್ಲ. ಒಮ್ಮೆ ಅಧಿಕಾರಕ್ಕೆ ಬಂದರೆ ಸಾಕು, ಅವರು ಅವರದ್ದೇ ಪ್ರಪಂಚ ಸೃಷ್ಟಿಸಿಕೊಂಡುಬಿಡುತ್ತಾರೆ. ಹಾಗಿದ್ದರೆ ರಾಜ್ಯ ಸರ್ಕಾರ ಏನು ಮಾಡುತ್ತಿದೆಯೋ ಯೋಚಿಸಿ? ಅದು ಬಿಬಿಎಂಪಿಯನ್ನು ವಿಭಜಿಸಿ 2-3 ಕಾರ್ಪೊರೇಷನ್‌ಗಳಾಗಿ ಬದಲಾಯಿಸಲು ಯೋಚಿಸುತ್ತಿದೆ. ಉತ್ತಮ ಆಡಳಿತಕ್ಕಾಗಿ ಹೀಗೆ ಮಾಡುವುದು ಅವಶ್ಯಕ ಎನ್ನುತ್ತದೆ ಸರ್ಕಾರ. ಈ ಕುರಿತು ಸಚಿವ ರಾಮಲಿಂಗಾರೆಡ್ಡಿಯವರನ್ನು ಪ್ರಶ್ನಿಸಿದಾಕ್ಷಣ ಅವರು ತಟ್ಟನೆ ಉತ್ತರ ಕೊಡುತ್ತಾರೆ- "ನೋಡಿ ಬೆಂಗಳೂರು ತುಂಬಾ ಬೆಳೆದಿದೆ. 850 ಚ.ಕಿ.ಮಿ ಪ್ರದೇಶವನ್ನು ಒಬ್ಬ ಕಮಿಷನರ್‌ಗೆ ನಿಭಾಯಿಸಲು ಸಾಧ್ಯವಿಲ್ಲ. ಬಿಬಿಎಂಪಿಯನ್ನು ವಿಭಜಿಸಿದರೆ ಎರಡರಿಂದ ಮೂರು ಮೇಯರ್‌ಗಳು ಮತ್ತು ಕಮೀಷನರ್‌ಗಳು ಇರುತ್ತಾರೆ"
2007ರಲ್ಲಿನ ಸರ್ಕಾರ ಹಲವು ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು 100 ಗ್ರಾಮಗಳನ್ನು ಬೆಂಗಳೂರು ಪಾಲಿಕೆಯ ಭಾಗವಾಗಿಸಿತು. ನಂತರ ಅದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಕರೆಯಿತು.
ಈ ರೀತಿ ಮಾಡುವುದರಿಂದ 'ಮಹಾನಗರವನ್ನು' ಸುಲಭವಾಗಿ ನಿರ್ವಹಿಸಬಹುದು ಎಂದೇ ಆಗ ಹೇಳಲಾಗಿತ್ತಲ್ಲವೇ? ಹಾಗಿದ್ದರೆ ಅದೇಕೆ ಈಗಿನ ಸರ್ಕಾರ ಇದಕ್ಕೆ ಸಂಪೂರ್ಣ ವಿರುದ್ಧವಾದ ಕೆಲಸಕ್ಕೆ ಮುಂದಾಗುತ್ತಿದೆ? ಮೊದಲಿನ ಯೋಜನೆ ವಿಫಲವಾಗಿದ್ದೇಕೆ? ಈಗ ಬಿಬಿಎಂಪಿಯ ವಿಭಜನೆ ಮಾಡುವ ಕೆಲಸ ಸಫಲವಾಗುತ್ತದೆ ಎನ್ನುವುದಕ್ಕೆ ಏನು ಗ್ಯಾರಂಟಿ? ಏಕೆ ಈ ಸರ್ಕಾರ ಅವಸರ ಮಾಡುತ್ತಿದೆ? ಇದಕ್ಕಾಗಿ ಅದು ಪರಿಣತರೊಂದಿಗೆ ಚರ್ಚಿಸಿದೆಯೇ? ಅಥವಾ ಮೌಲಸೌಕರ್ಯದ ಸಮಸ್ಯೆಗಳಿಂದ ಜನರ ದೃಷ್ಟಿಯನ್ನು ಬೇರೆಡೆ ಸೆಳೆಯುವ ತಂತ್ರವೇ ಇದು?
ಬೆಂಗಳೂರು ಉತ್ತಮ ಆಡಳಿತಕ್ಕಾಗಿ ಗೋಗರೆಯುತ್ತಿದೆ. ಬೆಳೆಯುತ್ತಿರುವ ಬೆಂಗಳೂರಿನ ನಿರ್ವಹಣೆ ಹೇಗೆ ಮಾಡಬೇಕೆಂಬುದು ರಾಜಕೀಯ ವರ್ಗಕ್ಕೆ ಮತ್ತು ಅಧಿಕಾರ ವರ್ಗಕ್ಕೆ ತಿಳಿಯುತ್ತಿಲ್ಲ. ಆಗೀಗ ತೇಪೆ ಹಚ್ಚುವ ಕೆಲಸ ಮಾಡುವುದನ್ನು ಬಿಟ್ಟು ನಾಗರಿಕ ಕೇಂದ್ರಿತ ಆಡಳಿತಕ್ಕೆ ಅವಕಾಶ ಕೊಡಬೇಕು. ಸ್ಥಳೀಯ ಪ್ರದೇಶಗಳಲ್ಲಿ ಆದ ಕೆಲಸಗಳನ್ನು ಪರೀಕ್ಷಿಸುವ ಅಧಿಕಾರವನ್ನು ಜನರಿಗೆ ಕೊಡಬೇಕು. ಇದರಿಂದಾಗಿ ಕೇವಲ ಭ್ರಷ್ಟಾಚಾರ ಕಡಿಮೆಯಾಗುವುದಷ್ಟೇ ಅಲ್ಲದೆ, ಕಾಮಗಾರಿಗಳ ಗುಣಮಟ್ಟವೂ ಹೆಚ್ಚುತ್ತದೆ. ಶಾಸಕರು ಮತ್ತು ಕಾರ್ಪೊರೇಟರ್‌ಗಳು ಅಂಥ ನಡೆಗೆ ತಡೆಯೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗೇ ಸರ್ಕಾರ ಕೂಡಲೇ ಎಚ್ಚೆತ್ತು ಬೆಂಗಳೂರನ್ನು ಸರಿದಾರಿಗೆ ತರುವ ಕೆಲಸಕ್ಕೆ ಮುಂದಾಗಬೇಕು.
ಕೊನೆಯ ಗುಟುಕು: ಕಳೆದ ವರ್ಷ ಬಿಬಿಎಂಪಿ, ಮನೆಯ ಕಸವನ್ನು ವಿಂಗಡಿಸದಿದ್ದರೆ ದಂಡ ವಿಧಿಸುವುದಾಗಿ ಬೆಂಗಳೂರಿಗರಿಗೆ ಎಚ್ಚರಿಕೆ ನೀಡಿದ್ದು ನೆನಪಿದೆಯೇ? ಆ ಸಮಯದಲ್ಲಿ ನಗರ ನಿರ್ವಾಹಕರು ಬೆಂಗಳೂರಿನಲ್ಲಿ ಸಂಗ್ರಹವಾದ ಕಸವನ್ನು ಹೇಗೆ ವಿಲೇವಾರಿ ಮಾಡುವುದೋ ತಿಳಿಯದೆ ನಿಂತಲ್ಲೇ ಸುತ್ತುಹೊಡೆಯತೊಡಗಿದ್ದರು. ತಮ್ಮ ನೆಲವನ್ನು ಕಸದ ಗುಂಡಿಯಾಗಿ ಬಳಸುವುದನ್ನು ಸುತ್ತಮುತ್ತಲಿನ ಗ್ರಾಮವಾಸಿಗಳು ವಿರೋಧಿಸಿದ್ದರು. ಈಗ ಜನತೆ ಕಸ ವಿಗಂಡಣೆ ಮಾಡುತ್ತಿದ್ದರೆ, ಬಿಬಿಎಂಪಿ ಏನು ಹೇಳುತ್ತಿದೆ ಗೊತ್ತೇ? ಕಸ ಪ್ರತ್ಯೇಕಗೊಳಿಸುವ ಅವಶ್ಯಕತೆ ಇಲ್ಲ ಎಂದು! ಸೇಲಂ ಜೊತೆ ಸ್ಪರ್ಧೆಗಿಳಿಯಲು ಇಚ್ಛಿಸಿರುವ ಬಿಬಿಎಂಪಿ ಕಸ ಪ್ರತ್ಯೇಕಗೊಳಿಸುವಂಥ ಘಟಕವೊಂದನ್ನು ಸ್ಥಾಪಿಸುವ ಮನಸ್ಸು ಮಾಡಿದೆ. ಒಣ ಕಸದಿಂದ ಗ್ರೀನ್ ಫ್ಯೂಲ್, ಫರ್ನೇಸ್ ಆಯಿಲ್ ಮತ್ತು ಹಸಿ ಕಸದಿಂದ ಗೊಬ್ಬರ ತಯಾರಿಸುತ್ತೇನೆಂದು ಹೇಳುತ್ತಿದೆ. ಈ ಯೋಚನೆಯೋನೋ ಚೆನ್ನಾಗಿದೆ. ಆದರೆ ಅದು ಕೇವಲ ಹಾಳೆಯ ಮೇಲೆ ಉಳಿಯದೇ ಇರಲಿ ಎಂದು ಆಶಿಸಬೇಕಷ್ಟೆ. ಬೆಂಗಳೂರಿನ ಬಳಿಯೇ ಇರುವ ಸೇಲಂನಲ್ಲಿ ಈ ಸೌಲಭ್ಯವಿರುವುದನ್ನು ಇಷ್ಟು ವರ್ಷಗಳವರೆಗೆ ಅಧಿಕಾರ ವರ್ಗ ಅದೇಕೆ ನೋಡಲು ವಿಫಲವಾಗಿತ್ತು?
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

