ಅಂಕಣಗಳು

ದೇಶಸೇವೆ, ದೇಶರಕ್ಷಣೆಗೆ ಹೆಸರಾದವರು ಕ್ಷತ್ರಿಯ ಮರಾಠಿಗರು

ಇದು ಈ ಕ್ಷತ್ರಿಯ ಮರಾಠಿಗರ ಬಗ್ಗೆ ಹೇಳುವ ಮಾತು. ಅಷ್ಟರಮಟ್ಟಿಗೆ ಇವರಲ್ಲಿದೆ ದೇಶಭಕ್ತಿ..

ದೇಶಸೇವೆ, ದೇಶರಕ್ಷಣೆಗೆ ಹೆಸರಾದವರು ಕ್ಷತ್ರಿಯ ಮರಾಠಿಗರು
Published On :

ಹೆಂಡತಿಯನ್ನು ಬಿಟ್ಟರೂ ಸೊಂಟದಲ್ಲಿನ ಕತ್ತಿ ಬಿಡುವುದಿಲ್ಲ..!
ಇದು ಈ ಕ್ಷತ್ರಿಯ ಮರಾಠಿಗರ ಬಗ್ಗೆ ಹೇಳುವ ಮಾತು. ಅಷ್ಟರಮಟ್ಟಿಗೆ ಇವರಲ್ಲಿದೆ ದೇಶಭಕ್ತಿ. ಮೊದಲು ದೇಶ, ನಂತರ ಮನೆ, ಕುಟುಂಬ ಎನ್ನುತ್ತಾರೆ ಈ ಸಮುದಾಯದ ಜನ.
ಮರಾಠಿ ಎಂಬುದು ಭಾಷೆಯಲ್ಲ. ಅದು ಸಮುದಾಯದ ಹೆಸರು. ಈ ಸಮಾಜದಲ್ಲಿ ಅಡ್ಡ ಹೆಸರುಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿವೆ. ರಾವ್, ಜೀ ಎಂಬುದು ಹೆಚ್ಚಾಗಿ ಬಳಕೆಯಾಗುತ್ತದೆ. ಅದು ಗೌರವ ಸೂಚಕವಾದ ಪದ.
ವಿಶೇಷ ಎಂದರೆ ಮರಾಠಿ ಸ್ತ್ರೀಯರು 18 ಮೊಳ (9 ಗಜ) ಉದ್ದದ ಸೀರೆ ಉಡುತ್ತಿದ್ದರು. ಜೊತೆಗೆ ಕಚ್ಚೆ ಧರಿಸುತ್ತಿದ್ದರು. ಈಗಲೂ ಸಂಪ್ರದಾಯಸ್ಥರು ಈ ಪದ್ಧತಿ ಅನುಸರಿಸುತ್ತಾರೆ. ಇನ್ನು ಪುರುಷರು ನಿಲುವಂಗಿ ಧರಿಸಿ ತಲೆಗೆ ರುಮಾಲು ಕಟ್ಟುತ್ತಿದ್ದರು. 

ಪೇಟಾ, ಕಠಾರಿ ಕಡ್ಡಾಯ: ಕ್ಷತ್ರಿಯ ಮರಾಠಿಗರಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿಗಳಿದ್ದಾರೆ. ಆದರೆ, ಶನಿವಾರ, ಶುಕ್ರವಾರ ಮತ್ತು ಸೋಮವಾರ ಮಾಂಸ ಸೇವಿಸುವುದಿಲ್ಲ. ಇವರಲ್ಲಿ ಮದುವೆ ಸಂದರ್ಭದಲ್ಲಿ ಮಾತ್ರ ಜನಿವಾರ ಧರಿಸುವ ಸಂಪ್ರದಾಯವಿದೆ. ಮದುವೆಯಲ್ಲಿ ತಲೆಗೆ ಪೇಟಾ ಮತ್ತು ಸೊಂಟಕ್ಕೆ ಕಠಾರಿ ಕಡ್ಡಾಯ. ಪತ್ನಿಗೆ ಕಾಣದಂತೆ ಕಠಾರಿಯನ್ನು ಮುಚ್ಚಿಡುತ್ತಾರೆ. ಅಂದರೆ, ಪತ್ನಿ ಬಿಟ್ಟರೂ ಕಠಾರಿ ಬಿಡುವುದಿಲ್ಲ ಎಂಬುದು ಇದರ ಸಂಕೇತ.
ಕ್ಷತ್ರಿಯ ಮರಾಠಿಗರಿಗೆ ಕುಲದೇವತೆ ಅಂಬಾ ಭವಾನಿ ಮತ್ತು ಚಾಮುಂಡೇಶ್ವರಿ. ಜೊತೆಗೆ ತಿರುಪತಿಯ ವೆಂಕಟರಮಣ ಮತ್ತು ನರಸಿಂಹಸ್ವಾಮಿಯನ್ನೂ ಪೂಜಿಸುತ್ತಾರೆ. ಏನೇ ಆದರೂ ಗಣೇಶನಿಗೆ ಮಾತ್ರ ಮೊದಲ ಪೂಜೆ ಸಲ್ಲಿಸುತ್ತಾರೆ.
ದಸರಾ ಹಬ್ಬ, ಮದುವೆ, ನಾಮಕರಣ ಮತ್ತಿತರ ಸಂದರ್ಭದಳಲ್ಲಿ ಈ ಸಮುದಾಯದ ಜನ ಗೋಂದಳ್ ಎಂದು ಆಚರಿಸುತ್ತಾರೆ. ಈ ಸಂದರ್ಭಗಳಲ್ಲಿ ದೇವಿ ಕುರಿತು ಹಾಡುಗಳನ್ನು ಹಾಡುತ್ತಾರೆ. ಒಟ್ಟಾರೆ ದೈವಭಕ್ತಿಯಲ್ಲೂ ಇವರು ಒಂದು ಕೈ ಮುಂದು ಎನ್ನಬಹುದು.

ಯಾವುದೇ ಪಂಗಡಗಳು ಇರಲಿಲ್ಲ: ಶಿವಾಜಿ ಮಹಾರಾಜರ ಕಾಲದಲ್ಲಿ ಮರಾಠ ಸಮುದಾಯದಲ್ಲಿ ಯಾವುದೇ ಪಂಗಡಗಳು ಇರಲಿಲ್ಲ. ಕಾಲ ಕ್ರಮೇಣ ವೃತ್ತಿ ಆಧಾರದ ಮೇಲೆ ಪಂಗಡಗಳು ರೂಪುಗೊಂಡವು. ಅಂದರೆ, ರಾಜರ ಆಳ್ವಿಕೆ ಬಳಿಕ ಸಮುದಾಯದ ಜನ ಜೀವನೋಪಾಯಕ್ಕಾಗಿ ತಮ್ಮದೇ ಆದ ಮಾರ್ಗಗಳನ್ನು ಕಂಡು ಕೊಂಡರು. ಅವರು ಮಾಡುವ ಕೆಲಸ ನೋಡಿ ಪಂಗಡಗಳನ್ನು ಗುರುತಿಸಲಾಯಿತು. ಹೀಗಾಗಿ ಭಾವಸಾರ, ಸಿಂಪಿ, ಪಟ್ಟೇಗಾರ, ಆರ್ಯ, ಕೊಂಕಣ, ಮರಾತಿ, ಗೋಂದಲಿ ಎಂಬಿತ್ಯಾದಿ ಪಂಗಡಗಳು ಅಸ್ತಿತ್ವಕ್ಕೆ ಬಂತು.
ಮರಾಠ ಸಮುದಾಯದಲ್ಲಿ ಒಟ್ಟು 33 ಉಪ ಪಂಗಡಗಳಿವೆ. ವಿಚಿತ್ರ ಎಂದರೆ 27 ಪಂಗಡಗಳನ್ನು ಸರ್ಕಾರ ಜಾತಿ ಪಟ್ಟಿಯಲ್ಲಿ 2ಎಗೆ ಸೇರಿಸಿದೆ. ಮರಾಠ ಕ್ಷತ್ರಿಯ ಸೇರಿದಂತೆ ಉಳಿದವು ಮಾತ್ರ 3ಬಿನಲ್ಲಿವೆ. ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟ ನಮ್ಮನ್ನೂ 2ಎಗೆ ಸೇರಿಸಿ ಎಂದು ಕಳೆದ 20-25 ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದೆ. ಆದರೆ ಕಿವಿಗೆ ಹಾಕಿಕೊಳ್ಳುವವರು ಯಾರು ?

ಬೀಡಿ ಸುತ್ತುತ್ತಿದ್ದಾರೆ: ರಾಜ್ಯದ ಎಲ್ಲ ಭಾಗಗಳಲ್ಲೂ ಕ್ಷತ್ರಿಯ ಮರಾಠಿಗರಿದ್ದಾರೆ. ಹಳಿಯಾಳ ಸುತ್ತಮುತ್ತಲ ಪ್ರದೇಶದಲ್ಲಿ ಈ ಜನಾಂಗದವರು ಸೇಂಧಿ ಇಳಿಸುವ ಕೆಲಸ ಮಾಡುತ್ತಿದ್ದರು. ಕಡೂರು, ಬೀರೂರು ಮತ್ತಿತರ ಕಡೆಗಳಲ್ಲಿ ಅಡಕೆ ಇಳಿಸುವ, ಸುಲಿಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗೌರಿಬಿದನೂರು ತಾಲೂಕಿನ ಹೊಸೂರು ಸಮೀಪದ ಮೈಲಿಗಾನ, ಮರಾಠಪಾಳ್ಯ ಸೇರಿದಂತೆ 9 ಹಳ್ಳಿಗಳಲ್ಲಿಯೂ ಈ ಸಮುದಾಯದ ಜನರಿದ್ದಾರೆ. ಅವರಲ್ಲಿ ಅನೇಕ ಕುಟುಂಬಗಳು ಬೀಡಿ ಸುತ್ತುವ ಕೆಲಸ ಮಾಡುತ್ತಿವೆ. ದೇಶಸೇವೆ ಮತ್ತು ದೇಶದ ರಕ್ಷಣೆಗಾಗಿ ಅಂದು ಟೋಂಕ ಕಟ್ಟಿ ಹೋರಾಟ ಮಾಡಿದ ಮತ್ತು ತ್ಯಾಗ, ಬಲಿದಾನಕ್ಕೆ ಹೆಸರಾದ ಸಮುದಾಯದ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ ಎನ್ನುತ್ತಾರೆ ಹಿರಿಯರು.
ಒಟ್ಟಿನಲ್ಲಿ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಕ್ಷತ್ರಿಯ ಮರಾಠ ಸಮುದಾಯ ಹರಡಿಕೊಂಡಿದೆ. ಅದರಲ್ಲೂ ಬೆಳಗಾವಿಯಲ್ಲಿ 15ರಿಂದ 20 ಲಕ್ಷದವರೆಗೂ ಜನಸಂಖ್ಯೆ ಇದೆ. ಬೆಂಗಳೂರು ಜಿಲ್ಲೆಯಲ್ಲಿ 6-7 ಲಕ್ಷದವರೆಗೆ ಇದ್ದಾರೆ. ಎಲ್ಲ ಪಂಗಡಗಳನ್ನು ಸೇರಿಸಿದರೆ ರಾಜ್ಯಾದ್ಯಂತ 80 ಲಕ್ಷ ಇರಬಹುದು ಎನ್ನುತ್ತಾರೆ ಕರ್ನಾಟ ಕ್ಷತ್ರಿಯ ಮರಾಠ ಒಕ್ಕೂಟದ ಅಧ್ಯಕ್ಷ ಶಾಮಸುಂದರ ಗಾಯಕ್‌ವಾಡ್ ಅವರು. ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ, ಎಸ್.ಆರ್.ಮೋರೆ. ಪಿ.ಎಸ್.ರಾಣೆ ರಾಜಕೀಯದಲ್ಲಿ ಹೆಸರು ಮಾಡಿದ ಪ್ರಮುಖರು. ಪ್ರಸ್ತುತ ಸಾಂಬಾಜಿ ಪಾಟೀಲ್, ಅರವಿಂದ ಪಾಟೀಲ್, ಅನಿಲ್ ಲಾಡ್ ಮತ್ತು ಸಚಿವ ಸಂತೋಷ್ ಲಾಡ್ ಸಹ ಇದೇ ಸಮುದಾಯಕ್ಕೆ ಸೇರಿದವರು. ಕಾಕಾ ಸಾಹೇಬ್ ಪಾಟೀಲ್ ಮಾಜಿ ಶಾಸಕರು. ಇನ್ನು ಅರವಿಂದ ಜಾಧವ್ ಐಎಎಸ್, ಹೇಮಂತ ನಿಂಬಾಳ್ಕರ್ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಸಹ ಕ್ಷತ್ರಿಯ ಮರಾಠಿಗರು. ಅವರ ಸಹೋದರ ಗವಿಪುರಂನಲ್ಲಿ ನೆಲೆಸಿದ್ದಾರೆ. ತಂದೆಯ ಊರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ ಎನ್ನುತ್ತಾರೆ ಶಾಮಸುಂದರ್ ಗಾಯಕ್‌ವಾಡ್ ಅವರು.

ಶೇ.1ರಷ್ಟು ಸ್ಥಿತಿವಂತ ಕುಟುಂಬಗಳು:
ಈ ಸಮಾಜದಲ್ಲಿ ಶೇ.100ರಲ್ಲಿ ಶೇ.1ರಷ್ಟು ಮಾತ್ರ ಸ್ಥಿತಿವಂತ ಕುಟುಂಬಗಳಿವೆ. ಉಳಿದವರು ಸಂಕಷ್ಟದಲ್ಲೇ ಕಾಲ ತಳ್ಳುತ್ತಿದ್ದಾರೆ. ಅದರಲ್ಲೂ ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಏನಾದರೂ 2ಎಗೆ ಸೇರಿಸಿದರೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಚೇತರಿಸಿಕೊಳ್ಳಬಹುದು. ಇದರಿಂದ ಉದ್ಯೋಗದ ಅವಕಾಶವೂ ಸಿಗುತ್ತದೆ ಎಂಬುದು ಅವರ ನಿರೀಕ್ಷೆ.
ಕ್ಷತ್ರಿಯ ಮರಾಠಿಗರು ಹೆಸರಿಗೆ ತಕ್ಕಂತೆ ಸೈನಿಕರಾಗಿದ್ದವರು. ಯುದ್ಧದ ಸಂದರ್ಭದಲ್ಲಿ ಮುಂದೆ ನುಗ್ಗುತ್ತಿದ್ದುದೇ ಅವರು. ಮೈಸೂರು ಸಂಸ್ಥಾನದಲ್ಲೂ ರಾಜರಿಗೆ ಈ ಸಮುದಾಯದ ಜನರೇ ಅಂಗರಕ್ಷಕರಾಗಿದ್ದರಂತೆ. ಉಳಿದ ಸಮಯದಲ್ಲಿ ಬೇಸಾಯ ಅವರ ಕಸುಬು. ಹೀಗಾಗಿ ನೀರಾವರಿ ಅನುಕೂಲ ಇರುವ ಪ್ರದೇಶಗಳನ್ನೇ ಅವರು ತಮ್ಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು.
1639ರಿಂದ 1664ರ ವರೆಗೆ ಇದೇ ಸಮುದಾಯದ ಅಂದರೆ ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರು ರಾಜ್ಯಪಾಲರಾಗಿ ಬೆಂಗಳೂರು ಆಳ್ವಿಕೆ ಮಾಡುತ್ತಿದ್ದರಂತೆ. ಬೆಂಗಳೂರು ನಗರ ನಿರ್ಮಾಪಕ ಕೆಂಪೇಗೌಡರೊಂದಿಗೆ ಅವರು ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದರಂತೆ. ಕನ್ನಡಿಗರು ಮತ್ತು ಮರಾಠಿಗರ ಬಾಂಧವ್ಯ ಶುರುವಾಗಿದ್ದೇ ಅಲ್ಲಿಂದ ಎನ್ನುತ್ತಾರೆ ಗಾಯಕ್‌ವಾಡ್ ಅವರು. ವಿಶೇಷ ಎಂದರೆ ಚಿಕ್ಕಪೇಟೆಯ ವಿಜಯಲಕ್ಷ್ಮಿ ಟಾಕೀಸ್ ಬಳಿ ಇರುವ ಶಾಸ್ತ್ರಿ ಹೊಟೇಲ್ ಶಹಾಜಿ ಮಹಾರಾಜರ ಅರಮನೆ ಆಗಿತ್ತಂತೆ. ಚಿಕ್ಕಪೇಟೆಯ ಅಂಬಾಭವಾನಿ ದೇವಸ್ಥಾನ ಕಟ್ಟಿಸಿದ್ದು, ಬನಶಂಕರಿ ದೇವಾಲಯದಲ್ಲಿನ ಬನಶಂಕರಿ ದೇವಿಯ ವಿಗ್ರಹವನ್ನು ಬದಾಮಿ, ಐಹೊಳೆಯಿಂದ ಬರುವಾಗ ತಂದು ಪ್ರತಿಷ್ಠಾಪನೆ ಮಾಡಿದ್ದೂ ಶಹಾಜಿ ಮಹಾರಾಜರಂತೆ.

ಸೇನೆಯಲ್ಲಿ ಹೆಸರುವಾಸಿ: ಅದೇ ರೀತಿ ದೊಡ್ಡಬಳ್ಳಾಪುರ ಸಮೀಪದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟಿಸಿದ್ದು ಘೋರ್ಪಡೆ ಕುಟುಂಬದವರು. ಬೆಂಗಳೂರಿನ ವಿವಿ ಪುರಂನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ನಿರ್ಮಿಸಿದ್ದು ಸಜ್ಜನ್‌ರಾವ್ ಕುಟುಂಬಸ್ಥರು. ಬಿಎಂಎಸ್ ಕಾಲೇಜು ಬಳಿ ಇರುವ ಕಾರಂಜಿ ಆಂಜನೇಯ ದೇವಾಲಯದ ನಿರ್ಮಾಣದ ಹಿಂದೆ ಶಿಂಧೆಗಳ ಹೆಸರಿದೆ ಎಂದು ವಿವರಿಸುತ್ತಾರೆ ಗಾಯಕ್‌ವಾಡ್ ಅವರು.
ಭಾರತೀಯ ಸೇನೆ, ಪೊಲೀಸ್ ಇಲಾಖೆಯಲ್ಲಿ ಈ ಸಮುದಾಯದ ಮಂದಿ ಹೆಸರು ಮಾಡಿದ್ದಾರೆ. ಅನೇಕ ಮಂದಿ ಸೈನ್ಯದಲ್ಲಿ ಹುತಾತ್ಮರಾಗಿದ್ದಾರೆ. ಇದಲ್ಲದೆ, ಮರಾಠ ರೆಜಿಮೆಂಟ್ ದೇಶವ್ಯಾಪಿ ಖ್ಯಾತಿ ಹೊಂದಿದೆ. ಮಂತ್ರಿಗಳಿಗೆ ಅಂಗ ರಕ್ಷಕರಾಗಿ, ಸೆಕ್ಯುರಿಟಿ ಗಾರ್ಡ್‌ಗಳಾಗಿ ಮತ್ತು ಕಾರು ಚಾಲಕರಾಗಿಯೂ ನಮ್ಮವರು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಅವರು.

ನಮ್ಮ ಸಮುದಾಯವನ್ನು 2ಎಗೆ ಸೇರಿಸುವುದರಿಂದ ಬೇರೆ ಯಾವ ಜನಾಂಗಕ್ಕೂ ತೊಂದರೆ ಆಗದು. ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಿದರೆ ಕ್ಷತ್ರಿಯ ಮರಾಠ ಸಮಾಜ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರಿಯುತ್ತದೆ.
- ಶಾಮಸುಂದರ ಗಾಯಕ್‌ವಾಡ್, ಅಧ್ಯಕ್ಷ ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟ

- ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.