ಪಾರದರ್ಶಕ ಚುನಾವಣೆಯೂ, ಕುರುಕ್ಷೇತ್ರ ಯುದ್ಧವೂ..
ಹಸ್ತಿನಾಪುರದಲ್ಲಿ ಪ್ರಜಾಪ್ರಭುತ್ವವಿದ್ದರೆ ಹೇಗಿರುತ್ತಿತ್ತು? ಅರ್ಧ ರಾಜ್ಯವನ್ನು ಪಾಂಡವ..
ಹಸ್ತಿನಾಪುರದಲ್ಲಿ ಪ್ರಜಾಪ್ರಭುತ್ವವಿದ್ದಿದ್ದರೆ ಹೇಗಿರುತ್ತಿತ್ತು? ಅರ್ಧ ರಾಜ್ಯವನ್ನು ಪಾಂಡವರಿಗೆ ಕೊಡಬೇಕು ಎನ್ನುವ ಗೊಂದಲವನ್ನು ತಪ್ಪಿಸಿ, ಸ್ವಚ್ಛ ಮತ್ತು ಪಾರದರ್ಶಕ ಚುನಾವಣೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಇನ್ನು ಪ್ರಜಾಪ್ರಭುತ್ವದಲ್ಲಿನ ಕೆಲವು ಉಪದ್ರವಗಳೂ ಅದರಲ್ಲಿರುತ್ತಿದ್ದವು. ದುರ್ಯೋಧನ ಚುನಾವಣಾ ಸಮಿತಿಗೆ ಸಲ್ಲಿಸುವ ತನ್ನ ಅಫಿಡವಿಟ್ಟಿನಲ್ಲಿ ಒಂದಲ್ಲದಿದ್ದರೆ ಎರಡು ತಪ್ಪು ಮಾಹಿತಗಳನ್ನು ತೂರಿಸುತ್ತಿದ್ದ. ಆದರೆ ಹದ್ದು ಮೀರಿ ಸುಳ್ಳು ಹೇಳುವುದಕ್ಕೂ ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ತನ್ನ ಆಸ್ತಿಯ ವಿವರಗಳನ್ನು ಅಥವಾ ಇತ್ಯರ್ಥವಾಗದ ಕ್ರಿಮಿನಲ್ ಕೇಸುಗಳನ್ನು ಆತ ಮುಚ್ಚಿಹಾಕಲು ಪ್ರಯತ್ನಿಸಿದ್ದನ್ನು 'ಕ್ರೈಮ್ಸ್ ವಾವ್!' ನಂಥ ಸುದ್ದಿ ಮಾಧ್ಯಮಗಳು ಬಯಲಿಗೆಳೆಯುತ್ತಿದ್ದವು!
ಇನ್ನು ಈ ಚುನಾವಣೆಯ ಆಕರ್ಷಕ ಅಂಶವೆಂದರೆ, ವೋಟ್ ಬ್ಯಾಂಕ್ ರಾಜಕೀಯದ ವಿಷಯವಾಗಿ ಜಗಳಗಳೇ ಆಗುತ್ತಿರಲಿಲ್ಲ ಎಂಬುದು. ಏಕೆಂದರೆ ವಿರೋಧ ಪಕ್ಷಗಳೂ ಕೂಡ ಅದೇ ಕೆಲಸ ಮಾಡುತ್ತಿದ್ದವು. ಈ ನಿಟ್ಟಿನಲ್ಲಿ ದುರ್ಯೋಧನ ತೋರಿದ ಚಾಲಾಕಿತನವನ್ನು ಗಮನಿಸಿ- ಅತ್ಯಂತ ಹಿಂದುಳಿದ ವರ್ಗದಲ್ಲಿ ಹುಟ್ಟಿದ್ದಾನೆ ಎನ್ನುವ ಅವಮಾನ ಕರ್ಣನನ್ನು ಸುತ್ತಿಕೊಂಡಾಗಲೇ, ದುರ್ಯೋಧನ ತನ್ನ ದರ್ಬಾರಿನಲ್ಲಿ ಅವನಿಗೆ ದೊಡ್ಡ ಸ್ಥಾನ ಕೊಟ್ಟು, ಮೈತ್ರಿ ಮಾಡಿಕೊಂಡ. ಕರ್ಣನ ನಿಷ್ಠೆ ದುರ್ಯೋಧನನಿಗೆ ಮೀಸಲಾಯಿತು. ಇನ್ನು ಇತ್ತ ಧರ್ಮಪುತ್ರನೂ ಕಡಿಮೆ ಇರಲಿಲ್ಲ. ಅಭಿಮನ್ಯು(ಅರ್ಜುನನ ಮಗ) ಹುಟ್ಟಿದಾಕ್ಷಣ ಇದೇ ಸರಿಯಾದ ಸಂದರ್ಭವೆಂದರಿತು, ಆಗ ಅತಿ ಪ್ರಬಲ ವೋಟ್ ಬ್ಯಾಂಕ್ ಆಗಿದ್ದ ಬ್ರಾಹ್ಮಣರಿಗೆ 10,000 ಗೋವುಗಳನ್ನು ದಾನ ಮಾಡಿದ!
ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ನಮ್ಮ ರಾಜಕಾರಣಿಗಳು ಎಲ್ಲವನ್ನೂ 'ಉಚಿತ'ವಾಗಿ ನೀಡಲು ಮುಂದಾಗುತ್ತಾರೆ. ಈ 'ಉಚಿತ'ಗಳನ್ನು ಸುಪ್ರೀಂ ಕೋರ್ಟ್ ಎಷ್ಟು ಬೇಕಾದರೂ ಟೀಕಿಸಿದರೂ, ಆಹಾರ ಭದ್ರತಾ ಮಸೂದೆಯಂಥ ಬಿಲ್‌ಗಳು ಸುಲಭವಾಗಿ ಜಾರಿಯಾಗಿಬಿಡುತ್ತವೆ. ಉಚಿತ ಲ್ಯಾಪ್‌ಟಾಪ್, ಉಚಿತ ಅಕ್ಕಿ ಯೋಜನೆಗಳು ತೀರಾ ಸಾಮಾನ್ಯವಾಗಿಬಿಟ್ಟಿವೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ನಮ್ಮ ನಾಯಕರು ಹೊಸ 'ಉಚಿತ'ಗಳ ಐಡಿಯಾಗಳನ್ನು ತರುವುದು ಖಚಿತ. ಉಚಿತ ಪದವಿ, ವಿದೇಶದಲ್ಲಿ ಉಚಿತ ಚಿಕಿತ್ಸೆ...ಹೀಗೇ ಸಾಗಬಹುದು ಪಟ್ಟಿ.
ಯಾವಾಗ ಬಿಜೆಪಿ ನರೇಂದ್ರ ಮೋದಿಯವರಿಗೆ ಕಿರೀಟ ತೊಡಿಸಿತೋ, ಆಗಿನಿಂದಲೂ ಅವರ ಸುತ್ತ ಹೊಸ ಸಂಸ್ಕೃತಿಯೊಂದು ಹುಟ್ಟಿಕೊಳ್ಳುತ್ತಿದೆ. ಮುಸ್ಲಿಂ ವಾಗ್ಮಿಗಳು ಟಿ.ವಿ. ಸ್ಟೂಡಿಯೋಗಳೊಳಗೆ ಬಂದು, ಹೇಗೆ ಮೋದಿಯವರ ಆಡಳಿತದಿಂದಾಗಿ ಗುಜರಾತಿ ಮುಸಲ್ಮಾನರು ಲಾಭ ಪಡೆಯುತ್ತಿದ್ದಾರೆ ಎನ್ನುವುದನ್ನು ವರ್ಣಿಸುತ್ತಿದ್ದಾರೆ. ಒಬ್ಬರಂತೂ, ಬಿಹಾರಕ್ಕಿಂತ ಗುಜರಾತ್‌ನ ಸರ್ಕಾರ ಮತ್ತು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರಿದ್ದಾರೆ ಎನ್ನುವುದನ್ನು ಅಂಕಿ ಸಂಖ್ಯೆಗಳ ಮೂಲಕ ತೋರಿಸಿದರು. ಮೋದಿಯವರ ಜೈಪುರ ರ್ಯಾಲಿಯ ವೇಳೆ ಆಯೋಜಕರು ಸುಮಾರು 5000 ಟೊಪ್ಪಿಗಳನ್ನು ಮತ್ತು ಬುರ್ಖಾಗಳನ್ನು ನೆರೆದಿದ್ದ ಮುಸಲ್ಮಾನರಿಗೆ ಹಂಚಿದರು(ಕಾರ್ಯಕ್ರಮಕ್ಕೆ ಬಂದಿದ್ದ ಮುಸಲ್ಮಾನರು ಮುಸಲ್ಮಾನರಂತೆಯೇ ಕಾಣಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು). ಇನ್ನು ಅಲ್ಪಸಂಖ್ಯಾತರನ್ನು ಸಾವಿರ ಸಾವಿರ ಸಂಖ್ಯೆಯಲ್ಲಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ಪ್ರಯತ್ನ ಗುಜರಾತ್‌ನಲ್ಲಿ ಶುರುವಾಗಿದೆ. ಈ ವೇಗವನ್ನು ಗಮನಿಸಿದರೆ, ನರೇಂದ್ರ ಮೋದಿ ಆಧುನಿಕ ಭಾರತದ ಮುಸಲ್ಮಾನರ ಪಾಲಿನ ಹೀರೋ ಆಗಿ ಬದಲಾಗಬಹುದೇನೋ.
ಅದಾಗ್ಯೂ ಆ ಸ್ಥಾನ ತನಗೇ ಸೇರಿದ್ದು ಎಂದು ವಾದಿಸುವ ಉತ್ತರಪ್ರದೇಶದ ಸಮಾಜವಾದಿ ಪಕ್ಷದಿಂದ ಮೋದಿಗೆ ಯಾವ ಸವಾಲೂ ಎದುರಾಗಲಾರದು. ಯಾವುದೇ ಕಾನೂನನ್ನು ಪರಿಪಾಲಿಸದೆ ಎಗ್ಗಿಲ್ಲದೇ ಓಡುತ್ತಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ(ಹಾಗಂತ ಮಾಯಾವತಿ ಸರ್ಕಾರವೇನೂ ಕಾನೂನುಪಾಲಕನಾಗಿರಲಿಲ್ಲ. ಈಗ ಅಖಿಲೇಶ ಸರ್ಕಾರದ ಬಗ್ಗೆ ಹೀಗೆ ಹೇಳುತ್ತಿದ್ದೇನೆ ಎಂದರೆ ಸದ್ಯದ ಪರಿಸ್ಥಿತಿ ಹೇಗಿರಬಹುದೋ ಯೋಚಿಸಿ?). ಮುಝಫರ್‌ನಗರ ಗಲಭೆಯಲ್ಲಿ ಸರ್ಕಾರ ಸಕ್ರಿಯ ಪಾತ್ರ ವಹಿಸಿದೆ ಎನ್ನುವುದಕ್ಕೆ ಬಲವಾದ ಸಾಕ್ಷಿಗಳಿವೆ. ಪೊಲೀಸರನ್ನು ಸುಮ್ಮನೇ ಕೂರಿಸಲಾಯಿತು, ದ್ವೇಷ ಭಾಷಣಗಳಿಗೆ ಅವಕಾಶಮಾಡಿಕೊಡಲಾಯಿತು. ಕೊನೆಗೂ ಬಿಜೆಪಿ ಮತ್ತು ಉಳಿದ ಪಕ್ಷಗಳಲ್ಲಿನ ಕೆಲವು ಪ್ರಚೋದನಕಾರರನ್ನು ಬಂಧಿಸಲಾಯಿತಾದರು, ಒಬ್ಬೇ ಒಬ್ಬ ಸಮಾಜವಾದಿ ಪಕ್ಷದ ನಾಯಕನನ್ನೂ ಪೊಲೀಸರು ಮುಟ್ಟಲಿಲ್ಲ.
ಉಳಿದ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ಗೊಂದು ಅಡ್ವಾಂಟೇಜ್ ಇದೆ: ಅದೇನೆಂದರೆ ಆ ಪಕ್ಷದ ನಾಯಕರಿಂದ ಯಾರೂ ಏನನ್ನೂ ನಿರೀಕ್ಷಿಸುವುದಿಲ್ಲ ಎಂಬುದು! ಆ ಪಕ್ಷದ ಅಧ್ಯಕ್ಷೆಗೆ ಯಾವುದರ ಬಗ್ಗೆಯೂ ಮಾತನಾಡುವ ಅವಶ್ಯಕತೆಯಿಲ್ಲ. ಅದು ಅವರಿಗೆ ಗೊತ್ತಿದೆ. ಪ್ರಧಾನಮಂತ್ರಿಗಳಿಗೆ ಏನಾದರೂ ಮಾಡುವ ಅಥವಾ ಮಾತನಾಡುವ ಅವಶ್ಯಕತೆಯಿಲ್ಲ. ಅದೂ ಅವರಿಗೆ ಗೊತ್ತಿದೆ. ಇನ್ನು ಮುಂದಿನ ಪ್ರಧಾನಿಯೆಂದು ಬಿಂಬಿತವಾಗಿರುವ ರಾಹುಲ್‌ಗಾಂಧಿಗೂ ಇದು ಅನ್ವಯಿಸುತ್ತದೆ. ಆದರೆ ಈ ಬಗ್ಗೆ ಅವರಿಗೆ ಸ್ಪಷ್ಟವಾಗಿ ಏನೂ ಗೊತ್ತಿಲ್ಲ! ಒಂದು ವೇಳೆ ಈ ಗಾಂಧಿ ಕುಟುಂಬ ಮಾತನಾಡಿದರೂ, ತಮ್ಮ ಮಾತು ಎಲ್ಲರಿಗೂ ಅನ್ವಯವಾಗುತ್ತದೆ ಎನ್ನುವ ಭ್ರಮೆಯಲ್ಲಿರುತ್ತದೆ. ಜೈಪುರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಯುವಕರನ್ನು ಬೆಂಬಲಿಸಬೇಕು, ಹಾಗೆ ಮಾಡಿದಾಗ ಅವರು ದೊಡ್ಡ ಕನಸು ಕಾಣಲು ಶಕ್ತರಾಗುತ್ತಾರೆ ಎಂದಿದ್ದರು. ಇನ್ನು ಅದ್ಯಾವ ಯೋಚನೆಯಲ್ಲಿ ಹೇಳಿದರೋ ಗೊತ್ತಿಲ್ಲ, 'ಬಡತನಕ್ಕೆ ಮೂಲ ಕಾರಣ ನಿರುದ್ಯೋಗವಲ್ಲ, ಬದಲಾಗಿ ಅನಾರೋಗ್ಯ' ಎಂದು ಬಿಟ್ಟರು. ಪಾಪ, ರಾಹುಲ್ ಗಾಂಧಿ ಪ್ರಚಾರ ನಡೆಸುತ್ತಿರುವ ರಾಜ್ಯಗಳಲ್ಲೆಲ್ಲ ಏಕೆ ಸೋಲುತ್ತಿದ್ದೇವೆ ಎನ್ನುವುದು ಕಾಂಗ್ರೆಸ್‌ಗೇಕೋ ತಿಳಿಯುತ್ತಿಲ್ಲ.
ಇನ್ನೊಮ್ಮೆ ಯೋಚಿಸಿದರೆ, ಚುನಾವಣೆಗಳಿಗಿಂತ ಕುರುಕ್ಷೇತ್ರವೇ ಸರಿಯಾದುದೇನೋ ಎನಿಸದಿರದು. ಕಡೇಪಕ್ಷ, ಯುದ್ಧವನ್ನು ನಿಯಮಗಳಿಗನುಸಾರವಾದರೂ ಮಾಡಲಾಗುತ್ತದೆ. ಧರ್ಮಪುತ್ರ, ಯುದ್ಧಕಾಲದಲ್ಲಿ ಭೀಷ್ಮ ಮತ್ತು ದ್ರೋಣರನ್ನು ಭೇಟಿಯಾಗಿ ಆಡಿದ ಮಾತುಗಳು ನನ್ನ ವಾದಕ್ಕೆ ಪೂರಕವಾಗಿವೆ. ಅವನು ಕೇಳುತ್ತಾನೆ- "ಹೇಳಿ, ನಿಮ್ಮನ್ನು ಸಾಯಿಸುವುದು ಹೇಗೆ?" ಹೀಗೆ ಕೇಳಿದಾಕ್ಷಣ ಆ ಇಬ್ಬರು ಜ್ಞಾನಿಗಳು ತಮ್ಮನ್ನು ಹೇಗೆ ಸಾಯಿಸಬಹುದು ಎಂಬ ಗುಟ್ಟನ್ನು ಬಿಟ್ಟುಕೊಡುತ್ತಾರೆ. ಅವರ ಆಶೀರ್ವಾದ ಪಡೆದು ಅವನು ಅವರನ್ನೇ ಸಾಯಿಸುತ್ತಾನೆ. ಇಂಥದ್ದೆಲ್ಲ ಈ ಕಾಲದಲ್ಲಿ ನಡೆಯುವಂಥದ್ದಲ್ಲ ಬಿಡಿ!
-ಟಿಜೆಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

