ಪಾತ್ರ ತಿರುಗಿಸುವ ನೀರ ಅಭಿವೃದ್ಧಿ ನಮಗೇಕೆ?
ಲೋಕರಕ್ಷಕ, ದೀನನಾಥ ಕೇದಾರನಾಥ ಈಗ ಅನಾಥನಲ್ಲ. ಆತನ ಪೂಜೆ ಪುನಸ್ಕಾರ...

ಲೋಕರಕ್ಷಕ, ದೀನನಾಥ ಕೇದಾರನಾಥ ಈಗ ಅನಾಥನಲ್ಲ. ಆತನ ಪೂಜೆ ಪುನಸ್ಕಾರ ಜಲಪ್ರಳಯದ 80 ದಿನಗಳ ಬಳಿಕ ಸೆಪ್ಟೆಂಬರ್‌ನಲ್ಲಿ ಪುನರಾರಂಭಗೊಂಡಿದೆ. ಉತ್ತರಾಂಚಲ ಸರ್ಕಾರವೇನೋ ಇದನ್ನು ಪ್ರತಿಷ್ಠೆಯಂತೆ ಪರಿಗಣಿಸಿ ದೇವಸ್ಥಾನದಲ್ಲಿ ಪೂಜೆ ಪ್ರಾರಂಭಿಸಲು ತರಾತುರಿ ತೋರಿದೆ. ಆದರೆ, ದೇಗುಲಕ್ಕೆ ಬರುವ ಹಾದಿ ಸರಿಪಡಿಸಲು ಇನ್ನೆರಡು ವರ್ಷವಾದರೂ ಬೇಕಾಗುತ್ತದೆ. ಮೇಘಸ್ಫೋಟವನ್ನು ನೆಪವಾಗಿಟ್ಟುಕೊಂಡು ಗಂಗೆ ತನ್ನ ಸಿಟ್ಟು, ಆಕ್ರೋಶಗಳನ್ನು ಹೊರಹಾಕಿದ ಪರಿ ಇದೆ ಎನ್ನುವುದನ್ನು ಆಳುವವರು ಅರ್ಥಮಾಡಿಕೊಳ್ಳದೇ ಇದ್ದರೆ ಹಿಮಾಲಯದ ತಪ್ಪಲಿನಲ್ಲಿ ಇನ್ನಷ್ಟು ಅನಾಹುತಗಳನ್ನು ಮೈಮೇಲೆಳೆದುಕೊಳ್ಳುವ ಪರಿಸ್ಥಿತಿ ಎದುರಾದೀತು.
ಕೇದಾರನಾಥದಲ್ಲಿ ದೇಗುಲವೆಂದರೆ ಅದೊಂದು ಅತ್ಯಪೂರ್ವ ಶಿಲ್ಪ ಕಾವ್ಯ. ಹಿಮಾಚ್ಛಾದಿತ ಪರ್ವತ ಶ್ರೇಣಿಯ ಉತ್ತುಂಗದಲ್ಲಿ ಅರಳಿರುವ ಇದನ್ನು ಸುಮಾರು 8ನೇ ಶತಮಾನದಲ್ಲಿ ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಉತ್ತರಾಂಚಲ ರಾಜ್ಯದ ಘಡ್ವಾಲ್ ಜಿಲ್ಲೆಯಲ್ಲಿದೆ. ಭಾರತೀಯ ಪಾರಂಪರಿಕ ನಂಬಿಕೆಯ ಪ್ರಕಾರ ಶಿವನನ್ನು ಹನ್ನೆರಡು ಜ್ಯೋತಿರ್ಲಿಂಗಗಳ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ಕೇದಾರನಾಥ ಅವುಗಳಲ್ಲೊಂದು. ತೀರ್ಥಯಾತ್ರೆಯಲ್ಲಿ ಚಾರ್‌ಧಾಮ್ ಅಥವಾ ಚತುರ್ಧಾಮ ಯಾತ್ರೆ ಅತ್ಯಂತ ಪ್ರಮುಖವಾದುದು. ಆ ಪೈಕಿ ಕೇದಾರವೂ ಮುಖ್ಯ ಯಾತ್ರಾ ಸ್ಥಳ. ಕೇದಾರನಾಥ ಯಾತ್ರೆ ಭಾರತ- ಚೀನಾ ಗಡಿಗೆ ಅಂಟಿಕೊಂಡಂತಿರುವ 'ಗೌರಿಕುಂಡ'ವೆಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಇದು ಅತ್ಯಂತ ಸಮತಟ್ಟಾದ ಪ್ರದೇಶ. ಇಲ್ಲಿಯವರೆಗೆ ರಸ್ತೆ ಮಾರ್ಗವಿತ್ತು. ಜೂನ್‌ನ ಜಲಪ್ರಳಯದಲ್ಲಿ ಸೋನ್‌ಪ್ರಯಾಗದಿಂದ ಗೌರಿಕುಂಡದವರೆಗಿನ ರಸ್ತೆ ಸಂಪರ್ಕ ಕಡಿದುಹೋಗಿದೆ. ಗೌರಿಕುಂಡದಿಂದ ಕೇದಾರನಾಥ 14 ಕಿ.ಮೀ. ಕಾಲುದಾರಿಯ ದೂರ. ಗೌರಿಕುಂಡ 1981 ಮೀ. ಎತ್ತರದಲ್ಲಿದೆ. ಕೇದಾರನಾಥ ಸಮುದ್ರಮಟ್ಟದಿಂದ 3581 ಮೀ. ಎತ್ತರದಲ್ಲಿದೆ. ಗೌರಿಕುಂಡದಿಂದ ಕೇದಾರಕ್ಕೆ ಹೋಗುವ ಕಾಲುದಾರಿ ಅತ್ಯಂತ ಕಿರಿದು ಮತ್ತು ಕಡಿದು. ಗೌರಿ ಕುಂಡದಿಂದ ನಡಿಗೆ, ಕುದುರೆಸವಾರಿ ಅಥವಾ ಡೋಲಿಯಲ್ಲಿ ಪಯಣಿಸಬೇಕು. ಈ ವಿಧಾನದಲ್ಲಿ ಸುಮಾರು 4-5 ಗಂಟೆಯ ಪಯಣ. ಇಲ್ಲವೇ 10 ನಿಮಿಷಗಳ ಹೆಲಿಕಾಪ್ಟರ್ ಪಯಣದಲ್ಲಿ ಕೆಳಗಿನ ಗಿರಿಶಿಖರಗಳ ವಿಹಂಗಮ ನೋಟ ಸವಿಯುತ್ತ ಕೇದಾರನಾಥನ ಸನ್ನಿಧಿ ತಲುಪಬಹುದು. ಹೆಲಿಪ್ಯಾಡ್‌ನಿಂದ ದೇವಸ್ಥಾನಕ್ಕೆ ಸುಮಾರು ಅರ್ಧ ಕಿ.ಮೀ. ನಡೆದು ಹೋಗಬೇಕು. ತುಸು ಏರುಮುಖವಾಗಿರುವ ಪ್ರದೇಶದಲ್ಲಿ 3 ಅಡಿ ಅಗಲದ ಕಾಂಕ್ರೀಟ್ ರಸ್ತೆ ಮಂದಿರದವರೆಗೂ ಇತ್ತು. ಜಲ ಪ್ರವಾಹಕ್ಕೆ ಸಿಲುಕಿ ಇದು ಕೊಚ್ಚಿ ಹೋಗಿದೆ. ಹೆಲಿಕಾಪ್ಟರ್ ಇಳಿದೊಡನೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ತುಸುವೇ ಕಷ್ಟ. ಆಮ್ಲಜನಕದ ಕೊರತೆ ನಿಮ್ಮನ್ನು ಬಾಧಿಸುತ್ತದೆ.
ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇಗುಲದ ವೈಶಿಷ್ಟ್ಯವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ದೇಗುಲದ ಹಿಂದೆಯೇ ಶಂಕರರ ಸಮಾಧಿ ಮಂದಿರ. ಇಲ್ಲಿನ ಪ್ರಾಚೀನ ಶೈವ ಪೀಠಗಳಲ್ಲೊಂದಾದ ಏಕೋರಾಮಾರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ. ದೇವಸ್ಥಾನದ ಮಾಡು ಬಹಳ ಎತ್ತರವಾಗಿದೆ. ಹಿಂಬದಿಯಲ್ಲಿ ಗಂಗಾ ನದಿಯ ಉಪನದಿ ಮಂದಾಕಿನಿಯು ಮಂದಗತಿಯಲ್ಲಿ ಹರಿಯುತ್ತದೆ.
ಕೇದಾರನಾಥ ದೇಗುಲ 11ನೇ ಶತಮಾನದಲ್ಲಿ ನಿರ್ಮಾಣವಾದದ್ದು ಎಂದೂ ಹೇಳಲಾಗುತ್ತದೆ. ಅತ್ಯಂತ ಅಪರೂಪದ ವಾಸ್ತುಶೈಲಿಯ ಕಟ್ಟಡ. ದೇಶದ ದೇಗುಲಗಳ ಸಾಲಿನಲ್ಲಿ ಕೇದಾರ ದೇಗುಲದ ಶೈಲಿಗೆ ತನ್ನದೇ ಪ್ರಾಮುಖ್ಯವಿದೆ. ನಾಗರ ಶೈಲಿಯಲ್ಲಿ ದೇಗುಲವನ್ನು ನಿರ್ಮಿಸಲಾಗಿದ್ದು, ಬೆಟ್ಟಗಳಲ್ಲಿ ಕಟ್ಟಡ ನಿರ್ಮಿಸಲು ಬಳಸುವ ಕಟ್ಯೂರಿ ಶೈಲಿಯನ್ನು ಅಳವಡಿಸಿಕೊಂಡು ಕಟ್ಟಲಾಗಿರುವ ಈ ದೇವಾಲಯ ಜಲಪ್ರಳಯದಿಂದ ಸ್ವಲ್ಪ ಮಟ್ಟಿನ ಹಾನಿಗೊಳಗಾಗಿದೆ. ನೀರಿನ ರಭಸಕ್ಕೆ ದೇಗುಲದ ಬಾಗಿಲುಗಳು ತೊಂದರೆಗೊಳಗಾಗಿದ್ದು, ಮುಂದಿನ ಮಂಟಪವೂ ಸ್ವಲ್ಪ ಪ್ರಮಾಣದಲ್ಲಿ ವಾಲಿಕೊಂಡಿದೆ.
ಪೇಟೆಯೆಂದು ಕರೆಸಿಕೊಳ್ಳುವ ಕೇದಾರನಾಥ ನಿಜಕ್ಕೂ ಒಂದು ಹಳ್ಳಿ. ಇದು ಸುತ್ತುವರಿದಿರುವ ಪರ್ವತ ಸ್ತೋಮಗಳ ಮಧ್ಯದ ಸಣ್ಣ ಕಣಿವೆ ಪ್ರದೇಶದಲ್ಲಿದೆ. ಪುರಾಣಗಳು ಹೇಳುವಂತೆ ಇಲ್ಲಿನ ಜ್ಯೋತಿರ್ಲಿಂಗವನ್ನು ಸ್ಥಾಪಿಸಿ, ದೇಗುಲವನ್ನು ಕಟ್ಟಿಸಿದವರು ಪಾಂಡವರು. ಅವರ ಭಾತ್ರವರ್ಗದವರಾದ ಕೌರವರೆಲ್ಲರನ್ನು ಕುರುಕ್ಷೇತ್ರ ಯುದ್ಧದಲ್ಲಿ ಸೋಲಿಸಿ ಹತ್ಯೆಗೈದ ಪಾಪ ಪರಿಹಾರಕ್ಕಾಗಿ, ಪ್ರಾಯಶ್ಚಿತ್ತ ರೂಪದಲ್ಲಿ ಈ ದೇಗುಲವನ್ನು ಕಟ್ಟಿಸಿದರೆಂಬುದು ಪುರಾಣಗಳ ಉಲ್ಲೇಖ. ಇಂದಿನ ದೇವಸ್ಥಾನದ ಗರ್ಭಗೃಹದಲ್ಲಿ ಸ್ಥಾಪನೆಯಾಗಿರುವ ಲಿಂಗ ಸುಮಾರು 3.6 ಮೀಟರ್ (12ಅಡಿ) ಸುತ್ತಳತೆ ಹೊಂದಿದೆ ಮತ್ತು 0.6 ಮೀಟರ್ (2ಅಡಿ) ಎತ್ತರವಿದೆ. ಈ ಗರ್ಭಗೃಹದ ಎದುರಿಗೆ ವಿಶಾಲವಾಗಿರುವ ಸಭಾಂಗಣವಿದೆ. ಅಲ್ಲಿ ದೊಡ್ಡಗಾತ್ರದ ನಂದಿಯ ವಿಗ್ರಹವಿದೆ. ಅಲ್ಲದೆ ಅಲ್ಲಲ್ಲಿ ಹಲವಾರು ದೇವ, ದೇವಿಯರ ಸುಂದರ ವಿಗ್ರಹಗಳನ್ನು ಕಾಣಬಹುದು. ಪಾಂಡವರ ವಿಗ್ರಹಗಳೂ ಇವೆ.
ಗಾಂಧಿ ಸರೋವರದಿಂದ ಹರಿದುಬಂದ ಹಿಮಪ್ರವಾಹಕ್ಕೆ ಮೈಯ್ಯೊಡ್ಡಿ ನಿಂತ ಕೇದಾರನಾಥ ಮಲಿನಗೊಂಡರೂ ಜಖಂಗೊಂಡಿಲ್ಲ. ವಾಸ್ತು ಶಿಲ್ಪಶಾಸ್ತ್ರಜ್ಞರ ಕುತೂಹಲಕ್ಕೆ ಕಾರಣವಾಗಿರುವ ಕೇದಾರನಾಥ ದೇಗುಲದ ಸುತ್ತ ಒಂದು ನೋಟ ಹರಿಸಿದರೆ ಇದು ಗೊತ್ತಾಗುತ್ತದೆ. ಹಿಮಸ್ಫೋಟ, ಜಲ ಪ್ರಳಯದ ನಂತರ ಕೇದಾರನಾಥ ದೇಗುಲದ ಸುತ್ತ 10 ಅಡಿಗೂ ಅಧಿಕ ಆಳದ ಮಣ್ಣು ಕುಸಿತ ಆರಂಭವಾಗಿತ್ತು. ದೇಗುಲದ ಸಮಸ್ತ ಆಸ್ತಿ, ಆಭರಣಗಳು ಕೊಚ್ಚಿ ಹೋಗಿದ್ದವು. ಆದರೂ, ದೇಗುಲದ ಮುಖ್ಯ ಕಟ್ಟಡ ಭದ್ರವಾಗಿ ನಿಂತಿತ್ತು. ಉತ್ತರಾಖಂಡದ ಈ ಭಾಗದ ಪ್ರಮುಖ ಯಾತ್ರಾ ಸ್ಥಳಗಳಲ್ಲಿರುವ ಕಟ್ಟಡಗಳು ಧರೆಗುರುಳಿದ್ದು ಭಕ್ತಾದಿಗಳಿಗೆ ಕಣ್ಣಿಗೆ ಕಟ್ಟಿದ್ದಂತಿದೆ. ಆದರೆ, ಕೇದಾರನಾಥ ದೇಗುಲ ಮಾತ್ರ ಸಣ್ಣಪುಟ್ಟ ತರಚು ಗಾಯದೊಂದಿಗೆ ಅಳುಕದೆ ಭಕ್ತಾದಿಗಳ ಆಗಮನದ ನಿರೀಕ್ಷೆಯಲ್ಲಿ ಭದ್ರವಾಗಿ ನಿಂತಿದ್ದಾದರೂ ಹೇಗೆ? ಈ ಕಟ್ಟಡಕ್ಕೆ ಪರಮಶಿವನ ಅನುಗ್ರಹವಿದೆಯೆ? ದೇವರೇ ಇಲ್ಲಿ ನೆಲೆಸಿ ರಕ್ಷಿಸಿದನೇ? ಕಟ್ಟಡ ಉಳಿಸಿದ ದೇವರು, ಭಕ್ತರನ್ನು ಸಾಯಲು ಬಿಟ್ಟದ್ದು ಏಕೆ? ಸುಮಾರು 5 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ, ಪುರಾಣ ಪ್ರಸಿದ್ಧಿಯುಳ್ಳ ಜ್ಯೋತಿರ್ಲಿಂಗ ದೇಗುಲದ ವಾಸ್ತುಶಿಲ್ಪದ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ? ವಿಜ್ಞಾನಿಗಳು ಕೇವಲ 400 ವರ್ಷಗಳ ಲೆಕ್ಕ ಕೊಡುವುದು ಏಕೆ? ಇವೆಲ್ಲ ಉತ್ತರ ಸಿಗದ ಪ್ರಶ್ನೆಗಳು.
ಒಳ ವಿನ್ಯಾಸದ ರಚನೆಯಲ್ಲಿ ಅಲ್ಲಲ್ಲಿ ತರಚಿದ ರೇಖೆಗಳನ್ನು ಕಾಣಬಹುದು. ಆದರೆ, ಇಲ್ಲಿರುವ ಹೊರಭಾಗದ ಮಾಮೂಲಿ ಕಲ್ಲುಗಳು ಸಂಪೂರ್ಣ ಸವೆತಕ್ಕೆ ಸಿಕ್ಕಿವೆ. ಹಿಮಗಡ್ಡೆಗಳು ಕರಗಿ ಇಳಿದಾಗೆಲ್ಲ, ಪ್ರಕೃತಿ ವೈಪರೀತ್ಯಗಳು ಸಂಭವಿಸಿದ ಸಂದರ್ಭಗಳಲ್ಲಿ ಕಟ್ಟಡದ ಹೊರಮೈಗೆ ಹಾನಿ ಆಗಿದ್ದಿದೆ. ಆದರೆ ಮೂಲ ಕಟ್ಟಡ ಅಲುಗಾಡದಂತೆ ಹಿಡಿದು ನಿಲ್ಲಿಸಿದೆ ಇಲ್ಲಿನ ವೈಜ್ಞಾನಿಕ ಸಂರಚನೆ. ಹೀಗಾಗಿ ಮೇಘಸ್ಫೋಟಕ್ಕೆ ಸಿಲುಕಿದರೂ ಕೇದಾರನಾಥ ದೇಗುಲ ಭದ್ರವಾಗಿ ನಿಂತಿದೆ. ಮೇಲ್ಭಾಗದ ಗಾಂಧಿ ಸರೋವರ ಅಥವಾ ಚಾರೋಬಾರಿ ತಾಲ್ ಇರುವುದು ಸಮುದ್ರಮಟ್ಟದಿಂದ 13 ಸಾವಿರ ಅಡಿ ಎತ್ತರದಲ್ಲಿ. ಅದು ಸುನಾಮಿಯಂತೆ ನುಗ್ಗಿ ಬಂದು 11 ಸಾವಿರ ಅಡಿ ಎತ್ತರದಲ್ಲಿರುವ ಕೇದಾರನಾಥ ದೇಗುಲದ ಮೇಲೆ ಬಿದ್ದಿದೆ. ಹಿಮನದಿ ಹೊಡೆತ ಎತ್ತರದ ಪ್ರದೇಶದಿಂದ ಆಗಿರುವುದರಿಂದ ಕೇದಾರನಾಥ ಸೇಫ್ ಆಗಿದ್ದಾನೆ ಎಂಬ ವಾದವೂ ಇದೆ. ಕೇದಾರನಾಥದಲ್ಲಿ ಪೂಜಾಕ್ರಮ ಅತಿ ಸರಳ. ಲಿಂಗಕ್ಕೆ ಅಭಿಷೇಕ ಅಥವಾ ನೀರಿನಿಂದ ತೊಳೆಯುವ ಕ್ರಮವಿಲ್ಲ. ಭಕ್ತರು ತುಪ್ಪವನ್ನು ಅರ್ಪಿಸುತ್ತಾರೆ. ದಕ್ಷಿಣ ಭಾರತದ ಲಿಂಗಾಯತ ಮತದ ಗೋಸಾಯಿಗಳು ಇಲ್ಲಿನ ಅರ್ಚಕರು. ಭಕ್ತರು ಲಿಂಗವನ್ನು ಸ್ಪರ್ಶಿಸಿ, ಆಲಂಗಿಸಿಕೊಳ್ಳಲು ಅವಕಾಶವಿದೆ. ಪ್ರತಿ ವರ್ಷ ಅಕ್ಷಯತೃತೀಯ (ಏಪ್ರಿಲ್-ಮೇ)ದಂದು ದೇವಸ್ಥಾನವನ್ನು ಯಾತ್ರಿಕರ ಸಂದರ್ಶನಕ್ಕೆ ತೆರೆಯಲಾಗುತ್ತದೆ. ದೀಪಾವಳಿಯ ಮರುದಿನದಂದು (ಸಾಧಾರಣ ನವೆಂಬರ್) ಮುಚ್ಚಲಾಗುತ್ತದೆ. ಚಳಿಗಾಲದ 6 ತಿಂಗಳ ಕಾಲ ಉತ್ಸವ ಮೂರ್ತಿಯನ್ನು ಊಖೀ ಮಠ ಎಂಬಲ್ಲಿಗೆ ಕೊಂಡೊಯ್ದು ಅಲ್ಲಿ ದೈನಂದಿನ ಪೂಜೆಯನ್ನು ನೆರವೇರಿಸಲಾಗುತ್ತದೆ. ಇಲ್ಲಿಗೆ ಸಮೀಪದಲ್ಲಿ 5 ದೇಗುಲಗಳಿವೆ. ಅವುಗಳು ಬದ್ರಿ, ಕೇದಾರ, ಮಧ್ಯಮಹೇಶ್ವರ, ತುಂಗಾನಾಥ ಮತ್ತು ಕಲ್ಲೇಶ್ವರ. ಇವುಗಳನ್ನು ಒಟ್ಟಾಗಿ ಪಂಚ ಕೇದಾರವೆಂದು ಕರೆಯಲಾಗುತ್ತದೆ. ಮುಖ್ಯ ದೇಗುಲದ ಹಿಂಭಾಗದಲ್ಲಿ ಆದಿಶಂಕರರ ಗುಡಿಯಿದೆ. ಅಲ್ಲಿರುವ ಒಂದು ಗುಹೆಯೊಳಗೆ ಶಂಕರಾಚಾರ್ಯರು ಪ್ರವೇಶಿಸಿ ಅಂತರ್ಧಾನಗೊಂಡರೆಂದು ಪ್ರತೀತಿ.
ಕೇದಾರನಾಥ ಸುತ್ತಮುತ್ತ ಅಭಿವೃದ್ಧಿ ನೆಪದಲ್ಲಿ ಗಂಗೆಯನ್ನು ಹೇಗೆ ಶೋಷಿಸಲಾಗಿದೆ ಎನ್ನವುದನ್ನು ಪುನಃ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ದುರಂತ ಎಂದರೆ ಇಷ್ಟೆಲ್ಲ ಅನಾಹುತದ ನಂತರವೂ ದೇವನದಿಯಿಂದಲೇ ದೇಳದ ನೀರಿನ ದಾಹ ಇಂಗಿಸುವ ಮಾತುಗಳಿಗೆ ಕಡಿವಾಣ ಬಿದ್ದಿಲ್ಲ. ಗಂಗಾ ನದಿಯ ನೀರನ್ನು ದಕ್ಷಿಣದತ್ತ ಹರಿಸಬೇಕೆಂಬ ವಿಚಾರಕ್ಕೆ ಬಿಹಾರ್ ಮತ್ತು ಪಶ್ಚಿಮ ಬಂಗಾಳಗಳು ಈಗಾಗಲೇ ವಿರೋಧಿಸಿವೆ. ಗಂಗಾ ನದಿಯ ನೀರಿಗೆ ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲೂ ಬೇಡಿಕೆ ಇದೆ. ನದಿ ಜೋಡಣೆ ಯೋಜನೆ ಆಕಾರ ತಳೆಯುತ್ತಿದ್ದಂತೆ ಅನೇಕ ಅಂತರ ರಾಜ್ಯ ಹಾಗೂ ಅಂತರ ದೇಶಿ ನೀರು ಹಂಚಿಕೆ ವಿವಾದಗಳು ತಲೆ ಎತ್ತುವುದರಲ್ಲಿ ಪರಿಸರವಾದಿಗಳಿಗೆ ಅನುಮಾನವೇ ಇಲ್ಲ. ಜೋಡಿಸಬೇಕೆಂದಿರುವ ನದಿಗಳಲ್ಲಿ ಬಹುಪಾಲು ಈಗಾಗಲೇ ತೀವ್ರವಾದ ಜಲ ಮಾಲಿನ್ಯವಿದೆ. ನದಿಗಳನ್ನು ಜೋಡಿಸಿದಾಗ ನೀರಿನೊಡನೆ ಮಾಲಿನ್ಯವೂ ಹರಿದು ಬರುತ್ತದೆ ಎಂಬುದನ್ನು ನಾವು ಮರೆಯಬಾರದು. 19ನೇ ಶತಮಾನದ ಮಧ್ಯ ಭಾಗದಲ್ಲಿ ರೂಪುಗೊಂಡ ಸರ್ ಆರ್ಥರ್ ಕಾಟನ್ ಯೋಜನೆ, 1972ರಲ್ಲಿ ಅಂದಿನ ಕೇಂದ್ರ ಸಚಿವ ಸಂಪುಟದಲ್ಲಿ ನೀರಾವರಿ ರಾಜ್ಯ ಸಚಿವರೂ ಸ್ವತಃ ನೀರಾವರಿ ತಜ್ಞರೂ ಆಗಿದ್ದ ಡಾ.ಕೆ.ಎಲ್. ರಾವ್ ಪ್ರತಿಪಾದಿಸಿದ ಗಂಗಾ-ಕಾವೇರಿ ನದಿ ಜೋಡಣೆ ಯೋಜನೆ ಹಾಗೂ 1977 ರಲ್ಲಿ ಪ್ರಸ್ತಾಪಿತಗೊಂಡ ಕ್ಯಾಪ್ಟನ್ ದಿಲ್‌ಶಾದ್ ದಸ್ತೂರ್ ಅವರ ಗಾರ್ಲೆಂಡ್ ಕಾಲುವೆ ಯೋಜನೆಗಳು- ನದಿಗಳ ನಡುವೆ ಸಂಪರ್ಕ ಕಲ್ಪಿಸುವ ಪರಿಕಲ್ಪನೆಗೆ 150 ವರ್ಷಗಳಿಗೂ ಮೀರಿದ ಇತಿಹಾಸವಿದ್ದು ಈ ಅವಧಿಯಲ್ಲಿ ಮೂರು ಮುಖ್ಯ ಯೋಜನೆಗಳನ್ನು ಪರಿಶೀಲಿಸಿ ಕೈಬಿಡಲಾಗಿದೆ ಎಂಬುದನ್ನು ನಾವು ಮರೆಯಬಾರದು.
ಈ ಪರಿಯ ಕಾಡು ಸೀಳುವ, ನದಿಗಳ ಪಾತ್ರ ಹಿರಿದಾಗಿಸುವ, ಮನೆಯ ನಲ್ಲಿಯ ಪೈಪ್ ಬಗ್ಗಿಸಿ, ತಿರುಗಿಸಿದಂತೆ ನೀರ ಅಭಿವೃದ್ಧಿ ನಮಗೆ ಬೇಕೆ? ಹಾಗಾಗಿ, ಕೋಟ್ಯಂತರ ರುಪಾಯಿ ಬಂಡವಾಳ ಬೇಡುವ, ಅನೇಕ ಅನಿಶ್ಚಿತತೆಗಳನ್ನು ಮೈಗೂಡಿಸಿಕೊಂಡಿರುವ, ಆಘಾತಕಾರಿ ಪರಿಸ್ಥಿತಿ ಎದುರಿಸಬೇಕಾದ ಸಂಕಷ್ಟಗಳನ್ನು ಹೊತ್ತು ಬರಲಿರುವ ನದಿಗಳ ಜೋಡಣೆಯಂಥ ಬೃಹತ್ ಯೋಜನೆಗಳಿಗೆ ಶ್ರೀಕಾರ ಹಾಕದೇ, ನಮ್ಮ ದೇಶದ ವಿವಿಧ ಭಾಗಗಳು ಪ್ರತಿ ವರ್ಷವೂ ಹಾಗೂ ವರ್ಷದಿಂದ ವರ್ಷಕ್ಕೆ ಸಮರ್ಥವಾಗಿ ಎದುರಿಸುವ ಬರ ನಿರೋಧಕ ಜಾಣ್ಮೆಯನ್ನು, ಕ್ಷಾಮ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬಹುದೆಂಬುದನ್ನು ಅನೇಕ ಸಮುದಾಯ ಕೇಂದ್ರಿತ ಯೋಜನೆಗಳು ತೋರಿಸಿಕೊಟ್ಟಿವೆ. ಮಳೆ ನೀರು ಕೊಯ್ಲು ಹಾಗೂ ಅಂತರ್ಜಲದ ಪುನಶ್ಚೇತನ ಪ್ರಯತ್ನಗಳಿಂದ, ನಲವತ್ತು ವರ್ಷಗಳಿಂದ ನೀರನ್ನೇ ಕಾಣದ ರಾಜಸ್ಥಾನದ ಅರ್ವಾರಿ ನದಿಯಲ್ಲಿ ಈಗ ನೀರು ಹರಿಯಲು ಪ್ರಾರಂಭವಾಗಿದೆ. ಮಹಾರಾಷ್ಟ್ರದ ರಾಲೇಗಣ ಸಿದ್ಧಿಯಲ್ಲಿ ಅಣ್ಣಾ ಹಜಾರೆ, ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ರಾಜೇಂದ್ರ ಸಿಂಗ್, ದಕ್ಷಿಣ ಭಾರತದ ರಾಜ್ಯಗಳಲ್ಲಿ 'ಧನ್' ಪ್ರತಿಷ್ಠಾನ, ಗುಜರಾತಿನಲ್ಲಿ ಹಲವಾರು ಸರಕಾರೇತರ ಸಂಸ್ಥೆಗಳು, ಕರ್ನಾಟಕದಲ್ಲಿ ಬೈಫ್, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಈ ದಿಕ್ಕಿನಲ್ಲಿ ಅತ್ಯುತ್ತಮ ಕೆಲಸ ಮಾಡಿವೆ. ಸ್ಥಳೀಯ ಪರಂಪರೆ ಹಾಗೂ ಜಾಣ್ಮೆಯನ್ನು ಆಧರಿಸಿ ಬರ ನಿರೋಧಕ ತಂತ್ರಜ್ಞಾನ ಹಾಗೂ ನೆರೆ ನಿಯಂತ್ರಿಸುವ ಉಪಕ್ರಮಗಳ ಮೂಲಕ ಅಲ್ಲಲ್ಲಿ ಒಡ್ಡುಗಳನ್ನು ಕಟ್ಟಿಕೊಳ್ಳುವುದು ಉತ್ತಮ. ನದಿ ಜೋಡಣೆಯಂಥ ಬೃಹತ್ ಕಾಮಗಾರಿಗಳ ಬೆನ್ನು ಹತ್ತದೇ, ಸರ್ಕಾರ ಆಡಂಬರವಿಲ್ಲದ, ಮಿತ ಸಂಪನ್ಮೂಲದ, ಸ್ಥಳೀಯ ಅಗತ್ಯಗಳನ್ನು ಪೂರೈಸಬಲ್ಲ - ಮಳೆ ನೀರು ಕೊಯ್ಲು, ಕೆರೆಗಳ ಪುನರುಜ್ಜೀವನ, ನೀರು ನಿರ್ವಹಣೆಯ ಸಾಂಪ್ರದಾಯಿಕ ಪದ್ಧತಿಯತ್ತ ಗಮನ ಹರಿಸುವಂತೆ ನಾವು ಸಂಘಟಿತ ಪ್ರಯತ್ನ ಮಾಡಬಹುದು. 2012ಕ್ಕೆ ಯೋಜನೆ ನೀಲನಕ್ಷೆ ಸಿದ್ಧವಾಗಿ 2016ರಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು ಎಂಬ ಹಠ ಸರ್ಕಾರದ್ದು. ಕೇರಳವನ್ನು ಹೊರತು ಪಡಿಸಿ ಎಲ್ಲ ರಾಜ್ಯಗಳೂ ತಾತ್ವಿಕ ಒಪ್ಪಿಗೆ ಸೂಚಿಸಿವೆ. ನೇಪಾಳ, ಭೂತಾನ್ ಹಾಗೂ ಬಾಂಗ್ಲಾದೇಶಗಳ ಮಧ್ಯೆ ಈಗ ಪ್ರಾಥಮಿಕ ಹಂತದ ಮಾತುಕತೆಗಳು ಜಾರಿಯಲ್ಲಿವೆ.
ಹಿಮಾಲಯದ ತಪ್ಪಲಿನಲ್ಲಿ ಕೋಸಿ- ಮೇಖಿಚಿ, ಕೋಸಿ- ಘಾಗ್ರಾ, ಗಂಡಕಿ- ಗಂಗಾ, ಘಾಗ್ರಾ- ಯಮುನಾ, ಶದರ್- ಯಮುನಾ, ಯಮುನಾ- ರಾಜಸ್ಥಾನ್, ರಾಜಸ್ಥಾನ್- ಸಾಬರಮತಿ, ಚುನಾರ್‌ಬೊನೆ ಬ್ಯಾರೇಜ್, ಸೋನೆ ಆಣೆಕಟ್ಟು- ಗಂಗೆಯ ದಕ್ಷಿಣದ ಉಪನದಿಗಳು, ಬ್ರಹ್ಮಪುತ್ರಾ- ಗಂಗಾ (ಎರಡು ಕಾಲುವೆಗಳು), ಫರಕ್ಕಾ- ಸುಂದರಬನ್, ಗಂಗಾ- ದಾಮೋದರ- ಸುವರ್ಣ ರೇಖಾ, ಸುವರ್ಣರೇಖಾ- ಮಹಾನದಿ ಮೊದಲಾದ ಬೃಹತ್ ಸಂಪರ್ಕ ಕಾಲುವೆಗಳು ಈಗಾಗಲೇ ಇವೆ. ಇವು ಹಿಮಾಲಯದ ತಪ್ಪಲಿನ ಪ್ರಮುಖ ಯೋಜನೆಗಳಷ್ಟೆ. ಸಣ್ಣಪುಟ್ಟ ಪ್ರಾಜೆಕ್ಟ್‌ಗಳ ಪಟ್ಟಿ ದೊಡ್ಡದಿದೆ. ದೇವನದಿ ಎಷ್ಟೂಂತ ಸಹಿಸಿಕೊಂಡಾಳು? ಇಂಥ ನೀರ ಅಭಿವೃದ್ಧಿಯಿಂದ ಹಿಮಾಲಯದ ಪರಿಸರದಲ್ಲಿ ಎಂಥ ಬದಲಾವಣೆ ಆಗಬಹುದು ಎನ್ನುವ ಕನಿಷ್ಠ ವಿವೇಚನೆಯೂ ನಮ್ಮನ್ನು ಆಳುವವರಿಗೆ, ಯೋಜನೆಗಳನ್ನು ರೂಪಿಸುವವರಿಗೆ ಇಲ್ಲವೆ?
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


