ಅಂಕಣಗಳು

ಕರ್ನಾಟಕ ಬಿಜೆಪಿ ನಾಯಕರಿಗೇನಾಗಿದೆ?

ಕರ್ನಾಟಕದಲ್ಲಿ ರಾಜ್ಯಾಧಿಕಾರದ ಜವಾಬ್ದಾರಿಯನ್ನು ಹೊರುವುದು ಬಿಜೆಪಿಯ...

Published On :

ಕರ್ನಾಟಕದಲ್ಲಿ ರಾಜ್ಯಾಧಿಕಾರದ ಜವಾಬ್ದಾರಿಯನ್ನು ಹೊರುವುದು ಬಿಜೆಪಿಯ ಜನ್ಮಸಿದ್ದ ಹಕ್ಕೇನೂ ಅಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕರ್ನಾಟಕದಲ್ಲಿ ಪಕ್ಷದ ಸರ್ಕಾರ ಇರಲಿಲ್ಲ. ರಾಜ್ಯದಲ್ಲಿ ಜನತಾದಳ ಛಿದ್ರ ಛಿದ್ರವಾಗಿ, ನಿರ್ಮಾಣವಾದ ರಾಜಕೀಯ ಗೊಂದಲದಲ್ಲಿ ಬಿಜೆಪಿ ಸಾಕಷ್ಟು ಶಕ್ತಿಯನ್ನು ಸಂಪಾದಿಸಿತ್ತು.
ಅದರ ಪರಿಣಾಮವಾಗಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ವೃದ್ಧಿಯಾಗಿ, ಕ್ರಮೇಣ "ನಂಬರ್ ಒನ್‌" ಪಕ್ಷವಾಗಿ, ಜಾತ್ಯತೀತ ಜನತಾ ದಳದ ಜತೆಯಲ್ಲಿ ಸರ್ಕಾರ ರಚಿಸಿದ್ದೂ ಆಯಿತು. ಅನಂತರ ಚುನಾವಣೆಯಲ್ಲಿ ಗೆದ್ದು ಆಪರೇಷನ್ ಕಮಲದ ಮೂಲಕ ಏಕಪಕ್ಷೀಯ ಸರ್ಕಾರವನ್ನೂ ರಚಿಸಿದ್ದಾಯಿತು. ಆಂತರಿಕ ಜಗಳಗಳು, ಭ್ರಷ್ಟಾಚಾರದ ಆರೋಪಗಳನ್ನು ಹೊತ್ತ ನಾಯಕರ ನಡುವಣ ಸಂಘರ್ಷದಲ್ಲಿ ಪಕ್ಷವೂ ಹೋಳಾಗಿ, 2013ರ ವಿಧಾನ ಸಭೆ ಚುನಾವಣೆಯಲ್ಲಿ ಮೂರನೆಯ ಸ್ಥಾನಕ್ಕೆ ಇಳಿಯಿತು.
ಈ ಹಿನ್ನೆಲೆಯ ಮಾತ್ರೆ ರೂಪದ ವರದಿಯನ್ನು ನೆನಪಿನಲ್ಲಿಟ್ಟುಕೊಂಡರೆ, ಆ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು, ಸಂಯಮದಿಂದ ಕಾಯಬೇಕು ಎನ್ನುವುದು ರಾಜಕೀಯದ ಬಾಲಬೋಧೆಯನ್ನು ಓದಿದವರಿಗೂ ಗೊತ್ತು. ಆದರೆ ರಾಜ್ಯ ಮಟ್ಟದ ನಾಯಕರು ಅದು ಗೊತ್ತಿದ್ದರೂ ಈಗ ಇನ್ನೇನು ಲೋಕಸಭೆ ಚುನಾವಣೆಯಲ್ಲಿ ನಮ್ಮದೇ ಪ್ರಾಬಲ್ಯ ಎನ್ನುವ ಹಾರಾಟವನ್ನು ಆರಂಭಿಸುವುದಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿ, ಅವರನ್ನು ಕೊನೆಗೂ ಪಕ್ಷದ ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಘೋಷಿಸಿ, ಅದಕ್ಕೆ ಪಕ್ಷದ ಹಿರಿಯ ತಲೆಯಾಳು ಲಾಲ್‌ಕೃಷ್ಣ ಆಡ್ವಾಣಿ "ಹಿಂಜರಿಯುತ್ತಲೇ ಒಪ್ಪಿದ್ದನ್ನೇ" ಒಂದು ರೀತಿಯಲ್ಲಿ ವಿಜಯೋತ್ಸವದಂತೆ ಆಚರಿಸಿದ್ದಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.
ನರೇಂದ್ರ ಮೋದಿ ಅವರ ಪ್ರಭಾವದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದಲ್ಲ ಒಂದು ರೀತಿಯಲ್ಲಿ ಬಿಜೆಪಿಯ ಸಹವಾಸ ಮಾಡುವುದು ಖಚಿತ. ಕರ್ನಾಟಕ ಜನತಾ ಪಕ್ಷವನ್ನೇ ವಿಸರ್ಜಿಸಿ ಬಿಜೆಪಿಗೆ ಬರ್ತಾರೋ, ಅಲ್ಲೇ ಇದ್ದು ಒಡಂಬಡಿಕೆಗೆ ಒಪ್ತಾರೋ ಇನ್ನೂ ಗೊತ್ತಿಲ್ಲ. ಅದೆಲ್ಲ ಅಸ್ಪಷ್ಟ. ಆದರೂ ಬಿಜೆಪಿ ರಾಜ್ಯದಲ್ಲಿ ಈ ಪಾಟಿ ಹಿಗ್ಗುತ್ತಿರುವುದೇಕೆ?
ಚುನಾವಣೆಯ ಸೋಲಿನಿಂದ ಬಿಜೆಪಿ ಈಗ ತನ್ನ ನಾಯಕನನ್ನು ಕಳೆದುಕೊಂಡಿದೆ. ರಾಜಕೀಯ ಆಚಾರ- ವಿಚಾರಗಳಲ್ಲಿನ ಶುಚಿತ್ವವನ್ನು ಕಳೆದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ನರೇಂದ್ರ ಮೋದಿ ಅವರಲ್ಲಿ ಒಬ್ಬ ನಾಯಕನನ್ನು ಕಂಡು, ರಾಜಕೀಯ ಚೈತನ್ಯವನ್ನು ಮತ್ತೆ ಪಡೆಯುವ ಆಸೆ ಪಕ್ಷದಲ್ಲಿ ಮೂಡಿದ್ದರೆ ಅದು ಸಹಜವೇ. ಆದರೆ ಅದು ಅಷ್ಟು ಸಂಭ್ರಮದ ವಿಚಾರವೇ?
ನರೇಂದ್ರ ಮೋದಿ ಅವರಿಗೆ ಕಿರೀಟ ತೊಡಿಸುವ ಸನ್ನಿವೇಶದ ಅಬ್ಬರದ ಆವುಟಗಳನ್ನೆಲ್ಲಾ ಗಮನಸಿದವರಿಗೆ, ಕರ್ನಾಟಕ ಬಿಜೆಪಿ ನಾಯಕರಿಗೆ, ನರೇಂದ್ರ ಮೋದಿ ಅವರಿಂದ ಬರಬಹುದಾದ ಶಕ್ತಿ ಎಷ್ಟು ಎನ್ನುವುದರ ಕಲ್ಪನೆ ಇದ್ದರೂ ಇರಬಹುದು. ಆ ಪ್ರಚಾರವೇ ಶಕ್ತಿಯನ್ನು ತಂದುಕೊಟ್ಟೀತೇನು? ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳಗಳಂತಹ ರಾಜ್ಯಗಳಲ್ಲಿ ರಾಜಕೀಯವಾಗಿ ಮೂರು- ನಾಲ್ಕನೇ ಸ್ಥಾನಗಳಲ್ಲಿರುವ ಬಿಜೆಪಿ ಇದ್ದಕ್ಕಿದ್ದಂತೆ ಇಡೀ ದೇಶದಲ್ಲಿ ನಂಬರ್ ಒನ್ ಆಗಬಹುದೇ? ಆ ಲೆಕ್ಕಾಚಾರವನ್ನು ಪೆನ್ಸಿಲ್- ಕಾಗದ ಹಿಡಿದು ಹಾಕಲಿಕ್ಕೇ ಹೋಗಿಲ್ಲ ಬಿಜೆಪಿ ನಾಯಕರು. ಇಂತಹ ಸನ್ನಿವೇಶದಲ್ಲಿ ಕರ್ನಾಟಕ ಬಿಜೆಪಿ ನಾಯಕರು ತಮಗೆಲ್ಲ ದೆಹಲಿ, ಮಧ್ಯ ಪ್ರದೇಶ, ಚತ್ತೀಸಗಡಗಳಿಂದ ರಾಜಕೀಯ ಶಕ್ತಿ ಹರಿದು ಬರುತ್ತದೆ ಎಂದು ಭಾವಿಸುವುದು ತಪ್ಪು.
ಎಷ್ಟಾದರೂ ಹೇಳಿ ಕೇಳಿ ನರೇಂದ್ರ ಮೋದಿ ಅವರು ಇದುವರೆಗೆ ಗುಜರಾತಿಗೇ ಸೀಮಿತವಾಗಿದ್ದ ನಾಯಕ. ಅಲ್ಲಿನ ಬೇಕಾದಷ್ಟು ವಿವಾದಗಳು ಇನ್ನೂ ಜೀವಂತವಾಗಿವೆ. ಕರ್ನಾಟಕ ಬಿಜೆಪಿಗೆ ನರೇಂದ್ರ ಮೋದಿ ಅವರಿಂದ ಕಾಯಕಲ್ಪವಾಗಬಹುದೆನ್ನುವ ಆಸೆ ಒಳ್ಳೆಯದೇ. ಆದರೆ ಈಗ ಹತಾಶೆಯಿಂದ ಮಂಕಾಗಿರುವ ರಾಜ್ಯ ನಾಯಕರು ಚುರುಕಾಗದೇ ಹೋದರೆ ನರೇಂದ್ರ ಮೋದಿ ಅವರ ಪ್ರಚಾರವೂ ಏನನ್ನೂ ಮಾಡಲಿಕ್ಕೆ ಸಾಧ್ಯವಿಲ್ಲ. ಬಿಜೆಪಿ ಜನ ತಮ್ಮ ಈಗಿನ ಜೋಬದ್ರತನವನ್ನು ಕೊಡವಿಕೊಳ್ಳಬೇಕು. ಸಾಧ್ಯವಿದ್ದಷ್ಟೂ ಸಾಧಿಸುವುದೇ ರಾಜಕೀಯದ ಕಲೆ. ಆ ಮಾತನ್ನು ಗಮನದಲ್ಲಿಟ್ಟುಕೊಂಡು ತನ್ನ ಸಾರ್ವಜನಿಕ ಚಟುವಟಿಕೆಗಳ ದಿಕ್ಕು- ದೆಸೆಗಳನ್ನು ಬದಲಾಯಿಸಿಕೊಳ್ಳಬೇಕು.

ಕಾಂಗ್ರೆಸ್: ಸಮಸ್ಯೆ ಶೂನ್ಯ: ಕರ್ನಾಟಕದಲ್ಲಿ ಈಗ ಕಾಂಗ್ರೆಸ್ಸಿಗೆ ಸರ್ಕಾರದಲ್ಲಿ, ಸಂಘಟನೆಯಲ್ಲಿ ನ್ಯಾಯವಾಗಿ ಯಾವ ಸಮಸ್ಯೆಗಳೂ ಇರಬೇಕಾಗಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ದೊಡ್ಡ ರೀತಿಯಲ್ಲೇ ಗೆದ್ದಿದ್ದಾಗಿದೆ. ಮುಖ್ಯಮಂತ್ರಿಯ ಆಯ್ಕೆಯ ವಿಚಾರದಲ್ಲೂ ಹೇಳಿಕೊಳ್ಳುವಂತಹ ರೀತಿಯ ಭಿನ್ನಾಭಿಪ್ರಾಯಗಳು ಕಂಡುಬರಲಿಲ್ಲ.  ಮಂತ್ರಿ ಮಂಡಲ ರಚನೆ, ಖಾತೆಗಳ ಹಂಚಿಕೆಯಲ್ಲೂ ತಕರಾರು ಇರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಸರ್ಕಾರದ ನೂರು ದಿನಗಳ ಸಾಧನೆಯ ಚಿತ್ರವನ್ನು ಬಿಡಿಸಿದಾಗ ಅದನ್ನು ಯಾರೂ ಅಲ್ಲಗಳೆಯಲಿಲ್ಲ.  ಲೋಕಸಭೆಗೆ ಮಂಡ್ಯ- ಬೆಂಗಳೂರು ಗ್ರಾಮೀಣ ಕ್ಷೇತ್ರಗಳಿಂದ ನಡೆದ ಉಪ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಭದ್ರ ಕೋಟೆಯ ಮಧ್ಯೆಯೇ ಪ್ರಚಂಡ ವಿಜಯವನ್ನೇ ಪಕ್ಷ ಗಳಿಸಿದೆ. ಆ ಪ್ರವೃತ್ತಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿದಿದೆ. ಇನ್ನು ಸರ್ಕಾರಕ್ಕೆ, ಪಕ್ಷಕ್ಕೆ ಇರುವ ರಾಜಕೀಯ ಸವಾಲಾದರೂ ಯಾವುದು? ಯಾವುದೂ ಇಲ್ಲ. ಆದರೂ ಪಕ್ಷದ ಸಂಘಟನಾಂಗ- ಸರ್ಕಾರದ ನಡುವೆ ಸಮನ್ವಯ ಸಾಧನೆಗೆ ಸಮಿತಿಯೊಂದರ ನೇಮಕದ ಅಗತ್ಯ ವರಿಷ್ಠರಿಗೆ ಕಂಡು ಬಂದಿದ್ದೇಕೆ? ಬೇರೆ ಕಡೆಗಳಲ್ಲೂ ಇಂತಹ ಸಮಿತಿ ಇದೆ ಎನ್ನುವುದನ್ನು ಬಿಟ್ಟರೆ, ಆ ಸಮಿತಿಯ ರಚನೆಗೆ ಬೇರೆ ಯಾವ ಆಧಾರವೂ ಇಲ್ಲ. ಮಂತ್ರಿ ಮಂಡಲದ ವಿಸ್ತರಣೆ, ಬೋರ್ಡು, ನಿಗಮ, ಮಂಡಳಿಗಳ ಅಧ್ಯಕ್ಷರ, ನಿರ್ದೇಶಕರ ಸ್ಥಾನಗಳನ್ನು ಭರ್ತಿ ಮಾಡುವುದರ ಮೂಲಕ ಒಂಬತ್ತು ವರ್ಷಗಳಿಂದಲೂ ಅಧಿಕಾರದಿಂದ ಬರುವ ಅವಕಾಶಗಳಿಂದ ವಂಚಿತರಾದ ಕಾರ್ಯಕರ್ತರು, ಎರಡು- ಮೂರನೇ ಸಾಲಿನ ನಾಯಕರಿಗೆ ಅವರ ಪಾಲಿನ ಹವಿಸ್ಸನ್ನು ಕೊಡುವ ಕೆಲಸದಲ್ಲಿ ವಿಳಂಬವೇಕೆ? ಅದಕ್ಕೂ ವರಿಷ್ಠರ ಅನುಮತಿ ಬೇಕೇ?

ಜೆಡಿಎಸ್ ಬದಲಾಯಿತೇ? : ಇದುವರೆಗೆ ಪಕ್ಷದ ವಿರೋಧಿಗಳು ಮೂದಲಿಸುತ್ತಿದ್ದಂತೆ ಜಾತ್ಯತೀತ ಜನತಾದಳ ಒಂದು ಸೀಮಿತ ಪ್ರದೇಶದ, ಒಂದೇ ಕೋಮಿನ, ಒಂದು ಕುಟುಂಬದ ನಾಯಕತ್ವದ ಪಕ್ಷ ಎನ್ನುವ ಕಳಂಕವನ್ನು ತೊಡೆದು ಹಾಕುವ ಪ್ರಯತ್ನಕ್ಕೆ ಪಕ್ಷದ ಸರ್ವೋಚ್ಚ ನಾಯಕ ದೇವೇಗೌಡರು ಕೈ ಹಾಕಿದ್ದಾರೆ. ಈಗ ದೇವೇಗೌಡರೇ ಅಂತಹ ಆರೋಪವನ್ನು ಕೇವಲ ಅಪಪ್ರಚಾರ ಎಂದು ತಿರಸ್ಕರಿಸುತ್ತಿದ್ದ ಮನೋಧರ್ಮವನ್ನು ಬದಿಗಿಟ್ಟು, ಅದರಲ್ಲಿ ಸ್ವಲ್ಪ ಹುರುಳಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಮೊದಲ ಬಾರಿಗೆ ಪಕ್ಷದ ರಾಜ್ಯ ಸಮಿತಿಯ ಅಧ್ಯಕ್ಷರನ್ನಾಗಿ, ಒಕ್ಕಲಿಗರಲ್ಲದ, ಹಿಂದುಳಿದ ಜಾತಿಗಳ ಸಮುದಾಯಗಳ ಭಾಗವಾದ ಗೊಲ್ಲ ಸಮಾಜದ ನಾಯಕ. ಎ. ಕೃಷ್ಣಪ್ಪ ಅವರನ್ನು ನೇಮಿಸಿದ್ದಾರೆ.
ಆದರೆ ಈ ನೇಮಕವೇ ಸರ್ವಸ್ವವಲ್ಲ. ದೇವೇಗೌಡರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವುದರಿಂದ, ಅವರು ರಾಷ್ಟ್ರೀಯ ಚಿಂತನೆಯ ಜತೆಯಲ್ಲೇ ರಾಜ್ಯ ರಾಜಕೀಯದಲ್ಲಿ ಬೇರುಮಟ್ಟದಲ್ಲೂ ಸಕ್ರಿಯವಾಗಿರುವುದರಿಂದ ಸ್ಥಾನ-ಮಾನದ ಗೌರವ ಸಿಗುವಂತೆ ಆಗಿದೆ, ಅವರ ಮಾತಿಗೆ ರಾಜಕೀಯ ಮೌಲ್ಯವಿದೆ ಎನ್ನುವುದು ಜನರಿಗೆ ಗೊತ್ತಾಗುವಂತೆ ಆಗಬೇಕು.
ದೇವೇಗೌಡರು, ಮತ್ತೆ ತಮ್ಮ ಎಂದಿನ ರಾಜಕೀಯ ನಿಲವಾದ ಕಾಂಗ್ರೆಸ್ - ಬಿಜೆಪಿಗಳಿಂದ ಸಮಾನ ದೂರವಾಗಿರುವ ನೀತಿಗೆ ಹಿಂತಿರುಗಿದ್ದಾರೆ. ಮಂಡ್ಯ- ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಚುನಾವಣೆಯಲ್ಲಿ ಕಂಡುಬಂದಿದ್ದ ಬಿಜೆಪಿ- ಜೆಡಿಎಸ್ ಮೈತ್ರಿ, ಮೈಸೂರಿನ ಮಹಾನಗರಪಾಲಿಕೆಯ ಮೇಯರ್- ಉಪ ಮೇಯರ್ ಚುನಾವಣೆ, ಶಿವಮೊಗ್ಗದ ನಗರಪಾಲಿಕೆಯ ಅಧ್ಯಕ್ಷರ ಚುನಾವಣೆ, ಇವೆಲ್ಲವೂ ಮೂಲ ನೀತಿಗೆ ಅಪವಾದಗಳಂತಿದ್ದವು ಅಷ್ಟೇ ಎಂದಿದ್ದಾರೆ. ಇದು ರಾಜಕೀಯದ ಲೋಕಾಭಿರಾಮದ ಮಾತು. ಈಗ ಜಾತ್ಯತೀತ ಜನತಾ ದಳದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ, ಶಾಸಕ ರೇವಣ್ಣ, ಅನಿತಾ ಕುಮಾರಸ್ವಾಮಿ ಅವರೆಲ್ಲರ ವರ್ತನೆಯೂ ಪ್ರಸ್ತುತವಾಗುತ್ತದೆ.
ಸದ್ಯದಲ್ಲಿ ಪ್ರಮುಖ ಪಕ್ಷಗಳಿಗೆ, ರಾಜ್ಯದಲ್ಲಿ ಯಾವುದೇ ರೀತಿಯ ದೊಡ್ಡ ರಾಜಕೀಯ ಚುಟುವಟಿಕೆಗೂ ಅವಕಾಶವಿಲ್ಲ. ಮೂರೂ ಪಕ್ಷಗಳು ಲೋಕಸಭೆ ಚುನಾವಣೆಗೆ ಅಗತ್ಯವಾದ ಸಿದ್ಧತೆಗಳಲ್ಲಿ ತೊಡಗಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ಮೂರನೆಯ ರಂಗ, ನಾಲ್ಕನೆಯ ರಂಗಗಳ ಮಾತು ಅಪ್ರಸ್ತುತ. ಕಾಂಗ್ರೆಸ್- ಬಿಜೆಪಿ- ಜೆಡಿಎಸ್ ಒಂದು ರಾಜಕೀಯ ತ್ರಿಕೋನವನ್ನೇ ಸೃಷ್ಟಿಸಿಕೊಂಡಿವೆ. ಅದರಲ್ಲಿ ಒಂದು ಕೋನ ಇನ್ನೊಂದು ಕೋನಕ್ಕಿಂತ ದೊಡ್ಡದಾಗಿರಬಹುದಷ್ಟೇ. ಇಡೀ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ನಡೆಯುತ್ತದೆ ಎನ್ನುವಂತಿಲ್ಲ.

ಕಿಡಿಗೇಡಿತನ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಇಷ್ಟವಾದ ರೀತಿಯಲ್ಲಿ ಮೈಸೂರು- ಬೆಂಗಳೂರುಗಳ ನಡುವೆ ಬುಲೆಟ್ ರೈಲನ್ನು ಬಿಡುವ ಮಾತನ್ನಾಡಿದ್ದಾರೆ. ಅದು ಚೀನಾ ಪ್ರವಾಸದ ಅನಂತರದ ಮಾತು. ಅರ್ಧ ಗಂಟೆ ಪ್ರವಾಸದ ರೈಲು ಅದು.
ಒಂದು ವೇಳೆ, ಆ ಕನಸು ನನಸಾಯಿತು ಎಂದಿಟ್ಟುಕೊಂಡರೂ, ಆ ವೇಳೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಜಯನಗರದ ಮನೆಗೆ ಹೋಗಲು ಎರಡು ಗಂಟೆಗಳೇ ಬೇಕಾಗುತ್ತಲ್ಲ, ಅದನ್ನು ಸರಿಪಡಿಸುವುದು ಯಾವಾಗ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.