ಕಾಂಗ್ರೆಸ್ ಸಮರ್ಥಿಸಿಕೊಳ್ಳುವ ಕರ್ಮ ಇವರಿಗೇಕೆ?
ತಾವು ಬಯಸಿದವರೇ ಪ್ರಧಾನಿಯಾಗಬೇಕು ಎಂಬುದು ಸ್ವಾರ್ಥ ಮತ್ತು ಸರ್ವಾಧಿಕಾರಿ...

ತಾವು ಬಯಸಿದವರೇ ಪ್ರಧಾನಿಯಾಗಬೇಕು ಎಂಬುದು ಸ್ವಾರ್ಥ ಮತ್ತು ಸರ್ವಾಧಿಕಾರಿ ನಿಲುವಾಗುತ್ತದೆ. ಆದ್ದರಿಂದ ಮೋದಿ ಪ್ರಧಾನಿಯಾಗಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವ ಹಕ್ಕು ಈ ದೇಶದ ಜನರದ್ದು. ಅದನ್ನು ಕಸಿದುಕೊಳ್ಳುವ ಹಕ್ಕು ಅನಂತಮೂರ್ತಿ ಅವರಿಗಿಲ್ಲ.
ಅನಂತಮೂರ್ತಿ ಅಂದಾಕ್ಷಣ ಜ್ಞಾನಪೀಠ ಪ್ರಶಸ್ತಿ, ಅವರ ಬರೆದ ಪುಸ್ತಕಗಳು, ಅವರು ಮಾಡಿದ ಜನಸ್ನೇಹಿ ಕೆಲಸಗಳು, ಅವರ ಸಾಹಿತ್ಯಿಕ ಸಾಧನೆಗಳು, ಸ್ಫೂರ್ತಿದಾಯಕ ಭಾಷಣಗಳು, ಹೋರಾಟಗಳು ನೆನಪಿಗೆ ಬರಬೇಕಿತ್ತು. ಆದರೆ ಆಗಿರುವುದೇನು?
ಅನಂತ ಮೂರ್ತಿ ಅಂದಾಕ್ಷಣ ಸಾಹಿತ್ಯ ಕ್ಷೇತ್ರದ ಕ್ಷುಲ್ಲಕ ರಾಜಕಾರಣ, ವಿವಾದ, ತಿಕ್ಕಲು ಹೇಳಿಕೆಗಳು, ಅರಳು-ಮರುಳಾದಂತಹ ವರ್ತನೆಗಳು ನೆನಪಾಗುತ್ತವೆ. ಅವರು ತಮ್ಮ ಬರವಣಿಗೆ, ಕಾದಂಬರಿ, ಹೋರಾಟಗಳಿಗಿಂತ ಹೆಚ್ಚಾಗಿ ವಿವಾದಗಳಿದಂಲೇ ಪರಿಚಿತರು. ಹೇಳಿಕೊಳ್ಳಲು ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ. ಅವರು ಇತ್ತೀಚೆಗೆ ಬರೆದ ಪುಸ್ತಕದ ಹೆಸರು ಹೇಳಿ ಎಂದು ಯಾರಾದರೂ ಕೇಳಿದರೆ ತಡಬಡಾಯಿಸಬೇಕಾಗುತ್ತದೆ. ಯಾಕೆಂದರೆ ಅವರು ಸಾಹಿತ್ಯ ಚಟುವಟಿಕೆ ಬಿಟ್ಟು ಹಲವು ವರ್ಷಗಳಾದವು. ಅದಕ್ಕಿಂತ ಎರಡು ದಶಕಗಳ ಮೊದಲೇ ಜನ ಅವರ ಬರಹಗಳನ್ನು ಓದುವುದನ್ನು ನಿಲ್ಲಿಸಿಯಾಗಿತ್ತು! ಅವರ ಜೀವನಚರಿತ್ರೆ ಸಾಹಿತ್ಯವಲಯದಲ್ಲಾಗಲೀ, ಅದರ ಹೊರಗಾಗಲೀ ಚರ್ಚೆಯಾಗದೇ ಹೋಗಿದ್ದೇ ಇದಕ್ಕೆ ಸಾಕ್ಷಿ!!
ಸಾಹಿತ್ಯ ಬತ್ತಿಹೋದ ಮೇಲೆ ಸಾರ್ವಜನಿಕ ಬದುಕಿನಲ್ಲಿ ಅಸ್ತಿತ್ವದ ಪ್ರಶ್ನೆ ಉದ್ಭವಿಸಿರಬೇಕು. ಇದು ಸಹಜ ಕೂಡ. ಪರಿಣಾಮ ಅವರು ಬರವಣಿಗೆ ಬಿಟ್ಟು 'ಕೊರೆವಣಿಗೆ' ಶುರುಹಚ್ಚಿಕೊಂಡರು. ಮೈಕು ಕಂಡಲ್ಲೆಲ್ಲ ಓತಪ್ರೋತವಾಗಿ ಮಾತನಾಡಲಾರಂಭಿಸಿದರು. ಅದರ ಮೂಲಕವೇ ಸದಾ ಜನಮಾನಸದಲ್ಲಿ ಉಳಿದಿದ್ದಾರೆ ಕೂಡ. ಒಂದೊಮ್ಮೆ ಅವರು ಮಾತನಾಡದೇ ಇದ್ದಿದ್ದರೆ ಜನ ಅವರನ್ನು ಮರೆತು 10 ವರ್ಷವಾದರೂ ಆಗುತ್ತಿತ್ತು. ಸಾಹಿತಿಯೊಬ್ಬರು ಮಾತನಾಡಲೇಬಾರದು ಎಂದಲ್ಲ. ಅವರು ಮಾತನಾಡಿದರೆ ಜನ ಕಿವಿನಿಮಿರಿಸಿ ಕೇಳಿಕೊಳ್ಳಬೇಕು. ಅವರ ಮಾತಿಗೆ ಸ್ಪಂದಿಸಬೇಕು. ಅವರ ಮಾತುಗಳು ರಾಜ್ಯ, ದೇಶದ ಏಳಿಗೆಯನ್ನು ಉದ್ದೇಶಿಸಿರಬೇಕು. ಹೋರಾಟಕ್ಕೆ, ಯೋಚನೆಗೆ ಜನರನ್ನು ಬಡಿದೆಬ್ಬಿಸುವಂತಿರಬೇಕು.
ಆದರೆ ಇವರಿಗೆ ಯಾವಪರಿ ಜನಪರ ಕಾಳಜಿಯಿದೆ ಎಂದರೆ, ಅಣ್ಣಾ ಹಜಾರೆ ಹೋರಾಟಕ್ಕೆ ದೇಶಾದ್ಯಂತ ಜನ ಸ್ಪಂದಿಸುತ್ತಿದ್ದರೆ, ಭ್ರಷ್ಟಾಚಾರದ ವಿರುದ್ಧ ಇವರು ಒಂದೇ ಒಂದು ಹೇಳಿಕೆಯನ್ನೂ ನೀಡಲಿಲ್ಲ! ಕೇಂದ್ರ ಸರ್ಕಾರ ಭರಪೂರ ಹಗರಣಗಳಲ್ಲಿ ಮುಳುಗಿದಾಗ ಈ ವ್ಯಕ್ತಿ ದೇಶದಲ್ಲೇ ಇದ್ದಾರೋ? ಇಲ್ಲವೋ? ಎಂಬುದೇ ಗೊತ್ತಾಗದಂತಿದ್ದರು. ಅಥವಾ ಅವರ ಮನೆಯಲ್ಲಿರುವ ಟಿವಿ ಹಾಳಾಗಿತ್ತೇನೊ!
ಆದರೆ ಇದೇ ಅನಂತಮೂರ್ತಿಯವರು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೂ ಮೊದಲು ಜ್ಞಾನೋದಯವಾಗಿ 'ಸಿದ್ದರಾಮಯ್ಯ ಅವರಿಗೆ ಮತಹಾಕಿ' ಎಂದು ಜನರಲ್ಲಿ ಮನವಿ ಮಾಡಿದರು! ಇದ್ದಕ್ಕಿದ್ದಂತೆ ಭ್ರಷ್ಟಾಚಾರದ ವಿರುದ್ಧ ಬಡಬಡಿಸಲಾರಂಭಿಸಿದರು.
ಅವರ ಹೇಳಿಕೆಗಳನ್ನು ಗಮನಿಸಿದರೆ ಇವರು ಕಾಂಗ್ರೆಸ್ ವಕ್ತಾರರಿಗಿಂತ ಕಡೆಯಾಗಿ ಕಾಂಗ್ರೆಸ್ ಪರವಾಗಿ ಮಾತನಾಡುತ್ತಾರೆ. ಇವರನ್ನು ಕರ್ನಾಟಕದ 'ದಿಗ್ವಿಜಯಸಿಂಗ್' ಎಂದು ಕೆಲವು ಕಾಂಗ್ರೆಸ್ಸಿಗರೇ ಹಾಸ್ಯಮಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಕೆಲವು ದಿನಗಳ ಹಿಂದೆ (ದೇವರಾಜ ಅರಸು ಜನ್ಮದಿನಾಚರಣೆ ಸಂದರ್ಭ) ವಿಧಾನಸೌಧಕ್ಕೆ ತೆರಳಿದ್ದ ಅವರು, 'ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದನ್ನು ನೋಡಲೆಂದೇ ವಿಧಾನಸೌಧಕ್ಕೆ ಬಂದಿದ್ದೇನೆ. ಸಿದ್ದರಾಮಯ್ಯ ಅವರಲ್ಲಿ ನನಗೆ ದೇವರಾಜ ಅರಸು ಕಾಣುತ್ತಿದ್ದಾರೆ' ಎಂದು ಪುಂಗಿ ಊದಿದ್ದರು. ಅಧಿಕಾರ ಗದ್ದುಗೆಯಲ್ಲಿ ಕುಳಿತವರಿಗೆ ಬೆಣ್ಣೆಹಚ್ಚಲು ಅನಂತಮೂರ್ತಿ ಅವರಿಗೆ ತರಬೇತಿ ಬೇಕಿಲ್ಲ. ಸರ್ಕಾರ ಯಾವುದೇ ಇರಲಿ ಅವರು ಪಡೆದುಕೊಂಡ ಸೌಲಭ್ಯಗಳೇನು ಕಡಿಮೆಯೇ?
ಸರ್ಕಾರದಿಂದ ಅವರು ಪಡೆದ ಸೌಲಭ್ಯಗಳ ಪಟ್ಟಿ ಆರಂಭವಾಗುವುದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದ. ಆಗ ಅನಂತಮೂರ್ತಿಯವರು ಮೈಸೂರು ಬಳಿಯ ಎಚ್.ಡಿ.ಕೋಟೆ ಬಳಿ 17 ಎಕರೆ ಜಾಗವನ್ನು ಸರ್ಕಾರದಿಂದ ಪಡೆದುಕೊಂಡರು. ಅದಾದ ಮೇಲೆ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಡಾಲರ್ಸ್ ಕಾಲನಿಯಲ್ಲಿ ಸರ್ಕಾರದಿಂದ ಪುಕ್ಕಟೆ ಗಿಟ್ಟಿಸಿಕೊಂಡರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪೂನಾದಲ್ಲಿರುವ ನ್ಯಾಷನಲ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥರಾದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರ ಕೃಪಾಕಟಾಕ್ಷ ಗಳಿಸಿ, ಅನಾರೋಗ್ಯದ ನಡುವೆಯೂ ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾದರು. ಕೇರಳದ ಕೊಟ್ಟಾಯಂನಲ್ಲಿರುವ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾದರು. ಈಗ ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ನಡುವೆ ಅವರ ಆರೋಗ್ಯ ಹದಗೆಟ್ಟಾಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅವರಿಗೆ 5 ಲಕ್ಷ ನೀಡಲಾಗಿದೆ!
ಬಹುಶಃ ಅವರು ಸಹಾಯ ಪಡೆಯದೇ ಇರುವ ಒಂದೇ ಒಂದು ಸರ್ಕಾರವೂ ಇಲ್ಲವೋನೋ! ಅವರಿಗೆ ಈ ಹುದ್ದೆಗೇರುವ ಅರ್ಹತೆ ಇರಬಹುದು. ಆದರೆ ಅವನ್ನೆಲ್ಲ ಸರ್ಕಾರದಿಂದ ಪಡೆದುಕೊಂಡಿದ್ದಾರೆ ಎಂಬುದನ್ನಷ್ಟೇ ಇಲ್ಲಿ ನೆನಪಿಸುತ್ತಿದ್ದೇನೆ. ಯಾಕೆಂದರೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಸಹಾಯ ಪಡೆಯಲು ಹೋಗಿ ಮಂಗಳಾರತಿ ಮಾಡಿಸಿಕೊಂಡಿದ್ದು ನಿಮಗೆ ನೆನಪಿರಬೇಕು. ಆಗ ರಾಜ್ಯಸಭೆಗೆ ಆಯ್ಕೆಯಾಗುವ ಕನಸು ಕಂಡಿದ ಅವರು, ಚುನಾವಣೆಗೂ ಸ್ಪರ್ಧಿಸಿ ಮುಖಭಂಗಕ್ಕೆ ಒಳಗಾಗಿದ್ದರು. ಇದಕ್ಕಿಂತ ಮುಖ್ಯವಾಗಿ ಅವರು ರಾಜ್ಯಸಭೆ ಸ್ಥಾನಕ್ಕೆ ಯಾವಪರಿ ಲಾಬಿ ನಡೆಸಿದ್ದರೆಂದರೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರೇ ಹೇಸಿಗೆಯಿಂದ ತುಚ್ಛವಾಗಿ 'ಯಾರ್ರೀ ಅದು ಅನಂತಮೂರ್ತಿ?' ಎಂದು ಪ್ರಶ್ನಿಸಿದ್ದರು.
ಒಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಮುಖ್ಯಮಂತ್ರಿಯೊಬ್ಬ ಅಷ್ಟು ಕೀಳಾಗಿ ಕಾಣುವುದು ತಪ್ಪಾದರೂ, ಅವರು ಕೀಳಾಗಿ ಕಾಣುವಂತೆ ಅವರು ನಡೆದುಕೊಳ್ಳುವುದು ಕೂಡ ತಪ್ಪೇ. ಅವರು ಹಾಗೆ ನಡೆದುಕೊಳ್ಳದೇ ಇದ್ದಲ್ಲಿ ಯಾರೂ ಅವರನ್ನು ಅಷ್ಟು ತುಚ್ಛವಾಗಿ ಕಾಣುವ ಧೈರ್ಯ ಮಾಡುತ್ತಿರಲಿಲ್ಲ. ಅವರು ಹಾಗೆ ಕರೆಯುವ ಧೈರ್ಯ ಮಾಡಿದ್ದಾರೆಂದರೆ ಇವರು ಕೂಡ ಅಷ್ಟೇ ಕೀಳಾಗಿ ನಡೆದುಕೊಂಡಿದ್ದಾರೆ ಎಂದರ್ಥವಲ್ಲವೇ? ಸ್ವಾರಸ್ಯಕರ ಸಂಗತಿಯೆಂದರೆ ಈ ಘಟನೆ ನಡೆದು ಕೆಲವೇ ತಿಂಗಳಿಗೆ ಮರ್ಯಾದೆಬಿಟ್ಟ ಅನಂತಮೂರ್ತಿ, ಎಚ್.ಡಿ. ಕುಮಾರಸ್ವಾಮಿ ಉಪವಾಸ ಅಂತ್ಯಗೊಳಿಸುವ ಸಂದರ್ಭದಲ್ಲಿ ನಗುನಗುತ್ತ ಹಣ್ಣಿನ ರಸ ಕುಡಿಸಿದರು!
2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಕೋಮುಗಲಭೆಯನ್ನೇ ಮುಂದಿಟ್ಟುಕೊಂಡು ಈಗ 'ಕೋಮುವಾದಿ ನರೇಂದ್ರ ಮೋದಿ ಪ್ರಧಾನಿಯಾಗುವಾಗ ನಾನು ಜೀವಂತ ಇರಲು ಇಷ್ಟಪಡುವುದಿಲ್ಲ' ಎಂದು ಹೇಳುತ್ತಾರಲ್ಲ. ಗುಜರಾತ್‌ನಲ್ಲಿ 1969ರಲ್ಲಿಯೇ ದೊಡ್ಡ ಗಲಭೆ ನಡೆದಿದ್ದು ಅನಂತಮೂರ್ತಿ ಅವರಿಗೆ ಗೊತ್ತಿಲ್ಲವೇ? 1969ರಲ್ಲಿ ನಡೆದ ಕೋಮುಗಲಭೆಯಲ್ಲಿ 660 ಜನ ಮೃತಪಟ್ಟಿದ್ದರು. ಅನಧಿಕೃತವಾಗಿ ಈ ಸಂಖ್ಯೆ 2000 ದಾಟುತ್ತದೆ ಎನ್ನಲಾಗುತ್ತದೆ. ಆಗ ಗುಜರಾತ್ ಮತ್ತು ದೇಶವನ್ನು ಆಳುತ್ತಿದ್ದುದು ಯಾವ ಪಕ್ಷ ಅನಂತಮೂರ್ತಿಯವರೇ? ಆಗ ಅಲ್ಲಿದ್ದುದು ಹಿತೇನ್ ದೇಸಾಯಿ ಅವರ ಕಾಂಗ್ರೆಸ್ ಸರ್ಕಾರವೇ ಅಲ್ಲವೇ?
1980ರಲ್ಲಿ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಕೋಮುಗಲಭೆಯಲ್ಲಿ ಅಧಿಕೃತವಾಗಿ ಮೃತಪಟ್ಟವರ ಸಂಖ್ಯೆ 400. ಅನಧಿಕೃತವಾಗಿ ಅದು 2000 ಮೀರಿದೆ ಎನ್ನಲಾಗುತ್ತಿದೆ. ಆಗ ಉತ್ತರಪ್ರದೇಶ ಮತ್ತು ದೇಶವನ್ನು ಆಳುತ್ತಿದ್ದು ಯಾರು ಅನಂತಮೂರ್ತಿಯವರೇ? ನರೇಂದ್ರ ಮೋದಿ ಆಗ ಉತ್ತರ ಪ್ರದೇಶ ಆಳುತ್ತಿದ್ದರಾ? 1983ರಲ್ಲಿ ಅಸ್ಸಾಂನಲ್ಲಿ ನಡೆದ ಹತ್ಯಾಕಾಂಡದಲ್ಲಿ ಅಧಿಕೃತವಾಗಿಯೇ 3300 ಮುಸ್ಲಿಮರು ಮೃತಪಟ್ಟಿದ್ದಾರೆ. ಆಗ ದೇಶ ಆಳುತ್ತಿದ್ದು ನರೇಂದ್ರ ಮೋದಿ ಅಥವಾ ಲಾಲಕೃಷ್ಣ ಅಡ್ವಾಣಿಯಾ? ಈ ಹತ್ಯಾಕಾಂಡದ ಬಗ್ಗೆ ಸಲ್ಲಿಸಿದ ವರದಿಯನ್ನು ಅಸ್ಸಾಂ ವಿಧಾನಸಭೆಯಲ್ಲಿ ಮಂಡಿಸಲು ಕೂಡ ಜಾತ್ಯತೀತ ಕಾಂಗ್ರೆಸ್ ಸರ್ಕಾರ ಮುಂದಾಗಲಿಲ್ಲ.
ಪಾಪ ಅನಂತಮೂರ್ತಿಯವರಿಗೆ ವಯಸ್ಸಾಗಿದೆ. ಅದೆಲ್ಲ ಮರೆತುಹೊಗಿರಬೇಕು. ಮೊನ್ನೆ ಮೊನ್ನೆ ಉತ್ತರಪ್ರದೇಶ ಮುಜಪ್ಫರ್‌ನಗರದಲ್ಲಿ ನಡೆದ ಗಲಭೆಯಲ್ಲಿ 49 ಜನ ಸಾಯಲಿಲ್ಲವೇ? ಅಲ್ಲೂ ನರೇಂದ್ರ ಮೋದಿಯೇ ಮುಖ್ಯಮಮಂತ್ರಿಯಾಗಿದ್ದಾರೆಯೇ? ಇದರ ಬಗ್ಗೆ ಯಾಕೆ ಸೊಲ್ಲೆತ್ತಿಲ್ಲ ನಮ್ಮ ಅನಂತಮೂರ್ತಿಯವರು?
2002ರ ಗಲಭೆಯನ್ನೇ ಮುಂದಿಟ್ಟು ಮೋದಿ ಪ್ರಧಾನಿಯಾಗುವಾಗ ಜೀವಂತ ಇರಲು ಇಷ್ಟಪಡುವುದಿಲ್ಲ ಎನ್ನುವುದಾದರೆ 1984ರಲ್ಲಿ ದಿಲ್ಲಿಯಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಸುಮಾರು 3000-4000 ಸಿಖ್ಖರನ್ನು ಕೊಂದಿದ್ದಕ್ಕೆ ಏನನ್ನುತ್ತಾರೆ? ಸಿಖ್ಖರ ನರಮೇಧಕ್ಕೆ ಕಾರಣವಾದ ಕಾಂಗ್ರೆಸ್‌ನ ಆಳ್ವಿಕೆಯಲ್ಲಿ ನಾನು ಇರಲು ಇಷ್ಟಪಡುವುದಿಲ್ಲ ಎಂದು ಒಂದು ದಿನವೂ ಅನ್ನಿಸಲಿಲ್ಲವೇ ಅನಂತಮೂರ್ತಿಗಳೇ?
ಜೀವಕ್ಕೂ ಧರ್ಮದ ಬಣ್ಣ ಕೊಡುವುದನ್ನು ನಿಮ್ಮಿಂದಲೇ ಕಲಿಯಬೇಕು ನೋಡಿ! ಒಬ್ಬ ಸಾಹಿತಿಯಾಗಿ ಇಂತಹ ಪಕ್ಷಪಾತದ, ಪೂರ್ವಗ್ರಹಪೀಡಿತ ಹೇಳಿಕೆಗಳನ್ನು ನೀಡುವಾಗ ಎಚ್ಚರವಿರಬೇಕು. ಕಾಂಗ್ರೆಸ್ ವಕ್ತಾರರಿಗೆ ಪಕ್ಷವನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯ ಕರ್ಮ. ಅಂತಹ ಕರ್ಮ ನಿಮಗೇನಿದೆ ಅನಂತಮೂರ್ತಿಗಳೇ? ಅನಂತಮೂರ್ತಿ ಅವರು ಮಾತೆತ್ತಿದರೆ ಮಹಾತ್ಮಾ ಗಾಂಧಿಯ ಹೆಸರು ಪ್ರಸ್ತಾಪ ಮಾಡುತ್ತಾರೆ. ಮಹಾತ್ಮಾ ಗಾಂಧಿಯವರು ಪ್ರಜಾಪ್ರಭುತ್ವದ ಪ್ರತಿಪಾದಕರು. ಪ್ರಜಾಪ್ರಭುತ್ವ ಅಂದರೆ ಪ್ರಜೆಗಳೇ ನಮ್ಮನ್ನಾಳುವವರನ್ನು ಆಯ್ಕೆ ಮಾಡುತ್ತಾರೆ. ಪ್ರಜೆಗಳೆಲ್ಲ ಸೇರಿ ನರೇಂದ್ರ ಮೋದಿ ಅವರೇ ನಮ್ಮ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅವರನ್ನು ಆರಿಸಿದರೆ ಅನಂತಮೂರ್ತಿ ಅವರಷ್ಟೇ ಅಲ್ಲ, ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅದು ಅನಿವಾರ್ಯ ಕೂಡ. ಅದನ್ನು ಒಪ್ಪಿಕೊಳ್ಳುವುದಿಲ್ಲ ಅಂದರೆ ಅವರನ್ನು ಪ್ರಜಾಪ್ರಭುತ್ವ ವಿರೋಧಿ ಎಂದೇ ಕರೆಯಬೇಕಾಗುತ್ತದೆ.
ತಾವು ಬಯಸಿದವರೇ ಪ್ರಧಾನಿಯಾಗಬೇಕು ಎಂಬುದು ಸ್ವಾರ್ಥ ಮತ್ತು ಸರ್ವಾಧಿಕಾರಿ ನಿಲುವಾಗುತ್ತದೆ. ಆದ್ದರಿಂದ ಮೋದಿ ಪ್ರಧಾನಿಯಾಗಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವ ಹಕ್ಕು ಈ ದೇಶದ ಜನರದ್ದು. ಅದನ್ನು ಕಸಿದುಕೊಳ್ಳುವ ಹಕ್ಕು ಅನಂತಮೂರ್ತಿ ಅವರಿಗಿಲ್ಲ. ಮೋದಿಯನ್ನು ಟೀಕಿಸುವ ಹಕ್ಕು ಅವರಿಗಿದೆ. ಆದರೆ ಪೂರ್ವಗ್ರಹ ಬೆರೆತ ಇಂತಹ ಹೇಳಿಕೆಗಳು ಖಂಡಿತ ಅವರಿಗೆ ಶೋಭೆತರುವುದಿಲ್ಲ.
ಮೋದಿ ಅವರ ಭಾಷಣಕ್ಕೆ ದೇಶಾದ್ಯಂತ ಅದೆಷ್ಟು ಜನ ಕಿವಿಗೊಡುತ್ತಾರೆ. ಅವರು ಮಾತನಾಡುತ್ತಾರೆ ಅಂದರೆ ಸಾಕು ಅದೆಷ್ಟು ಜನ ಕಾದು ಕುಳಿತಿರುತ್ತಾರೆ. ಸಾಲದ್ದಕ್ಕೆ ಅವರು ಗುಜರಾತ್‌ನಲ್ಲಿ ಆಡಳಿತ ನಡೆಸಿ ತೋರಿಸಿದ್ದಾರೆ. ಅವರಿಗೆ ಯಾವರೀತಿಯಿಂದಲೂ ಅನಂತಮೂರ್ತಿ ಅವರನ್ನು ಹೋಲಿಸುವುದು ಸಾಧ್ಯವಿಲ್ಲ.
ಜನಪ್ರಿಯ ವ್ಯಕ್ತಿಗಳ ಬಗ್ಗೆ ಲಘುವಾಗಿ ಮಾತನಾಡಿ ತಾವು ಪ್ರಚಾರ ಗಿಟ್ಟಿಸುವುದು ಕೀಳು ಮನಸ್ಥಿತಿ. ಅಂತಹ ಸ್ಥಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಿಗೆ ಬರಬಾರದು. ಇದರಿಂದ ಸಾಹಿತಿಯ ಜತೆಗೆ ಜ್ಞಾನಪೀಠ ಪ್ರಶಸ್ತಿಯ ಮೌಲ್ಯವೂ ಕುಸಿಯುತ್ತದೆ. ಅನಂತಮೂರ್ತಿ ಅವರ ಇಂತಹ ವರ್ತನೆಗಳನ್ನು ನೋಡಿದರೆ 'ಜ್ಞಾನಪೀಠ' ಪುರಸ್ಕೃತರೋ, 'ಪಡೆದವರೋ' ಎಂಬ ಅನುಮಾನ ಮೂಡಿದರೆ ಅಚ್ಚರಿಯಿಲ್ಲ. ರಾಜಕೀಯ ಮಾಡುವುದು ಬಿಟ್ಟು ಭಾಷೆ, ನೆಲ, ಜಲದ ಬಗ್ಗೆ ಚಿಂತಿಸಲಿ. ಇನ್ನೂ ಸ್ವಲ್ಪ ಏನಾದರೂ ಉಳಿದಿದ್ದರೆ ಬರೆಯಲಿ. ಅದು ಬಿಟ್ಟು ಕಾಂಗ್ರೆಸ್ ವಕ್ತಾರರಾಗಿ ಕೆಲಸ ಮಾಡುವುದಾದರೆ, ಅಧಿಕೃತವಾಗಿಯೇ ಕಾಂಗ್ರೆಸ್ ಸೇರಿಸಿದರೆ ಖಂಡಿತ ಅದನ್ನು ಸ್ವಾಗತಿಸೋಣ.
- ವಿನಾಯಕ ಭಟ್ಟ, ಮೂರೂರು
vakradanta@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


