ಭಾರ ಹೊರೋದ್ನ ಕೃಷ್ಣಪ್ಪೋರು ಪ್ರಾಕ್ಟೀಸು ಮಾಡ್ತಾರಂತೆ
'ಉಂಡಾಡಬಹುದು ಎನ್ನಪ್ಪ, ಊಟಕ್ಕೆ ಬಾರೋ ಕೃಷ್ಣಪ್ಪ' ಅಂತೇಳಿ ಮೈಲಾರಿ...
'ಉಂಡಾಡಬಹುದು ಎನ್ನಪ್ಪ, ಊಟಕ್ಕೆ ಬಾರೋ ಕೃಷ್ಣಪ್ಪ' ಅಂತೇಳಿ ಮೈಲಾರಿ ವೊರೆ ವೊತ್ತಿರೋ ಲೇಡೀಸು ಪಾರ್ಟಿ ಆಪೀಸು ಮುಂದ್ಲಾಗಡೆ ಕೂತ್ಕಂಡು ಹಾಡ್ತಾಯಿದ್ದ.
'ಈ ಗಾನ ಎಲ್ಲೋ ಕೇಳ್ದಂಗೆ ಐತಲ್ಲಾ, ಯಾರೋ ನನ್ನುನ್ನ ಕರೀತಾವ್ರಲ್ಲ' ಅಂತ ಯೋಳ್ಕಂಡು ಪಾರ್ಟಿ ವೊಸ ಪ್ರೆಸ್ಡೆಂಟು ಕೃಷ್ಣಪ್ಪೋರು ಬಂದೇಬುಟ್ರು.
'ಲೇ ಮೈಲಾರಿ ಈವತ್ತು ಸನ್ವಾರ. ನಾನು ವೊಪ್ಪೊತ್ತು ವೂಟಗೀಟ ಮಾಡಂಗಿಲ್ಲ' ಅಂತಂದ್ರು ಕೃಷ್ಣಪ್ಪೋರು. 'ನಿಮ್ಮುನ್ನ ವೂಟುಕ್ಕೆ ಕರ್ದ ಬಡ್ಡೀಮಗ ಯಾರು ಧಣಿ. ಏನೋ ಬ್ಯಾಸ್ರ ಕಳ್ಯಕ್ಕೆ ಅಂತೇಳಿ ಹಾಡ್ಕತಾಯಿದ್ದೆ. ನೀವು ಎಂಟ್ರಿ ತಗಂಡ್ರಿ. ಇರ್ಲಿ ಬುಡಿ. ಅಲ್ಲ ವೂಟ ಬುಟ್ರೆ ನಿಶ್ಯಕ್ತಿ ಆಗೋಯ್ತದೆ. ಶಕ್ತಿ ಇಲ್ಲಾಂದ್ರೆ ಪಾರ್ಟಿ ಕಟ್ಟಕ್ಕೆ ಆಯ್ತದಾ ? ಬಿದ್ದೋಗಿರೋ ಪಕ್ಸಾವ ಕೆಳ್ಗಿಂದ ಮ್ಯಾಲುಕ್ಕೆ ಎತ್ತಕ್ಕೆ ಆಯ್ತದಾ?' ಅಂತ ಮೈಲಾರಿ ಕೇಳ್ದ.
'ಈ ಡೌಟು ನಂಗೂ ಬಂತು ಕಣ್ಲಾ? ನೀವು ಪಾರ್ಟಿನ ಮ್ಯಾಲುಕ್ಕೆ ಎತ್ತಕ್ಕೆ ಶಕ್ಕಿ ತಕ್ಕಬೇಕು. ಭಾರ ವೊರಕ್ಕೆ ತಾಕತ್ತು ತಗಬೇಕು. ಅದುಕ್ಕೆ ಶಕ್ತಿಮಾನ್ ಆಬೇಕು ಅಂತ ದ್ಯಾವೇಗೌಡ್ರು ರಾತ್ರಿ ಕೂರುಸ್ಕಂಡು ಗಿಣಿಗೆ ಯೋಳ್ದಂಗೆ ಯೋಳುದ್ರು. ಅದುಕ್ಕೆ ವತ್ತಾರೆ ಎದ್ದು ಹಾರ್ಲಿಕ್ಸು ಕುಡ್ಕತೀನಿ. ಆಮ್ಯಾಲೆ ಜಿಮ್‌ಗೆ ವೋಯ್ತೀನಿ' ಅಂದ್ರು ಕೃಷ್ಣಪ್ಪೋರು.
'ಜಿಮ್‌ಗೆ ವೋಯ್ತೀರ? ಅಲ್ಗೆ ಯಾಕೋದೀರಿ?' ಅಂದ ಮೈಲಾರಿ ಕೇಳ್ದ. 'ಭಾರ ವೊರೋದ್ನ ಪ್ರಾಕ್ಟೀಸು ಮಾಡಕ್ಕೆ' ಅಂದ್ರು ಕೃಷ್ಣಪ್ಪೋರು. 'ಹಂಗೆ ಇಸ್ಯ, ವತ್ತಾರೆ ಎದ್ದು ಹಾರ್ಲಿಕ್ಸು ಕುಡ್ಯಾದ್ಯಾಕೋ?' ಅಂತ ಮೈಲಾರಿ ಕೇಳ್ದ.
'ಏನ್ಲಾ ಹಿಂಗಂತೀಯ? ಶಕ್ತಿಮಾನ್ ಆಗೋದು ಬ್ಯಾಡ್ವ? ಅದುಕ್ಕೆ' ಅಂದ್ರು ಕೃಷ್ಣಪ್ಪೋರು. 'ಸೂಪರ್ ಕಣೇಳಿ ನೀವು. ಹಂಗೇ ಬಿದ್ದೋಗಿರೋ ಪಕ್ಸಾನ ಮ್ಯಾಲುಕ್ಕೆ ಎತ್ತಕ್ಕೆ ಜೇಶೀಬಿ ತಕ್ಕಂಡು ಬಂದ್ಬುಡಿ' ಅಂದ ಮೈಲಾರಿ. 'ಕಿಲಾಡಿ ಕಣ್ಲಾ ನೀನು ವೊಳ್ಳೊಳ್ಳೆ ಐಡಿಯಾ ಮಡಿಕ್ಕಂಡಿದ್ದೀಯ. ಸೆಕೆಟ್ರಿ ಮಾಡ್ಕಂಬುಡ್ತೀನಿ ಬಂದ್ಬುಡು' ಅಂತ ಕೃಷ್ಣಪ್ಪೋರು ಮೈಲಾರಿಗೆ ಆಫರ್ ಕೊಟ್ರು.
'ಅಲ್ಲ ಸ್ವಾಮಿ, ನಿಮ್ ಲೀಡ್ರುಸು ಪಕ್ಸ ಬುಟ್ಟು ವೋಗಕ್ಕೆ ರೆಡಿ ಆಗೋಗವ್ರೆ. ಇಲ್ಲೇ ಇದ್ರೆ ಏನೂ ಗಿಟ್ಟಾಕಿಲ್ಲ ಅಂತೇಳಿ ಬ್ಯಾರೆ ಪಕ್ಸುಕ್ಕೆ ಹಾರಕ್ಕೆ ರೆಡಿ ಅಬುಟ್ಟವ್ರೆ. ಎಲ್ಲ ವೊಂಟೋದ್ಮೇಕೆ ಪಕ್ಸಾನ ಹೆಂಗೆ ಕಟ್ತೀರಿ. ಅದುಕ್ಕೂ ಏನರ ಹಗ್ಗ ಮಡ್ಗೀದ್ದೀರ?' ಅಂತ ಮೈಲಾರಿ ಕೇಳ್ದ.
'ನಾನು ಯಾರ್ಲ? ಕೃಷ್ಣಪ್ಪ. ಶ್ರೀಕೃಷ್ಣ ಪರಮಾತ್ಮ ಪಿಳ್ಳಂಗೋವಿ ಬಾರುಸ್ತಾಯಿದ್ರೆ ದನುಗ್ಳು ಹಂಗೆ ಹತ್ರ ಬಂದೋಗಿ ನಿದ್ದೆ ಮಾಡೋವಂತೆ. ನಾನೂವೆ ಈವಾಗ ಪಿಳ್ಳಂಗೋವಿ ಬಾರುಸ್ತಾ ಕೂತ್ಕಂಡ್ರೆ ಲೀಡ್ರುಸು ತಲೆ ಆಡಿಸ್ಕಂಡು ಬಂದೋಯ್ತರೆ' ಅಂದ್ರು ಕೃಷ್ಣಪ್ಪೋರು.
'ಪಿಳ್ಳಂಗೋವಿ ಬಾರ್ಸೋದಲ್ಲ ಬುಡಿ ನುಡ್ಸೋದು' ಅಂದ ಮೈಲಾರಿ. 'ಎಲ್ಲ ವೊಂದೇ ಕಣ್ಲಾ. ನಿಮ್ಕೂರ್ಕಡೆ ನುಡುಸ್ತರೆ, ನಮ್ಕಡೆ ಬಾರುಸ್ತರೆ. ಅದು ಹೆಂಗಾರ ಇರ್ಲಿ ಸೌಂಡು ಬತ್ತದೋ ಇಲ್ವೋ ಅನ್ನೋದು ಇಂಪಾರ್ಟೆಂಟು ಮುಂಡೇದೆ' ಅಂತೇಳಿ ಕೃಷ್ಣಪ್ಪೋರು ಆಪೀಸು ವೊಳಿಕ್ಕೆ ವೋದ್ರು.
'ವೊಟ್ಟೆ ಹಸೀತಾದೆ ಮೊದ್ಲು ವುಣ್ಣಕ್ಕೆ ವೋಬೇಕು' ಅಂತೇಳಿ ಮೈಲಾರಿ ವೊಟ್ಲು ಕಡೆ ವೊಂಟ. ದಾರಿನಾಗೆ ಮಾಜಿ ಪೊಲೀಸ್ ಆಪೀಸರ್ರು ಬಿದ್ರಿಯೋರು ಯರ್ರಾಬಿರ್ರಿ ಸೈಕಲ್ ತುಳ್ಕಂಡು ಬತ್ತಾಯಿದ್ರು. ಮೈಲಾರಿ ನೋಡ್ಬುಟ್ಟು ಸೈಕಲ್‌ಗೆ ಅಡ್ಡ ಹಾಕ್ಬುಟ್ಟ.
'ಯಾಕಲೇ ಮಂಗ್ಯಾ ನನ್ಮಗ್ನೇ. ನನ್ ಸೈಕಲ್‌ಗೆ ಅಡ್ಡ ಬತ್ತಾಯಿದ್ದೀಯ. ಟ್ರಾಫಿಕ್ ಪೊಲೀಸ್ಸಾ ? ಸೈಕಲ್ ವೋಡ್ಸೋರ್ನೂ ಬುಡಾಕಿಲ್ವಾ? ನಾನು ಬಿದ್ರಿ. ತಿಳೀತಲ್ಲೋ?' ಅಂದ್ರು ಸಾಹೇಬ್ರು.
'ಅಯ್ಯೋ ನಾನು ಪೊಲೀಸು ಅಲ್ಲೇಳಿ. ಅಲ್ಲ, ಡ್ಯೂಟಿನಾಗೆ ಇದ್ದಾಗ ಗುಂಡು ಗುಂಡುಗೆ ಹೆಂಗಿದ್ರಿ ಏನ್ಕಥೆ. ಈವಾಗೇನು ಸಪೂರ ಆಗೋಗಿದ್ದೀರ. ಡಯಟ್ಟಾ?' ಅಂತ ಮೈಲಾರಿ ಕೇಳ್ದ.
'ಹಾಳೋದೋನೆ, ಈ ಸೈಕಲ್ಲು ತುಳ್ದು ತುಳ್ದು ಬಾಡಿ ಹಿಂಗೆ ಅಬುಟ್ಟದೆ ಕಣ್ಲಾ' ಅಂದ್ರು ಬಿದ್ರಿಯೋರು. 'ಸೈಕಲ್ ತುಳ್ಯೋ ಕಷ್ಟ ಯಾಕೆ ಬಂತು ನಿಮ್ಗೆ?' ಅಂತ ಮೈಲಾರಿ ಕೇಳ್ದ.
'ಏನ್ಲಾ ಹಿಂಗಂತೀಯ. ನಾನು ಕೈ ಪಕ್ಸ ಬುಟ್ಟು ಸಮಾಜವಾದಿ ಪಕ್ಸ ಸೇರ್ಕಂಬುಟ್ಟೀದ್ದೀನಿ. ಪಾರ್ಟಿಗೆ ಇಲ್ಲಿ ಪ್ರೆಸ್ಡೆಂಟು ಬ್ಯಾರೆ ಆಬುಟ್ಟಿದ್ದೀನಿ. ನಮ್ ಸಿಂಬಲ್ಲು ಸೈಕಲ್ಲು ಅದುಕ್ಕೆ ತುಳೀತಾಯಿದ್ದೀನಿ' ಅಂದ್ರು ಬಿದ್ರಿಯೋರು. 'ಕೈ ಪಕ್ಸುದಾಗೇ ಇದ್ದಿದ್ರೆ ಪಾರ್ಲಿಮೆಂಟು ಎಲೆಕ್ಸನ್ಗೆ ನಿಂತು ಎಂಪಿ ಆಬೋದಾಗಿತ್ತು. ನಿಮ್ ಕರ್ಮ ವೋಗಿ ವೋಗಿ ಈ ಪಾರ್ಟಿ ಸೇರ್ಕಂಡಿದ್ದೀರಿ. ಸೈಕಲ್ ತುಳೀತಾನೇ ಇರಿ' ಅಂತೇಳಿ ಮೈಲಾರಿ ವೊಟ್ಲು ಕಡೆ ವೊಂಟ.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

