Hmm... ಪಾಂಚ್ ಸೈಕೋ ಶಂಕರ
ಹೋದ ದಾರಿಗೆ ಸುಂಕ ಇಲ್ಲ ಅಂತ ಮರಳಿ ಜೈಲಿಗೆ ಬಂದ್ಯಲ್ಲ ಶಂಕರಾ?
ಏನ್ ಮಾಡೋದು, ಮನುಷ್ಯನಾದವನು ಜೀವನದಲ್ಲಿ ಎಲ್ಲ ಬಂಧನಗಳಿಂದನೂ ಮುಕ್ತವಾಗಬೇಕು ಅಂತ ಜೈಲಿಂದ ತಪ್ಪಿಸ್ಕೊಂಡ್ರೆ, ಇವ್ರು ಮತ್ತೆ ಕರ್ಕಂಬಂದ್ ಒಳಗಾಕಿದಾರೆ.
- ಓಹೋಹೋ, ಏನಿದು, ಸೈಕೋ ಶಂಕರ್ ಬಾಯಲ್ಲಿ ಫಿಲಾಸಫಿ ಬರ್ತಾ ಇದೆ?
ಒಂಥರಾ ಹಂಗೆನೇ, ಕೋರ್ಟ್‌ನಲ್ಲಿ ನನ್ನ ಪರವಾಗಿ ಜಡ್ಜ್‌ಮೆಂಟ್ ಬರಲಿಲ್ಲ, ಜೈಲಿನ ಗೋಡೆ ಹತ್ತಿ ತಪ್ಪಿಸಿಕೊಳ್ಳುವಾಗಲೂ ಒಂದು ಸರಿಯಾದ ಜಡ್ಜ್‌ಮೆಂಟ್ ಸಿಗಲಿಲ್ಲ. ಹಂಗಾಗಿ ಮತ್ತೆ ಹಳೇ ಜೈಲರ್ ಪಾದವೇ ಗತಿ.
- ಒಟ್ನಲ್ಲಿ, ಹಣೆಬರಹ, ಗೋಡೆಬರಹ ಎರಡೂ ಸರಿ ಇರ್‌ಲಿಲ್ಲ ಅನ್ನು. ಸರಿ ಜೈಲಿಂದ ತಪ್ಪಿಸ್ಕೊಳ್ಳೋಕೆ ಒಳಗಿಂದಲೇ ಸಹಕಾರ ಸಿಕ್ತಂತೆ ಹೌದೇ?
ಹಂಗೇನಿಲ್ಲ. ನಾನು ಆಪರೇಶನ್ ಮಾಡಿದೆ, ಅವರು ಒಳಗಡೆಯಿಂದ ಸ್ವಲ್ಪ ಕೋ ಆಪರೇಶನ್ ಮಾಡಿದ್ರು. ಆದ್ರೆ ಹೊರಗೋದ್ಮೇಲೆ ಯಾರಿಂದನೂ ಬಾಹ್ಯ ಬೆಂಬಲ ಸಿಗಲಿಲ್ಲ.
- ಅದ್ಸರಿ ನೀನ್ ಜೈಲಿಂದ ತಪ್ಪಿಸ್ಕೊಂಡಿದ್ ಯಾಕೆ?
ನಾವು ಸೈಕೋಗಳಿರ್‌ಬೋದು. ಆದ್ರೂ ನಾವೂ ಮನುಷ್ಯರೇ ತಾನೇ? ಇಷ್ಟ್ ದಿನ ಎಲ್ಲ ಚೆನ್ನಾಗೇ ಇತ್ತು. ಇತ್ತೀಚೆಗೆ ಈ ರಾಜಕಾರಣಿಗಳನ್ನೆಲ್ಲಾ ಕರ್ಕೊಂಬಂದು ಇಲ್ಲೇ ಬಿಡ್ತವ್ರೆ. ಹ್ಯಾಗ್ ಸ್ವಾಮಿ ತಡ್‌ಕೊಳ್ಳೋದು ಜೀವ..?
- ತಪ್ಪಿಸ್ಕೊಂಡವನು ಅಷ್ಟು ಬೇಗ ಸಿಕ್ಕಾಕ್ಕೊಂಡ್ಯಲ್ಲ ಹೆಂಗೆ?
ಸಿಕ್ಕಾಕ್ಕೊಂಡಿದ್ದೆಲ್ಲ ಸುಳ್ಳು. ನಂಗೇನೂ ಹೊರಗೇ ಇರ್‌ಬೇಕು ಅಂತ ಆಸೆ ಇರ್‌ಲಿಲ್ಲ. ಸುಮ್ನೆ ಒಂದ್ ರೌಂಡ್ ಹೊರಗ್ ಹೋಗಿ, ಒಂದ್ ಸ್ವಲ್ಪ ಸೌಂಡ್ ಮಾಡಿದ್ರೆ ದಂಡುಪಾಳ್ಯ, ಉಮೇಶ್ ರೆಡ್ಡಿ ಥರಾ ನನ್ ಬಗ್ಗೆನೂ ಒಂದ್ ಸಿನಿಮಾ ಮಾಡ್ತಾರೆ ಅಂತ ಹಿಂಗ್ ಮಾಡಿದೆ. (ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಹೆಸರಿನಲ್ಲೇನಿದೆ? ಎಂಬ ಪ್ರಶ್ನೆಗೆ ಬ್ಯುಸಿನೆಸ್ ವಲಯದಲ್ಲಿ ಅರ್ಥವಿಲ್ಲ. ಏಕೆಂದರೆ ಅಲ್ಲಿ ಎಲ್ಲವೂ ನಾಮಬಲದ ಮೇಲೆಯೇ ಅವಲಂಬಿತ. ಆದರೆ ಬ್ಯುಸಿನೆಸ್‌ನಲ್ಲಿ ಬ್ರ್ಯಾಂಡ್‌ನೇಮ್ ಇದ್ದರೆ ಯಶಸ್ಸು ಸುಲಭವಾಗಿ ಸಿಗುತ್ತದಾದರೂ ಅದನ್ನು ಸೃಷ್ಠಿ ಮಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಬ್ರ್ಯಾಂಡ್‌ನೇಮ್ ಬೆಳೆಸಿಕೊಳ್ಳುವುದು ಹೇಗೆ ಎಂಬುದಕ್ಕೂ ಇಲ್ಲಿ ಒಂದಷ್ಟು ಟಿಪ್ಸ್‌ಗಳಿವೆ. ನಿಮ್ಮ ವ್ಯವಹಾರದಲ್ಲಿ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವೇ ಎಂದು ಚೆಕ್ ಮಾಡಿ.
l bit.ly/16rL1CM l bit.ly/WiC1eo
l bit.ly/18BLGzh l bit.ly/18dYOJR
l bit.ly/cUzInL
ಹರಿ-ಕಥೆ
ಖೇಮುಗೆ ಚಿಕ್ಕಂದಿನಿಂದಲೂ ಕುದುರೆ ಓಡಿಸುವ ಆಸೆ. ಆದರೆ ಅದು ಸಾಧ್ಯವೇ ಆಗಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ, ನಾನು ಹಾರ್ಸ್ ರೈಡಿಂಗ್ ಮಾಡಲೇಬೇಕು ಎಂದು ನಿರ್ಧರಿಸಿದ ಖೇಮು, ಕುದುರೆಯನ್ನು ಹುಡುಕಿಕೊಂಡು ಹೊರಟ. ಒಂದು ಮಜಬೂತಾದ ಕುದುರೆ ಅವನ ಕಣ್ಣಿಗೆ ಬಿತ್ತು. ಆದರೆ ಏನೂ ಎಡವಟ್ಟಾಗಬಾರದು ಎಂದು ಪಕ್ಕದಲ್ಲೇ ಇದ್ದ ಲೈಬ್ರರಿಗೆ ಹೋಗಿ ಹಾರ್ಸ್ ರೈಡಿಂಗ್ ಬಗ್ಗೆ ಅರ್ಧಗಂಟೆ ಓದಿಕೊಂಡು ಬಂದು ಕುದುರೆ ಸವಾರಿಗೆ ತಯಾರಾದ ಖೇಮು. ರೇಸ್‌ಕೋರ್ಸ್ ಜಾಕಿಗಳಂತೆ ಜರ್ಕಿನ್, ಶೂ ಹಾಕಿಕೊಂಡು ಅಂತೂ ಇಂತೂ ಕಷ್ಟಪಟ್ಟು ಕುದುರೆ ಏರಿ ಲಗಾಮು ಹಿಡಿದ. ಕುದುರೆ ಓಡತೊಡಗಿತು. ಖೇಮು ಹಾರ್ಸ್ ರೈಡಿಂಗ್‌ನ ಖುಷಿಯನ್ನು ಎಂಜಾಯ್ ಮಾಡತೊಡಗಿದ. ಆದರೆ ಸ್ವಲ್ಪ ಹೊತ್ತಿನಲ್ಲೇ ಖೇಮುಗೆ ಕುದುರೆ ತನ್ನ ಹತೋಟಿ ತಪ್ಪುತ್ತಿದೆ ಎನಿಸಿತೊಡಗಿತು. ಆದರೂ ಗಟ್ಟಿ ಹಿಡಿದುಕೊಂಡ. ಕೊಂಚ ಅತ್ತಿತ್ತ ವಾಲಿದ, ಸಾವರಿಸಿಕೊಂಡ. ಆದರೆ ಮತ್ತೆ ಬ್ಯಾಲೆನ್ಸ್ ತಪ್ಪತೊಡಗಿತು. ಬೇರೆ ದಾರಿ ಕಾಣದೆ ಬಗ್ಗಿ ಮಲಗಿ ಕುದುರೆಯನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಗಾಬರಿಯಿಂದ ದೇವರನ್ನು ನೆನಪಿಸಿಕೊಳ್ಳತೊಡಗಿದ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಒಂದು ಬದಿಗೆ ಸರಕ್ಕನೆ ಜಾರಿದ ಖೇಮು ಇನ್ನೇನು ನೆಲಕ್ಕೆ ಬೀಳಬೇಕು ಎನ್ನುವಷ್ಟರಲ್ಲಿ ಅವನ ಕಾಲು ಲಗಾಮಿಗೆ ಸಿಕ್ಕಿಹಾಕಿಕೊಂಡಿತು. ಖೇಮುವಿನ ತಲೆ ನೆಲದಿಂದ ಕೆಲವೇ ಇಂಚುಗಳಷ್ಟು ಕೆಳಗಿತ್ತು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಅವನ ತಲೆ ನೆಲಕ್ಕೆ ಬಡಿಯುತ್ತಿತ್ತು. ಈಗ ಖೇಮು ಪೂರ್ತಿ ಗಾಬರಿಯಾದ. ಸುತ್ತಮುತ್ತ ಯಾರೂ ಕಾಣಿಸುತ್ತಿರಲಿಲ್ಲವಾದರೂ 'ಕಾಪಾಡಿ, ಕಾಪಾಡಿ' ಎಂದು ಕೂಗಿಕೊಳ್ಳತೊಡಗಿದ. ಸ್ವಲ್ಪ ಹೊತ್ತಿನ ನಂತರ ಆ ಸೂಪರ್ ಮಾರ್ಕೆಟ್‌ನ ಹುಡುಗಿ ಬಂದು ಸಿಕ್ಕಿಹಾಕಿಕೊಂಡಿದ್ದ ಖೇಮು ಕಾಲನ್ನು ಬಿಡಿಸಿ ಅವನನ್ನು ಹುಷಾರಾಗಿ ಕುದುರೆಯಿಂದ ಕೆಳಗಿಳಿಸಿದಳು.
ಸ್ಕ್ಯಾಂಡಲ್‌ವುಡ್
ಇತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಗಳಿಸುತ್ತಿರುವ ಕನ್ನಡ ಚಿತ್ರ(?)ವೊಂದರ ನಿರ್ದೇಶಕರು ಒಂದು ವೆಬ್‌ಸೈಟ್‌ಗೆ ಫೋನ್ ಮಾಡಿದರು. ಅದು ಸ್ಯಾಂಡಲ್‌ವುಡ್ ಚಿತ್ರಗಳ ಸಿನಿಲೋಕವನ್ನು ತೋರಿಸುವ ಸಿನಿಮಾ ವೆಬ್‌ಸೈಟ್. ಪೋನ್ ಮಾಡಿದ ನಿರ್ದೇಶಕರು ಹೇಳಿದರು 'ನಿಮ್ಮ ವೆಬ್‌ಸೈಟ್‌ನಲ್ಲಿರುವ ನನ್ನ ಚಿತ್ರದ ವಿಮರ್ಶೆಯನ್ನು ಈಗಿಂದೀಗಲೇ ತೆಗೆದು ಹಾಕು'. 'ಯಾಕೆ ಸರ್?'. 'ಅವೆಲ್ಲ ಗೊತ್ತಿಲ್ಲ ವಿಮರ್ಶೆ ತೆಗಿ'. 'ಅಯ್ಯೋ, ನಿಮ್ಮ ಚಿತ್ರ ಚೆನ್ನಾಗಿದೆ ಅಂತನೇ ಬರೆದಿದ್ದೀನಲ್ಲ ಸರ್'. 'ಇರಬಹುದು ಆದರೆ ನೀನು ಬ ರೆದಿರುವ ವಿಮರ್ಶೆ ಚೆನ್ನಾಗಿಲ್ಲ. ಮಾತು ಬೇಡ ಸುಮ್ಮನೇ ಅದನ್ನು ಅಲ್ಲಿಂದ ತೆಗಿ'. ಹೇಳಿಕೇಳಿ ಹೊಸದಾಗಿ ಆರಂಭವಾಗಿದ್ದ ವೆಬ್‌ಸೈಟ್ ಅದು, ಇವರ ಜೊತೆ ಯಾಕೆ ಕಿರಿಕ್ಕು ಎಂದುಕೊಂಡು ಕೊನೆಗೂ ಆ ವಿಮರ್ಶೆ ವೆಬ್‌ಸೈಟ್‌ನಿಂದ ಎತ್ತಂಗಡಿಯಾಯ್ತು. ಇಲ್ಲಿ ಸಿನಿಮಾ ಯಾವುದು, ವೆಬ್‌ಸೈಟ್ ಯಾವುದು ಎಂಬುದು ಮುಖ್ಯ ಅಲ್ಲ. ಆದರೆ ನನ್ನ ಚಿತ್ರ ಹೀಗೇ ಇರಬೇಕು ಎನ್ನುವ ನಿರ್ದೇಶಕರ ನಡುವೆ ನನ್ನ ಚಿತ್ರದ ವಿಮರ್ಶೆ ಕೂಡ ಹೀಗೇ ಇರಬೇಕು ಎನ್ನುವ ನಿರ್ದೇಶಕರ 'ಕನಸು, ಹಂಬಲ, ಮಹತ್ವಾಕಾಂಕ್ಷೆ' ಮತ್ತು ಅವರು ಹೇಳಿದ ಮಾತ್ರಕ್ಕೆ ತನ್ನ ವಿಮರ್ಶೆಯನ್ನು ಅಲ್ಲಿಂದ ತೆಗೆದು ಹಾಕಿದ ಆ ವೆಬ್‌ಸೈಟ್‌ನ ಧೋರಣೆ ಮತ್ತು ಅನಿವಾರ್ಯತೆಗಳು ಮಾತ್ರ ಸ್ಯಾಂಡಲ್‌ವುಡ್ ಸಿನಿಮ್ಯಾಜಿಕ್‌ಗೆ ಸಾಕ್ಷಿ.
ಡಬ್ಕುಡಬಲ್ ತುದಾಂಡಲ್...
ಕುಡುಕನ ಮಾತು: ರುಪಾಯಿ ತುಂಬಾ ವೀಕ್ ಅಂತ ಸಾಬೀತಾಯ್ತು, 60ಕ್ಕೇ ಬೀಳ್ತಾ ಇದೆ. ನಾವು 90-180ಲೂ ಸ್ಟೆಡೀಯಾಗಿ ಇರ್ತೀವಪ್ಪ.
ಹುಡುಗರ ಗೋಳು: ರುಪಾಯಿ ಬೀಳ್ತಾ ಇದೆ ಅನ್ನೋದಕ್ಕೆ ಸಾಕ್ಷಿ- ಎಷ್ಟು ಖರ್ಚು ಮಾಡಿದ್ರೂ ಯಾವ್ ಹುಡುಗೀನೂ ಬೀಳ್ತಾನೇ ಇಲ್ಲ.
ಟ ಅಡ್ಡರಸ್ತೆಯಲ್ಲಿ ನಿಂತು ಮಾತನಾಡುವ ಹುಡುಗ, ಹುಡುಗಿಗೆ ಕೇಳುವ ಪ್ರಶ್ನೆ
'ಕ್ರಾಸ್' ಕ್ವೆಶ್ಚನ್
- ಎಷ್ಟು ಕಾಸ್ಟ್‌ಲೀ ಪರ್ಸ್ ತಗೊಂಡೆ ಅಂದ್ರೆ, ಆಮೇಲೆ ಆ ಪರ್ಸ್‌ನಲ್ಲಿಡೋಕೆ ದುಡ್ಡೇ ಉಳೀಲಿಲ್ಲ.
-ಒಂದು ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಮೂರ್ನಾಲ್ಕು ದೆವ್ವಗಳಿದ್ದರೆ
ಮಲ್ಟಿಹಾರರ್ ಸಿನಿಮಾ
- ಪ್ರೀತಿಸಿ ಮದುವೆ ಆಗಬೇಕಾ, ಮದುವೆ ಆಗಿ ಪ್ರೀತಿಸಬೇಕಾ?
ಮದುವೆ ಆದಮೇಲೆ ಪ್ರೀತಿಸಬೇಕು. ಆದ್ರೆ ಅದು ಹೆಂಡ್ತಿಗೆ ಗೊತ್ತಾಗ್‌ಬಾರ್ದು.
ಒಂದೇ ಜೋಕಿನ ಎರಡು ಮುಖಗಳು
1. ಒನ್‌ವೇಯಲ್ಲಿ ಹೋಗ್ತಾ ಇದ್ದ ಖೇಮುವನ್ನು ತಡೆದ ಟ್ರಾಫಿಕ್ ಪೊಲೀಸ್ ಕೇಳಿದ 'ನೀನೊಬ್ನೇ ಈ ಕಡೆಯಿಂದ ಹೋಗ್ತಾ ಇದೀಯಾ, ಎಲ್ಲರೂ ಆ ಕಡೆಯಿಂದ ಬರ್ತಾ ಇದಾರೆ ಕಾಣಿಸ್ತಾ ಇದೀಯಾ?'. ಖೇಮು ಹೇಳ್ದ 'ಹೌದು, ನನ್ ಫ್ರೆಂಡ್ ಮದ್ವೆಗೆ ಹೋಗ್ತಾ ಇದ್ದೆ. ಲೇಟ್ ಆಗ್‌ಬಿಡ್ತು. ಮುಹೂರ್ತ ಮುಗಿದೋಯ್ತು ಅನ್ಸತ್ತೆ, ಎಲ್ಲರೂ ಆಗ್ಲೆ ವಾಪಸ್ ಬರ್ತಿದಾರೆ'.
2. ಕಾರಲ್ಲಿ ಎಂ.ಜಿ. ರೋಡ್‌ಗೆ ಹೋಗಿದ್ದ ಹೆಂಡ್ತಿಗೆ ಗಂಡ ಫೋನ್ ಮಾಡಿ ಹೇಳ್ದ, 'ಈಗ ತಾನೇ ಎಫ್‌ಎಮ್ ರೇಡಿಯೋದಲ್ಲಿ ನ್ಯೂಸ್ ಬಂತು, ಎಂಜಿ. ರೋಡ್‌ನಲ್ಲಿ ಯಾರೋ ಒಬ್ರು ರ್ಯಾಷ್ ಡ್ರೈವಿಂಗ್ ಮಾಡ್ತಾ ಒನ್‌ವೇನಲ್ಲಿ ಕಾರ್ ಓಡಿಸ್ತಿದಾರಂತೆ ಹುಷಾರು'. ಹೆಂಡ್ತಿ ಅಂದ್ಳು 'ಯಾರೋ ಒಬ್ರು ಏನು, ಬಡ್ಡೀಮಕ್ಳು ಎಲ್ಲರೂ ಒನ್‌ವೇಲೇ ಬರ್ತಾ ಇದಾರೆ'.
ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

