ನಗರ್ತ ಸಮುದಾಯದ ಕುಲಕಸುಬಿಗೆ ಆಧುನೀಕರಣದ ಪೆಟ್ಟು
ಕೆಂಪೇಗೌಡರು ಬೆಂಗಳೂರು ನಗರ ಕಟ್ಟಿದಾಗ ಒಂದೊಂದು ಸಮುದಾಯಕ್ಕೆ ಒಂದೊಂದು...
ಕೆಂಪೇಗೌಡರು ಬೆಂಗಳೂರು ನಗರ ಕಟ್ಟಿದಾಗ ಒಂದೊಂದು ಸಮುದಾಯಕ್ಕೆ ಒಂದೊಂದು ಪ್ರದೇಶವನ್ನು ಅವರ ಕುಲ ಕಸುಬಿಗೆ ಅನುಗುಣವಾಗಿ ನಿಗದಿ ಮಾಡಿದ್ದರಂತೆ. ಉದಾಹರಣೆಗೆ ಕುಂಬಾರರಿಗೆ ಕುಂಬಾರ ಪೇಟೆ, ಉಪ್ಪಾರರಿಗೆ ಉಪ್ಪಾರ ಪೇಟೆ, ತಿಗಳ ಸಮುದಾಯದವರು ಹೆಚ್ಚಾಗಿರುವ ಕಡೆ ತಿಗಳರ ಪೇಟೆ. ಹೀಗೆ ಹಲವಾರು ಇವೆ. ಈಗಲೂ ಈ ಎಲ್ಲ ಹೆಸರಿನ ಪ್ರದೇಶಗಳನ್ನು ಬೆಂಗಳೂರಿನಲ್ಲಿ ಕಾಣಬಹುದು. ಅದರಲ್ಲಿ ಪ್ರತಿಷ್ಠಿತ ನಗರ್ತ ಪೇಟೆಯೂ ಒಂದು.
ನಗರ್ತ ಪೇಟೆ ಎಂದರೆ ವ್ಯಾಪಾರ ಮತ್ತು ವಹಿವಾಟಿಗೆ ಪ್ರಸಿದ್ಧಿ. ದಿನ ಬಳಕೆಯ ವಸ್ತುಗಳಿಂದ ಹಿಡಿದು ಎಲ್ಲವೂ ಅಲ್ಲಿ ಲಭ್ಯ. ಇದು ವ್ಯಾಪಾರಿಗಳ ಮೆಚ್ಚಿನ ತಾಣವೂ ಹೌದು. ಕೆಂಪೇಗೌಡರ ಕಾಲದಲ್ಲಿ ಈ ಪ್ರದೇಶ ನಗರ್ತ ಸಮುದಾಯಕ್ಕೆ ಮೀಸಲಾಗಿತ್ತು.
ನಗರ್ತರು ಎಂದರೆ ವ್ಯಾಪಾರಿಗಳು. ಅದು ಅವರ ಕುಲ ಕಸುಬು. ಈ ಹಿಂದೆ ಅವರು ಹಳ್ಳಿ ಹಳ್ಳಿಗೆ ಹೋಗಿ ರೈತರಿಂದ ಧವಸ-ಧಾನ್ಯ ಖರೀದಿ ಮಾಡಿ ತಂದು ಅದನ್ನು ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಬಂದ ಲಾಭದ ಹಣದಲ್ಲಿ ಜೀವನ ಸಾಗಿಸುವುದು ನಗರ್ತರ ಪದ್ಧತಿಯಾಗಿತ್ತು.
ಈಗ ಅವಕಾಶವೇ ಇಲ್ಲ: ಋಷಿ ಮುನಿಗಳ ಮಂತ್ರಶಕ್ತಿಯಿಂದ ಜನಿಸಿದ ಸಾವಿರ ಪುತ್ರರು ಸಪ್ತಮುಕ್ತಿ ಪಟ್ಟಣಗಳನ್ನು ನಿರ್ಮಿಸಿ ಅದನ್ನು ಆಳ್ವಿಕೆ ಮಾಡುತ್ತಿದ್ದರಂತೆ. ನಗರ (ಪಟ್ಟಣ) ತರು (ಕಾಮಧೇನು) ಅಂದರೆ ಕೇಳಿದ್ದನ್ನು ಕೊಡುವುದು, ಇದರಿಂದ ನಗರ್ತ ಎಂಬ ಹೆಸರು ಬಂತು ಎಂಬ ಉಲ್ಲೇಖ ಗ್ರಂಥಗಳಲ್ಲಿದೆ.
ಆಧುನಿಕತೆ ಬೆಳೆದಂತೆ ನಗರ್ತರ ಕುಲ ಕಸುಬು ಸಹ ಕಣ್ಣರೆಯಾಗಿದೆ. ಏಕೆಂದರೆ, ರೈತರೇ ಈಗ ನೇರವಾಗಿ ಮಾರುಟ್ಟೆಗೆ ಬಂದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಹೀಗಾಗಿ ನಗರ್ತರಿಗೆ ಅವಕಾಶವೇ ಇಲ್ಲ. ಶಕ್ತಿ ಇದ್ದವರು ಅಂಗಡಿ ಮುಗ್ಗಟ್ಟು ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಉಳಿದವರು ಜೀವನೋಪಾಯಕ್ಕೆ ಬೇರೆ ಬೇರೆ ಮಾರ್ಗ ಕಂಡುಕೊಂಡಿದ್ದಾರೆ.
ಕುಲ ಕಸುಬು ಕಣ್ಮರೆಯಾಗುತ್ತಿದ್ದರೂ ರಾಜರ ಆಳ್ವಿಕೆಯಲ್ಲಿ ಅನಾವರಣಗೊಂಡ ಬೆಂಗಳೂರಿನ ನಗರ್ತ ಪೇಟೆ ಇಂದಿಗೂ ತನ್ನ ಹೆಸರು ಉಳಿಸಿಕೊಂಡಿದೆ. ಈ ಮೂಲಕ ನಗರ್ತರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ ಎಂಬುದು ಸುಳ್ಳಲ್ಲ ಎನ್ನುತ್ತಾರೆ ನಗರ್ತ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ಮಾಲೂರು ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ ಬಾಬು.
ಬ್ರಹ್ಮನ ತೊಡೆಯಿಂದ ಜನಿಸಿದರು: ನಗರ್ತರು ಬ್ರಹ್ಮದೇವನ ತೊಡೆಯಿಂದ ಉದ್ಭವಿಸಿದರು ಎನ್ನುತ್ತದೆ ಪುರಾಣ ಕಥೆ. ವಲ್ಕನೆಂಬ ಋಷಿ ತನ್ನ ತಪಸ್ಸಿನ ಪ್ರಭಾವದಿಂದ ಮಹಾಯಜ್ಞ ಮಾಡಿ ಸಾವಿರ ಪುರುಷರ ಬಿಂಬಗಳನ್ನು ಧರ್ಬೆಯಿಂದ ನಿರ್ಮಿಸಿ ಮಂತ್ರಶಕ್ತಿಯಿಂದ ಅವುಗಳಿಗೆ ಜೀವದಾನ ಮಾಡಿದನಂತೆ. ಹೀಗೆ ಜನಿಸಿದ ಪುರುಷರು ನಗರ್ತ ವಶಂಸ್ಥರಾಗಿ ಸಹಸ್ರ ಮಹರ್ಷಿ ಗೋತ್ರದವರಾದರೆಂದು ಪುರಾಣ ಗ್ರಂಥವಾದ ಮಹರ್ಷಿ ಗರ್ಗ ಸಾಂದೀಪ ಕುಲ ಗುರುಗಳು ರಚಿಸಿರುವ ವೈಶ್ಯ ಕುಲದರ್ಪಣ ಗ್ರಂಥದಲ್ಲಿ ವಿವರಿಸಲಾಗಿದೆ.
ಇನ್ನೂ ಹಿಂದಕ್ಕೆ ಹೋಗುವುದಾದರೆ ನಗರ್ತರು ಆಯೋಧ್ಯಾ ನಗರದ ನಿವಾಸಿಗಳಾಗಿದ್ದರು. ಬಳಿಕ ದಕ್ಷಿಣ ಭಾರತದ ಕಡೆ ವ್ಯಾಪಾರ ವಹಿವಾಟಿಗಾಗಿ ವಲಸೆ ಬಂದರು ಎಂದು ಹೇಳಲಾಗುತ್ತದೆ. ಈ ಜನಾಂಗದವರ ಕುಲ ದೇವರು ನಗರೇಶ್ವರ ಸ್ವಾಮಿ. ಇವರು ಶೈವ ಮತ್ತು ವೈಷ್ಣವ ಸಂಪ್ರದಾಯ ಅನುಸರಿಸುವವರು ಎಂದು ಅಶೋಕ್ ಬಾಬು ಹೇಳುತ್ತಾರೆ.
ಎಲ್ಲ ವಿಧದ ಸಂಪ್ರದಾಯಸ್ಥರು: ಬ್ರಾಹ್ಮಣ ಸಮುದಾಯದಲ್ಲಿರುವಂತೆ ನಗರ್ತರು ಎಲ್ಲ ವಿಧವಾದ ಸಂಪ್ರದಾಯಸ್ಥರಾಗಿದ್ದು, ಋಗ್ವೇದದ ಪ್ರಕಾರ ಪವಿತ್ರವಾದ ಯಜ್ಞೋಪವೀತವನ್ನು ಸಕಲ ಶಾಸ್ತ್ರೋಕ್ತವಾಗಿ ಧಾರಣೆ ಮಾಡಿ ಪ್ರತಿದಿನ ಪ್ರಾತ: ಕಾಲದಲ್ಲಿ ಗಾಯತ್ರಿ ಮಂತ್ರವನ್ನು ಪಠಣ ಮಾಡುತ್ತಾರೆ. ನಗರ್ತರು ಈ ಆಚರಣೆ ಪಾಲಿಸಬೇಕು ಎಂದು ಗ್ರಂಥದಲ್ಲೂ ಹೇಳಲಾಗಿದೆ. ಆದರೆ, ಇದು ಸಂದರ್ಭ ಮತ್ತು ವ್ಯಕ್ತಿಯ ಇಚ್ಛೆಯನ್ನು ಅವಲಂಬಿಸಿರುತ್ತದೆ ಎನ್ನುವುದು ಅಶೋಕ್ ಬಾಬು ಅವರ ಅಭಿಪ್ರಾಯ.
ನಗರ್ತರು ಪ್ರತಿ ಅಮಾವಾಸ್ಯೆಯ ದಿನದಂದು ಸ್ವರ್ಗಸ್ಥರಾದ ತಮ್ಮ ಪಿತೃಗಳಿಗೆ ಪಿತೃ ತರ್ಪಣ ಅರ್ಪಿಸುತ್ತಾರೆ. ವಾರ್ಷಿಕವಾಗಿಯೂ ಇದು ಆಚರಣೆಯಲ್ಲಿದೆ. ಅಂದು ಬ್ರಾಹ್ಮಣರಿಗೆ ಧನ-ಧಾನ್ಯವನ್ನು ದಾನವಾಗಿ ಕೊಟ್ಟು ಕರ್ಮವನ್ನು ತ್ಯಜಿಸುತ್ತಾರೆ. ಆದರೆ, ನಗರೀಕರಣದ ನಂತರ ಸಂಪ್ರದಾಯಗಳು ಕೊಂಚ ಕಡಿಮೆ ಆಗುತ್ತಿದ್ದರೂ ಹಿರಿಯೂರು ಮಾತ್ರ ಚಾಚೂತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ.
ನಗರ್ತರು ರಾಜ್ಯದಲ್ಲಿ 2-3 ಲಕ್ಷದಷ್ಟಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರು ಮತ್ತು ಬೆಂಗಳೂರು ಜಿಲ್ಲೆಯಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೈಸೂರು ಮತ್ತಿತರ ಕಡೆಗಳಲ್ಲೂ ಸಮುದಾಯದ ಕುಟುಂಬಗಳಿವೆ. ಆರ್ಥಿಕ, ಸಾಮಾಜಿಕ, ಮತ್ತು ಶೈಕ್ಷಣಿಕವಾಗಿ ಇವರು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಈ ಹಿಂದೆಯಂತೂ ವ್ಯಾಪಾರ ವಹಿವಾಟು ಬೆಳೆಸುವತ್ತ ಗಮನ ಕೊಟ್ಟರೇ ಹೊರತು ಈ ವಲಯಗಳಲ್ಲಿ ಮುಂಚೂಣಿಗೆ ಬಂದು ನಿಲ್ಲುವ ಪ್ರಯತ್ನ ಮಾತ್ರ ಮಾಡಲಿಲ್ಲ. ಆದರೆ, ಶೈಕ್ಷಣಿಕವಾಗಿ ಈಗ ಸ್ವಲ್ಪ ಸ್ವಲ್ಪವೇ ಮುಂದೆ ಬರುತ್ತಿದ್ದಾರೆ. ಹೀಗಾಗಿಯೇ ಉನ್ನತ ಶಿಕ್ಷಣದ ಕಡೆ ಹೋದವರ ಸಂಖ್ಯೆ ತೀರಾ ಕಡಿಮೆ. ಇನ್ನು ಸರ್ಕಾರಿ ಸೇವೆಯಲ್ಲಿರುವವರ ಪ್ರಮಾಣ ಶೇ.2. ಏಕೆಂದರೆ, ವ್ಯಾಪಾರ ಬಿಟ್ಟು ಹೊರ ಬರುವ ಮನಸ್ಸು ಮಾಡಲೇ ಇಲ್ಲ.
ಎಸ್ಸೆಸ್ಸೆಲ್ಸಿವರೆಗೆ ಓದು: ಈ ಸಮುದಾಯದಲ್ಲಿ ಬಹುತೇಕ ಮಂದಿ ಎಸ್ಸೆಸ್ಸೆಲ್ಸಿ ವರೆಗೆ ಓದಿ ಮುಂದೆ ವಿದ್ಯಾಭ್ಯಾಸ ಕೈ ಬಿಟ್ಟಿದ್ದಾರೆ. ಇದಕ್ಕೆ ಆರ್ಥಿಕ ಸಂಕಷ್ಟವೂ ಒಂದು ಕಾರಣ ಎಂದರೆ ತಪ್ಪಾಗಲಾರದು. ಸಂಘಟನೆ ವಿಚಾರದಲ್ಲಿಯೂ ಈ ಸಮುದಾಯ ಹಿಂದೆ ಬಿದ್ದಿದೆ. ಬೇರೆ ಜನಾಂಗಗಳಂತೆ ಪರಿಣಾಮಕಾರಿ ಸಂಘಟನೆ ಇವರಲ್ಲಿ ಆಗುತ್ತಿಲ್ಲ. ಇದಕ್ಕೆ ಅರಿವಿನ ಕೊರತೆಯೂ ಕಾರಣವಿರಬಹುದು. ಇನ್ನು ಸರ್ಕಾರದಿಂದಲೂ ನಗರ್ತರಿಗೆ ಸಹಾಯ, ಸವಲತ್ತು ಸಿಗುತ್ತಿಲ್ಲ. ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿಲ್ಲ. ನಗರ್ತ ಸಮುದಾಯವನ್ನು ಅನುಸೂಚಿತ ಜಾತಿ ಮತ್ತು ಪಂಗಡಗಳ ಪಟ್ಟಿಯಲ್ಲಿ ಸೇರಿಸಿಲ್ಲ. ಪ್ರಸ್ತುತ ಇವರು ಸಾಮಾನ್ಯ ವರ್ಗದಲ್ಲೇ ಇದ್ದಾರೆ. ಮೀಸಲು ಸೌಲಭ್ಯ ಸಿಗದಿರುವುದೂ ಎಲ್ಲ ರಂಗಗಳಲ್ಲಿ ಹಿಂದುಳಿಯಲು ಕಾರಣ ಎಂಬುದು ಸಮುದಾಯದ ಮುಖಂಡರ ಅಭಿಪ್ರಾಯವಾಗಿದೆ.
ಅದರೆ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ನಗರ್ತರನ್ನು ಹಿಂದುಳಿದ ವರ್ಗದ ಪಟ್ಟಿಯಲ್ಲಿ 2 ಎ ವರ್ಗಕ್ಕೆ ಸೇರಿಸಿ ಹಲವಾರು ಸೌಕರ್ಯಗಳನ್ನು ಒದಗಿಸಲಾಗಿದೆ. ಅಲ್ಲಿ ಮೀಸಲು ಸೌಲಭ್ಯವೂ ಉಂಟು. ಆದರೆ, ಇಲ್ಲೇಕೆ ನಮ್ಮನ್ನು ಸಾಮಾನ್ಯ ವರ್ಗಕ್ಕೆ ಮೀಸಲು ಇರಿಸಲಾಗಿದೆ ಎಂಬುದು ಮುಖಂಡರ ಪ್ರಶ್ನೆ. ಇನ್ನು ಸಮುದಾಯದ ರಾಜ್ಯ ಸಂಘ ಕೂಡ ಈ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ. ವಿದ್ಯಾಭ್ಯಾಸ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಥವಾ ಇಥರೆ ಕಾರಣಗಳಿಗೆ ತಾಲೂಕು ಕಚೇರಿಗೆ ಹೋದರೆ ಅಲ್ಲಿ ಜಾತಿ ಪ್ರಮಾಣ ಪತ್ರವೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಾತಿ ಪಟ್ಟಿಯಲ್ಲೇ ಇಲ್ಲವಂತೆ: ಅಧಿಕಾರಿಗಳನ್ನು ಕೇಳಿದರೆ ನಿಮ್ಮ ಸಮುದಾಯದ ಹೆಸರು ಜಾತಿ ಪಟ್ಟಿಯಲ್ಲೇ ಇಲ್ಲ ಎಂಬ ಉತ್ತರ ಬರುತ್ತದೆ. ಇನ್ನಾದರೂ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗ ನಗರ್ತ ಸಮುದಾಯದ ಕಡೆಗೆ ಕಣ್ಣೆತ್ತಿ ನೋಡಬೇಕು. ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಿ ಮೀಸಲು ಸೌಲಭ್ಯ ಒದಗಿಸಬೇಕು. ಅಂತೆಯೇ ರಾಜಕೀಯ ಪ್ರಾತಿನಿಧ್ಯವೂ ಸಿಗಬೇಕು. ಆಗ ಮಾತ್ರ ಸಮುದಾಯ ತಕ್ಕಮಟ್ಟಿಗೆ ಉಸಿರಾಡಲು ಮತ್ತು ಎಲ್ಲ ವಲಯಗಳಲ್ಲಿ ಹೆಸರು ಮಾಡಲು ಸಾಧ್ಯ. ಇಲ್ಲದಿದ್ದರೆ ಸಂಕಷ್ಟದಲ್ಲೇ ಜೀವನ ನಡೆಸಬೇಕಾಗುತ್ತದೆ. ಏಕೆಂದರೆ ಅಲ್ಲೊಬ್ಬರು ಇಲ್ಲೊಬ್ಬರು ಗ್ರಾಮ ಪಂಚಾಯಿತಿ ಸದಸ್ಯರಾಗಿರುವುದನ್ನು ಹೊರತುಪಡಿಸಿದರೆ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ರಾಜಕೀಯದಲ್ಲಿ ಕಾಣಿಸಿಕೊಂಡು ಶಾಸಕರು, ಮಂತ್ರಿಗಳಾದವರು ಇಲ್ಲವೇ ಇಲ್ಲ ಎಂದು ನೊಂದು ನುಡಿಯುತ್ತಾರೆ ಅಶೋಕ್ ಬಾಬು.
- ಕೆ.ವಿ.ಪ್ರಭಾಕರ
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

