ಅಂಕಣಗಳು

ಚಂದ್ರಯಾನ ಮಾಡಬೇಕೇ? ಹಾಗಿದ್ದರೆ ಒಮ್ಮೆ ಬೆಂಗಳೂರಿಗೆ ಬನ್ನಿ!

Published On :

ಯಾವುದೇ ಸರ್ಕಾರ ಬರಲಿ ಮತ್ತು ಯಾವುದೇ ಸರ್ಕಾರ ಹೋಗಲಿ, ಬೆಂಗಳೂರಿನ ರಸ್ತೆಗಳು ಮಾತ್ರ ಅದೇ ಕಳಪೆ ಸ್ಥಿತಿಯಲ್ಲಿಯೇ ಇರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಬೆಂಗಳೂರಿನ ರಸ್ತೆಗಳು ಚಂದ್ರನ ಮೇಲ್ಮೈಯಂತೆ ಕಾಣುತ್ತಿವೆ. ಎಲ್ಲೆಲ್ಲೂ ಗುಂಡಿಗಳು. ಅದರಲ್ಲೂ ಈಗ ಸುರಿಯುತ್ತಿರುವ ಧಾರಾಕಾರ ಮಳೆ, ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಈ ಗುಂಡಿಗಳನ್ನು ಕಡೆಗಣಿಸುವುದು ಬರೀ ಮೂರ್ಖತನವಷ್ಟೇ ಅಲ್ಲ, ಬೆನ್ನೆಲುಬು ಮುರಿದುಕೊಳ್ಳುವ ಕೆಲಸವೂ ಆಗುತ್ತದೆ! ಒಂದು ವೇಳೆ ನೀವು ಮತ್ತು ನಿಮ್ಮ ವಾಹನ ಸುರಕ್ಷಿತವಾಗಿ ಮನೆಗೆ ತಲುಪಿದರೆ, ನಿಮ್ಮ  ಗ್ರಹಚಾರ ನೆಟ್ಟಗಿದೆ ಎಂದೇ ಅರ್ಥ.
ಹಾಗಿದ್ದರೆ ಅಧಿಕಾರಿಗಳು ಏನು ಮಾಡುತ್ತಿರಬಹುದೋ ಊಹಿಸಿ? ಮಳೆ ಯಾವಾಗ ನಿಲ್ಲುವುದೋ ಎಂದು ಕಾದು ಕುಳಿತಿದ್ದಾರೆ. ಮಳೆ ನಿಂತ ಮೇಲೆ ಅವರೇನು ಮಾಡುತ್ತಾರೆ? ಆ ಗುಂಡಿಗಳನ್ನು ಮುಚ್ಚಲು ಕೆಲವು ವಂಚಕ ಕಾಂಟ್ರಾಕ್ಟರ್‌ಗಳನ್ನು ಕಳುಹಿಸುತ್ತಾರೆ. ಆ ಕಾಂಟ್ರಾಕ್ಟರ್‌ಗಳು ಮಾಡುವುದೇನು? ಅವುಗಳಲ್ಲಿ ಸ್ವಲ್ಪ ಜಲ್ಲಿಕಲ್ಲು, ಸ್ವಲ್ಪ ಮಣ್ಣು, ಅದರ ಮೇಲೆ ತುಸು ಟಾರ್‌ನ ತೇಪೆ ಹಾಕಿ ಬೃಹತ್ ಮೊತ್ತದ ಬಿಲ್‌ಗಳನ್ನು ಬಿಬಿಎಂಪಿಗೆ ಕಳುಹಿಸುತ್ತಾರೆ.  ಬಿಬಿಎಂಪಿ ಮಾಡುವುದೇನು? ಕಣ್ಣು ಮುಚ್ಚಿಕೊಂಡು ಬಿಲ್ ಪಾವತಿ ಮಾಡುತ್ತದೆ!
ಮತ್ತೊಂದು ಜೋರು ಮಳೆಯಾಯಿತೆಂದರೆ ಈ ಗುಂಡಿಗಳೆಲ್ಲ ಮತ್ತೆ ಬಾಯಿ ಬಿಡುತ್ತವೆ. ಆಗ ಮತ್ತೆ ಬಿಬಿಎಂಪಿ
ಅದೇ ಮಾರ್ಗವನ್ನೇ ಅನುಸರಿಸುತ್ತದೆ. ಫಲಿತಾಂಶ: ಕಳಪೆ ರಸ್ತೆಗಳು, ಭ್ರಷ್ಟ ಅಧಿಕಾರಿಗಳು ಮತ್ತು ಕಾಂಟ್ರಾಕ್ಟರ್‌ಗಳಿಂದ ಜನರ ತೆರಿಗೆ ಹಣದ ಲೂಟಿ! ಸರ್ಕಾರ ಮತ್ತು ನಗರದ ಚುನಾಯಿತ ಪ್ರತಿನಿಧಿಗಳು ತಮ್ಮ ಗಮನಕ್ಕೆ ಇದೆಲ್ಲಾ ಬಂದೇ ಇಲ್ಲ ಎನ್ನುವ ರೀತಿ ಬೇರೆ ಕಡೆ ಮುಖ ಮಾಡಿ ಕುಳಿತಿದ್ದಾರೆ. ಪರಿಣತರು ನೀಡುವ ಉಪಯುಕ್ತ ಸಲಹೆಗಳನ್ನು ಕಸದಬುಟ್ಟಿಗೆಸೆಯಲಾಗುತ್ತದೆ. ಪ್ರತಿ ವರ್ಷವೂ, ಪ್ರತೀ ಮಳೆಗಾಲವೂ, ಪ್ರತಿ ಸರ್ಕಾರದಡಿಯಲ್ಲೂ ಐಟಿಯ ಜನರು ಈ ಕೆಟ್ಟ ಪ್ರಹಸನವನ್ನು ನೋಡುತ್ತಲೇ ಬಂದಿದ್ದಾರೆ.
ಇದೇ ಕಾರಣಕ್ಕಾಗಿ ಹಲವಾರು ಪ್ರಶ್ನೆಗಳನ್ನು ಕೇಳಲಾಗುತ್ತಿದೆ:
-    ಕನಿಷ್ಠ 5 ವರ್ಷಗಳವರೆಗಾದರೂ ಉಳಿಯಬಲ್ಲ ರಸ್ತೆಗಳನ್ನು ನಿರ್ಮಿಸುವುದು ಸಾಧ್ಯವಿಲ್ಲವೇ? ರಸ್ತೆಗಳ ನಿರ್ಮಾಣವಷ್ಟೇ ಅಲ್ಲ, ಅದರ ಗುಣಮಟ್ಟವನ್ನು ನಿಗದಿತ ಅವಧಿಯವರೆಗೆ ಕಾಂಟ್ರಾಕ್ಟರ್‌ಗಳು ಕಾಯ್ದುಕೊಳ್ಳಬೇಕು ಎಂಬುದಕ್ಕೆ ನಿಯಮವನ್ನು ಜಾರಿಗೆ ತರವುದು ಸಾಧ್ಯವಿಲ್ಲವೇ?
-   ನಿರ್ಮಾಣವಾಗುವ ರಸ್ತೆಗಳ ಗುಣಮಟ್ಟ ಪರೀಕ್ಷೆಯನ್ನು ಬಿಬಿಎಂಪಿಯ ಅಧಿಕಾರಿಗಳಾದರೂ ಮಾಡುತ್ತಾರೆಯೇ? ಕಾಂಟ್ರಾಕ್ಟರ್‌ಗಳಿಗೆ ಸರಿಯಾದ ತಾಂತ್ರಿಕ ಜ್ಞಾನ ಇರುತ್ತದೆಯೇ? ಒಂದು ವೇಳೆ ಇಲ್ಲದಿದ್ದರೆ ಅವರನ್ನು ಬ್ಲ್ಯಾಕ್‌ಲಿಸ್ಟ್‌ನಲ್ಲಿಡಬೇಕಲ್ಲವೇ?
-   ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಪಾರದರ್ಶಕತೆಯಿಲ್ಲದಿರುವುದರಿಂದಲೇ ದೊಡ್ಡ ಕಂಪನಿಗಳು ಇದರಿಂದ ದೂರ ಉಳಿಯುತ್ತಿವೆಯೇ?ಉತ್ತಮ ಪದ್ಧತಿಗಳನ್ನು ಅನುಸರಿಸಿ ಆರೋಗ್ಯಕರ ಪೈಪೋಟಿಯನ್ನೇಕೆ ನಿರ್ಮಿಸಬಾರದು?
-    ರಸ್ತೆ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ಅತ್ಯಲ್ಪ ಜ್ಞಾನ ಹೊಂದಿದ ಸಣ್ಣ ಗುತ್ತಿಗೆದಾರರಿಗೇಕೆ ಮಣೆ ಹಾಕಲಾಗುತ್ತದೆ? ಹೆಚ್ಚು ಗುತ್ತಿಗೆದಾರರಿಗೆ ಕೆಲಸ ನೀಡಿ ಅವರಿಂದ ಹಣ ಗಿಟ್ಟಿಸಿಕೊಳ್ಳುವುದು ಬಿಬಿಎಂಪಿ ಇಂಜಿನಿಯರ್‌ಗಳ ತಂತ್ರವೇ?
ಟ    ನಿರ್ಲಜ್ಜ ಗುತ್ತಿಗೆದಾರರು ಮತ್ತು ಭ್ರಷ್ಟ ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ಮುರಿಯುವುದಕ್ಕೆ ಸರ್ಕಾರಕ್ಕೆ ಯಾವ ಅಡ್ಡಿಗಳಿವೆ? ತಮ್ಮ ತಮ್ಮ ಏರಿಯಾಗಳಲ್ಲಿನ ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸುವ ಜವಾಬ್ದಾರಿಯನ್ನು ನಿವಾಸಿ ಕಲ್ಯಾಣ ಸಂಘಗಳು ಮತ್ತು ಕೆಲವು ಪರಿಣತರ ಹೆಗಲಿಗೆ ಹೊರಿಸುವುದಕ್ಕೇ ಏಕೆ ಹಿಂದೇಟು ಹಾಕಲಾಗುತ್ತಿದೆ? ನಾಗರಿಕ ಕೇಂದ್ರಿತ ಆಡಳಿತ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದೆನಿಸುತ್ತಿಲ್ಲವೇ?
ಟ    ನಗರದ 25 ಶಾಸಕರು ಮತ್ತು 198 ಕಾರ್ಪೊರೇಟರ್‌ಗಳು ಏನು ಮಾಡುತ್ತಿದ್ದಾರೆ? ನಗರದಲ್ಲಿ ಗುಣಮಟ್ಟದ ರಸ್ತೆಯಿರುವುದನ್ನು ಖಾತ್ರಿ ಮಾಡುವುದು ಅವರ ಕೆಲಸವೇ ಅಲ್ಲವೇ? ಚುನಾವಣೆಯ ಸಮಯದಲ್ಲಿ ಅವರು ಹೇಳಿದ್ದೂ ಇದನ್ನೇ
ತಾನೆ? ಅಥವಾ ಅವರೂ ಕೂಡ ನಿರ್ಲಜ್ಜ ಗುತ್ತಿಗೆದಾರರು ಮತ್ತು ಭ್ರಷ್ಟ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರಾ?
ಸಾಧನೆ ಮತ್ತು ನಿರ್ವಹಣೆ ಆಧರಿತ ವ್ಯವಸ್ಥೆ ಮತ್ತು ಅದರೊಟ್ಟಿಗೆ ಕಠಿಣ ಶಿಕ್ಷೆ ನೀಡುವ ನಿಯಮ ಬಂದರೆ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ನಿರಂತರವಾಗಿ ಗುತ್ತಿಗೆ ಪಡೆಯುವುದಕ್ಕಾಗಿ ಭ್ರಷ್ಟ ಅಧಿಕಾರಿಗಳೊಂದಿಗೆ ಕೈ ಜೋಡಿಸುವ ಗುತ್ತಿಗೆದಾರರ ಬಂಡವಾಳವೆಲ್ಲ ಬಯಲಾಗಬೇಕು. ತೆರಿಗೆದಾರರು ಕಳಪೆ ರಸ್ತೆಗಳ ವಿರುದ್ಧ ದನಿ ಎತ್ತರಿಸಬೇಕು. ಅವರೊಟ್ಟಿಗೆ ನಿವಾಸಿ ಸಂಘಗಳೂ ಒಂದಾಗಿ, ಉತ್ತಮ ರಸ್ತೆ ನಿರ್ಮಾಣಕ್ಕೆ ಪ್ರಾಮುಖ್ಯ ನೀಡಬೇಕೆಂದು ಬಿಬಿಎಂಪಿ
ಮತ್ತು ಚುನಾಯಿತ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು. ಉತ್ತಮ ರಸ್ತೆಗಳು ಉತ್ತಮ ನಗರವನ್ನು ನಿರ್ಮಿಸುತ್ತವೆ.
ಪ್ರಪಂಚದ ಯಾವುದೇ ಪ್ರಮುಖ ನಗರಗಳಿಗೆ ಹೋಗಿ ನೋಡಿ. ಅವರು ಅಲ್ಲಿನ ರಸ್ತೆಗಳ ಗುಣಮಟ್ಟಕ್ಕೆ ಎಷ್ಟು ಮಹತ್ವ ಕೊಡುತ್ತಾರೆಂಬುದು ತಿಳಿಯುತ್ತದೆ. ಈ ಕೆಲಸ ಅವರಿಂದ ಸಾಧ್ಯವಾಗುತ್ತದೆಂದರೆ, ನಮ್ಮಿಂದ ಏಕಿಲ್ಲ? ಕೊರತೆಯಿರುವುದು ನಮ್ಮ ರಾಜಕೀಯ ಇಚ್ಛಾಶಕ್ತಿಯಲ್ಲಿ.
ದುರದೃಷ್ಟವಶಾತ್, ಬೆಂಗಳೂರನ್ನು ದೂಷಿಸುವುದು ಇಂದು ರಾಜಕೀಯ ವರ್ಗದಲ್ಲೊಂದು ಫ್ಯಾಷನ್ ಆಗಿಬಿಟ್ಟಿದೆ. ಹಾಗೆ ಮಾಡಿದರೆ ರಾಜ್ಯದ ಉಳಿದ ಭಾಗಗಳಿಂದ ಮತಗಳನ್ನು ಗಿಟ್ಟಿಸಬಹುದೆಂಬ ತಪ್ಪು ಕಲ್ಪನೆ ಈ ಧೋರಣೆಯ ಹಿಂದಿದೆ. ಈ ಭ್ರಮೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೊರತಾಗಿಲ್ಲ. ಅವರ ಪ್ರಕಾರ ಬೆಂಗಳೂರು ಈ  ವೇಗದಲ್ಲಿ ಬೆಳೆಯಬಾರದಂತೆ. ರಾಜ್ಯದ ಉಳಿದ ಭಾಗಗಳಿಗಿಂತ ಬೆಂಗಳೂರಿಗೇ ಹೆಚ್ಚು ಮಹತ್ವ ಸಿಕ್ಕಿದೆ ಎಂದವರು ಭಾವಿಸುತ್ತಾರೆ. ರಾಜ್ಯದ ಆದಾಯದಲ್ಲಿ ಸುಮಾರು 50 ಪ್ರತಿಶತ ಪಾಲು ಹೊಂದಿರುವ ನಗರವನ್ನು ಕೊಳೆಯಲು ಬಿಡಬೇಕೇ? ಆರೋಗ್ಯಯುತ ಬೆಂಗಳೂರು ಎಂದರೆ ಆರೋಗ್ಯವಂತ ಕರ್ನಾಟಕ ಎಂದರ್ಥ.
ಹಾಗಂತ ರಾಜ್ಯದ ಉಳಿದ ಭಾಗಗಳನ್ನು ಕಡೆಗಣಿಸಿ ಬೆಂಗಳೂನ್ನು ಬೆಳಸಬೇಕು ಎಂದರ್ಥವಲ್ಲ, ಹಾಗೆಂದು ಯಾರೂ ಹೇಳುತ್ತಿಲ್ಲ. ರಾಜ್ಯದ ಇನ್ನುಳಿದ ಎರಡು ಪ್ರಮುಖನಗರಗಳಿಗೆ ಹೆಚ್ಚು ಮೂಲಸೌಕರ್ಯವೊದಗಿಸಿದರೆ, ಬೆಂಗಳೂರಿನ ಮೇಲೆ ಹೊರೆಸಿರುವ ಹೊರೆ ಕಡಿಮೆಯಾಗುತ್ತದೆ. ಆಗ ಉದ್ಯಮಗಳು ಅಲ್ಲಿಗೆ ತೆರಳಲು ತಯಾರಾಗುತ್ತವೆ. ಬೆಂಗಳೂರಿನ ಒಳಹರಿವು ಕಡಿಮೆಯಾಗುತ್ತದೆ. ಹಾಗಂತ ಬೆಂಗಳೂರನ್ನು ಕಡೆಗಣಿಸಬಾರದು. ಕರ್ನಾಟಕದ ಪ್ರಮುಖ ಅಂಗ ಬೆಂಗಳೂರು. ರಾಜ್ಯದ ಅಭಿವೃದ್ಧಿ ಯಂತ್ರ ಬೆಂಗಳೂರು. ಅಂಥ ನಗರದ ನಿರ್ಮಾಣ ಸುವ್ಯವಸ್ಥಿತವಾಗಿರಬೇಕು. ಆ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವುದು ಅತ್ಯವಶ್ಯಕ.

ಕೊನೆಯ ಗುಟುಕು: ಆರ್.ಕೆ.  ಮಿಶ್ರಾ ಅವರ ಫೇಸ್‌ಬುಕ್‌ನಲ್ಲಿನ ಕುತೂಹಲಕರ ಸಂದೇಶ ಹೀಗಿದೆ- "ಸಿದ್ದರಾಮಯ್ಯ ಅವರು ಚೀನಾದಲ್ಲಿದ್ದಾರೆ. World Economic Forum meet ನಲ್ಲಿ ಅವರು ಭಾಗವಹಿಸಿದ್ದಾರೆ. ಆದರೆ ಅವರು ಆ ಸಮ್ಮೇಳನಕ್ಕೆ ಯಾವ ಕೊಡುಗೆ ಕೊಡಲಿದ್ದಾರೆ, ಅಥವಾ ಯಾವ ವಿಷಯವಾಗಿ ಗಮನ ಸೆಳೆಯಲಿದ್ದಾರೆ ಎಂಬುದೇ ಪ್ರಶ್ನೆ! ತಗ್ಗು ಬಿದ್ದ ರಸ್ತೆಗಳು, ಗಂಟೆಗಳವರೆಗಿನ ಟ್ರಾಫಿಕ್ ಜಾಮ್‌ಗಳು, ಕಸ ತುಂಬಿದ ರಸ್ತೆಗಳು, ನೀರು ತುಂಬಿಕೊಂಡ ವಠಾರಗಳು... ಮತ್ತು ಕರ್ನಾಟಕವನ್ನು ತೊರೆಯುತ್ತಿರುವ ಉದ್ಯಮಗಳ ಬಗ್ಗೆಯಾ? ವಿದೇಶಿ ಪ್ರವಾಸಗಳಿಗೆ ತೆರಳುವ ನಾಯಕರು, ಅಲ್ಲಿಂದ ಏನಾದರೂ ಸ್ಫೂರ್ತಿ ಪಡೆದು ನಮ್ಮ ದೇಶದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಬೇಕು. ಆದರೆ ಪ್ರತೀ ಬಾರಿ ಆಗುತ್ತಿರುವುದೇನು? ಇಂಥ ಟ್ರಿಪ್‌ಗಳಲ್ಲಿ ಮಜಾ ಮಾಡಿ ಬಂದು 'ಇವೆಲ್ಲ ಭಾರತದಲ್ಲಿ ಸಾಧ್ಯವಿಲ್ಲ' ಎನ್ನುವ ಮಾತುಗಳೇ! ನಮ್ಮ ಮುಖ್ಯಮಂತ್ರಿಗಳು ಹಿಂದಿರುಗಿ ಬಂದು ಏನು ಹೇಳಲಿದ್ದಾರೋ ನೋಡಬೇಕು."

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.