ಚೀನಾದಲ್ಲೂ ಬೀಸಲಿದೆಯೇ ಬದಲಾವಣೆ ಬಿರುಗಾಳಿ?
ಭಾರತದ ಪ್ರಜಾಪ್ರಭುತ್ವ ಯಾವ ಹಂತಕ್ಕೆ ತಲುಪಿದೆಯೆಂದರೆ, ತುಸು ಸರ್ವಾಧಿಕಾರಿ ಲೇಪವಿದ್ದರೆ ದೇಶಕ್ಕೆ ಒಳ್ಳೆಯದಾಗುತ್ತದೆಂದು ಹಲವರು ಭಾವಿಸತೊಡಗಿದ್ದಾರೆ. ಹಾಗಾಗೆ ಇಂಥ ಸಮಯದಲ್ಲಿ ಚೀನಾದ ಕುರಿತ ಪ್ರಶ್ನೆಯೊಂದು ನಮ್ಮ ಬಹುವಾಗಿ ಕಾಡತೊಡಗಿದೆ- 'ಅದ್ಹೇಗೆ ಚೀನಾದ ಆರ್ಥಿಕತೆ ಈ ಪರಿ ಮುಕ್ತವಾಗಿ ತೆರೆದುಕೊಂಡಿದೆ, ಆದರೆ ಅಲ್ಲಿನ ರಾಜಕೀಯವಲ್ಲ'? ಎನ್ನುವುದು. ಇದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಇದು ಹೇಗಿದೆಯೆಂದರೆ, ಮನೆಯ ಕಿಟಕಿ ತೆರೆದು, 'ಹೊರಗೆ ನೋಡಬೇಡಿ' ಎಂದು ಒಳಗಿದ್ದವರಿಗೆ ಆದೇಶಿಸಿದ ಹಾಗೆ! ಹೊಸ ಸುದ್ದಿಯೇನೆಂದರೆ, ಚೀನಿಯರು ಇದೇ ಪ್ರಶ್ನೆಯನ್ನು ಅಲ್ಲಿನ ಸರ್ಕಾರಕ್ಕೆ ಕೇಳತೊಡಗಿದ್ದಾರೆ ಎಂಬುದು. ಹಾಗಾಗೆ ಆಡಳಿತ ವರ್ಗ ತನ್ನ ಕುರ್ಚಿ ಉಳಿಸಿಕೊಳ್ಳಲು ಹಿಂದೆಂದೂ ಕಂಡು-ಕೇಳರಿಯದಂಥ ಮಾರ್ಗವನ್ನು ಅನುಸರಿಸಲು ಮುಂದಾಗುತ್ತಿದೆ.
ಚೀನಿಯರು ರಾಷ್ಟ್ರಾಭಿಮಾನಿಗಳು. ಮಾವೋ ಜೆಡಾಂಗ್‌ನ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತಿದ್ದ ಜನರೂ ಕೂಡ, ಆತ ದೇಶವನ್ನು ಸಂಘಟಿಸಿದ ಪರಿಯನ್ನು ಕೊಂಡಾಡುತ್ತಾರೆ. ನಂತರದ ದಿನಗಳಲ್ಲಿ ಡೆಂಗ್ ಸಿಯೋಪಿಂಗ್‌ನ ಅನುಯಾಯಿಗಳು ಚೀನಾವನ್ನು ಜಾಗತಿಕ ಶಕ್ತಿಯನ್ನಾಗಿ ಬದಲಾಯಿಸಿದ ನಂತರವಂತೂ ಚೀನಿಯರ ಆತ್ಮಾಭಿಮಾನ ಹಿಂದೆಂದಿಗಿಂತಲೂ ಹೆಚ್ಚಾಯಿತು. ಇಂಥ ಆತ್ಮಾಭಿಮಾನವೇ ಅವರನ್ನು ಸರ್ವಾಧಿಕಾರದ ವಿರುದ್ಧ ರೊಚ್ಚಿಗೆದ್ದ ಲಿಬ್ಯಾ, ಇಜಿಪ್ತ್ ಮತ್ತು ಸಿರಿಯಾಗಿಂತ ಭಿನ್ನವಾಗಿಸಿ, ಹಿಂಸಾಚಾರಕ್ಕೆ ಇಳಿಯುವುದರಿಂದ ತಡೆಯುತ್ತಿದೆ.
ಭ್ರಷ್ಟಾಚಾರದಲ್ಲಿ ತೊಡಗಿದ್ದ ಅಧಿಕಾರಿಗಳನ್ನು ಜೈಲಿಗಟ್ಟಿ ಅಥವಾ ಸಾರ್ವಜನಿಕವಾಗೇ ನೇಣಿಗೇರಿಸುವ ಮೂಲಕ ಅಲ್ಲಿನ ಆಡಳಿತ ಜನರನ್ನು ಓಲೈಸುವ ಪ್ರಯತ್ನ ಮಾಡುತ್ತದೆ. ಇನ್ನು ಅಲ್ಲಿ ರಾಜಕುಟುಂಬಗಳಿವೆಯಾದರೂ, ಅವುಗಳಿಗೇ ಕಿರೀಟ ತೊಡಿಸಿ ಮೆರೆಸುವ ಸಂಪ್ರದಾಯವನ್ನು ಅಲ್ಲಿನ ಪ್ರಭುತ್ವ ರೂಢಿಸಿಕೊಂಡಿಲ್ಲ. ಇಷ್ಟಾದರೂ ಕೂಡ, ಚೀನಿಯರು ಅಸಮಾಧಾನದಿಂದ ಗೊಣಗುತ್ತಿದ್ದಾರೆ. ಏಕೆಂದರೆ, ತನ್ನ ಆರ್ಥಿಕ ಅನ್ವೇಷಣೆಯಲ್ಲಿ ಆ ದೇಶ ಜನರ ವೈಯಕ್ತಿಕ ಆಕಾಂಕ್ಷೆಗಳನ್ನು ಹತ್ತಿಕ್ಕುತ್ತಿದೆ. ಎಲ್ಲದಕ್ಕೂ ಮುಖ್ಯವಾಗಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಉತ್ಕೃಷ್ಟ ಇತಿಹಾಸ ಹೊಂದಿರುವ ಆ ದೇಶದಲ್ಲಿ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ. ಚೀನಿಯರು ಈಗ ಹೆಚ್ಚಾಗಿ ಹಂಬಲಿಸುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿಯೇ.
ಅಲ್ಲಿನ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದ ಹೊರತಾಗಿಯೂ, ಜನರು ಸ್ವಾತಂತ್ರ್ಯದ ಕೂಗನ್ನು ಅಂತರ್ಜಾಲದಲ್ಲಿ ಹೆಚ್ಚಿಸುತ್ತಲೇ ಇದ್ದಾರೆ. ಅವರ ಅಸಮಾಧಾನ, ಅಸಮ್ಮತಿ ಯಾವ ಮಟ್ಟದಲ್ಲಿದೆ ಎನ್ನುವುದಕ್ಕೆ ಇತ್ತೀಚೆಗಾದ ಒಂದು ಘಟನೆಯೇ ಸಾಕ್ಷಿ. ಇಂಥದ್ದನ್ನು ಭಾರತದಲ್ಲಿ ಯೋಚಿಸುವುದಕ್ಕೂ ಸಾಧ್ಯವಿಲ್ಲವೆನ್ನಿ...
ದಕ್ಷಿಣ ಚೀನಾದ ಪ್ರಮುಖ ನಗರ ಗ್ವಾಂಗ್‌ಚೌನ 'ಸದರ್ನ್ ವೀಕೆಂಡ್' ಎನ್ನುವ ಪತ್ರಿಕೆಯೊಂದು "ಸರ್ಕಾರ ಜನರ ಹಕ್ಕನ್ನು ಕಸಿದುಕೊಳ್ಳುತ್ತಿದೆ, ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಹಾಗಾಗಿ ಅದನ್ನು ನಿಯಂತ್ರಿಸಲು ಪ್ರಬಲ ಕಾನೂನು ಜಾರಿಯಾಗಬೇಕು" ಎಂದು ಇತ್ತೀಚೆಗೆ ಸಂಪಾದಕೀಯ ಬರೆದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರದ ವಕ್ತಾರನೊಬ್ಬ ಪತ್ರಿಕೆಯ ನಿಲುವನ್ನು ವಿರೋಧಿಸಿದ. ಆದರೆ ಪತ್ರಿಕೆಯ ಕೆಲಸಗಾರರು ಸುಮ್ಮನಿರಲಿಲ್ಲ, ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದರು. ಈ ಪ್ರತಿಭಟನೆಗೆ ಆ ನಗರದ ಸಾವಿರಾರು ಜನ ಸಾಥ್ ನೀಡಿದರು!
ಇಂಥ ಬಿಕ್ಕಟ್ಟಿನ ಸಮಯಗಳಲ್ಲೆಲ್ಲ ಹೆಚ್ಚಾಗಿ ಮೇಲುಗೈ ಸಾಧಿಸಿದ್ದು ಚೀನಿ ಸರ್ಕಾರವೇ. ಆದರೆ ಈ ಬಾರಿ ಅದು ಯಾವ ಪರಿ ಥರಗುಟ್ಟಿಹೋಯಿತೆಂದರೆ, ತಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸುವಂಥ ಕುತಂತ್ರಕ್ಕೆ ಮೊರೆಹೋಯಿತು. '7 ವಿಧ್ವಂಸಕ ಆಲೋಚನೆಗಳು' ಎನ್ನುವ ಹೆಸರಿನಲ್ಲಿ ಕೈಪಿಡಿಯನ್ನು ಮುದ್ರಿಸಿ ಅದರ ಪ್ರಚಾರ ಮಾಡಿತು. ಈ 7 ಆಲೋಚನೆಗಳು ಚೀನಾದ ಸಮಾಜವನ್ನು ಛಿದ್ರ ಮಾಡುತ್ತಿವೆ ಎಂದು ಆರ್ಭಟಿಸಿತು.
'ಸಂವಿಧಾನಾತ್ಮಕ ಪ್ರಭುತ್ವ, ನಾಗರಿಕ ಸಮಾಜ, ಅಂತಾರಾಷ್ಟ್ರೀಯ ಮಾನವ ಹಕ್ಕು, ಮಾಧ್ಯಮ ಸ್ವಾತಂತ್ರ್ಯ ಮತ್ತು ನವ ಉದಾರವಾದಿ ಯೋಚನೆಗಳು' ಈ ವಿಧ್ವಂಸಕ ಆಲೋಚನೆಗಳಲ್ಲಿ ಪ್ರಮುಖವಾದುವು ಎಂದಿತು ಆ ಸರ್ಕಾರ. ಈ ಪಾಶ್ಚಿಮಾತ್ಯ ಸಿದ್ಧಾಂತಗಳು ಪಕ್ಷದ ನಾಯಕತ್ವವನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿವೆ ಎನ್ನುವುದು ಅದರ ಒಟ್ಟಾರೆ ಸಾರಾಂಶವಾಗಿತ್ತು.
ವ್ಯಂಗ್ಯವೆಂದರೆ, ಚೀನಾದ ಹೊಸ ನಾಯಕ ಕ್ಸಿ ಜಿನ್‌ಪಿಂಗ್ ಅವರನ್ನು ಆಧುನಿಕವಾದಿ ಮತ್ತು ಪಾಶ್ಚಿಮಾತ್ಯ ವಿಚಾರಗಳಿಗೆ ತೆರೆದುಕೊಂಡ ವ್ಯಕ್ತಿ ಎಂದೂ ಹೊಗಳಲಾಗುತ್ತಿತ್ತು. ಈಗ ಅದೇ ವ್ಯಕ್ತಿ ಈ ಆಂದೋಲನದ ನೇತೃತ್ವ ವಹಿಸಿದ್ದಾನೆ. ಆದರೀಗ ಚೀನಿಯರು ಕಮ್ಯುನಿಷ್ಟ್ ಸರ್ಕಾರದ ವಿರುದ್ಧ ರೋಸಿಹೋಗಿದ್ದಾರೆ. ಪ್ರಗತಿಪರರು ರಾಜಕೀಯ ಧೋರಣೆಗಳಲ್ಲಿ ಬದಲಾವಣೆ ತರಲು ಆಗ್ರಹಿಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಪ್ರಬಲ ವಿರೋಧಗಳೇಳುತ್ತಿವೆ. ಅದರಲ್ಲೂ ಮುಖ್ಯವಾಗಿ ಇತ್ತೀಚೆಗೆ ನಡೆದ ಪತ್ರಕರ್ತರ ಪ್ರತಿಭಟನೆ, ಸರ್ಕಾರದ ವಿರುದ್ಧ ಜನರನ್ನು ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ. ಪರಿಸ್ಥಿತಿ ಕೈ ಮೀರಿದರೆ, ಚೀನಾದ ಆರ್ಥಿಕತೆ ಹಳ್ಳಹಿಡಿಯುವುದು ನಿಶ್ಚಿತ.
ಆದರೆ ಚೀನಿ ರಾಜಕೀಯ ವಿಶ್ಲೇಷಕರು 'ಹೇಗೆ ಸಂವಿಧಾನಿಕ ಪ್ರಭುತ್ವ ಎನ್ನುವ ಸಿದ್ಧಾಂತದಿಂದಾಗಿ ಸೋವಿಯತ್ ಒಕ್ಕೂಟ ನಾಶವಾಯಿತು' ಎನ್ನುವುದನ್ನು ನೆನಪುಮಾಡಿಕೊಳ್ಳುತ್ತಿದ್ದಾರೆ. ಹಾಗಾಗೆ ಅಲ್ಲಿನ ಕಮ್ಯುನಿಸ್ಟ್ ನಾಯಕರು, ಎಲ್ಲಿ ತಾವೂ ಸೋವಿಯತ್ ಒಕ್ಕೂಟದ ಹಾದಿ ಹಿಡಿಯುತ್ತೇವೋ ಎನ್ನುವ ಭಯದಲ್ಲಿದ್ದಾರೆ. ಇಂಥ ಬಿಕ್ಕಟ್ಟನ್ನು ಡೆಂಗ್ ಸಿಯೋಪಿಂಗ್ ಬಹಳ ಚಾಕಚಕ್ಯತೆಯಿಂದ ಬಗೆಹರಿಸಿದ್ದರು. 'ಚೀನೀ ಗುಣಗಳನ್ನು ಹೊಂದಿದ ಸಮಾಜವಾದ' ಎಂಬ ಹೆಸರಿನಲ್ಲಿ ಅವರು ಜನರನ್ನು ಓಲೈಸಿದ್ದರು. ಆದರೆ ನಿಜಕ್ಕೂ ಅಸ್ತಿತ್ವದಲ್ಲಿದ್ದದ್ದು ಬಂಡವಾಳಶಾಹಿ ಆಡಳಿತ. ಆದರೆ ಇವೆರಡರ ಮಿಶ್ರಣವಾಗುವುದು ಸಾಧ್ಯವೇ ಇಲ್ಲ! ಚೀನಾದ ಹಣೆಬರಹ ಹೇಗಿರಲಿದೆಯೋ ಎನ್ನುವುದನ್ನು ಸಮಯವೇ ಬಹಿರಂಗಪಡಿಸಲಿದೆ.
-ಟಿ.ಜೆ.ಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

